ಪ್ರಭುತ್ವವನ್ನು ಜನರ ಬಳಿ ತರುವ ಕೇರಳದ “ಜನತಾ ಯೋಜನೆ”ಗೆ 25 ವರ್ಷಗಳು

ವೈಶಾಖ ಥಾಲಿಯಿಲ್, ಕೃಪೆ: ‘ಪೀಪಲ್ಸ್ ಡಿಸ್ಪ್ಯಾಚ್’

ಕೇರಳದಲ್ಲಿ ದಶಕಗಳಿಂದ ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಶಿಕ್ಷಣ, ಗ್ರಾಮೀಣ ಮೂಲಸೌಕರ್ಯ ಮತ್ತು ಸಾಮಾನ್ಯ ಯೋಗಕ್ಷೇಮದಲ್ಲಿ ಗಣನೀಯ ಸುಧಾರಣೆಗೆ ಪ್ರಮುಖ ಕಾರಣಗಳಲ್ಲಿ ಒಂದು 1996ರಲ್ಲಿ ಅಲ್ಲಿ ಆರಂಭಿಸಿದಜನತಾ ಯೋಜನೆಎಂದು ಕ್ಷೇತ್ರಗಳ ಎಲ್ಲ ಪರಿಣಿತರೂ ಒಪ್ಪುತ್ತಾರೆ. ಅಭಿವೃದ್ಧಿಗೆ ಉದಾರೀಕರಣಖಾಸಗೀಕರಣಜಾಗತೀಕರಣದ ದಾರಿಯಲ್ಲದೆ ಬೇರೇನೂ ದಾರಿಯಿಲ್ಲ ಎಂದು ನಮ್ಮ ಆಳರಸರು ಬಿಂಬಿಸುತ್ತಿದ್ದ ಸಮಯದಲ್ಲೇ, ಜನರು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಭಾಗವಹಿಸುವ ಆಧಾರದ ಮೇಲೆ ಆಮೂಲಾಗ್ರ ಪರ್ಯಾಯವನ್ನು ನೀಡುವ ಮೂಲಕ ಒಂದು ಉತ್ತಮ ಜಗತ್ತು ಸಾಧ್ಯವಿದೆ ಎಂದು ಕೇರಳಧ ಅಭಿಯಾನ ಸಾಬೀತುಪಡಿಸಿತು.

ಕೇರಳದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಈ ವರ್ಷದ ಏಪ್ರಿಲ್‌ನಲ್ಲಿ, ರಾಜ್ಯ ವಿಧಾನಸಭೆಯ 140 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಗಳಿಸಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿತು. ಈ ಗೆಲುವು ಅಧಿಕಾರದಲ್ಲಿರುವವರು ಚುನಾವಣೆಯಲ್ಲಿ ಸೋಲುವ 40 ವರ್ಷಗಳ ಟ್ರೆಂಡ್ ಅನ್ನು ಮುರಿಯಿತು. ಈ ವಿಜಯದ ಹಿಂದಿನ ಪ್ರಮುಖ ಅಂಶಗಳಲ್ಲಿ ಒಂದೆಂದರೆ, ಪ್ರವಾಹಗಳು ಮತ್ತು ಕೊವಿಡ್-19 ಸಾಂಕ್ರಾಮಿಕದಂತಹ ನೈಸರ್ಗಿಕ ವಿಕೋಪಗಳಿಗೆ ಸರ್ಕಾರ ಯಶಸ್ವಿಯಾಗಿ ಸ್ಪಂದಿಸಿದ್ದು. ಈ ಸ್ಪಂದನೆಯ ಪ್ರಮುಖ ಅಂಶವೆಂದರೆ ಆಮೂಲಾಗ್ರ ಜನ ಭಾಗವಹಿಸುವಿಕೆಯಿರುವ ಸಮುದಾಯ-ಕೇಂದ್ರಿತ ನಿಲುವು.

ರಾಜ್ಯದ ಇತರ ಹಲವು ಪ್ರಮುಖ ಉಪಕ್ರಮಗಳಲ್ಲಿಯೂ ಜನರ ಸಹಭಾಗಿತ್ವವು ಒಂದು ವೈಶಿಷ್ಟ್ಯವಾಗಿದೆ. “ಸಾರ್ವಜನಿಕ ಗ್ರಂಥಾಲಯ ಆಂದೋಲನ”ವು ವಾಚನಾಲಯಗಳು ಮತ್ತು ಪುಟ್ಟ ಗ್ರಂಥಾಲಯಗಳನ್ನು ಸ್ಥಾಪಿಸಲು ಸಹಾಯ ಮಾಡಿದರೆ “ಸಾಕ್ಷರತಾ ಆಂದೋಲನ”ವು ಕೇರಳವು ದೇಶದ ಅತ್ಯಂತ ಸಾಕ್ಷರ ರಾಜ್ಯವಾಗಲು ಕೊಡುಗೆ ನೀಡಿತು. ಈ ವರ್ಷ ತನ್ನ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ “ಜನತಾ ಯೋಜನೆ ಅಭಿಯಾನ” ಇನ್ನೊಂದು ಐತಿಹಾಸಿಕ ಉದಾಹರಣೆಯಾಗಿದೆ.

ಇ ಕೆ ನಾಯನಾರ್ ನೇತೃತ್ವದ ಎಲ್‌ಡಿಎಫ್ ಸರ್ಕಾರವು ಆಗಸ್ಟ್ 25, 1996 ರಂದು ಪ್ರಾರಂಭಿಸಿದ “ಜನತಾ ಯೋಜನೆ ಅಭಿಯಾನ”ವು ಸರ್ಕಾರ ಮತ್ತು ಆಡಳಿತವನ್ನು ಜನರಿಗೆ ಹತ್ತಿರ ತರುವ ಪ್ರಕ್ರಿಯೆಯ ಮೂಲಕ ವಿಕೇಂದ್ರೀಕರಣದತ್ತ ಗಮನ ಕೇಂದ್ರೀಕರಿಸಿತು. ನಿರ್ಧಾರ ಕೈಗೊಳ್ಳುವಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಯೋಜನೆಯ ಕೇಂದ್ರ ಬಿಂದು. ಬಡತನವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ, ಸ್ಥಳೀಯ ಮೂಲಸೌಕರ್ಯ ಮತ್ತು ಮುಂತಾದ ನಿರ್ಣಾಯಕ ಕ್ಷೇತ್ರಗಳಲ್ಲಿ ಕೇರಳ ಸಾಧಿಸಿದ ಪ್ರಗತಿಗೆ “ಜನತಾ ಯೋಜನೆ” ನೀಡಿದ ಕೊಡುಗೆಯನ್ನು ತಜ್ಞರು ಶ್ಲಾಘಿಸುತ್ತಾರೆ. ಭೂಸುಧಾರಣೆಯ ನಂತರ ಇದನ್ನು “ಮುಂದಿನ ದೊಡ್ಡ ವಿಷಯ” ಎಂದು ಕರೆದ ಕೇರಳದ ಮೊದಲ ಮುಖ್ಯಮಂತ್ರಿ ಮತ್ತು ಕಮ್ಯುನಿಸ್ಟ್ ಸಿದ್ಧಾಂತಿ ಇಎಂಎಸ್ ನಂಬೂದರಿಪಾಡ್ ಅವರ ಮೆದುಳಿನ ಕೂಸು ಇದು ಎಂದು ಪರಿಗಣಿಸಲಾಗಿದೆ, ಈ ಅಭಿಯಾನವು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡುವ ಸ್ವಾಯತ್ತ ಸಂಸ್ಥೆಯಾದ, ರಾಜ್ಯ ಯೋಜನಾ ಮಂಡಳಿಯ (ಎಸ್‌ಪಿಬಿ) ಒಂಬತ್ತನೇ ಯೋಜನೆಯ ಭಾಗವಾಗಿತ್ತು. ಈ ಅಭಿಯಾನವನ್ನು ಎಡಪಂಥೀಯ ಮತ್ತು ಪ್ರಗತಿಪರ ಸಂಘಟನೆಗಳ ಜೊತೆಗೆ ಹಲವಾರು ಬುದ್ಧಿಜೀವಿಗಳು, ಕಾರ್ಯಕರ್ತರು, ಮಾಧ್ಯಮದವರು, ಅಧಿಕಾರಿಗಳು ಮತ್ತು ಇತರ ಸಾರ್ವಜನಿಕ ವ್ಯಕ್ತಿಗಳು ಬೆಂಬಲಿಸಿದರು.

ಈ ಉಪಕ್ರಮದ ಪ್ರಾರಂಭವು ಭಾರತದ ಆರ್ಥಿಕ ಮತ್ತು ರಾಜಕೀಯ ಇತಿಹಾಸದಲ್ಲಿ ನಿರ್ಣಾಯಕ ಸಮಯದಲ್ಲಿ ನಡೆಯಿತು. 1991 ರಲ್ಲಿ, ಪಿ ವಿ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಉದಾರೀಕರಣ, ಖಾಸಗೀಕರಣ, ಜಾಗತೀಕರಣ (ಸಂಕ್ಷಿಪ್ತವಾಗಿ ‘ಎಲ್‌ಪಿಜಿ’) ನೀತಿಯನ್ನು ಪರಿಚಯಿಸಿತು, ಇದು ನವ ಉದಾರೀಕರಣದತ್ತ ನಿರ್ಣಾಯಕ ಹೆಜ್ಜೆಯಾಗಿತ್ತು. ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನAತಹ ಅಂತರಾಷ್ಟ್ರೀಯ ಸಂಸ್ಥೆಗಳಿಂದ ಪ್ರಭುತ್ವದ ಖರ್ಚು ಮತ್ತು ಒಟ್ಟಾರೆಯಾಗಿ ಸಮಾಜದಲ್ಲಿ ಪ್ರಭುತ್ವದ ಪಾತ್ರವನ್ನು ಕಡಿಮೆ ಮಾಡಲು ತೀವ್ರವಾದ ಒತ್ತಾಯವಿದ್ದ ಸಮಯವಾಗಿತ್ತು. ‘ಬೇರೇನೂ ಪರ್ಯಾಯವೇ ಇಲ’ (TINA-There Is No Alternative) ಎಂದು ಬಿಂಬಿಸುತ್ತಿದ್ದ ಸಂದರ್ಭದಲ್ಲಿ, ಜನರು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಭಾಗವಹಿಸುವ ಆಧಾರದ ಮೇಲೆ ಆಮೂಲಾಗ್ರ ಪರ್ಯಾಯವನ್ನು ನೀಡುವ ಮೂಲಕ ಒಂದು ಉತ್ತಮ ಜಗತ್ತು ಸಾಧ್ಯವಿದೆ ಎಂದು ಕೇರಳ ಸಾಬೀತುಪಡಿಸಿತು.

“ಇದು ಹೊಸ ಉಪಕ್ರಮವಾದ್ದರಿಂದ, ನಾವೆಲ್ಲರೂ ತುಂಬಾ ಉತ್ಸುಕರಾಗಿದ್ದೆವು! ಪುರಸಭೆ ಏನು ಮಾಡಬೇಕು ಎಂಬುದರ ಬಗ್ಗೆ ಜನರು ಸಾಮಾನ್ಯವಾಗಿ ಹೇಳುವಂತಿಲ್ಲ, ಆದರೆ ಈ ಯೋಜನೆಯಲ್ಲಿ, ಏನು ಮಾಡಬೇಕೆಂದು ಅವರು ಸ್ವತಃ ನಿರ್ಧರಿಸಬಹುದಾಗಿರುವುದರಿಂದ, ಪ್ರತಿಯೊಬ್ಬರೂ ಸಾಕಷ್ಟು ಆಸಕ್ತಿ ಹೊಂದಿದ್ದರು. ಅದು ರಸ್ತೆ ನಿರ್ಮಾಣ ಯೋಜನೆಯಾಗಲಿ ಅಥವಾ ನೀರಾವರಿ ಯೋಜನೆ ಕಾರ್ಯಕ್ರಮವಾಗಲಿ, ಅದರ ಬಗ್ಗೆ ಹೇಗೆ ಮುಂದುವರೆಯಬೇಕೆಂದು ಜನರು ಕುಳಿತು ಚರ್ಚಿಸುತ್ತಾರೆ”ಎಂದು ಯೋಜನೆಯ ಮೊದಲ ಹಂತದಲ್ಲಿ ಉತ್ತರ ಕೇರಳದ ಕಣ್ಣೂರು ಜಿಲ್ಲೆಯ ಕರಾವಳಿ ಪಟ್ಟಣವಾದ ತಲಶ್ಶೇರಿಯ ಪುರಸಭೆಯ ಅಧ್ಯಕ್ಷೆ ಪಿ ಕೆ ಆಶಾ ನೆನಪಿಸಿಕೊಳ್ಳುತ್ತಾರೆ.

ಮೇಲೆ ಹೇಳಿದಂತೆ, ಒಂಬತ್ತನೇ ಯೋಜನಾ ಬಜೆಟನ್ನು ಎಚ್ಚರಿಕೆಯಿಂದ ವಿಕೇಂದ್ರೀಕರಿಸುವುದ ರೊಂದಿಗೆ ಅಭಿಯಾನವನ್ನು ಸಾಧ್ಯಗೊಳಿಸಲಾಯಿತು. “ಪೀಪಲ್ಸ್ ಪ್ಲಾನಿಂಗ್ : ಕೇರಳ, ಲೋಕಲ್ ಡೆಮಾಕ್ರಸಿ ಅಂಡ್ ಡೆವಲಪ್‌ಮೆಂಟ್” ಯಲ್ಲಿ ಟಿ.ಎಂ.ಥಾಮಸ್ ಐಸಾಕ್ ಮತ್ತು ರಿಚರ್ಡ್ ಫ್ರಾಂಕೀ ಅವರು ಉಲ್ಲೇಖಿಸಿದ ಮಾಹಿತಿಯ ಪ್ರಕಾರ: 1997-98 ರ ರಾಜ್ಯದ ವಾರ್ಷಿಕ ಯೋಜನೆ ರೂ. 2855 ಕೋಟಿಗಳು, ಅದರಲ್ಲಿ ರೂ. 1025 ಕೋಟಿಗಳು, ಅಂದರೆ, ಒಟ್ಟು ಬಜೆಟ್‌ನ 36% ವಿಕೇಂದ್ರೀಕರಣಕ್ಕಾಗಿ ಕಾಯ್ದಿರಿಸಲಾಗಿತ್ತು. ರೂ.1025 ಕೋಟಿ, ಪೈಕಿ ರೂ. 749 ಕೋಟಿಗಳು ಸ್ಥಳೀಯ ಸಂಸ್ಥೆಗಳಿಗೆ ನಿಜವಾದ ಅನುದಾನ-ನೆರವು ಆಗಿತ್ತು. ಯೋಜನಾ ನಿಧಿಯನ್ನು ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ನಡುವೆ ಅವುಗಳ ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಅಂದರೆ, 85:15 ಅನುಪಾತದಲ್ಲಿ ಹಂಚಿಕೆ ಮಾಡಲಾಯಿತು. ಸ್ಥಳೀಯ ಸಂಸ್ಥೆಗಳಿಗೆ ಹಣವನ್ನು ಸಮರ್ಪಕವಾಗಿ ಬಳಸಲು ಮಾರ್ಗಸೂಚಿಗಳನ್ನು ಒದಗಿಸಲಾಯಿತು. ಸ್ಥಳೀಯ ಸಂಸ್ಥೆಗಳು ತಾವು ಸ್ವೀಕರಿಸುವ ಯೋಜನೆ ಹಂಚಿಕೆಯ ನಿಖರವಾದ ಮೊತ್ತದ ಬಗ್ಗೆ ತಿಳಿದಿದ್ದವು. ಇದು ಕಾರ್ಯನಿರ್ವಾಹಕರು ನಂತರ ಅನುದಾನಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯಿತು.ಇಂತಹ ಖಚಿತವಾದ ಹಂಚಿಕೆಗಳೊಂದಿಗೆ, ಸ್ಥಳೀಯ ಸಂಸ್ಥೆಗಳು ಅಭಿವೃದ್ಧಿ ಯೋಜನೆಗಳನ್ನು ವಿಶ್ವಾಸದಿಂದ ಕೈಗೆತ್ತಿಕೊಳ್ಳಲು ಸಾಧ್ಯವಾಯಿತು.

ಪಿ ಕೆ ಆಶಾ ಹೇಳುತ್ತಾರೆ, “ನಮ್ಮ ತಲಶ್ಶೇರಿ ಪುರಸಭೆಯಲ್ಲಿ ನಾವು ಕನಿಷ್ಠ 20 ಕುಡಿಯುವ ನೀರಿನ ಯೋಜನೆ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದೇವೆ. ಎಲ್ಲ ಮೂಲಸೌಕರ್ಯ ಕಾಮಗಾರಿಗಳನ್ನು ನಗರಸಭೆಯೇ ಮಾಡಿದ್ದರೂ ಏನು ಮಾಡಬೇಕೆಂದು ಜನರೇ ನಿರ್ಧರಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಸಭೆ ನಡೆಸಿ ಅಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಲಂಕಷವಾಗಿ ಚರ್ಚಿಸಲಾಯಿತು. ನಂತರ ಯೋಜನೆಯ ಗ್ರಾಹಕರು ಹೆಚ್ಚಿನ ವಿಷಯಗಳನ್ನು ಚರ್ಚಿಸಲು ಸ್ವತಃ ಸಮಿತಿಯನ್ನು ರಚಿಸಿದರು. ಈ ಕೆಲವು ಯೋಜನೆಗಳು ಇನ್ನೂ ಮುಂದುವರೆದಿವೆ.”

ಕೇರಳದಲ್ಲಿ ದಶಕಗಳಿಂದ ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಶಿಕ್ಷಣ, ಗ್ರಾಮೀಣ ಮೂಲಸೌಕರ್ಯ ಮತ್ತು ಸಾಮಾನ್ಯ ಯೋಗಕ್ಷೇಮದಲ್ಲಿ ಗಣನೀಯ ಸುಧಾರಣೆಗೆ’ ಜನತಾ ಯೋಜನೆ’ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. 28% ಜನಸಂಖ್ಯೆಯು 1991 ರಲ್ಲಿ ಸಾರ್ವಜನಿಕ ಆರೋಗ್ಯ ಸೌಲಭ್ಯಗಳ ಮೇಲೆ ಅವಲಂಬಿತವಾಗಿದ್ದು, 2018 ರ ಹೊತ್ತಿಗೆ ಅದು 48% ಕ್ಕೆ ಏರಿತು. ಕೇರಳದಲ್ಲಿ 6,00,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಂದ ಸಾರ್ವಜನಿಕ ಶಾಲೆಗಳಿಗೆ ಸ್ಥಳಾಂತರಗೊಂಡರು. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು (ಎಸ್‌ಡಿಜಿ), 2020 ಕ್ಕೆ ಶಿಶು ಮರಣದ (ಐಎಂಆರ್) ಕಡಿತದ ಗುರಿ 8% ಎಂದು ಇಟ್ಟುಕೊಂಡಿದ್ದರೆ, ಕೇರಳದಲ್ಲಿ ಅದು 7% ಕ್ಕೆ ಇಳಿದು,. ಆ ಗುರಿ ಸಾಧಿಸಿದೆ. 1995-96 ರಲ್ಲಿ 1,15,000 ಕಿಮೀ ಇದ್ದ ಗ್ರಾಮೀಣ ರಸ್ತೆಗಳು 2018 ರಲ್ಲಿ 2,31,000 ಕಿಮೀ ಗೆ ಹೆಚ್ಚಾಯಿತು. ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆ 1993-94 ರಲ್ಲಿ 25% ರಿಂದ 2011-12 ರಲ್ಲಿ 6% ಕ್ಕೆ ಇಳಿದಿದೆ. ಅಭಿಯಾನವು 41,00,000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಮಹಿಳಾ ಜಾಲವಾದ ‘ಕುಡುಂಬಶ್ರೀ’ಯಂತಹ ಸ್ವ-ಸಹಾಯ ಗುಂಪುಗಳಿಗೆ ಜನ್ಮ ನೀಡಿತು. ಸಮುದಾಯ ಕ್ರಿಯೆಯ ಮೂಲಕ ತೀವ್ರ ಬಡತನವನ್ನು ನಿರ್ಮೂಲನೆ ಮಾಡುವುದು ಸಂಸ್ಥೆಯ ಧ್ಯೇಯವಾಗಿದೆ.

ಹಾಗಾದರೆ ಜನತಾ ಯೋಜನೆಯಲ್ಲಿ ಮುಂದೇನು? ಜನತಾ ಯೋಜನಾ ಅಭಿಯಾನದ ಶಿಲ್ಪಿಗಳಲ್ಲಿ ಒಬ್ಬರಾದ, ಮುಂದೆ ರಾಜ್ಯ ಹಣಕಾಸು ಸಚಿವರೂ ಆದ ಡಾ. ಟಿ ಎಂ ಥಾಮಸ್ ಐಸಾಕ್ ಅವರು ಫೇಸ್‌ಬುಕ್‌ನಲ್ಲಿ ಹೀಗೆ ಬರೆದಿದ್ದಾರೆ:

“ಜನಪ್ರಿಯ ಯೋಜನಾ ಅವಧಿಯ ಹುರುಪನ್ನು ಪುನಃಸ್ಥಾಪಿಸಬೇಕು. ಭಾಗವಹಿಸುವಿಕೆ ಹೆಚ್ಚಾಗಬೇಕು. ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು. ಕೃಷಿ, ಸಣ್ಣ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಬೇಕು. ನಾವು ಜ್ಞಾನ ಸಮಾಜದತ್ತ ಪರಿವರ್ತನೆಯಲ್ಲಿದ್ದೇವೆ ಎಂಬುದನ್ನು ನೆನಪಿನಲ್ಲಿಡಬೇಕು. ಜಿಲ್ಲಾ ಯೋಜನೆಗಳ ಜತೆಗೆ ಜಲಾನಯನ ಮಹಾಯೋಜನೆಗಳನ್ನು ತರಬೇಕು. ನಗರ ಯೋಜನೆ ಇನ್ನಷ್ಟು ಸುಧಾರಿಸಬೇಕಿದೆ. ಬಡತನ ಸಂಪೂರ್ಣ ನಿರ್ಮೂಲನೆಯಾಗಬೇಕು. ಮಹಿಳಾ ಸಮಾನತೆಯನ್ನು ಖಾತ್ರಿಪಡಿಸಬೇಕು. ಪರಿಸರ ಸ್ನೇಹಿ ನೀತಿಗಳು ಜಾರಿಯಾಗಬೇಕು. ಯೋಜನೆಯಲ್ಲಿ ಕೆಳಸ್ತರದಲ್ಲಿರುವವರು, ವೃದ್ಧರು ಮತ್ತು ಅಂಗವಿಕಲರನ್ನು ಸೇರಿಸಿಕೊಳ್ಳಬೇಕು. ಮುಂದಿನ 25 ವರ್ಷಗಳು ಕೇರಳವನ್ನು ಈ ರೀತಿ ರೂಪಿಸಬೇಕು.”

ಅನು: ರಾಮು ಕೆ.ಎಸ್.

 

Donate Janashakthi Media

Leave a Reply

Your email address will not be published. Required fields are marked *