ಆಜ್‌ತಕ್ ಟಿವಿಯಲ್ಲಿ ಗೋಡ್ಸೆಯ ‘ದೇಶಭಕ್ತಿ’ ಬಗ್ಗೆ ಮತ್ತೆ ಪ್ರತಿಪಾದಿಸಿದ ಶಂಕಿತ ಭಯೋತ್ಪಾದಕಿ ಪ್ರಜ್ಞಾ ಠಾಕೂರ್!

ಭೋಪಾಲ್: ಮಹಾತ್ಮಾ ಗಾಂಧಿಯ ಕೊಲೆಗಾರ ನಾಥೂರಾಮ್ ಗೋಡ್ಸೆಯನ್ನು ಹೊಗಳಿದ ತನ್ನ ಹೇಳಿಕೆಗಳಿಗೆ ಸಂಸತ್ತಿನಲ್ಲಿ ಕ್ಷಮೆಯಾಚಿಸಿದ ಮೂರು ವರ್ಷಗಳ ನಂತರ, ಬಿಜೆಪಿ ಸಂಸದೆ, ಶಂಕಿತ ಭಯೋತ್ಪಾದಕಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೊಮ್ಮೆ ಇತ್ತೀಚೆಗೆ ಆಜ್‌ತಕ್ ಟಿವಿ ಕಾರ್ಯಕ್ರಮದ ಸಂದರ್ಭದಲ್ಲಿ ಗೂಡ್ಸೆಯನ್ನು ದೇಶಭಕ್ತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ.

2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಭೋಪಾಲ್ ಸಂಸದರಾಗಿರುವ ಪ್ರಜ್ಞಾ ಠಾಕೂರ್, ಆಜ್‌ತಕ್ ಆ್ಯಂಕರ್ ಶ್ವೇತಾ ಸಿಂಗ್‌ ಜೊತೆಗೆ ಮಾತನಾಡುತ್ತಾ ಗೂಡ್ಸೆಯನ್ನು ಸಮರ್ಥಿಸಲು ಪ್ರಯತ್ನಿಸಿದ್ದಾರೆ. ಆ್ಯಂಕರ್ ಶ್ವೇತಾ ಸಿಂಗ್ ಅವರು ಹೊಸದಾಗಿ ಬಿಡುಗಡೆಯಾಗಿದ್ದ 2000ರೂ ನೋಟಿನಲ್ಲಿ ಜಿಪಿಎಸ್ ನ್ಯಾನೊತಂತ್ರಜ್ಞಾನ ಇದೆ ಎಂದು ಹೇಳಿ ದೇಶದಾದ್ಯಂತ ವ್ಯಂಗಕ್ಕೀಡಾಗಿದ್ದರು.

ಇದನ್ನೂ ಓದಿ: ಸಂವಿಧಾನದ ಹೊಸ ಪ್ರತಿಗಳ ಪೀಠಿಕೆಯಿಂದ ‘ಸಮಾಜವಾದಿ, ಜಾತ್ಯತೀತ’ ಪದ ಕೈಬಿಟ್ಟ ಸರ್ಕಾರ: ಅಧೀರ್ ರಂಜನ್ ಚೌಧರಿ ಆರೋಪ

ಆ್ಯಂಕರ್ ಶ್ವೇತಾ ಸಿಂಗ್ ಜೊತೆಗೆ ಮಾತನಾಡಿದ ಶಂಕಿತ ಭಯೋತ್ಪಾದಕಿ, “ಗೂಡ್ಸೆ ಹಿಂದೂ ಭಯೋತ್ಪಾದಕನಾಗಿದ್ದರೆ, ಗಾಂಧಿಯನ್ನು ಏಕೆ ಕೊಲ್ಲುತ್ತಾನೆ. ಇದು ಸಿದ್ಧಾಂತದ ಬಗ್ಗೆಗಿನ ವಿಚಾರ ಮಾತ್ರವಾಗಿದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಹೇಳಿದ್ದಾರೆ.

ಸುಮಾರು ಐದು ವರ್ಷಗಳ ಕಾಲ ಸಂಸದರಾಗಿ ಮಾಡಿದ ಸಾಧನೆಗಳ ಬಗ್ಗೆ ಶ್ವೇತಾ ಸಿಂಗ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಜ್ಞಾ ಠಾಕೂರ್ ಹಿಂದುತ್ವದ ವಿಷಯಗಳ ಬಗ್ಗೆ ಹೆಚ್ಚು ಮಾತನಾಡಿ, ಅಭಿವೃದ್ಧಿ ವಿಚಾರಗಳ ಬಗ್ಗೆ ಕಡಿಮೆ ಉಲ್ಲೇಖಿಸಿದ್ದಾರೆ. ವೇದಿಕೆಯಲ್ಲಿ ಅವರು ಉತ್ತರ ನೀಡುತ್ತಿರುವಾಗ ಆಂಕರ್‌ ಯಾವುದೆ ಅಡ್ಡಪ್ರಶ್ನೆ ಕೇಳಿಲ್ಲ. ಈ ವೇಳೆ ಶಂಕಿತ ಭಯೋತ್ಪಾದಕಿ “ಜಿಹಾದ್”ನ ವಿಧಗಳ ಬಗ್ಗೆ, “ಸನಾತನ ಧರ್ಮ”ದ ಶ್ರೇಷ್ಠತೆಯ ಬಗ್ಗೆ ಹೇಳಿದ್ದಾರೆ.

ಆಂಕರ್ ಜೊತೆಗಿನ ಸಂಭಾಷಣೆಯಲ್ಲಿ, ಗೂಡ್ಸೆ ವಿಚಾರವಾಗಿ ತನ್ನ ಹೇಳಿಕೆಗಳು ಸಣ್ಣ ಸಮಸ್ಯೆ ಎಂದು ಪ್ರಜ್ಞಾ ಉಲ್ಲೇಖಿಸಿದ್ದಾರೆ. “ಈ ಸಮಸ್ಯೆಗಳು ವಿಶ್ವದ ಮುಂದೆ ದೇಶದ ಸ್ಥಾನವನ್ನು ಉನ್ನತೀಕರಿಸಲು ಪ್ರಯತ್ನಿಸುತ್ತಿರುವ ‘ಪೂಜ್ಯ ಪ್ರಧಾನ ಮಂತ್ರಿಗಳು’ ಕೈಗೊಂಡ ಪ್ರಯತ್ನಗಳಿಗೆ ಹೋಲಿಸಿದರೆ ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜಿ20 ಕಾರ್ಯಕ್ರಮದ ವೇಳೆ ‘ರಘುಪತಿ ರಾಘವ ರಾಜಾ ರಾಮ್’ ಭಜನೆಯಿಂದ ‘ಅಲ್ಲಾಹ್’ ಪದ ಮೋದಿ ತೆಗೆದುಹಾಕಿದರೆ?

2019 ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ ರೋಡ್ ಶೋ ವೇಳೆ ಪ್ರಜ್ಞಾ ಠಾಕೂರ್ ಅವರು, “ನಾಥೂರಾಂ ಗೋಡ್ಸೆ ಅವರು ದೇಶಭಕ್ತ ಆಗಿದ್ದರು, ಆಗಿದ್ದಾರೆ ಹಾಗೂ ಆಗಿರುತ್ತಾರೆ. ಅವರನ್ನು ಭಯೋತ್ಪಾದಕ ಎನ್ನುವವರು ತಮ್ಮನ್ನು ತಾವು ನೋಡಿಕೊಳ್ಳಬೇಕು. ಅವರಿಗೆ ಈ ಚುನಾವಣೆಯಲ್ಲಿ ಉತ್ತರ ಸಿಗುತ್ತದೆ” ಎಂದು ಹೇಳಿದ್ದರು.

ಪಜ್ಞಾ ಠಾಕೂರ್‌ ಹಲವಾರು ಬಾರಿ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ. 2021 ರಲ್ಲಿ, ಗೋಡ್ಸೆ ದೇಶದ ಮೊದಲ ಭಯೋತ್ಪಾದಕ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಪ್ರಜ್ಞಾ, “ಗೂಡ್ಸೆ ದೇಶಭಕ್ತ” ಎಂದು ಹೇಳಿದ್ದರು.

ವಿಡಿಯೊ ನೋಡಿ: ಬಹುಮನಿ ಸುಲ್ತಾನರ ಕಾಲದ ಸುರಂಗ ಬಾವಿ (ವಾಟರ್ ಕರೇಜ್‌) ಬೀದರ್ನಲ್ಲಿದೆ ಅಚ್ಚರಿಯ ಇತಿಹಾಸ Janashakthi Media

Donate Janashakthi Media

Leave a Reply

Your email address will not be published. Required fields are marked *