ಸಫಾಯಿ ಕರ್ಮಚಾರಿ-ಪೌರ ಕಾರ್ಮಿಕರ ಅನಿರ್ಧಿಷ್ಟಾವಧಿ ಮುಷ್ಕರ

ಬೆಂಗಳೂರು: ಸಫಾಯಿ ಕರ್ಮಚಾರಿ, ಪೌರ ಕಾರ್ಮಿಕರ ಸಂಘಟನೆಗಳ ಜಂಟಿ ಹೋರಾಟ ಸಮಿತಿ ವತಿಯಿಂದ ರಾಜ್ಯದಲ್ಲಿ ನೇರ ಪಾವತಿ, ಗುತ್ತಿಗೆ ಪೌರ ಕಾರ್ಮಿಕರು, ದಿನಕೂಲಿ ಲೋಡರ್ಸ್‌ಗಳು, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತೆ, ಉದ್ಯಾನವನ, ಸ್ಮಶಾಣ, ಘನತ್ಯಾಜ್ಯ ಘಟಕ, ಯು.ಜಿ.ಡಿ., ನೀರು ಸಂಸ್ಕರಣಾ ಘಟಕದ ಕಾರ್ಮಿಕರು, ನೀರು  ಸರಬರಾಜು ನೌಕರರನ್ನು ಒಂದೇ ಬಾರಿಗೆ ಖಾಯಂಗೊಳಿಸಲು ಒತ್ತಾಯಿಸಿ ಇಂದು (ಜುಲೈ 1) ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಸ್ವಚ್ಛತಾ ಕಾರ್ಯಗಳನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದರು.

ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಎಲ್ಲಾ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂದು ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘಟನೆಗಳು – ಸಫಾಯಿಕರ್ಮಚಾರಿ ಸಂಘಟನೆಗಳು ಆಗ್ರಹಿಸಿದವು.

ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳಾ ಪೌರ ಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ಹೆರಿಗೆ ರಜೆ, ಬಾಲವಾಡಿ, ವಿಶ್ರಾಂತಿ ಗೃಹದಂತಹ ಅತ್ಯವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಡ್ಡಾಯವಾಗಿ ರಾಜ್ಯದ ಎಲ್ಲಾ ಕಡೆ ನೀಡಬೇಕೆಂದು ಸರ್ಕಾರ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.

ನಿರಂತರ ಹೋರಾಟದ ಫಲವಾಗಿ 2016-17ರಲ್ಲಿ ಅಂದಿನ ಸರಕಾರ ಗುತ್ತಿಗೆ ಪದ್ದತಿ ರದ್ದುಪಡಿಸಿ ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಖಾಯಂ ಮಾಡುವ ನಿರ್ಣಯ ತೆಗೆದುಕೊಂಡಿತು. ಈ ನಿಯಮಾನುಸಾರ ಗುತ್ತಿಗೆ ಪದ್ಧತಿ ರದ್ದಾದ ಕೂಡಲೇ ಎಲ್ಲ ಕಾರ್ಮಿಕರನ್ನು ವಿಲೀನಗೊಳಿಸಿ ಖಾಯಂಗೊಳಿಸಬೇಕು. ಆದರೆ ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾಡಳಿತ ನಿರ್ದೇಶನಾಲಯದ ದಲಿತ ಪೌರ ಕಾರ್ಮಿಕರ ವಿರೋಧಿ ಅಧಿಕಾರಿಗಳು, ಸಚಿವ ಸಂಪುಟದ ನಿರ್ಣಯವನ್ನು ಯಥಾವತ್ತಾಗಿ ಅನುಷ್ಟಾನ ಮಾಡದೆ, ಪೌರಕಾರ್ಮಿಕರ ವಿಶೇಷ ನೇಮಕಾತಿ ನಿಯಮಗಳು-2017 ಎಂಬ ಪೌರಕಾರ್ಮಿಕರ ಬದುಕುಗಳನ್ನು ನಾಶ ಮಾಡುವಂತಹ ಮತ್ತೊಂದು ಹೊಸ ನಿಯಮ ಜಾರಿ ಮಾಡಿದರು.

ಹೊಸ ನಿಯಮಗಳ ಅಡಿ ಕಸ ಗುಡಿಸುವವರು, ಕಸವನ್ನು ಮನೆಗಳಿಂದ ಸಂಗ್ರಹಿಸುವವರು, ಟ್ರ್ಯಾಕ್ಟರ್, ಲಾರಿ ಅಥವಾ ಆಟೋಗಳಿಗೆ ಕಸ ತುಂಬುವವರನ್ನು, ಲೋಡರ್ಸ್‌ ಕಸ ಸಾಗಿಸುವವರನ್ನು ಚಾಲಕರು, ಮತ್ತು ಒಳಚರಂಡಿ ಸ್ವಚ್ಚಗೊಳಿಸುವ ಯು.ಜಿ.ಡಿ. ಕಾರ್ಮಿಕರು ಎಂದು ವಿಂಗಡಿಸಲಾಗಿದೆ. ಈ ವಿಂಗಡಣೆಯ ಅನುಸಾರ ಅಧಿಕಾರಿಗಳು ಪೊರಕೆ ಹಿಡಿದು ಕಸ ಗುಡಿಸುವವರನ್ನು ಮಾತ್ರ ಪೌರ ಕಾರ್ಮಿಕರೆಂದು ಪರಿಗಣಿಸಿ ಬೇರೆ ಕಾರ್ಮಿಕರನ್ನು ಪ್ರತ್ಯೇಕಗೊಳಿಸಿದ್ದಾರೆ. ಆದರೆ ಕಸವನ್ನು ತೆರವು ಮಾಡುವ ಕೆಲಸದಲ್ಲಿ ತೊಡಗಿರುವ ಎಲ್ಲರನ್ನೂ ನಾವು ಪೌರಕಾರ್ಮಿಕರು/ಸ್ವಚ್ಛತಾ ಕಾರ್ಮಿಕರು ಎನ್ನುತ್ತೇವೆ. ಗುತ್ತಿಗೆ ಪದ್ಧತಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬುದು ಈ ವಿಂಗಡಣೆಯ ಹಿಂದಿನ ದುರುದ್ದೇಶವಾಗಿದೆ. ಗುತ್ತಿಗೆ ಪದ್ಧತಿ ರದ್ದುಪಡಿಸಲು ಇಷ್ಟವಿಲ್ಲದ ಅಧಿಕಾರಿಗಳು ಗುತ್ತಿಗೆದಾರರು ನೀಡುವ ಕಮಿಷನ್‌ ಆಸೆಗಾಗಿ ಅವರೊಂದಿಗೆ ಶಾಮೀಲಾಗಿದ್ದಾರೆ. ಸ್ವಚ್ಛತೆ ಕೆಲಸದಲ್ಲಿ ತೊಡಗಿರುವ ಪೌರ ಕಾರ್ಮಿಕರೆಲ್ಲರನ್ನೂ ಅಸಂಬದ್ಧ ಗುಂಪುಗಳಾಗಿ ವಿಂಗಡಿಸಿದ್ದಾರೆ ಎಂದು ಸಂಘಟನೆಗಳು ಹೇಳಿದೆ.

ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳಾದ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸ್ವಚ್ಛತಾ ಕೆಲಸವನ್ನು ಹೊರ ಗುತ್ತಿಗೆಗೆ ನೀಡಲಾಗಿದೆ. ಕಾರ್ಮಿಕರನ್ನು ಅಪಾರವಾಗಿ ಶೋಷಿಸುವ ಗುತ್ತಿಗೆ ಪದ್ಧತಿಯು ಸರ್ಕಾರವೇ ನಡೆಸುತ್ತಿರುವ ಗುಲಾಮಿ ಪದ್ಧತಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪೌರ ಕಾರ್ಮಿಕರಿಗಾಗಿ ಜಾರಿ ಮಾಡಿರುವ ಗೃಹ ಭಾಗ್ಯ ಯೋಜನೆಯನ್ನು ಕೇವಲ ಖಾಯಂ ಪೌರಕಾರ್ಮಿಕರಿಗೆ ಸೀಮಿತ ಮಾಡಿ ಶೇ.85 ರಷ್ಟು ಸ್ವಚ್ಛತಾ ಕಾರ್ಮಿಕರಿಗೆ ತಾರತಮ್ಯ ಮಾಡಲಾಗಿದೆ. ಆದ್ದರಿಂದ ಎಲ್ಲಾ ಕಾರ್ಮಿಕರನ್ನು ಗೃಹ ಭಾಗ್ಯ ಯೋಜನೆಗೆ ಸೇರಿಸಬೇಕು.

ಕಾರ್ಮಿಕ ಮಕ್ಕಳು ಖಾಸಗಿ ಶಾಲೆ-ಕಾಲೇಜುಗಳಲ್ಲಿಯೂ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಅದಕ್ಕೆ ಅಗತ್ಯವಿರುವ ಹಣಕಾಸಿನ ನೆರವು ನೀಡಲು ಸೂಕ್ತ ಅದೇಶ ಹೊರಡಿಸಬೇಕು,

ಕಾರ್ಮಿಕರ  ಕಾನೂನುಗಳ ಅನ್ವಯ  8  ಗಂಟೆ  ಕೆಲಸ , ಹೆಚ್ಚುವರಿ ಕೆಲಸಕ್ಕೆ  ಹೆಚ್ಚುವರಿ ವೇತನ,  ವಾರದ  ರಜೆ, ಸಂದಾರ್ಭಿಕ ರಜೆ,  ಗಳಿಕೆ  ರಜೆ, ಸಂಬಳದ  ಚೀಟಿ, ಗುರುತಿನ ಚೀಟಿ, ಪಿ.ಎಫ್/ಇ.ಎಸ್.ಐ. ಪಾವತಿಗಳನ್ನು ಕಡ್ಡಾಯವಾಗಿ  ಜಾರಿ ಮಾಡಬೇಕು.

ರಾಜ್ಯಾದ್ಯಂತ ನಗರ ಪ್ರದೇಶಗಳು(ನಗರ ಸ್ಥಳೀಯ ಸಂಸ್ಥೆಗಳು) ಮತ್ತು ಗ್ರಾಮೀಣಭಾಗಗಳಲ್ಲಿ (ಗ್ರಾಮ ಪಂಚಾಯಿತಿಗಳು) ಮತ್ತು ಖಾಸಗಿ ವಲಯಗಳಲ್ಲಿ (ಬಸ್‌ ನಿಲ್ದಾಣ, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು, ಕಂಪನಿಗಳು, ದೊಡ್ಡ ಕಛೇರಿಗಳು, ವಸತಿ ಗೃಹಗಳು, ಹೋಟೆಲ್ ಇತ್ಯಾದಿ ಕಡೆಗಳಲ್ಲಿ) ಸ್ವಚ್ಛತಾ ಕೆಲಸಗಳನ್ನು ಮಾಡುತ್ತಿರುವ ಸಾವಿರಾರು ಸ್ವಚ್ಛತಾ ಕಾರ್ಮಿಕರಿಗೆ ನೇಮಕಾತಿ, ವೇತನ ಮತ್ತು ಇತರ ಸಾಮಾಜಿಕ ಭದ್ರತೆಗಾಗಿ ಬೇಕಾದ ಸೂಕ್ತ ಕಾಯ್ದೆಯನ್ನು ರಾಜ್ಯ ಸರ್ಕಾರ ರೂಪಿಸಬೇಕು.

ನೇರ ಪಾವತಿಯಡಿ 60 ವರ್ಷದವರೆಗೂ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗುವ ಅಥವಾ ಸೇವೆಯಲ್ಲಿ ಮರಣ ಹೊಂದುವವರ ಅವಲಂಬಿತರಿಗೆ ಯಾವ ಸೌಕರ್ಯಗಳಿಲ್ಲದೆ ಬರಿಗೈಲಿ ಹೋಗುತ್ತಿದ್ದಾರೆ. ಈ ಕಾರ್ಮಿಕರಿಗೆ ತಲಾ ರೂ.10 ಲಕ್ಷ ಪರಿಹಾರ ನೀಡಬೇಕು, ಮಾಸಿಕ ರೂ.5000 ಪಿಂಚಣಿ ಹಾಗೂ ಅವರ ಅವಲಂಬಿತರಿಗೆ ಉದ್ಯೋಗ ನೀಡಬೇಕು ಮತ್ತು ಅವರ ಆರೋಗ್ಯ ಭದ್ರತೆಗಾಗಿ ಆರೋಗ್ಯ ಚೀಟಿ ನೀಡಬೇಕು , ಕಾಯಿದೆ  ಪ್ರಕಾರ ಉಪಧನವನ್ನು ನೀಡಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರು ವಿಶ್ವವಿದ್ಯಾಲಯ, ಇವರು ನಡೆಸಿರುವ ಅಧ್ಯಯನದ ಶಿಫಾರಸ್ಸಿನಂತೆ ಸ್ವಚ್ಛತಾ ಕಾರ್ಮಿಕರ ಭದ್ರತೆ, ಅರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆ-ನ್ಯಾಯಕ್ಕಾಗಿ ಸೂಕ್ತ ಕಾನೂನು ಜಾರಿಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದರು.

ತುಮಕೂರು, ಕಲಬುರಗಿ, ಬೆಂಗಳೂರು, ಮಂಗಳೂರು, ರಾಯಚೂರು, ಬಳ್ಳಾರಿ ಸೇರಿದಂತೆ, ವಿವಿದೆಡೆ ಪ್ರತಿಭಟನೆಗಳು ನಡೆದಿವೆ.

ತುಮಕೂರು

ಪ್ರತಿಭಟನೆಯಲ್ಲಿ ತುಮಕೂರು  ಪೌರ ಕಾರ್ಮಿಕರ ಸಂಘದ ಸೈಯದ್ ಮುಜೀಬ್, ಕೆಂಪರಾಜು, ನಾಗರಾಜು, ಸಿ.ವೆಂಕಟೇಶ್, ಎನ್.ಕೆ.ಸುಬ್ರಮಣ್ಯ, ತುಮಕೂರು ಮಹಾ ನಗರ ಪಾಲಿಕೆ ಕಸದ ಅಟೋ ಚಾಲಕರು ಮತ್ತು ಸಹಾಯಕರ ಸಂಘ ಚಂದ್ರಣ್ಣ, ಮಂಜುನಾಥ್, ಇರ್ಪಾನ್, ಶ್ರೀನಿವಾಸ್, ಸಾಧೀಕ್‌ಪಾಷ, ಶಿವರಾಜು, ತುಮಕೂರು  ಜಿಲ್ಲಾ  ನೀರು ಸರಬರಾಜು  ನೌಕರರ ಸಂಘದ ಕುಮಾರ್, ನಂದೀಶ್, ನಟರಾಜು, ಚಂದ್ರಪ್ಪ, ಮಂಜುನಾಥ್‌,  ಪ್ರಕಾಶ್, ಸ್ಲಂ ಜನಾಂದೋಲನ ಸಂಚಾಲಕ ಎ. ನರಸಿಂಹಮೂರ್ತಿ, ಸಪಾಯಿ ಕರ್ಮಚಾರಿ  ಕಾವಲು ಸಮಿತಿ ಓಬಳೇಶ್‌ ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಪೌರ ಕಾರ್ಮಿಕ ಸಂಘಟನೆಗಳ   ಜಂಟಿ ಹೋರಾಟ ಸಮಿತಿಯ ಸಂಘಟನೆಗಳಾದ ಕರ್ನಾಟಕ ರಾಜ್ಯ ಮುನಿಸಿಪಲ್‌ಕಾರ್ಮಿಕರ ಸಂಘ(ರಿ), ತುಮಕೂರು ಪೌರ ಕಾರ್ಮಿಕರ ಸಂಘ(ರಿ), ತುಮಕೂರು ಮಹಾ ನಗರ ಪಾಲಿಕೆ ಕಸದ ಅಟೋ ಚಾಲಕರು ಮತ್ತು ಸಹಾಯಕರ ಸಂಘ(ರಿ), ತುಮಕೂರು  ಜಿಲ್ಲಾ  ನೀರು ಸರಬರಾಜು  ನೌಕರರ ಸಂಘ(ರಿ), ಸಪಾಯಿ ಕರ್ಮಚಾರಿಗಳ  ಕಾವಲು ಸಮಿತಿ, ಸ್ಲಂ  ಜನಾಂದೋಲನ – ಕರ್ನಾಟಕ ಮತ್ತಿತರ ಸಂಘಟನೆಗಳು ಭಾಗವಹಿಸಿದ್ದವು.

Donate Janashakthi Media

Leave a Reply

Your email address will not be published. Required fields are marked *