ಪೂರಣ್ ಭಗತ್ ಮತ್ತು ಭಗತ್ ಲೋಗ್

ಪ್ರೊ. ವಿ.ಎನ್. ಲಕ್ಷ್ಮೀನಾರಾಯಣ

ಎಲ್ಲ ಸಾಧು-ಸಂತರನ್ನು ಜನ ಉತ್ತರ ಭಾರತದಲ್ಲಿ ‘ಭಗತ್ ಲೋಗ್’ ಎಂದು ಕರೆಯುವುದುಂಟು. ಈಚೆಗೆ ದೆಹಲಿ ಮತ್ತು ಹರಿದ್ವಾರಗಳಲ್ಲಿ ಆಯೋಜಿಸಲಾಗಿದ್ದ ಧರ್ಮ ಸಂಸತ್ತಿನಲ್ಲಿ ಪಾಲ್ಗೊಂಡು ದ್ವೇಷ ಭಾಷಣ ಮಾಡಿ ಸುದ್ದಿ ಮಾಡಿದವರೂ ಸಹ ತಮ್ಮನ್ನು ಸಾಧು-ಸಂತರೆಂದೇ ಕರೆದುಕೊಳ್ಳುತ್ತಾರೆ. ಈ ಸಾಧು-ಸಂತರೂ ತಮ್ಮನ್ನು ತಾವೇ ‘ಭಗತ್ ಲೋಗ್’ ಎಂದು ಕರೆಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕಿಪ್ಲಿಂಗ್ ಬರೆದ `ದಿ ಮಿರಾಕಲ್ ಆಫ್ ಪೂರಣ್ ಭಗತ್’ ಎಂಬ ಸಂತನ ತ್ಯಾಗದ ನಿರೂಪಣೆ ಈಶಾವಾಸ್ಯೋಪನಿಷತ್ತಿನ ಸಾಮಾಜಿಕ ದರ್ಶನವನ್ನು ‘ವಿಶ್ವಗುರು’ವಾದ ಭಾರತೀಯರಿಗೇ ಪರಿಚಯಿಸುವ ಕತೆ. ದೆಹಲಿ-ಹರಿದ್ವಾರದ ದರ್ಮ ಸಂಸತ್ತಿನ ‘ಸಾಧು-ಸಂತ’ರು ಧರ್ಮದ ರಕ್ಷಣೆಗಾಗಿ ಪ್ರಾಣ ಕೊಡಲು ಕರೆಕೊಡುತ್ತಾರೆ. ಯಾರ ಪ್ರಾಣ? ಎಂಬ ಪ್ರಶ್ನೆಗೆ ಸಿಗುವ ಉತ್ತರದಲ್ಲಿ ಪೂರಣ್ ಭಗತ್ ಆಚರಿಸಿದ ಧರ್ಮಕ್ಕೂ ‘ಭಗತ್ ಲೋಗ್’ ಆಚರಿಸಲು ಬಯಸುವ ಧರ್ಮಕ್ಕೂ ಇರುವ ವ್ಯತ್ಯಾಸ ಢಾಳಾಗಿ ಗೋಚರಿಸುತ್ತದೆ.

ಕಾಡಿನಲ್ಲಿ ನಡೆಯುವವರು ಮುಳ್ಳು ಚುಚ್ಚಬಾರದೆಂದರೆ ಕಾಡಿನಲ್ಲಿರುವ ಮುಳ್ಳುಗಳನ್ನೆಲ್ಲಾ ಆರಿಸಿ ಸುಟ್ಟು ಹಾಕಬೇಕೆನ್ನುವುದು ಒಂದು ಪರಿಹಾರ ಕ್ರಮ. ಕಾಡಿನ ನೆಲಕ್ಕೆಲ್ಲಾ ಚರ್ಮವನ್ನು ಹಾಸಬೇಕೆನ್ನುವುದು ಇನ್ನೊಂದು ಕ್ರಮ. ಆದರೆ ಇವೆರಡೂ ವ್ಯಾವಹಾರಿಕವಾಗಿ ಅಸಾಧ್ಯವಾದ ಪರಿಹಾರಗಳು. ಎಲ್ಲರಿಗೂ ಸಾಧ್ಯವಿರುವ, ಮೂರನೆಯ ಪರಿಹಾರ ಕ್ರಮವೆಂದರೆ, ಕಾಲಿಗೆ ಚರ್ಮವನ್ನು ಸುತ್ತಿಕೊಂಡು ನಡೆಯುವುದು. ಅಂದರೆ, ಪಾದರಕ್ಷೆಗಳನ್ನು ಬಳಸುವುದು.

ಈ ದೃಷ್ಟಿಕೋನವನ್ನು ಬದುಕಿನ ಸಂದರ್ಭಕ್ಕೆ ಅನ್ವಯಿಸಿ ಶೈವ, ವೇದಾಂತ, ಜೈನ ಮತ್ತು ಬೌದ್ಧ ದರ್ಶನಗಳ ಪ್ರಾಚೀನ ಮತ್ತು ಆಧುನಿಕ ಸಾಧು-ಸಂತರು ಭಾರತದಲ್ಲಿ ತಮ್ಮ ತಮ್ಮ ಜೀವನ ದೃಷ್ಟಿ ಮತ್ತು ಆಧ್ಯಾತ್ಮಿಕತೆಯ ಮಾದರಿಗಳನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ.

ತಾತ್ಪರ್ಯದಲ್ಲಿ, ಕೆಲವು ನಿರ್ದಿಷ್ಟ ಭೇದಗಳೊಂದಿಗೆ ಇವರೆಲ್ಲರೂ ಹೇಳುವುದು ಇಷ್ಟೆ. ಜೀವಕೋಟಿಯಲ್ಲಿ ಮನುಷ್ಯರು, ಅದರಲ್ಲೂ ಪುರುಷರು, ಇನ್ನೂ ನಿರ್ದಿಷ್ಟವಾಗಿ ಬ್ರಾಹ್ಮಣರು ಶ್ರೇಷ್ಠರಾದವರು. ತಾತ್ವಿಕವಾಗಿ ಯಾರು ಬೇಕಾದರೂ ಆಧ್ಯಾತ್ಮದ ಮೆಟ್ಟಿಲುಗಳಲ್ಲಿ ಮೇಲೇರಿ ಪರಮ ಜ್ಞಾನವನ್ನು ಸಂಪಾದಿಸಿ ಸಂತರಾಗಬಹುದು. ಆದರ್ಶ ಸ್ಥಿತಿಯಲ್ಲಿ ಮನುಷ್ಯೇತರ ಜೀವಿಗಳನ್ನೂ ಒಳಗೊಂಡಂತೆ ತಮ್ಮ ಸಹಜೀವಿಗಳೊಂದಿಗಿನ ನಡವಳಿಕೆಯಲ್ಲಿ ದಯೆ, ಅನುಕಂಪ, ಕರುಣೆಗಳನ್ನು ತೋರಿಸುವುದರಿಂದ ಇವರನ್ನು ಒಟ್ಟಾರೆಯಾಗಿ ಸಾಧು-ಸಂತರೆಂದು, ಮಹಾತ್ಮರೆಂದು ಕರೆಯುವುದು ವಾಡಿಕೆ. ಇವರ ಉಪದೇಶಗಳ ಸಾರವೇನೆಂದರೆ, ಲೌಕಿಕ ಜೀವನವು ಅಧಿ ಭೌತಿಕ, ಅಧಿ ದೈವಿಕ ಮತ್ತು ಆಧ್ಯಾತ್ಮಿಕ ಎಂಬ ತಾಪತ್ರಯಗಳಿಂದ, ಅಂದರೆ ಭೌತಿಕ, ಪ್ರಾಕೃತಿಕ ಮತ್ತು ವ್ಯಕ್ತಿಗತವಾದ ಕಷ್ಟಗಳಿಂದ ತುಂಬಿದೆ. ಹಸಿವು, ನೀರಡಿಕೆ, ರೋಗ, ರುಜಿನ, ಹುಟ್ಟು, ಸಾವು ಮುಂತಾದ ಕಷ್ಟಗಳು ಈ ಪ್ರಪಂಚದಲ್ಲಿ ಹುಟ್ಟುವ ಎಲ್ಲರನ್ನೂ ಒಂದಲ್ಲಾ ಒಂದು ರೀತಿಯಲ್ಲಿ ಬಾಧಿಸುತ್ತವೆ. ಇವನ್ನು ಭೌತಿಕವಾಗಿ ದೂರ ಮಾಡಲು ಹೆಣಗುವುದಕ್ಕಿಂತಾ ಸೃಷ್ಟಿಯ ಬಗೆಗಿನ ತಮ್ಮ ದೃಷ್ಟಿಕೋನವನ್ನೇ ಬದಲಾಯಿಸಿಕೊಂಡು ತಮ್ಮನ್ನು ತಾವು ಸಂತೈಸಿಕೊಳ್ಳುವುದು ಜ್ಞಾನಿಗಳ ಲಕ್ಷಣವೆನಿಸಿಕೊಳ್ಳುತ್ತದೆ. ವ್ಯಕ್ತಿಯಾಗಿ ತಾನಿರುವ ಪ್ರಪಂಚವನ್ನೇ ಬದಲಾಯಿಸುವುದಕ್ಕಿಂತಾ ತನ್ನನ್ನು ತಾನು ಬದಲಾಯಿಸಿಕೊಳ್ಳುವುದು ‘ವಿವೇಕಯುತ’ವಾದದ್ದು. ಈ ಸಂಸಾರದಲ್ಲಿ ಸಿಕ್ಕಿಕೊಂಡಿರುವ ತನಕ ಹುಟ್ಟಿದ ಮೇಲೆ ಸಾಯುವುದು, ಸತ್ತಮೇಲೆ ಮತ್ತೆ ಹುಟ್ಟುವುದು ಅನಿವಾರ್ಯ. ದೇಹ-ಆತ್ಮಗಳು ಬೇರೆ ಬೇರೆಯಾಗಿದ್ದು, ದೇಹ ನಶ್ವರವಾಗಿದೆ. ಆತ್ಮಕ್ಕೆ ಸಾವಿಲ್ಲ ಎಂದು ನಂಬುವುದು ಆತ್ಮಜ್ಞಾನ. ತಾನು ವಿಶ್ವಾತ್ಮನಾದ ಬ್ರಹ್ಮನ ಅವಿಭಾಜ್ಯ ಅಂಗ ಅಥವಾ ಸತ್ವವೆಂದು ನಂಬುವುದು  ‘ಪರಮಜ್ಞಾನ.’ ಈ ಜ್ಞಾನವನ್ನು ಹೊಂದಿ ಹುಟ್ಟು-ಸಾವುಗಳ ಚಕ್ರದಿಂದ ಪಾರಾಗುವುದೇ, ‘ಮುಕ್ತಿ’.

ಹೀಗೆ, ಇಡೀ ಸೃಷ್ಟಿಯ ಸಾರಸತ್ವ ಮತ್ತು ತನ್ನ ವ್ಯಕ್ತಿಗತ ಸಾರಸತ್ವ ಎರಡೂ ಒಂದೇ ಆಗಿರುವುದರಿಂದ ವ್ಯಕ್ತಿಯು ವ್ಯಕ್ತಿಗತವಾಗಿ ತನ್ನ ಮುಕ್ತಿಯನ್ನು ಸಾಧಿಸಿದರೆ, ವಿಶ್ವವೇ ಮುಕ್ತಿಯನ್ನು ಸಾಧಿಸಿದಂತೆ. ಆದ್ದರಿಂದ ಅವರವರ ಮುಕ್ತಿಗೆ ಅವರವರೇ ಹೊಣೆಗಾರರು. ಇತರರಿಗೆ ಮುಕ್ತಿ ಹೊಂದಲು ಸಹಾಯ ಮಾಡುತ್ತೇನೆನ್ನುವುದೂ ಈ ಸಾಧು-ಸಂತರ ಪ್ರಕಾರ ಅಹಂಕಾರವೇ. ಅಂದರೆ, ಎಲ್ಲರೂ ಅವರವರ ಮಟ್ಟಿಗೆ `ಆತ್ಮನಿರ್ಭರ’ರಾದರೆ ಸಾಕು. ಹಾಗಿದ್ದರೂ ಊಟ, ಬಟ್ಟೆ, ವಸತಿ, ಔಷಧ ಮುಂತಾದ ಕನಿಷ್ಠ ಜೀವನಾಧಾರಗಳಿಗಾಗಿ ಇತರರನ್ನು ಅವಲಂಬಿಸಲೇಬೇಕಾದ ಅನಿವಾರ್ಯತೆಯಿಂದಾಗಿ  ಆಶ್ರಮ, ಗುರುಕುಲ, ಶಿಷ್ಯತ್ವ ಮುಂತಾದ ಸಡಿಲವಾದ ಕುಟುಂಬ ವ್ಯವಸ್ಥೆಯ ಮೂಲಕ ಇಂಥವರು ಒಂಟಿಯಾಗಿದ್ದರೂ ಸಾಮಾಜಿಕ ವ್ಯಕ್ತಿಗಳೇ ಆಗಿರುತ್ತಾರೆ.

ಮೇಲೆ ಹೇಳಿದ ಆಧ್ಯಾತ್ಮಿಕತೆ ಮತ್ತು ಪ್ರಜ್ಞಾಪೂರ್ವಕವಾದ ಸಾಮಾಜಿಕತೆಯನ್ನು ಒಂದುಗೂಡಿಸಿ ಬದುಕುವ ಸಾಧು-ಸಂತರು ಎರಡನೆಯ ಬಗೆಯ ಜನರು. ನಮ್ಮ ಸುತ್ತಲಿನ ಜೀವಿಗಳೆಲ್ಲರೂ ನಮ್ಮ ಸಹ ನರಳಿಕೆಯ ಬಂಧುಗಳೇ ಆದ್ದರಿಂದ, ‘ಸಮಾಜಸೇವೆ’ಯು ಆಧ್ಯಾತ್ಮಿಕ ಸಾಧನೆಯ ಇನ್ನೊಂದು ರೂಪ ಎಂದು ಇವರು ನಂಬುತ್ತಾರೆ. ಆದ್ದರಿಂದ ಬಡಜನರು ಅವರ ಭೌತಿಕ ಅಗತ್ಯಗಳನ್ನು ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ, ಸಾಂಕೇತಿಕವಾಗಿ, ಪೂರೈಸಿಕೊಳ್ಳಲು ನೆರವಾಗುವುದು ಭಗವತ್ಸೇವೆಯೇ ಆಗುತ್ತದೆ ಎಂಬುದು ಇವರ ನಿಲುವು. ಕಡೆಯ ಪಕ್ಷ ಬಡಜನರನ್ನು ಅವರ ಕಷ್ಟಕಾಲದಲ್ಲಿ ಸಂತೈಸುವುದು, ಆಪ್ತ ಸಮಾಲೋಚನೆಯ ಮೂಲಕ ಅವರ ದುಃಖ-ದುಮ್ಮಾನಗಳನ್ನು ಕಡಿಮೆ ಮಾಡುವುದು ಅವರು ಮಾಡುವ ಸಾಮಾಜಿಕ ಕೆಲಸ. ಜನಸಾಮಾನ್ಯರ ಮುಕ್ತಿಯಲ್ಲಿ ತಮ್ಮ ಮುಕ್ತಿಯೂ ಸೇರಿದೆಯಾದ್ದರಿಂದ ‘ಜನಸೇವೆಯೇ ಜನಾರ್ದನ ಸೇವೆ’ ಎಂದು ತಿಳಿದು ಸಾಮಾಜಿಕ ಒಡನಾಟದಲ್ಲಿ ತೊಡಗುವುದು ಇವರ ಆಧ್ಯಾತ್ಮಿಕತೆಯ ಪ್ರಧಾನ ಶೈಲಿ. ಮುಗ್ಧ ಬಡಜನರು ಮತ್ತು ಪಾಪಭೀತಿಯ ಶ್ರೀಮಂತರು ಇವರ ಜೀವನ ಶೈಲಿಗೆ ಅಗತ್ಯವಾದ ಹಣವನ್ನು ದೇಣಿಗೆ, ದಾನ ಮುಂತಾದ ವಿಧಾನಗಳ ಮೂಲಕ ಒದಗಿಸುವವರು. ಈ ಎಲ್ಲ ಸಾಧು-ಸಂತರನ್ನು ಜನ ಉತ್ತರ ಭಾರತದಲ್ಲಿ ‘ಭಗತ್ ಲೋಗ್’ ಎಂದು ಕರೆಯುವುದುಂಟು.

ಈಚೆಗೆ ದೆಹಲಿ ಮತ್ತು ಹರಿದ್ವಾರಗಳಲ್ಲಿ ಆಯೋಜಿಸಲಾಗಿದ್ದ ಧರ್ಮ ಸಂಸತ್ತಿನಲ್ಲಿ ಪಾಲ್ಗೊಂಡು ದ್ವೇಷ ಭಾಷಣ ಮಾಡಿ ಸುದ್ದಿಮಾಡಿದವರೂ ಸಹ ತಮ್ಮನ್ನು ಸಾಧು-ಸಂತರೆಂದೇ ಕರೆದುಕೊಳ್ಳುತ್ತಾರೆ. ಕಾಷಾಯ ದಿರಿಸು, ಮಾರುಗಟ್ಟಲೆ ರುದ್ರಾಕ್ಷಿ ಮಾಲೆ, ಎದ್ದು ಕಾಣುವ ಧಾರ್ಮಿಕ ಲಾಂಛನಗಳೇ ಇವರ ಆಧ್ಯಾತ್ಮಿಕತೆ. ಇವನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸುತ್ತಾ, ತಮ್ಮನ್ನು ರಕ್ಷಿಸುವ ‘ಧರ್ಮ’ವನ್ನು ಪ್ರಾಣ ಕೊಟ್ಟಾದರೂ ರಕ್ಷಿಸಲು ಸಿದ್ಧರಾಗಿರುವ ವೀರ ಯತಿಗಳು ಇವರು. ಶ್ರೀಮಂತಿಕೆ ತುಂಬಿ ತುಳುಕುವ ಮಠ, ಅಗಾಧ ಭೂಮಿ-ಕಟ್ಟಡಗಳ ಆಸ್ತಿ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಹೈಟೆಕ್ ಆಸ್ಪತ್ರೆಗಳು, ನಾನಾ ಬಗೆಯ ಕೈಗಾರಿಕೋದ್ಯಮಗಳು, ಪ್ರತ್ಯಕ್ಷ ಮತ್ತು ಪರೋಕ್ಷ ರಾಜ್ಯಾಧಿಕಾರವನ್ನು ಹೊಂದಿದ ಇವರಿಗೆ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು, ಸಿನಿಮಾ ತಾರೆಯರು ಮತ್ತು ಉನ್ನತ ಅಧಿಕಾರಿಗಳು ‘ಆಪ್ತವಲಯ’ಕ್ಕೆ ಸೇರಿದವರು. ದುಷ್ಟ ಶಿಕ್ಷಣೆ ಮತ್ತು ಶಿಷ್ಟ ರಕ್ಷಣೆ, ಧರ್ಮ ಸಂಸ್ಥಾಪನೆ ಇವರ ಧ್ಯೇಯವಾಕ್ಯ. ಕ್ಷಾತ್ರಬಲವನ್ನು ಮತ್ತು ಬ್ರಹ್ಮತೇಜಸ್ಸನ್ನು ಮೇಳವಿಸಿದ ಪರಶುರಾಮ, ಧರ್ಮವನ್ನು ಉದ್ಧರಿಸಲು ಅವತಾರವೆತ್ತಿ ರಾಕ್ಷಸರನ್ನು ಕೊಂದ ಶ್ರೀರಾಮ, ಧರ್ಮ ಸಂಸ್ಥಾಪನೆಗಾಗಿ ದುಷ್ಟರ ಸಂಹಾರ ಮಾಡುವುದು ಅನಿವಾರ್ಯವಾದಾಗ ತನ್ನ ಸೋದರ ಮಾವನನ್ನೇ ಕೊಂದ ಶ್ರೀಕೃಷ್ಣ ಈ ಸಾಧು-ಸಂತರ ನೆಚ್ಚಿನ ದೇವರುಗಳು. ಈ ಸಾಧು-ಸಂತರ ಮಾರ್ಗದರ್ಶನ ಪಡೆಯಲು ಇವರ ಚೇಲಾಗಳು, ಶಿಷ್ಯವೃಂದ ಮತ್ತು ಭಕ್ತವೃಂದಗಳು ಅದೆಷ್ಟು ಜನ್ಮಗಳ ಪುಣ್ಯ ಮಾಡಿದ್ದಾರೋ ಊಹಿಸುವುದೂ ಕಷ್ಟ. ಈ ಸಾಧು-ಸಂತರೂ ತಮ್ಮನ್ನು ತಾವೇ ‘ಭಗತ್ ಲೋಗ್’ ಎಂದು ಕರೆಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಈ ಹಿನ್ನೆಲೆಯಲ್ಲಿ, ಕಿಪ್ಲಿಂಗ್ ನ ಸಾಹಿತ್ಯದಲ್ಲಿ ಸಿಗುವ ಸಂತನೊಬ್ಬನ ಕತೆ ವಿಶೇಷವಾಗಿ ಗಮನ ಸೆಳೆಯುತ್ತದೆ. ಭಾರತದಲ್ಲಿ ಹುಟ್ಟಿ, ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸವನ್ನು ಪಡೆದು ಈಸ್ಟ್ ಇಂಡಿಯಾ ಕಂಪೆನಿಯ ಗೂಢಚಾರನಾಗಿ  ಕೆಲಸ ಮಾಡಿದ ರುಡ್ಯಾರ್ಡ್ ಕಿಪ್ಲಿಂಗ್ ಭಾರತದ ಬೌದ್ಧ ಮತ್ತು ಹಿಂದೂ ವೇದಾಂತ ಮೂಲದ ಅಧ್ಯಾತ್ಮಿಕತೆಯನ್ನು ಸಾಮಾಜಿಕ ನೆಲೆಯಲ್ಲೂ ಅರ್ಥೈಸಿಕೊಂಡಿದ್ದ ಬ್ರಿಟಿಷ್ ಲೇಖಕ. ರಾಜಕೀಯ-ಆಧ್ಯಾತ್ಮಿಕ ಅನ್ವೇಷಣೆಯನ್ನು ಕೇಂದ್ರವಾಗಿರಿಸಿಕೊಂಡ ಅವನ ‘ಕಿಮ್’ ಕಾದಂಬರಿ, ಯುದ್ಧಭೂಮಿಯಲ್ಲಿ ಸೈನಿಕರಿಗೆ ತನ್ನ ಪ್ರಾಣವನ್ನೇ ಪಣವಿಟ್ಟು ನೀರು ಒದಗಿಸುವ ಹರಕು ಬಟ್ಟೆಯ ಹುಡುಗನನ್ನು ಕೊಂಡಾಡುವ ‘ಗಂಗಾದೀನ್’ ಎಂಬ ಕವನ, ಭಾರತದ ನೆಲ-ಜನ-ಚಿಂತನೆಗಳ ಬಗ್ಗೆ ಕಿಪ್ಲಿಂಗ್ ಗೆ ಇದ್ದ ಪ್ರೀತಿ-ಆಸಕ್ತಿಗಳನ್ನು ದಾಖಲಿಸುತ್ತವೆ. ಅವನು ಬರೆದ `ದಿ ಮಿರಾಕಲ್ ಆಫ್ ಪೂರಣ್ ಭಗತ್’ ಎಂಬ ಸಂತನ ತ್ಯಾಗದ ನಿರೂಪಣೆ ಈಶಾವಾಸ್ಯೋಪನಿಷತ್ತಿನ ಸಾಮಾಜಿಕ ದರ್ಶನವನ್ನು ‘ವಿಶ್ವಗುರು’ವಾದ ಭಾರತೀಯರಿಗೇ ಪರಿಚಯಿಸುವ ಕತೆ.

ಈ ಕತೆಯ ಕೇಂದ್ರ ಪಾತ್ರ ಪೂರಣ್ ದಾಸ್ ಎಂಬ ಬ್ರಾಹ್ಮಣ ದಿವಾನ. ಈತ ಬ್ರಿಟಿಷ್ ಆಡಳಿತದ ಅಡಿಯಲ್ಲೇ ತನ್ನ ಹಿಮಾಲಯದ ಗುಡ್ಡಗಾಡು ಪ್ರಾಂತ್ಯದ ಹಿಂದೂ ರಾಜನ ಬಳಿ ಸೇವೆ ಸಲ್ಲಿಸುವ ಐ.ಸಿ.ಎಸ್. ಅಧಿಕಾರಿ. ಆಗಿನ ಕಾಲದ ಸಾಂಪ್ರದಾಯಿಕ ಧಾರ್ಮಿಕ ನಿರ್ಬಂಧಗಳನ್ನು ಧಿಕ್ಕರಿಸಿ ಸಮುದ್ರಯಾನ ಮಾಡಿ ಬಂದು ತನ್ನ ಆಳ್ವಿಕೆಯ ಆ ಬೆಟ್ಟಗುಡ್ಡಗಳ ಸಣ್ಣ ರಾಜ್ಯದ ಜನರಿಗಾಗಿ ಆಧುನಿಕ ಸುಧಾರಣೆಗಳನ್ನು ತರುತ್ತಾನೆ. ತನ್ನ ಆಡಳಿತಾತ್ಮಕ ಜಾಣ್ಮೆಯಿಂದ ರಾಜನನ್ನು ಒಲಿಸಿಕೊಂಡು, ಆಧುನಿಕತೆಯನ್ನು ಜನರಿಗೆ ಪರಿಚಯಿಸುತ್ತಾನೆ. ಅಂಥವನು ತನ್ನ ವೃತ್ತಿಯ ಉತ್ತುಂಗ ಶಿಖರದಲ್ಲಿದ್ದಾಗ ‘ಸತ್ತುಹೋದ’ ಎಂದು ಕಿಪ್ಲಿಂಗ್ ಹೇಳುತ್ತಾನೆ. ಹಾಗೆಂದರೆ ಪೂರಣ್ ದಾಸ್ ಸಂನ್ಯಾಸವನ್ನು ಸ್ವೀಕರಿಸಿದ ಎಂದು ಅರ್ಥ. ಸಾಂಪ್ರದಾಯಿಕ ಹಿಂದೂ ಚಿಂತನೆಯ ದೃಷ್ಟಿಯ ಪ್ರಕಾರ ಸಂನ್ಯಾಸಿಯಾಗುವುದೆಂದರೆ ಪೂರ್ವಾಶ್ರಮದ ಬದುಕಿಗೆ ವಿದಾಯ ಹೇಳುವುದೇ ತಾನೆ!

ಆ ಇಳಿ ವಯಸ್ಸಿನಲ್ಲಿ ವಿರಾಗಿಯಾಗಿ, ಎಲ್ಲ ಲೌಕಿಕ ಭೋಗಗಳನ್ನೂ ತೊರೆದು  ಜನವಸತಿ ವಿರಳವಾಗಿರುವ ಗುಡ್ಡಗಳ ನಡುವೆ ಒಂದು ಸಣ್ಣ ಗುಹೆಯಲ್ಲಿ ಪೂರಣ್ ಭಗತ್ ಆಗಿ ವಾಸಿಸುತ್ತಾ ಸಮಾಧಿಯ ಹಂತಕ್ಕೆ ತಲುಪುವಷ್ಟು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗುತ್ತಾನೆ. ಗುಡ್ಡಗಳ ಬುಡದಲ್ಲಿ, ನೂರಾರು ಅಡಿ ಕೆಳಗೆ ಸುತ್ತ ಮುತ್ತಲಿನ ಕಣಿವೆಗಳಲ್ಲಿ ವಾಸಿಸುವ ಗ್ರಾಮಸ್ಥರು ದಿನವೂ ಗುಡ್ಡ ಹತ್ತಿ ಗುಡ್ಡ ಇಳಿದು ಪೂರಣ್ ಭಗತ್ ಗೆ ಅಯಾಚಿತವಾಗಿ ಆಹಾರವನ್ನು ತಂದುಕೊಡುತ್ತಾರೆ. ನಾನಾ ಬಗೆಯ ಕಾಡು ಪ್ರಾಣಿಗಳು ಸಾಧು ಸ್ವಭಾವವನ್ನು ಮೈಗೂಡಿಸಿಕೊಂಡು ಅವನ ಬಂಧುಗಳಾಗುತ್ತಾರೆ. ಹೀಗಿರಲು ಒಂದು ಸಲ ವಾರಗಟ್ಟಲೆ ಮಳೆ ಸುರಿಯುತ್ತದೆ. ಪೂರಣ್ ಭಗತ್ ನಿಸ್ಸಹಾಯಕನಾಗಿ, ಆಹಾರವಿಲ್ಲದೆ ಗುಹೆಯಲ್ಲೇ ಉಳಿಯುತ್ತಾನೆ. ಮಧ್ಯರಾತ್ರಿಯಲ್ಲಿ, ಮಳೆಸುರಿಯುತ್ತಿರುವಾಗಲೇ ತನ್ನ ಜೊತೆಗಿದ್ದ ಕಡವೆಯು ಕೊಡುವ ಮುನ್ಸೂಚನೆಯಿಂದಾಗಿ ಭೂ ಕುಸಿತ ಸಂಭವಿಸುತ್ತದೆ ಎಂದು ಅವನಿಗೆ ಅರ್ಥವಾಗುತ್ತದೆ. ಕಣಿವೆಯಲ್ಲಿ ವಾಸಿಸುವ, ತನಗೆ ದಿನವೂ ಆಹಾರ ತಂದುಕೊಡುವ  ಗ್ರಾಮಸ್ಥರು ಮನಸ್ಸಿಗೆ ಬರುತ್ತಾರೆ. ಗುಡ್ಡ ಕುಸಿದರೆ ಕಣಿವೆಯಲ್ಲಿರುವ ಗ್ರಾಮಸ್ಥರ ಗತಿ ಏನು ಎಂದು ವ್ಯಾಕುಲನಾಗುತ್ತಾನೆ. ಒಬ್ಬ ಸಾಧು, ಒಂದು ಕ್ಷಣ, ವಿರಾಗಿಯಾದ ಸಾಧು, ತಾನೇನು ಮಾಡಬಲ್ಲೆ ಎಂದು ವ್ಯಸನಪಟ್ಟು ಉದಾಸೀನನಾಗುತ್ತಾನೆ. ಮರುಕ್ಷಣವೇ ‘ಪೂರಣ್ ಭಗತ್’  ‘ಪೂರಣ್ ದಾಸ್’ ಅಧಿಕಾರಿಯಾಗಿ ಬಿಡುತ್ತಾನೆ.

ಕಡವೆಯ ಕೊರಳಿನ ಆಸರೆ ಪಡೆದು ಲೆಕ್ಕಿಸದೆ ಗುಡ್ಡ ಇಳಿದು, ಆಯಾಸವಾದರೂ ಗುಡ್ಡ ಹತ್ತಿ ಕಣಿವೆಗಳಲ್ಲಿ ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿಕೊಂಡು ಮಲಗಿದ್ದ ಜನರ ಒಂದೊಂದು ಮನೆಯ ಬಾಗಿಲನ್ನೂ ತಟ್ಟಿ ಗುಡ್ಡ ಕುಸಿಯುತ್ತಿದೆ ಎಂದು ಕೂಗಿ ಕೂಗಿ ಎಬ್ಬಿಸುತ್ತಾನೆ. ನಿದ್ದೆಗಣ್ಣಿನಲ್ಲಿದ್ದ ಜನರನ್ನು ಜಮಾಯಿಸಿಕೊಂಡು ಆ ನಿಟ್ಟಿರುಳಿನಲ್ಲಿ ಎದುರಿಗಿದ್ದ ಮತ್ತೊಂದು ಗುಡ್ಡವನ್ನು ಏರುತ್ತಾನೆ.  ಎಲ್ಲರೂ ಆತಂಕದಿಂದ ಬೆಳಗಾಗುವುದನ್ನೇ ಕಾಯುತ್ತಾರೆ. ಬೆಳಗಾಗಿ ನೋಡಿದರೆ ಅವರ ಇಡೀ ಹಳ್ಳಿಯ ಮೇಲೆ ಗುಡ್ಡವೇ ಜಾರಿ ಕುಳಿತಿರುತ್ತದೆ. ಮೊದಲು ಹಳ್ಳಿಯಿದ್ದ ಸ್ಥಳ ಹಳ್ಳಿಯ ಗುರುತೇ ಗೊತ್ತಾಗದಷ್ಟು ಮಣ್ಣು ರಾಶಿಯಾಗಿರುತ್ತದೆ. ಪೂರಣ್ ಭಗತ್ ವಯಸ್ಸಿನ ಮತ್ತು ಅತೀವ ಶ್ರಮದಿಂದಾದ ಬಳಲಿಕೆಯ ನಿಶ್ಶಕ್ತಿಯಿಂದಾಗಿ ಪ್ರಾಣಬಿಡುತ್ತಾನೆ. ಗ್ರಾಮಸ್ಥರು ಕೃತಜ್ಞತೆಯಿಂದ ಅವನಿಗೊಂದು ಗುಡಿ ಕಟ್ಟುತ್ತಾರೆ. ಆ ಗುಡಿಯ ಹಿನ್ನೆಲೆ, ಕತೆಗಾರ ಕಿಪ್ಲಿಂಗ್ಗೆ ದೊರೆತು ‘ದಿ ಮಿರಾಕಲ್ ಆಫ್ ಪೂರಣ್ ಭಗತ್’ ಕತೆ ಹುಟ್ಟುತ್ತದೆ.

‘ಪೂರ್ಣ ಮದಃ, ಪೂರ್ಣಮಿದಂ’ ಎಂಬ ಮಂತ್ರ ಬಾಯಿಪಾಠವಾಗಿರುವ. ದೆಹಲಿ-ಹರಿದ್ವಾರದ ಧರ್ಮ ಸಂಸತ್ತಿನ ‘ಸಾಧು-ಸಂತ’ರು ಧರ್ಮದ ರಕ್ಷಣೆಗಾಗಿ ಪ್ರಾಣ ಕೊಡಲು ಕರೆಕೊಡುತ್ತಾರೆ. ಯಾರ ಪ್ರಾಣ? ಎಂಬ ಪ್ರಶ್ನೆಗೆ ಸಿಗುವ ಉತ್ತರದಲ್ಲಿ ಪೂರಣ್ ಭಗತ್ ಆಚರಿಸಿದ ಧರ್ಮಕ್ಕೂ ‘ಭಗತ್ ಲೋಗ್’ ಆಚರಿಸಲು ಬಯಸುವ ಧರ್ಮಕ್ಕೂ ಇರುವ ವ್ಯತ್ಯಾಸ ಢಾಳಾಗಿ ಗೋಚರಿಸುತ್ತದೆ.

Donate Janashakthi Media

Leave a Reply

Your email address will not be published. Required fields are marked *