ಪ್ರಧಾನಿಗಳು ಸ್ಥಾನದ ಘನತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ

ಕರ್ನಾಟಕಕ್ಕೆ ಸತತವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರವರು ಭೇಟಿ ನೀಡುತ್ತಿರುವುದನ್ನು ಪ್ರಶ್ನಿಸಲಾಗುತ್ತಿದೆ. ಹಿಂದೆ ಅತೀವೃಷ್ಟಿಯಿಂದ ಜನ, ಜಾನುವಾರು, ಆಸ್ತಿಪಾಸ್ತಿ ಹಾಳಾಗಿ ರೋಧಿಸುತ್ತಿರುವಾಗ ಕತ್ತು ಹೊರಳಿಸದ ಡಬಲ್ ಎಂಜಿನ್ ಗಳು ಈಗ ಗ್ರಹಗಳಂತೆ ರಾಜ್ಯವನ್ನು ಸುತ್ತುತ್ತಿರುವುದ್ಯಾಕೆ? ದಿನವೂ ಹತ್ತಾರು ಅಭಿವೃದ್ದಿ ಯೋಜನೆಗಳ ಉದ್ಘಾಟನೆ, ಸಾವಿರಾರು ಕೋಟಿ ಹಣದ ಕೊಡುಗೆಗಳ ಬಗ್ಗೆ ಮಾತನಾಡುವವರು ಹಿಂದೆ ಆದ ಹಾನಿಯ ಪರಿಹಾರಕ್ಕೆ ಇಲ್ಲಿಯವರೆಗೂ ಕವಡೆ ಕಾಸೂ ನೀಡದಿರೋದು ಯಾಕೆ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಪೂರ್ಣಗೊಳ್ಳದ ರಸ್ತೆಯನ್ನು ಉದ್ಘಾಟಿಸಿದ ಮೋದಿಯವರು ಉದ್ಘಾಟಿಸಿದ್ದು ರಸ್ತೆಯನ್ನೋ ಅಥವಾ ಟೋಲ್ ಸುಲಿಗೆಯ ಕೇಂದ್ರವನ್ನೋ ಎಂಬ ಪ್ರಶ್ನೆಯಲ್ಲಿ ವಾಸ್ತವ ಇಲ್ಲದಿಲ್ಲ. ಇದು ಸರಕಾರಿ ಕಾರ್ಯಕ್ರಮವಾದರೂ ಅದು ಪೂರ್ಣ ಆಳುವ ಬಿಜೆಪಿಯ, ಸಂಘಪರಿವಾರದ ಕಾರ್ಯಕ್ರಮವನ್ನಾಗಿಸಿದ್ದು ಸಹ ಟೀಕೆಗೆ ಒಳಗಾಗಿದೆ. ಇಲ್ಲೆಲ್ಲಾ ವಿರೋಧ ಪಕ್ಷಗಳನ್ನು, ಅದರ ಜನ ಪ್ರತಿನಿಧಿಗಳನ್ನು ಪ್ರಜ್ಞಾಪೂರ್ವಕವಾಗಿಯೇ ದೂರ ಇರಿಸಿದ ರಾಜಕಾರಣ ಅರ್ಥವಾಗುವಂತಹುದೇ. ಇಂತಹ ಸಮಾರಂಭಗಳನ್ನು ವ್ಯವಸ್ಥೆಗೊಳಿಸಲು ಅವರಿಗೆ ಬೇಕಾದಂತೆ ಖರ್ಚು ಮಾಡಿದ್ದು ಸರಕಾರದ ಬೊಕ್ಕಸದಿಂದಲೇ. ಅಂದರೆ ಅಧಿಕಾರದಲ್ಲಿ ಇದ್ದ ಮಾತ್ರಕ್ಕೆ ಸಾರ್ವಜನಿಕರ ಹಣವನ್ನು ಪಕ್ಷದ, ಚುನಾವಣಾ ಉದ್ದೇಶಗಳಿಗೆ ಬಳಸಬಹುದೇ? ಹೀಗೆ ಬಿಜೆಪಿ ತನ್ನ ಅಧಿಕಾರವನ್ನು, ಇಡೀ ಆಡಳಿತ ಯಂತ್ರ ಮತ್ತು ಸಂಪನ್ಮೂಲಗಳನ್ನು ಮುಂಬರುವ ಚುನಾವಣಾ ಲಾಭಕ್ಕಾಗಿ ದುರುಪಯೋಗ ಮಾಡಿರುವುದು ನಿಚ್ಚಳ.

ಮಂಡ್ಯ ಮತ್ತು ಧಾರವಾಡದಲ್ಲಿ ಮೂಲಸೌಕರ್ಯಗಳ ಅಭಿವೃದ್ದಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಯೊಂದರ ಕ್ಷೇತ್ರದಲ್ಲಿ ನಿಂತಾಗಲೂ ಪ್ರಧಾನಿಗಳು ಕೇವಲ ವಿರೋಧ ಪಕ್ಷಗಳನ್ನು ಟೀಕಿಸಲು ಸಂದರ್ಭ ಬಳಸಿದ್ದು ಸರಿಯಲ್ಲ. ಮೇಲಾಗಿ, ಪ್ರಧಾನಿಗಳ ಮಾತುಗಳೂ ಸಹ ಆ ಉನ್ನತ ಹುದ್ದೆಗೆ, ಸಮಾರಂಭ, ಸಂದರ್ಭಕ್ಕೆ ಅನುಗುಣವಾಗಿ ಇರಲಿಲ್ಲ ಎನ್ನುವುದೂ ವಿಷಾದನೀಯ. ಬದಲಾಗಿ, ಮಾತುಗಳು ದೇಶವನ್ನು ಪ್ರತಿನಿಧಿಸಿದ ಮುತ್ಸದ್ದಿ ರಾಜಕಾರಣಿಗಿಂತ ಕೇವಲ ಚುನಾವಣಾ ಮತ ಗಳಿಕೆಯ ತಂತ್ರಕ್ಕೆ ಅನುಗುಣವಾಗಿತ್ತು. ಇದರೊಟ್ಟಿಗೆ ಮಂಡ್ಯದಲ್ಲಿ ಪ್ರಧಾನ ಮಂತ್ರಿಗಳು ಇತ್ತೀಚೆಗೆ ಬಿಜೆಪಿ ಪಕ್ಷ ಸೇರಿಕೊಂಡ ರೌಡಿ ಶೀಟರ್ ವ್ಯಕ್ತಿಯೊಂದಿಗಿನ ಭೇಟಿ ಖಂಡಿತಕ್ಕೂ ಒಂದು ಕಪ್ಪು ಚುಕ್ಕೆ. ಪ್ರಧಾನಮಂತ್ರಿಯಂತಹ ಗಣ್ಯರನ್ನು ಭೇಟಿ ಮಾಡಲು ಅದಕ್ಕೆ ತನ್ನದೇ ಆದ ಶಿಷ್ಟಾಚಾರಗಳು, ಬಿಗಿ ಭದ್ರತಾ ಕ್ರಮಗಳೂ ಇರುತ್ತವೆ. ಅವೆಲ್ಲವನ್ನು ಮೀರಿ ಪ್ರಧಾನಿಗಳಿಗೆ ಆತನನ್ನು ಭೇಟಿ ಮಾಡಿಸಿದ್ದು ಮತ್ತು ಅವರು ರೌಡಿ ಒಬ್ಬನಿಗೆ ಕೈ ಮುಗಿದಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಇಂತಹದೊಂದು ಹೇಗೆ ಸಂಭವಿಸಿತು? ಇದಕ್ಕೆ ಪ್ರಧಾನಿಗಳು ಅಥವಾ ಪ್ರಧಾನಮಂತ್ರಿಯವರ ಕಚೇರಿ ಅನುಮತಿಸಿದ್ದು ಹೇಗೆ? ಅಷ್ಟೊಂದು ಶಿಷ್ಟಾಚಾರ, ಬಿಗಿ ಭದ್ರತೆಯ ನಡುವಿನಲ್ಲಿ ಇಂಥವರೊಬ್ಬರನ್ನು ಭೇಟಿ ಮಾಡಿಸಲು ಸಾಧ್ಯವಾಗಿದ್ದಕ್ಕೆ ಅದರ ಉನ್ನತ ಮಟ್ಟದ ನಾಯಕರ ಪಾಲು ಇರುವುದು ನಿಶ್ಚಿತ. ಈ ಬಗ್ಗೆ ಸೂಕ್ತವಾದ ತನಿಖೆ ನಡೆಸುವುದು ಅಗತ್ಯ ಎನ್ನುವ ಮಾತುಗಳಿಗೆ ಅರ್ಥವಿದೆ. ಈಗಾಗಲೇ ಕರ್ನಾಟಕದ ಸರ್ಕಾರ ಸಾವಿರಾರು ರೌಡಿಶೀಟರ್ ಗಳ ಮೇಲಿನ ಮೊಕದ್ದಮೆಗಳನ್ನು ಹಿಂತೆಗೆದುಕೊಂಡಿರುವುದು ಮತ್ತು ಅದರಲ್ಲಿ ಕೆಲವು ಪ್ರಮುಖರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿರುವುದು ತೀವ್ರವಾದ ಟೀಕೆ, ವಿರೋಧಕ್ಕೆ ಕಾರಣವಾಗಿದೆ. ಸದಾವಕಾಲ ನೈತಿಕತೆ, ಸಂಸ್ಕೃತಿಯ ಬಗೆಗೆ ಸಾರ್ವಜನಿಕ ಬೋಧನೆ ಮಾಡುವ ಬಿಜೆಪಿ ಮತ್ತು ಸಂಘ ಪರಿವಾರದವರು ತಾವು ಮಾಡಿದ ಈ ಕೃತ್ಯಗಳನ್ನು ಅದೇಗೆ ಸಮರ್ಥಿಸಿಕೊಳ್ಳುತ್ತಾರೆ. ಸಂಘ ಪರಿವಾರದ ಸೇವೆ ಮಾಡಲು ತೊಡಗಿದ ಕೂಡಲೇ ಪಾಪಿಗಳು ಪವಿತ್ರಾತ್ಮರಾಗುತ್ತಾರೆಯೇ?

ಇದನ್ನು ಓದಿ: ಮಂಡ್ಯ ರೋಡ್‌ ʼಶೋʼಕಿ ಆಯ್ತು, ಇದೀಗ ಮೆಟ್ರೊ ʼಶೋʼ ಗೆ ಮೋದಿ ಸಿದ್ದತೆ!

ರೂಢೀಗತ ರಾಜಕೀಯ ಸಂಸ್ಕೃತಿ ಮತ್ತು ಅಸ್ತಿತ್ವದಲ್ಲಿರುವ ನೀತಿ ನಿಯಮಗಳನ್ನು ಗಾಳಿಗೆ ತೂರುವುದರಲ್ಲಿ ಬಿಜೆಪಿ ಸದಾ ಮುಂದಿದೆ. ಒಂದೊಂದು ಹೊಸ ಕೆಟ್ಟ ಸಂಪ್ರದಾಯಗಳನ್ನು ಹಾಕುತ್ತಿದೆ. ಅಂತಹ ನಿರ್ಧಾರಗಳನ್ನು ಮೇಲಿಂದ ಮೇಲೆ ಕೈಗೊಳ್ಳುತ್ತಲೇ ಬರುತ್ತಿದೆ. ಜನಾದೇಶಕ್ಕೆ ವಿರುದ್ಧವಾದ ಪಕ್ಷಾಂತರದ ಅನೈತಿಕ ರಾಜಕಾರಣದ ಒಂದು ಕೆಟ್ಟ ಮಾದರಿಯಾದ ʻಆಪರೇಷನ್ ಕಮಲʼ ಎನ್ನುವುದನ್ನು ಇದೇ ಬಿಜೆಪಿ ಕರ್ನಾಟಕದಲ್ಲಿ ಲಜ್ಜೆಗೆಟ್ಟು ಜಾರಿಗೆ ತಂತು. ಅದು ರಾಜಕಾರಣದಲ್ಲಿ ಒಂದು ಒಪ್ಪಿತ ಹಾಗೂ ರಾಜಕೀಯ ಚಾಣಾಕ್ಷತನದ ಮೌಲ್ಯ ಎನ್ನುವಂತೆಯೇ ಮಾಡಲಾಯಿತು. ಈಗ ಸರಕಾರದ ಯೋಜನೆಗಳ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಬಿಜೆಪಿ ಪಕ್ಷಕ್ಕೆ ಮತ ಹಾಕುವಂತೆ ʻದಭಾಯಿಸುವʼ ಕ್ರಮವನ್ನು ಸರಕಾರದ ಹಣ ಮತ್ತು ಆಡಳಿತಾತ್ಮಕ ವ್ಯವಸ್ಥೆಯಿಂದಲೇ ಸಂಘಟಿಸುವ ಕೆಟ್ಟ ಮಾದರಿಯನ್ನು ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಬಿಜೆಪಿ ಆರಂಭಿಸಿತು. ಈಗ ಅದನ್ನು ರಾಜ್ಯದ ಎಲ್ಲಾ ಕಡೆಗಳಲ್ಲೂ ವಿಸ್ತರಿಸಲಾಗುತ್ತಿದೆ. ಮೋದಿಯವರನ್ನು ಸ್ವಾಗತಿಸಲು ಎಂದೂ ಇಲ್ಲದ ಉರೀಗೌಡ, ನಂಜೇಗೌಡ ಎನ್ನುವರ ಹೆಸರಿನಲ್ಲಿ ದ್ವಾರಗಳನ್ನು ಜಿಲ್ಲಾಡಳಿತದ ಮೂಲಕವೇ ಹಾಕಿಸಲಾದದ್ದು ದೊಡ್ಡ ಪ್ರಮಾದ. ತಡವಾಗಿಯಾದರೂ ಆಡಳಿತ ಜನಾಕ್ರೋಶವನ್ನು ಸರಿಯಾಗಿ ಅರ್ಥ ಮಾಡಿಕೊಂಡಿತು ಎನ್ನುವುದು ಬೇರೆ ವಿಷಯ. ಆದರೆ ಇದರ ಹಿಂದೆ ಸಂಘಪರಿವಾರದ ಕೈವಾಡ, ಒತ್ತಡ ಇರುವುದು ಖಚಿತ. ರಾಜ್ಯಾದ್ಯಂತ ಬಿಜೆಪಿ ಪಕ್ಷದ ರಾಜಕೀಯ ದುರ್ಲಾಭಕ್ಕೆ ಸಾರ್ವಜನಿಕರ ಹಣ, ಸಮಯ, ಆಡಳಿತದ ಸಾಮರ್ಥ್ಯಗಳನ್ನು ಎಗ್ಗಿಲ್ಲದೆ ವ್ಯರ್ಥ ಮಾಡಲಾಗುತ್ತಿದೆ. ಅದನ್ನೇ ಈಗ ಚುನಾವಣಾ ಪೂರ್ವದಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಅನುಸರಿಸಲಾಗುತ್ತಿದೆ. ಇಂಥಹ ಚುನಾವಣಾ ʻಮೇಳʼಗಳಿಗೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಂತವರು ಪದೇಪದೇ ಭಾಗಿಯಾಗುವುದು ಸಮಂಜಸವಲ್ಲ, ಶೋಭೆ ತರುವುದೂ ಇಲ್ಲ. ಅವರ ಪಕ್ಷ ಅಂತವುಗಳನ್ನು ಸಂಘಟಿಸಿದಲ್ಲಿ ಪಕ್ಷದ ನಾಯಕರಾಗಿ ಅವರು ಭಾಗವಹಿಸಲು ಅಭ್ಯಂತರವೇನು ಇರುವುದಿಲ್ಲ. ಆದರೂ ಅದಕ್ಕೊಂದು ಮಿತಿ ಮತ್ತು ಸ್ಥಾನದ ಘನತೆ, ಗಂಭೀರತೆಗಳು ಇರುತ್ತವೆ ಎನ್ನುವುದನ್ನು ಮರೆಯಬಾರದು. ಪ್ರಧಾನಿ ಹುದ್ದೆಯ ಘನತೆಯನ್ನು ರಾಜಕೀಯ ಲಾಭಕ್ಕೆ ಒಡ್ಡಬಾರದು ಎನ್ನುವ ವಿವೇಕವೂ ಇರಬೇಕಾಗುತ್ತದೆ. ಆದ್ದರಿಂದ ಭಾರತದ ಪ್ರಧಾನಿಗಳು ಕನಿಷ್ಠ ಆ ಸ್ಥಾನದ ಹುದ್ದೆ, ಘನತೆ ಗೌರವಗಳನ್ನು ಕಾಪಾಡುವುದರತ್ತ ಗಮನಹರಿಸಿ ತಿದ್ದಿಕೊಳ್ಳುವುದು ಅತಿ ಅಗತ್ಯ.

ಇದನ್ನು ಓದಿ: ಬೆಂಗಳೂರು-ಮೈಸೂರು ರಸ್ತೆ ಉದ್ಘಾಟನೆ; ಬಿಜೆಪಿ ಮತ್ತು ಹಿಂದುತ್ವವಾದಿ ಸಂಘಟನೆಯ ಕಾರ್ಯಕ್ರಮವೇ?

ತನ್ನ ಜನ ವಿರೋಧಿ ಮತ್ತು ಜನದ್ರೋಹದ ನೀತಿ ಕಾರ್ಯ ವಿಧಾನಗಳಿಂದಾಗಿ ಸೋಲುವ ಭೀತಿಯಲ್ಲಿರುವ ಬಿಜೆಪಿ ಪಕ್ಷ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವಂತೆ ಮಾಡುವುದು ಉನ್ನತ ನಾಯಕರ ಹೊಣೆಗಾರಿಕೆ. ಅದರ ಬದಲು ಅವೆಲ್ಲವನ್ನು ಸಮರ್ಥಿಸುವಂತೆ ಮತ್ತು ಜನತೆಯನ್ನ ಹಾದಿ ತಪ್ಪಿಸುವಂತಹ ಕಾರ್ಯದಲ್ಲಿ ಪ್ರಧಾನಿಗಳು ತೊಡಗುವುದು ಖಂಡಿತಕ್ಕೂ ಜಗತ್ತಿನ ಕಣ್ಣಲ್ಲಿ ಹಗುರವಾಗುವಂತೆ ಮಾಡುತ್ತದೆ ಎನ್ನುವುದು ಗಮನದಲ್ಲಿರಬೇಕು. ಆದರೆ ಇಲ್ಲಿ ಹಾದಿ ತಪ್ಪಿರುವುದು ಕೇವಲ ರಾಜ್ಯದ ನಾಯಕರು ಎನ್ನುವುದು ತಪ್ಪಾಗುತ್ತದೆ. ಸ್ವತಃ ಗೃಹ ಸಚಿವ ಅಮಿತ್ ಶಾ ರವರೆ ಪಕ್ಷದ ಪರವಾಗಿ ಕರ್ನಾಟಕದಲ್ಲಿನ ಚುನಾವಣೆಯ ಎಲ್ಲ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಯಾಕೆಂದರೆ ಇವೆಲ್ಲವೂ ಎಲ್ಲವನ್ನು ನಿಯಂತ್ರಿಸುವ ಕೇಂದ್ರದ ನಾಯಕತ್ವದ ಹೊಣೆಗಾರಿಕೆಯೇ ಇಲ್ಲಿ ಪ್ರಮುಖವಾಗಿದೆ ಎನ್ನುವ ಅಂಶವನ್ನು ಮರೆಯುವಂತಿಲ್ಲ. ಅಂದರೆ ಸರಿ ದಾರಿಯಲ್ಲಿ ನಡೆಸಬೇಕಾದವರೇ ಹಾದಿ ತಪ್ಪಿದರೆ ಆ ಹಾದಿಯೇ ಸರಿಯಾದ ಹಾದಿ ಎಂದು ಪ್ರತಿಪಾದಿಸುವುದಾದರೆ ಇನ್ನೇನಾಗಬಹುದು?

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *