ಸಂಪ್ರದಾಯಶರಣ ಆರ್ಥಿಕ ನೀತಿಯ ಅಸಂಬದ್ಧತೆ – ಬಂಡವಾಳಶಾಹಿಗಳಿಗೂ ಈಗ ಗೋಚರಿಸುತ್ತಿದೆ

ಪ್ರೊ. ಪ್ರಭಾತ್ ಪಟ್ನಾಯಕ್

ದೊಡ್ಡ ಉದ್ಯಮಿಗಳ ಒಕ್ಕೂಟವಾದ ಸಿ... ಅಧ್ಯಕ್ಷರೂ ನಗದು ವರ್ಗಾವಣೆಯ ಬಗ್ಗೆ ಮಾತಾಡಿದ್ದಾರೆ. ಸರ್ಕಾರವು ತನ್ನ ವಿತ್ತೀಯ ಕೊರತೆಯನ್ನು ತುಂಬಿಕೊಳ್ಳಲು ನೋಟು ಮುದ್ರಿಸುವುದರಲ್ಲಿ ಯಾವುದೇ ತಪ್ಪು ಬ್ಯಾಂಕಿಂಗ್ ಉದ್ದಿಮೆದಾರ ಉದಯ್ ಕೋಟಕ್ ಅಂಥವರಿಗೂ ಸಹ ಕಾಣುತ್ತಿಲ್ಲ. ಸಂಪ್ರದಾಯಶರಣ ಆರ್ಥಿಕ ನೀತಿಯ ಅಸಂಬದ್ಧತೆಯು, ಬಂಡವಾಳಶಾಹಿಗಳಿಗಂತೂ ಈಗ ಸ್ಪಷ್ಟವಾಗುತ್ತಿದೆ. ಜನರ ಕೊಳ್ಳುವ ಶಕ್ತಿಯ ಅಭಾವದಿಂದ ಉಂಟಾದ ಅರ್ಥವ್ಯವಸ್ಥೆಯ ಸಮಸ್ಯೆಗೆ ನಗದು ವರ್ಗಾವಣೆ ಒಂದು ಪರಿಹಾರವಾಗಿ ಗೋಚರಿಸುತ್ತಿದೆ. ಆದರೂ ಮೋದಿ ಸರಕಾರಕ್ಕೆ ಕಾಣುತ್ತಿಲ್ಲ. ಅದು ಒಂದು ಬಿಡಿಗಾಸಿನ ನಗದು ವರ್ಗಾವಣೆಯನ್ನೂ ಮಾಡಿಲ್ಲ, ಈಗಲೂ ಅದಕ್ಕೆ ಸಿದ್ಧವಿಲ್ಲ.

ವಿಶ್ವದಲ್ಲೇ ಅತ್ಯಂತ ಗೊಡ್ಡು ಸಂಪ್ರದಾಯಶರಣ ಆರ್ಥಿಕ ನೀತಿಗಳನ್ನು ಮೋದಿ ಸರ್ಕಾರ ಅನುಸರಿಸುತ್ತಿದೆ ಎಂದು ಹೇಳಲಡ್ಡಿಯಿಲ್ಲ. ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಲಕ್ಷಾಂತರ ಜನರು ತಮ್ಮ ಆದಾಯಗಳನ್ನು ಮತ್ತು ಉದ್ಯೋಗ/ವ್ಯವಹಾರಗಳನ್ನು ಕಳೆದುಕೊಂಡಾಗ, ವಿಶ್ವದ ಬಹುತೇಕ ಸರ್ಕಾರಗಳು ತಮ್ಮ ತಮ್ಮ ದೇಶಗಳ ಜನರಿಗೆ ನಗದು ವರ್ಗಾವಣೆಗಳನ್ನು ಸಾರ್ವತ್ರಿಕವಾಗಿ ಒದಗಿಸಿದವು. ಆದರೆ, ಭಾರತದಲ್ಲಿ ಒಂದು ಬಿಡಿಗಾಸಿನ ನಗದು ವರ್ಗಾವಣೆಯನ್ನೂ ಮೋದಿ ಸರ್ಕಾರವು ಮಾಡಲಿಲ್ಲ.

ಮೂರನೆಯ ಜಗತ್ತಿನ ಅನೇಕ ದೇಶಗಳೂ ಸಹ ಸಾರ್ವತ್ರಿಕ ನಗದು ವರ್ಗಾವಣೆಗಳನ್ನು ಒದಗಿಸಲಿಲ್ಲ, ನಿಜ. ಆದರೆ, ಅದನ್ನು ಮಾಡದಂತೆ ಅವರ ಕೈಗಳನ್ನು ಕಟ್ಟಿಹಾಕಲಾಗಿತ್ತು. ವಿಪರೀತವಾಗಿ ಬಾಹ್ಯ ಸಾಲ ಮಾಡಿಕೊಂಡಿದ್ದ ಈ ದೇಶಗಳ ಹಳೆಯ ಸಾಲಗಳನ್ನು ನವೀಕರಿಸಿಕೊಳ್ಳುವ ಸಂದರ್ಭದಲ್ಲಿ, ಐಎಂಎಫ್ ನಂತಹ ಏಜೆನ್ಸಿಗಳು ಹೇರಿದ್ದ ಮಿತವ್ಯಯ ನೀತಿಗಳನ್ನು ಪಾಲಿಸುವ ಷರತ್ತುಗಳನ್ನು ಒಪ್ಪಿಕೊಂಡಿದ್ದ ಕಾರಣದಿಂದಾಗಿ, ಈ ಸರ್ಕಾರಗಳು ಜನರಿಗೆ ನಗದು ವರ್ಗಾವಣೆ ಮಾಡಲಾಗಲಿಲ್ಲ. ಆದರೆ, ಭಾರತವು ಇಂತಹ ಯಾವುದೇ ಬಾಹ್ಯ ಒತ್ತಡಕ್ಕೂ ಒಳಗಾಗಿರಲಿಲ್ಲ. ಆದರೂ ಸಹ, ಆದಾಯ/ಉದ್ಯೋಗ/ವ್ಯವಹಾರ ಕಳೆದುಕೊಂಡವರಿಗೆ ಒಂದು ರೂಪಾಯನ್ನೂ ಮೋದಿ ಸರ್ಕಾರವು ನಗದಾಗಿ ವರ್ಗಾವಣೆ ಮಾಡಲಿಲ್ಲ.

ಇದನ್ನು ಓದಿ: ನವ ಉದಾರ ವಿತ್ತೀಯ ಆಳ್ವಿಕೆಯ ವಿಕೃತಿ-1

ಜನರ ಸಂಕಷ್ಟಗಳ ಬಗ್ಗೆ ತೋರಿದ ಈ ಪರಿಯ ಅಸಡ್ಡೆಯು ಇಡಿಯಾಗಿ ಮೋದಿ ಸರ್ಕಾರದ ನಿರ್ಧಾರವೇ ಆಗಿದೆ. ಇದಕ್ಕೆ ಕಾರಣ ಸಂಪ್ರದಾಯಶರಣ ಧೋರಣೆಯಲ್ಲಿ  ಮೋದಿ ಸರ್ಕಾರವು ಇಟ್ಟಿರುವ ಕುರುಡು ನಂಬಿಕೆ. ಈ ರೀತಿಯ ಸಂಪ್ರದಾಯಶರಣತೆಯ ದಿವಾಳಿಕೋರತನ ಈಗ ಎಲ್ಲರಿಗೂ ಕಾಣಿಸುತ್ತಿದೆ.

ವಿತ್ತೀಯ ಕೊರತೆಯನ್ನು ನಿಯಂತ್ರಿಸಲು ಮತ್ತು ಹಣದುಬ್ಬರವನ್ನು ತಗ್ಗಿಸಲು ಸರ್ಕಾರದ ಖರ್ಚು-ವೆಚ್ಚಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲಾಗುತ್ತದೆ. ಆದರೆ ಸರ್ಕಾರದ ವೆಚ್ಚಗಳನ್ನು ಹಿಡಿತಗೊಳಿಸಿದರೂ ಸಹ, ಮೇ ತಿಂಗಳಲ್ಲಿ ಸಗಟು ಹಣದುಬ್ಬರವು 12.94% ಮತ್ತು ಚಿಲ್ಲರೆ ಹಣದುಬ್ಬರವು 6.30% ಮಟ್ಟದಲ್ಲಿದ್ದವು. ಜಿಡಿಪಿ ಹೋಲಿಕೆಯ ಲೆಕ್ಕದಲ್ಲಿ ನೋಡಿದರೂ ಸಹ ವಿತ್ತೀಯ ಕೊರತೆಯು ಗಗನಮುಖಿಯಾಗಿದೆ. ಕಾರ್ಪೊರೇಟ್ ವಲಯಕ್ಕೆ ನೀಡಲಾದ ಬೃಹತ್ ತೆರಿಗೆ ರಿಯಾಯಿತಿಗಳ ಹಿನ್ನೆಲೆಯಲ್ಲಿ, ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಅರ್ಥವ್ಯವಸ್ಥೆಯು ಚೇತರಿಸಿಕೊಳ್ಳುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದ ಬೆಳವಣಿಗೆ ದರವು ಏಪ್ರಿಲ್‌ನಲ್ಲಿ 4.3% ರಿಂದ ಮೇ ತಿಂಗಳಲ್ಲಿ 3.1%ಗೆ ಇಳಿದಿದೆ. ಅದೇ ರೀತಿಯಲ್ಲಿ, ಸಂಪ್ರದಾಯಶರಣ ಆರ್ಥಿಕ ನೀತಿಗಳ ಅನುಸರಣೆಯ ಮೂಲಕ ಜಾಗತೀಕರಣಗೊಂಡ ಹಣಕಾಸು ಬಂಡವಾಳವನ್ನು ಸಂಪ್ರೀತಗೊಳಿಸುವ ಮೂಲಕ ಬಂಡವಾಳವು ಒಳಹರಿಯುವಂತೆ ಆಕರ್ಷಿಸುವ ಮೂಲಕ ವಿದೇಶಿ ವಿನಿಮಯ ದರವನ್ನು ಉಳಿಸಿಕೊಳ್ಳಬಹುದು ಎಂದು ಭಾವಿಸಲಾಗಿತ್ತು. ಆದರೆ, ರೂಪಾಯಿ (ವಿದೇಶಿ ವಿನಿಮಯ ದರವು) ಇತ್ತೀಚೆಗೆ ಸಾಕಷ್ಟು ಒತ್ತಡಕ್ಕೆ ಒಳಗಾಗಿದೆ. ಸಂಪ್ರದಾಯಶರಣ ಆರ್ಥಿಕ ನೀತಿಗಳು ಯಾವ ಫಲಿತಾಂಶವನ್ನು ಉಂಟುಮಾಡಬೇಕಾಗಿತ್ತೋ ಅದಕ್ಕೆ ತದ್ವಿರುದ್ಧವಾದ ಫಲಿತಾಂಶಗಳನ್ನು ಉಂಟುಮಾಡುತ್ತಿವೆ. ಈಗ, ಸ್ವತಃ ಬಂಡವಾಳಗಾರರೂ ಸಹ ಈ ಪರಿಸ್ಥಿತಿಯಿಂದಾಗಿ ಬೇಸತ್ತಿದ್ದಾರೆ. ಯಾವ ವರ್ಗದ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಈ ಸಂಪ್ರದಾಯಶರಣ ಆರ್ಥಿಕ ನೀತಿಗಳನ್ನು ಅನುಸರಿಸಲಾಗುತ್ತಿತ್ತೋ, ಅದೇ ವರ್ಗವೇ ಈಗ ಈ ನೀತಿಗಳನ್ನು ಬಹಿರಂಗವಾಗಿ ವಿರೋಧಿಸುತ್ತಿದೆ.

ಬಡವರಿಗೆ ನೆರವಾಗಲಿಕ್ಕಾಗಿ ಇಂಧನ ಬೆಲೆಯೇರಿಕೆ!-ಸಂಪ್ರದಾಯಶರಣ ಆರ್ಥಿಕ ನೀತಿಯ ಅಸಮಬದ್ಧ ತರ್ಕ!!  ಏನಾದರೂ ದೂರು ಇದ್ದರೆ ಪೆಟ್ರೋಲ್ ಪಂಪಿನವನನ್ನು ಕೇಳು! “ಇಂಧನ ಬೆಲೆಯೇರಿಕೆ ಬಡವರಿಗೆ ನೆರವಾಗಲಿಕ್ಕಾಗಿ”    ವ್ಯಂಗ್ಯಚಿತ್ರ: ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್

ಭಾರತದ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಪ್ರಸ್ತುತ ಅಧ್ಯಕ್ಷರಾಗಿರುವ ಟಾಟಾ ಸಮೂಹದಲ್ಲಿ ಒಂದು ಉನ್ನತ ಹುದ್ದೆಯಲ್ಲಿವ ಟಿ.ವಿ. ನರೇಂದ್ರನ್ ಅವರು ಸಿಐಐ ಪರವಾಗಿ ಒಂದು ಪ್ರಸ್ತಾಪವನ್ನು ಮಂಡಿಸಿದ್ದಾರೆ. ನೇರ ನಗದು ವರ್ಗಾವಣೆಯನ್ನೂ ಒಳಗೊಂಡಂತೆ ಒಟ್ಟು 3 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಉತ್ತೇಜನವನ್ನು ಒದಗಿಸುವಂತೆ ಸೂಚಿಸಿದ್ದಾರೆ. ಹಾಗಾಗಿ, ನಗದು ವರ್ಗಾವಣೆಯ ಪ್ರಸ್ತಾಪವನ್ನು ಈಗ ಕೇವಲ ಅರ್ಥಶಾಸ್ತ್ರಜ್ಞರು, ವಿರೋಧಿ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳು ಮಾತ್ರ ಮಾಡುತ್ತಿಲ್ಲ, ಬಂಡವಾಳಗಾರರ ಸಂಘಟನೆಗಳೂ ಸೇರಿದಂತೆ ಎಲ್ಲರೂ ಮಾಡುತ್ತಿದ್ದಾರೆ. ಅವರೆಲ್ಲರೂ ಒಂದೇ ರೀತಿಯ ಸಲಹೆಯನ್ನು ಕೊಡುತ್ತಿದ್ದಾರೆ ಎಂಬುದು ಈ ಮಾತಿನ ಅರ್ಥವಲ್ಲ. ಆದರೆ, ಅವರೆಲ್ಲರೂ, ಮೋದಿ ಸರ್ಕಾರವನ್ನು ಹೊರತುಪಡಿಸಿ, ಎಲ್ಲರಿಗೂ ಸ್ಪಷ್ಟವಾಗಿ ಗೋಚರಿಸುವ ಒಂದು ಅಂಶವನ್ನು ಗುರುತಿಸುತ್ತಿದ್ದಾರೆ. ಅದು ಯಾವುದೆಂದರೆ, ಸಂಕಷ್ಟದಲ್ಲಿರುವ ಜನರಿಗೆ ನೇರ ನಗದು ವರ್ಗಾವಣೆ. ಅರ್ಥವ್ಯವಸ್ಥೆಯು ಇಂದು ಎದುರಿಸುತ್ತಿರುವ ನಿಜವಾದ ಸಮಸ್ಯೆ ಯಾವುದೆಂದರೆ, ಜನರ ಕೈಯಲ್ಲಿ ಕೊಳ್ಳುವ ಶಕ್ತಿಯ ಅಭಾವ. ಜನರ ಕೊಳ್ಳುವ ಶಕ್ತಿಯ ಅಭಾವದಿಂದ ಉಂಟಾದ ಅರ್ಥವ್ಯವಸ್ಥೆಯ ಸಮಸ್ಯೆಯನ್ನು ನಗದು ವರ್ಗಾವಣೆಗಳನ್ನು ಒದಗಿಸುವ ಮೂಲಕ ಸರಿಪಡಿಸಬಹುದು. ಅರ್ಥಶಾಸ್ತ್ರಜ್ಞರು, ವಿರೋಧಿ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳು ಮತ್ತು ಬಂಡವಾಳಗಾರರ ಸಂಘಟನೆಗಳು, ಈ ಎಲ್ಲರಿಗೂ ನೇರ ನಗದು ವರ್ಗಾವಣೆಯು ಒಂದು ಪರಿಹಾರವಾಗಿ ಗೋಚರಿಸುತ್ತಿರುವ ವಿದ್ಯಮಾನಕ್ಕೆ ವ್ಯತಿರಿಕ್ತವಾಗಿ, ಜನರಿಗೆ ಕೊಳ್ಳುವ ಶಕ್ತಿಯನ್ನು ತುಂಬುವುದರಿಂದ ಪ್ರಯೋಜನವಾಗುವುದಿಲ್ಲ, ಏಕೆಂದರೆ, ಅದು ದೊಡ್ಡ ಬಳಕೆಯಾಗಿ ಪರಿಣಮಿಸುವುದಿಲ್ಲ ಎಂಬ ಅಸಂಬದ್ಧ ತರ್ಕವನ್ನು ಸರ್ಕಾರಿ ಅರ್ಥಶಾಸ್ತ್ರಜ್ಞರು ಮಂಡಿಸುತ್ತಾರೆ!

ಇದನ್ನು ಓದಿ: ಬಡವರ ಬಗ್ಗೆ ಕಾಳಜಿಯೇ ಇಲ್ಲದ ಮೋದಿ ಸರ್ಕಾರ

ಕೇವಲ ವಿತ್ತೀಯ ಕೊರತೆಯನ್ನು ವಿಸ್ತರಿಸುವುದಷ್ಟೇ ಸಾಲದು, ಅದನ್ನು ಸರಿದೂಗಿಸಲು ಬೇಕಾಗುವಷ್ಟು ಹಣವನ್ನು ಮುದ್ರಿಸುವಂತೆ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಒಡೆಯ ಉದಯ್ ಕೋಟಕ್ ಅವರು ಮಾಡಿರುವ ಸಲಹೆಯೂ ಸಹ ಅಷ್ಟೇ ಗಮನಾರ್ಹವಾಗಿದೆ. ಅವರ ಈ ಸಲಹೆಯು ಸಂಪ್ರದಾಯಶರಣ ಅರ್ಥಶಾಸ್ತ್ರಜ್ಞರಿಗೆ ಕರ್ಣಕಠೋರವಾಗಿದೆ. ವಿತ್ತೀಯ ಕೊರತೆಯ ವಿಸ್ತರಣೆಗೆ ವ್ಯತಿರಿಕ್ತವಾದ ನಿಲುವನ್ನು ಸರ್ಕಾರವು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ವ್ಯಕ್ತಪಡಿಸಿದೆ. ಕೋವಿಡ್-19ರಿಂದ ಸತ್ತವರಿಗೆ ಪರಿಹಾರ ಕೊಡಲು ತನ್ನ ಬಳಿ ಹಣವಿಲ್ಲ ಎಂದು ಸರ್ಕಾರವು ಸುಪ್ರೀಂ ಕೋರ್ಟಿನಲ್ಲಿ ಹೇಳುತ್ತದೆ. ಕೇಂದ್ರ ಸರ್ಕಾರವೇ ಒದಗಿಸಿರುವ ಅಂಕಿ-ಅಂಶಗಳನ್ನೇ ಪರಿಷ್ಕರಿಸಿ ಲೆಕ್ಕ ಹಾಕಿದರೆ, ಕೋವಿಡ್-19ರಿಂದ ಸತ್ತವರ ಒಟ್ಟು ಸಂಖ್ಯೆಯು 4 ಲಕ್ಷವನ್ನು ದಾಟುವುದಿಲ್ಲ. ಒಬ್ಬ ವ್ಯಕ್ತಿಗೆ 4 ಲಕ್ಷ ರೂ.ಗಳ ಲೆಕ್ಕದಲ್ಲಿ ಒದಗಿಸಬೇಕಾಗುವ ಒಟ್ಟು ಪರಿಹಾರವು 16,000 ಕೋಟಿ ರೂ.ಗಳಾಗುತ್ತದೆ. ಸೆಂಟ್ರಲ್ ವಿಸ್ಟಾ ಯೋಜನೆಯಂತಹ ಬೃಹತ್, ಅನಗತ್ಯ ಮತ್ತು ಸಂಪೂರ್ಣ ವಿಧ್ವಂಸಕ ಯೋಜನೆಗಳಿಗಾಗಿ 20,000 ಕೋಟಿ ರೂ.ಗಳನ್ನು ಖರ್ಚು ಮಾಡಲು ಹೊರಟಿರುವ ಸರ್ಕಾರವು, ಕೋವಿಡ್ ಸಂತ್ರಸ್ತರಿಗೆ ಸಹಾಯ ನೀಡಲು ತನ್ನಲ್ಲಿ ಹಣವಿಲ್ಲ ಎಂದು ಹೇಳುವ ಅಂಶವು ಅದರ ನೈತಿಕ ಆದ್ಯತೆಗಳಿಗೆ ಅತ್ಯುತ್ತಮ ನಿದರ್ಶನವಾಗಿದೆ. ಆದರೆ, ಇಲ್ಲಿ ಪ್ರಸ್ತುತವಾದ ಅಂಶವೆಂದರೆ, ಸರ್ಕಾರವು ಕೊರತೆಯ ಹಣವನ್ನು ಮುದ್ರಿಸುವುದರಲ್ಲಿ ಯಾವುದೇ ತಪ್ಪು ಬ್ಯಾಂಕಿಂಗ್ ಉದ್ದಿಮೆದಾರ ಉದಯ್ ಕೋಟಕ್ ಅಂಥವರಿಗೂ ಸಹ ಕಾಣುವುದಿಲ್ಲ. ಈ ಅಂಶವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಕೋವಿಡ್ ಸಂತ್ರಸ್ತರಿಗೆ ಪರಿಹಾರ ಕೊಡಲು ತನ್ನಲ್ಲಿ ಹಣವಿಲ್ಲ ಎಂಬ ಸರ್ಕಾರದ ಹೇಳಿಕೆಯನ್ನು ಬಂಡವಾಳಗಾರರೂ ನಂಬುವುದಿಲ್ಲ.

ಇದ್ದಕ್ಕಿದ್ದಂತೆ ಬಂಡವಾಳಗಾರರು ಜನರ ಬಗ್ಗೆ ಒಲವು ಬೆಳೆಸಿಕೊಂಡಿದ್ದಾರೆ ಎಂದಲ್ಲ. ಅರ್ಥವ್ಯವಸ್ಥೆಯ ಪುನರುಜ್ಜೀವನಕ್ಕಾಗಿ ಸಂಕಷ್ಟಕ್ಕೊಳಗಾದ ಜನರಿಗೆ ನಗದು ವರ್ಗಾವಣೆ ಮಾಡುವ ಅಗತ್ಯವಿದೆ ಎಂಬುದನ್ನು ಭಾವಾವೇಶವಿಲ್ಲದ ಮತ್ತು ವಾಸ್ತವಿಕ ಅರಿವಿನ ಬಂಡವಾಳಗಾರರು ಮನಗಂಡಿದ್ದಾರೆ, ಅಷ್ಟೇ.

ಇದನ್ನು ಓದಿ: ಆರ್ಥಿಕ ಅವ್ಯವಸ್ಥೆಯ ವಕ್ರತೆಯನ್ನು ಸಪಾಟುಗೊಳಿಸುವುದು ಹೇಗೆ? ದಿಟ್ಟ ಚಿಂತನೆ ಮತ್ತು ತುರ್ತು ಕ್ರಮವಹಿಸುವುದೇ ಏಕೈಕ ದಾರಿ

ಮೋದಿ ಪ್ರತಿಪಾದಿಸುವ ಸಂಪ್ರದಾಯಶರಣ ಅರ್ಥಶಾಸ್ತ್ರದ ಹೀನ ಸ್ವಭಾವವನ್ನು ಅದು ಹೇಳುವ ಈ ಅಂಶದಲ್ಲಿ ಕಾಣಬಹುದು: ಅರ್ಥವ್ಯವಸ್ಥೆಯ ಪುನರುಜ್ಜೀವನಕ್ಕಾಗಿ ಜನರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬೇಕಾಗಿಲ್ಲ; ಅದನ್ನು ಇಳಿಕೆ ಮಾಡುವ ಅಗತ್ಯವಿದೆ ಎಂದು ಅದು ನಂಬುತ್ತದೆ. ಅದರ ತರ್ಕ ಹೀಗಿದೆ: ಅರ್ಥವ್ಯವಸ್ಥೆಯ ಚೇತರಿಕೆಗಾಗಿ ಸರ್ಕಾರದ ಖರ್ಚು-ವೆಚ್ಚಗಳನ್ನಾಗಲಿ ಅಥವಾ ಮೂಲಸೌಕರ್ಯಗಳಿಗೆ ಮೀಸಲಾದ ವೆಚ್ಚಗಳನ್ನಾಗಲಿ ಹೆಚ್ಚಿಸುವ ಅಗತ್ಯವಿಲ್ಲ. ವಿತ್ತೀಯ ಕೊರತೆಯನ್ನು ನಿಯಂತ್ರಿಸಿದರೆ, ಅಷ್ಟೇ ಸಾಕು. ಅಷ್ಟಾಗಿಯೂ, ಸರ್ಕಾರದ ವೆಚ್ಚಗಳನ್ನು ಹೆಚ್ಚಿಸಲೇಬೇಕಾದ ಅಗತ್ಯ ಬಿದ್ದರೆ, ಅದರ ಭಾರವನ್ನು ಬಂಡವಾಳಗಾರರ ಮೇಲೆ ಹೇರಲಾಗದು, (ಬದಲಿಗೆ, ತೆರಿಗೆ ರಿಯಾಯ್ತಿಗಳ ಮೂಲಕ ಅವರಿಗೆ ಉತ್ತೇಜನ ಒದಗಿಸಬೇಕಾಗುತ್ತದೆ), ಅದರ ಭಾರವನ್ನು ಕಾರ್ಮಿಕರೇ ಹೊರಬೇಕಾಗುತ್ತದೆ. ಪರೋಕ್ಷ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಈ ಕಾರ್ಯವನ್ನು ಉತ್ತಮವಾಗಿ ಸಾಧಿಸಬಹುದು.

ಈ ಚಿಂತನೆಯಲ್ಲಿ ಸ್ಪಷ್ಟವಾಗಿ ಕಾಣುವ ಒಂದು ದೋಷವೆಂದರೆ, ಕಾರ್ಮಿಕರ ತೆರಿಗೆಯ ಹೊರೆಯನ್ನು ಹೆಚ್ಚಿಸುವ ಮೂಲಕ ಸರ್ಕಾರವು ತನ್ನ ಖರ್ಚು-ವೆಚ್ಚಗಳನ್ನು ಹೆಚ್ಚಿಸಿಕೊಂಡಾಗ, ಒಟ್ಟು ಬೇಡಿಕೆಯಲ್ಲಿ ನಿವ್ವಳ ಹೆಚ್ಚಳವಾಗುವುದು ತೀರ ಕಡಿಮೆ, ಏಕೆಂದರೆ, ಕಾರ್ಮಿಕರು ತಮ್ಮ ಸಂಪಾದನೆಯನ್ನು ಸುಮಾರು ಪೂರ್ಣವಾಗಿಯೇ ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಅಂದರೆ, ಸರ್ಕಾರದ ವೆಚ್ಚಗಳು ಬೇಡಿಕೆಯಲ್ಲಿ ಏನಾದರೂ ಹೆಚ್ಚಳ ಸೃಷ್ಟಿಯಾದರೂ, ಕಾರ್ಮಿಕರ ಬಳಕೆಯಲ್ಲಿ ಇಳಿಕೆಯಾಗಿರುವುದರಿಂದಾಗಿ,  ಸರಿದೂಗಲ್ಪಡುತ್ತದೆ… ಇಂತಹ ಪರಿಸ್ಥಿತಿಗಳಲ್ಲಿ ಅರ್ಥವ್ಯವಸ್ಥೆಯು ಪುನಶ್ಚೇತನಗೊಳ್ಳಲು ಸಾಧ್ಯವಿಲ್ಲ.

ಅಷ್ಟೇ ಅಲ್ಲದೆ, ಪರೋಕ್ಷ ತೆರಿಗೆಗಳ ಮೂಲಕ ಕಾರ್ಮಿಕರು ಹಿಂಡಲ್ಪಡುವುದರಿಂದ, ಬೆಲೆಗಳಲ್ಲಿ ಏರಿಕೆ ಇರುತ್ತದೆ. ತೆರಿಗೆ-ತಳ್ಳಿದ ಈ ಹಣದುಬ್ಬರದಿಂದಾಗಿ, ತನ್ನ ಹಳೆಯ ಮಟ್ಟದ ನೈಜ ವೆಚ್ಚವನ್ನು ಕಾಪಾಡಿಕೊಳ್ಳಲೂ ಸಹ, ಸರ್ಕಾರದ ವೆಚ್ಚಗಳ ಮೊತ್ತ ರೂಪಾಯಿಗಳಲ್ಲಿ ಹೆಚ್ಚಬೇಕಾಗುತ್ತದೆ. ಬಂಡವಾಳಶಾಹಿಗಳ ವೆಚ್ಚಗಳೂ ಈ ರೀತಿ ಹೆಚ್ಚಬೇಕಾಗುತ್ತದೆ (ಕಾರ್ಮಿಕರು ಮಾತ್ರ ತಮ್ಮ ಖರ್ಚುಗಳನ್ನು ಈ ರೀತಿ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ನಿಖರವಾಗಿ ಈ ಕಾರಣದಿಂದಾಗಿಯೇ ಅವರು ಹಿಂಡಿಹಿಪ್ಪೆಯಾಗುತ್ತಾರೆ). ಆದ್ದರಿಂದ, ಸರ್ಕಾರವು ಮೂಲ ಬೆಲೆಗಳ ಮಟ್ಟದಲ್ಲಿ ಕೈಗೊಳ್ಳಲು ಉದ್ದೇಶಿಸಿದ ಹೆಚ್ಚುವರಿ ವೆಚ್ಚಗಳಿಗಿಂತಲೂ ಬಹು ಪಟ್ಟು ಹೆಚ್ಚುವರಿ ಪರೋಕ್ಷ ತೆರಿಗೆ ಆದಾಯವನ್ನು ಪಡೆಯಬೇಕಾಗುತ್ತದೆ. ಅಂದರೆ, ಹಣದುಬ್ಬರವು ಮೂಲತಃ ಅಗತ್ಯವೆಂದು ಕಂಡದ್ದಕ್ಕಿಂತ ದೊಡ್ಡ ಮಟ್ಟದಲ್ಲಿರುತ್ತದೆ. ಹಾಗಾಗಿ, ಗಮನಾರ್ಹ ಮಟ್ಟದ ಹಣದುಬ್ಬರಕ್ಕೆ ಒಳಗಾದ ಪರಿಸ್ಥಿತಿಯಲ್ಲಿ ಅರ್ಥವ್ಯವಸ್ಥೆಯು ವಿಸ್ತಾರಗೊಳ್ಳುವುದಿಲ್ಲ.

ಭಾರತದ ಅರ್ಥವ್ಯವಸ್ಥೆಯಲ್ಲಿ ಸಂಭವಿಸುತ್ತಿರುವುದು ಈ ವಿದ್ಯಮಾನವೇ. ಸರ್ಕಾರದ ವೆಚ್ಚಗಳು ಅರ್ಥವ್ಯವಸ್ಥೆಯನ್ನು ಉತ್ತೇಜಿಸುವುದು ದುರ್ಲಭವೇ. ಎಲ್ಲಕ್ಕಿಂತ ಹೆಚ್ಚಾಗಿ ಪೆಟ್ರೋ ಉತ್ಪನ್ನಗಳ ಮೇಲಿನ ಪರೋಕ್ಷ ತೆರಿಗೆಗಳ ಮೂಲಕ ಸರ್ಕಾರವು ತನ್ನ ಖರ್ಚು-ವೆಚ್ಚಗಳಿಗೆ ಹಣ ಹೊಂದಿಸಿಕೊಳ್ಳುವ ವಿಧಾನವು ಹಣದುಬ್ಬರವನ್ನು ಹರಿಯಬಿಟ್ಟಿದೆ. ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 100 ರೂ.ಗಿಂತಲೂ ಮೇಲಕ್ಕೆ ಏರಿಸಿರುವ ಕ್ರಮವು ಸಾರಭೂತವಾಗಿ ಬಡವರಿಗೆ ನೋವುಂಟುಮಾಡುತ್ತದೆ. ಅರ್ಥವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಪರೋಕ್ಷ ತೆರಿಗೆಗಳ ಮೂಲಕ ಕಾರ್ಮಿಕರನ್ನು ಹಿಂಡಿ ಹಿಪ್ಪೆ ಮಾಡುವ ಸರ್ಕಾರದ ಪ್ರಯತ್ನವು ಇಲ್ಲದ ಕೊಳ್ಳಿದೆವ್ವದ ಬೆನ್ನಟ್ಟಿಹೋದ ಪ್ರಯತ್ನವಾಗುತ್ತದೆ. ಆಗ ಹಣದುಬ್ಬರದ ಹಾವಳಿ ಮುಂದುವರಿಯುತ್ತದೆ. ಆರ್ಥಿಕ ಪುನರುಜ್ಜೀವನ ಸಾಧ್ಯವಾಗುವುದಿಲ್ಲ.

ಈ ಪರಿಸ್ಥಿತಿಯನ್ನು ಒಂದು ಪರ್ಯಾಯ ನೀತಿಯ ಪರಿಸ್ಥಿತಿಯೊಂದಿಗೆ ಹೋಲಿಸಿ ನೋಡೋಣ. ಸರ್ಕಾರವು 100 ರೂ.ಗಳನ್ನು ಬಡವರಿಗೆ ನೇರ ವರ್ಗಾವಣೆಯಾಗಿ ಖರ್ಚು ಮಾಡುತ್ತದೆ ಎಂದು ಭಾವಿಸೋಣ. ಬಡವರು ಸಂಪಾದಿಸಿದ ಈ 100 ರೂ.ಗಳನ್ನು ತಮಗೆ ಬೇಕಾದ ಸರಕು ಮತ್ತು ಸೇವೆಗಳನ್ನು ಖರೀದಿಸಲು ಖರ್ಚು ಮಾಡುತ್ತಾರೆ. ಬಂಡವಾಳಶಾಹಿಗಳು ತಮ್ಮ ಲಾಭದ ಆದಾಯದಿಂದ ಏನನ್ನೂ ಬಳಸುವುದಿಲ್ಲ ಮತ್ತು ಉತ್ಪಾದನೆಯಲ್ಲಿ ಅವರ ಪಾಲು ಅರ್ಧದಷ್ಟು ಎಂದು ಸರಳತೆಗಾಗಿ ಊಹಿಸಿಕೊಳ್ಳೋಣ. ಅನೇಕ ಸುತ್ತಿನ ವೆಚ್ಚಗಳ ಮೂಲಕ ಅರ್ಥವ್ಯವಸ್ಥೆಯಲ್ಲಿ ಸೃಷ್ಟಿಯಾದ ಒಟ್ಟು ಬೇಡಿಕೆಯು 200 ರೂ. ಮಟ್ಟ ತಲುಪಿದೆ. ಹೆಚ್ಚುವರಿಯಾಗಿ 200 ರೂ.ಗಳ ಸರಕು ಮತ್ತು ಸೇವೆಗಳೂ ಸಹ ಸೃಷ್ಟಿಯಾಗಿವೆ, ಬೆಲೆಗಳಲ್ಲಿ ಯಾವುದೇ ಹೆಚ್ಚಳವಿಲ್ಲದೆ. ಅದರಲ್ಲಿ ಅರ್ಧದಷ್ಟು ಲಾಭದ ಪಾಲು ಎಂಬ ಊಹೆಯಲ್ಲಿ, ಈ ಹೆಚ್ಚುವರಿ ಲಾಭದ 100 ರೂ.ಗಳು ಪುನಃ ಉಳಿಸಲ್ಪಡುತ್ತವೆ.

ಈಗ, ಸರ್ಕಾರವು ಈ ಹೆಚ್ಚುವರಿ 100 ರೂ. ಲಾಭದ ಮೇಲೆ ತೆರಿಗೆ ಹಾಕಿದರೆ, (1) ವಿತ್ತೀಯ ಕೊರತೆಯಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ; (2) ಆರಂಭಿಕ ಪರಿಸ್ಥಿತಿಗೆ ಹೋಲಿಸಿದರೆ, ಖಾಸಗಿ ಸಂಪತ್ತಿನಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ (ಏಕೆಂದರೆ ಸಂಪತ್ತಿಗೆ ಸೇರ್ಪಡೆಯಾಗುವ ಹೆಚ್ಚುವರಿ ಉಳಿತಾಯದ ಮೇಲೆ ತೆರಿಗೆ ವಿಧಿಸಲಾಗಿದೆ), ಆದ್ದರಿಂದ, ಸಂಪತ್ತಿನ ಹಂಚಿಕೆಯ ಪರಿಸ್ಥಿತಿಯೂ ಹದಗೆಡುವುದಿಲ್ಲ; (3) ಆರಂಭದ ವರ್ಗಾವಣೆಯ ಕ್ರಮ ಮತ್ತು ಅಧಿಕ ಉದ್ಯೋಗಗಳಿಂದಾಗಿ ಕಾರ್ಮಿಕರ ಸ್ಥಿತಿ-ಗತಿಗಳು ಸುಧಾರಿಸುತ್ತವೆ; ಮತ್ತು (4) ಈ ವಿಸ್ತರಣಾ ಕಾರ್ಯಕ್ರಮದಿಂದಾಗಿ ಹಣದುಬ್ಬರವೂ ಉಂಟಾಗುವುದಿಲ್ಲ.

ಕಾರ್ಮಿಕರ ಸ್ಥಿತಿ-ಗತಿಗಳನ್ನು ಹದಗೆಡಿಸುವ ಹಣದುಬ್ಬರವನ್ನು ಹರಿಯಬಿಡುವ ಮತ್ತು ಆರ್ಥಿಕ ಚೇತರಿಕೆಯನ್ನೂ ಸಾಧಿಸದ ಸಂಪ್ರದಾಯಶರಣ ಆರ್ಥಿಕ ನೀತಿಗೆ ವ್ಯತಿರಿಕ್ತವಾಗಿ, ಬಂಡವಾಳಶಾಹಿಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಕಾರ್ಮಿಕರಿಗೆ ವರ್ಗಾವಣೆಗಳನ್ನು ಮಾಡುವ ಪರ್ಯಾಯ ಆರ್ಥಿಕ ನೀತಿಯು ಹಣದುಬ್ಬರಕ್ಕೆ ಅವಕಾಶ ಕೊಡದ ರೀತಿಯಲ್ಲಿ ಆರ್ಥಿಕ ಚೇತರಿಕೆಯನ್ನು ಉಂಟುಮಾಡುತ್ತದೆ. ಅಲ್ಲದೆ, ಬಂಡವಾಳಶಾಹಿಗಳ ಮೇಲಿನ ತೆರಿಗೆಯು ಅವರಿಗೆ ಸಿಗುವ ಹೆಚ್ಚುವರಿ ಲಾಭವನ್ನು ಮಾತ್ರ ಕಬಳಿಸುವುದರಿಂದ, ಅವರ ಪರಿಸ್ಥಿತಿಯೂ ಸಹ ಮೊದಲಿಗಿಂತ ಕೆಟ್ಟದಾಗಲು ಸಾಧ್ಯವಿಲ್ಲ. ಸಂಪ್ರದಾಯಶರಣ ಆರ್ಥಿಕ ನೀತಿಯ ಅಸಂಬದ್ಧತೆಯು, ಮೋದಿ ಸರ್ಕಾರಕ್ಕೆ ಅಲ್ಲದಿದ್ದರೂ, ಬಂಡವಾಳಶಾಹಿಗಳಿಗಂತೂ ಈಗ ಸ್ಪಷ್ಟವಾಗುತ್ತಿದೆ.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *