ಕೋಲಾರ: ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸ್ಥಳಾಂತರ ಮಾಡುವ ಸರ್ಕಾರದ ನಿರ್ಧಾರ ಕೂಡಲೇ ವಾಪಸು ಪಡೆಯಬೇಕು ಎಂದು ಒತ್ತಾಯಿಸಿ ನಗರದ ಹೊರವಲಯದ ಜಿಲ್ಲಾಧಿಕಾರಿ ಕಛೇರಿ ಮುಂದೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ಸಂಘಟನೆ ವತಿಯಿಂದ ಧರಣಿ ನಡೆಸಿದರು.
ಕೋಲಾರ ಜಿಲ್ಲೆ ಗಡಿ ಪ್ರದೇಶದಿಂದ ಕೂಡಿದ್ದು ಅದರಲ್ಲೂ ಕೆಜಿಎಫ್‌ನಲ್ಲಿ ಶಾಂತಿ, ಸುವ್ಯವಸ್ಥೆ ದೃಷ್ಟಿಯಿಂದ ಸುಮಾರು 150 ವರ್ಷಗಳ ಹಿಂದೆ ಆರಂಭಿಸಿದ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ಹಾಗೂ ಕಚೇರಿಯನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು ಈ ಕೂಡಲೇ ನೂತನ ಎಸ್‌ಪಿಯನ್ನು ಸರಕಾರ ನೇಮಕ ಮಾಡಬೇಕು ಇಲ್ಲಿರುವ ಮೀಸಲು ಪೋಲಿಸ್ ಪಡೆಯನ್ನು ನೂತನ ಜಿಲ್ಲೆ ವಿಜಯನಗರಕ್ಕೆ ವರ್ಗಾಯಿಸುವುದು ತಡೆಯಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಗಣಿ ಮುಚ್ಚಿದರೂ ಕಾರ್ಮಿಕರು ಕೆಜಿಎಫ್‌ನಲ್ಲೇ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಹಿಂದಿನ ಎಲ್ಲಾ ಸರ್ಕಾರಗಳು ಉಳಿಸಿಕೊಂಡು ಪೊಲೀಸ್ ವ್ಯವಸ್ಥೆ ಬಲಪಡಿಸುತ್ತಾ ಬಂದಿವೆ ರಾಜ್ಯದ ಗಡಿ ಭಾಗದಲ್ಲಿರುವ ಕೆಜಿಎಫ್ ಅತಿ ಸೂಕ್ಷ್ಮ ಪ್ರದೇಶವಾಗಿದೆ. ಚಿನ್ನದ ಗಣಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸಾಕಷ್ಟು ಅಹಿತಕರ ಘಟನೆ ನಡೆದಿರುವ ಇತಿಹಾಸವಿದೆ ಈಗಲೂ ನಡೆಯುತ್ತಾ ಇದೆ ಆದ್ದರಿಂದ ಕೆಜಿಎಫ್‌ನ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಕೆಜಿಎಫ್ ನಗರದಿಂದ ಪ್ರತಿನಿತ್ಯ ಸುಮಾರು 15 ಸಾವಿರ ಕಾರ್ಮಿಕರು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಬರುತ್ತಾರೆ ದಿನ ನಿತ್ಯದ ಪ್ರಯಾಣಿಕರಿಗಾಗಿ ರೈಲು ಸೇವೆಯನ್ನು ಹಿಂದೆ ಇದ್ದ ಹಾಗೆ ಪುನಃ ಆರಂಭಿಸಬೇಕು ನಗರದ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಡಿವೈಎಫ್ಐ ಜಿಲ್ಲಾ ಸಂಚಾಲಕ ವಿ.ಅಂಬರೀಷ್, ಕೆಜಿಎಫ್ ತಾಲ್ಲೂಕು ಅಧ್ಯಕ್ಷ ಜಿ. ದಿವಾಕರ್, ಕಾರ್ಯದರ್ಶಿ ಎ.ಆರ್ ನಿರೇಶ್ ಬಾಬು, ಖಂಜಾಚಿ ಯು.ಎಸ್.ದಿನೇಶ್, ಉಪಾಧ್ಯಕ್ಷರಾದ ಕಣ್ಣನ್, ಪ್ರಸನ್ನ, ಜಂಟಿ ಕಾರ್ಯದರ್ಶಿ ಪೆಲೇಕ್ಷ, ಮುಖಂಡರಾದ ನಿರ್ಬನ್ ಚಕ್ರವರ್ತಿ, ಶಕ್ತಿ, ಕೀರ್ತಿ, ನವೀನ್ ಮುಂತಾದವರು ವಹಿಸಿಕೊಂಡಿದ್ದರು.