ದೆಹಲಿ: ದೇಶದ ವಿವಿಧೆಡೆ ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಎದುರಾಗಿರುವ ಕಲ್ಲಿದ್ದಲು ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಅಪಾಯಗಳನ್ನು ಮನಗಂಡಿರುವ ಭಾರತ ಸರ್ಕಾರ ಕಲ್ಲಿದ್ದಲು ತುರ್ತು ಸಾಗಣೆಗೆ ಒತ್ತು ನೀಡಿದೆ.
ಕಲ್ಲಿದ್ದಲು ಸಾಗಣೆ ಮಾಡುವ ಗೂಡ್ಸ್ ರೈಲುಗಳ ಸಂಚಾರಕ್ಕಾಗಿ ಭಾರತೀಯ ರೈಲ್ವೆ ಹಲವು ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ದೇಶದ ವಿವಿಧ ರಾಜ್ಯಗಳು ಕಲ್ಲಿದ್ದಲು ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮೇ 24ರವರೆಗೆ ಒಟ್ಟು 1,100 ಪ್ಯಾಸೆಂಜರ್ ರೈಲುಗಳನ್ನು ರದ್ದುಪಡಿಸಿರುವುದಾಗಿ ಭಾರತೀಯ ರೈಲ್ವೆ ತಿಳಿಸಿದೆ. ಎಕ್ಸ್ಪ್ರೆಸ್ ರೈಲುಗಳ 500, ಪ್ಯಾಸೆಂಜರ್ ರೈಲುಗಳ 580 ಟ್ರಿಪ್ಗಳನ್ನು ರದ್ದುಪಡಿಸಲಾಗಿದೆ. ಕಳೆದ ಏಪ್ರಿಲ್ 29ರಂದು 240 ರೈಲುಗಳನ್ನು ರದ್ದುಪಡಿಸಿ ರೈಲ್ವೆ ಇಲಾಖೆಯು ಆದೇಶ ಹೊರಡಿಸಿತ್ತು. ಪ್ರಸ್ತುತ ಕಲ್ಲಿದ್ದಲು ಸಾಗಣೆಗೆ ಮೀಸಲಿರುವ ಸುಮಾರು 400 ರೈಲುಗಳು ದೇಶಾದ್ಯಂತ ಸಂಚರಿಸುತ್ತಿವೆ.
ಈ ತಿಂಗಳ ಮಧ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಬಹುದು ಎಂದು ಕೇಂದ್ರ ಸರ್ಕಾರವು ಅಂದಾಜಿಸಿದೆ. ಹೀಗಾಗಿ ವಿವಿಧ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲು ಸಾಗಣೆ ಪ್ರಮಾಣ ಹೆಚ್ಚಿಸಲು ಒತ್ತು ನೀಡುತ್ತಿದೆ. ಇದರ ನಡುವೆ ದೇಶೀಯ ಕಲ್ಲಿದ್ದಲು ಘಟಕಗಳಲ್ಲಿ ಕಾರ್ಮಿಕರು ಮುಷ್ಕರ ನಡೆಸಿದ್ದು, ತಮ್ಮ ಕಾರ್ಮಿಕರ ಪರವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸುತ್ತಿವೆ. ಕೇಂದ್ರ ಸರ್ಕಾರ ಕೂಡಲೇ ಕಾರ್ಮಿಕರಿಗೆ ಸ್ಪಂದಿಸಬೇಕೆಂದು ಆಗ್ರಹಗಳು ಕೇಳಿ ಬರುತ್ತಿವೆ.
ದೆಹಲಿ, ರಾಜಸ್ತಾನ, ಪಂಜಾಬ್, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ವಿದ್ಯುತ್ ಕೊರತೆ ಸಮಸ್ಯೆ ತೀವ್ರವಾಗಿದೆ. ಮುಂದಿನ ದಿನಗಳಲ್ಲಿ ಇದೇ ರಾಜ್ಯಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ವಿದ್ಯುತ್ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ.
ದೇಶದಲ್ಲಿರುವ ಒಟ್ಟು 173 ಶಾಖೋತ್ಪನ್ನ ಘಟಕಗಳ ಪೈಕಿ, 108 ಘಟಕಗಳಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆ ಎದುರಾಗಿದೆ. ಮುಂದಿನ ಕೆಲವೇ ದಿನಗಳ ಬೇಡಿಕೆ ಪೂರೈಸುವ ಸಾಮರ್ಥ್ಯ ಈ ಘಟಕಗಳಿಗೆ ಇವೆ.