ಮಾಫಿಯಾಗಳನ್ನು ಮಟ್ಟ ಹಾಕಲು ಪೊಲೀಸರ ವೈಫಲ್ಯ ; ಕ್ರಮಕ್ಕೆ ಒತ್ತಾಯಿಸಿದ  ಡಿವೈಎಫ್‌ಐ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕಗೊಳ್ಳುತ್ತಿರುವ ಮಾಫಿಯಾಗಳ ದಂಧೆಗೆ ಕಡಿವಾಣ ಹಾಕುವಲ್ಲಿ ಪೊಲೀಸ್‌ ಆಡಳಿತ ವ್ಯವಸ್ಥೆ ವೈಫಲ್ಯವೇ ಕಾರಣವೆಂದು ಆರೋಪಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್‌ಐ) ಸಮಿತಿಯು ಎಡಿಜಿಪಿ ಅವರಿಗೆ ಮನವಿ ಸಲ್ಲಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಮತ್ತು ಮಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಧಂಧೆ ದೊಡ್ಡ ಮಾಫಿಯಾವಾಗಿ ಬೆಳೆದಿದೆ. ಇದರಿಂದ ಜಿಲ್ಲೆ ಮತ್ತು ನಗರದಲ್ಲಿ ನಡೆಯುತ್ತಿರುವ ಅಪರಾಧ ಮತ್ತು ಕೋಮು ಪ್ರಚೋದಿತ ದಾಂಧಲೆಗೆ ಈ ಮಾಫಿಯಾಗಳು ಸಹಕರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನು ಓದಿ: ಮರಳು-ಮದ್ಯಪಾನ ಮಾಫಿಯಾ ವರದಿ ಮಾಡಿದಕ್ಕೆ ಪತ್ರಕರ್ತನ ಕೊಲೆ

ಈ ಬಗ್ಗೆ ವಿಷಯ ತಿಳಿಸಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡಿ, ಜಿಲ್ಲೆ ಮತ್ತು ನಗರದ ವಿವಿಧೆಡೆ ಅಕ್ರಮ ಮರಳುಗಾರಿಕೆ, ಅಂದರ್ ಬಾಹರ್ ಆಡಿಸುವ ಜೂಗಾರಿ ಕೇಂದ್ರಗಳು, ರಿಕ್ರಿಯೇಷನ್ ಕ್ಲಬ್ ಗಳ ಹೆಸರಿನಲ್ಲಿ ನಡೆಯುತ್ತಿರುವ ಸ್ಕಿಲ್ ಗೇಮ್, ವಿಡಿಯೋ ಗೇಮ್, ಮೋಸದಾಟದ ಜೂಜು ಕೇಂದ್ರಗಳು, ಕೆಲವು ರಾಜ್ಯಗಳ ಲಾಟರಿ ಸಂಖ್ಯೆ ಹೆಸರಲ್ಲಿ ನಡೆಯುವ ಮಟ್ಕಾ ಮತ್ತು ವಿವಿಧ ಲಾಡ್ಜ್ ಗಳಲ್ಲಿ ನಡೆಯುವ ವೇಶ್ಯಾವಾಟಿಕೆ ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಡ್ರಗ್ಸ್ ಧಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇಷ್ಟಾದರೂ ಸಹ ಪೊಲೀಸರು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಮಾಫಿಯಾಗಳಿಗೆ ಮಂಗಳೂರು ಸ್ವರ್ಗದಂತಾಗಿದೆ. ಕೆಲವು ವಿಷಯಗಳಲ್ಲಿ ನಾವು ಪೊಲೀಸರಿಗೆ ಮಾಹಿತಿ ಕೊಟ್ಟರೆ ಮಾಫಿಯಾಗಳ ಕಡೆಯಿಂದ ನಮಗೆ ಕರೆ ಮಾಡಿಸುವ ಕೆಲಸವೂ ನಡೆದಿದೆ. ನಾವು ದೂರು ನೀಡಿದರೆ ನಾಟಕೀಯವಾಗಿ ಒಂದೆರಡು ದಿನ ಮುಚ್ಚುವ ಪ್ರಹಸನ ನಡೆಯುತ್ತದೆಯೇ ಹೊರತು ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗುವುದಿಲ್ಲ. ಕೆಲವೆಡೆ ಕ್ರಿಮಿನಲ್ ಗಳೇ ದಂಧೆಗಳನ್ನು ನಡೆಸುತ್ತಿದ್ದರೆ ಕೆಲವೆಡೆ ಗೂಂಡಾಗಳೇ ಕಾವಳಾಲುಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇಂತ ದೊಡ್ಡ ಪ್ರಮಾಣದಲ್ಲಿ ಮಾಫಿಯಾಗಳು ಬೆಳೆಯಲು ಪೋಲೀಸರ ವೈಫಲ್ಯವೇ ಕಾರಣವಾಗಿದೆ ಅಕ್ರಮ ದಂಧೆಯಲ್ಲಿರುವವರು ಪೋಲೀಸರು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಮನವಿಯನ್ನು ಪರಿಗಣಿಸಿ ಪೊಲೀಸ್ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕೆಂದು ಡಿವೈಎಫ್‌ಐ ಮನವಿ ಮಾಡಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *