ಕಟ್ಟಡ ಕುಸಿಯುತ್ತಿದೆ ನಾವು ಗೋಡೆಗಳ ಬಿರುಕು ಮುಚ್ಚಲು ಯತ್ನಿಸುತ್ತಿದ್ದೇವೆ
ನಾ ದಿವಾಕರ
ಭಾರತದ ಪ್ರಜಾತಂತ್ರ ವ್ಯವಸ್ಥೆ ಒಮ್ಮೆಲೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಯಾವುದೇ ದೇಶದ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸಬೇಕಾದ ಜವಾಬ್ದಾರಿಯುತ ರಾಜಕೀಯ ನಾಯಕರು ತಮ್ಮ ಹೊಣೆಗಾರಿಕೆಯನ್ನು ಮರೆತು ವರ್ತಿಸಿದರೆ ಅಲ್ಲಿನ ವ್ಯವಸ್ಥೆ ಹೇಗೆ ಶಿಥಿಲವಾಗುತ್ತದೆ ಎಂಬ ಪ್ರಶ್ನೆಗೆ ಭಾರತದ ರಾಜಕೀಯ ಪಕ್ಷಗಳು ಪ್ರಾತ್ಯಕ್ಷಿಕೆಯನ್ನೇ ನೀಡಿಬಿಟ್ಟಿವೆ. ದೇಶ ಎಂದರೇನು ಎಂಬ ಪರಿವೆಯೇ ಇಲ್ಲದ ಜನಪ್ರತಿನಿಧಿಗಳು ಇಂದು ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿದಿದ್ದಾರೆ. ಆದರೂ ದೇಶಪ್ರೇಮ, ದೇಶಭಕ್ತಿ, ದೇಶದ್ರೋಹ ಮುಂತಾದ ಪದಗಳು ಮಾರುಕಟ್ಟೆಯ ಸರಕುಗಳಂತೆ ಬಳಕೆಯಾಗುತ್ತಲೇ ಇವೆ. ಇತಿಹಾಸದ ಪರಿಜ್ಞಾನವೇ ಇಲ್ಲದೆ, ಸಮಕಾಲೀನ ಸಮಸ್ಯೆಗಳ ಪರಿಹಾರಕ್ಕೆ ಚರಿತ್ರೆಯ ಪಳೆಯುಳಿಕೆಗಳನ್ನು ಹೆಕ್ಕಿ ತೆಗೆಯುತ್ತಾ ಜನಸಾಮಾನ್ಯರನ್ನು ಮರಳು ಮಾಡುವ ನಿಟ್ಟಿನಲ್ಲಿ ರಾಜಕೀಯ ನಾಯಕರು ನಿಷ್ಣಾತರಾಗಿರುವುದರಿಂದಲೇ ಇಂದು ಭಾರತೀಯ ಸಮಾಜ ದಿಕ್ಕು ತಪ್ಪಿದ ನಾವೆಯಂತೆ ಹೊಯ್ದಾಡುತ್ತಿದೆ.
ಭಾರತದ ಸಂವಿಧಾನವನ್ನು ರೂಪಿಸುವ ಸಂದರ್ಭದಲ್ಲಿ ಅಂದಿನ ನಾಯಕರ ಮುಂದಿದ್ದುದು ಹಲವು ಸವಾಲುಗಳು. ಭಾರತದ ಸಾಂಸ್ಕೃತಿಕ ವೈವಿಧ್ಯತೆ, ಮತಾಧಾರಿತ ಧಾರ್ಮಿಕ ವೈಶಿಷ್ಟ್ಯಗಳು, ಸಾಮಾಜಿಕ ತಾರತಮ್ಯಗಳು, ಆರ್ಥಿಕ ಅಸಮಾನತೆ ಮತ್ತು ಪ್ರಾದೇಶಿಕ ವೈರುಧ್ಯಗಳು. ಈ ಎಲ್ಲ ಸವಾಲುಗಳನ್ನು ಎದುರಿಸುತ್ತಲೇ ಎಲ್ಲ ಜನಸಮುದಾಯಗಳ ಸಮನ್ವಯದ ಬದುಕನ್ನು ರೂಪಿಸುವಂತಹ ಒಂದು ಸೌಹಾರ್ದಯುತ ಸಂವಿಧಾನವನ್ನು ರಚಿಸಲಾಗಿದೆ. ಡಾ ಬಿ ಆರ್ ಅಂಬೇಡ್ಕರ್ ಅವರು ಪದೇ ಪದೇ ಎಚ್ಚರಿಸಿದ್ದಂತೆ ಭಾರತದಲ್ಲಿ ಸಮಾನತೆಯನ್ನು ಏಕಮುಖಿಯಾಗಿ ಅರ್ಥೈಸಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ಮತ್ತು ರಾಜಕೀಯ ಸಮಾನತೆಯೊಂದಿಗೆ ಆರ್ಥಿಕ ಸಮಾನತೆಯನ್ನು ಸಾಧಿಸದೆ ಹೋದರೆ, ತುಳಿತಕ್ಕೊಳಗಾದ ಜನಸಮುದಾಯಗಳ ಆಕ್ರೋಶವೇ ದೇಶದ ಅಡಿಪಾಯವನ್ನು ಅಲುಗಾಡಿಸಿಬಿಡುತ್ತದೆ ಎಂಬ ಅರಿವು ಅಂಬೇಡ್ಕರಾದಿಯಾಗಿ ಎಲ್ಲ ಸ್ವಾತಂತ್ರ್ಯ ಶಿಲ್ಪಿಗಳಿಗೂ ಇತ್ತು.
ಹಾಗಾಗಿಯೇ ಭಾರತದ ಸಂವಿಧಾನದಲ್ಲಿ ಮತನಿರಪೇಕ್ಷತೆಗೆ ಮತ್ತು ಸಾಮಾಜಿಕ ಸಮಾನತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ವಿಭಿನ್ನ ಧಾರ್ಮಿಕ ನಂಬಿಕೆಗಳು, ಮತಶ್ರದ್ಧೆ, ಸಾಂಸ್ಕೃತಿಕ ನೆಲೆಗಳು ಮತ್ತು ವೈವಿಧ್ಯಮಯ ಜೀವನ ಶೈಲಿಯೊಂದಿಗೆ ಭಾರತೀಯ ಸಮಾಜ ಒಂದು ವಿಶಿಷ್ಟ ಸ್ವರೂಪವನ್ನು ತನ್ನದಾಗಿಸಿಕೊಂಡಿದೆ. ಜನಸಾಮಾನ್ಯರ ನಿತ್ಯ ಬದುಕಿನತ್ತ ಒಮ್ಮೆ ಕಣ್ಣು ಹಾಯಿಸಿದರೂ ಕಂಡುಬರುವ ಒಂದು ಸಮಾನ ಅಂಶವೆಂದರೆ ಇಲ್ಲಿನ ಜನತೆಯಲ್ಲಿರುವ ಸಮನ್ವಯದ ಭಾವನೆ ಮತ್ತು ಸೌಹಾರ್ದತೆಯ ಮನೋಭಾವ. ತಮ್ಮ ನಿತ್ಯ ಬದುಕಿನಲ್ಲಿ ಎದುರಿಸುವ ಅಸ್ಪೃಶ್ಯತೆ, ಜಾತಿ ದೌರ್ಜನ್ಯ, ತಾರತಮ್ಯಗಳು ಮತ್ತು ಜಾತಿ ಕೇಂದ್ರಿತ ಅಪಮಾನಗಳ ಹೊರತಾಗಿಯೂ ಈ ದೇಶದ ಬಹುಸಂಖ್ಯಾತರಾದ ದಲಿತರು, ಆದಿವಾಸಿಗಳು ಮತ್ತು ಶೋಷಿತ ಸಮುದಾಯಗಳು ಸಮನ್ವಯದ ಮಾರ್ಗಗಳನ್ನೇ ಅನುಸರಿಸುತ್ತಿರುವುದು ಇದಕ್ಕೆ ಸಾಕ್ಷಿ.
ಮೇಲ್ನೋಟಕ್ಕೆ ಸುಂದರವಾಗಿ ಕಾಣುವ ಭಾರತವೆಂಬೋ ದೇಶ ಆಂತರಿಕವಾಗಿ ಕೊಳೆಯುತ್ತಿದೆ. ಮತ ನಿರಪೇಕ್ಷತೆ, ಧಾರ್ಮಿಕ ಸ್ವಾತಂತ್ರ್ಯ, ಜಾತಿ ವಿನಾಶ, ಅಸ್ಪೃಶ್ಯತೆಯ ನಿಷೇಧ, ಮಹಿಳಾ ಸಮಾನತೆ ಮತ್ತು ಬಹುತ್ವ ಸಂಸ್ಕೃತಿಯ ಆಶಯಗಳನ್ನು ಹೊತ್ತ ಸಂವಿಧಾನ ಇಂದು ಹಂತಹಂತವಾಗಿ ಶಿಥಿಲವಾಗುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಸಾಂವಿಧಾನಿಕ ಆಶಯಗಳನ್ನು ಸಂರಕ್ಷಿಸಬೇಕಾದ ಶಾಸನ ಸಭೆಗಳು ಇಂದು ಅಧಿಕಾರ ರಾಜಕಾರಣವನ್ನು ರಕ್ಷಿಸುವ ಅಖಾಡಗಳಾಗಿ ಪರಿವರ್ತನೆಯಾಗಿವೆ. ಆಡಳಿತ ಪಕ್ಷಗಳು ಮತ್ತು ವಿರೋಧ ಪಕ್ಷಗಳು ತಮ್ಮ ಪ್ರಾತಿನಿಧಿಕ ಜವಾಬ್ದಾರಿಯನ್ನೇ ಮರೆತು ವರ್ತಿಸುತ್ತಿರುವುದನ್ನು ಕಂಡೂ ಕಾಣದಂತೆ ನಾಗರಿಕರು ಮೈ ಮರೆತಿದ್ದಾರೆ. ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಾದ ಸಾಂವಿಧಾನಿಕ ಸಂಸ್ಥೆಗಳು ಹಂತಹಂತವಾಗಿ ಶಿಥಿಲವಾಗುತ್ತಿರುವುದನ್ನೂ ಗಮನಿಸದೆ, ಪ್ರಜ್ಞಾವಂತ ಸಮಾಜ ಅಸ್ಮಿತೆಗಳ ಚೌಕಟ್ಟಿನಲ್ಲಿ ಮೈ ಮರೆತಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಿದ ಜನಸಾಮಾನ್ಯರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಮೊಕದ್ದಮೆಗಳನ್ನು ದಾಖಲಿಸಿದ್ದ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೀಡಿರುವ ಮರ್ಮಾಘಾತದ ಪ್ರತಿಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರತಿಭಟನಾಕಾರರಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ವಸೂಲು ಮಾಡಲಾಗಿದ್ದ ಕೋಟ್ಯಂತರ ರೂಪಾಯಿ ಆಸ್ತಿಯನ್ನು ಮರಳಿಸಬೇಕು ಎಂದು ಉತ್ತರಪ್ರದೇಶ ಸರ್ಕಾರಕ್ಕೆ ತಾಕೀತು ಮಾಡಿರುವ ಸುಪ್ರೀಂಕೋರ್ಟ್, “ ನೀವೇ ದೂರುದಾರರಾಗಿದ್ದೀರಿ, ನೀವೇ ಸಾಕ್ಷಿಯೂ ಆಗಿದ್ದೀರಿ, ನೀವೇ ಪ್ರಾಸಿಕ್ಯೂಟರ್ ಸಹ ಆಗಿದ್ದೀರಿ, ಬಳಿಕ ನೀವೇ ಜನರ ಆಸ್ತಿ ಮುಟ್ಟುಗೋಲು ಹಾಕಲು ಮುಂದಾಗುತ್ತೀರಿ, ಯಾವುದೇ ಕಾನೂನು ಇದಕ್ಕೆ ಅನುಮತಿ ನೀಡುತ್ತದೆಯೇ ? ” ಎಂದು ಪ್ರಶ್ನಿಸಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಈ ಪ್ರಶ್ನೆಗಳು ಇಂದಿನ ಆಡಳಿತ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ.
ಆಡಳಿತಾರೂಢ ಸರ್ಕಾರಗಳು ಸಂವಿಧಾನ ಆಶಿಸುವ ನೀತಿಗಳನ್ನು ಜಾರಿಗೊಳಿಸುವುದಕ್ಕಿಂತಲೂ ಹೆಚ್ಚಾಗಿ ರಾಜಕೀಯ ಪಕ್ಷಗಳ ಕಾರ್ಯಸೂಚಿಗಳನ್ನು ಜಾರಿಗೊಳಿಸಲು ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನೂ ಭ್ರಷ್ಟಗೊಳಿಸುತ್ತಿವೆ. ನ್ಯಾಯಾಂಗದ ಈ ರೀತಿಯ ಎಚ್ಚರಿಕೆಯ ಮಾತುಗಳು ಸಾರ್ವಜನಿಕ ಪ್ರಜ್ಞೆಯನ್ನು ಜಾಗೃತಗೊಳಿಸಬೇಕಿದೆ. ಅಧಿಕಾರಯುತ ಸ್ಥಾನದಲ್ಲಿರುವ ಸಚಿವರು, ಮುಖ್ಯಮಂತ್ರಿಗಳು, ಶಾಸಕರು ಮತ್ತು ಸಂಸದರು, ತಾವು ಪ್ರತಿನಿಧಿಸುವ ಜನತೆಯ ಹಿತಾಸಕ್ತಿಗಳಿಗಿಂತಲೂ, ತಮ್ಮ ಪಕ್ಷದ ತತ್ವ ಸಿದ್ಧಾಂತಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದನ್ನು ಅವರ ಮಾತುಗಳಲ್ಲೇ ಕಾಣಬಹುದಾಗಿದೆ. ಈಗ ನಡೆಯುತ್ತಿರುವ ಕರ್ನಾಟಕದ ವಿಧಾನಸಭೆಯ ಕಲಾಪದಲ್ಲೇ ಇದರ ಒಂದು ಆಯಾಮವನ್ನು ಗುರುತಿಸಬಹುದು.
ಕರ್ನಾಟಕದ ಜನತೆ ಇಂದು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಹಿಂಪಡೆದ ಮೂರು ಕರಾಳ ಕೃಷಿ ಕಾಯ್ದೆಗಳು ಕರ್ನಾಟಕದಲ್ಲಿ ಇನ್ನೂ ಜಾರಿಯಲ್ಲಿವೆ. ಎರಡು ವರ್ಷದ ಹಿಂದೆ ಜಾರಿಗೊಳಿಸಿದ ಭೂ ಸುದಾರಣಾ ತಿದ್ದುಪಡಿ ಕಾಯ್ದೆ ರಾಜ್ಯದ ಕೃಷಿಕರ ಪಾಲಿಗೆ ಮರಣಶಾಸನವಾಗಲಿದೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಹಳ್ಳಿಗಾಡಿನಲ್ಲಿ ಪಶುಸಂಗೋಪನೆಯಲ್ಲಿ ತೊಡಗಿರುವ ರೈತ ಸಮುದಾಯವನ್ನು ಸರ್ಕಾರ ಸಂಕಷ್ಟಕ್ಕೀಡುಮಾಡಿದೆ. ಸಾವಿರಾರು ಅತಿಥಿ ಉಪನ್ಯಾಸಕರು ತಮ್ಮ ಸೇವಾ ಭದ್ರತೆಗಾಗಿ ಹೋರಾಡುತ್ತಿದ್ದಾರೆ. ಇಷ್ಟರ ನಡುವೆ ತನ್ನ ಮತದ್ವೇಷ ರಾಜಕಾರಣವನ್ನು ಸಾಂಸ್ಥೀಕರಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಸಜ್ಜಾಗುತ್ತಿದೆ.
ಆದರೆ ರಾಜ್ಯ ವಿಧಾನಸಭೆಯಲ್ಲಿ ಇದಾವುದೂ ಚರ್ಚೆಗೊಳಗಾಗುತ್ತಿಲ್ಲ. ಜನಸಾಮಾನ್ಯರು ಎದುರಿಸುವ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲೆಂದೇ ಸೃಷ್ಟಿಸಲಾಗುವ ಭಾವನಾತ್ಮಕ ಘಟನೆಗಳು ವಿಧಾನ ಸಭೆಯ ಕಲಾಪವನ್ನೂ ಬಲಿತೆಗೆದುಕೊಳ್ಳುತ್ತಿದೆ. ಭಗವಧ್ವಜವನ್ನು ಕೆಂಪುಕೋಟೆಯ ಮೇಲೆ ಹಾರಿಸುತ್ತೇವೆ ಎಂಬ ಸಚಿವ ಈಶ್ವರಪ್ಪನವರ ಅಪ್ರಬುದ್ಧ ಹೇಳಿಕೆ ಖಂಡನಾರ್ಹವೇ ಹೌದು. ಆದರೆ ಇದಕ್ಕಿಂತಲೂ ಗಂಭೀರ ವಿಚಾರಗಳು ಜನತೆಯನ್ನು ಕಾಡುತ್ತಿರುವಾಗ, ಪ್ರಧಾನ ವಿರೋಧ ಪಕ್ಷವಾದ ಕಾಂಗ್ರೆಸ್, ಈಶ್ವರಪ್ಪನವರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುವುದು ಹೊಣೆಗೇಡಿತನವಲ್ಲವೇ ? ಜನಪ್ರತಿನಿಧಿಗಳಾದವರು ಅಧಿಕಾರದಲ್ಲಿರಲಿ, ವಿರೋಧ ಪಕ್ಷದಲ್ಲಿರಲಿ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ನಿಭಾಯಿಸುವುದು ಮುಖ್ಯವಲ್ಲವೇ ?
ಕಳೆದ ಎಂಟು ವರ್ಷದ ಬಿಜೆಪಿ ಆಡಳಿತದಲ್ಲಿ ಭಾರತದ ಪ್ರಜಾತಂತ್ರ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ನೆಲೆಗಳೂ ದುರ್ಬಲವಾಗುತ್ತಿವೆ. ವಿರೋಧ ಪಕ್ಷಗಳಿಗೆ ಈ ಪರಿಜ್ಞಾನ ಇರಬೇಕಲ್ಲವೇ ? ಲಖೀಂಪುರದಲ್ಲಿ ಅಮಾಯಕ ರೈತರ ಸಾವಿಗೆ ಕಾರಣರಾದವರು ಜಾಮೀನಿನ ಮೇಲೆ ಬೇಗನೆ ಹೊರಬರುತ್ತಾರೆ. ಆದರೆ ಯಾವುದೇ ಅಪರಾಧ ಮಾಡದ ಆನಂದ್ ತೇಲ್ತುಂಬ್ಡೆಯಂತಹ ಬುದ್ಧಿಜೀವಿಗಳು ಜಾಮೀನು ಪಡೆಯಲು ಹೆಣಗಾಡಬೇಕಾಗುತ್ತದೆ. 2002ರ ಗುಜರಾತ್ ಹತ್ಯಾಕಾಂಡದ ಬಗ್ಗೆ ತಾವು ಕಂಡಿದ್ದನ್ನು ನೇರವಾಗಿ ಹೇಳಬಯಸಿದ ಸಂಜೀವ್ ಭಟ್ ಎಂಬ ಪೊಲೀಸ್ ಅಧಿಕಾರಿ, 30 ವರ್ಷ ಹಳೆಯ ಪ್ರಕರಣವೊಂದರ ಹಿನ್ನೆಲೆಯಲ್ಲಿ ಸೆರೆವಾಸ ಅನುಭವಿಸಬೇಕಾಗುತ್ತದೆ. ಆದರೆ ಭ್ರಷ್ಟಾಚಾರ, ಕೊಲೆ, ಕೋಮು ಗಲಭೆ, ಭಯೋತ್ಪಾದಕ ಕೃತ್ಯ ಮುಂತಾದ ಗಂಭೀರ ಆರೋಪಗಳನ್ನು ಹೊತ್ತಿರುವವರು ಸಂಸದರಾಗಿ, ಅಧಿಕಾರ ಪೀಠಗಳಲ್ಲಿ ರಾರಾಜಿಸುತ್ತಿದ್ದಾರೆ. ರಾಜಕೀಯವನ್ನು ಅಪರಾಧೀಕರಣದಿಂದ ಮುಕ್ತಗೊಳಿಸಲು ಹೋರಾಡಬೇಕಾದ ಸಂದರ್ಭದಲ್ಲಿ, ಅಪರಾಧಿಗಳೇ ರಾಜಕೀಯದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.
ಈ ಸಂದರ್ಭದಲ್ಲಿ ಜನಪ್ರತಿನಿಧಿಗಳ ಆದ್ಯತೆ ಏನಾಗಿರಬೇಕು ? ಜನಸಾಮಾನ್ಯರು ಯಾವುದರ ವಿರುದ್ಧ ಹೋರಾಡಬೇಕು ? ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆಸುವಂತೆ ಒತ್ತಾಯಿಸಿದ ನ್ಯಾಯಮೂರ್ತಿಯ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಪ್ರತಿಭಟನೆಯ ಮಹಾಪೂರವೇ ಕಂಡುಬರುತ್ತಿದೆ. ಇದು ಸಹಜ ಮತ್ತು ಅವಶ್ಯವೂ ಹೌದು. ಆದರೆ ಸಂವಿಧಾನವನ್ನು, ಡಾ ಅಂಬೇಡ್ಕರ್ ಅವರನ್ನು ಅಪಮಾನಿಸುವುದಕ್ಕಿಂತಲೂ ಘೋರ ಅಪರಾಧ ಸಂವಿಧಾನವನ್ನು ಅಪಮೌಲ್ಯಗೊಳಿಸುವುದು, ಅಲ್ಲವೇ ? ಈ ಅಪಮೌಲ್ಯಗೊಳಿಸುವ ಪ್ರಕ್ರಿಯೆ ಹಂತಹಂತವಾಗಿ ನಮ್ಮ ಕಣ್ಣೆದುರೇ ಅನಾವರಣವಾಗುತ್ತಿರುವುದನ್ನು ಗಮನಿಸಬೇಕಲ್ಲವೇ ? ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಜನತೆಯ ಧಾರ್ಮಿಕ ಸ್ವಾತಂತ್ರ್ಯವನ್ನು, ಹಿಜಾಬ್ ನಿಷೇಧಿಸುವ ಮೂಲಕ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನು , ಗೋ ಹತ್ಯೆ ನಿಷೇಧಿಸುವ ಮೂಲಕ ಜನರ ಆಹಾರದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ.
ಈ ಕಾನೂನುಗಳು, ನಿಯಮಾವಳಿಗಳು ಮತ್ತು ನಿರ್ಬಂಧಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವುದೇ ಅಲ್ಲದೆ, ಭಾರತದ ಸಂವಿಧಾನ ಪ್ರತಿಪಾದಿಸುವ ಸಮಾನತೆ ಮತ್ತು ಬಹುತ್ವದ ನೆಲೆಗಳನ್ನೇ ನಾಶಪಡಿಸುತ್ತದೆ. ಈ ವಿನಾಶಕಾರಿ, ಜನವಿರೋಧಿ, ಸಂವಿಧಾನ ವಿರೋಧಿ ಆಡಳಿತ ನೀತಿಗಳ ವಿರುದ್ಧ ಇಂದು ಜನಜಾಗೃತಿಯನ್ನು ಮೂಡಿಸಬೇಕಿದೆ. ಕರ್ನಾಟಕದ ವಿಧಾನಸಭಾ ಅಧಿವೇಶನದಲ್ಲಿ ಈ ಸಮಸ್ಯೆಗಳು ಪ್ರಧಾನವಾಗಿ ಚರ್ಚೆಗೊಳಗಾಗಬೇಕಿತ್ತಲ್ಲವೇ ? ರಾಜ್ಯಾದ್ಯಂತ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸುತ್ತಿರುವ ಪ್ರಗತಿಪರ, ದಲಿತ ಸಂಘಟನೆಗಳು ಈ ಸಮಸ್ಯೆಗಳ ವಿರುದ್ಧ ಜನ ಜಾಗೃತಿಯನ್ನು ಮೂಡಿಸಿ ಜನಾಂದೋಲನಗಳಿಗೆ ನಾಂದಿ ಹಾಡಬೇಕಿತ್ತಲ್ಲವೇ ? ಅಪಮಾನಿತ ಅಂಬೇಡ್ಕರರಿಗಿಂತಲೂ ಅಪಮೌಲ್ಯಕ್ಕೊಳಗಾದ ಅಂಬೇಡ್ಕರ್ ನಮಗೆ ಕಾಣಿಸಬೇಕಲ್ಲವೇ ? ಭಾವನಾತ್ಮಕ ವಿಚಾರಗಳನ್ನು ಬದಿಗಿಟ್ಟು ಯೋಚಿಸಿದಾಗ ಈ ವಾಸ್ತವಗಳು ನಮ್ಮ ಕಣ್ಣಿಗೆ ರಾಚುತ್ತವೆ.
ಕರ್ನಾಟಕದ ಕರಾವಳಿ ಇಂದು ಕೋಮು ವಿಭಜನೆ, ಮತ ದ್ವೇಷದ ಪ್ರಯೋಗಾಲಯವಾಗಿ ಕಂಡುಬರುತ್ತಿದೆ. ಅಮಾಯಕ ಮುಸ್ಲಿಂ ಹೆಣ್ಣು ಮಕ್ಕಳು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪ್ರತಿಪಾದಿಸಲು, ಶಿಕ್ಷಣ ಪಡೆಯಲು ಅಂಗಲಾಚುವ ಪರಿಸ್ಥಿತಿ ಎದುರಾಗಿದೆ. ಸಮಾಜದಲ್ಲಿ ಭಾವೈಕ್ಯತೆ ಮತ್ತು ಸೋದರತ್ವವನ್ನು ಮೂಡಿಸಬೇಕಾದ ಶಿಕ್ಷಕ ವೃಂದ ಇಂದು ಮತದ್ವೇಷದ ಬೀಜಬಿತ್ತನೆಯಲ್ಲಿ ತೊಡಗಿ, ಮತಾಂಧತೆಯ ಕಾಲಾಳುಗಳಾಗುತ್ತಿದ್ದಾರೆ. ಚುನಾಯಿತ ಜನಪ್ರತಿನಿಧಿಗಳು ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಮರೆತು, ಜನಸಾಮಾನ್ಯರ ನಡುವೆ ಶಾಶ್ವತ ಬೇಲಿಗಳನ್ನು ಕಟ್ಟುವುದರಲ್ಲಿ ನಿರತರಾಗಿದ್ದಾರೆ. ಈ ಪ್ರತಿನಿಧಿಗಳ ಬೇಜವಾಬ್ದಾರಿ ಹೇಳಿಕೆಗಳ ಹಿಂದೆ ಒಂದು ಕ್ರೂರ ಸೈದ್ಧಾಂತಿಕ ನೆಲೆ ಇರುವುದನ್ನು ಗಮನಿಸದೆ ಹೋದರೆ, ಭಾರತದ ಸಂವಿಧಾನದ ಅವಶೇಷಗಳೂ ಸಹ ಕಾಣದಂತಾಗುತ್ತದೆ.
ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಪ್ರಜಾಸತ್ತೆಯ ಸಾಂಸ್ಥಿಕ ನೆಲೆಗಳು ಸುರಕ್ಷಿತವಾಗಿರಬೇಕೆಂದರೆ, ಈ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲೇ ಶಾಸನಸಭೆಗಳಿಗೆ ಆಯ್ಕೆಯಾಗುವ ಜನಪ್ರತಿನಿಧಿಗಳು ತಮ್ಮ ಹೊಣೆಯನ್ನು ಅರಿತು ನಡೆಯಬೇಕಾಗುತ್ತದೆ. ನ್ಯಾಯಾಂಗವನ್ನು ಹೊರತುಪಡಿಸಿ ಪ್ರಜಾತಂತ್ರದ ಎಲ್ಲ ಸಾಂಸ್ಥಿಕ ನೆಲೆಗಳೂ ಶಿಥಿಲವಾಗಿರುವ ಸಂದರ್ಭದಲ್ಲಿ, ಈ ಸಾಂಸ್ಥಿಕ ಬುನಾದಿಯನ್ನು ಭದ್ರಪಡಿಸುವ ಪ್ರಯತ್ನಗಳು ನಡೆಯಬೇಕಲ್ಲವೇ ? ಆಳುವ ವರ್ಗಗಳು ಪ್ರಚೋದಿಸುವ ಭಾವನಾತ್ಮಕ ವಿಚಾರಗಳು ಪ್ರತಿರೋಧದ ನೆಲೆಗಳಲ್ಲೂ ಬಿರುಕುಗಳನ್ನು ಮೂಡಿಸುತ್ತವೆ. ಆಡಳಿತಾರೂಢ ಪಕ್ಷದ ಪ್ರತಿಗಾಮೀ ಆಡಳಿತ ನೀತಿಗಳನ್ನು ವಿರೋಧಿಸುವ ಪ್ರಗತಿಪರರ ನಡುವೆಯೇ ಕಂದರಗಳನ್ನು ನಿರ್ಮಿಸಲು ಒಂದು ಹಿಜಾಬ್ ಸಾಕು ಎಂಬ ವಾಸ್ತವವನ್ನು ನೇರವಾಗಿಯೇ ಕಾಣುತ್ತಿದ್ದೇವೆ. ಬಹುಸಂಖ್ಯಾತ ಜನತೆಯ ಧಾರ್ಮಿಕ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವಂತಹ ಕಾಯ್ದೆ ಕಾನೂನುಗಳು ಜಾರಿಯಾಗುತ್ತಿರುವ ಸಂದರ್ಭದಲ್ಲಿ, ಜನಸಾಮಾನ್ಯರ ವ್ಯಕ್ತಿ-ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವ ಆಡಳಿತ ನೀತಿಗಳು ನಮ್ಮನ್ನು ಆವರಿಸುತ್ತಿರುವ ಸನ್ನಿವೇಶದಲ್ಲಿ ನಮ್ಮ ಹೋರಾಟ ಯಾವ ದಿಕ್ಕಿನಲ್ಲಿ ಸಾಗಬೇಕು ?
ಈ ಪ್ರಶ್ನೆ ಇಂದು ಪ್ರಜ್ಞಾವಂತ ಸಮಾಜವನ್ನು ಕಾಡಲೇಬೇಕಲ್ಲವೇ ? ನವ ಉದಾರವಾದ, ಕಾರ್ಪೋರೇಟ್ ಮಾರುಕಟ್ಟೆ ಪ್ರೇರಿತ ಆರ್ಥಿಕ ನೀತಿಗಳು ಮತ್ತು ಕೇಂದ್ರ ಬಿಜೆಪಿ ಸರ್ಕಾರ ಅನುಸರಿಸುತ್ತಿರುವ ಸಾಂಸ್ಕೃತಿಕ ರಾಜಕಾರಣ, ಪ್ರಚೋದಿಸುತ್ತಿರುವ ಮತೀಯ ರಾಜಕಾರಣ ಈ ದೇಶದ ಮೂಲ ಮಾನವತೆಯ ನೆಲೆಗಳನ್ನೇ ಛಿದ್ರಗೊಳಿಸುತ್ತಿದೆ. ತುಳಿತಕ್ಕೊಳಗಾದ ಶೋಷಿತ ಜನಸಮುದಾಯಗಳನ್ನು ಮತ್ತಷ್ಟು ಅವಕಾಶವಂಚಿತರನ್ನಾಗಿ ಮಾಡುತ್ತಾ, ಅಭಿವೃದ್ಧಿ ಪಥದ ಅಂಚಿಗೆ ತಳ್ಳುತ್ತಲೇ ಅವರಲ್ಲಿ ಮೂಡಬಹುದಾದ ಅಸಹಾಯಕತೆಯನ್ನು ಧಾರ್ಮಿಕ ಅಸ್ಮಿತೆಗಳ ಚೌಕಟ್ಟಿನೊಳಗೆ ಬಂಧಿಸಿ, ಜನಸಾಮಾನ್ಯರ ನಡುವೆ ಪ್ರತ್ಯೇಕತಾ ಭಾವನೆಯನ್ನು ಬಿತ್ತುವ ಒಂದು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಈ ಪಿತೂರಿಯನ್ನು ಅನುಮೋದಿಸುವ, ಸಮರ್ಥಿಸುವ ಅಂಬೇಡ್ಕರ್‍ವಾದಿಗಳೂ, ಸಮಾನತೆಯ ಪ್ರತಿಪಾದಕರೂ ನಮ್ಮ ನಡುವೆ ಇರುವುದು ದುರಂತ.
ಪ್ರಜಾಪ್ರಭುತ್ವ ಉಳಿಯಬೇಕಾದರೆ, ಸಂವಿಧಾನದ ಆಶಯವನ್ನು ಸಾಕಾರಗೊಳಿಸಲು ಸ್ಥಾಪಿಸಲಾಗಿರುವ ಸಾಂವಿಧಾನಿಕ ಸಂಸ್ಥೆಗಳ ಉಳಿವು ಅತ್ಯವಶ್ಯ. ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭೆ, ರಾಜ್ಯಸಭೆ, ರಾಜ್ಯಪಾಲರ ಕಚೇರಿ, ರಾಷ್ಟ್ರಪತಿಯವರ ಕಚೇರಿ ಇವೆಲ್ಲವೂ ಇದೇ ಸಾಂಸ್ಥಿಕ ಪರಂಪರೆಯ ಒಂದು ಪ್ರಮುಖ ಅಂಗಗಳು. ಈ ಭೂಮಿಕೆಗಳು, ಕಚೇರಿಗಳು ದುರ್ಬಲವಾದಂತೆಲ್ಲಾ ಪ್ರಜಾತಂತ್ರವೂ ಶಿಥಿಲವಾಗುತ್ತಾ ಹೋಗುತ್ತದೆ. ಶಾಸಕಾಂಗ ಮತ್ತು ಕಾರ್ಯಾಂಗದ ಕಾರ್ಯವಿಧಾನಗಳ ಮೇಲೆ ನಿಗಾ ಇರಿಸಬೇಕಾದ ಅನೇಕಾನೇಕ ಸಾಂವಿಧಾನಿಕ ಸಂಸ್ಥೆಗಳು ಇಂದು ಶಿಥಿಲಾವಸ್ಥೆ ತಲುಪಿವೆ. ಇದರಲ್ಲಿ ಪೊಲೀಸ್ ಮತ್ತು ನ್ಯಾಯಾಂಗವನ್ನು ಪ್ರತಿನಿಧಿಸುವ ವಕೀಲ ವೃತ್ತಿಯೂ ಒಂದು. ಸಂವಿಧಾನನಿಷ್ಠರಾಗಿರಬೇಕಾದ ಪೊಲೀಸ್ ಸಿಬ್ಬಂದಿ ಮತ್ತು ವಕೀಲರು ಇಂದು ತತ್ವನಿಷ್ಠರಾಗಿ, ರಾಜಕೀಯ ಪಕ್ಷಗಳ, ಸಾಂಸ್ಕೃತಿಕ ಸಂಘಟನೆಗಳ ಕಾಲಾಳುಗಳಂತೆ ವರ್ತಿಸುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ.
ಈ ಲೋಪಗಳನ್ನು ಸರಿಪಡಿಸುವುದು ಪ್ರಜ್ಞಾವಂತ ನಾಗರಿಕರ, ಸಮಾಜದ ಆದ್ಯತೆಯಾಗಬೇಕಲ್ಲವೇ? ನಿಜ, ಸಾರ್ವಭೌಮ ಪ್ರಜೆಗಳಿಂದಲೇ ಶಾಸನಸಭೆಗಳಿಗೆ ಚುನಾಯಿತರಾಗುವ ಪ್ರತಿನಿಧಿಗಳಿಗೆ ಈ ಕರ್ತವ್ಯ ಪ್ರಜ್ಞೆ ಇರಬೇಕು. ತಾವು ಪ್ರತಿನಿಧಿಸುವ ಸಂವಿಧಾನ ಮತ್ತು ಜನತೆ ಎರಡೂ ಸಹ ತಮ್ಮ ಪ್ರಥಮ ಆದ್ಯತೆ ಎಂಬ ಕನಿಷ್ಟ ಪ್ರಜ್ಞೆ ಪ್ರತಿನಿಧಿಗಳಲ್ಲಿರಬೇಕು. ಆದರೆ ಅಧಿಕಾರ ರಾಜಕಾರಣದ ಲೋಭ ಮತ್ತು ಅಹಮಿಕೆ ಈ ಪ್ರಜ್ಞೆಯನ್ನು ನುಂಗಿಹಾಕಿಬಿಟ್ಟಿದೆ. ಜನಸಾಮಾನ್ಯರಲ್ಲಿ ಈ ಪ್ರಜ್ಞೆ ನಶಿಸಿಹೋಗುವಂತೆ ಮಾಡುತ್ತಲೇ ರಾಜಕೀಯ ಪಕ್ಷಗಳು ಕಾರ್ಪೋರೇಟ್ ಮಾರುಕಟ್ಟೆ ಶಕ್ತಿಗಳ ಕಾಲಾಳುಗಳಂತೆ ಕಾರ್ಯನಿರ್ವಹಿಸುತ್ತಿವೆ. ಜಾತಿ ರಾಜಕಾರಣದ ಮುಂಚೂಣಿಯಲ್ಲಿರುವವರಿಗೂ ಜಾತಿ ತಾರತಮ್ಯಗಳು, ಅಸ್ಪೃಶ್ಯತೆಯಂತಹ ಅಮಾನುಷ ವಿದ್ಯಮಾನಗಳು, ಜಾತಿ ದೌರ್ಜನ್ಯಗಳು ಕಾಣದಂತಾಗಿದೆ. ಸಹಜವಾಗಿಯೇ ಈ ವಿಭಜನೆಯ ಗೋಡೆಗಳೇ ಅಧಿಕಾರ ರಾಜಕಾರಣದ ಕೋಟೆಗಳಿಗೆ ಭದ್ರತೆಯನ್ನು ಒದಗಿಸುತ್ತವೆ.
ಇಂದು ದೇಶಾದ್ಯಂತ ಪ್ರತಿರೋಧದ ದನಿಗಳು ಪ್ರಬಲವಾಗುತ್ತಿವೆ. ಮೇಲೆ ಉಲ್ಲೇಖಿಸಲಾದ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮಾತುಗಳು ಇಲ್ಲಿನ ಆಳುವ ವರ್ಗಗಳ ಮನಸ್ಥಿತಿಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ. ಈ ಮನಸ್ಥಿತಿಯ ವಿರುದ್ಧ ಜನಸಾಮಾನ್ಯರನ್ನು ಸಂಘಟಿಸಬೇಕಾದ ಅನಿವಾರ್ಯತೆಯನ್ನೂ ಈ ಮಾತುಗಳು ಒತ್ತಿ ಹೇಳುತ್ತವೆ. ಪ್ರತಿರೋಧದ ನೆಲೆಗಳಲ್ಲಿ ಇರುವ ಬಿರುಕುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಕುಸಿಯುತ್ತಿರುವ ಪ್ರಜಾಸತ್ತೆಯ ಸ್ಥಾವರವನ್ನು ಉಳಿಸಿಕೊಳ್ಳಬೇಕಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯೇ ಕುಸಿಯುತ್ತಿದೆ, ಇದರ ಆಧಾರ ಸ್ತಂಭವಾಗಿರುವ ಸಂವಿಧಾನದ ಅಡಿಪಾಯವನ್ನು ವ್ಯವಸ್ಥಿತವಾಗಿ ಶಿಥಿಲಗೊಳಿಸಲಾಗುತ್ತಿದೆ. ಪ್ರಗತಿಪರ ಎನಿಸಿಕೊಳ್ಳುವ ಪ್ರತಿರೋಧದ ದನಿಗಳು, ಆಳುವ ವರ್ಗಗಳೇ ಸೃಷ್ಟಿಸಿರುವ ಗೋಡೆಗಳಲ್ಲಿನ ಬಿರುಕುಗಳನ್ನು ಸರಿಪಡಿಸಿಕೊಳ್ಳುವುದರಲ್ಲೇ ತೊಡಗಿವೆ. ಈ ಗೋಡೆಗಳು ಭದ್ರವಾದರೂ ಶಿಥಿಲಾವಸ್ಥೆಯಲ್ಲಿರುವ ಪ್ರಜಾಸತ್ತೆಯ ಸ್ಥಾವರ ಕುಸಿಯುವುದನ್ನು ತಡೆಗಟ್ಟಲಾಗುವುದಿಲ್ಲ. ಏಕೆಂದರೆ ಈ ಪ್ರಜಾಸತ್ತೆಯ ಅಡಿಪಾಯವಾಗಿರುವ ಸಂವಿಧಾನ ಕ್ರಮೇಣ ಶಿಥಿಲವಾಗುತ್ತಿದೆ. ಈ ಅಪಾಯವೇ ನಮ್ಮನ್ನು ಜಾಗೃತಗೊಳಿಸಬೇಕಿದೆ.