ರಾಜಕೀಯ ನೈತಿಕತೆಯೂ ಅಧಿಕಾರ ರಾಜಕಾರಣವೂ

ರಾಜಕಾರಣ ಮತ್ತು ನೈತಿಕತೆ ಎರಡೂ ವಿರುದ್ಧ ಧೃವಗಳಲ್ಲಿರುವ ಪರಿಸ್ಥಿತಿಯಲ್ಲಿ ನಾವಿದ್ದೇವೆ

– ನಾ ದಿವಾಕರ

76 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತದ ರಾಜಕೀಯ ವಲಯ ಅಥವಾ ವಿಶಾಲ ರಾಜಕಾರಣ ಕಳೆದುಕೊಂಡಿರುವ ಅತ್ಯಮೂಲ್ಯ ಮೌಲ್ಯ ಎಂದರೆ ವ್ಯಕ್ತಿಗತ ನೈತಿಕತೆ-ಸಾಂಘಿಕ ನಿಷ್ಠೆ ಮತ್ತು ಸಾಂಸ್ಥಿಕ ಸ್ವಾಸ್ಥ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣ ಎನ್ನುವುದು ಆಳುವ ಹಂದರ ಅಲ್ಲ ಬದಲಾಗಿ ಆಳ್ವಿಕೆಯ ಮುಖಾಂತರ ದೇಶದ ಅಸಂಖ್ಯಾತ ಅವಕಾಶವಂಚಿತರ ನಿತ್ಯ ಬದುಕಿಗೆ ಸ್ಪಂದಿಸುವ ಒಂದು ಸಹಯೋಗದ ಅಂಗಳ. ʼ ಪ್ರಜಾಪ್ರಭುತ್ವ ʼ ಎಂಬ ಪದದ ಔನ್ನತ್ಯ ಅಡಗಿರುವುದೇ ʼಪ್ರಜೆʼ ಎಂಬ ಪರಿಕಲ್ಪನೆಯಲ್ಲಿ. ಆಯಾಕಾಲಕ್ಕೆ ನಡೆಯುವ ಸಂಸದೀಯ ಚುನಾವಣೆಗಳಲ್ಲಿ ಸಾರ್ವಭೌಮ ಮತದಾರರ ಸಮ್ಮತಿಯೊಂದಿಗೆ ಅಧಿಕಾರ ಕೇಂದ್ರಗಳಲ್ಲಿ ಸ್ಥಾಪಿತವಾಗುವ ʼ ರಾಜಕೀಯ ಪಕ್ಷಗಳು ʼ ತಮ್ಮ ಪ್ರಾತಿನಿಧಿಕ ಲಕ್ಷಣವನ್ನು ಗಮನದಲ್ಲಿಟ್ಟುಕೊಂಡೇ ವಿಶಾಲ ಸಮಾಜದ ಏಳಿಗೆಗಾಗಿ ಆಡಳಿತ ನೀತಿಗಳನ್ನೂ, ಯೋಜನೆಗಳನ್ನೂ ರೂಪಿಸಬೇಕಿರುವುದು ಪ್ರಜಾಪ್ರಭುತ್ವದ ಮೂಲ ಆಶಯ.

ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಅಧಿಕಾರ ವಹಿಸಿಕೊಳ್ಳಲು ನೆರವಾಗುವ ʼ ಬಹುಮತ ʼ ಒಂದು ರೀತಿಯಲ್ಲಿ ಅರ್ಧಸತ್ಯ. ಏಕೆಂದರೆ ಅಧಿಕಾರ ವಹಿಸಿಕೊಳ್ಳುವ ಪಕ್ಷದ ಮತಗಳಿಕೆ ವಾಸ್ತವವಾಗಿ ಬಹುಸಂಖ್ಯಾ ಮತದಾರರ ಅಪೇಕ್ಷೆಯನ್ನು ಬಿಂಬಿಸುವುದಿಲ್ಲ. ಸ್ಪರ್ಧಾ ಕಣದಲ್ಲಿರುವವರ ಪೈಕಿ ಹೆಚ್ಚಿನ ಮತ ಗಳಿಸಿದ ಪಕ್ಷ ಅಧಿಕಾರಕ್ಕೆ ಬರುತ್ತದೆ. ಸಂಸದೀಯ ಪ್ರಜಾತಂತ್ರದ First Past Post (ಮೊದಲು ಗುರಿ ದಾಟಿದವರನ್ನು ವಿಜಯಿಯಾಗಿ ಸೂಚಿಸುವ) ಮಾದರಿಯನ್ನು ಭಾರತ ಒಪ್ಪಿಕೊಂಡಿರುವುದರಿಂದ ಶೇ 40ರಷ್ಟು ಮತಗಳಿಸಿದ ಪಕ್ಷ-ಮೈತ್ರಿಕೂಟ ಆಳ್ವಿಕೆಯ ಅರ್ಹತೆ ಪಡೆದುಕೊಳ್ಳುತ್ತದೆ. ಹೀಗಾಗಿ ಸಂಸತ್ತನ್ನು ಪ್ರವೇಶಿಸಿದ ಕೂಡಲೇ ಈ ಅಧಿಕಾರಾರೂಢ ಪಕ್ಷಗಳು ತಮ್ಮ ಸಾಂಸ್ಥಿಕ ಅಸ್ಮಿತೆಗಳನ್ನು ಕಳಚಿಕೊಂಡು ದೇಶದ ಸಮಸ್ತ ಜನಕೋಟಿಯ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಆಡಳಿತ-ವಿರೋಧ ಪಕ್ಷಗಳ ನಡುವೆ ಸಂಖ್ಯೆಗಳಲ್ಲಿರುವ ಅಂತರವು ಪ್ರಜಾಸತ್ತೆಯ ಮೂಲ ಆಶಯಗಳಿಗೆ ಧಕ್ಕೆ ಉಂಟುಮಾಡದ ಹಾಗೆ ಆಡಳಿತ ನಿರ್ವಹಿಸುವ ಜವಾಬ್ದಾರಿ ಚುನಾಯಿತ ಪ್ರತಿನಿಧಿ-ಪಕ್ಷಗಳ ಮೇಲಿರುತ್ತದೆ.

ರಾಜಕೀಯ ನೈತಿಕತೆಯ ಸುತ್ತ

ಈಗ ನಾವು ಚರ್ಚಿಸುತ್ತಿರುವ ರಾಜಕೀಯ ನೈತಿಕತೆ ಅಥವಾ ನೈತಿಕ ರಾಜಕಾರಣದ ನೆಲೆಗಟ್ಟುಗಳನ್ನು ಈ ಮೇಲಿನ ಸನ್ನಿವೇಶದಲ್ಲಿಟ್ಟು ಪರಾಮರ್ಶಿಸಬೇಕಾಗುತ್ತದೆ. ಸ್ವತಂತ್ರ ಭಾರತದ ಆರಂಭಿಕ ಎರಡು ದಶಕಗಳಲ್ಲಿ ಉಗಮಿಸಿದ ರಾಜಕೀಯ ನಾಯಕರು ನೈತಿಕತೆಯ ಪ್ರಶ್ನೆಗೆ ಸಾರ್ವಜನಿಕ ಅವಕಾಶವನ್ನು ನೀಡದೆಯೇ ಆಡಳಿತ ನಿರ್ವಹಣೆ ನಡೆಸಿದ್ದರು. ಹಾಗೆಂದ ಮಾತ್ರಕ್ಕೆ ನೈತಿಕತೆ ಎನ್ನುವುದು ಸರ್ವವ್ಯಾಪಿಯಾಗಿತ್ತು ಎಂದರ್ಥವಲ್ಲ. ತಾವು ಚುನಾಯಿಸಿದ ಪ್ರತಿನಿಧಿಗಳಲ್ಲಿ ಅನೈತಿಕತೆಯನ್ನು ಗುರುತಿಸಲು ಮತದಾರರಿಗೆ ಕಷ್ಟಸಾಧ್ಯವಾಗುತ್ತಿತ್ತು. ಒಂದು ರೈಲ್ವೆ ದುರಂತಕ್ಕಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜನಸಾಮಾನ್ಯರ ನಡುವೆ ನೈತಿಕತೆಯ ಒಂದು ಆಯಾಮವನ್ನು ಪರಿಚಯಿಸಿದ್ದರು. ಆಡಳಿತ ನೀತಿಗಳ ಕೊರತೆಗಳು, ವೈಫಲ್ಯಗಳು ಅಥವಾ ಕೆಲವು ಅಸಮಾಧಾನಗಳನ್ನು ಹೊರತುಪಡಿಸಿದರೆ ರಾಜಕೀಯ ವಲಯ ನೈತಿಕತೆಯ ಕಟಕಟೆಯಲ್ಲಿ ನಿಂತಿರಲಿಲ್ಲ.

ಆದರೆ ಏಳು ದಶಕಗಳ ನಂತರ ಭಾರತದ ರಾಜಕಾರಣ ತದ್ವಿರುದ್ಧ ದಿಕ್ಕಿನಲ್ಲಿ ನಿಂತಿದೆ. 2024ರ ಚುನಾವಣೆಗಳಲ್ಲಿ ಶೇಕಡಾ 64.2 ಕೋಟಿ ಮತದಾರರು ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಿ ದಾಖಲೆ ಸ್ಥಾಪಿಸಿದ್ದಾರೆ. ಆದರೆ ಈ ದಾಖಲೆಯನ್ನು ನಗಣ್ಯಗೊಳಿಸುವ ರೀತಿಯಲ್ಲಿ, 251 ಕ್ರಿಮಿನಲ್‌ ಆರೋಪಗಳಿರುವ ಸಂಸದರನ್ನೂ ಚುನಾಯಿಸಿದ್ದಾರೆ. ಇವರ ಪೈಕಿ 27 ಸಂಸದರು ಈಗಾಗಲೇ ಒಮ್ಮೆ ಶಿಕ್ಷೆಗೊಳಗಾಗಿದ್ದಾರೆ. 2004ರಲ್ಲಿ ಇಂಥವರ ಸಂಖ್ಯೆ 125 (ಶೇಕಡಾ 23)ರಷ್ಟಿತ್ತು. ಈಗ ಶೇಕಡಾ 46ಕ್ಕೆ ಏರಿದೆ. ಅಂದರೆ ಭಾರತದ ಸಂಸತ್ತನ್ನು ಪ್ರತಿನಿಧಿಸುವ ಅಪರಾಧ ಹಿನ್ನೆಲೆಯ ಸಂಸದರ ಸಂಖ್ಯೆ 20 ವರ್ಷಗಳಲ್ಲಿ ದುಪ್ಪಟ್ಟಾಗಿದೆ. (ರೈತರ ವರಮಾನವಂತೂ ದುಪ್ಪಟ್ಟಾಗಲಿಲ್ಲ !!). 170 (ಶೇಕಡಾ 31) ಸಂಸದರ ವಿರುದ್ಧ ಅತ್ಯಾಚಾರ, ಕೊಲೆ, ಕೊಲೆ ಪ್ರಯತ್ನ, ಅಪಹರಣ, ಮಹಿಳಾ ದೌರ್ಜನ್ಯಗಳ ಆರೋಪಗಳಿವೆ. 2009ರಲ್ಲಿ ಇಂಥವರ ಸಂಖ್ಯೆ 76 (ಶೇಕಡಾ 14)ರಷ್ಟಿತ್ತು. ಇಲ್ಲೂ ಸಹ ದುಪ್ಪಟ್ಟು ಸಾಧನೆ !!!! ( Association for Democratic Rights )

ಈ ನೆಲೆಗಟ್ಟಿನಲ್ಲಿ ನಿಂತು ವರ್ತಮಾನ ಭಾರತದ ರಾಜಕಾರಣವನ್ನು ಗಮನಿಸಿದಾಗ ನಮಗೆ ನೆನಪಾಗಬೇಕಿರುವುದು ಡಾ. ಬಿ.ಆರ್. ಅಂಬೇಡ್ಕರ್‌ ಅವರು ಪ್ರತಿಪಾದಿಸಿದ ಸಾಂವಿಧಾನಿಕ ನೈತಿಕತೆ. ಪ್ರಜಾಪ್ರಭುತ್ವದ ಆಳ್ವಿಕೆಯೊಳಗೆ ಸಾಂವಿಧಾನಿಕ ಮಾನದಂಡಗಳಿಗೆ ಬದ್ಧವಾಗಿರುವುದನ್ನು ನಿರ್ವಚಿಸಲಾಗುವ ʼಸಾಂವಿಧಾನಿಕ ನೈತಿಕತೆʼಯು ವಿಶಾಲ ನೆಲೆಯಲ್ಲಿ ಜನರ ಸಾರ್ವಭೌಮತ್ವ, ಸಾಮಾಜಿಕ ನ್ಯಾಯ ಹಾಗೂ ನ್ಯಾಯ ನಿರ್ಣಯದ ನೆಲೆಗಳಲ್ಲಿ ಬದ್ಧತೆ ಇರುವುದನ್ನೂ ಸೂಚಿಸುತ್ತದೆ. ಬ್ರಿಟೀಷ್‌ ಇತಿಹಾಸಕಾರ ಜಾರ್ಜ್‌ ಗ್ರೋಟ್‌ ತಮ್ಮ ʼ ಹಿಸ್ಟರಿ ಆಫ್‌ ಗ್ರೀಸ್‌ ʼ ಕೃತಿಯಲ್ಲಿ ಪ್ರಜಾಪ್ರಭುತ್ವದ ಸ್ಥಾಪಕ ಎಂದೇ ಚಾರಿತ್ರಿಕವಾಗಿ ಗುರುತಿಸಲ್ಪಟ್ಟಿರುವ ರಾಜನೀತಿಜ್ಞ ಕ್ಲೀಸ್ತನೀಸ್‌ (ಕ್ರಿಪೂ 570-508) ಕೈಗೊಂಡ ಸುಧಾರಣೆಗಳ ನೆಲೆಗಟ್ಟಿನಲ್ಲಿ ಗ್ರೋಟ್‌ ಈ ಪದವನ್ನು ಬಳಸುತ್ತಾರೆ. ನಾಗರಿಕರಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸುವಂತಹ ಹಾಗೂ ಸಿರಿವಂತರು-ನಿರಂಕುಶಾಧಿಕಾರಿಗಳು ಬಲಾತ್ಕಾರದ ಮೂಲಕ ಅಧಿಕಾರ ಕಸಿದುಕೊಳ್ಳುವುದನ್ನು ತಡೆಯುವ ಸಂವಿಧಾನದ ಅಗತ್ಯವನ್ನು ಈ ಲೇಖಕರು ಒತ್ತಿ ಹೇಳುತ್ತಾರೆ.

ಸ್ವಾತಂತ್ರ್ಯ ಮತ್ತು ಸಂಯಮದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವ್ಯಾಖ್ಯಾನಿಸಲ್ಪಡುವ ʼಸಾಂವಿಧಾನಿಕ ನೈತಿಕತೆʼಯನ್ನು ಡಾ. ಅಂಬೇಡ್ಕರ್‌ ಭಾರತದ ಸಂದರ್ಭಗಳಿಗನುಗುಣವಾಗಿ ಮರುವ್ಯಾಖ್ಯಾನ ಮಾಡುತ್ತಾರೆ. ಸ್ವಾತಂತ್ರ್ಯಾನಂತರ ನವಂಬರ್‌ 4 1948ರಂದು ನಡೆದ ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡುವಾಗ ಅಂಬೇಡ್ಕರ್‌ ಗ್ರೋಟ್‌ ಅವರ ಅಭಿಪ್ರಾಯವನ್ನು ಉಲ್ಲೇಖಿಸುತ್ತಾರೆ. ಆಡಳಿತ ನಿರ್ವಹಣೆಯ ಸಂದರ್ಭಗಳಲ್ಲಿ ಸಂವಿಧಾನವು ಏನನ್ನೂ ಹೇಳದಿರುವಾಗ ಅಥವಾ ಆಳುವ ಸರ್ಕಾರಗಳು ತಮ್ಮ ವಿವೇಚನಾಧಿಕಾರವನ್ನು ಬಳಸುವಾಗ ಮಾರ್ಗದರ್ಶನ ನೀಡಬಹುದಾದ ಮಾನದಂಡಗಳನ್ನು ʼಸಾಂವಿಧಾನಿಕ ನೈತಿಕತೆʼಯ ವ್ಯಾಪ್ತಿಯಲ್ಲಿ ನಿರ್ವಚಿಸಬಹುದು ಎಂದು ಅಂಬೇಡ್ಕರ್‌ ಹೇಳುತ್ತಾರೆ. ಈ ನೆಲೆಯಲ್ಲಿ ನಿಂತು ವರ್ತಮಾನ ಭಾರತದ ರಾಜಕಾರಣವನ್ನು ಗಮನಿಸಿದಾಗ ನಾವು ʼನೈತಿಕತೆʼಯನ್ನು ಮೂರು ಆಯಾಮಗಳಲ್ಲಿ ವ್ಯಾಖ್ಯಾನಿಸಬಹುದು. ರಾಜಕೀಯ ಪ್ರತಿನಿಧಿಗಳ ವ್ಯಕ್ತಿಗತ ನೆಲೆ, ಆಳ್ವಿಕೆಯ ನೆಲೆ, ಪಕ್ಷಗಳ ಸಾಂಘಿಕ ನೆಲೆ ಹಾಗೂ ಆಡಳಿತ ವ್ಯವಸ್ಥೆಯ ಸಾಂಸ್ಥಿಕ ನೆಲೆ.

ನೈತಿಕತೆಯ ವಿಭಿನ್ನ ಆಯಾಮಗಳು

ವ್ಯಕ್ತಿಗತ ನೆಲೆಯಲ್ಲಿ ನಿಂತು ಮಾತನಾಡಿದರೆ ಮೇಲೆ ಉಲ್ಲೇಖಿಸಲಾದ ದತ್ತಾಂಶಗಳು ಏನನ್ನು ಸೂಚಿಸುತ್ತಿವೆ ? ರಾಜಕೀಯ ನಾಯಕರ ವಿರುದ್ಧ ಮಾಡಲಾಗುವ ಆರೋಪಗಳು ಸಾಪೇಕ್ಷ ವಿಂಗಡನೆಗೊಳಗಾಗಿ ರಾಜಕೀಯ ಪರ-ವಿರೋಧದ ಚರ್ಚೆಗೊಳಗಾಗುವುದೇ ಹೊರತು, ಈ ನಾಯಕರು ಗೈಯ್ಯುವ ಅಪರಾಧಗಳಿಗೆ ಬಲಿಯಾದ ಮಹಿಳೆಯಾಗಲೀ, ಆದಿವಾಸಿಗಳಾಗಲೀ, ಅಮಾಯಕ ಪ್ರಜೆಯಾಗಲೀ ಚರ್ಚೆಯ ಕೇಂದ್ರ ಬಿಂದು ಆಗುವುದೇ ಇಲ್ಲ. ಇತ್ತೀಚಿನ ಪ್ರಜ್ವಲ್‌ ರೇವಣ್ಣ ಪ್ರಕರಣ ಒಂದು ಜ್ವಲಂತ ಉದಾಹರಣೆ. ಸಮರ್ಥಕರ ದೃಷ್ಟಿಯ ಷಡ್ಯಂತ್ರ-ಪಿತೂರಿ, ವಿರೋಧಿಗಳ ದೃಷ್ಟಿಯ ಘೋರಾಪರಾಧ ಇವೆರಡರ ನಡುವೆ ತಮ್ಮ ಜೀವನ ಮತ್ತು ಬದುಕುವ ಘನತೆಯನ್ನೇ ಕಳೆದುಕೊಳ್ಳುವ ಅಮಾಯಕರು ಅಬ್ಬೇಪಾರಿಗಳಾಗಿ ಯಾವುದೋ ಒಂದು ಹೋರಾಟದ ಬಯಲಲ್ಲಿ ನಿಂತು ನ್ಯಾಯ ಕೇಳುತ್ತಿರುತ್ತಾರೆ.

ಸಮಾಜದ ಪ್ರಬಲ ವರ್ಗಗಳ ನಿರೂಪಣೆಗಳೇ ಪ್ರಧಾನ ಮುಖ್ಯವಾಹಿನಿಯ ಅಭಿಪ್ರಾಯಗಳಾಗುವ ಈ ಹೊತ್ತಿನಲ್ಲಿ ಅಪರಾಧ-ಅಪರಾಧಿ ಎರಡೂ ಸಾಪೇಕ್ಷವಾಗಿಬಿಡುತ್ತದೆ. ಸಂತ್ರಸ್ತ-ಸಂತ್ರಸ್ತೆಯರೂ ಸಾಪೇಕ್ಷವಾಗಿಬಿಡುತ್ತಾರೆ. ದುರಂತ ಎಂದರೆ ಈ ನಿರೂಪಣೆಗಳಿಗೆ ಸಾರ್ವತ್ರಿಕ ಸ್ವರೂಪ ನೀಡಿ ಸಾರ್ವಜನಿಕರ ಅಭಿಪ್ರಾಯವೇನೋ ಎಂಬಂತೆ ಬಿಂಬಿಸುವ ಕೈಂಕರ್ಯದಲ್ಲಿ ಭಾರತದ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ. ರಾಜಕೀಯ ಸಾಪೇಕ್ಷತೆಯನ್ನೇ ತಳಮಟ್ಟದವರೆಗೂ ವಿಸ್ತರಿಸುವ ಮಾಧ್ಯಮಗಳೂ ಸಹ ಅತ್ಯಾಚಾರಕ್ಕೊಳಗಾದ, ಹತ್ಯೆಗೊಳಗಾದ, ಹಲ್ಲೆಗೀಡಾದ ವ್ಯಕ್ತಿಗಳನ್ನು ಜಾತಿ-ಮತ-ಧರ್ಮದ ಆಧಾರದಲ್ಲಿ ವಿಂಗಡಿಸಿಬಿಡುತ್ತವೆ. ಅಲ್ಲಿ ಏಟು ತಿಂದ ಮಾನವ ಜೀವ ತನ್ನ ಮೂಲ ಅಸ್ಮಿತೆಯನ್ನು ಕಳೆದುಕೊಂಡು, ಯಾವುದೋ ಒಂದು ಸ್ಥಾಪಿತ ಅಸ್ಮಿತೆಯಲ್ಲಿ ಲೀನವಾಗಿಬಿಡುತ್ತದೆ. ಆದರೂ ನಾವು ಮಾನವೀಯತೆಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಲೇ ಇರುತ್ತೇವೆ. ಇಲ್ಲಿ ರಾಜಕೀಯ ವ್ಯಕ್ತಿಗಳ ವ್ಯಕ್ತಿಗತ ನೈತಿಕತೆ ಮುನ್ನಲೆಗೆ ಬರುತ್ತದೆ.

ಇದನ್ನು ಓದಿ : ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಸ್ವಲ್ಪ ಮುನ್ನಡೆ 2 : ಕರ್ನಾಟಕ, ತೆಲಂಗಾಣ, ಆಂಧ್ರ

ಆಳ್ವಿಕೆಯ ನೆಲೆಯಲ್ಲಿ ನೋಡಿದಾಗ ನಮಗೆ ಸಮಾನಾಂತರ ಚಿತ್ರಣ ಕಾಣುತ್ತದೆ. ಉತ್ತರಪ್ರದೇಶದ ಯೋಗಿ ಸರ್ಕಾರ ಜಾರಿಗೊಳಿಸಿದ ಬುಲ್ಡೋಜರ್‌ ರಾಜಕಾರಣವನ್ನು ಬಿಜೆಪಿ ಆಳ್ವಿಕೆಯ ಬಹುತೇಕ ಎಲ್ಲ ರಾಜ್ಯಗಳೂ ಸಮರ್ಥಿಸಿವೆ/ಜಾರಿಗೊಳಿಸಿವೆ. ವ್ಯಕ್ತಿಯ ಅಪರಾಧ ಸಾಬೀತಾಗುವ ಮುನ್ನವೇ ಆರೋಪಿಯ ವಸತಿಯನ್ನು/ವ್ಯಾಪಾರಸ್ಥಳವನ್ನು ಬುಲ್ಡೋಜ್‌ ಮಾಡುವ ಈ ನೀತಿ ಭಾರತದ ಮಧ್ಯಮ ವರ್ಗಗಳ ಪ್ರಶಂಸೆಯನ್ನೂ ಗಳಿಸಿರುವುದು ದುರಂತ ಸತ್ಯ. ಹಾಗಿದ್ದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅಪರಾಧಗಳ ಹಣೆಪಟ್ಟಿ ಹೊತ್ತವರು ಸಂಸತ್ತಿಗೆ ಹೇಗೆ ಚುನಾಯಿತರಾಗಲು ಸಾಧ್ಯ ? ಅಥವಾ ಈ ಅಪರಾಧಿಗಳೂ ʼಬುಲ್ಡೋಜರ್‌ ನ್ಯಾಯʼದ ವ್ಯಾಪ್ತಿಗೆ ಒಳಪಡುತ್ತಾರೆಯೇ ? ಇದೇ ಪ್ರಮೇಯವನ್ನು ಅರಣ್ಯಗಳಿಂದ, ಅಣೆಕಟ್ಟು ಪ್ರದೇಶಗಳಿಂದ ಉಚ್ಚಾಟಿತರಾದ ಬಡ ಜನತೆಗೂ ವಿಸ್ತರಿಸಿದಾಗ ನಮಗೆ ಕಾಣುವ ಚಿತ್ರಣವಾದರೂ ಏನು ?

ಭಾರತದಲ್ಲಿ ಭಾಕ್ರಾ ನಂಗಲ್‌ನಿಂದ ಹಿಡಿದು ಇತ್ತೀಚಿನ ಟೆಹ್ರಿ-ನರ್ಮದಾ-ಬೆಡ್ತಿಯವರೆಗೂ ನಿರ್ಮಾಣವಾಗಿರುವ ಅಣೆಕಟ್ಟು ಪ್ರದೇಶಗಳಲ್ಲಿ ತಮ್ಮ ಭೂಮಿ ಮತ್ತು ಜೀವನೋಪಾಯದ ಮೂಲವನ್ನೇ ಕಳೆದುಕೊಂಡ ಲಕ್ಷಾಂತರ ಜನರಿದ್ದಾರೆ. ಜಲವಿದ್ಯುತ್‌, ಅಣುವಿದ್ಯುತ್‌ ಘಟಕಗಳ ನಿರ್ಮಾಣಕ್ಕಾಗಿ ಅರಣ್ಯಗಳಿಂದ ಒಕ್ಕಲೆಬ್ಬಿಸಲ್ಪಟ್ಟ ಲಕ್ಷಾಂತರ ಕುಟುಂಬಗಳು ನಮ್ಮ ನಡುವೆ ಇದ್ದಾವೆ. ಒಂದು ಊಹೆಯ ಪ್ರಕಾರ ಈ ಯಾವುದೇ ಯೋಜನೆಗಳಲ್ಲೂ ಭೂಮಿ, ವಸತಿ, ಬದುಕು ಕಳೆದುಕೊಂಡ ʼಸಂತ್ರಸ್ತʼರಿಗೆ ಪೂರ್ಣಪ್ರಮಾಣದ ಪರಿಹಾರ ನ್ಯಾಯ ದೊರೆತಿಲ್ಲ. ಕರ್ನಾಟಕದಲ್ಲೇ ಶರಾವತಿ-ಕೆಆರ್‌ಎಸ್‌ ಸಂತ್ರಸ್ತ ಕುಟುಂಬಗಳೂ ಹೀಗೆಯೇ ಕೈಚಾಚಿ ನಿಂತಿವೆ. ದೇಶದ ಅಭಿವೃದ್ಧಿಗಾಗಿ ಬುಲ್ಡೋಜರ್‌ ನ್ಯಾಯಕ್ಕೆ ಒಳಗಾದ ಈ ಬಡಜನತೆಗೆ ನ್ಯಾಯ ಒದಗಿಸುವುದು ಸಾಂವಿಧಾನಿಕ ನೈತಿಕತೆಯ ಮೊದಲ ಪಾಠ, ಅಲ್ಲವೇ ?

ಸಾಂಘಿಕ ನೆಲೆಯಲ್ಲಿ ನಿಂತು ನೋಡಿದಾಗ ಸಾಂವಿಧಾನಿಕ ನೈತಿಕತೆಯ ಪ್ರಶ್ನೆಯು ತಳಮಟ್ಟದ ಸಮಾಜದವರೆಗೂ ವಿಸ್ತರಿಸುತ್ತದೆ. ಭಾರತದ ಬಹುಸಾಂಸ್ಕೃತಿಕ ನೆಲೆಗಳನ್ನು, ಸಾಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಬೆಳೆದು ನಿಂತಿರುವ ಸಾವಿರಾರು ಜನಪರ ಹೋರಾಟಗಳ ನಡುವೆಯೂ ನೈತಿಕತೆಯ ಪ್ರಶ್ನೆ ಆಗಾಗ್ಗೆ ಉದ್ಭವಿಸುತ್ತಲೇ ಇರುತ್ತದೆ. ಸಂಘಟನಾತ್ಮಕವಾಗಿ ಒಂದು ವರ್ಗ ಅಥವಾ ಸಮುದಾಯವನ್ನು ಪ್ರತಿನಿಧಿಸುವ, ಆ ಗುಂಪಿನ ಏಳಿಗೆಗಾಗಿ ಅವಿರತ ಶ್ರಮಿಸುವ ನೂರಾರು ಸಂಘಟನೆಗಳು ಅಧಿಕಾರ ರಾಜಕಾರಣದ ಹಿಡಿತದಿಂದ ತಪ್ಪಿಸಿಕೊಂಡು ಸ್ವಾಯತ್ತವಾಗಿರುವುದು ಅಪೇಕ್ಷಿತ. ಆದರೆ ವಾಸ್ತವವಾಗಿ ಹಾಗಾಗಿದೆಯೇ ? ಇಲ್ಲಿಯೂ ಸಹ ಜಾತಿ-ಉಪಜಾತಿ-ಧರ್ಮ ಅಥವಾ ಭಾಷಿಕ ನೆಲೆಗಳಲ್ಲಿ ವಿಂಗಡಿಸಲ್ಪಟ್ಟಿರುವ ಸಂಘಟನೆಗಳು ತಮ್ಮ ಅಸ್ಮಿತೆ ಮತ್ತು ಅಸ್ತಿತ್ವದ ರಕ್ಷಣೆಗಾಗಿ ನೈತಿಕತೆಯ ಗಡಿ ದಾಟುತ್ತಿರುವುದನ್ನು ಗಮನಿಸಬಹುದು.

ಸಾಂಘಿಕವಾಗಿ ಭೌತಿಕ ಅಸ್ತಿತ್ವ ಮತ್ತು ತಾತ್ವಿಕ ಅಸ್ಮಿತೆಗಳ ನಡುವೆ ಇರುವ ಸೂಕ್ಷ್ಮ ಸಂಬಂಧಗಳನ್ನು ಹದಗೆಡಿಸುವ ರಾಜಕೀಯ ಆಕಾಂಕ್ಷೆಗಳು ಅನೇಕ ಸಂಘಟನೆಗಳನ್ನು ಅಧಿಕಾರ ರಾಜಕಾರಣಕ್ಕೆ ಅಧೀನವಾಗಿಸುತ್ತವೆ. ವ್ಯಕ್ತಿಗತ-ಆಳ್ವಿಕೆಯ ನೆಲೆಯಲ್ಲಿ ಉದ್ಭವಿಸುವ ಸಾಪೇಕ್ಷತೆಯ ನಿರೂಪಣೆಗಳೇ ಇಲ್ಲಿಯೂ ಸಹ ವ್ಯಕ್ತವಾಗುತ್ತವೆ. ಪಕ್ಷಾಂತರಿ ಎನಿಸಿಕೊಂಡರೂ ಜೀವನಪರ್ಯಂತ ತತ್ವಾಂತರಿಯಾಗದೆ ಬದುಕು ಸವೆಸಿ ಆಗಿಹೋದ ಹಲವು ಸಿದ್ಧಾಂತಿಗಳ ರಾಜಕೀಯ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನೈತಿಕತೆಯ ಪಲ್ಲಟಗಳನ್ನು ಸುಲಭವಾಗಿ ಗುರುತಿಸಬಹುದು. ಭಾರತದ ಪ್ರಸ್ತುತ ಸಂದರ್ಭದಲ್ಲಿ ಗಾಂಧಿ-ಅಂಬೇಡ್ಕರ್-ಲೋಹಿಯಾ-ಮಾರ್ಕ್ಸ್-ಪೆರಿಯಾರ್‌ ಮೊದಲಾದ ದಾರ್ಶನಿಕರ ತಾತ್ವಿಕ ನೆಲೆಗಳಲ್ಲಿ ಸಂಘಟಿತವಾಗುವ ಜನಸಮೂಹಗಳು ಅಧಿಕಾರ ರಾಜಕಾರಣದ ಬಗ್ಗೆ ಜಾಗರೂಕತೆಯಿಂದಿದ್ದು, ಸ್ವಾಯತ್ತತೆ ಪಡೆದುಕೊಳ್ಳುವುದು ಅತ್ಯವಶ್ಯ ಎನಿಸುತ್ತದೆ. ಇಲ್ಲಿ ರಾಜಕೀಯ ನೈತಿಕತೆಯೂ ನಿಷ್ಕರ್ಷೆಗೊಳಗಾಗುತ್ತದೆ. ಈ ನಿಟ್ಟಿನಲ್ಲಿ ನಾವು ಒಳಹೊಕ್ಕು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ್ದು ಬಹಳಷ್ಟಿದೆ,

ಕೊನೆಯದಾಗಿ ಆಡಳಿತಾತ್ಮಕ ಸಾಂಸ್ಥಿಕ ನೆಲೆಯಲ್ಲಿ ನಿಂತು ನೋಡಿದಾಗ ಸಾಂವಿಧಾನಿಕ ಸಂಸ್ಥೆಗಳಷ್ಟೇ ಅಲ್ಲದೆ, ಸಾರ್ವಜನಿಕ ವಲಯದಲ್ಲಿ ಸಕ್ರಿಯವಾಗಿರುವ ಹಲವಾರು ಸಂಸ್ಥೆಗಳಲ್ಲೂ ಸಹ ನೈತಿಕತೆಯ ಪ್ರಮಾಣ ಸತತವಾಗಿ ಕುಸಿಯುತ್ತಿರುವುದನ್ನು ಗಮನಿಸಬಹುದು. ಆಡಳಿತ ಸಂಸ್ಥೆಗಳು ಹಾಗೂ ಅಧಿಕಾರ ರಾಜಕಾರಣದಿಂದ ಮುಕ್ತವಾಗಿ ಸ್ವಾಯತ್ತವಾಗಿರಬೇಕಾದ ಸಾಂವಿಧಾನಿಕ ಸಂಸ್ಥೆಗಳು ತಮ್ಮ ಮೂಲ ನೈತಿಕ ನೆಲೆಗಟ್ಟನ್ನೇ ಉಲ್ಲಂಘಿಸಿ ಅಡಳಿತಾರೂಢ ಪಕ್ಷದ ಅಣತಿಯಂತೆ ನಡೆದುಕೊಳ್ಳುವ ಪರಂಪರೆಯನ್ನು ಐದು ದಶಕಗಳಿಂದಲೂ ನೋಡುತ್ತಲೇ ಬಂದಿದ್ದೇವೆ. ಇಲ್ಲಿ ಕಾರ್ಯನಿರ್ವಹಿಸುವ ಅಧಿಕಾರಶಾಹಿಗಳಲ್ಲಿ ವ್ಯಕ್ತಿಗತ ನೈತಿಕತೆ ಶಿಥಿಲವಾದಷ್ಟೂ ಸಾಂಸ್ಥಿಕ ಮಾಲಿನ್ಯವೂ ಹೆಚ್ಚಾಗುತ್ತಲೇ ಹೋಗುತ್ತದೆ. ಭಾರತದ ಸಂವಿಧಾನ ಬೋಧಿಸುವ ಆಡಳಿತಾತ್ಮಕ ಸಂಯಮ, ಸಮತೋಲನ ಹಾಗೂ ಸಮನ್ವಯ-ಸಮಚಿತ್ತದ ಮನಸ್ಥಿತಿಯನ್ನು ಉಲ್ಲಂಘಿಸುವ ಅಧಿಕಾರಶಾಹಿಗಳು, ಪ್ರಜಾಪ್ರಭುತ್ವವನ್ನು ಶಿಥಿಲಗೊಳಿಸುವ ವಾಹಕಗಳಾಗಿ ಪರಿಣಮಿಸುತ್ತಾರೆ. ಈ ಸಾಂಸ್ಥಿಕ ಅನೈತಿಕತೆಯನ್ನು ಪ್ರಶ್ನಿಸುವ ಹಕ್ಕು ಮತ್ತು ಅಧಿಕಾರ ಹೊಂದಿರುವ ನಾಗರಿಕ ಸಂಘಟನೆಗಳು ಈ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ.

ಅಂತಿಮವಾಗಿ

ಒಟ್ಟಾರೆಯಾಗಿ ಹೇಳುವುದಾದರೆ, ರಾಜಕೀಯ ನೈತಿಕತೆ ಅಥವಾ ನೈತಿಕ ರಾಜಕಾರಣದ ಪ್ರಶ್ನೆ ಎದುರಾದಾಗ ನಾವು ಗಮನಿಸಬೇಕಿರುವುದು ಪ್ರಾಮಾಣಿಕತೆ ಮತ್ತು ನೈತಿಕತೆಯ ನಡುವೆ ಇರುವ ವ್ಯತ್ಯಾಸವನ್ನು. ಯಾವುದೇ ರೀತಿಯ ಹಣಕಾಸು ಭ್ರಷ್ಟಾಚಾರದಲ್ಲಿ ತೊಡಗದೆ ಅಧಿಕಾರ ರಾಜಕಾರಣದಲ್ಲಿ ತೊಡಗಿರುವ ರಾಜಕೀಯ ನಾಯಕತ್ವವು, ಸಮಾಜದಲ್ಲಿ ನಡೆಯುವ ಹತ್ಯೆ, ಅತ್ಯಾಚಾರ, ದೌರ್ಜನ್ಯ, ಅಸ್ಪೃಶ್ಯತೆ ಹಾಗೂ ದಬ್ಬಾಳಿಕೆಗಳ ಬಗ್ಗೆ ದಿವ್ಯ ಮೌನ ವಹಿಸುವುದು ಅಥವಾ ಸಮ್ಮತಿಸಿ ಸಮ್ಮಾನಿಸುವುದು ಅಥವಾ ನಿರ್ಲಕ್ಷಿಸುವುದು ಅನೈತಿಕತೆಯ ಲಕ್ಷಣವಾಗಿಯೇ ಕಾಣುತ್ತದೆ. ಕಣ್ಣೆದುರಿನಲ್ಲೇ ನಡೆಯುವ ಮಹಿಳಾ ದೌರ್ಜನ್ಯಗಳನ್ನು ಕಂಡೂ ಕಾಣದಂತಿರುವ ಒಂದು ರಾಜಕೀಯ ವ್ಯವಸ್ಥೆಯ ನಡುವೆಯೇ ನಾವು ಪ್ರಾಮಾಣಿಕತೆ, ಸತ್ಯಸಂಧತೆಯನ್ನು ಹುಡುಕುತ್ತಿದ್ದೇವೆ. ಸಮಾಜದಲ್ಲಿ ನಿತ್ಯ ಸಂಭವಿಸುತ್ತಿರುವ ಸಾವು ನೋವುಗಳಿಗೆ, ಇದಕ್ಕೆ ಕಾರಣವಾಗುತ್ತಿರುವ ಸಮಾಜಘಾತುಕ ಶಕ್ತಿಗಳಿಗೆ ಮುಕ್ತ ಅವಕಾಶ ನೀಡುತ್ತಲೇ ಭ್ರಷ್ಟಾಚಾರ ಮುಕ್ತ ಭಾರತವನ್ನು ನಿರ್ಮಿಸುವ ಮಾತನ್ನಾಡುತ್ತಿದ್ದೇವೆ.

ಇಲ್ಲಿ ನಾವು ಕಳೆದುಕೊಳ್ಳುತ್ತಿರುವುದು, ಕಳೆದುಕೊಂಡಿರುವುದು ಸಾಂವಿಧಾನಿಕ ನೈತಿಕತೆಯನ್ನು. ಅಧಿಕಾರ ರಾಜಕಾರಣದ ಅಂಗಳದಲ್ಲಿ ನಿಂತು ಕಣ್ತೆರೆದು ನೋಡಿದಾಗ ಈ ಅನೈತಿಕತೆಯ ರುದ್ರತಾಂಡವವನ್ನು ನಾವು ಗಮನಿಸಬಹುದು. ಡಾ. ಬಿ. ಆರ್. ಅಂಬೇಡ್ಕರ್‌ ಪದೇಪದೇ ಹೇಳುತ್ತಿದ್ದ ಸಾಂವಿಧಾನಿಕ ನೈತಿಕತೆಯ ಪ್ರಶ್ನೆಯನ್ನು ನಾವು ಮತ್ತೊಮ್ಮೆ ಕೈಗೆತ್ತಿಕೊಳ್ಳಬೇಕಿದೆ. ಆಗ ನಮಗೆ ಅಧಿಕಾರ ರಾಜಕಾರಣದ ಅನೈತಿಕತೆ ಹಾಗೂ ರಾಜಕೀಯ ನೈತಿಕತೆಯ ಪ್ರಶ್ನೆಗಳು ಇನ್ನೂ ಸುಸ್ಪಷ್ಟವಾಗಿ ಕಾಣಲು ಸಾಧ್ಯವಿದೆ.

ಇದನ್ನು ಓದಿ : ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದ 18 ಕ್ಷೇತ್ರಗಳಲ್ಲಿ 15ರಲ್ಲಿ ಎನ್‌ಡಿಎ ಗೆ ಸೋಲು

Donate Janashakthi Media

Leave a Reply

Your email address will not be published. Required fields are marked *