ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಅಮೆರಿಕಾ ತನ್ನ ಡಾಲರ್ ಬಲದಿಂದ ಹತ್ತು-ಹಲವು ದೇಶಗಳ ಮೇಲೆ ನಿರ್ಬಂಧಗಳನ್ನು ಹೇರುತ್ತಿರುವ ಒಂದು ಪರಿಣಾಮವೆಂದರೆ ಡಾಲರಿನ ಪ್ರಾಬಲ್ಯವೇ ದುರ್ಬಲಗೊಳ್ಳುವಂತಾಗುವುದು. ನಿರ್ಬಂಧಗಳಿಗೆ ಒಳಗಾಗುವ ದೇಶಗಳು ಒಂದೊಂದಾಗಿ ಜತೆಗೂಡಿ ಪರ್ಯಾಯ ಕರೆನ್ಸಿ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸುವುದರ ಪರಿಣಾಮ ಇದು. ವರ್ತಮಾನದಲ್ಲಿ ನಾವು ನೋಡುತ್ತಿರುವ ಇಂತಹ ಪ್ರಯತ್ನಗಳು ಮುಂದುವರೆದ ಬಂಡವಾಳಶಾಹಿ ದೇಶಗಳ ಪ್ರಾಬಲ್ಯದ ಬುಡಕ್ಕೇ ಪೆಟ್ಟು ಕೊಡುತ್ತವೆ. ಹಾಗಾಗಿ ಅಮೆರಿಕಾ ಮಾತ್ರವಲ್ಲದೆ ಇಡೀ ಮೆಟ್ರೋಪಾಲಿಟನ್ ಬಂಡವಾಳಶಾಹಿ ಜಗತ್ತು ಇದನ್ನು ತಡೆಯಲು ಮಿತಿಮೀರಿದ ಪ್ರಯತ್ನಗಳನ್ನು ಮಾಡಲಿದೆ. ಈ ಪ್ರಯತ್ನಗಳು ಬಂಡವಾಳಶಾಹಿಯ ಪ್ರಸಕ್ತ ಬಿಕ್ಕಟ್ಟಿನ ಸ್ವರೂಪವನ್ನು ಪ್ರಕಟಪಡಿಸುತ್ತವೆ. ಆ ಕಾರಣದಿಂದಾಗಿಯೇ ಇದರ ಇನ್ನೊಂದು ಪರಿಣಾಮವೆಂದರೆ ಬಂಡವಾಳಶಾಹಿಯು ತನ್ನ ದುಷ್ಟತನದ ವಿಶ್ವರೂಪವನ್ನು ತೋರಿಸುವ ಸಾಧ್ಯತೆ.
ಅಂತಾರಾಷ್ಟ್ರೀಯ ವ್ಯಾಪಾರ-ವಹಿವಾಟುಗಳು ಡಾಲರ್ ಕರೆನ್ಸಿಯಲ್ಲೇ ನಡೆಯುವ ಕಾರಣದಿಂದ ಮತ್ತು ಎಲ್ಲ ದೇಶಗಳ ಕೇಂದ್ರ ಬ್ಯಾಂಕುಗಳೂ ತಮ್ಮ ಮೀಸಲು ಸಂಗ್ರಹವನ್ನು ಡಾಲರ್ ಕರೆನ್ಸಿಯಲ್ಲೇ ಇಟ್ಟುಕೊಳ್ಳುವ ರೂಢಿಯಿಂದಾಗಿ ಡಾಲರನ್ನು ವಿಶ್ವದ ಮೀಸಲು ಕರೆನ್ಸಿಯಾಗಿ ಒಪ್ಪಿಕೊಳ್ಳಲಾಗಿದೆ. ಹಾಗಾಗಿ, ಡಾಲರ್ ಒಂದು ರೀತಿಯ ಪ್ರಾಮುಖ್ಯತೆಯನ್ನು ಹೊಂದಿದೆ. ಡಾಲರ್ ಹೊಂದಿರುವ ಈ ಪ್ರಾಮುಖ್ಯತೆಯನ್ನು ದುರ್ಬಳಕೆ ಮಾಡಿಕೊಂಡು ಅಮೆರಿಕಾ ತನಗೆ ಸರಿಹೊಂದದ ದೇಶಗಳ ಮೇಲೆ ನಿರ್ಬಂಧಗಳನ್ನು ಹೇರುತ್ತಾ ಬಂದಿದೆ. ನಿರ್ಬಂಧಗಳಿಗೆ ಒಳಗಾದ ದೇಶಗಳು ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಿಕೊಳ್ಳುತ್ತವೆ. ಈ ಪರ್ಯಾಯ ವ್ಯವಸ್ಥೆಗಳು ಡಾಲರ್ ಪ್ರಾಬಲ್ಯವನ್ನು ದುರ್ಬಲಗೊಳಿಸುತ್ತವೆ ಎಂಬುದು ಅನೇಕ ಮಂದಿಗೆ ಮನದಟ್ಟಾಗಿದೆ ಮತ್ತು ಅದನ್ನು ಇತ್ತೀಚಿನ ದಿನಗಳಲ್ಲಿ ಅವರು ಬಹಿರಂಗವಾಗಿ ವ್ಯಕ್ತಪಡಿಸಿಯೂ ಆಗಿದೆ. ತನಗೆ ಸರಿಹೊಂದದ ದೇಶಗಳ ಮೇಲೆ ನಿರ್ಬಂಧಗಳನ್ನು ಹೇರುವ ಕ್ರಮವು ಡಾಲರ್ ಪಡೆದಿರುವ ವಿಶ್ವದ ಮೀಸಲು ಕರೆನ್ಸಿಯ ಸ್ಥಾನವನ್ನು ಗಂಡಾAತರಕ್ಕೆ ಒಳಪಡಿಸುತ್ತದೆ ಎಂಬುದನ್ನು ಅಮೆರಿಕಾದ ಹಣಕಾಸು ಸಚಿವೆ ಜಾನೆಟ್ ಯೆಲೆನ್ ಅಂತಿಮವಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಡಜನ್ಗಟ್ಟಲೆ ದೇಶಗಳನ್ನು ಗುರಿಯಾಗಿಸಿಕೊಂಡ ಅಮೆರಿಕವು ಅವುಗಳ ಮೇಲೆ ನಿರ್ಬಂಧಗಳನ್ನು ಹೇರುತ್ತಿರುವುದನ್ನು ನಾವು ಇಂದಿನ ದಿನಗಳಲ್ಲಿ ನೋಡುತ್ತಿದ್ದೇವೆ. ನಿರ್ಬಂಧಗಳ ಪರಿಣಾಮವಾಗಿ ಸಂಕಷ್ಟಗಳಿಗೆ ಒಳಗಾದ ಈ ದೇಶಗಳು ಒಗ್ಗೂಡುತ್ತವೆ ಮತ್ತು ಡಾಲರ್ ಕರೆನ್ಸಿಗೆ ಒಂದು ಪರ್ಯಾಯವನ್ನು ರೂಪಿಸಿಕೊಳ್ಳುತ್ತವೆ. ಈ ಪರ್ಯಾಯ ಕರೆನ್ಸಿ ವ್ಯವಸ್ಥೆಗಳ ಪರಿಣಾಮವಾಗಿ ಡಾಲರ್ ಪ್ರಾಬಲ್ಯದಿಂದಾಗಿ ಅಮೆರಿಕವು ವಿಶ್ವದ ಮೇಲೆ ಹೊಂದಿರುವ ಪ್ರಾಬಲ ದುರ್ಬಲಗೊಳ್ಳುವಂತಾಗುತ್ತದೆ.
ವಿಪರ್ಯಾಸವೆಂದರೆ, ವಿಶ್ವದ ಮೀಸಲು ಕರೆನ್ಸಿಯ ಸ್ಥಾನ ಪಡೆದಿರುವ ಡಾಲರ್, ನಿರ್ಬಂಧಗಳ ಪರಿಣಾಮವಾಗಿ ಗಂಡಾಂತರಕ್ಕೆ ಒಳಗಾಗಿದೆ ಎಂಬುದನ್ನು ಜಾನೆಟ್ ಯೆಲೆನ್ ಒಪ್ಪಿಕೊಂಡರೂ ಸಹ, ಅಮೆರಿಕವು ವರ್ತಮಾನದಲ್ಲಿ ವಿಧಿಸುತ್ತಿರುವ ನಿರ್ಬಂಧಗಳ ಪರವಾಗಿ ತಾವು ನಿಲ್ಲುವುದಾಗಿ ಘೋಷಿಸಿದರು. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಬೈಡನ್ ಆಡಳಿತದ ಹಿರಿಯ ಸದಸ್ಯರೊಬ್ಬರಿಂದ ಬೇರೆ ಏನನ್ನು ತಾನೇ ನಿರೀಕ್ಷಿಸಬಹುದು. ಅಮೆರಿಕಾ ಇಷ್ಟಪಡದ ನೀತಿಗಳನ್ನು ಅನುಸರಿಸುವ ದೇಶಗಳ ವಿರುದ್ಧ ನಿರ್ಬಂಧಗಳನ್ನು ವಿಧಿಸಿದಾಗ ಅವು ಉದ್ದೇಶಿತ ದೇಶಗಳ ಜನರಿಗೆ ಹೆಚ್ಚಿನ ಕಷ್ಟಗಳನ್ನು ತರುತ್ತವೆ ಎಂಬುದನ್ನು ಮತ್ತು ಅಂತಹ ನೀತಿಗಳನ್ನು ಬದಲಿಸುವಲ್ಲಿ ನಿರ್ಬಂಧಗಳು ಪರಿಣಾಮಕಾರಿಯಾಗುತ್ತಿಲ್ಲ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಇರಾನಿನ ಉದಾಹರಣೆಯನ್ನೂ ಅವರು ಉಲ್ಲೇಖಿಸುತ್ತಾರೆ: ಅನೇಕ ವರ್ಷಗಳ ನಿರ್ಬಂಧಗಳಿಂದಾಗಿ ಇರಾನಿನ ಜನತೆ ಬಹಳ ತೊಂದರೆಗಳನ್ನು ಅನುಭವಿಸಿದರೂ ಸಹ, ಅಮೆರಿಕಾ ಇಷ್ಟಪಡದ ನೀತಿಗಳನ್ನು ಇರಾನಿನ ಸರ್ಕಾರ ಬದಲಿಸಲಿಲ್ಲ. ಈ ಬಗ್ಗೆ ಅವರು ಹೇಳಿದ ಮಾತುಗಳು ಹೀಗಿವೆ: “ಇರಾನ್ ಮೇಲೆ ಹೇರಿದ ನಮ್ಮ ನಿರ್ಬಂಧಗಳು ಆ ದೇಶದಲ್ಲಿ ನಿಜಕ್ಕೂ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿವೆ. ನಿರ್ಬಂಧಗಳಿAದಾಗಿ ಇರಾನ್ ಆರ್ಥಿಕವಾಗಿ ಬಹಳವಾಗಿ ಬಳಲುತ್ತಿದೆ … ಅದು ಅದರ ವರ್ತನೆಯಲ್ಲಿ ಬದಲಾವಣೆಯನ್ನು ತಂದಿದೆಯೇ? ಉತ್ತರ ನಾವು ಇಷ್ಟಪಡಬಹುದಾದ ರೀತಿಯಲ್ಲಿ ಇಲ್ಲ”. ಈ ವಾಸ್ತವಾಂಶದ ಅರಿವಿದ್ದರೂ ಸಹ, ಅಮೆರಿಕಾ ವಿಧಿಸುವ ನಿರ್ಬಂಧಗಳನ್ನು ಬೆಂಬಲಿಸುವಲ್ಲಿ ಜಾನೆಟ್ ಯೆಲೆನ್ ಅವರಿಗೆ ಯಾವ ಅಳುಕೂ ಇಲ್ಲ. ಅದಕ್ಕೆ ತದ್ವಿರುದ್ಧವಾಗಿ, ಇರಾನಿನ ವಿಷಯದಲ್ಲಿ, ನಿರ್ಬಂಧಗಳನ್ನು ಇನ್ನಷ್ಟು ಬಲಪಡಿಸುವ ಮಾರ್ಗಗಳನ್ನು ಅಮೆರಿಕಾ ಹುಡುಕುತ್ತಿದೆ ಎಂದು ಅವರು ಅನುಮೋದನಾ ಪೂರ್ವಕವಾಗಿ ಹೇಳುತ್ತಾರೆ.
ದ್ವಿಪಕ್ಷೀಯ ವ್ಯಾಪಾರ ವ್ಯವಸ್ಥೆಯ ಮರುಸ್ಥಾಪನೆ
ನಿರ್ಬಂಧಗಳಿಗೆ ಗುರಿಯಾಗಿರುವ ದೇಶಗಳು ಅಮೆರಿಕಾದ ಪ್ರಾಬಲದ ವಿಶ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತವೆ ಎಂಬ ಅಂಶವು ಈಗ ನಿಚ್ಚಳವಾಗಿದೆ. ನಿರ್ಬಂಧಗಳಿಗೆ ಗುರಿಯಾಗಿರುವ ರಷ್ಯಾವು, ಸೋವಿಯತ್ ಒಕ್ಕೂಟವು ಹಿಂದಿನ ದಿನಗಳಲ್ಲಿ ಹೊಂದಿದ್ದ ರೀತಿಯ ದ್ವಿಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಹಲವಾರು ದೇಶಗಳೊಂದಿಗೆ ಮರು-ಸ್ಥಾಪಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಈ ದ್ವಿಪಕ್ಷೀಯ ವ್ಯವಸ್ಥೆಯಡಿಯಲ್ಲಿ ವ್ಯಾಪಾರವನ್ನು, ಡಾಲರ್ ಬದಲಿಗೆ, ರೂಬಲ್ ಮತ್ತು ಸಂಬಂಧಿಸಿದ ದೇಶದ ಕರೆನ್ಸಿಯ ಮೂಲಕ ನಡೆಸಲಾಗುತ್ತದೆ. ಈ ಎರಡು ಕರೆನ್ಸಿಗಳ ವಿನಿಮಯ ದರವು ಡಾಲರ್ ಬದಲಾಗಿ ನಿಗದಿಪಡಿಸಿದ ಸ್ಥಿರ ಮಟ್ಟದಲೇ ಉಳಿಯುತ್ತದೆ.
ಈ ಏರ್ಪಾಟು ಏನನ್ನು ಮಾಡುತ್ತದೆ ಎಂದರೆ, ವಿಶ್ವ ವ್ಯಾಪಾರದ ಒಂದಿಷ್ಟು ಭಾಗದ ಮೇಲೆ ಹಣ ಚಲಾವಣೆಯ ಮಾಧ್ಯಮವಾಗಿದ್ದ ಡಾಲರನ್ನು ಅದು ನಿರ್ವಹಿಸುತ್ತಿದ್ದ ಪಾತ್ರದಿಂದ ತೆಗೆದುಹಾಕುತ್ತದೆ. ಇದು ಡಾಲರ್ನ ಪ್ರಾಬಲ್ಯಕ್ಕೆ ಅಡ್ಡಿಯಾಗುತ್ತದೆ. ವಿಶ್ವ ವ್ಯಾಪಾರ-ವಹಿವಾಟುಗಳನ್ನು ಲೆಕ್ಕ ಹಾಕುವ ಒಂದು ಘಟಕವಾಗಿ ಡಾಲರ್ ವಹಿಸುತ್ತಿದ್ದ ಪಾತ್ರವು, ಅಂದರೆ, ಬೆಲೆಗಳನ್ನು ಡಾಲರ್ಗಳಲ್ಲಿ ನಿರೂಪಿಸಲಾಗುತ್ತದೆ ಎಂಬ ಅಂಶವು ಯಾವುದೇ ಮಹತ್ವವನ್ನೂ ಹೊಂದಿಲ್ಲ. ಡಾಲರ್ನ ಆಧಿಪತ್ಯಕ್ಕೆ ಅದು ಆಧಾರವಾಗುವುದಿಲ್ಲ. ಡಾಲರ್ಗೆ ಒಂದು ವಿಶಿಷ್ಟ ಸ್ಥಾನವನ್ನು ಒದಗಿಸಿರುವುದು ವ್ಯಾಪಾರ-ವಹಿವಾಟುಗಳನ್ನು ನಡೆಸಲು ಡಾಲರ್ಗಳು ಬೇಕಾಗುತ್ತದೆ ಎಂಬ ಅಂಶದಿಂದಾಗಿ.
ನಿಜ, ಡಾಲರ್, ಸಂಪತ್ತನ್ನು ಹಿಡಿದಿಟ್ಟುಕೊಳ್ಳುವ ರೂಪವನ್ನು ಹೊಂದಿದೆ. ಡಾಲರಿನ ಪಾತ್ರವು ಉದ್ಭವಿಸುವುದು ಅದು ಹಣ ಚಲಾವಣೆಯ ಮಾಧ್ಯಮವಾಗುವುದರಿಂದ. ಸರಕುಗಳು ಒಂದು ಮೌಲ್ಯವನ್ನು ಹೊಂದಿರುತ್ತವೆ. ಆದರೆ, ಡಾಲರ್ ಅಂತಹ ಯಾವುದೇ ಮೌಲ್ಯವನ್ನೂ ಹೊಂದಿರುವುದಿಲ್ಲ. ಏಕೆಂದರೆ ಅದನ್ನು ಉತ್ಪಾದಿಸಲು(ಮುದ್ರಿಸಲು) ತಗಲುವ ವೆಚ್ಚವು ಅತ್ಯಲ್ಪವೇ. ಆದರೆ, ಡಾಲರಿಗೆ ಒಂದು ಮೌಲ್ಯ ಬರುವುದು ಅದನ್ನು ಯಾವುದೋ ಸರಕಿಗೆ ಎದುರಾಗಿ ನಿಗದಿಮಾಡಲ್ಪಟ್ಟಿರುವುದರಿಂದ ಮತ್ತು ಅದನ್ನು ಹಣ ಚಲಾವಣೆಯ ಮಾಧ್ಯಮವಾಗಿ ಬಳಸಿದಾಗ ಡಾಲರ್ನ ಆ ಮೌಲ್ಯವು ದೃಢೀಕರಿಸಲ್ಪಡುವುದರಿಂದ. ಯಾವುದೇ ರೀತಿಯಲ್ಲಿ ಡಾಲರಿನ ಈ ಪಾತ್ರವು ಇಲ್ಲದಂತಾದರೆ, ಚಲಾವಣೆಯ ಮಾಧ್ಯಮವಾಗಿ ಡಾಲರ್ ನಿರ್ವಹಿಸುವ ಪಾತ್ರವನ್ನು ಬೇರೊಂದು ಕರೆನ್ಸಿಯು ನಿರ್ವಹಿಸಿದಾಗ, ಡಾಲರ್ನ ಪ್ರಾಬಲ್ಯವು ದುರ್ಬಲಗೊಳ್ಳುತ್ತದೆ. ಹೆಚ್ಚಿನ ಸಂಖ್ಯೆಯ ದೇಶಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದಾಗ, ಆ ದೇಶಗಳು ತಮ್ಮ ವ್ಯವಹಾರ-ವಹಿವಾಟುಗಳಿಗಾಗಿ ಪರ್ಯಾಯ ಏರ್ಪಾಟುಗಳನ್ನು ಮಾಡಿಕೊಳ್ಳುತ್ತವೆ. ಈ ವಿದ್ಯಮಾನವು ಸಂಭವಿಸಿದಾಗ ಡಾಲರ್ನ ಪ್ರಾಬಲ್ಯವು ದುರ್ಬಲಗೊಳ್ಳುವ ಭಯ ಸಹಜವೇ.
ಡಾಲರನ್ನು ಅದರ ಆಧಿಪತ್ಯದಿಂದ ಉಚ್ಛಾಟಿಸಲು ನಿರ್ಬಂಧಗಳು ಮಾತ್ರವೇ ಕಾರಣವಲ್ಲ. ಡಾಲರ್ ಆಧಿಪತ್ಯದಿಂದ ಹೊರಬರಲು ಬಯಸುವ ಅಥವಾ ತಮ್ಮ ವ್ಯಾಪಾರದ ಅವಕಾಶಗಳನ್ನು ವಿಸ್ತರಿಸಲು ಬಯಸುವ ಅನೇಕ ದೇಶಗಳು, ಚಲಾವಣೆಯ ಮಾಧ್ಯಮವಾಗಿ ಡಾಲರನ್ನು ಹೊರಗಿಡುವ ವ್ಯವಸ್ಥೆಯನ್ನು ಸ್ವಯಂಪ್ರೇರಣೆಯಿಂದ ಮಾಡಿಕೊಳ್ಳಬಹುದು. ಸೋವಿಯತ್ ಒಕ್ಕೂಟದ ದಿನಗಳಲ್ಲಿ ಭಾರತವು ಸೋವಿಯತ್ ಒಕ್ಕೂಟದೊಂದಿಗೆ ಮಾಡಿಕೊಂಡ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಯಾವುದೇ ನಿರ್ಬಂಧಗಳ ಕಾರಣದಿಂದಾಗಿ ಏರ್ಪಟ್ಟಿರಲಿಲ್ಲ ಮತ್ತು ಡಾಲರ್-ಪ್ರಾಬಲ್ಯದಿಂದ ತಪ್ಪಿಸಿಕೊಳ್ಳುವ ಪ್ರಮೇಯವೂ ಆಗ ಇರಲಿಲ್ಲ. ಡಾಲರ್-ಪ್ರಾಬಲ್ಯವಿದ್ದ ಸನ್ನಿವೇಶದಲ್ಲೂ ಸಾಧ್ಯವಿರುವಷ್ಟು ವ್ಯಾಪಾರ-ವಾಣಿಜ್ಯವನ್ನು ವಿಸ್ತರಿಸಿಕೊಳ್ಳುವ ಆಕಾಂಕ್ಷೆಯೇ ಈ ದ್ವಿಪಕ್ಷೀಯ ಒಪ್ಪಂದಗಳಿಗೆ ಕಾರಣವಾಗಿತ್ತು. ಡಾಲರ್ ಪ್ರಾಬಲ್ಯಕ್ಕೆ ಯಾವುದೇ ಸಂಭಾವ್ಯ ಸವಾಲುಗಳು ಎದುರಾಗದಂತೆ ನೋಡಿಕೊಳ್ಳುವ ಸಲುವಾಗಿ ಅಂತಹ ದ್ವಿಪಕ್ಷೀಯ ಒಪ್ಪಂದಗಳ ವಿರುದ್ಧವಾಗಿ ನವ-ಉದಾರವಾದಿ ಸಿದ್ಧಾಂತಿಗಳು ಒಂದು ಅವಿರತ ಸೈದ್ಧಾಂತಿಕ ಸಮರವನ್ನೇ ಸಾರಿದರು. ಅವರು ತಮ್ಮ ಸೈದ್ಧಾಂತಿಕ ಕಾರ್ಯಸೂಚಿಯನ್ನು ಪಾಲಿಸಿದರು. ಆದರೆ, ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳು ಯಾವ ಸಿದ್ಧಾಂತವನ್ನೂ ಆಧರಿಸಿರಲಿಲ್ಲ. ಈಗಲೂ ಸಹ, ಅಮೆರಿಕದ ಯಾವುದೇ ನಿರ್ಬಂಧಗಳಿಗೆ ಒಳಪಡದ ಚೀನಾ ಮತ್ತು ಬ್ರೆಜಿಲ್ ದೇಶಗಳು ತಮ್ಮ ನಡುವಿನ ವ್ಯಾಪಾರವನ್ನು ತಮ್ಮದೇ ಕರೆನ್ಸಿಯಲ್ಲಿ ನಡೆಸುವ ವ್ಯವಸ್ಥೆಯನ್ನು ರೂಪಿಸಿಕೊಂಡಿವೆ.
ಅಂತೆಯೇ, ಬ್ರಿಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕಗೊಂಡಿರುವ ಬ್ರೆಜಿಲ್ನ ಮಾಜಿ ಅಧ್ಯಕ್ಷೆ ದಿಲ್ಮಾ ರೌಸೆಫ್, 2022 ಮತ್ತು 2026ರ ನಡುವೆ, ಸದರಿ ಬ್ಯಾಂಕ್ ತನ್ನ ಸದಸ್ಯ ದೇಶಗಳಿಗೆ ನೀಡುವ ಸಾಲಗಳ ಶೇ. 30ರಷ್ಟು ಮೊತ್ತವು ಸ್ಥಳೀಯ ಕರೆನ್ಸಿಗಳಲ್ಲೇ ಇರುತ್ತದೆ ಎಂದು ಘೋಷಿಸಿದ್ದಾರೆ. ಈ ಕ್ರಮವು ಸಂಬಂಧಿಸಿದ ಅರ್ಥವ್ಯವಸ್ಥೆಗಳ ವ್ಯಾಪಾರ-ವಹಿವಾಟುಗಳನ್ನು ಡಾಲರ್ ಆಧಿಪತ್ಯದಿಂದ ವಿಮೋಚನೆಗೊಳಿಸುವ ಸಾಮಾನ್ಯ ಉದ್ದೇಶದಿಂದ ಕೂಡಿದೆಯೇ ವಿನಃ ಅದು ಯಾವ ನಿರ್ದಿಷ್ಟ ಒತ್ತಾಯಗಳಿಂದಲೂ ಕೂಡಿಲ್ಲ.
ಇದನ್ನೂ ಓದಿ : ಯುರೋಪಿನ ದೇಶಗಳಲ್ಲಿ ಕಾರ್ಮಿಕರ ಅದೃಷ್ಟ ಖುಲಾಯಿಸಿದ್ದರೆ, ಅದು ಬಂಡವಾಳಶಾಹಿ ವ್ಯವಸ್ಥೆಯಿಂದಲ್ಲ
ಅಮೆರಿಕಾಗೆ ಎರಡು ಅನುಕೂಲಗಳು
ಡಾಲರಿನ ಪ್ರಾಬಲ್ಯವು ಅಮೆರಿಕಾಗೆ ಕಲ್ಪಿಸಿಕೊಡುವ ಅನುಕೂಲಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಉಚಿತ. ಎರಡು ಸ್ಪಷ್ಟ ಅನುಕೂಲಗಳಿವೆ: ಮೊದಲನೆಯದು, ಡಾಲರನ್ನು ಮೀಸಲು ಕರೆನ್ಸಿಯಾಗಿ ಉಳಿದ ದೇಶಗಳು ಒಪ್ಪಿಕೊಂಡಿರುವ ಕಾರಣದಿಂದ ಮತ್ತು ಡಾಲರ್ ತನ್ನದೇ ಸ್ವಂತ ಕರೆನ್ಸಿ ಆಗಿರುವುದರಿಂದ, ಇತರ ದೇಶಗಳಂತಲ್ಲದೆ, ಅಮೆರಿಕಾ ಪಾವತಿ ಶೇಷ ಸಮಸ್ಯೆಯ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಸಂಪತ್ತನ್ನು ಡಾಲರ್ ರೂಪದಲ್ಲಿ ಹಿಡಿದಿಟ್ಟುಕೊಳ್ಳುವ ಪರಿಪಾಠವು ಸುರಕ್ಷಿತವಾಗಿರುವುದರಿಂದ, ಇತರ ದೇಶಗಳಿಗೆ ಐ.ಒ.ಯು.ಗಳನ್ನು (IOU- ನಾನು ಇಂತಿಷ್ಟು ಹಣಕ್ಕೆ ನಿಮಗೆ ಋಣಿಯಾಗಿದ್ದೇನೆ ಎಂದು ಸಹಿ ಹಾಕಿದ ಪತ್ರಗಳನ್ನು) ಕೊಡುವ ಮೂಲಕ ಅಮೆರಿಕಾ ತನ್ನ ಪಾವತಿಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಅಮೆರಿಕಾ ಹೊಂದಿರುವ ಈ ಅನುಕೂಲದ ಮೂಲಕ ಅದು ವಿಶ್ವ ಅರ್ಥವ್ಯವಸ್ಥೆಯನ್ನು ಉತ್ತೇಜಿಸುವ ಕಾರ್ಯವನ್ನು ನಿರ್ವಹಿಸಬಹುದು ಮತ್ತು ನಿರ್ವಹಿಸುತ್ತದೆ ಕೂಡ. ಎರಡನೆಯದು, ಇದೇ ಕಾರಣದಿಂದಾಗಿ, ಅಮೇರಿಕದ ಬ್ಯಾಂಕುಗಳ ವ್ಯವಹಾರವು ಬಹಳವಾಗಿ ಹೆಚ್ಚುತ್ತದೆ. ಡಾಲರ್ ಕರೆನ್ಸಿಯಲ್ಲಿ ವ್ಯವಹಾರಗಳನ್ನು ನಡೆಸುವ ಪದ್ಧತಿಯು ಅಮೆರಿಕದ ಬ್ಯಾಂಕುಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ನಿಜವೇ. ಆದರೆ, ವಿಶ್ವ ವ್ಯಾಪಾರದಲ್ಲಿ ಡಾಲರ್ ಕರೆನ್ಸಿಯು ಚಲಾವಣೆಯ ಮಾಧ್ಯಮವಾಗಿರುವುದರಿಂದ ಅಮೆರಿಕದ ಬ್ಯಾಂಕುಗಳೇ ಡಾಲರ್ನ ಬಹು ದೊಡ್ಡ ಫಲಾನುಭವಿಗಳು ಎಂಬುದರಲ್ಲಿ ಸಂದೇಹವಿಲ್ಲ.
ಈ ಸ್ಪಷ್ಟ ಅಂಶಗಳ ಜೊತೆಗೆ, ಡಾಲರ್ ಹೊಂದಿರುವ ಪ್ರಾಬಲ್ಯದಿಂದಾಗಿ ಅದು ಮೆಟ್ರೋಪಾಲಿಟನ್ ಬಂಡವಾಳಶಾಹಿ ಜಗತ್ತಿಗೂ ಸಹ ಪ್ರಯೋಜನಕಾರಿಯಾಗಿದೆ. ಅಂದರೆ, ಅದು ಪ್ರಾಥಮಿಕ/ಮೂಲ ಸರಕುಗಳನ್ನು ಉತ್ಪಾದಿಸುವ ಮೂರನೇ ಜಗತ್ತಿನ ದೇಶಗಳ ಮೇಲೆ ಅವರ ಆದಾಯವನ್ನು ಕುಗ್ಗಿಸುವ ಮತ್ತು ಅದರಿಂದಾಗಿ ಅವರ ಸರಕುಗಳ ಮೇಲಿನ ಬೇಡಿಕೆಯನ್ನು ತಗ್ಗಿಸುವ ಕ್ರಮಗಳನ್ನು ಹೇರಲು ವ್ಯವಸ್ಥೆಗೆ ಅನುವು ಮಾಡಿಕೊಡುತ್ತದೆ. ಈ ಮೂಲಕ, ಅವರ ಸರಕುಗಳ ಬೆಲೆಗಳು ಏರಿಕೆಯಾಗದಂತೆ ನೋಡಿಕೊಂಡು ಮೆಟ್ರೋಪಾಲಿಟನ್ ದೇಶಗಳ ಹೆಚ್ಚುತ್ತಿರುವ ಪ್ರಾಥಮಿಕ ಸರಕುಗಳ ಮೇಲಿನ ಬೇಡಿಕೆಯ ಪೂರೈಕೆಯನ್ನು, ಈ ಸರಕುಗಳ ಉತ್ಪಾದನೆಯು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚದಿದ್ದರೂ ಸಹ ಖಚಿತಪಡಿಸಿಕೊಳ್ಳುತ್ತದೆ.
ಈ ಪ್ರಕ್ರಿಯೆಯು ಹೀಗೆ ಕಾರ್ಯನಿರ್ವಹಿಸುತ್ತದೆ: ಮೂರನೇ ಜಗತ್ತಿನಲ್ಲಿ ಉತ್ಪಾದಿಸಲಾದ ಯಾವುದೋ ಒಂದು ಪ್ರಾಥಮಿಕ ಸರಕಿಗೆ ಹೆಚ್ಚಿನ ಬೇಡಿಕೆ ಇದ್ದಾಗ, ಸ್ಥಳೀಯ ಕರೆನ್ಸಿಯಲ್ಲಿ ಅದರ ಬೆಲೆ ಏರಿಕೆಯಾಗುತ್ತದೆ. ಈ ಏರಿಕೆಯು, ವಿಶ್ವದ ಮೀಸಲು ಕರೆನ್ಸಿಗೆ (ಡಾಲರ್ಗೆ) ಹೋಲಿಸಿದರೆ ಸ್ಥಳೀಯ ಕರೆನ್ಸಿಯ ವಿನಿಮಯ ದರವು ಅಪಮೌಲ್ಯಗೊಳ್ಳುವ ನಿರೀಕ್ಷೆಗಳನ್ನು ಹುಟ್ಟಿಹಾಕುತ್ತದೆ, ಏಕೆಂದರೆ, ಸ್ಥಳೀಯ ಕರೆನ್ಸಿಯನ್ನು ಮತ್ತು ಮೀಸಲು ಕರೆನ್ಸಿಯನ್ನು ಬೇರೆ ಬೇರೆ ದೃಷ್ಟಿಯಲ್ಲೇ ನೋಡಲಾಗುತ್ತದೆ. ಇದು ಆ ನಿರ್ದಿಷ್ಟ ಮೂರನೇ ಜಗತ್ತಿನ ದೇಶದಿಂದ ಹಣಕಾಸು ಬಂಡವಾಳವು ಮೆಟ್ರೋಪಾಲಿಟನ್ ದೇಶಕ್ಕೆ ಪಲಾಯನಗೈಯ್ಯುವಂತೆ ಪ್ರಚೋದಿಸುತ್ತದೆ. ಇದು ನಿಜಕ್ಕೂ ಸ್ಥಳೀಯ ಕರೆನ್ಸಿಯ ಅಪಮೌಲ್ಯಕ್ಕೆ ಕಾರಣವಾಗುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಆ ನಿರ್ದಿಷ್ಟ ಮೂರನೇ ಜಗತ್ತಿನ ದೇಶವು ತನ್ನ ಬಡ್ಡಿ ದರವನ್ನು ಹೆಚ್ಚಿಸುತ್ತದೆ ಮತ್ತು “ಮಿತವ್ಯಯ”ದ ಕ್ರಮಗಳನ್ನು ಅಳವಡಿಸಿಕೊಳ್ಳುತ್ತದೆ. ಈ ಅಂಶಗಳು ಸ್ಥಳೀಯವಾಗಿ ವರಮಾನಗಳ ಕುಸಿತಕ್ಕೆ ಕಾರಣವಾಗುತ್ತವೆ ಮತ್ತು ಅದರಿಂದಾಗಿ ಆ ನಿರ್ದಿಷ್ಟ ಸರಕಿನ ಮತ್ತು ಇತರ ಸರಕುಗಳ ಸ್ಥಳೀಯ ಬಳಕೆಯಲ್ಲಿ ಕುಸಿತವಾಗುತ್ತದೆ. ಹಾಗಾಗಿ, ಭೂ ಬಳಕೆಯನ್ನು ಆ ನಿರ್ದಿಷ್ಟ ಸರಕಿನಿಂದ ಬೇರೆ ಉದ್ದೇಶಗಳ ಕಡೆಗೆ ತಿರುಗಿಸಲೂ ಬಹುದು. ಈ ರೀತಿಯಲ್ಲಿ ಆ ವಿರಳ ಪ್ರಾಥಮಿಕ ಸರಕನ್ನು ಮೆಟ್ರೋಪಾಲಿಟನ್ ದೇಶಕ್ಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ, ಮೂಲ ಬೇಡಿಕೆಯನ್ನು ಕಡೆಗಣಿಸಲಾಗುತ್ತದೆ ಮತ್ತು ಅದರ ಬೆಲೆಯನ್ನು ಪೂರ್ವಸ್ಥಿತಿಗೇ ತರಲಾಗುತ್ತದೆ.
ಅಪ–ಡಾಲರೀಕರಣದತ್ತ
ವಸಾಹತುಶಾಹಿ ಯುಗದಲ್ಲಿ ಮೂರನೇ ಜಗತ್ತಿನ ದೇಶಗಳ ಸರಕುಗಳ ಸ್ಥಳೀಯ ಬಳಕೆಯನ್ನು ಬಲ ಪ್ರಯೋಗದ ಮೂಲಕ ಸಂಕುಚಿತಗೊಳಿಸಿ, ಆ ಸರಕುಗಳ ಬೆಲೆಯನ್ನು ಹೆಚ್ಚಿಸದೇ ಅವುಗಳನ್ನು ಕಚ್ಚಾ ವಸ್ತುಗಳಾಗಿ ವಸಾಹತು ದೇಶಗಳಿಗೆ ಕೊಂಡೊಯ್ಯುವ ಸಲುವಾಗಿ ಆ ದೇಶಗಳನ್ನು ಹಿಂಡುತ್ತಿದ್ದ ರೀತಿಯಲ್ಲೇ ಇಂದಿನ ಬಂಡವಾಳಶಾಹಿ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಕರೆನ್ಸಿ ವ್ಯವಸ್ಥೆಯೂ ಸಹ ಅದೇ ಉದ್ದೇಶವನ್ನು ಈಡೇರಿಸುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಮಕಾಲೀನ ಕರೆನ್ಸಿ ವ್ಯವಸ್ಥೆಯು ಸಾಮ್ರಾಜ್ಯಶಾಹಿಯ ಅಭಿವ್ಯಕ್ತಿಯೇ. ಹಾಗಾಗಿ, ಪ್ರಾಥಮಿಕ ಸರಕುಗಳನ್ನು ಉತ್ಪಾದಿಸುವ ಮೂರನೇ ಜಗತ್ತಿನ ಯಾವುದೇ ದೇಶದ ಕರೆನ್ಸಿಯು, ಅಥವಾ ಅವುಗಳ ಒಂದು ಗುಂಪಿನ ಕರೆನ್ಸಿಯು, ಜಾಗತಿಕ ವ್ಯಾಪಾರ-ವಹಿವಾಟುಗಳಲ್ಲಿ ಕಾರುಬಾರು ನಡೆಸುವ(ಆಧಿಪತ್ಯದ) ಕರೆನ್ಸಿಯಾಗುವುದು ಸಾಧ್ಯವಿಲ್ಲ, ಮತ್ತು, ಇಡೀ ಸಾಮ್ರಾಜ್ಯಶಾಹಿ ಸಂರಚನೆಯನ್ನು ಹಾಳುಗೆಡವದೇ ಹಾಗೂ ಅದರ ಆಧಾರದ ಮೇಲೆ ನೆಲೆಸಿರುವ ಸಮಕಾಲೀನ ಬಂಡವಾಳಶಾಹಿಯ ಸ್ಥಿರತೆಗೆ ಧಕ್ಕೆ ತಾರದೇ, ಮೂರನೇ ಜಗತ್ತಿನ ಕರೆನ್ಸಿಯು ಆಧಿಪತ್ಯದ ಕರೆನ್ಸಿಯಾಗುವುದು ಸಾಧ್ಯವಿಲ್ಲ. ಡಾಲರ್ನ ಈ ಆಧಿಪತ್ಯವು ಬಂಡವಾಳಶಾಹಿ ಕರೆನ್ಸಿ ವ್ಯವಸ್ಥೆಯ ನಿರ್ಣಾಯಕ ಭಾಗವೇ.
ವರ್ತಮಾನದಲ್ಲಿ ನಾವು ನೋಡುತ್ತಿರುವ ಅಪ-ಡಾಲರೀಕರಣದತ್ತ (de-dollarisation) ಸಾಗುವ ಈ ಕ್ರಮಗಳು ಮುಂದುವರೆದ ಬಂಡವಾಳಶಾಹಿ ದೇಶಗಳ ಪ್ರಾಬಲ್ಯದ ಬುಡಕ್ಕೇ ಪೆಟ್ಟು ಕೊಡುತ್ತವೆ. ಇದು ಒಂದು ಕರೆನ್ಸಿ ವ್ಯವಸ್ಥೆಯನ್ನು ಇನ್ನೊಂದರೊಂದಿಗೆ ಕೇವಲ ಬದಲಾಯಿಸುವ ಪ್ರಶ್ನೆಯಲ್ಲ. ಇದು ಮೆಟ್ರೋಪಾಲಿಟನ್ ಆಧಿಪತ್ಯದ ಬೆಂಬಲ ಹೊಂದಿದ ಮತ್ತು ಮೂರನೇ ಜಗತ್ತಿನ ಜನರಿಗೆ ನಷ್ಟವನ್ನುಂಟುಮಾಡಿ ತಲುಪಿದ ಇಡೀ ವ್ಯವಸ್ಥೆಯ ಸ್ಥಿರತೆಯ ಪ್ರಶ್ನೆಯಾಗಿದೆ. ಹಾಗಾಗಿ ಅಮೆರಿಕಾ ಮಾತ್ರವಲ್ಲದೆ ಇಡೀ ಮೆಟ್ರೋಪಾಲಿಟನ್ ಬಂಡವಾಳಶಾಹಿ ಜಗತ್ತು ಅಪ-ಡಾಲರೀಕರಣವನ್ನು ತಡೆಯಲು ಮಿತಿಮೀರಿದ ಪ್ರಯತ್ನಗಳನ್ನು ಮಾಡಲಿದೆ. ಈ ಪ್ರಯತ್ನಗಳು ಅಂತಹ ಅಪ-ಡಾಲರೀಕರಣದ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವ ದೇಶಗಳ ವಿರುದ್ಧ ಆರ್ಥಿಕೇತರ ಒತ್ತಾಯದ ಕ್ರಮಗಳನ್ನೂ ಸಹ ಒಳಗೊಂಡಿರಬಹುದು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಅಪ-ಡಾಲರೀಕರಣವನ್ನು ಸಾಧಿಸುವ ಪ್ರಯತ್ನವು ಬಂಡವಾಳಶಾಹಿಯ ಪ್ರಸಕ್ತ ಬಿಕ್ಕಟ್ಟಿನ ಸ್ವರೂಪವನ್ನು ಪ್ರಕಟಪಡಿಸುತ್ತದೆ. ಆ ಕಾರಣದಿಂದಾಗಿಯೇ ಬಂಡವಾಳಶಾಹಿಯು ತನ್ನ ದುಷ್ಟತನದ ವಿಶ್ವರೂಪವನ್ನು ತೋರಿಸಲಿದೆ.