- ಕಾರ್ಪೋರೆಟ್ ಹಿತಕ್ಕಾಗಿ ಸರ್ವಾಧಿಕಾರಶಾಹಿ ನಡೆ ಸಲ್ಲದು
ದೆಹಲಿ: ಕೃಷಿ ಮಸೂದೆಗಳ ಮೇಲೆ ಮತದಾನದ ಸದಸ್ಯರ ಹಕ್ಕುಗಳನ್ನು ನಿರಾಕರಿಸಿ, ಮಸೂದೆಗಳು ದನಿಮತದಿಂದ ಪಾಸಾಗಿವೆ ಎಂದು ಘೋಷಿಸಿರುವ ರಾಜ್ಯ ಸಭೆಯ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್ ಅವರ ನಡೆಯನ್ವುನು ಅಖಿಲ ಭಾರತ ಕಿಸಾನ್ ಸಭಾ ಬಲವಾಗಿ ಖಂಡಿಸಿದೆ.
ಸಂಸತ್ತಿನ ರಾಜ್ಯಸಭಾ ಸದನದಲ್ಲಿ ಸಂಸದರ ಸಾಂವಿಧಾನಿಕ ಹಕ್ಕು ಆಗಿರುವ ಮಸೂದೆಗಳ ಮೇಲಿನ ಚರ್ಚೆಯನ್ನು ನಿರಾಕರಿಸಿ ಮಸೂದೆಗಳಿಗೆ ಅಂಗೀಕಾರ ಕೊಡಿಸಿರುವುದು ಸಂಸದೀಯ ಪ್ರಜಾಪ್ರಭುತ್ವದ ಅಂತ್ಯವಲ್ಲದೆ ಬೇರೇನೂ ಅಲ್ಲ. ಇಂತಹ ಕೈಚಳಕ ನಾಚಿಕೆಗೇಡು. ಕಾರ್ಪೋರೆಟ್ ಹಿತಗಳಿಗೆ ನೆರವಾಗಲು ಈ ತೆರನ ಸರ್ವಾಧಿಕಾರಶಾಹಿ ಮತ್ತು ಫ್ಯಾಸಿಸ್ಟ್ ಮಾದರಿ ವರ್ತನೆಗೆ ಪ್ರಜಾಪ್ರಭುತ್ವದಲ್ಲಿ ಅವಕಾಶ ನೀಡುವುದು ಸಾಧ್ಯವಿಲ್ಲ. ಪ್ರಧಾನ ಮಂತ್ರಿ ಮತ್ತು ಅವರ ಸರಕಾರ ಸಂವಿಧಾನವನ್ನು ಗೌರವಿಸಬೇಕು ಮತ್ತು ಪ್ರಜಾಸತ್ತಾತ್ಮಕವಾಗಿ ವರ್ತಿಸುವುದನ್ನು ಕಲಿಯಬೇಕು ಎಂದು ಅದು ಹೇಳಿದೆ.
ಆಳುವ ಮೈತ್ರಿಕೂಟಕ್ಕೆ ಸೇರಿದ ತೆಲಂಗಾಣ ರಾಷ್ಟ್ರಸಮಿತಿ, ಅಖಿಲ ಭಾರತ ಅಣ್ಣಾ ಡಿಎಂಕೆ ಇತ್ಯಾದಿ ಪಕ್ಷಗಳ ಸಂಸತ್ ಸದಸ್ಯರುಗಳೂ ಹಲವರು, ಈ ಮಸೂದೆಗಳ ವಿರುದ್ಧ ಬಲವಾಗಿ ಮಾತಾಡಿದರು. ಹೀಗೆ ಸರಕಾರಕ್ಕೆ ರಾಜ್ಯಸಭೆಯಲ್ಲಿ ನೈತಿಕವಾಗಿ ಬಹುಮತ ಇರಲಿಲ್ಲ. ಇದು ಮೋದಿ ಸರಕಾರದ ರೈತ-ವಿರೋಧಿ ಧೋರಣೆಗಳ ವಿರುದ್ಧ ರೈತರ ನಡುವೆ ಜಾಗೃತಿಯ ಆಧಾರದಲ್ಲಿ ರಾಜ್ಯಮಟ್ಟಗಳಲ್ಲಿ ರಾಜಕೀಯ ಪಕ್ಷಗಳ ಧ್ರುವೀಕರಣ ನಡೆಯುತ್ತಿರುವುದನ್ನು ಸೂಚಿಸುತ್ತದೆ ಎಂದು ಎಐಕೆಎಸ್ ಅಭಿಪ್ರಾಯ ಪಟ್ಟಿದೆ.
ಸಂಸದೀಯ ವ್ಯವಸ್ಥೆಯಲ್ಲಿ ಕೈಚಳಕ ನಡೆಸಿ ಅದನ್ನು ಧ್ವಂಸ ಮಾಡುವ ಆರೆಸ್ಸೆಸ್-ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರದ ಹೊಲಸು ಪಾತ್ರವನ್ನು ಬಯಲಿಗೆಳೆಯಬೇಕು ಎಂದು ಸಮಸ್ತ ರೈತಾಪಿಗಳಿಗೆ ಮತ್ತು ಜನಗಳಿಗೆ ಎಐಕೆಎಸ್ ಕರೆ ನೀಡಿದೆ. ಇದು ಕಾರ್ಪೊರೇಟ್ ಹಿತಗಳಿಗೆ ಆರೆಸ್ಸೆಸ್-ಬಿಜೆಪಿಯ ಸಂಪೂರ್ಣ ಶರಣಾಗತಿಯ ಉದಾಹರಣೆ. ಸಂಸತ್ ಸದಸ್ಯರಿಗೆ ಮತದಾನದ ಹಕ್ಕನ್ನು ನಿರಾಕರಿಸಿ ಮಸೂದೆಗಳು ಪಾಸಾದವು ಎಂದು ಪ್ರಕಟಿಸಿರುವುದು ಉತ್ತಮ ಸಂಸದೀಯ ಆಚರಣೆಗಳ ಪ್ರಕಾರ ಅಸಿಂಧು. ಸೆಪ್ಟಂಬರ್ 20 ನ್ನು ಭಾರತೀಯ ಸಂಸತ್ತಿಗೆ ಮತ್ತು ಇಡೀ ರೈತಾಪಿ ಜನಗಳಿಗೆ ಒಂದು ಕರಾಳ ದಿನ ಎಂದು ಮುಂದೆ ನೆನಪಿಸಕೊಳ್ಳಲಾಗುವುದು. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸೆಪ್ಟಂಬರ್ 25, 2020ರ ಅಖಿಲ ಭಾರತ ಪ್ರತಿಭಟನಾ ದಿನವನ್ನು ದೇಶಾದ್ಯಂತ ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಕರೆ ನೀಡಿದೆ.