ನಾಗರಿಕ ಸಮಾಜದ ಮೂಲಭೂತ ಸೌಲಭ್ಯಗಳಾದ ಸ್ವಚ್ಚತೆ, ಕುಡಿಯುವ ನೀರು, ಬೀದಿದೀಪ, ಪಾರ್ಕು, ಸ್ಮಶಾನಗಳ ನಿರ್ವಹಣೆಗೆ ನಗರ-ಪಟ್ಟಣಗಳಲ್ಲಿ ದುಡಿಯುವ ಮುನಿಸಿಪಲ್ ಕಾರ್ಮಿಕರಲ್ಲಿ 70-80% ರಷ್ಟು ಜನರನ್ನು ಖಾಯಂಮೇತರರಾಗಿ ದುಡಿಮೆ ಮಾಡುತ್ತಿದ್ದಾರೆ. ಈ ಕಾರ್ಮಿಕರ ಸೇವೆಯನ್ನು ಖಾಯಂ ಮಾಡಬೇಕೆಂದು ರಾಜ್ಯದ್ಯಂತ ಮುನಿಸಿಪಲ್ ಕಾರ್ಮಿಕರ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಅಡಿಯಲ್ಲಿ 4 ದಿನಗಳ ಕಾಲ ಯಶಸ್ವಿ ಮುಷ್ಕರ ನಡೆಸಿದರು.
ಪೌರ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಕರ್ನಾಟಕ ರಾಜ್ಯ ನಗರ ಪಾಲಿಕೆ, ಪುರಸಭೆ, ನಗರ ಸಭೆ, ಪೌರ ಕಾರ್ಮಿಕರ ಮಹಾ ಸಂಘ, ಬಿ.ಬಿ.ಎಂ.ಪಿ. ಪೌರ ಕಾರ್ಮಿಕರ ಸಂಘ(ಎಐಸಿಸಿಟಿಯು) ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ(ರಿ.)-ಸಿಐಟಿಯು, ಸಫಾಯಿ ಕರ್ಮಚಾರಿ ಕಾವಲು ಸಮಿತಿ, ಸ್ಲಂ ಜನಾಂದೋಲನ, ದಲಿತ ಸಂರ್ಘಷ ಸಮಿತಿ ಮತ್ತಿತರೆ ವಿವಿಧ ಸಂಘಟನೆಗಳು ಜಂಟಿಯಾಗಿ ಜುಲೈ 1 ರಿಂದ ಸ್ವಚ್ಚತೆಯ ಕೆಲಸವನ್ನು ಸ್ಥಗಿತ ಮಾಡಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದವು.
ಮುಷ್ಕರದ ಪರಿಣಾಮವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 3 ತಿಂಗಳಲ್ಲಿ ನೇರ ಪಾವತಿ, ಪೌರ ಕಾರ್ಮಿಕರಿಗೆ ಖಾಯಂಮಾಡುವ, ಬಿ.ಬಿ.ಎಂ.ಪಿ. ಹೊರತಾಗಿ ಬೇರೆಕಡೆ ಚಾಲ್ತಿಯಲ್ಲಿರುವ ಗುತ್ತಿಗೆ ಪದ್ದತಿಯನ್ನು ಹಂತಹAತವಾಗಿ ನೇರ ಪಾವತಿಯಡಿಯಲ್ಲಿ ತರಲಾಗುವುದು ಎಂಬ ಲಿಖಿತ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂಪಡೆದಿದ್ದಾರೆ.
ಪೌರ ಕಾರ್ಮಿಕರ ಖಾಯಂಮಾತಿಯ ಭರವಸೆ ಸ್ವಾಗತರ್ಹವಾದ್ದದು ಅದರೆ, ನಾಗರಿಕ ಸಮಾಜದ ಆರೋಗ್ಯಕ್ಕೆ ಬೇಕಾಗಿರುವವರು, ತಮ್ಮ ಜೀವವನ್ನು ಪಣಕ್ಕಿಟ್ಟು ದುಡಿಮೆ ಮಾಡುತ್ತಿದ್ದಾರೆ. ಮುನಿಸಿಪಲ್ ಕಾರ್ಮಿಕರನ್ನು ನೇರ ಪಾವತಿ, ಸಮಾನ ವೇನತ, ದಿನಗೂಲಿ, ಸಮಯಾವಧಿ, ಗುತ್ತಿಗೆ/ಹೊರ ಗುತ್ತಿಗೆ ಹೀಗೆ ವಿವಿಧ ಹೆಸರುಗಳಲ್ಲಿ ಕಡಿಮೆ ಕೂಲಿ ನೀಡಿ, ಸೌಲಭ್ಯಗಳಿಂದ ವಂಚಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ(ರಿ)-ಸಿಐಟಿಯು, ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ತಿಳಿಸಿದ್ದಾರೆ.
ಎಲ್ಲಾ ಖಾಯಂಮೇತರ ಕಾರ್ಮಿಕರನ್ನು ಖಾಯಂ ಮಾಡದೆ ಸರ್ಕಾರವೇ ಭರವಸೆ ಅಸ್ವಷ್ಟತೆಯಿಂದ ಕೂಡಿದೆ. ಇದು ಕಾರ್ಮಿಕರಲ್ಲಿ ಒಡಕು ಉಂಟುಮಾಡುವ ತಂತ್ರವಾಗಿದೆ. ಸರ್ಕಾರದ ಇಂತಹ ಕುಟಿಲನೀತಿ ಹಿಂದೆ ಆಧಿಕಾರಿಗಳ ಕೈವಾಡವಿದೆ ಎಂದು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ. ಹಾಗಾಗಿ, ಎಲ್ಲಾ ಪೌರ ಕಾರ್ಮಿಕರ ಸೇವೆಗಳನ್ನು ಖಾಯಂ ಮಾಡಿಸುಲು ಪ್ರಬಲ ಜಂಟಿ ಚಳುವಳಿ ಮುಂದುವರಿಯಬೇಕಾಗಿದೆ ಎಂದು ಕರೆ ನೀಡಿದರು.
ಕರ್ನಾಟಕ ಸರ್ಕಾರ ಎಪ್ಪತ್ತರ ದಶಕದಲ್ಲೇ ಪೌರಕಾರ್ಮಿಕರ ಸ್ಥಿತಿಗತಿಗಳ ಸುಧಾರಣೆಗಾಗಿ ಐಪಿಡಿ ಸಾಲಪ್ಪ ಅವರ ನೇತೃತ್ವದಲ್ಲಿ ಸಮಿತಿಯನ್ನು ನೇಮಿಸಿ ಅಧ್ಯಯನ ನಡೆಸಿ ಸಲ್ಲಿಸಿದ ವರದಿಯ ಪ್ರಸ್ತಾವನೆಯಲ್ಲಿರುವ ಅಂಶ ಹೀಗಿವೆ; “ನಮ್ಮ ದೇಶ ರಾಜಕೀಯ ಮತ್ತು ತಂತ್ರಜ್ಞಾನದಲ್ಲಿ ಸಾಧನೆ ಮಾಡಿದ್ದರೂ ಪೌರಕಾರ್ಮಿಕರ ಸಮುದಾಯ ಹೀನಾಯ ಪರಿಸ್ಥಿತಿಯಲ್ಲಿರುವುದಕ್ಕೆ ಮುಖ್ಯ ಕಾರಣ ದಪ್ಪ ಚರ್ಮ, ಯಾವುದೇ ದೂರದೃಷ್ಟಿ ಇಲ್ಲದ ಅಮಾನವೀಯ ವಿಧಾನಗಳು ಹಾಗೂ ಸಾರ್ವಜನಿಕರ ಉಪೇಕ್ಷೆ ಮತ್ತು ಉದಾಸೀನತೆಯೇ ಆಗಿದೆ” ಎನ್ನಲಾಗಿದೆ. 1976ರಲ್ಲಿ ಬಂದ ವರದಿಯಲ್ಲಿ ಹೇಳಿರುವ ಈ ಮಾತುಗಳು ಇಂದಿಗೂ ವಾಸ್ತವವೇ ಆಗಿ ಉಳಿದಿದೆ. ಸಾಲಪ್ಪ ವರದಿಯು 500 ಜನಸಂಖ್ಯೆಗೆ ಒಬ್ಬರು ಪೌರಕಾರ್ಮಿಕರನ್ನು ನೇಮಕ ಮಾಡಲು ಶಿಫಾರಸ್ಸು ಮಾಡಿತ್ತು. ಆಗ ಇದ್ದ ಜನಸಂಖ್ಯೆ ಮತ್ತು ಬೀಳುತ್ತಿದ್ದ ಕಸಕ್ಕೆ ಅನುಗುಣವಾಗಿ ಆ ಶಿಫಾರಸ್ಸನ್ನು ಮಾಡಲಾಗಿತ್ತು. ಈಗ ಬೆಂಗಳೂರಿನ ಜನಸಂಖ್ಯೆ ಕೋಟಿ ದಾಟಿದೆ. ದಿನ ಒಂದರಲ್ಲಿ ಬೀಳುವ ಕಸ 5000 ಟನ್. ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವ ಬದಲಿಗೆ 700 ಜನರಿಗೆ ಒಬ್ಬರನ್ನು ನೇಮಕ ಮಾಡಿರುವುದು ಕೆಲಸದ ಹೊರೆಯನ್ನು ಸೂಚಿಸುತ್ತದೆ.
1973ರಲ್ಲಿ ಬಿ.ಬಸವಲಿಂಗಪ್ಪನವರು ಪೌರಾಡಳಿತ ಸಚಿವರಾಗಿದ್ದಾಗ ಮಲಬಾಚುವ ಪದ್ಧತಿಯನ್ನು ನಿಷೇಧಿಸಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಮಲದ ಗುಂಡಿಗಳಲ್ಲಿ ಬಿದ್ದು 80ಕ್ಕೂ ಹೆಚ್ಚು ಜನ ಪೌರಕಾರ್ಮಿಕರು ತೀರಿಕೊಂಡಿದ್ದಾರೆ. ಘನತೆಯಿಂದ ಬದುಕಲು ಬೇಕಾದ ವೇತನ, ಅತ್ಯಗತ್ಯವಾದ ಸುರಕ್ಷಾ ಸಲಕರಣೆಗಳು, ರಜೆ, ಕುಡಿಯುವ ನೀರು, ಶೌಚಾಲಯ ಇತ್ಯಾದಿ ಇಲ್ಲದೆ ದಾರುಣವಾಗಿ ಬದುಕುವಂತಹ ಸ್ಥಿತಿ ಪೌರಕಾರ್ಮಿಕರದಾಗಿದೆ. 2017ರಲ್ಲಿ ಗುತ್ತಿಗೆ ವ್ಯವಸ್ಥೆ ಎಂಬ ಆಧುನಿಕ ಜೀತಪದ್ಧತಿಯಿಂದ ಮುಕ್ತಗೊಳಿಸಲಾಯಿತು. ಆದರೆ ಖಾಯಮಾತಿ ಮಾಡುವ ಭರವಸೆ ಮಾತ್ರ ಅಲ್ಲೇ ನಿಂತುಹೋಗಿದೆ.
ಕೋವಿಡ್ ಸಂಕಟಮಯ ಸ್ಥಿತಿಯಲ್ಲಿಯೂ ಪ್ರಾಣ ಪಣಕ್ಕಿಟ್ಟು ಜನರ ಕಾಪಾಡಲು ದುಡಿದ ನೇರ ಪಾವತಿ, ಗುತ್ತಿಗೆ ಪೌರಕಾರ್ಮಿಕರು, ದಿನಾಗೂಲಿ ಲೋರ್ಸ್, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ, ಪಾರ್ಕ್, ಸ್ಮಶಾಣ, ಘನ ತ್ಯಾಜ್ಯ ಘಟಕ, ಯು.ಜಿ.ಡಿ. ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು, ನೀರು ಸರಬರಾಜು ಕಾರ್ಮಿಕರಿಗೆ ಕಾನೂನು ಬದ್ಧವಾಗಿ ಸಿಗಬೇಕಾದ ಉದ್ಯೋಗ ಭದ್ರತೆಯಾಗಲಿ, ಆರೋಗ್ಯಕರ ಕೆಲಸದ ವಾತಾವರಣ, ಗ್ಲೋವ್ಸ್-ಗಂಬೂಟ್ಸ್, ರೈನ್ ಕೋಟ್ ನಂತಹ ಸುರಕ್ಷಾ ಸಲಕರಣೆಗಳನ್ನಾಗಲಿ ಕೊಡುವ ಇಚ್ಚಾಶಕ್ತಿಯನ್ನು ಸರ್ಕಾರ ತೋರುತ್ತಿಲ್ಲ. ಬದಲಿಗೆ ಬಡವರ ಬೆವರಿನಲ್ಲಿ ಲಾಭಮಾಡಿಕೊಳ್ಳಲು ಗುತ್ತಿಗೆದಾರ ಪರ ಕೆಲಸ ಮಾಡುತ್ತಾ ಬಂದಿದೆ. ನಾಗರಿಕ ಸಮಾಜದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ದುಡಿಯುವ ಮುನಿಸಿಪಲ್ ಕಾರ್ಮಿಕರಲ್ಲಿ 70-80% ರಷ್ಟುಜನರನ್ನು ಖಾಯಂಮೇತರರಾಗಿ ದುಡಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ(ರಿ)-ಸಿಐಟಿಯು, ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ತಿಳಿಸಿದ್ದಾರೆ.
ಅಭೂತ ಪೂರ್ವ ಐಕ್ಯತೆ ತೋರಿದ ಮುನಿಸಿಪಲ್ ನೌಕರರು
ಮುಷ್ಕರ ಅರಂಭದ ದಿನದಿಂದಲೂ ಪೌರ ಕಾರ್ಮಿಕರು, ಕಸದ ಅಟೋ ಚಾಲಕರು, ಸಹಾಯಕರು, ಯುಜಿಡಿ ಕಾರ್ಮಿಕರು, ನೀರು ಸರಬರಾಜು ನೌಕರರು, ಚಾಲಕರು, ಒಳ ಚರಂಡಿ ನೀರು ಮತ್ತು ಘನ ತ್ಯಾಜ್ಯ ವಿಲೆವಾರಿ ಘಟಕದ, ಸ್ಮಶಾಣ, ಪಾರ್ಕ, ಕಛೇರಿ, ಕಂಪೂಟರ್ ಅಪರೇಟರಗಳು ಎಲ್ಲಾರು ಐಕ್ಯತೆಯಿಂದ ಮುಷ್ಕರದಲ್ಲಿ ಭಾಗಿಯಾಗಿ ಹಗಲು-ರಾತ್ರಿ ಧರಣಿ ನಡೆಸಿದರು. ರಾಜ್ಯದ ಮೂಲೆ-ಮೂಲೆಗಳಲ್ಲಿ ಬೆಂಬಲ ವ್ಯಕ್ತಪಡಿಸಿದರು. ಸುರಿವ ಮಳೆಯನ್ನು ಲೆಕ್ಕಿಸದೆ ಬೆಂಗಳೂರು, ಉತ್ತರ ಕನ್ನಡ, ತುಮಕೂರು, ಬೆಳಗಾಂ, ಹಾಸನ, ಮಂಡ್ಯ, ಬಾಗಲಕೋಟೆ, ಬಳ್ಳಾರಿ, ದಾರವಾಡ, ಕೋಲಾರ, ಚಿಕ್ಕಬಳ್ಳಪುರ, ಚಿತ್ರದುರ್ಗ, ದಾವಣಗರೆ, ಕೊಪ್ಪಳ, ರಾಯಚೂರು, ವಿಜಯಪುರ, ಮತ್ತಿತರೆ ಜಿಲ್ಲೆಗಳಲ್ಲಿ ಕೆಲಸ ಸ್ಥಗಿತಗೊಳಿಸಿ ಧರಣಿಯಲ್ಲಿ ಭಾಗಿಯಾಗಿದ್ದರು.
ಮುಷ್ಕರದಲ್ಲಿನ ನೌಕರ ನಡುವೆ ಒಡಕು ಮೂಡಿಸಿ-ಬೆದರಿಕೆ ಒಡ್ಡಿ ಮುಷ್ಕರ ಮುರಿಯಲು ಕೆಲ ಜಿಲ್ಲೆಗಳಲ್ಲಿ ಅಧಿಕಾರಿಗಳು ನಡೆಸಿದ ಪ್ರಯತ್ನಗಳನ್ನು ವಿಫಲಗೊಳಿಸಿದ ಮುನಿಸಿಪಲ್ ಕಾರ್ಮಿಕರು ಅಂಜದೆ ಅಭೂತ ಪೂರ್ವ ಐಕ್ಯತೆ ಪ್ರದರ್ಶಿಸಿದರು.
ಇದರ ಪರಿಣಾಮ ಮುಷ್ಕರ ಅರಂಭವಾದ ದಿನ ಮತ್ತು ಸರ್ಕಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಚಳುವಳಿಯ ನಾಯಕರ ಜೊತೆಯಲ್ಲಿ ಸಭೆಯನ್ನು ನಡೆಸಿದೆ. ಸಭೆಯಲ್ಲಿ ನೇರ ಪಾವತಿ ಪೌರ ಕಾರ್ಮಿಕರ ಸೇವೆಗಳನ್ನು ಖಾಯಂ ಮಾಡಬೇಕಾಗಿ ತಾತ್ವಿಕ ಒಪ್ಪಿಗೆ ಮಾತ್ರ ನೀಡಿದ ಸಭಾ ನಡವಳಿಕೆ ಲಿಖಿತ ಪತ್ರಿಗಳನ್ನು ನೀಡಿದ್ದರು ಇದನ್ನು ಒಪ್ಪದ ಸಂಘಟನೆಗಳು ಮುಷ್ಕರವನ್ನು ಮುಂದುವರಿಸಿದರು. ನಂತರ ಮತ್ತೆ ಜುಲೈ 04ರಂದು ಸಭಾ ನಡವಳಿಕೆಯ ಲಿಖಿತ ಪ್ರತಿಯನ್ನು ನೀಡಲಾಗಿದೆ. ಸರ್ಕಾರ ನೇಮಕಾತಿ ನಿಯಮಗಳಲ್ಲಿ ಮಾರ್ಪಾಡು ಮಾಡಿ ಸಚಿವ ಸಂಪುಟ/ಉಭಯ ಸದನಗಳಲ್ಲಿ ಅನುಮೋದನೆಯನ್ನು ಮೂರು ತಿಂಗಳಲ್ಲಿ ಪಡೆಯುವುದಾಗಿ ತಿಳಿಸಿದೆ. ಪೌರ ಕಾರ್ಮಿಕರ ಕಾನೂನಾತ್ಮಕ ರಕ್ಷಣೆಗೆ ವಿಶೇಷ ಕಾಯ್ದೆ ಮಾಡಲಾಗುವುದು ಎಂದು ಸಹ ತಿಳಿಸಿದೆ.
ಐ.ಪಿ.ಡಿ. ಸಾಲಪ್ಪ ಮತ್ತು ಚಂದ್ರಶೇಖರ್ ಸಮಿತಿಯ ವರದಿ ಮತ್ತು ರಾಷ್ಟ್ರೀಯ ಕಾನೂನು ಶಾಲೆಯ ವರದಿಗಳ ಅಧಾರದಲ್ಲಿ ಮುನಿಸಿಪಲ್ ಕಾರ್ಮಿಕರ ಸಮಸ್ಯೆಗಳು ಸರ್ಕಾರಕ್ಕೆ ಮನವರಿಕೆಯಾಗಿದೆ – ಮಾನವಿಯತೆಯಿಂದ ಸ್ಪಂಧಿಸಲಿದೆ, ಸಮಾನ ಕೆಲಸಕ್ಕೆ ಸಮಾನ ವೇತನದ ಬೇಡಿಕೆ ಕುರಿತು ಸರ್ಕಾರ ನೇಮಿಸುವ ಸಮಿತಿಯು ಪರಿಶೀಲಿಸಲಿದೆ ಎಂದು ಭರವಸೆ ನೀಡಿದೆ.
ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ರೈತ ವಿದ್ಯಾನಿಧಿ ಮಾದರಿಯಲ್ಲಿ ವಿದ್ಯಾರ್ಥಿ ವೇತನ – ಮಹಿಳಾ ಕಾರ್ಮಿಕರಿಗೆ ಸರ್ಕಾರಿ ನೌಕರರಿಗೆ ನೀಡುವಂತೆ ಹೆರಿಗೆ ರಜೆ, ವಿಶ್ರಾಂತಿ ಕೊಠಡಿ ನೀಡಲು ಒಪ್ಪಿದೆ. ಇತರೆ ಕಡೆಗಳಲ್ಲಿನ ಗುತ್ತಿಗೆ ಪದ್ದತಿಯನ್ನು ಹಂತ-ಹಂತವಾಗಿ ನೇರವಾವತಿಯಡಿಯಲ್ಲಿ ತರಲಾವುದು ಇದರ ಜಾರಿಗೆ ಜಂಟಿ ಸಮಿತಿಯ ಮುತುರ್ವಜಿಯು ಸರ್ಕಾರ ಇಚ್ಚಾಶಕ್ತಿಯಷ್ಟೆ ಮುಖ್ಯವಾಗಿದೆ.
ಈ ಐತಿಹಾಸಿಕ ಮುಷ್ಕರವು ಒಂದು ಹೆಜ್ಜೆ ಮುಂದು ತಂದಿದೆ. ಸರ್ಕಾರ ನೀಡಿರುವ ಅಶ್ವಾಸನೆಗಳನ್ನು ಕಾರ್ಯರೂಪಕ್ಕೆ ಇಳಿಸುವ ಮತ್ತು ಇತರೆ ಗುತ್ತಿಗೆ ಅಡಿಯಲ್ಲಿರುವ ಎಲ್ಲಾ ಮುನಿಸಿಪಲ್ ಕಾರ್ಮಿರಕರ ಸೇವೆ ಖಾಯಂಗೆ ಪ್ರಯತ್ನಗಳ ಮುಂದುವರಿಸುವ ಹೋಣೆಗಾರಿಕೆ ಜಂಟಿ ಸಮಿತಿಯ ಮೇಲಿದೆ ಎಂದು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ(ರಿ)-ಸಿಐಟಿಯು, ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ತಿಳಿಸಿದ್ದಾರೆ.