ಅರ್ಥವ್ಯವಸ್ಥೆಯ ಮೂಲ ಸಮಸ್ಯೆಯನ್ನೇ ನಿರ್ಲಕ್ಷಿಸಿದ 2023-24ರ ಬಜೆಟ್ – ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಫಲತೆ

ಪ್ರೊ. ಪ್ರಭಾತ್‍ ಪಟ್ನಾಯಕ್

ಅನು:ಕೆ.ಎಂ. ನಾಗರಾಜ್

 ಈ ವರ್ಷದ ಬಜೆಟ್ ಎರಡು ಅರ್ಥಗಳಲ್ಲಿ ದೃಷ್ಟಿದೋಷದಿಂದ ಕೂಡಿರುವುದು ಕಂಡು ಬರುತ್ತದೆ-ಒಂದು, ತೀವ್ರವಾಗಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳ ಕಾಲಮಾನದಲ್ಲಿ ಸರ್ಕಾರದ ಆದಾಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯದ ಬಗ್ಗೆ, ಮತ್ತು ಎರಡನೆಯದಾಗಿ, ದುಡಿಯುವ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬಲ್ಲ ಬೃಹತ್‌ ಸಾಮಾಜಿಕ ವೆಚ್ಚಗಳನ್ನು ಕೈಗೊಳ್ಳುವ ಅಗತ್ಯದ ಬಗ್ಗೆ ಅದು ತೋರಿರುವ ಸಂಪೂರ್ಣ ಉದಾಸೀನತೆ. ಇವಕ್ಕೆ ಬದಲಾಗಿಬಂಡವಾಳ ವೆಚ್ಚಗಳ ಹೆಚ್ಚಳದಲ್ಲಿ  ಉದ್ಯೋಗ ಸೃಷ್ಟಿಯ ಪರಿಣಾಮವು ಕಡಿಮೆಯಿದ್ದರೂ ಅದರ ಮೇಲೆಯೇ ಅದು ಒತ್ತು ನೀಡುತ್ತದೆ. ಈ ದೃಷ್ಟಿದೋಷ ಆಶ್ಚರ್ಯಕರವೆನಿಸಿದರೂ, ಮೂಲಸೌಕರ್ಯ ವಲಯವು ಅವರ “ಬಂಟ-ಬಂಡವಾಳಶಾಹಿ”(crony capitalists)ಗಳ ವಿಶೇಷ ಆಸಕ್ತಿಯ ವಲಯ ಎಂಬುದನ್ನು ನೆನಪಿಸಿಕೊಂಡರೆ, ಅದರ ಮೇಲಿನ ವೆಚ್ಚಗಳನ್ನು ಹೆಚ್ಚಿಸುವುದು  “ಆಪ್ತರಿಗೆ” ಸಹಾಯ ಮಾಡುವ ಒಂದು ಮಾರ್ಗ ಕೂಡ ಆಗಿರುವುದರಿಂದ, ತನ್ನ ಬಂಟ ಬಂಡವಾಳಶಾಹಿಗಳ ಹಿತಾಸಕ್ತಿಗಳಿಗೇ ಪ್ರಾಧಾನ್ಯತೆ ನೀಡುವ  ಒಂದು  ಸರಕಾರ  ದುಡಿಯುವ ಜನರ ಹಿತಾಸಕ್ತಿಗಳ ಮಾತಿರಲಿದೇಶದ ಒಟ್ಟಾರೆ ಆರ್ಥಿಕ ಹಿತಾಸಕ್ತಿಗಳನ್ನಾದರೂ ಅದಕ್ಕಿಂತ ಮಿಗಿಲಾಗಿ ಪರಿಗಣಿಸಬೇಕು ಎಂದು ನಿರೀಕ್ಷಿಸಲು ಸಾಧ್ಯವೇ?

ಭಾರತದ ಇಂದಿನ ಅರ್ಥವ್ಯವಸ್ಥೆಯ ಎದ್ದುಕಾಣುವ ಲಕ್ಷಣವೆಂದರೆ, ನೈಜ ಬಳಕೆ ವೆಚ್ಚಗಳು  ನಿಧಾನಗೊಂಡಿರುವುದು. ಉದಾಹರಣೆಗೆ, 2019-20 ಮತ್ತು 2022-23ರ ನಡುವೆ ನೈಜ ಬಳಕೆಯ ತಲಾ ವೆಚ್ಚದ ಬೆಳವಣಿಗೆಯು ಶೇ. 5ಕ್ಕಿಂತಲೂ ಕಡಿಮೆ ಇತ್ತು. ಇದು ಜಿಡಿಪಿಯ ಬೆಳವಣಿಗೆಯ ದರಕ್ಕಿಂತಲೂ ಕಡಿಮೆ ಇತ್ತು. ವಿಷಯವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಕೋವಿಡ್‌-೧೯ರ ನಂತರ ಅರ್ಥವ್ಯವಸ್ಥೆಯಲ್ಲಿ ಕಂಡು ಬಂದ ಚೇತರಿಕೆಯು ಬಳಕೆಯ ಮೂಲಕ ಉಂಟಾದುದಕ್ಕಿಂತಲೂ ಹೆಚ್ಚಾಗಿ ಹೂಡಿಕೆಯನ್ನೇ ಆಧರಿಸಿತ್ತು. ಈ ಚೇತರಿಕೆಯಲ್ಲಿ ಎರಡು ಸಮಸ್ಯೆಗಳಿವೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ: ಮೊದಲನೆಯದು, ಈ ಚೇತರಿಕೆಯು ಬಹಳ ದಿನ ಉಳಿಯುವಂತದ್ದಲ್ಲ;  ಉತ್ಪಾದನಾ ಸಾಮರ್ಥ್ಯವು ಪೂರ್ಣವಾಗಿ ಬಳಕೆಯಾಗದೇ ರಾಶಿ ಬೀಳುವಂತಾಗುತ್ತದೆ, ಮೂಲಸೌಕರ್ಯಗಳು ಸಮರ್ಪಕವಾಗಿ ಬಳಕೆಯಾಗದೇ ಉಳಿಯುತ್ತದೆ. ಅದರಿಂದಾಗಿ ಅವುಗಳಿಗಾಗಿ ಪಡೆದ ಬೃಹತ್‌ ಮೊತ್ತದ ಬ್ಯಾಂಕ್‌ ಸಾಲಗಳ ವಸೂಲಿಗೆ ಅಡ್ಡಿಯುಂಟಾಗುತ್ತದೆ. ಆದ್ದರಿಂದ ಇಂತಹ ಮರುಪಾವತಿಯಾಗದ ಸಾಲಗಳ ಪ್ರಮಾಣ ಬೃಹದಾಕಾರವಾಗಿ ಬೆಳೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕುಗಳು ಭಾರೀ ನಷ್ಟ ಅನುಭವಿಸುತ್ತವೆ ಮಾತ್ರವಲ್ಲ, ಇಡೀ ಹಣಕಾಸು ವ್ಯವಸ್ಥೆಯ ಸ್ಥಿರತೆಯನ್ನು ಕಾಪಾಡಿಕೊಳ್ಳುವುದೇ ಒಂದು ಬಹು ದೊಡ್ಡ ಸಮಸ್ಯೆಯಾಗುತ್ತದೆ. ಎರಡನೆಯದು, ಜನಸಾಮಾನ್ಯರ ಸ್ಥಿತಿ-ಗತಿಗಳ ಸುಧಾರಣೆಯೇ ಜಿಡಿಪಿಯ ಮೂಲ ಉದ್ದೇಶವಾಗಿರುವಾಗ, ಜನರ ಬಳಕೆಯ ಮಟ್ಟವು ನಿಶ್ಚಲವಾಗಿದ್ದರೆ, ಜಿಡಿಪಿಯ ಬೆಳವಣಿಗೆಗೆ ಅರ್ಥವೇ ಇರುವುದಿಲ್ಲ.

ಆದ್ದರಿಂದ ಅರ್ಥವ್ಯವಸ್ಥೆಯಲ್ಲಿ ಬಳಕೆಯನ್ನು ಉತ್ತೇಜಿಸುವುದೇ 2023-24ರ ಬಜೆಟ್‌ ಮುಂದಿದ್ದ ಮುಖ್ಯವಾದ ಕೆಲಸವಾಗಿತ್ತು.. ಅದಕ್ಕಾಗಿ ಎಲ್ಲಕ್ಕಿಂತ ಮಿಗಿಲಾಗಿ ಸಾಮಾಜಿಕ ವಲಯದ ಖರ್ಚುಗಳನ್ನು ಹೆಚ್ಚಿಸಬೇಕಿತ್ತು:  ಹಸಿವಿನಿಂದ ತತ್ತರಿಸುತ್ತಿರುವ ದೇಶದಲ್ಲಿ ಆಹಾರ ಧಾನ್ಯಗಳ ದಾಸ್ತಾನುಗಳು ಎಫ್‌ಸಿಐ (ಆಹಾರ ನಿಗಮ) ನಲ್ಲಿ ಬಳಕೆಯಾಗದೆ ಉಳಿದಿರುವ ಕಾರಣವೆಂದರೆ, ಆರೋಗ್ಯ ರಕ್ಷಣೆ, ವಸತಿ, ಶಿಕ್ಷಣ ಮತ್ತು ಇತರ ತುರ್ತು ಅಗತ್ಯ  ಸೇವೆಗಳಿಗಾಗಿ ಜನರು ಅತಿ ಹೆಚ್ಚು ಹಣ ಖರ್ಚುಮಾಡಿದ ನಂತರ ಅವರ ಕೈಯಲ್ಲಿ ಖರೀದಿ ಶಕ್ತಿ ಉಳಿದಿರುವುದಿಲ್ಲ. ಆದ್ದರಿಂದ, ಸಾಮಾಜಿಕ ವಲಯದ ಖರ್ಚುಗಳನ್ನು ಅವಶ್ಯವಾಗಿ ಹೆಚ್ಚಿಸಬೇಕಿತ್ತು. ಆದರೆ ಬಜೆಟ್ ಅದನ್ನೇ ನಿರ್ಲಕ್ಷಿಸಿದೆ. ಸರ್ಕಾರವು ಮಾಡಿರುವುದು ಏನೆಂದರೆ, ಬಂಡವಾಳ ವೆಚ್ಚಗಳನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಸಂಪನ್ಮೂಲಗಳನ್ನು ಒದಗಿಸಿಕೊಳ್ಳಲು ಅದು ಸಾಮಾಜಿಕ ವಲಯದ ಮೇಲೆ ಮಾಡುವ ಖರ್ಚುಗಳನ್ನು ಕಡಿತಗೊಳಿಸಿದೆ. ಇಂತಹ ಕಡಿತಗಳ ಪೈಕಿ ಆಘಾತಕಾರಿಯಾದ ಒಂದು ಉದಾಹರಣೆಯೆಂದರೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗ)ಗಾಗಿ ಮಾಡುವ ವೆಚ್ಚಗಳ ಕಡಿತವೇ. ಈ ಯೋಜನೆಗಾಗಿ ಒಂದು ದಶಕದ ಹಿಂದೆ 112,000 ಕೋಟಿ ರೂ.ಗಳನ್ನು ಖರ್ಚುಮಾಡಲಾಗುತ್ತಿತ್ತು. ಈ ವರ್ಷ ಅದನ್ನು 60,000 ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ. ಅಂದರೆ, ಅರ್ಧದಷ್ಟು ಹಣವನ್ನು ಕಾಲಕ್ರಮೇಣ ಕಡಿತ ಮಾಡಲಾಗಿದೆ. ಈ ಯೋಜನೆಯಲ್ಲಿ ಕೆಲಸ ಮಾಡಿದ ಬಗ್ಗೆ ಪುರಾವೆಯನ್ನು ಮೊಬೈಲ್‌ ಆಪ್‌ ಮೂಲಕ ಸಲ್ಲಿಸಬೇಕಾಗುತ್ತದೆ. ಅದಕ್ಕೆ ಇಂಟರ್ನೆಟ್ ಸಂಪರ್ಕದ ಅಗತ್ಯವಿರುವುದರಿಂದ ಮತ್ತು ಈಗ ಗ್ರಾಮೀಣ ಭಾರತದ ಹೆಚ್ಚಿನ ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕವೇ ಇಲ್ಲದುದರಿಂದ, ಈ ಹೊಸ ಬದಲಾವಣೆಯಿಂದ ಹೊರಹೊಮ್ಮುವ ಒಂದು ಅನಿವಾರ್ಯ ತೀರ್ಮಾನವೆಂದರೆ, ಈ ಯೋಜನೆಯನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಸರ್ಕಾರ ಬಯಸುತ್ತದೆ!

81 ಕೋಟಿ ಜನರಿಗೆ ತಿಂಗಳಿಗೆ 5 ಕೆಜಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವುದನ್ನು ಸರ್ಕಾರವು ತನ್ನ “ಸಾಧನೆ” ಎಂದು ನಗಾರಿ ಬಾರಿಸುತ್ತದೆಯಾದರೂ, 2022-23ರ ಪರಿಷ್ಕೃತ ಅಂದಾಜುಗಳಿಗೆ ಹೋಲಿಸಿದರೆ ಆಹಾರ ಸಬ್ಸಿಡಿಯಲ್ಲಿ ಶೇ. 31ರಷ್ಟು ಕಡಿತ ಕಂಡುಬರುತ್ತದೆ. ಅಂತೆಯೇ, ಗ್ರಾಮೀಣಾಭಿವೃದ್ಧಿಗಾಗಿ ನಿಗದಿಪಡಿಸುವ ಮೊತ್ತದಲ್ಲಿ ಕಡಿತ ಮಾಡಲಾಗಿದೆ. ಶಿಕ್ಷಣ ಮತ್ತು ಆರೋಗ್ಯ ವಲಯಗಳಿಗೆ ಸ್ವಲ್ಪ ಹೆಚ್ಚು ಹಣವನ್ನು ನಿಗದಿಪಡಿಸಲಾಗಿದೆ. ಆದರೆ, ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡಾಗ ಈ ವಲಯಗಳ ಖರ್ಚುಗಳೂ ಕುಸಿತವನ್ನು ಕಾಣುತ್ತವೆ.

ಸಾಮಾಜಿಕ ವಲಯಗಳಿಗೆ ಕಡಿತ ಆಶ್ಚರ್ಯಕರವೇನಲ್ಲ

ಸರ್ಕಾರದ ಬಳಕೆ-ವಿರೋಧಿ ನಿಲುವು ಮತ್ತು ಆ ಮೂಲಕವಾಗಿ ಕಾಣುವ ಬಡವರ-ವಿರೋಧಿ ನಿಲುವು ಆಶ್ಚರ್ಯಕರವೇನಲ್ಲ. 2023-24ರ ಬಜೆಟ್‌ನಲ್ಲಿ ಕಾಣುವ ಗಮನಾರ್ಹವಾದ ಒಂದು ಅಂಶವೆಂದರೆ, ರಾಜ್ಯಗಳಿಗೆ ಮಾಡುತ್ತಿದ್ದ ಹಣಕಾಸಿನ ವರ್ಗಾವಣೆಯೂ ಸೇರಿದಂತೆ ಸರ್ಕಾರದ ವೆಚ್ಚಗಳ ಬೆಳವಣಿಗೆಯು ಜಿಡಿಪಿಯ ಬೆಳವಣಿಗೆಯ ದರಕ್ಕಿಂತಲೂ ಕಡಿಮೆಯಾಗುವ ನಿರೀಕ್ಷೆಯಿದೆ. ರಾಜ್ಯಗಳ ಪಾಲು 2022-23ರಲ್ಲಿ (ಪರಿಷ್ಕೃತ) ಶೇ. 15.3ರಿಂದ ಶೇ. 14.9ಕ್ಕೆ ಇಳಿಯುವ ನಿರೀಕ್ಷೆಯಿದೆ.  ಈ ಇಳಿಕೆಯು, ವಿತ್ತೀಯ ಕೊರತೆಯ ಅನುಪಾತವು ಶೇ. 6.4ರಿಂದ ಶೇ. 5.9ಕ್ಕೆ ಇಳಿದಿರುವ ಅಂಶದೊಂದಿಗೆ ತಾಳೆಯಾಗುತ್ತದೆ.

ಬಳಕೆಯನ್ನು ಹಾಳತಗೊಳಿಸುವ ಕೇಂದ್ರದ ಕೃಪಣತನವನ್ನು ರಾಜ್ಯ ಸರ್ಕಾರಗಳಿಗೆ ಅದು ಮಾಡುವ ಹಣಕಾಸಿನ ವರ್ಗಾವಣೆಗಳ ಕುಸಿತದಲ್ಲೂ ಕಾಣಬಹುದು. 2021-22ರಲ್ಲಿ ರಾಜ್ಯಗಳಿಗೆ ಮಾಡಿದ ವರ್ಗಾವಣೆಯು 460,575 ಕೋಟಿ ರೂ.ಗಳಷ್ಟಿತ್ತು. ಇದು 2022-23ರಲ್ಲಿ 367,204 ಕೋಟಿಗೆ ಇಳಿಯಿತು. ಪರಿಷ್ಕೃತ ಅಂದಾಜಿನ ಪ್ರಕಾರ, ಈ ವರ್ಷ ಅದನ್ನು 307,204 ಕೋಟಿಗೆ ಇಳಿಸಲಾಗಿದೆ. ಪ್ರಸ್ತುತ ಬಜೆಟ್‌ನಲ್ಲಿ ಕೇವಲ 359,470 ಕೋಟಿ ರೂ.ಗಳನ್ನು ಒದಗಿಸಲಾಗಿದೆ. 2022-23ರಲ್ಲಿ ಕೊರತೆಯಾಗಿದ್ದ ಮೊತ್ತವನ್ನು ಈ ವರ್ಷ ತುಂಬಿಕೊಡಬೇಕಾಗಿತ್ತು. ಅದರ ಬದಲು, ಕಳೆದ ವರ್ಷದ ಬಜೆಟ್ ಅಂದಾಜಿಗಿಂತಲೂ ಕಡಿಮೆ ಹಣವನ್ನು ಒದಗಿಸಲಾಗಿದೆ. ಸಮಾಜ ಕಲ್ಯಾಣ ವೆಚ್ಚಗಳ ವಿಷಯದಲ್ಲಿ ರಾಜ್ಯ ಸರ್ಕಾರಗಳು ಹೆಚ್ಚಿನ ಜವಾಬ್ದಾರಿ ಹೊಂದಿರುವುದರಿಂದ, ಈ ವಿಷಯದಲ್ಲಿ ಸ್ವತಃ ಕೃಪಣನಾಗಿರುವ ಕೇಂದ್ರವು ಸಂಪನ್ಮೂಲಗಳನ್ನು ಉದ್ದೇಶಪೂರ್ವಕವಾಗಿ ಕೇಂದ್ರೀಕರಿಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರಗಳನ್ನೂ ಜಿಪುಣತನಕ್ಕಿಳಿಯುವ ಒತ್ತಾಯಕ್ಕೆ ಒಳಪಡಿಸಿದೆ. ಇಂತಹ ಒತ್ತಾಯವು ದೇಶದ ಒಕ್ಕೂಟ ಸಂರಚನೆಯನ್ನು ದುರ್ಬಲಗೊಳಿಸುತ್ತದೆ.

ಬಂಡವಾಳ ವೆಚ್ಚ ಏರಿಕೆ ಕಡಿಮೆ ಪರಿಣಾಮಕಾರಿ

ಜಿಡಿಪಿಗೆ ಹೋಲಿಸಿದರೆ ಕಡಿಮೆ ಅನುಪಾತದ ಕೇಂದ್ರದ ವೆಚ್ಚಗಳೊಳಗೆ, ಬಂಡವಾಳ ವೆಚ್ಚಗಳು ತೀವ್ರವಾಗಿ ಏರಿಕೆಯಾಗಿವೆ. ಬಂಡವಾಳ ವೆಚ್ಚಗಳನ್ನು 7.5 ಲಕ್ಷ ಕೋಟಿ ರೂ.ಗಳಿಂದ 10 ಲಕ್ಷ ಕೋಟಿ ರೂ.ಗಳಿಗೆ ಏರಿಸಿದ ಬಗ್ಗೆ ಹಣಕಾಸು ಸಚಿವರು ತಮ್ಮ ಭಾಷಣದಲ್ಲಿ ಬಹಳವಾಗಿ ಹೇಳಿಕೊಂಡಿದ್ದಾರೆ. ಈ ಏರಿಕೆಯು, ಭಾರತವನ್ನು ಪ್ರಸ್ತುತ ಬಾಧಿಸುತ್ತಿರುವ ನಿರುದ್ಯೋಗದ ಪಿಡುಗಿಗೆ ರಾಮಬಾಣವಾಗಿದೆ ಎಂದಿದ್ದಾರೆ. ಆದರೆ, ಅವರು ನಾಲ್ಕು ಮುಖ್ಯವಾದ ಅಂಶಗಳನ್ನು ಮರೆಮಾಚಿದ್ದಾರೆ: ಮೊದಲನೆಯದು, ಅದೇ ಪ್ರಮಾಣದ ಹಣವನ್ನು ಸಾಮಾಜಿಕ ವಲಯಗಳಗಾಗಿ ಖರ್ಚು ಮಾಡಿದರೆ, ಕನಿಷ್ಠ ಅದೇ ಪ್ರಮಾಣದ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಎರಡನೆಯದು, ಈ ಹಣವನ್ನು ಸಾಮಾಜಿಕ ವಲಯಗಳಿಗೆ ಖರ್ಚು ಮಾಡಿದ್ದರೆ ದುಡಿಯುವ ಜನರಿಗೆ ನೇರವಾಗಿ ಪ್ರಯೋಜನವಾಗುತ್ತಿತ್ತು – ಅವರ ನಿಜ ವೇತನಗಳು ಕುಸಿದಿವೆ ಎಂಬುದನ್ನು ಹಿಂದಿನ ದಿನ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಒಪ್ಪಿಕೊಳ್ಳಲಾಗಿತ್ತು. ಮೂರನೆಯದು, ದುಡಿಯುವ ಜನರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ (ಅಂದರೆ, ಸಾಮಾಜಿಕ ವಲಯದ ಮೇಲೆ ಮಾಡುವ ಹೆಚ್ಚಿನ ವೆಚ್ಚಗಳ ಮೂಲಕ) ಹೆಚ್ಚಿಸಿದಾಗ ಉಂಟಾಗುವ ವೆಚ್ಚಗಳು ಹೊಂದಿರುವ ಗುಣಕ ಪರಿಣಾಮಗಳು ಸಾರ್ವಜನಿಕ ಬಂಡವಾಳ ವೆಚ್ಚಗಳು ಉಂಟುಮಾಡುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗುತ್ತವೆ. ಆದ್ದರಿಂದ, ಬಂಡವಾಳ ವೆಚ್ಚಗಳಾಗಿ ಮಾಡುವ ಅದೇ ಮೊತ್ತದ ಖರ್ಚುಗಳನ್ನು ಸಾಮಾಜಿಕ ವಲಯದ ಮೇಲೆ ಮಾಡಿದಾಗ, ನಿರುದ್ಯೋಗದ ಮೇಲೆ ಸಾಮಾಜಿಕ ವಲಯದ ಖರ್ಚುಗಳು ಬೀರುವ ಪರಿಣಾಮವು ಬಹಳವಾಗಿರುತ್ತದೆ. ನಾಲ್ಕನೆಯದು, ದುಡಿಯುವ ಜನರ ಬಳಕೆ ಖರ್ಚುಗಳಿಗೆ ಉತ್ತೇಜನ ನೀಡಿದಾಗ ಸೃಷ್ಟಿಯಾಗುವ ಸಂದರ್ಭಕ್ಕಿಂತ ಭಿನ್ನವಾಗಿ, ಬಂಡವಾಳ ವೆಚ್ಚಗಳ ಒಂದು ಬಹು ದೊಡ್ಡ ಪಾಲು ವಿದೇಶಗಳಿಗೆ ಬಂಡವಾಳ ಸರಕುಗಳ ಆಮದಿನ ರೂಪದಲ್ಲಿ “ಸೋರಿಕೆಯಾಗುತ್ತದೆ”. ಈ ಅಂಶವು, ಈ ಎರಡು ವಿಧಾನಗಳ ವೆಚ್ಚಗಳು ಅಸಮಾನ ಉದ್ಯೋಗ ಪರಿಣಾಮಗಳನ್ನು ಹೊಂದಿವೆ ಎಂಬುದನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ.

ನವ ಉದಾರವಾದಿ ಆಳ್ವಿಕೆಯ ಇತ್ತೀಚಿನ ವರ್ಷಗಳಲ್ಲಿ ಬಂಡವಾಳ ವೆಚ್ಚದ ಯಂತ್ರಗಳ, ಉಪಕರಣಗಳ ಆಮದುಗಳ ಮೇಲೆ ಅವಲಂಬನೆ ಹೆಚ್ಚಾಗಿದೆ. ಇದು, ಇತ್ತೀಚೆಗೆ ನಾವು ನೋಡುತ್ತಿರುವ ಹೂಡಿಕೆ-ಆಧಾರಿತ ಚೇತರಿಕೆಯ ಹೊರತಾಗಿಯೂ, ದೇಶೀಯ (ಬಂಡವಾಳ ವೆಚ್ಚದ) ಯಂತ್ರ, ಉಪಕರಣಗಳ ವಲಯ ಬೆಳವಣಿಗೆ ಕಾಣದಿರಲು ಮುಖ್ಯವಾದ ಕಾರಣವಾಗಿದೆ. ದೇಶೀಯ ಬಂಡವಾಳ ಸರಕುಗಳ ಉತ್ಪಾದನಾ ವಲಯಕ್ಕೆ ಬೆಂಬಲವಿಲ್ಲದ ಪರಿಸ್ಥಿತಿಯಲ್ಲಿ, ಬೃಹತ್‌ ಬಂಡವಾಳ ವೆಚ್ಚಗಳು ದೇಶದಲ್ಲಿ ಉದ್ಯೋಗಗಳನ್ನು ಗಮನಾರ್ಹ ಪ್ರಮಾಣದಲ್ಲಿ ಸೃಷ್ಟಿಸುತ್ತವೆ ಎಂದು ನಿರೀಕ್ಷಿಸುವುದು ಕೇವಲ ಒಂದು ಭ್ರಮೆಯಾಗುತ್ತದೆ. ಆಮದುಗಳನ್ನು ಕಡಿಮೆ ಮಾಡುವ ಮೂಲಕ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವುದರ ಬದಲು, ಬಜೆಟ್, ಅನೇಕ ರೀತಿಯ ಆಮದುಗಳ ಮೇಲೆ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಿದೆ. ಈ ಪರಿಸ್ಥಿತಿಯಲ್ಲಿ, ಬಂಡವಾಳ ವೆಚ್ಚಗಳನ್ನು ಹೆಚ್ಚಿಸುವ ಪ್ರಸ್ತಾಪವು ಉದ್ಯೋಗಗಳನ್ನು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸುತ್ತದೆ ಎಂದು ಹೇಳುವುದು ವಿತಂಡವಾದವಾಗುತ್ತದೆ.

ಅದಕ್ಕಿಂತಲೂ ಹೆಚ್ಚಾಗಿ, ಬೃಹತ್‌ ಬಂಡವಾಳ ವೆಚ್ಚಗಳು ಅಥವಾ ಬೃಹತ್‌ ಸಾಮಾಜಿಕ ವೆಚ್ಚಗಳ ಮೂಲಕ ಖರ್ಚು ಮಾಡುವ ಈ ಎರಡು ವಿಧಾನಗಳ ನಡುವೆ, ಮೊದಲನೆಯದು ಹೆಚ್ಚು ಆಮದು-ಕೇಂದ್ರಿತವಾಗಿರುವುದರಿಂದ,  ದೇಶವು ಸಾಗುತ್ತಿರುವ ಪಾವತಿ ಶೇಷದ ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸುತ್ತದೆ. ರೂಪಾಯಿಯ ಭಾರಿ ಅಪಮೌಲ್ಯದ ಹೊರತಾಗಿಯೂ, ವಿಶ್ವ ಆರ್ಥಿಕ ಹಿಂಜರಿತದಿಂದಾಗಿ ಭಾರತದ ರಫ್ತು ಬೆಳವಣಿಗೆಯು ಕುಂಠಿತಗೊಂಡಿದೆ ಮತ್ತು ಮಾಹಿತಿ ಲಭ್ಯವಿರುವ ಇತ್ತೀಚಿನ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇ. 4ಕ್ಕಿಂತಲೂ ಹೆಚ್ಚಿಗೆ ಇದೆ. ಬಂಡವಾಳ ವೆಚ್ಚಗಳನ್ನು ಹೆಚ್ಚಿಸುವ ಬದಲು ಸಾಮಾಜಿಕ ವೆಚ್ಚಗಳನ್ನು ಹೆಚ್ಚಿಸಿದ್ದರೆ ಸರ್ಕಾರವು ಒಂದೇ ಕಲ್ಲಿನಿಂದ ಕನಿಷ್ಠ ಮೂರು ಹಕ್ಕಿಗಳನ್ನು ಕೊಲ್ಲಬಹುದಿತ್ತು: ಅದು ಜನರ ಸ್ಥಿತಿ-ಗತಿಗಳನ್ನು ನೇರವಾಗಿ ಸುಧಾರಿಸುತ್ತಿತ್ತು; ಅದು ಉದ್ಯೋಗಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಸುತ್ತಿತ್ತು; ಮತ್ತು, ಅದು ಪಾವತಿ ಶೇಷದ ಪ್ರಸ್ತುತ ಕೊರತೆಯನ್ನು ನಿಯಂತ್ರಣದಲ್ಲಿಡುತ್ತಿತ್ತು. ಇದಕ್ಕೆ ಬದಲಾಗಿ, ಬಜೆಟ್‌ ಅತಿ ಕೆಟ್ಟದಾದ ಆಯ್ಕೆಯನ್ನು ಆರಿಸಿಕೊಂಡಿದೆ.

ಸರ್ಕಾರದ ಆದಾಯವನ್ನು ಹೆಚ್ಚಿಸುವ ಗಂಭೀರ ಕ್ರಮಗಳಿಲ್ಲ

ಇಲ್ಲಿಯವರೆಗೆ ನಾನು ಸರ್ಕಾರದ ಮುಂದಿದ್ದ ಎರಡು ಆಯ್ಕೆಗಳನ್ನು ಮಾತ್ರ ಹೋಲಿಕೆ ಮಾಡಿದ್ದೇನೆ. ಅದು ಕೆಟ್ಟದನ್ನು ಆರಿಸಿಕೊಂಡಿದೆ ಎಂದು ವಾದಿಸಿದ್ದೇನೆ. ಆದರೆ, ಸರ್ಕಾರವು ಈ ಎರಡು ಆಯ್ಕೆಗಳಿಗೆ ಮಾತ್ರ ಸೀಮಿತಗೊಂಡಿಲ್ಲ. ಸರ್ಕಾರದ ಅಂದಾಜಿನ ಪ್ರಕಾರವೇ, ಜಿಡಿಪಿಯೊಂದಿಗೆ ಸರ್ಕಾರದ ಆದಾಯದ ಅನುಪಾತವು ಪ್ರಸಕ್ತ ಹಣಕಾಸು ವರ್ಷಕ್ಕೆ ಹೋಲಿಸಿದರೆ ಮುಂದಿನ ವರ್ಷವೂ ಬದಲಾಗದಿರುವ ಸಾಧ್ಯತೆಯಿದೆ. ಆದಾಯ ಮತ್ತು ಸಂಪತ್ತಿನ ಅಸಮಾನತೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿರುವ ಸಂಗತಿಯು ಎಲ್ಲರಿಗೂ ತಿಳಿದಿದೆ. ಹೆಚ್ಚುತ್ತಿರುವ ಅಸಮಾನತೆಯ ಈ ಕಾಲಘಟ್ಟದಲ್ಲಿ, ಸಂಪತ್ತಿನ ತೆರಿಗೆ ಇಲ್ಲದ ಸಂದರ್ಭದಲ್ಲೂ, ಜಿಡಿಪಿಯೊಂದಿಗೆ ತೆರಿಗೆ ಆದಾಯದ ಅನುಪಾತವು ಅನಿವಾರ್ಯವಾಗಿ ಹೆಚ್ಚಳವನ್ನು ತೋರಿಸುವಂತಿರಬೇಕು; ಶ್ರೀಮಂತರ ಸಂಪತ್ತಿನ ಮೇಲೆ ತೆರಿಗೆ ವಿಧಿಸುವುದು ಅಥವಾ ಅವರಿಂದ ಬೇರೆ ಯಾವ ರೀತಿಯಲ್ಲಾದರೂ ಸರಿಯೇ ಆದಾಯವನ್ನು ಸಂಗ್ರಹಿಸುವ ಬಗ್ಗೆ ಒಂದು ಸ್ಪಷ್ಟತೆ ಇರಬೇಕಾಗುತ್ತದೆ. ಆದರೆ, ಈ ಬಜೆಟ್‌ನಲ್ಲಿರುವ ಗಮನಾರ್ಹವಾದ ಸಂಗತಿಯೆಂದರೆ, ಸರ್ಕಾರದ ಆದಾಯವನ್ನು ಹೆಚ್ಚಿಸುವ ಗಂಭೀರ ಕ್ರಮಗಳು ಇಲ್ಲದಿರುವುದು..

ವೇತನ ಪಡೆಯುವ ಕೆಲವು ನಿರ್ದಿಷ್ಟ ವಿಭಾಗಗಳಿಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಎರಡು ಅರ್ಥಗಳಲ್ಲಿ ಸರ್ಕಾರದ ದೃಷ್ಟಿದೋಷವು ಆಶ್ಚರ್ಯಕರವಾಗಿ ಕಾಣುತ್ತದೆ: ಒಂದು, ತೀವ್ರವಾಗಿ ಹೆಚ್ಚುತ್ತಿರುವ ಆದಾಯ ಮತ್ತು ಸಂಪತ್ತಿನ ಅಸಮಾನತೆಗಳ ಕಾಲಮಾನದಲ್ಲಿ ಜಿಡಿಪಿಯ ಅನುಪಾತವಾಗಿ ಸರ್ಕಾರದ ಆದಾಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯದ ಬಗ್ಗೆ ಅದು ತೋರಿದ ಸಂಪೂರ್ಣ ಉದಾಸೀನತೆ; ಮತ್ತು ಎರಡನೆಯದಾಗಿ, ದುಡಿಯುವ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬಲ್ಲ ಬೃಹತ್‌ ಸಾಮಾಜಿಕ ವೆಚ್ಚಗಳನ್ನು ಕೈಗೊಳ್ಳುವ ಅಗತ್ಯದ ಬಗ್ಗೆ ಅದು ತೋರಿದ ಸಂಪೂರ್ಣ ಉದಾಸೀನತೆ. ಈ ಕ್ರಮಗಳಿಗೆ ಬದಲಾಗಿ, ಬಂಡವಾಳ ವೆಚ್ಚಗಳ ಮೇಲೆ ಅದು ಒತ್ತು ನೀಡುತ್ತದೆ – ಅದರ ಉದ್ಯೋಗ ಸೃಷ್ಟಿಯ ಪರಿಣಾಮವು ಹೆಚ್ಚಾಗಿ ವಿದೇಶಗಳಿಗೆ ಸೋರಿಕೆಯಾಗುತ್ತದೆಯಾದರೂ.

ಈ ಬಜೆಟ್‌ ದೃಷ್ಟಿದೋಷದಿಂದ ಕೂಡಿದೆ ಎಂದು ಭಾವಿಸುವುದು, ಅದನ್ನು ನಾನು ಈಗಾಗಲೇ ಹೇಳಿದ್ದೇನೆ, ಬಹುಶಃ ಮುಖ್ಯವಾದ ಅಂಶವನ್ನೇ ಮರೆತುಬಿಟ್ಟಂತಾಗುತ್ತದೆ. ಮೂಲಸೌಕರ್ಯ ವಲಯವು “ಬಂಟ ಬಂಡವಾಳಶಾಹಿಗಳು” (crony capitalists) ವಿಶೇಷ ಆಸಕ್ತಿಯನ್ನು ಹೊಂದಿರುವ ವಲಯವಾಗಿದೆ. ಹಾಗಾಗಿ, ಮೂಲಸೌಕರ್ಯಗಳ ಮೇಲಿನ ವೆಚ್ಚಗಳು “ಆಪ್ತರಿಗೆ” ಸಹಾಯ ಮಾಡುವ ಒಂದು ಮಾರ್ಗವಷ್ಟೇ. ಈ ನಿರ್ದಿಷ್ಟ ಸರ್ಕಾರವು, ಅದರ ಹಿಂದಿನ ಸಾಧನೆಯ ಆಧಾರದ ಮೇಲೆ ಹೇಳುವುದಾದರೆ, ದುಡಿಯುವ ಜನರ ಹಿತಾಸಕ್ತಿಗಳ ಮಾತಿರಲಿ, ದೇಶದ ಒಟ್ಟಾರೆ ಆರ್ಥಿಕ ಹಿತಾಸಕ್ತಿಗಳನ್ನು ತನ್ನ ಬಂಟ ಬಂಡವಾಳಶಾಹಿಗಳ ಹಿತಾಸಕ್ತಿಗಳಿಗಿಂತ ಮಿಗಿಲಾಗಿ ಪರಿಗಣಿಸುತ್ತದೆ ಎಂದು ನಿರೀಕ್ಷಿಸಲಾಗದು.

Donate Janashakthi Media

Leave a Reply

Your email address will not be published. Required fields are marked *