ಎನ್ ಚಿನ್ನಸ್ವಾಮಿ ಸೋಸಲೆ
ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಲ್ಪನೆ ಎಂದಿನಿಂದ ಆರಂಭವಾಯಿತು- ಯಾಕಾಗಿ, ಯಾರು ಆರಂಭಿಸಿದರು ಎಂಬ ಪ್ರಶ್ನೆಗೆ ಉತ್ತರ ಬಹು ಚಾರಿತ್ರಿಕವಾದುದ್ದೇ ಆಗಿದೆ.
ಭಾರತಕ್ಕೆ ಜನತಂತ್ರ ವ್ಯವಸ್ಥೆ ಅಥವಾ ಈ ಹೊತ್ತಿನ ಜನವಾಣಿಯಂತೆ ಪ್ರಜಾಪ್ರಭುತ್ವ ವ್ಯವಸ್ಥೆ ಎಂದಿನಿಂದ ಜಾರಿಗೆ ಬಂತು ಎಂಬ ಕುತೂಹಲದ ಪ್ರಶ್ನೆ ಹುಟ್ಟುತ್ತದೆ. ಇಂದಿನ ಪ್ರಜಾಪ್ರಭುತ್ವದ ಮಾದರಿಯಲ್ಲಿ ಪ್ರಭುಗಳನ್ನೇ ಪ್ರಜೆಗಳು ತಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕಾಗಿ ಪ್ರಭುತ್ವವನ್ನೇ ಪ್ರಶ್ನೆ ಮಾಡಿದ್ದಕ್ಕೆ ಹನ್ನೆರಡನೇ ಶತಮಾನದ ಬಸವ ಹಾಗೂ ಬಸವಾದಿ ಶರಣ ಶರಣಿಯರ ಚಳುವಳಿಯೇ ಕಾರಣವಾಗಿದೆ. ಶತಮಾನದ ಬಸವ ಹಾಗೂ ಬಸವಾದಿ ಶರಣೀಯರ ಸಂಪ್ರದಾಯವಾದಿಗಳ ತೀರ್ಥದ ಬದುಕು ಹಾಗೂ ಜೀವನದ ಉತ್ತರಕ್ಕೆ – ಬೆವರಿನ ಜೀವನ ಮತ್ತು ಬದುಕಿನ ಆದರ್ಶದ ಉತ್ತರವನ್ನು ಪ್ರಶ್ನೆಯ ಮೂಲಕ ಪಡೆದುಕೊಂಡ ಸಂದರ್ಭ ಉದ್ಭವಿಸಿದ್ದೇ ಭಾರತದಲ್ಲಿ. ಇದನ್ನು ಜನತಂತ್ರ ವ್ಯವಸ್ಥೆಯ ನಾಂದಿ ಎಂದು ಹೇಳಬಹುದು. “ಕುಳಿತು’’ ದೇವರು ಹಾಗೂ ಸ್ವ ಘೋಷಿತ ಹುಟ್ಟಿನಿಂದ ತಮಗೆ ತಾವೇ ಪಡೆದುಕೊಂಡಿದ್ದ ಶ್ರೇಷ್ಠತೆಯ ಹೆಸರಿನಲ್ಲಿ ಹೊಟ್ಟೆ ತುಂಬಾ ಊಟ ಮಾಡುವವರ ವಿರುದ್ಧ “ದುಡಿದು’’ ಜಾತಿ ಹಾಗೂ ಕನಿಷ್ಠತೆಯ ಹೆಸರಿನಲ್ಲಿ ದುಡಿದರೂ ಸಹ ಹಸಿವಿನಿಂದ, ಧಾರ್ಮಿಕ ಹಿಡಿತದಿಂದಾಗಿ ಸಾಮಾಜಿಕ ಸಂಕೋಲೆಯಲ್ಲಿ ಬಳಲುತ್ತಿದ್ದ ಜನ ಪ್ರತಿಭಟಿಸಿದ ದಿನವೇ ಅದು. ಸಂಪ್ರದಾಯವಾದಿಗಳ ಈ ಸ್ವಾರ್ಥಪರ ಸಾಂಸ್ಕೃತಿಕ ಕುತಂತ್ರಕ್ಕೆ…. ಶತಶತಮಾನಗಳಿಂದ ಮೌನವಾಗಿದ್ದ ಜನರು ಎಂದು ಬೌದ್ಧಿಕವಾಗಿ ಪ್ರತಿಭಟನೆ ಮಾಡಿದರೋ ಅ ದಿನವೇ ಪ್ರಜಾಪ್ರಭುತ್ವಕ್ಕೆ ನಾಂದಿಯಾಯಿತು. ಈ ನಾಂದಿಯ ಮುಂದುವರಿದ ಭಾಗವೇ ಇಂದಿನ ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಪ್ರಜಾಪ್ರಭುತ್ವ ಭಾರತದ ಬೃಹತ್ ಲಿಖಿತ ಸಂವಿಧಾನದ ಆಶಯವೂ ಆಗಿದೆ.
ಭಗವಾನ್ ಬುದ್ಧರ ಆಸೆಯೇ ದುಃಖಕ್ಕೆ ಮೂಲ ಎಂಬ ಕಾಯಕ ಸಿದ್ಧಾಂತದ ಮಾನವ ಸಂಬಂಧಗಳ ಪ್ರೀತಿ – ಈ ತತ್ವ ಸಿದ್ಧಾಂತವನ್ನೇ ಸಂಪೂರ್ಣವಾಗಿ ಕಳಿಂಗ ಯುದ್ಧದ ನಂತರ ಮೈಗೂಡಿಸಿಕೊಂಡ ಸಾಮ್ರಾಟ ಅಶೋಕ ಮಹಾರಾಜರ “ದೇವನಾಂ ಪ್ರಿಯ – ಪ್ರಿಯದರ್ಶಿನಿ’’ ಎಂಬ ಜನಸಾಮಾನ್ಯರಿಗೂ ಪ್ರಿಯವಾದ, ಪ್ರಕೃತಿಯನ್ನು – ದೇಶವನ್ನು, – ದೇಶವಾಸಿಗಳನ್ನು – ಹಿರಿಯರನ್ನು – ಮಹಿಳೆಯರನ್ನು – ಮಕ್ಕಳನ್ನು – ಅಂಗವಿಕಲರನ್ನು ಹಾಗೂ ಯಾವುದೇ ಜಾತಿ ಅಥವಾ ಹುಟ್ಟಿನಿಂದ ಸ್ಪೃಶ್ಯ ಅಸ್ಪೃಶ್ಯ ಎಂದು ಗುರುತಿಸಿಕೊಳ್ಳದೆ ಜನಸೇವೆಯನ್ನು ನಿಷ್ಕಳಂಕದಿಂದ ಮಾಡುವ ರಾಜರ ಕೆಲಸವೇ ದೇವರಿಗೆ ಪ್ರಿಯವಾದ ಕೆಲಸವೆಂದು ಅರ್ಪಿಸಿಕೊಂಡ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ನೀತಿ ಅಡಕವಾಗಿತ್ತು – ಇನ್ನೂ ಬಹು ಮುಖ್ಯವಾಗಿ ನಮ್ಮ ಕನ್ನಡ ನಾಡು ಈ ಪ್ರಜಾಪ್ರಭುತ್ವ ಭಾರತಕ್ಕೆ ಮುನ್ನುಡಿಯನ್ನು ಬರೆದಂತಹ ನೆಲ. ಕ್ರಿಸ್ತಶಕ 12ನೇ ಶತಮಾನದವರೆಗೆ ಆಳ್ವಿಕೆ ಮಾಡಿದ ಧಾರ್ಮಿಕ ಹಿನ್ನೆಲೆಯ ಹಿಡಿತದ ರಾಜಪ್ರಭುತ್ವವನ್ನು ಧಿಕ್ಕರಿಸಿ ಜನತೆಯ ಪ್ರಭುತ್ವವನ್ನು(ಪ್ರಜಾಪ್ರಭುತ್ವವನ್ನು) ಪ್ರತಿಷ್ಠಾಪನೆ ಮಾಡಲು ಹಂಬಲಿಸಿದ ಕಾಲಘಟ್ಟವೇ ಇದು. ಬಸವ ಹಾಗೂ ಬಸವದಿ ಶರಣ- ಶರಣಿಯರ ಬೌದ್ಧಿಕ ಹಿನ್ನೆಲೆಯ ಸಾಂಸ್ಕೃತಿಕ ಹೋರಾಟ ಈವರೆಗೂ ಬಹುದೊಡ್ಡ ಜನ-ಸಮಾಜದ ಮೇಲೆ ಪ್ರಭುತ್ವ ಹಾಗೂ ಪ್ರಭುತ್ವ ನಿಯಂತ್ರಕರು ಅವೈಜ್ಞಾನಿಕ ಹಾಗೂ ಅಭೌತಿಕ ಹಿನ್ನೆಲೆಯ ಸ್ವಾರ್ಥಪರ ಸಾಧನೆಗಾಗಿ ಹೇರಿದ್ದ ಸಾಮಾಜಿಕ ನಿರ್ಬಂಧಗಳನ್ನು ಬಿಡಿಸುವುದಾಗಿತ್ತು. ಈ ಅಜ್ಞಾನದ ಅಲೌಕಿಕ ಸಂಕೋಲೆಯನ್ನು ಸುಜ್ಞಾನದ ಸುತ್ತಿಗೆಯಿಂದ ಹದವಾಗಿ ಹೊಡೆದು ಬಿಡಿಸುವುದೇ ಆಗಿತ್ತು. ಈ ಸಂದರ್ಭದಲ್ಲಿ ಕನ್ನಡ ನಾಡಿನಲ್ಲಿ ಪ್ರಜಾಪ್ರಭುತ್ವಕ್ಕೆ ಮುನ್ನುಡಿಯ ಕಾಲಘಟ್ಟ. ಗೌತಮ ಬುದ್ಧರ ಆಸೆಯೇ ದುಃಖಕ್ಕೆ ಮೂಲ ಕಾರಣ – ಅಶೋಕನ ದೇವನಾಂಪ್ರಿಯ ಪ್ರಿಯದರ್ಶಿನಿ – ಬಸವಣ್ಣರ ಕಾಯಕ ಸಿದ್ಧಾಂತ ಗಳನ್ನು ತನ್ನ ದೇಶದ ಭೂಪ್ರದೇಶವನ್ನು ಸಮಗ್ರವಾಗಿ ಅರ್ಥ ಮಾಡಿಕೊಂಡು , ತಾವು ಬದುಕಿದ ಪರಿ ಹಾಗೂ ಪಡೆದ ಉನ್ನತ ಶಿಕ್ಷಣದ ಫಲದಿಂದ ಭಾರತ ಹಾಗೂ ಭಾರತೀಯತೆಯನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡಿದ್ದ ಅಂಬೇಡ್ಕರ್ ಅವರ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು….ಎಂಬ ತತ್ವವೇ ಇಂದಿನ ಭಾರತದ ಬೃಹತ್ ಲಿಖಿತ ಸಂವಿಧಾನದ ಮೂಲ ಜೀವಾಳ. ಇದೆ ಭಾರತದ ಪ್ರಜಾಪ್ರಭುತ್ವದ ಜೀವಾಳವು ಹೌದು. ಹಾಗೂ ಇದು ವಾಸ್ತವವೂ ಹೌದು.
ಗೌತಮ ಬುದ್ಧ -ಸಾಮ್ರಾಟ ಅಶೋಕ – ಸಾಮಾಜಿಕ ಹರಿಕಾರ ಬಸವಣ್ಣ – ಅಂಬೇಡ್ಕರ್ ಅವರ ನಂತರ ಹೊರಬಂದ ಎಲ್ಲಾ ಸಮ ಸಂಸ್ಕೃತಿಯ ಚಿಂತಕರೆಲ್ಲರಿಗೂ ಸಹ ತಮ್ಮ ಹೋರಾಟ ಹಾಗೂ ಸಿದ್ಧಾಂತದ ಖಡು ವೈರಿಗಳೆಂದರೆ ಆಪ್ರಜಾಪ್ರಭುತ್ವ ಮಾದರಿಯಲ್ಲಿ ಪುರಾಣದ ಸಂವಿಧಾನವನ್ನೇ ವಾಸ್ತವದ ಸಂವಿಧಾನವನ್ನಾಗಿಸಿಕೊಂಡು ಏಕಮುಖವಾಗಿ ಜೀವಿಸಿದ – ಜೀವಿಸುತ್ತಿರುವ ಹಾಗೂ ಜೀವಿಸಲು ಅಂಬಲಿಸುತ್ತಿರುವವರ ವಿರುದ್ಧವೇ ಹೊರತು – ಸಮ ಸಮಾಜವನ್ನು ಪ್ರತಿಪಾದನೆ ಮಾಡಿದವರ ವಿರುದ್ಧ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆದರೆ ಇವತ್ತಿನ ವಾಸ್ತವದ ದುರಂತವೆಂದರೆ…. ಸಮಸಮಾಜದ ಪರಿಕಲ್ಪನೆಯನ್ನು ಮೈಗೂಡಿಸಿಕೊಂಡು ಹೋರಾಟ ಮಾಡಿದವರನ್ನು ಭೌತಿಕವಾಗಿ ಹಾಗೂ ಬೌದ್ಧಿಕವಾಗಿಯೂ ನಾವು ಸಾಯಿಸುತಿದ್ದೇವೆ. ಅಸಮಾಜ – ಅಧರ್ಮ ನೀತಿ- ಮನುಷ್ಯರನ್ನು ಮನುಷ್ಯರೊಂದಿಗೆ ಕಾಣದೆ ಇರುವ ಘನ ಗೋರ ಅಸ್ಪೃಶ್ಯತೆಯನ್ನೇ ಧರ್ಮ, ಜಾತಿ, ದೇವರ ಹೆಸರಿನಲ್ಲಿ ಪೋಷಿಸುವ ಸಮಾಜವನ್ನು ನಾವು ಅತ್ಯಂತ ಹೆಚ್ಚು ಹೆಚ್ಚು ಪೋಷಿಸುತ್ತೇವೆ ಹಾಗೂ ರಕ್ಷಿಸಲು ಹಂಬಲಿಸುತ್ತಿದ್ದೇವೆ. ಏಕೆಂದರೆ ಇದು ಪುರಾಣ. ಇಂದಿಗೂ ನಮ್ಮ ದೇಶದ ಜನರಿಗೆ ಪುರಾಣ ರಂಜಿಸುವಷ್ಟು- ರಂಜಿಸುತ್ತಿರುವಷ್ಟು ವಾಸ್ತವ ರಂಜಿಸಲೇ ಇಲ್ಲ.
ಆದರೆ ಬಹುದೊಡ್ಡ ವಾಸ್ತವದ ದುರಂತವೆಂದರೆ “ಪುರಾಣವನ್ನು ಸೃಷ್ಟಿ ಮಾಡಿದವರಿಗೆ ಅದರಿಂದ ಸಾಂಸ್ಕೃತಿಕವಾಗಿ ಸಕಲ ಸೌಲಭ್ಯವನ್ನು ಪಡೆದುಕೊಳ್ಳುವ ದಾರಿಯೂ ಸ್ಪಷ್ಟವಾಗಿ ತಿಳಿದಿತ್ತು, ಈ ದಾರಿಯಲ್ಲಿ ಮುನ್ನಡೆದು ಬಹುದೊಡ್ಡ ಜನರನ್ನು ತಮ್ಮ ತೋಳ್ತೆಕೆಗೆ ತೆಗೆದುಕೊಂಡು ತಮಗೆ ತಾವೇ ಶ್ರೇಷ್ಠರು ಆದರೂ… ಇದೇ ಮಾದರಿಯಲ್ಲಿ ಅವರಿಗೆ ಪ್ರಜಾಪ್ರಭುತ್ವದ ಇಂದಿನ ಸಂವಿಧಾನವನ್ನು ಹೇಗೆ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕೆಂಬ ಪ್ರಜ್ಞೆಯು ಚೆನ್ನಾಗಿದೆ. ಆದರೆ ಶತಶತಮಾನಗಳಿಂದ ಮುಂದುವರೆದಂತೆ ಇಂದಿನವರೆಗೂ ಶ್ರಮದ ಮೂಲಕ ಜ್ಞಾನವಂತರಾದರೂ ಸಹ, ತೀರ್ಥದವರ ಮಾಯಲೋಕಕ್ಕೆ ಸಿಲುಕಿ ಅಜ್ಞಾನಿಗಳಾಗಿ ಉಳಿದವರಿಗೆ ಇವರ ಉದ್ಧಾರಕ್ಕೆ ಉದಯಿಸಿದ ಈ ನೆಲ ಸಂಸ್ಕೃತಿಯ ಹರಿಕಾರರಾದ ಬುದ್ಧ ಅರ್ಥವಾಗಲಿಲ್ಲ – ಅಶೋಕ ಅರ್ಥವಾಗಲಿಲ್ಲ – ಬಸವಣ್ಣ ಅರ್ಥವಾಗಲಿಲ್ಲ,- ಜಾತಿಯ ಹಿನ್ನೆಲೆಯಿಂದಾಗಿ ಅಂಬೇಡ್ಕರ್ ಅರ್ಥವಾಗುವುದಿರಲಿ ಅವರು ಬೇಕಾಗಲಿಲ್ಲ, ಮುಂದುವರೆದು ಅವರು ತನ್ನ ದೇಶ ಮತ್ತು ದೇಶವಾಸಿಗಳಿಗೆ ಸಮಸಂಸ್ಕೃತಿಯನ್ನು ಬಯಸಿ ಬರೆದ ಸಂವಿಧಾನವೇ ತಿಳಿಯದಿರುವಾಗ ಇನ್ನೆಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವ ಮೆರೆಲು ಸಾಧ್ಯ. ” ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶ್ರೇಷ್ಠರು ಎಂದು ತಮಗೆ ತಾವೇ ಗುರುತಿಸಿಕೊಂಡಿರುವ ಜಾತಿ ವ್ಯವಸ್ಥೆಯೇ ಆಳ್ವಿಕೆ ಮಾಡುತ್ತಿರುವಾಗ – ಅಸ್ಪೃಶ್ಯರು, ಕನಿಷ್ಠರು ಎಂದು ಅವರಿಂದ ಕರೆಸಿಕೊಂಡವರಿಗೆ ಎಲ್ಲಿದೆ ಜಾಗ “.
ಕವಿ ಸಿದ್ದಲಿಂಗಯ್ಯನವರು ಹೇಳಿದಂತೆ “ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ – ಟಾಟಾ ಬಿರ್ಲರ ಜೇಬಿಗೆ ಬಂತು, ಜನಗಳ ತಿನ್ನುವ ಬಾಯಿಗೆ ಬಂತು – ಕೋಟ್ಯಾಧೀಸರ ಕೋಣೆಗೆ ಬಂತು 47ರ ಸ್ವಾತಂತ್ರ್ಯ’’ ಎಂದು ಭಾರತದ ಸ್ವಾತಂತ್ರ್ಯದ ಬಗ್ಗೆ ಕವಿಗಳು ಮನಮುಟ್ಟುವಂತೆ ಹೇಳುವ ಮಾತನ್ನು ಹಿಂದಿನ ಪ್ರಜಾಪ್ರಭುತ್ವಕ್ಕೆ ಅನ್ವಯಿಸಿ ಹೇಳುವುದಾದರೆ “ಧಾರ್ಮಿಕ ಅಂಧಕಾರದವರಿಗೆ, ಜಾತಿಯ ಶ್ರೇಷ್ಠತೆಯ ಅಹಂ ಹೊಂದಿರುವವರಿಗೆ ಬಂತು 47ರ ಸ್ವಾತಂತ್ರ್ಯ – ಉಳ್ಳವರ ಜೇಬಿಗೆ ಬಂತು, ಅಸ್ಪೃಶ್ಯತೆಯ ಹೆಸರಲ್ಲಿ ಜನರನ್ನು ಅಮಾನವೀಯವಾಗಿ ತಿಂದು ಮೆರೆಯುತ್ತಿರುವವರ ಅಜ್ಞಾನದ ಮನಸ್ಸಿಗೆ ಬಂತು – ಹೊಡೆದಾಳುವವರ ಕೋಣೆಗೆ ಬಂತು 47ರ ಸ್ವಾತಂತ್ರ್ಯ’’ ಎಂದು ಹೇಳಬಹುದು. ಇಂದಿನ ಬಹು ಜನರಿಗೆ ಇದು ಅರ್ಥವಾಗದಿರುವುದು ನಮ್ಮ ನಡುವಿನ ಬಹುದೊಡ್ಡ ಸಾಂಸ್ಕೃತಿಕ ದುರಂತ.
ಈ ಹಿನ್ನಲೆಯ ಅರ್ಥವನ್ನೇ ಕರ್ನಾಟಕದ ಮಟ್ಟಿಗೆ ಪರಿವರ್ತನೆಯ ಕಾಲ ಎಂದು ಹೇಳಬಹುದಾದ ಹನ್ನೆರಡನೇ ಶತಮಾನ. ಈ ಕಾಲದಿಂದ ಮೊದಲ್ಗೊಂಡ ಕಾಯಕ ಸಿದ್ಧಾಂತದ ಜೀವನ ಪ್ರಕ್ರಿಯೆ ಬಸವ ಹಾಗೂ ಬಸವಾದಿ ಶರಣರ ಸಿದ್ಧಾಂತದಂತೆ ತಳಸಮುದಾಯ ಜನರು ಪ್ರಪ್ರಥಮವಾಗಿ ಯಥೇಚ್ಛವಾಗಿ ಮಾತನಾಡುವಂತೆ ರೂಪುಗೊಂಡ ಪ್ರಭುತ್ವವೇ ವಿಜಯನಗರ ಸಾಮ್ರಾಜ್ಯ. ಈ ಸಾಮ್ರಾಜ್ಯದ ಸ್ಥಾಪನೆಗೂ 12ನೇ ಶತಮಾನದ ಬಸವ ಹಾಗೂ ಬಸವಾದಿ ಶರಣ ಶರಣೆಯರ ಪ್ರಜ್ಞಾಪೂರ್ವಕ ಬೌದ್ಧಿಕ ಕ್ರಾಂತಿಯೇ ಮೂಲ ಕಾರಣ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲಘಟ್ಟದಲ್ಲಿಯೇ ಕರ್ನಾಟಕ ಚರಿತ್ರೆಯಲ್ಲಿ ಜನಸಾಮಾನ್ಯರ ಬದುಕು-ಬವಣೆ, ವೃತ್ತಿ, ಕಸಬುಗಳ ಕುರಿತ, ಸಾಹಿತ್ಯ, ಶಾಸನ, ಶಿಲ್ಪ ಇತ್ಯಾದಿ ಪ್ರಕಾರಗಳಲ್ಲಿ ದಾಖಲೆಗಳು ನಿರ್ಮಾಣಗೊಂಡು ಕನ್ನಡ ನಾಡಿನ ಸಾಂಸ್ಕೃತಿಕ ಚರಿತೆಯನ್ನು ಜನಕೇಂದ್ರಿತವಾಗಿ ಶ್ರೀಮಂತ ಗೊಳಿಸಿದವು… ಈ ಪ್ರಕ್ರಿಯೆಯು ಸಹ ಒಂದರ್ಥದಲ್ಲಿ ಇಂದಿನ ಸಂವಿಧಾನದ ಭಾರತಕ್ಕೆ ಪೂರಕವಾಯಿತು. ಈ ಸಾಮ್ರಾಜ್ಯದ ಸಂದರ್ಭದಲ್ಲಿ ಇದ್ದ ದಾಸರು, ತತ್ವಪದಕಾರರು, ಸೂಫಿಗಳು, ಜನಪದ ಲಾವಣಿಕಾರರೆಲ್ಲರೂ ಸಹ ಪ್ರಭುತ್ವ ಮತ್ತು ಪ್ರಜೆಗಳು ಸಾಂಪ್ರದಾಯಿಕ ವಾದಿಗಳ ಧಾರ್ಮಿಕ ಹಿಡಿತದಲ್ಲಿ ಸಿಲುಕಿರುವ ಇಕ್ಕಟ್ಟು-ಬಿಕ್ಕಟ್ಟುಗಳ ಕುರಿತು ಮಾತನಾಡಿದ್ದು.
ಇವರೆಲ್ಲರ ಸಾಹಿತ್ಯ ಮತ್ತು ಚಿಂತನೆಗೆ ಅಲೌಕಿಕತೆಯ ಹಿನ್ನೆಲೆಯಲ್ಲಿ ಬದುಕನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ಮುಂದಾದವರ ವಿರುದ್ಧವೇ ವಸ್ತುನಿಷ್ಟವಾಗಿ ಲೌಕಿಕತೆಯ ಹಿನ್ನೆಲೆಯಲ್ಲಿ ಹೇಳಿದ್ದಾಗಿದೆ. ಅಂದರೆ ಪುರಾಣ ಕಾಲ್ಪನಿಕ ಬದುಕನ್ನು ಧಿಕ್ಕರಿಸಿ, ವಾಸ್ತವದ ಸತ್ಯದ ಬದುಕನ್ನು ತೋರಿಸುವುದೇ ಆಗಿತ್ತು. ಇದೇ ಮಾದರಿಯೂ ಸಹ ಸಂವಿಧಾನ ಹಾಗೂ ಇದರ ರಚನಾಕಾರರ ಆಶಯವೂ ಆಗಿದೆ.
ಈ ಅರ್ಥದಲ್ಲಿಯೇ ಹೇಳುವುದಾದರೆ ಅಲೌಕಿಕತೆ ಎಂಬುದು ಪುರಾಣ, ಲೌಕಿಕತೆ ಎಂಬುದು ವಾಸ್ತವ. ಈ ಅಲೌಕಿಕತೆಯ ವಿರುದ್ಧವೇ ಸ್ವತಂತ್ರ ಭಾರತದ ಪ್ರಜೆಗಳಿಂದ-ಪ್ರಜೆಗಳಿಗಾಗಿ-ಪ್ರಜೆಗಳಿಗೋಸ್ಕರ ಎಂಬ ತತ್ವದಲ್ಲಿ ರೂಪಿತವಾದ ಪ್ರಜಾಪ್ರಭುತ್ವ ಭಾರತಕ್ಕೆ ಅಂಬೇಡ್ಕರ್ ರವರು ಬರೆದ ಸಂವಿಧಾನವೇ ಲೌಕಿಕ ಮಾದರಿಯದು. ಇಲ್ಲಿ ಪುರಾಣಕ್ಕೆ ಆಸ್ಪದ ಇಲ್ಲ – ವಾಸ್ತವಕ್ಕೆ ಮಾತ್ರ ಮಾನ್ಯತೆ. ಇಲ್ಲಿ ತೀರ್ಥಕ್ಕೆ ಬೆಲೆ ಇಲ್ಲ – ಬೆವರಿಗೆ ಮಾತ್ರ ಬೆಲೆ.
ಎರಡು ಸಾವಿರ ವರ್ಷಕ್ಕೂ ಹೆಚ್ಚು ಕಾಲಗಳಿಂದ ಏಕಮುಖವಾಗಿಯೇ – ಅಲೌಕಿಕ ಮಾದರಿಯಲ್ಲಿಯೇ ಹರಿಯುತ್ತಿದ್ದ ಸಾಂಪ್ರದಾಯಿಕವಾಗಿ ಪ್ರಶ್ನೆ ಮಾಡದ, ಕಿಂಚಿತ್ತು ಪ್ರಶ್ನೆಯನ್ನು ಹುಟ್ಟಾಕದ ಪುರಾಣ ಮಿಶ್ರಿತವಾಗಿ ಹರಿಯುತ್ತಿದ್ದ ಕಶ್ಮಲಗೊಂಡಿದ್ದ ನದಿಗೆ, ಪ್ರಶ್ನೆ ಮಾಡುವ ಹಾಗೂ ಆ ಪ್ರಶ್ನೆಗೆ ಉತ್ತರ ಪಡೆಯುವ ಮಾದರಿಯ ಲೌಕಿಕ ಹಿನ್ನೆಲೆ ಬೃಹತ್ ಅಣೆಕಟ್ಟನ್ನು ಕಟ್ಟಿ, ಕಶ್ಮಲ ಗೊಂಡಿದ್ದ ನೀರನ್ನು ಶುದ್ಧೀಕರಿಸಿ ಪರಿಶುದ್ಧವಾಗಿ ಈ ಭಾರತ ನೆಲದಲ್ಲಿ ಹರಿಯುವಂತೆ ಮಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್‌ರವರು.
ಈ ಕಾರ್ಯವನ್ನು ಯಶಸ್ವಿಯಾಗಿ ಸಾಧಿಸಲು ಅಂಬೇಡ್ಕರ್ ರವರು ಈ ಭಾರತವನ್ನು ಕಂಡಿಕೊಂಡದ್ದು ಭಾರತದ ಭೂಪಟದ ಚರಿತ್ರೆಯಲ್ಲ, ಬದಲಿಗೆ ಸಮಗ್ರ ಭಾರತದ ಭೂಪ್ರದೇಶದ ಚರಿತ್ರೆಯನ್ನು. ಭೂಪಟದ ಚರಿತ್ರೆ ಎಂದರೆ ಬದಲಾಗದ ಚರಿತ್ರೆ ಎಂಬರ್ಥ, ಭೂಪ್ರದೇಶ ಚರಿತ್ರೆ ಎಂದರೆ ಬದಲಾಗಿಸುವ ಚರಿತ್ರೆ ಎಂದರ್ಥ. ಈ ಸಾಧ್ಯತೆಯನ್ನು ತಮ್ಮ ಜೀವನದಲ್ಲಿ ಜೀವಿಸಿದ ಪರಿ , ಒಡಲಾಳದಿಂದ ಪಡೆದ ಶಿಕ್ಷಣ, ದೇಶ-ವಿದೇಶದ ಶಿಕ್ಷಣ ಹಾಗೂ ಜ್ಞಾನವಂತರ ಸಂಪರ್ಕ, ಈ ಎಲ್ಲದರ ಸಮ್ಮಿಶ್ರನವಾಗಿ ತನ್ನೊಳಗೆ ಉದಯಿಸಿದ ಒಡಲಾಳದ ಭಾರತೀಯತೆಯ ದೇಶಿಯತೆಯನ್ನೇ ಮೈಗೂಡಿಸಿಕೊಂಡ ಬಾಬಾ ಸಾಹೇಬ ಅಂಬೇಡ್ಕರ್‌ರವರು ರೂಪಿಸಿದ `ಸರ್ವರಿಗೂ ಸಮಬಾಳು – ಸರ್ವರಿಗೂ ಸಮಪಾಲು’ ಎಂಬ ನೆಲ ಮೂಲ ಸಂಸ್ಕೃತಿಯ ಸಂವಿಧಾನ. ಇಂದು ಈ ಬೃಹತ್ ಲಿಖಿತ ಸಂವಿಧಾನ ಪ್ರಪಂಚದ ಅನೇಕ ರಾಷ್ಟ್ರಗಳಿಗೆ ಮಾದರಿಯಾಗಿದೆ.
ಇದಕ್ಕೆ ಒಂದು ನಿದರ್ಶನವನ್ನು ನೀಡುವುದಾದರೆ ದಕ್ಷಿಣ ಆಫ್ರಿಕಾದ ವಿಮೋಚನೆಗೆ ಬ್ರಿಟಿಷರ ವಿರುದ್ಧ ಶಾಂತಿ ಮಾರ್ಗದಲ್ಲಿಯೇ ಹೋರಾಡಿ ಸತತವಾಗಿ ೨೭ ವರ್ಷಗಳ ಕಾಲ ಸೆರೆಮನೆ ವಾಸವನ್ನು ಅನುಭವಿಸಿ, ಹೊರಬಂದ ’ನೆಲ್ಸನ್ ಮಂಡೇಲಾ’ ಅವರು ನಂತರ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾಯಿತರಾಗಿ ದಕ್ಷಿಣ ಆಫ್ರಿಕದ ಮೊದಲ ದೇಸಿಯ ಅಧ್ಯಕ್ಷರಾದ ಮೇಲೆ ಅವರಿಗೆ, ಅವರ ಚಿಂತನೆ – ಅವರು ತನ್ನ ದೇಶದ ಸ್ವಾತಂತ್ರ್ಯಕ್ಕಾಗಿ ಸುಧೀರ್ಘ ಕಾಲದವರೆಗೂ ಅನುಸರಿಸಿದ ಮಾರ್ಗವನ್ನು ಮೆಚ್ಚಿ ಭಾರತ ಸರ್ಕಾರ ಕೊಡಮಾಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ’ಭಾರತರತ್ನ’ ನೀಡಿತು. ವಿದೇಶರಿಗೆ ನೀಡಿದ ಮೊದಲ ಹಾಗೂ ಈ ಸಂದರ್ಭದಲ್ಲಿ ಕೊನೆಯ `ಭಾರತರತ್ನ’ವೂ ಹೌದು. ಈ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸ್ವೀಕರಿಸುವಾಗ ಭಾರತಕ್ಕೆ ಬಂದಿದ್ದ ನೆಲ್ಸನ್ ಮಂಡೇಲಾರವರು ಭಾರತ ತಮಗೆ ನೀಡಿದ ಗೌರವವನ್ನು ವಿನಮ್ರವಾಗಿ – ಗೌರವಪೂರ್ಣವಾಗಿ ಸ್ವೀಕರಿಸುತ್ತೇನೆ… ಹೀಗೆ ಸ್ವೀಕರಿಸುವುದರ ಜೊತೆಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಭಾರತ ನನಗೆ ಭಾರತರತ್ನ ಎಂಬ ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನು ನೀಡಿದೆ, ಇದನ್ನು ಗೌರವ ಪೂರ್ವಕವಾಗಿ ಸ್ವೀಕರಿಸುತ್ತೇನೆ. ಆದರೆ ಇದು ನನಗೆ ವೈಯಕ್ತಿಕವಾದದ್ದು, ಆದರೆ ನನ್ನ ದೇಶಕ್ಕಾಗಿ ಇನ್ನೊಂದು ಬೆಲೆ ಕಟ್ಟಲಾಗದ ರತ್ನವನ್ನು ಕೊಡ್ಯೊಯಲು ಬಯಸುತ್ತೇನೆ. ಅದೇ ಪ್ರಪಂಚಕ್ಕೆ ಮಾದರಿಯಾಗಿರುವ ಜನ ಮುಖಿ ಆಳ್ವಿಕೆಯ ಅಂಬೇಡ್ಕರ್‌ರವರು ರಚಿಸಿರುವ ಭಾರತದ ಸಂವಿಧಾನವನ್ನು ಎಂಬುವುದು ಅವರ ಅಂತರಾಳದ ಮಾತಾಗಿತ್ತು.
ಈ ಮಾತಿನಿಂದ ತಿಳಿದುಬರುವುದು ಏನೆಂದರೆ, ಭಾರತದಂತೆಯೇ ದಕ್ಷಿಣ ಆಫ್ರಿಕಾವೂ ಸಹ ಆಂಗ್ಲರ ಆಳ್ವಿಕೆಗೆ ಒಳಪಟ್ಟು ಅಲ್ಲಿನ ಮೂಲನಿವಾಸಿಗಳ ಮೇಲೆ ಉಂಟಾಗಿದ್ದ, ಸಾಂಸ್ಕೃತಿಕ ಹಿನ್ನಲೆಯ ಮೂಲಭೂತ ಹಕ್ಕುಗಳ ಉಲ್ಲಂಘನೆ ಹಾಗೂ ಅವುಗಳ ಮೇಲಿನ ದಾಳಿಗಳನ್ನು ತಡೆದು ಸದೃಢವಾದ ದಕ್ಷಿಣ ಆಫ್ರಿಕವನ್ನು ಕಟ್ಟಲು ಸದೃಢ ಭಾರತಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಶಕ್ತಿಯುತವಾದ ಸಂವಿಧಾನವೇ ಪ್ರೇರಣೆಯಾಗಬೇಕು ಎಂಬುದಾಗಿರುವುದು. ಇಂದಿಗೂ ದಕ್ಷಿಣ ಆಫ್ರಿಕಾದ ಸಂವಿಧಾನದಲ್ಲಿ ಭಾರತದ ಸಂವಿಧಾನದ ಹೆಚ್ಚಿನ ಅಂಶಗಳು ಅಡಕವಾಗಿರುವುದು ಇದಕ್ಕೆ ನಿದರ್ಶನ.
ಭಾರತದ ಸಂವಿಧಾನ ಭಾರತ ಹಾಗೂ ಭಾರತೀಯರ ರಕ್ಷಣೆಗೆ ಕಟ್ಟಿಬದ್ಧವಾಗಿದೆ. ಪ್ರಪಂಚದ ಭೂಪಟದಲ್ಲಿ ಭಾರತವನ್ನು ಬೌದ್ಧಿಕ ಹಾಗೂ ಸದೃಢವಾಗಿ ಪ್ರತಿನಿಧಿಸುವುದಕ್ಕೆ ಪ್ರೇರಣೆಯಾಗುವುದರ ಜೊತೆಗೆ, ಭಾರತೀಯರು ಸರ್ವಕ್ಷೇತ್ರದಲ್ಲಿಯೂ ಸಾಧನೆ ಮಾಡಿ ತಲೆಯೆತ್ತಿ ಮುನ್ನಡೆಯುವಂತೆ ಮಾಡಿದೆ. ಆದರೆ ಇಂತಹ ಸದೃಢ ಸಂವಿಧಾನವನ್ನು ಪಾಲನೆ ಮಾಡಬೇಕಾದವರು ಮಾತ್ರ ಭೌತಿಕವಾಗಿ ಸಬಲರಾಗಿದ್ದರು, ಬೌದ್ಧಿಕವಾಗಿ ವಿಫಲರಾಗುತ್ತಿರುವುದರಿಂದ ಇಂತಹ ಸಂವಿಧಾನ ಭಾರತದಲ್ಲಿ ಇನ್ನೂ ಸಮಗ್ರವಾಗಿ ಜನರ ಬಳಿಗೆ ಜಾರಿಗೆ ಬರಲು ಸಾಧ್ಯವಾಗುತ್ತಿಲ್ಲ. ವಾಸ್ತವವಾಗಿ ಜನವರಿ ೨೬. ೧೯೫೦ರಂದು ಲಿಖಿತ ಸಂವಿಧಾನ ಜಾರಿಗೆ ಬಂದರೂ ಸಹ, ೨,೦೦೦ ವರ್ಷಗಳಿಂದ ಜಾರಿಯಲ್ಲಿರುವ ಸಾಂಪ್ರದಾಯಿಕ ಅಲಿಖಿತ ಸಂವಿಧಾನದ ಮುಂದೆ, ಸೆಡ್ಡು ಹೊಡೆದು ತನ್ನ ಪ್ರಬಲ ಸಂವಿಧಾನಾತ್ಮಕ ಕಾನೂನುಗಳನ್ನು ಪ್ರತಿಪಾದನೆ ಮಾಡಿ ಜಾರಿಗೊಳಿಸಲು ಹೆಣಗಾಡುತ್ತಿದೆ. ಇದಕ್ಕೆ ಮೂಲ ಕಾರಣ ಅಸಮಾನತೆಯನ್ನೇ ನಮ್ಮ ಸಂವಿಧಾನವನ್ನನ್ನಾಗಿಸಿ ಕೊಂಡಿರುವ ಪಾರಂಪರಿಕ ಮನಸುಗಳಿಗೆ – ಸಮಾನತೆಯನ್ನು ಸಾರುವ ಸಂವಿಧಾನದ ಪಠ್ಯ ಅಪತ್ಯವಾಗಿರುವುದು. ಆರಂಭದಲ್ಲಿಯೇ ಹೇಳಿದಂತೆ ಭಾರತ ಇನ್ನೂ ಹೆಚ್ಚು ಹೆಚ್ಚು ಅಲೌಕಿಕತೆಯೆಡೆಗೆ ಮುನ್ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಸಂವಿಧಾನ ಮಾತನಾಡುವುದು ಲೌಕಿಕತೆಯ ಹಿನ್ನೆಲೆಯ ಬೌದ್ಧಿಕ ಚಿಂತನೆಯ ಜನಮುಖಿ ಮಾತುಗಳನ್ನು. ಇಂತಹ ಮಾದರಿಯ ಆದರ್ಶ ಹಾಗೂ ತತ್ವ ಸಿದ್ಧಾಂತಗಳನ್ನೇ ಬುದ್ಧ ಬಸವರೂ ಸಹ ಮಾಡಿದ್ದು. ಈ ಹಿನ್ನಲೆಯಿಂದಲೇ ಬುದ್ದ, ಬಸವರನ್ನು ನೆಪಾರ್ಥ್ಯಕ್ಕೆ ಸರಿಸಲಾಯಿತು. ಅದೇ ಮಾದರಿಯಲ್ಲಿ ಸಂವಿಧಾನವನ್ನು ಸಾಗಿಸುತ್ತಿರುವುದು ವಾಸ್ತವ ಸತ್ಯ….! ಇದಾಗಬಾರದು, ಏಕೆಂದರೆ ಲೌಕಿಕತೆಯ ಸಂವಿಧಾನ ಮಾತನಾಡಿದರೆ ಮಾತ್ರ, ದೇಶದ ಜನ ಸಮಾನತೆಯನ್ನು ಪಡೆದು, ಸರ್ವ ಕ್ಷೇತ್ರದಲ್ಲಿಯೂ ತಮ್ಮ ಐಡೆಂಟಿಟಿಯನ್ನು ಸಂವಿಧಾನಾತ್ಮಕವಾಗಿ ಗುರುತಿಸಿಕೊಂಡು, ಗಟ್ಟಿತನದ ಭಾರತವನ್ನು ಕಾಯಕತತ್ವದ ಮೂಲಕ ಕಟ್ಟುತ್ತಾರೆ. ಪ್ರಪಂಚದ ಭೂಪಟದಲ್ಲಿ ಭಾರತ ಸದೃಢವಾಗಿ ಕಾಣುತ್ತದೆ.
ಆದರೆ ಆಲೌಕಿಕ ಭಾರತವನ್ನು ಕಟ್ಟುವವರು ದೇವರು, ಧರ್ಮದ ಹೆಸರಿನಲ್ಲಿ ಒಡೆದಾಳಿ ತಮ್ಮ ಸ್ವಾರ್ಥ ಸಾಧನೆಗಾಗಿಯೇ ಭಾರತ ಮತ್ತು ಭಾರತೀಯರನ್ನು ಬಳಸಿಕೊಂಡು ಪೊಳ್ಳು ಭಾರತವನ್ನು ಕಟ್ಟುತ್ತಾರೆ.
ಈ ಎರಡು ಸಿದ್ಧಾಂತಗಳ ಪರ-ವಿರೋಧಗಳ ಚಿಂತನೆಯೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೂಲ ಧಾತು.
“ಎದೆಗೆ ಬಿದ್ದ ಅಕ್ಷರ – ಭೂಮಿಗೆ ಬಿದ್ದ ಬೀಜ – ಒಂದಲ್ಲ ಒಂದು ದಿನ ಫಲ ಕೊಟ್ಟೆ ಕೊಡುತ್ತದೆ’’ ಎನ್ನುವಂತೆ ಶತಶತಮಾನಗಳ ಹಿಂದೆಯೇ ಭಾರತದ ಎದೆಗೆ ಬುದ್ಧ- ಬಸವ ಹಾಗೂ ಬಸವಾದಿ ಶರಣ – ಶರಣೀಯರಿಂದ ಬಿದ್ದ ಪ್ರಜಾಪ್ರಭುತ್ವದ ಬೀಜ ಅಂಬೇಡ್ಕರ್ ಅವರ ಎದೆಯಲ್ಲಿ ಉಜ್ವಲವಾಗಿ ಮೊಳಕೆ ಒಡೆದು, ಅವರು ಎದೆಗೆ ಬಿದ್ದ ವಾಸ್ತವದ ಅಕ್ಷರವಾಗಿ ಭಾರತದ ಸಂವಿಧಾನದ ಒಂದೊಂದು ಅಕ್ಷರಗಳು ಸಹ ಹೊರಮೋಡಿರುವುದು ನಮ್ಮ ನಡುವಿನ ಸತ್ಯ.
ಏಕೆಂದರೆ ನಮ್ಮ ಸಂವಿಧಾನದಲ್ಲಿ ಭಾರತ ಇದೆ – ಭಾರತೀಯತೆ ಇದೆ – ಭಾರತೀಯರು ಇದ್ದಾರೆ. 135 ಕೋಟಿಗೂ ಹೆಚ್ಚು ಜನರ ಸಾಂಸ್ಕೃತಿಕ ಹಿನ್ನೆಲೆಯ ತಮ್ಮತನವನ್ನು ಅನಾವರಣಗೊಳಿಸುವ ಭಾವನೆಗಳಿವೆ. ಶತಶತಮಾನಗಳಿಂದ ಒಂದೇ ವರ್ಗ ಮಾತನಾಡುತ್ತಿದ್ದ ಸಂದರ್ಭದಲ್ಲಿ ಇಂದು ಬಹುಜನರು ತಮ್ಮ ಬಹು ಬೇಡಿಕೆಗಳನ್ನು ಸಂವಿಧಾನಾತ್ಮಕವಾಗಿ ಈಡೇರಿಸಿಕೊಳ್ಳಲು ಎತ್ತೇಚ್ಚವಾಗಿ ಮಾತನಾಡುತ್ತಿದ್ದಾರೆ. ಶತಮಾನಗಳಿಂದ ಈ ಜನ ಮತ್ತು ಜನರ ಭಾವನೆಗಳಿಗೆ ಸ್ಪಂದಿಸದೆ ಇವರನ್ನು ಕಿಂಚಿತ್ತು ಮಾತನಾಡಿಸದೆ ಇದ್ದ ಸಾಂಪ್ರದಾಯಿಕ ಧಾರ್ಮಿಕ ಹಾಗೂ ಜಾತಿ ಹಿನ್ನೆಲೆಯ ಮನುಷ್ಯ ಮನುಷ್ಯರನ್ನೇ ಹೊಡೆದಾಡುವ ವರ್ಗದವರಿಗೆ ಈ ಮಾತನಾಡಿಸುವ ಸಂವಿಧಾನ ಅಪಾಥ್ಯವಾಗಿ ಕಂಡಿರುವುದು ಸಹಜ.
ಸಾವಿರಾರು ವರ್ಷಗಳಿಂದ ಬಹುದೊಡ್ಡ ಜನವರ್ಗದ ಮಾನವ ಹಕ್ಕುಗಳ ಉಲ್ಲಂಘನೆ ಮಾಡುವುದೇ ಇವರ ಆದ್ಯ ಕರ್ತವ್ಯವಾಗಿದ್ದುದ್ದು, ಇಂತಹ ಮಾನವ ಹಕ್ಕುಗಳ ಉಲ್ಲಂಘನೆಯಿಂದಲೇ ತಮ್ಮ ಸ್ವಾರ್ಥಪರ ಏಕಮುಖವಾದ ಹಕ್ಕುಗಳನ್ನು ಪಡೆದುಕೊಂಡದ್ದು, ತೀರ್ಥದ ರೂಪದಲ್ಲಿ ಭಾರತದ ಚರಿತ್ರೆಯಲ್ಲಿ ದಾಖಲಾಗಿರುವುದೇ ಆಗಿದೆ. ಆದರೆ ಮೇಲೆ ಉಲ್ಲೇಖಿಸಿದ ಸಂಪೂರ್ಣ ಮಾನವ ಹಕ್ಕುಗಳಿಂದ ಉಲ್ಲಂಘನೆಯಾದವರ ಚರಿತ್ರೆಯನ್ನು ದಾಖಲಿಸದೆ ಗೌಣಗೊಳಿಸಲಾಯಿತು. ಇವರು ಚರಿತ್ರೆಗೆ ಅನರ್ರರು ಎಂದು ಸಹ ಪರಿಗಣಿಸಲಾಯಿತು. ಇಂತಹ ಜನರು ಲೌಕಿಕವಾಗಿ ಹರ್ಯರಾದರು ಸಹ – ಅಲೌಕಿಕ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಗೌಣ ಗೊಳಿಸಲಾಗಿತ್ತು… ವಸ್ತುನಿಷ್ಠವಾಗಿ ಮಾತನಾಡುವ ಈ ದೇವರಿನ ಹಿನ್ನೆಲೆಯ ಲೌಕಿಕ ಚರಿತ್ರೆಯನ್ನು ಇಂದು ನಮ್ಮೆಲ್ಲರ ಮುಂದೆ ವಸ್ತುನಿಷ್ಠವಾಗಿ ಬರೆಯಲು ಅನುವು ಮಾಡಿಕೊಟ್ಟಿದ್ದೆ ಭಾರತದ ಸಂವಿಧಾನ.
ಸ್ವತಂತ್ರ ಭಾರತಕ್ಕೆ ಇಂದಿಗೆ 75 ವರ್ಷಗಳ ಹರೆಯ, ಸಂವಿಧಾನಬದ್ಧ ಆಳ್ವಿಕೆಯ ಭಾರತಕ್ಕೆ 73 ವರ್ಷಗಳ ಪ್ರಾಯ. ಈ ಹರೆಯ ಮತ್ತು ಪ್ರಾಯಗಳ ನಡುವಿನ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಪಡೆಯಲು ಹಂಬಲಿಸುವವರ ಸ್ಥಿತಿ ಚಕ್ರವ್ಯೂಹವನ್ನು ಭೇದಿಸಲು ಒಳ ನುಗ್ಗಿ ಅಲ್ಲೇ ಕುತಂತ್ರಿಗಳು ರೂಪಿಸಿದ ಬಲೆಯಲ್ಲಿ ಸಿಲುಕಿ ಹೊರಬರಲಾಗದೆ ಹತನಾದ ಪರಾಕ್ರಮಿ ಅಭಿಮನ್ಯುವಿನ ಸ್ಥಿತಿಯಂತಾಗಿದೆ. ಅಂದರೆ 2000 ವರ್ಷಗಳಿಂದ ಮನುಷ್ಯನ ಮನ ಹಾಗೂ ಮನೆಗಳೆಲ್ಲವೂ ಸಹ ತುಂಬಿರುವ ದೇವರು-ಧರ್ಮ – ಧರ್ಮದೊಳಗಿನ ಅಂಧಕಾರ – ಏಕಮುಖ ಚಿಂತನೆಯ ಬಿಡಿಸಲಾಗದ ಚಕ್ರವ್ಯೂಹದಲ್ಲಿ ಸಮಾನತೆಯನ್ನೇ ಪ್ರತಿಪಾದನೆ ಮಾಡಲು ಹುಟ್ಟಿರುವ ನಮ್ಮ ಸಂವಿಧಾನ ಸಿಲುಕಿದೆ. ಪರಾಕ್ರಮಿ, ತಾಯಿಯ ಗರ್ಭದಲ್ಲಿ ಇದ್ದಾಗಲೇ ಚಕ್ರವ್ಯೂಹದೊಳಗೆ ಹೋಗುವ ಹರಿವನ್ನು ಪಡೆದಿದ್ದ ಅಭಿಮನ್ಯು ಹೇಗೆ ಪರಾಕ್ರಮಿಂದ ಚಕ್ರವ್ಯೂಹವನ್ನು ಭೇದಿಸಲು ಒಳಹೋದನು…. ಆದರೆ ಹೊರಬರುವುದು ತಿಳಿಯದೆ ಆತನಾದನು ಎಂಬುದು ಪುರಾಣ… ಈ ಪುರಾಣದ ಕಥೆ ಇಂದು ವಾಸ್ತವ ಎಡೆಗೆ ಮುಖಮಾಡಿದೆ. ದಲಿತ ರಾಜಕಾರಣಿಗಳು -ದಲಿತ ಸಂಘಟಕರು- ದಲಿತ ಸಾಹಿತಿಗಳು- ದಲಿತ ಚಿಂತಕರು- ಅತ್ಯಂತ ಹೆಚ್ಚಿನ ಭರವಸೆ, ಪರಾಕ್ರಮ ಹಾಗೂ ಉತ್ಸಾಹದಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಚಕ್ರವ್ಯೂಹವನ್ನು ಬೇಯಿಸುವ ನಿಟ್ಟಿನಲ್ಲಿಒಳಗೆ ಹೋಗುವುದನ್ನು ಮಾತ್ರ ಕಲಿತರು , ಆದರೆ ಅವರು ಯಾರ ಪರವಾಗಿ ಸಂವಿಧಾನವನ್ನು ಬರೆದರೂ ಅದನ್ನು ಅರ್ಥ ಮಾಡಿಕೊಳ್ಳದೆ ಪಾರಂಪರಿಕವಾಗಿ ರೂಪಿತವಾಗಿರುವ ಆ ಚಕ್ರವ್ಯೂಹವನ್ನು ಭೇದಿಸಿ ಹೊರಬರುವ ತಂತ್ರಗಾರಿಕೆಯಲ್ಲಿ ಅವರು ಸಂಪೂರ್ಣವಾಗಿ ಸೋತಿರುವುದು ನಮ್ಮ ನಡುವಿನ ಬಹುದೊಡ್ಡ ದುರಂತ ಹಾಗೂ ವಾಸ್ತವ.
ಆದಂತೆ ಇಂದಿನ ಸಾಂಸ್ಕೃತಿಕ ವಾಗಿ ಅಸಮಾನತೆಯನ್ನೇ ಎತ್ತಿ ಹಿಡಿಯುತ್ತಿರುವ ಚಕ್ರವ್ಯೂಹದಲ್ಲಿ ಸಮಾನತೆಯನ್ನು ಪ್ರತಿಪಾದನೆ ಮಾಡಿದ ಹಾಗೂ ಪ್ರತಿಯೊಬ್ಬ ಪ್ರಜೆಯು ಸ್ವಾಭಿಮಾನಗಳಾಗಿ – ಸದೃಢತೆಯಿಂದ ಬದುಕಿ ರಾಷ್ಟ್ರವನ್ನು ಗಟ್ಟಿತನದಿಂದ ಕಟ್ಟಲು ರಾಷ್ಟ್ರೀಯ ಹೆದ್ದಾರಿಯನ್ನೇ ರೂಪಿಸಿರುವ ಲಿಖಿತ ಸಂವಿಧಾನವು ಸಿಲುಕುತಿದೆ ಎಂಬುದು ನನ್ನ ಅಭಿಪ್ರಾಯ.
ಆದರೆ ಒಳಗೂ ಹೋಗಲಾರದೆ ಅಥವಾ ಒಳಹೋದರು ಹೊರಬರಲಾಗದೆ ಅಂಧಕಾರದ ಪಾರಂಪರಿಕ ಧಾರ್ಮಿಕ ಹಾಗೂ ಸಾಮಾಜಿಕ ಸಂಕೋಲೆಗೆ ಸಿಲುಕಿಕೊಂಡು, ಮಾತು ಬಂದರೂ ಮೂಕರನ್ನಾಗಿಸುತ್ತಿರುವುದು ಇಂದಿನ ವಾಸ್ತವವೇ ಆಗಿದೆ. ಇದಕ್ಕೆ ಮೂಲ ಕಾರಣ ಮಾತನಾಡಬಾರದವರು ಎತ್ತೇಚ್ಚವಾಗಿ ಮಾತನಾಡುತ್ತಿರುವುದು, ಮಾತನಾಡಬೇಕಾದವರು ಮೌನವಾಗಿರುವುದು ಬಹು ಮುಖ್ಯ ಕಾರಣವಾಗಿದೆ.
ಜೈ ಭೀಮ್ – ಜೈ ಭಾರತ್
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ