ಮೂಲ : ಎಲ್ಗಾರ್ ನೊರೋನ್ಹಾ
ಫ್ರಂಟ್ ಲೈನ್ 27 ಜುಲೈ 2023
ಅನುವಾದ :ನಾ ದಿವಾಕರ
ಒಬ್ಬ ಭಾರತೀಯನಾಗಿ, ನಾಗರಿಕನಾಗಿ ಸಾಮಾನ್ಯ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳುವುದು ಅತ್ಯವಶ್ಯವಾಗಿದೆ. ಧರ್ಮವು ಒಂದು ಖಾಸಗಿ ವ್ಯವಹಾರವಾಗಿದೆ. ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಹೊಂದುವ, ಇಷ್ಟಬಂದಂತೆ ವಿಚ್ಛೇದನ ನೀಡುವ, ಹೆಣ್ಣುಮಕ್ಕಳು ಮತ್ತು ಹೆಂಡತಿಯರನ್ನು ಉತ್ತರಾಧಿಕಾರದಿಂದ ಹೊರಗಿಡುವ ಮತ್ತು ಅದನ್ನು ಧರ್ಮವೆಂದು ಬಿಂಬಿಸುವ ಹಕ್ಕು ಯಾರಿಗೂ ಇಲ್ಲ. ಅಂತಹ ವಿಷಯಗಳು ಧರ್ಮದ ವಿಕೃತಿಗಳಾಗಿವೆ. ಭಾರತವು ಸ್ವತಂತ್ರ ದೇಶವಾಗಿದೆ ಎಂದ ಮಾತ್ರಕ್ಕೆ ಯಾರು ಬೇಕಾದರೂ ತಮ್ಮ ಧರ್ಮವನ್ನು ಆಯುಧವನ್ನಾಗಿ ಮಾಡಿಕೊಳ್ಳಬಹುದು ಎಂದರ್ಥವಲ್ಲ.
163 ವರ್ಷಗಳಷ್ಟು ಹಳೆಯದಾದ ಸಂಹಿತೆಯು ಸದ್ದಿಲ್ಲದೆ ಕಾಸ್ಮೋಪಾಲಿಟನ್ ಸಂಸ್ಕೃತಿಯನ್ನು ರೂಪಿಸುತ್ತದೆ ಮತ್ತು ವೈವಿಧ್ಯಮಯ ಸಮುದಾಯಗಳ ನಡುವೆ ಸಾಮರಸ್ಯದ ಬಂಧವನ್ನು ಬೆಳೆಸುತ್ತದೆ.
ನಮ್ಮ ಕಾನೂನು ವ್ಯವಸ್ಥೆಯಲ್ಲಿ ಚಾರಿತ್ರಿಕ ಪರಂಪರೆಯ ಒಂದು ಬಲವಾದ ತುಣುಕು ಪೋರ್ಚುಗೀಸ್ ಸಿವಿಲ್ ಕೋಡ್. ಇದು ಗೋವಾ, ದಮನ್ ಮತ್ತು ಡಿಯುಗಳಲ್ಲಿ ಜಾರಿಯಲ್ಲಿದೆ. ಇದು ಸಾಮಾನ್ಯ ನಾಗರಿಕ ಸಂಹಿತೆ ಜಾರಿಯಲ್ಲಿರುವ ಭಾರತದ ಏಕೈಕ ಪ್ರದೇಶವಾಗಿದೆ. 163 ವರ್ಷಗಳಿಂದ ಅದು ಯಾವುದೇ ವಿರೋಧವನ್ನು ಎದುರಿಸಿಲ್ಲ. ಅದರ ಸುಗಮ ಕಾರ್ಯಾಚರಣೆಯ ಕಾರಣವನ್ನು ಅದು ನಡೆದು ಬಂದ ರೀತಿಯಿಂದಲೇ ಗುರುತಿಸಬಹುದು. 1867 ರಲ್ಲಿ ಜಾರಿಗೆ ಬಂದ ಇದನ್ನು ವಸಾಹತುಗಳಿಗೆ ವಿಸ್ತರಿಸಲಾಯಿತು. ಯಾವುದೇ ಸಮಕಾಲೀನ ಸಂಹಿತೆಯಿಂದ ಪರಿಕಲ್ಪನೆಯಲ್ಲಿ ಸಾಕಷ್ಟು ಭಿನ್ನವಾಗಿದೆ. ಈ ಸಂಹಿತೆಯನ್ನು ರೂಪಿಸಿದ ವಿಸ್ಕೌಂಟ್ ಆಂಟೋನಿಯೊ ಲೂಯಿಸ್ ಡಿ ಸೀಬ್ರಾ (1798-1895) ಹೈಕೋರ್ಟ್ ನ್ಯಾಯಾಧೀಶರಾಗಿದ್ದರು ಮತ್ತು ನಾಗರಿಕ ಕಾನೂನಿನ ಸಂಪೂರ್ಣ ಶ್ರೇಣಿಯ ಮೇಲೆ ಸಂಪೂರ್ಣ ಪ್ರಭುತ್ವವನ್ನು ಹೊಂದಿದ್ದರು. ಅವರು 1850 ರಿಂದ 1858 ರವರೆಗೆ ಏಕಾಂಗಿಯಾಗಿ ಸಂಹಿತೆಯನ್ನು ಕೈಯಿಂದ ಬರೆದರು. ಮೂಲ ಹಸ್ತಪ್ರತಿಯನ್ನು ಇನ್ನೂ ಸಂರಕ್ಷಿಸಲಾಗಿದೆ.
ಪೋರ್ಚುಗೀಸ್ ಸಂಹಿತೆಯು ತಾರ್ಕಿಕ, ತಾತ್ವಿಕ ಮತ್ತು ನ್ಯಾಯಿಕ ವ್ಯವಸ್ಥೆಯಾಗಿ ಕಾನೂನಿನ ಸಾಕಷ್ಟು ವಿಶಾಲವ್ಯಾಪ್ತಿಯನ್ನೊಳಗೊಂಡ ವ್ಯವಸ್ಥಿತವಾಗಿ ಜೋಡಿಸಲಾದ ನಿರೂಪಣೆಯಾಗಿದೆ. ಈ ಸಂಹಿತೆಯು ಪ್ರಾಥಮಿಕವಾಗಿ ನಾಗರಿಕ ವಲಯವನ್ನು ಒಳಗೊಂಡಿದ್ದು ನಾಗರಿಕ ಹಕ್ಕುಗಳನ್ನು ಹೊಂದುವ ಮತ್ತು ಅನುಭವಿಸುವ ಸಾಮರ್ಥ್ಯವನ್ನು ಬಿಂಬಿಸುತ್ತದೆ. ಎರಡನೆಯ ಭಾಗವು ಒಪ್ಪಂದಗಳು, ಮದುವೆ ಮತ್ತು ಉತ್ತರಾಧಿಕಾರವನ್ನು ಒಳಗೊಂಡ ಹಕ್ಕುಗಳನ್ನು ಪಡೆದುಕೊಳ್ಳುವುದರ ಬಗ್ಗೆ ಸೂಚಿಸುತ್ತದೆ. ಮೂರನೇ ಭಾಗವು ಆಸ್ತಿಯ ಬಗ್ಗೆ ವ್ಯವಹರಿಸುತ್ತದೆ; ನಾಲ್ಕನೇ ಭಾಗವು ಹಕ್ಕುಗಳನ್ನು ಅನ್ವಯಿಸುವ, ಅನುಭವಿಸುವ ಮತ್ತು ರಕ್ಷಿಸುವ ಬಗ್ಗೆ ಸೂಚಿಸುತ್ತದೆ. ಒಟ್ಟು 2,538 ಅನುಚ್ಚೇದಗಳನ್ನು ಹೊಂದಿರುವ ಈ ಸಂಹಿತೆಯು ಮೂಲತಃ ಕ್ರಮಬದ್ಧತೆಯಿಮದ ಕೂಡಿದ್ದು ಅನನ್ಯವಾಗಿರುವುದಷ್ಟೇ ಅಲ್ಲದೆ ಎಂದೂ ಸಹ ಪುನರಾವರ್ತನೆಗೆ ಒಳಗಾಗಿಲ್ಲ.
ಪೋರ್ಚುಗಲ್ 1822 ರಿಂದ ಸಾಂವಿಧಾನಿಕ ರಾಜಪ್ರಭುತ್ವವಾಗಿತ್ತು ಹಾಗಾಗಿ ಇದು ಸಂಹಿತೆಯ ಉದಾರ ಮತ್ತು ಸಮಾನತೆಯ ಸ್ವರೂಪಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಸಂಹಿತೆಯು ನಾಗರಿಕನ ಹಕ್ಕುಗಳನ್ನು ಮಾನ್ಯ ಮಾಡುವ ವ್ಯಕ್ತಿಗತ ಹಕ್ಕುಗಳನ್ನಾಧರಿಸಿದ ಸಂಹಿತೆಯಾಗಿದೆ. ಈ ಸಂಹಿತೆಯಲ್ಲಿ ಬಂಡವಾಳಿಗ ಛಾಯೆ ಎದ್ದುಕಾಣುವಂತಿದ್ದು, ಸಮಾಜವಾದ, ಕಮ್ಯುನಿಸಂ ಮತ್ತು ಕಲ್ಯಾಣ ರಾಜ್ಯಗಳು ಇನ್ನೂ ಬೆಳಕಿಗೆ ಬಂದಿರಲಿಲ್ಲ. ಗೋವಾ ವಿಮೋಚನೆಯ ಸಮಯದಲ್ಲಿ, ಗೋವಾ, ದಮನ್ ಮತ್ತು ಡಿಯು (ಆಡಳಿತ) ಕಾಯ್ದೆ 1962 ಅನ್ನು ಅಂಗೀಕರಿಸಲಾಯಿತು, ಅದರ ಸೆಕ್ಷನ್ 4 (1) ಹೀಗೆ ಹೇಳುತ್ತದೆ:
“4. ಅಸ್ತಿತ್ವದಲ್ಲಿರುವ ಕಾನೂನುಗಳ ಮುಂದುವರಿಕೆ ಮತ್ತು ಅವುಗಳ ಅಳವಡಿಕೆ: (1) ಗೋವಾ, ದಮನ್ ಮತ್ತು ಡಿಯು ಅಥವಾ ಅದರ ಯಾವುದೇ ಭಾಗದಲ್ಲಿ ನಿಗದಿತ ದಿನಕ್ಕಿಂತ ಮುಂಚಿತವಾಗಿ ಜಾರಿಯಲ್ಲಿರುವ ಎಲ್ಲಾ ಕಾನೂನುಗಳು ಸಮರ್ಥ ಶಾಸಕಾಂಗ ಅಥವಾ ಇತರ ಸಕ್ಷಮ ಪ್ರಾಧಿಕಾರದಿಂದ ತಿದ್ದುಪಡಿ ಮಾಡುವವರೆಗೆ ಅಥವಾ ರದ್ದುಗೊಳಿಸುವವರೆಗೆ ಜಾರಿಯಲ್ಲಿರುತ್ತವೆ.”
ಈ ಕಾರಣದಿಂದಾಗಿ ನಾಗರಿಕ ಸಂಹಿತೆ ಜಾರಿಯಲ್ಲಿದೆ. 1963-1965 ರಲ್ಲಿ ಭಾರತೀಯ ಗುತ್ತಿಗೆ ಕಾಯ್ದೆ 1872 ಮತ್ತು ಆಸ್ತಿ ವರ್ಗಾವಣೆ ಕಾಯ್ದೆ 1882 ಸೇರಿದಂತೆ ವಿವಿಧ ಭಾರತೀಯ ಕಾನೂನುಗಳನ್ನು ಗೋವಾಕ್ಕೆ ವಿಸ್ತರಿಸಲಾಯಿತು. ತನ್ಮೂಲಕ ನಾಗರಿಕ ಸಂಹಿತೆಯ ಸಂಬಂಧಿತ ನಿಬಂಧನೆಗಳನ್ನು ಸ್ವಯಂಚಾಲಿತವಾಗಿ ರದ್ದುಪಡಿಸಲಾಯಿತು.
ಒಟ್ಟಾರೆ ಫಲಿತಾಂಶವೆಂದರೆ ಸಂಹಿತೆಯ ಗಣನೀಯ ಭಾಗವು ಇನ್ನೂ ಉಳಿದುಕೊಂಡಿದೆ. ವಿಶೇಷವಾಗಿ ಕುಟುಂಬ ಕಾನೂನು, ಉತ್ತರಾಧಿಕಾರ ಮತ್ತು ಆಸ್ತಿಯ ಕ್ಷೇತ್ರಗಳಲ್ಲಿ. ಪೋರ್ಚುಗೀಸ್ ಸಿವಿಲ್ ಕೋಡ್ 1867 ಈಗ ಭಾರತೀಯ ಕಾನೂನು ಎಂದು ಸುಪ್ರೀಂ ಕೋರ್ಟ್ 2019 ರಲ್ಲಿ ಸರಿಯಾಗಿ ಅಭಿಪ್ರಾಯಪಟ್ಟಿದೆ. ಪೋರ್ಚುಗೀಸ್ ನಾಗರಿಕ ಸಂಹಿತೆಯು ಪ್ರಾಥಮಿಕವಾಗಿ ಪೋರ್ಚುಗೀಸ್ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ. ಗೋವಾದವರು ಪೋರ್ಚುಗೀಸ್ ಪ್ರಜೆಗಳಾಗಿದ್ದರು.
ಆದ್ದರಿಂದ ಇದು ಗೋವಾದವರಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ, ಡಿಸೆಂಬರ್ 20, 1961 ಕ್ಕಿಂತ ಮೊದಲು ಅದರ ಆಡಳಿತದಲ್ಲಿದ್ದ ವ್ಯಕ್ತಿಗಳು ಅಥವಾ ಅವರ ಪೋಷಕರು ಅಥವಾ ಅವರ ಅಜ್ಜಿಯರಿಗೆ ಅನ್ವಯಿಸುತ್ತದೆ. ಹೀಗಾಗಿ ಇದು ಧರ್ಮದ ಆಧಾರದ ರೂಪಿಸಲ್ಪಡದೆ ಹಿಂದಿನ
ಪೌರತ್ವದ ಆಧಾರದ ಮೇಲೆ ಗೋವಾದ ಜನರಿಗೆ ವೈಯಕ್ತಿಕ ಕಾನೂನಾಗಿ ಪರಿಣಮಿಸಿದೆ.
ನಾವು ಗೋವಾದಲ್ಲಿ ಪೋರ್ಚುಗೀಸ್ ನಾಗರಿಕ ಸಂಹಿತೆಯ ಬಗ್ಗೆ ಪ್ರಸ್ತಾಪಿಸುವಾಗ ವಾಸ್ತವವಾಗಿ ನಾಗರಿಕ ಪ್ರದೇಶದಲ್ಲಿ ಜಾರಿಯಲ್ಲಿರುವ ಈ ಪೋರ್ಚುಗೀಸ್ ಶಾಸನಗಳ ಬಗ್ಗೆ ಪ್ರತಿಪಾದಿಸಬೇಕಾಗುತ್ತದೆ. ಅವುಗಳೆಂದರೆ
- ಪೋರ್ಚುಗೀಸ್ ಸಿವಿಲ್ ಕೋಡ್, 1867
- ವಿವಾಹ, ವಿಚ್ಛೇದನ, ಮಕ್ಕಳ ಕಾನೂನುಗಳು, 1910-11
- ಕ್ಯಾನೊನಿಕಲ್ ಮ್ಯಾರೇಜ್ ಕಾನೂನು, 1946
- ನಾಗರಿಕ ನೋಂದಣಿ ಸಂಹಿತೆ, 1912
- ಪೋರ್ಚುಗೀಸ್ ಸಿವಿಲ್ ಪ್ರೊಸೀಜರ್ ಕೋಡ್, 1939
- ನೋಟರಿ ಕಾನೂನುಗಳು
- ಆಸ್ತಿ ನೋಂದಣಿ ಸಂಹಿತೆ, 1952
- ಗೋವಾದ ಹಿಂದೂಗಳು ಮತ್ತು ದಮನ್ ಮತ್ತು ಡಿಯುವಿನ ಕ್ರೈಸ್ತರಲ್ಲದವರ ಪದ್ಧತಿಗಳು ಮತ್ತು ಆಚರಣೆಗಳ ಸಂಹಿತೆಗಳು.
ಪೋರ್ಚುಗಲ್ ಗಣರಾಜ್ಯವಾದಾಗ 1910-1911 ರಲ್ಲಿ ಮದುವೆ, ವಿಚ್ಛೇದನ ಮತ್ತು ಮಕ್ಕಳ ಕಾನೂನುಗಳನ್ನು ಜಾರಿಗೆ ತರಲಾಯಿತು ಮತ್ತು ಮೂಲ ಸಂಹಿತೆಗೆ ಮಾರ್ಪಾಡುಗಳನ್ನು ಮಾಡಲಾಯಿತು. ಕ್ಯಾನೊನಿಕಲ್ ಮ್ಯಾರೇಜ್ ಕಾನೂನು 1946 ಚರ್ಚ್ ಮದುವೆಯನ್ನು ನಾಗರಿಕ ನೋಂದಣಿಯೊಂದಿಗೆ ಲಿಂಕ್ ಮಾಡಲು ಅನುಮತಿಸುತ್ತದೆ. 2001 ರಲ್ಲಿ ನಾಗರಿಕ ಸಂಹಿತೆಯನ್ನು ಮರುರೂಪಿಸಲು ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿಯು ಉತ್ತರಾಧಿಕಾರದ ಕಾನೂನನ್ನು ಸಂಹಿತೆಯಿಂದ ತೆಗೆದುಹಾಕಿತು ಮತ್ತು ಅದನ್ನು ಪ್ರತ್ಯೇಕ ಕಾಯ್ದೆಯಾಗಿ ಪುನಃ ಜಾರಿಗೆ ತಂದಿತು.
ಗೋವಾದ ಹಿಂದೂಗಳು ಈ ಸಂಹಿತೆಯನ್ನು ಹೇಗೆ ಸ್ವೀಕರಿಸಿದರು?
ಹಿಂದೂಗಳ ಆಚರಣೆಗಳು ಮತ್ತು ಪದ್ಧತಿಗಳನ್ನು ಈಗಾಗಲೇ 1853 ರಲ್ಲಿ ಶಾಸನದ ಮೂಲಕ ರಕ್ಷಿಸಲಾಗಿದೆ. ಈ ಸಂಹಿತೆಯನ್ನು ಗೋವಾಕ್ಕೆ ವಿಸ್ತರಿಸಿದಾಗ ಈ ಶಾಸನವನ್ನು ಪರಿಷ್ಕರಿಸಲಾಯಿತು ಮತ್ತು 1880 ರಲ್ಲಿ ಹಿಂದೂಗಳ ಬಳಕೆ ಮತ್ತು ಪದ್ಧತಿಗಳ ಸಂಹಿತೆಯಾಗಿ ಪುನಃ ಜಾರಿಗೆ ತರಲಾಯಿತು. ಇದರಲ್ಲಿ 31 ವಿಭಾಗಗಳು ಸೇರಿವೆ:
- ಹಿಂದೂ ಅವಿಭಕ್ತ ಕುಟುಂಬಕ್ಕೆ ಕಾನೂನುಬದ್ಧ ಘಟಕವಾಗಿ ಮಾನ್ಯತೆ.
- ಗಂಡು ಮಗು ಇಲ್ಲದಿರುವಲ್ಲಿ, ಹಿಂದೂಗಳು ಗಂಡು ಮಗನನ್ನು ದತ್ತು ತೆಗೆದುಕೊಳ್ಳಬಹುದು ಅಥವಾ ಮೊದಲ ಹೆಂಡತಿಯ ಒಪ್ಪಿಗೆಯೊಂದಿಗೆ ಎರಡನೇ ಹೆಂಡತಿಯನ್ನು ಮದುವೆಯಾಗಬಹುದು.
- ಬ್ರಾಹ್ಮಣರು ಭಗವದ್ಗೀತೆಯ ಮೇಲೆ ಮತ್ತು ಇತರರು ತೆಂಗಿನಕಾಯಿಯ ಮೇಲೆ ಪ್ರಮಾಣ ಮಾಡಬಹುದು.
ಈ ನಿಬಂಧನೆಗಳಲ್ಲಿ ಎರಡನೆಯದನ್ನು ಪೋರ್ಚುಗೀಸ್ ನಾಗರಿಕ ಸಂಹಿತೆಯ ಏಕರೂಪತೆಯನ್ನು ನಿರಾಕರಿಸಲು ದಂಢದಂತೆ ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ನಿಬಂಧನೆ ಅಸ್ತಿತ್ವದಲ್ಲಿದ್ದರೂ 37 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ನಾನು ಬಹಳ ಹಿಂದೆ ಸಾವಿಗೀಡಾಗಿ ಎರಡನೆ ಪತ್ನಿಯನ್ನು ಸ್ವೀಕರಿಸಿದ ಒಂದು ಪ್ರಕರಣವನ್ನು ಮಾತ್ರ ಕಂಡಿದ್ದೇನೆ ಎಂದು ಪ್ರಮಾಣೀಕರಿಸಬಲ್ಲೆ.
ಬ್ರಾಹ್ಮಣರು ಮತ್ತು ಗೀತೆಗೆ ಸಂಬಂಧಿಸಿದ ಮತ್ತೊಂದು ಉಪಬಂಧವನ್ನು ಪೋರ್ಚುಗೀಸ್ ಕಾನೂನು ಜಾತಿ ವ್ಯವಸ್ಥೆಯನ್ನು ಗುರುತಿಸುವ ನಿಯಮ ಆರೋಪಿಸಲಾಗುತ್ತದೆ. ಆದರೆ ಇದು ಅಪ್ರಸ್ತುತವಾಗಿದೆ ಏಕೆಂದರೆ 19 ನೇ ಶತಮಾನದಿಂದಲೇ ಎಲ್ಲಾ ನಾಗರಿಕರು ಗೀತೆಯ ಮೇಲೆ ಪ್ರಮಾಣ ಮಾಡಲು ಪ್ರಾರಂಭಿಸಿದರು. ದಮನ್ ಮತ್ತು ಡಿಯುವಿನ ಕ್ರೈಸ್ತರಲ್ಲದ ನಿವಾಸಿಗಳ ಬಳಕೆ ಮತ್ತು ಪದ್ಧತಿಗಳನ್ನು ರಕ್ಷಿಸಲು ಇದೇ ರೀತಿಯ ಶಾಸನಗಳು ಇದ್ದವು.
ಮುಖ್ಯಾಂಶಗಳು • 1867 ರ ಪೋರ್ಚುಗೀಸ್ ಸಿವಿಲ್ ಕೋಡ್ ರೂಪದಲ್ಲಿ ಸಾಮಾನ್ಯ ನಾಗರಿಕ ಸಂಹಿತೆ ಜಾರಿಯಲ್ಲಿರುವ ಭಾರತದ ಏಕೈಕ ಪ್ರಾಂತ್ಯವೆಂದರೆ ಗೋವಾ. ಇದು ವಿಸ್ಕೌಂಟ್ ಆಂಟೋನಿಯೊ ಲೂಯಿಸ್ ಡಿ ಸೀಬ್ರಾ ಎಂಬ ಒಬ್ಬ ವ್ಯಕ್ತಿ ಬರೆದ ಕಾನೂನಿನ ವಿಶಾಲ ಪ್ರದೇಶದ ವ್ಯವಸ್ಥಿತ ನಿರೂಪಣೆಯಾಗಿದೆ ಮತ್ತು ಇದು 163 ವರ್ಷಗಳಿಂದ ಜಾರಿಯಲ್ಲಿದೆ. • ಇದು ನಾಗರಿಕ ಸಾಮರ್ಥ್ಯ, ಹಕ್ಕುಗಳ ಸ್ವಾಧೀನ, ಆಸ್ತಿ ಮತ್ತು ಹಕ್ಕುಗಳ ಜಾರಿಯನ್ನು ಒಳಗೊಂಡ ನಾಲ್ಕು ಭಾಗಗಳನ್ನು ಒಳಗೊಂಡಿರುವ ನಾಗರಿಕ ಕಾನೂನಿನ ಸಮಗ್ರ ವಿವರಣೆಯಾಗಿದೆ. ಜನರು ಅದನ್ನು ಸುಗಮವಾಗಿ ಸ್ವೀಕರಿಸುವುದು ಅದರ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿದೆ. • ಆಸ್ತಿಗಳ ಸಮನ್ವಯ ಮತ್ತು ಪುತ್ರರು ಮತ್ತು ಪುತ್ರಿಯರಿಗೆ ಅನುಕ್ರಮವಾಗಿ ಸಮಾನ ಹಕ್ಕುಗಳಂತಹ ಅದರ ಪರಿಕಲ್ಪನೆಗಳು ಇಡೀ ಭಾರತಕ್ಕೆ ಸಂಭಾವ್ಯ ನಾಗರಿಕ ಸಂಹಿತೆಗೆ ಮೌಲ್ಯಯುತವಾಗಬಹುದು. ಆದಾಗ್ಯೂ, ಸಮಗ್ರ ಸಂಹಿತೆಯನ್ನು ರೂಪಿಸಲು ಎಚ್ಚರಿಕೆಯ ಅಧ್ಯಯನ ಮತ್ತು ಚರ್ಚೆಯ ಅಗತ್ಯವಿದೆ. |
ಪೋರ್ಚುಗೀಸ್ ಸಂಹಿತೆ ಮತ್ತು ಗೋವಾ
ಪೋರ್ಚುಗೀಸ್ ನಾಗರಿಕ ಸಂಹಿತೆಗೆ ಗೋವಾದ ಅತಿದೊಡ್ಡ ಕೊಡುಗೆಯನ್ನು ವ್ಯಾಖ್ಯಾನಕಾರ ಡಾ.ಲೂಯಿಸ್ ಡಾ ಕುನ್ಹಾ ಗೊನ್ಸಾಲ್ವೆಸ್ (1875-1956) ನೀಡಿದ್ದಾರೆ, ಅವರು 1929 ಮತ್ತು 1934 ರ ನಡುವೆ ನಾಗರಿಕ ಸಂಹಿತೆಗೆ 15 ಸಂಪುಟಗಳ ಸ್ಮರಣೀಯ ವ್ಯಾಖ್ಯಾನವನ್ನು ಬರೆದಿದ್ದಾರೆ. ಇದು 20 ನೇ ಶತಮಾನದ ಕೊನೆಯವರೆಗೂ ಈ ವಿಷಯದ ಬಗ್ಗೆ ಕಂಡಿರುವ ಏಕೈಕ ವ್ಯಾಖ್ಯಾನವಾಗಿದೆ.
ಪೋರ್ಚುಗೀಸ್ ನಾಗರಿಕ ಸಂಹಿತೆಯ ಬಗ್ಗೆ ಆಕರ್ಷಕವಾದ ವಿಷಯವೆಂದರೆ ಅದರ ಏಕರೂಪತೆ, ಕ್ರಮಬದ್ಧತೆ ಮತ್ತು ಕಾನೂನಿನ ಕ್ರಮಬದ್ಧಗೊಳಿಸುವಿಕೆ ಹಾಗೂ ಜನರು ಸಂಹಿತೆಯನ್ನು ಸುಗಮವಾಗಿ ಮತ್ತು ಸಂತೋಷದಿಂದ ಸ್ವೀಕರಿಸುವುದು. ಅದು ಅವರ ಜೀವನದಲ್ಲಿ ಸುಲಭವಾಗಿ ಉಪಯುಕ್ತವಾಗಿ ಬಳಕೆಗೊಳಗಾಯಿತು. ನಾಗರಿಕ ಸಂಹಿತೆಯನ್ನು ಎಲ್ಲರೂ ಸಂತೋಷದಿಂದ ಸ್ವೀಕರಿಸುತ್ತಾರೆ ಮತ್ತು ಅನುಸರಿಸುತ್ತಾರೆ ಎಂಬುದು ರಾಷ್ಟ್ರವು ಹೊಂದಬಹುದಾದ ಅತಿದೊಡ್ಡ ಹೆಮ್ಮೆಯ ವಿಚಾರವಾಗಿದೆ.
ಇದನ್ನೂ ಓದಿ: ‘ನಯಾ ಭಾರತ್’ನಲ್ಲಿ ದೊಡ್ಡ ಉದ್ದಿಮೆ ಸಮೂಹಗಳು ಕಳವಳಗೊಳಿಸುಷ್ಟು ಹಿಗ್ಗುತ್ತಿವೆ
ಗೋವಾದ ಜನರ ಕಾಸ್ಮೋಪಾಲಿಟನ್ ಸ್ವಭಾವ ಮತ್ತು ಅದರ ವಿವಿಧ ವಿಭಾಗಗಳ ನಡುವಿನ ಆರಾಮದಾಯಕ ಬಂಧನದಕ್ಕೆ ಪೋರ್ಚುಗೀಸ್ ನಾಗರಿಕ ಸಂಹಿತೆಯು ಮೌನವಾದ, ಅಲಿಖಿತ, ಅಪರಿಚಿತ ಮತ್ತು ಬಹುಶಃ ಗುರುತಿಸಲಾಗದ ಕಾರಣವಾಗಿದೆ. ಅವರು ಮತ್ತು ಅವರ ಪೂರ್ವಜರು ಎಲ್ಲರೂ ಒಂದೇ ಕಾನೂನನ್ನು ಅನುಸರಿಸಿದರು. ಅತ್ಯಂತ ದೂರದ ಗ್ರಾಮೀಣ ನಿವಾಸಿಗೂ ಸಹ ತನ್ನ ಹೆಂಡತಿ ತನ್ನ ಅರ್ಧದಷ್ಟು ಆಸ್ತಿಯ ಮಾಲೀಕಳಾಗಿದ್ದಾಳೆಂದು ತಿಳಿದಿದೆ ಏನನ್ನಾದರೂ ಮಾರಾಟ ಮಾಡಲು ಅವನಿಗೆ ತನ್ನ ಹೆಂಡತಿಯ ಸಹಿ ಬೇಕು. ಅವರು ವಿಲ್ ಮಾಡಬೇಕಾದರೆ, ಇಬ್ಬರೂ ಅದನ್ನು ಒಟ್ಟಿಗೆ ಮಾಡಬೇಕು. ಮದುವೆಯ ವಿಚಾರದಲ್ಲಿ ಮೊಟ್ಟಮೊದಲು ಅದನ್ನು ನೋಂದಾಯಿಸಬೇಕು. ಮಕ್ಕಳ ಜನನವನ್ನು ಕಡ್ಡಾಯವಾಗಿ ನೋಂದಾಯಿಸಬಹುದು. ಒಬ್ಬ
ಸಹ-ಮಾಲೀಕನು ಇತರ ಸಹ-ಮಾಲೀಕರ ಒಪ್ಪಿಗೆಯಿಲ್ಲದೆ ಮಾರಾಟ ಮಾಡಲು ಸಾಧ್ಯವಿಲ್ಲ. ಪೋಷಕರು ಮಕ್ಕಳಿಗೆ ಮಾರಾಟ ಮಾಡಲು ಸಾಧ್ಯವಿಲ್ಲ (ಏಕೆಂದರೆ ಇದು ಉತ್ತರಾಧಿಕಾರ ಕಾನೂನನ್ನು ಬೈಪಾಸ್ ಮಾಡುತ್ತದೆ). ಈ ನಿಯಮಗಳು ಹಾಗೂ ಭೂ ಅನುದಾನಗಳ ಅಡಿಯಲ್ಲಿ ಎಂಫೈಟ್ಯೂಟಿಕ್ ಶಾಶ್ವತ ಗುತ್ತಿಗೆಯಂತಹ ಕಾನೂನಿನ ಇತರ ನಿಬಂಧನೆಗಳು ವ್ಯವಸ್ಥೆಯನ್ನು ವಿಭಿನ್ನವಾಗಿ ರೂಪಿಸುತ್ತವೆ. ಜನನ, ಮರಣ ಮತ್ತು ವಿವಾಹಗಳ ನಾಗರಿಕ ನೋಂದಣಿ ವ್ಯವಸ್ಥೆಯ ಜೊತೆಗೆ, ಆಸ್ತಿ ನೋಂದಣಿ ವ್ಯವಸ್ಥೆಯು ಇತ್ತು ಅದರ ಮೂಲಕ ಪ್ರತಿ ಆಸ್ತಿಯನ್ನು ಅದರ ಮಾಲೀಕರ ಹೆಸರಿನೊಂದಿಗೆ ನೋಂದಾಯಿಸಲಾಗುತ್ತಿತ್ತು. ಶೀರ್ಷಿಕೆಯ ಪರಿಶೀಲನೆ ತುಂಬಾ ಸರಳವಾಗಿತ್ತು.
ಪೋರ್ಚುಗೀಸ್ ನಾಗರಿಕ ಸಂಹಿತೆಯು ಪರಿಣಾಮಕಾರಿಯಾಗಿತ್ತು ಬಹುಶಃ ಆ ಕಾಲದ ವಿದ್ವಾಂಸ ವಕೀಲರನ್ನು ಹೊರತುಪಡಿಸಿ ಗೋವಾದ ಜನಸಂಖ್ಯೆಯ 99 ಪ್ರತಿಶತದಷ್ಟು ಜನರು ಎಂದಿಗೂ ಓದಲಿಲ್ಲ. ಸಂಹಿತೆಯನ್ನು ಆಂಗ್ಲಭಾಷೆಗೆ ಭಾಷಾಂತರಿಸಲಾಗಿಲ್ಲ. 1978 ಮತ್ತು 1986ರಲ್ಲಿ ಕುಟುಂಬ ಕಾನೂನುಗಳನ್ನು ಒಳಗೊಂಡಿರುವ ಎರಡು ಕಿರುಪುಸ್ತಕಗಳು ಪ್ರಕಟವಾದವು. ಅವು ಸುಮಾರು 30 ವರ್ಷಗಳವರೆಗೆ ಬಳಕೆಯಲ್ಲಿದ್ದವು. ಪೂರ್ಣ ಸಂಹಿತೆಯ ಉಳಿದಿರುವ ಎಲ್ಲಾ ನಿಬಂಧನೆಗಳ ಮೊದಲ ಸಮಗ್ರ ಅನುವಾದವನ್ನು ಈ ಬರಹಗಾರ 2016 ರಲ್ಲಿ ಮಾಡಿದರು, ಅವರು ಹೈಕೋರ್ಟ್ ಆದೇಶದ ಅಡಿಯಲ್ಲಿ ಗೋವಾ ಸರ್ಕಾರಕ್ಕೆ ಕ್ರಮವಾಗಿ 2018 ಮತ್ತು 2019 ರಲ್ಲಿ ಪೋರ್ಚುಗೀಸ್ ಸಿವಿಲ್ ಕೋಡ್ ಮತ್ತು ಪೋರ್ಚುಗೀಸ್ ಸಿವಿಲ್ ಪ್ರೊಸೀಜರ್ ಕೋಡ್ನ ಅಧಿಕೃತ ಅನುವಾದಗಳನ್ನು ಮಾಡಿದರು.
“ಗೋವಾದಲ್ಲಿ ಈ ಕಾನೂನಿನಲ್ಲಿ ಮಹತ್ತರವಾಗಿ ಕಾಣುವ ವಿಷಯವೇನು?” ಎಂಬುದು ಆಗಾಗ್ಗೆ ಕೇಳಲಾಗುವ ಪ್ರಶ್ನೆಯಾಗಿದೆ. ಅದರ ಕೆಲವು ವಿಶಿಷ್ಟ ಲಕ್ಷಣಗಳನ್ನು ನಾನು ಸೂಚಿಸುತ್ತೇನೆ:
ಪೋರ್ಚುಗೀಸ್ ನಾಗರಿಕ ಸಂಹಿತೆಯು ಒಂದು ಸಂಕಲನವಲ್ಲ ಆದರೆ ಪ್ರಾರಂಭದಿಂದ ಅಂತ್ಯದವರೆಗೆ ಒಬ್ಬ ವ್ಯಕ್ತಿಯು ಮಾಡಿದ ಕಾನೂನಿನ ನಿರೂಪಣೆಯಾಗಿದೆ. ಇದು ಬರವಣಿಗೆಯ ಪಠ್ಯದ ಮೂಲಕ ಒಂದು ಸಮಾನ ಎಳೆಯ ಚಿಂತನೆಯೊಂದಿಗೆ ನಿರಂತರ ಸಂವಾದ ನಡೆಸಿದಂತೆ.
ಬೆಂಥಾಮ್‌ನೊಂದಿಗೆ ಹೋಲಿಕೆ ಮಾಡುವುದಾದರೆ, ಪೋರ್ಚುಗೀಸ್ ಸಿವಿಲ್ ಕೋಡ್‌ನ ನಾಲ್ಕು ವಿಶಾಲ ಭಾಗಗಳು ಮತ್ತು ಜೆರೆಮಿ ಬೆಂಥಮ್ ಗುರುತಿಸಿದ ನಾಗರಿಕ ಕಾನೂನಿನ ಪ್ರಸಿದ್ಧ ಧ್ಯೇಯಗಳ ನಡುವೆ ಅದ್ಭುತವಾದ ಒಡನಾಟವನ್ನು ಗಮನಿಸಬಹುದು. ಭಾಗ 1ರಲ್ಲಿ ನಾಗರಿಕ ಸಾಮರ್ಥ್ಯವು ಬೆಂಥಮ್‌ನ ಜೀವನಾಧಾರ ಪರಿಕಲ್ಪನೆಗೆ ಅನುಗುಣವಾಗಿರುತ್ತದೆ. ಭಾಗ 2ರಲ್ಲಿ ಬೆಂಥಮ್‌ನ ಸಮೃದ್ಧಿಯ ಪರಿಕಲ್ಪನೆ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕೆ ಅನುಗುಣವಾಗಿದೆ.; ಭಾಗ 3Iರಲ್ಲಿ ಬೆಂಥಮ್‌ನ ಸಮಾನತೆಯ ಪರಿಕಲ್ಪನೆಯು ಆಸ್ತಿಯ ಹಕ್ಕುಗಳನ್ನೇ ಧ್ವನಿಸುತ್ತದೆ. ಕೊನೆಯದಾಗಿ ಭಾಗ 4ರಲ್ಲಿ ಬೆಂಥಮ್ ಸೂಚಿಸುವ ಭದ್ರತೆಯ ಪರಿಕಲ್ಪನೆಯು, ಹಕ್ಕುಗಳು ಮತ್ತು ಪರಿಹಾರಗಳ ಉಲ್ಲಂಘನೆಗೆ ಅನುಗುಣವಾಗಿ ಕಾಣುತ್ತದೆ. ಇದೊಂದು ಸೈದ್ಧಾಂತಿಕ ಸಂಹಿತೆಯಾಗಿದ್ದು ಇದು ಕೇವಲ ಬೋಳು ನಿಯಮಗಳ ಗ್ರಂಥವಲ್ಲ ಬದಲಾಗಿ ನಾಗರಿಕ ಕಾನೂನು ಪರಿಕಲ್ಪನೆಗಳ ರಚನಾತ್ಮಕ ಸ್ವರೂಪವಾಗಿದೆ. ಪ್ರತಿಯೊಂದು ಪರಿಕಲ್ಪನೆಯನ್ನು ವಿವರಿಸಲಾಗಿದ್ದು ಸಂಬಂಧಿತ ಸಿದ್ಧಾಂತವನ್ನು ರೂಪಿಸಲಾಗಿದೆ.
ಪರಿಕಲ್ಪನೆಯ ವಿಧಾನದಲ್ಲೂ ಸಹ ಕಾನೂನು ವಿದ್ಯಮಾನಗಳು ಮತ್ತು ಕಾನೂನು ಸಂಸ್ಥೆಗಳನ್ನು ಪರಿಕಲ್ಪನಾ ಮಟ್ಟದಲ್ಲಿ ಬೌದ್ಧಿಕ ಮತ್ತು ತಾತ್ವಿಕ ಭಾಷೆಯಲ್ಲಿ ವ್ಯವಹರಿಸಲಾಗುತ್ತದೆಯೇ ಹೊರತು ಸಂಪೂರ್ಣವಾಗಿ ಪ್ರಾಯೋಗಿಕ ಮಟ್ಟದಲ್ಲಿ ಅಲ್ಲ. ಇದು ದೈನಂದಿನ ಭಾಷೆಯಲ್ಲಿರುವುದಲ್ಲದೆ ಕಾನೂನು ಚರ್ಚೆಗಳು, ವಿಷಯ ಮಂಡನೆಯನ್ನು ಒಳಗೊಂಡಿರುತ್ತದೆ. ಅಂದರೆ ವಾಸ್ತವಗಳಿಗೆ ಕಾನೂನನ್ನು ಅನ್ವಯಿಸುವಾಗ ವಕೀಲರು ಮತ್ತು ನ್ಯಾಯಾಧೀಶರಿಗೆ ಸುಲಭವಾಗುತ್ತದೆ. ಹಕ್ಕುಗಳನ್ನು ನಿರ್ಧರಿಸುವಾಗ ನ್ಯಾಯಾಲಯಗಳು ಪರಿಕಲ್ಪನಾ ಸಂಶೋಧನೆ, ನಿರೂಪಣೆಗಳಿಗೆ ಮೊರೆ ಹೋಗಿ ನಿರ್ಧಾರವನ್ನು ಕೈಗೊಳ್ಳುವ ಅಗತ್ಯತೆಯನ್ನು ತಪ್ಪಿಸುತ್ತದೆ.
ಪರಿಕಲ್ಪನಾ ಅಥವಾ ಸೈದ್ಧಾಂತಿಕ ವಿಧಾನವು ಎರಡು ಹಂತಗಳಲ್ಲಿದೆ:
- ಪ್ರಾಥಮಿಕ ಶೀರ್ಷಿಕೆ: ನಾಗರಿಕ ಕಾನೂನನ್ನು ಮೀರಿದ ಅತ್ಯಂತ ಸಾಮಾನ್ಯ ಪರಿಕಲ್ಪನೆಗಳು ಮತ್ತು ತತ್ವಗಳನ್ನು ಅನುಚ್ಛೇದ 1 ರಿಂದ 16 ರಲ್ಲಿ ಹಾಕಲಾಗಿದೆ.
- ತದನಂತರ, ಪ್ರತಿ ಭಾಗ, ಪುಸ್ತಕ, ಶೀರ್ಷಿಕೆ, ಅಧ್ಯಾಯ, ವಿಭಾಗ ಮತ್ತು ಉಪವಿಭಾಗದ ಆರಂಭದಲ್ಲಿ ಸಂಬಂಧಿತ ಕಾನೂನು ಪರಿಕಲ್ಪನೆಯನ್ನು ಮೊದಲು ಸ್ಪಷ್ಟವಾಗಿ ವಿವರಿಸಲಾಗುತ್ತದೆ ಮತ್ತು ವ್ಯಾಖ್ಯಾನಿಸಲಾಗುತ್ತದೆ. ತದನಂತರ, ಅದಕ್ಕೆ ಸಂಬಂಧಿಸಿದ ಕಾನೂನಿನ ನಿಯಮಗಳನ್ನು ಸರಳ ಮತ್ತು ಸರಾಗವಾದ ಆದರೆ ನಿಖರವಾದ ಕ್ಲಾಸಿಕ್ ಭಾಷೆಯಲ್ಲಿ ವಿವರಿಸಲಾಗುತ್ತದೆ. ಈ ಸಂಹಿತೆಯು ಸಾಹಿತ್ಯಕ ಮೇರುಕೃತಿಯಾಗಿದೆ. ವಕೀಲರಲ್ಲದೆ, ಯಾವುದೇ ವಿದ್ಯಾವಂತ ವ್ಯಕ್ತಿಯು ಅದನ್ನು ಓದಲು ಅಪೇಕ್ಷಿಸುತ್ತಾನೆ.
ಆಸ್ತಿಗಳ ಸಮನ್ವಯದ ನೀತಿಗಳನ್ವಯ ಗಂಡನ ಎಲ್ಲಾ ಆಸ್ತಿಗಳಲ್ಲಿ ಹೆಂಡತಿಗೆ ಅರ್ಧದಷ್ಟು ಹಕ್ಕನ್ನು ನೀಡುತ್ತದೆ ಅಲ್ಲದೆ ಹೆಂಡತಿಯ ಒಪ್ಪಿಗೆಯಿಲ್ಲದೆ ಅವುಗಳನ್ನು ವಿಲೇವಾರಿ ಮಾಡಲು ಸಾಧ್ಯವಿಲ್ಲ. ಧಾರ್ಮಿಕ ಆಚರಣೆಗಳು ಹಾಗೂ ಧಾರ್ಮಿಕ ಮತ್ತು ನಾಗರಿಕ ವಿವಾಹಗಳ ನಡುವಿನ ಪರಸ್ಪರ ಸಂಬಂಧಗಳನ್ನೂ ಮೀರಿ ವಿವಾಹ ನೋಂದಣಿಯನ್ನು ಪರಿಗಣಿಸಲಾಗುತ್ತದೆ. ಉತ್ತರಾಧಿಕಾರದ ವಿಚಾರದಲ್ಲಿ ಪುತ್ರರು ಮತ್ತು ಪುತ್ರಿಯರನ್ನು ಅನುಕ್ರಮವಾಗಿ ಸಮಾನವಾಗಿ ಪರಿಗಣಿಸಲಾಗುತ್ತದೆ.
ಲೆಜಿಟೈಮ್ ನಿಯಮವು ಕಾನೂನಿನ ಸಂಪೂರ್ಣ ಕಾರ್ಯಾಚರಣೆಯ ಮೂಲಕ ಎಲ್ಲಾ ಮಕ್ಕಳಿಗೆ, ಲಿಂಗ ತಾರತಮ್ಯವಿಲ್ಲದೆ, ಪೋಷಕರ ಆಸ್ತಿಯಲ್ಲಿ 50 ಪ್ರತಿಶತದಷ್ಟು ಸಮಾನ ಹಕ್ಕುಗಳನ್ನು ನೀಡುತ್ತದೆ. ಪೋಷಕರು ತಮ್ಮ ಆಸ್ತಿಯ ಪಾಲಿನಲ್ಲಿ ಶೇ 50ಕ್ಕಿಂತ ಹೆಚ್ಚಿನದನ್ನು ಸ್ವಇಚ್ಛೆಯಿಂದ ವಿಲೇವಾರಿ ಮಾಡುವುದನ್ನು ಅಥವಾ ಉಡುಗೊರೆಯಾಗಿ ನೀಡುವುದನ್ನು ನಿಷೇಧಿಸುತ್ತದೆ. ಉಳಿದವು ಕಾನೂನುಬದ್ಧವಾಗಿ ಉಳಿಯುವುದಲ್ಲದೆ ಕಾನೂನಿನ ನಿಉಮಾನುಸಾರ ಅಥವಾ ಅವಿಚ್ಚಿನ್ನತೆಯಿಂದ ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಗುತ್ತದೆ.
“ಅಫೊರಮೆಂಟೊ” ಅಥವಾ ಎಂಫೈಟ್ಯೂಟಿಕ್ ಲೀಸ್ ಯುರೋಪಿಯನ್ ಕಾನೂನಿನ ಒಂದು ವಿಶಿಷ್ಟ ಸಂಸ್ಥೆಯಾಗಿದ್ದು ಇದು ಸರ್ಕಾರಕ್ಕೆ ಅಥವಾ ಸಾರ್ವಜನಿಕ ಸಂಸ್ಥೆಗೆ ಸೇರಿದ ಭೂಮಿಯಾಗಿರುತ್ತದೆ ಹಾಗೂ ನಿರ್ದಿಷ್ಟ ಉದ್ದೇಶಕ್ಕಾಗಿ ಗುತ್ತಿಗೆಗೆ ನೀಡಲಾಗುತ್ತದೆ. ಗುತ್ತಿಗೆದಾರನು ಆಸ್ತಿಯನ್ನು ಅನುಭವಿಸಿದರೂ ಅದರ ಒಡೆತನ ಮಾಲೀಕರ ಬಳಿಯೇ ಉಳಿಯುತ್ತದೆ. ಗುತ್ತಿಗೆಯನ್ನು ವರ್ಗಾಯಿಸುವ ಅವಕಾಶ ಇರುತ್ತದೆ. ಗುತ್ತಿಗೆದಾರನಿಗೆ 20 ವರ್ಷಗಳ ಎಂಫೈಟ್ಯೂಟಿಕ್ ಶುಲ್ಕವನ್ನು ಒಂದೇ ಮೊತ್ತದಲ್ಲಿ ಪಾವತಿಸುವ ಮೂಲಕ ಸಂಪೂರ್ಣ ಮಾಲೀಕತ್ವವನ್ನು ಪಡೆಯುವ ಹಕ್ಕನ್ನು ಸಹ ನೀಡಲಾಗುತ್ತದೆ.
ಇದನ್ನೂ ಓದಿ : ಉತ್ತರಾಧಿಕಾರ- ತೆರಿಗೆ ಕಾನೂನು- ಏಕರೂಪ ನಾಗರಿಕ ಸಂಹಿತೆ
ಇಡೀ ಭಾರತವು ನಾಗರಿಕ ಸಂಹಿತೆಯನ್ನು ಹೊಂದಬೇಕೇ?
ಇದಕ್ಕೆ ಯಾವುದೇ ಚರ್ಚೆಯ ಅಗತ್ಯವಿಲ್ಲ ಎಂದು ಸಂವಿಧಾನವು 1950 ರಲ್ಲಿ ಹೇಳಿದೆ. ಇದು ಯಾವುದೇ ವ್ಯಕ್ತಿ ಅಥವಾ ಪಕ್ಷದ ಕಲ್ಪನೆಯಲ್ಲ ಬದಲಾಗಿ ರಾಷ್ಟ್ರದ ಆಗ್ರಹ. ಭಾರತದಂತಹ ಪ್ರಮುಖ ರಾಷ್ಟ್ರವು ಖಂಡಿತವಾಗಿಯೂ ನಾಗರಿಕ ಸಂಹಿತೆಯನ್ನು ಹೊಂದಿರಬೇಕು. ಬ್ರಿಟನ್ ಅಥವಾ ಅಮೆರಿಕ ನಾಗರಿಕ ಸಂಹಿತೆಯನ್ನು ಹೊಂದಿಲ್ಲ ಎಂಬ ನೆಪ ಹೂಡಬೇಕಿಲ್ಲ. ಅದು ಪೂರ್ವನಿಯೋಜಿತವಾಗಿದೆ. ಅಮೆರಿಕೆಯಲ್ಲಿ ಲೂಯಿಸಿಯಾನ ಮತ್ತು ಕ್ಯಾಲಿಫೋರ್ನಿಯಾದಂತಹ ಹಲವಾರು ರಾಜ್ಯಗಳು ರಾಜ್ಯ ಮಟ್ಟದ ನಾಗರಿಕ ಸಂಹಿತೆಗಳನ್ನು ಹೊಂದಿವೆ.
ಒಬ್ಬ ಭಾರತೀಯನಾಗಿ, ನಾಗರಿಕನಾಗಿ ಸಾಮಾನ್ಯ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳುವುದು ಅತ್ಯವಶ್ಯವಾಗಿದೆ. ಧರ್ಮವು ಒಂದು ಖಾಸಗಿ ವ್ಯವಹಾರವಾಗಿದೆ. ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಹೊಂದುವ, ಇಷ್ಟಬಂದಂತೆ ವಿಚ್ಛೇದನ ನೀಡುವ, ಹೆಣ್ಣುಮಕ್ಕಳು ಮತ್ತು ಹೆಂಡತಿಯರನ್ನು ಉತ್ತರಾಧಿಕಾರದಿಂದ ಹೊರಗಿಡುವ ಮತ್ತು ಅದನ್ನು ಧರ್ಮವೆಂದು ಬಿಂಬಿಸುವ ಹಕ್ಕು ಯಾರಿಗೂ ಇಲ್ಲ. ಅಂತಹ ವಿಷಯಗಳು ಧರ್ಮದ ವಿಕೃತಿಗಳಾಗಿವೆ. ಭಾರತವು ಸ್ವತಂತ್ರ ದೇಶವಾಗಿದೆ ಎಂದ ಮಾತ್ರಕ್ಕೆ ಯಾರು ಬೇಕಾದರೂ ತಮ್ಮ ಧರ್ಮವನ್ನು ಆಯುಧವನ್ನಾಗಿ ಮಾಡಿಕೊಳ್ಳಬಹುದು ಎಂದರ್ಥವಲ್ಲ. ಅದೇ ಸಮಯದಲ್ಲಿ, ನಾಗರಿಕ ಸಂಹಿತೆಯು ಇತರ ಸಮುದಾಯಗಳನ್ನು ದಮನಿಸಲು ತೀವ್ರಗಾಮಿಗಳಿಗೆ ಒಂದು ಆಯುಧವಲ್ಲ. ಅಂತಹ ತೀವ್ರಗಾಮಿಗಳು ತಮ್ಮ ಸ್ವಂತ ಸಮುದಾಯಗಳತ್ತ ಗಮನಹರಿಸುವುದು ಉತ್ತಮ.
“ಪೋರ್ಚುಗೀಸ್ ಸಿವಿಲ್ ಕೋಡ್‌ನಲ್ಲಿ ಆಸ್ತಿಗಳ
ಸಂಯೋಜನೆ ಮತ್ತು ಪುತ್ರರು ಮತ್ತು ಪುತ್ರಿಯರಿಗೆ ಉತ್ತರಾಧಿಕಾರದ ಸಮಾನ ಹಕ್ಕುಗಳಂತಹ ಅನೇಕ ವಿಚಾರಗಳನ್ನು ಖಂಡಿತವಾಗಿಯೂ ಭಾರತೀಯ ನಾಗರಿಕ ಸಂಹಿತೆಯಲ್ಲಿ ಸೇರಿಸಬಹುದು.”
ಭಾರತದಲ್ಲಿ ದೇಶವ್ಯಾಪಿ ಜಾರಿಯಲ್ಲಿರುವ ವ್ಯವಸ್ಥೆಯನ್ನು ಬದಲಿಸಿ ಈ ಸಂಹಿತೆಯನ್ನು ಅಳವಡಿಸುವುದು ಸೂಕ್ತವೇ ?
ಭಾರತದಲ್ಲಿ ಕಾನೂನು ಅಂತಹ ವ್ಯವಸ್ಥೆಯನ್ನು ಅನುಸರಿಸುವುದಿಲ್ಲ. ಯಾವುದೇ ವ್ಯವಸ್ಥೆ ಇಲ್ಲ ಎಂದು ನಾನು ಧೈರ್ಯದಿಂದ ಹೇಳುತ್ತೇನೆ, ವ್ಯವಸ್ಥೆಯಲ್ಲಿನ ಲೋಪಗಳು ಕೊರತೆಗಳು ವಕೀಲರನ್ನು ಶ್ರೀಮಂತರನ್ನಾಗಿ ಮಾಡುತ್ತದೆ ಮತ್ತು ನ್ಯಾಯಾಧೀಶರನ್ನು ಅನಗತ್ಯವಾಗಿ ಮುಖ್ಯವಾಗಿಸುತ್ತದೆ. ನ್ಯಾಯಾಧೀಶರು ಕಾನೂನನ್ನು ಜಾರಿಗೊಳಿಸುವವರಾಗಿದ್ದು ನಾಗರಿಕ ಸಂಹಿತೆ ಜಾರಿಯಾದರೆ ಕಾನೂನಿನ ವೃತ್ತಿಯು ಹಣ ಗಳಿಸುವ ಒಂದು ಮಾರ್ಗವಾಗಿ ಉಳಿಯುವುದಿಲ್ಲ .
ಈ ಸಮಸ್ಯೆ ಇಂಗ್ಲೆಂಡ್ ದೇಶವನ್ನು ಕಾಡುತ್ತಿದೆ ಮತ್ತು ಭಾರತವನ್ನೂ ಸಹ ಕಾಡುತ್ತಿದೆ. ಭಾರತದಲ್ಲಿ ನಾವು ಬ್ರಿಟಿಷ್ ಯುಗದ ಕ್ರೋಡೀಕೃತ ಶಾಸನಗಳು ಮತ್ತು ಬ್ರಿಟಿಷ್ ಮೂಲದ ಪ್ರಕರಣ ಕಾನೂನು ವ್ಯವಸ್ಥೆಯ ನಡುವೆ ಕಳೆದುಹೋಗಿದ್ದೇವೆ. ಬ್ರಿಟಿಷರು ಬೆಂಥಮ್ನ ಪ್ರಭಾವದಿಂದ ಭಾರತದಲ್ಲಿ ಕಾನೂನನ್ನು ಕ್ರೋಡೀಕರಿಸಲು ಪ್ರಯತ್ನಿಸಿದರು ಆದರೆ ಅದನ್ನು ಅವರು ತಮ್ಮ ದೇಶದಲ್ಲಿ ಮಾಡಲು ಸಾಧ್ಯವಾಗಲಿಲ್ಲ. ಭಾರತದಲ್ಲಿ ಈಗ ಕಾನೂನು ಒಂದು ಉದ್ಯೋಗ, ವ್ಯಾಪಾರ ಮತ್ತು ಕೌಶಲ್ಯವಾಗಿದೆ. ಅದು ನಿಜವಾಗಿಯೂ ಅಧ್ಯಯನದ ವಿಷಯವಾಗಿ ಉಳಿದಿಲ್ಲ.. ಹೆಸರಿಸಲು ಯೋಗ್ಯವಾದ ಯಾವುದೇ ನ್ಯಾಯಶಾಸ್ತ್ರ ಅಥವಾ ಕಾನೂನು ಸಿದ್ಧಾಂತವಿಲ್ಲ. ಬೋಧಕರು ಇದ್ದಾರೆಯೇ ಹೊರತು ನ್ಯಾಯಶಾಸ್ತ್ರಜ್ಞರಲ್ಲ. ಕಾನೂನಿನಲ್ಲಿ ದೀರ್ಘ ಅನುಭವ ಹೊಂದಿರುವ ಯಾವುದೇ ವ್ಯಕ್ತಿಯನ್ನು “ನ್ಯಾಯಶಾಸ್ತ್ರಜ್ಞ” ಎಂದು ಕರೆಯಲಾಗುತ್ತದೆ. ಕಾನೂನು ಕಾಲೇಜುಗಳಲ್ಲಿ ಸಿವಿಲ್ ಕಾನೂನನ್ನು ಒಂದು ವಿಷಯವಾಗಿ ಕಲಿಸಲಾಗಿಲ್ಲ. ಭಾರತದಲ್ಲಿ ನಾಗರಿಕ ಸಂಹಿತೆಯನ್ನು ಹೊಂದಲು ನಾಗರಿಕ ಕಾನೂನಿನ ಬೋಧನೆ ಮತ್ತು ಭಾರತೀಯ ನಾಗರಿಕ ನ್ಯಾಯಶಾಸ್ತ್ರದ ಬೆಳವಣಿಗೆ ಪೂರ್ವಾಪೇಕ್ಷಿತವಾಗಿದೆ.
ಗೋವಾ, ದಮನ್ ಮತ್ತು ಡಿಯುಗಳ ಪೋರ್ಚುಗೀಸ್ ನಾಗರಿಕ ಸಂಹಿತೆಯನ್ನು ಸರಳವಾಗಿ ಮತ್ತು ಯಾಂತ್ರಿಕವಾಗಿ ಭಾರತದ ಉಳಿದ ಭಾಗಗಳಿಗೆ ವಿಸ್ತರಿಸಲು ಸಾಧ್ಯವಿಲ್ಲ. ಆದರೆ ಆಸ್ತಿಗಳ ಸಮನ್ವಯ, ಗಂಡುಮಕ್ಕಳಿಗೆ ಮತ್ತು ಹೆಣ್ಣುಮಕ್ಕಳಿಗೆ ಉತ್ತರಾಧಿಕಾರದ ಸಮಾನ ಹಕ್ಕುಗಳು ಮುಂತಾದ ಅನೇಕ ವಿಚಾರಗಳನ್ನು ಖಂಡಿತವಾಗಿಯೂ ಭಾರತೀಯ ನಾಗರಿಕ ಸಂಹಿತೆಯಲ್ಲಿ ಸೇರಿಸಬಹುದು. ಇದರಿಂದ ಹಿಂದೆಂದಿಗಿಂತಲೂ ಭಾರತೀಯ ಮಹಿಳೆಯರನ್ನು ಸಬಲೀಕರಣಗೊಳಿಸಲು ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮೇಲೆ ಹೇಳಿದಂತೆ, ನಾಗರಿಕ ಸಂಹಿತೆಯು ಭಾರತದ ನಾಗರಿಕ ಕಾನೂನಿನಲ್ಲಿ, ಕಾನೂನು ಅಭ್ಯಾಸ, ನ್ಯಾಯಾಂಗ ಪ್ರಕ್ರಿಯೆ ಮತ್ತು ವಿಧಿವಿಜ್ಞಾನ ವ್ಯವಸ್ಥೆಗಳನ್ನು ಕ್ರಮಬದ್ಧಗೊಳಿಸುತ್ತದೆ. ಕಾನೂನಿನಲ್ಲಿ ಸ್ಪಷ್ಟತೆ ಇರುವುದರಿಂದ ಇದು ಖಂಡಿತವಾಗಿಯೂ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡುತ್ತದೆ.
ನಾಗರಿಕ ಸಂಹಿತೆಯ ಗ್ರಂಥವನ್ನು ತಮ್ಮ ಕೈಯಲ್ಲಿ ಹಿಡಿದುಕೊಳ್ಳುವ ಮೂಲಕ, ಕಾನೂನಿನ ವಿಶಾಲ ಕ್ಷೇತ್ರದಲ್ಲಿ ತಮ್ಮ ಹಕ್ಕುಗಳ ಬಹುಪಾಲನ್ನು ತಿಳಿದುಕೊಳ್ಳುವ ಎಲ್ಲಾ ನಾಗರಿಕರನ್ನು ಇದು ಸಶಕ್ತಗೊಳಿಸುತ್ತದೆ. ಮೊದಲು ಮಾಡಬೇಕಾಗಿರುವುದು ಒಂದು ಸಂಹಿತೆಯನ್ನು ರೂಪಿಸುವುದು. ಕರಡಿನ ಬಗ್ಗೆ ಚರ್ಚೆ ನಡೆಯಬಹುದು. ಇತ್ತೀಚಿನ ದಿನಗಳಲ್ಲಿ ಕರಡು ಸಂಹಿತೆಯ ಮೇಲೆ ಸಮಗ್ರ ಚರ್ಚೆಯು ನಡೆಯುವುದಿಲ್ಲ ಬದಲಾಗಿ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವಿಷಯಗಳ ಮೇಲೆ ನಡೆಯುತ್ತಿದೆ. ಈ ಚರ್ಚೆಗಳಲ್ಲಿ ಮೊದಲನೆಯದಾಗಿ ಹೊರಹೊಮ್ಮುವ ಸತ್ಯಾಂಶವೆಂಧರೆ ಸಂಬಂಧಪಟ್ಟ ಎಲ್ಲರೂ ಈ ವಿಷಯದ ಬಗ್ಗೆ ಸಂಪೂರ್ಣ ಅಜ್ಞಾನಿಗಳಾಗಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಏನನ್ನೂ ನಿರೀಕ್ಷಿಸಲಾಗುವುದಿಲ್ಲ. ಪ್ರಾಮಾಣಿಕ ಅಧ್ಯಯನಕ್ಕೆ ದ್ವೇಷವು ಪರ್ಯಾಯವಲ್ಲ.
(ಎಫ್.ಇ. ನೊರೊನ್ಹಾ ಅವರು ಬಾಂಬೆ ಹೈಕೋರ್ಟ್ ವಕೀಲರು. ಅವರು ಗೋವಾ ಸರ್ಕಾರಕ್ಕಾಗಿ 1867 ರ ಪೋರ್ಚುಗೀಸ್ ಸಿವಿಲ್ ಕೋಡ್ ಮತ್ತು 1939 ರ ಪೋರ್ಚುಗೀಸ್ ಸಿವಿಲ್ ಪ್ರೊಸೀಜರ್ ಕೋಡ್ನ ಅಧಿಕೃತ ಅನುವಾದಗಳನ್ನು ಮಾಡಿದ್ದಾರೆ )