‘ನ್ಯೂಸ್‌ಕ್ಲಿಕ್‌’ ಪತ್ರಕರ್ತರ ನಿವಾಸಗಳ ಮೇಲೆ ದಿಲ್ಲಿ ಪೊಲಿಸ್‍ ದಾಳಿ:ಸಿಪಿಐ(ಎಂ) ಪೊಲಿಟ್‍ ಬ್ಯುರೊ ಖಂಡನೆ

ಮಾಧ್ಯಮಗಳ ಮೇಲೆ ಮತ್ತೊಂದು ನಗ್ನಪ್ರಹಾರ

ನ್ಯೂಸ್‌ಕ್ಲಿಕ್ ಸುದ್ದಿ ವೆಬ್‌ಪತ್ರಿಕೆಯೊಂದಿಗೆ ಸಹಯೋಗದಲ್ಲಿರುವ ಹಲವು ಪತ್ರಕರ್ತರ  ನಿವಾಸಗಳ ಮೇಲೆ ದಿಲ್ಲಿ ಪೋಲೀಸರು ಅಕ್ಟೋಬರ್‌ 3ರಂದು ಮುಂಜಾನೆ ದಾಳಿಗಳನ್ನು ನಡೆಸಿ ಅವರ ಮೊಬೈಲ್ ‍ಫೋನುಗಳು, ಲ್ಯಾಪ್‍ಟಾಪ್‍ಗಳು ಮತ್ತಿತರ ಇಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ವೆಬ್‍ಪತ್ರಿಕೆಯ ಮುಖ್ಯ ಸಂಪಾದಕರಾದ ಪ್ರಬೀರ್‌ ಪುರಕಾಯಸ್ಥ ಮತ್ತು ಲೇಖಕಿ ಗೀತಾ ಹರಿಹರನ್‍ ಅಲ್ಲದೆ ಈ ವೆಬ್‍ಪತ್ರಿಕೆಗೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿರುವ ಹಿರಿಯ ಪತ್ರಕರ್ತರುಗಳಾದ ಉರ್ಮಿಲೇಶ್, ಭಾಷಾ ಸಿಂಗ್, ಅಭಿಸಾರ್ ಶರ್ಮ, ಅನಿಂದ್ಯೊ ಚಕ್ರವರ್ತಿ, ಸುಬೋಧ್‍ ವರ್ಮ,  ವಿಡಂಬನಲಾರ  ಸಂಜಯ್‍ ರಾಜೌರಾ ನಿವಾಸಗಳಿಗೆ ಬಂದ ಪೋಲಿಸ್‍ ವಿಶೇಷ ದಳದವರು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಆಗಸ್ಟ್‌ನಲ್ಲಿ, ನ್ಯೂಯಾರ್ಕ್ ಟೈಮ್ಸ್ ದೈನಿಕದಲ್ಲಿ ಮಿಲಿಯನೇರ್ ನೆವಿಲ್ಲ್  ರಾಯ್ ಸಿಂಘಮ್‌ ಎಂಬ ಅಮೆರಿಕನ್ ಶ್ರೀಮಂತ ವ್ಯಕ್ತಿಯ ಮೂಲಕ ಚೀನೀ ಪ್ರಚಾರವನ್ನು ನಡೆಸಲು, ಭಾರತ-ವಿರೋಧಿ ವಾತಾವರಣವನ್ನು ಸೃಷ್ಟಿಸಲು  ನ್ಯೂಸ್‍ಕ್ಲಿಕ್‍ ಮತ್ತು ಕಾಂಗ್ರೆಸ್‍ ಮುಖಂಡರು  ಹಣ  ಪಡೆದಿದ್ದಾರೆ ಎಂಬ ಸುದ್ದಿಯನ್ನು ಆಧರಿಸಿ ಬಿಜೆಪಿ ಸಂಸದ ನಿಶಿಕಾಂತ್‍ ದುಬೆ ಲೋಕಸಭೆಯಲ್ಲಿ  ಆರೋಪಿಸಿದ್ದರ ಹಿನ್ನೆಲೆಯಲ್ಲಿ ದಿಲ್ಲಿ ಪೋಲೀಸ್‍ ವಿಶೇಷ ದಳ ಈ ಕಾರ್ಯಾಚರಣೆ ನಡೆಸಿದೆ ಎಂದು ಹೇಳಲಾಗಿದೆ. ಆಗಸ್ಟ್ 17 ರಂದು ದಿಲ್ಲಿ ಪೋಲಿಸ್ ಕರಾಳ ಯುಎಪಿಎ ಅಡಿಯಲ್ಲಿ ಎಫ್‍ಐಆರ್ ಹಾಕಿದ್ದು ಅದಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿರುವುದಾಗಿ ‘ದಿ ವೈರ್’ ಹೇಳಿದೆ.

ಈ ಕಾರ್ಯಾಚರಣೆಯಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ನಿವಾಸದ ಮೇಲೂ ವಿಶೇಷ ದಳ ದಾಳಿ ನಡೆಸಿತು ಎಂದು ಮಕ್ತುಬ್‍ಮೀಡಿಯ ವರದಿ ಮಾಡಿದ್ದು ಅವರ ನಿವಾಸದ ಆವರಣದಲ್ಲಿ ನ್ಯೂಸ್‍ಕ್ಲಿಕ್‍ ಗೆ ಸಂಬಂಧಿಸಿದ ಗ್ರಾಫಿಕ್ ಡಿಸೈನರ್ ವಾಸವಾಗಿರುವುದರಿಂದ  ಈ ದಾಳಿ ನಡೆದಿದೆ ಎಂದು ಹೇಳಿದೆ.

ಇದನ್ನೂ ಓದಿಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್‌ ಕ್ಲಿಕ್ ವಿರುದ್ಧ ‘ಯುಎಪಿಎ’ ದಾಖಲು; 2 ಪತ್ರಕರ್ತರು ವಶಕ್ಕೆ!

ಪತ್ರಕರ್ತರಲ್ಲದೆ ಹೋರಾಟಗಾರ ಮತ್ತು ಇತಿಹಾಸಕಾರ ಸೊಹೈಲ್ ಹಶ್ಮಿ ,ವಿಜ್ಞಾನಿ ಮತ್ತು ದಿಲ್ಲಿ ಸಾಯನ್ಸ್ ಫೋರಂನ ಸಂಘಟಕ ಡಿ. ರಘುನಂದನ್ ಮತ್ತು ವಿಡಂಬನಕಾರ ಸಂಜಯ್ ರಾಜೌರ ಅವರುಗಳನ್ನೂ ಪ್ರಶ್ನಿಸಲಾಗುತ್ತಿದೆ ಎಂದು ವರದಿಯಾಗಿದೆ.

ನೀವು ರೈತರ ಹೋರಾಟದ ಮತ್ತು ಕೊವಿಡ್‍ ನ ವರದಿಗಳನ್ನು ಪ್ರಕಟಿಸಿದ್ದೀರಾ ಎಂದು ಈ ಸಂಸ್ಥೆಯ ನೌಕರರನ್ನು ಕೇಳಲಾಗುತ್ತಿದೆಯಂತೆ.

ಮುಂಬೈನಲ್ಲಿ, ಟ್ರೈಕಾಂಟಿನೆಂಟಲ್ ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ರಿಸರ್ಚ್‌ನ ನಿರ್ದೇಶಕಿಯಾಗಿರುವ  ಮಾನವ ಹಕ್ಕುಗಳ ಹೋರಾಟಗಾರ್ತಿ  ತೀಸ್ತಾ ಸೆಟಲ್ವಾಡ್  ಮತ್ತು ಆರ್ಥಿಕ ಪತ್ರಕರ್ತ ಪರಂಜೊಯ್‍ ಗುಹ ಠಾಕುರ್ತವಿರುದ್ಧ ಇದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ಸಂಸ್ಥೆಯ ಲೇಖನಗಳು ಈ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು.

ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯವು ಕೂಡ ‘ನ್ಯೂಸ್ ಕ್ಲಿಕ್’ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

“ವಿವಿಧ ಏಜೆನ್ಸಿಗಳ ಈ ತನಿಖೆಗಳು ಮತ್ತು ಈ ಆಯ್ದ ಆರೋಪಗಳು ನ್ಯೂಸ್‌ಕ್ಲಿಕ್ ಸೇರಿದಂತೆ ಮಾಧ್ಯಮ ಸಂಸ್ಥೆಗಳ ಸ್ವತಂತ್ರ ಪತ್ರಿಕೋದ್ಯಮವನ್ನು ನಿಗ್ರಹಿಸುವ ಪ್ರಯತ್ನಗಳಾಗಿವೆ. ಭಾರತದ ಸಂವಿಧಾನವು ಕಲಮು 19(1)ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ, ಇದು ನಮ್ಮ ಕೆಲಸದ ಆಧಾರ” ಎಂದು ಸಂಪಾದಕ ಪ್ರಬೀರ್ ಪುರಕಾಯಸ್ಥ ಈ ಹಿಂದೆ ಹೇಳಿದ್ದರು.

ಇದನ್ನೂ  ಓದಿ: ಮಂಗಳೂರು| ಬಿಲ್‌ ಮೊತ್ತ ಪಾವತಿಸದೆ ಮೃತದೇಹ ಬಿಟ್ಟುಕೊಡಲೊಪ್ಪದ ಆಸ್ಪತ್ರೆ: ಡಿವೈಎಫ್‌ಐ ಆರೋಪ

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನ ಸತತವಾಗಿ ಭಾರೀ ಪ್ರಮಾಣದಲ್ಲಿ ಕೆಳಗಿಳಿಯುತ್ತಿದೆ, ಜಿ-20 ದೇಶಗಳ ಪೈಕಿಯೂ ಭಾರತ ಅತ್ಯಂತ ಕೆಳಗಿನ ಸ್ಥಾನದಲ್ಲಿದೆ. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ಕುರಿತಾದ ಇತರ ಜಾಗತಿಕ ಸೂಚಕಗಳಾದ ಫ್ರೀಡಂ ಹೌಸ್, ವಿ-ಡೆಮ್‍ ಮತ್ತು ಇಕನಾಮಿಸ್ಟ್ ಸೂಚಕಗಳಲ್ಲಿಯೂ 2015ರಿಂದ ಭಾರತದ ಸ್ಥಾನ ಸತತವಾಗಿ ಕೆಳಕ್ಕೆ ಜಾರುತ್ತಿದೆ ಎಂದು ಈ ಬಗ್ಗೆ ವರದಿ ಮಾಡುತ್ತ  ಇನ್ನೊಂದು ಪ್ರತಿಷ್ಠಿತ ಸ್ವತಂತ್ರ ಮಾಧ್ಯಮ ‘ದಿ ವೈರ್’ ನೆನಪಿಸಿಕೊಂಡಿದೆ.

ವ್ಯಾಪಕ ಖಂಡನೆ

ಪ್ರೆಸ್ ಕ್ಲಬ್ ಆಫ್ ಇಂಡಿಯಾ ಈ  ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತ ಈ ಪತ್ರಕರ್ತರಿಗೆ ಸೌಹಾರ್ದ ವ್ಯಕ್ತಪಡಿಸಿದೆ ಮತ್ತು ಸರಕಾರ ಈ ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದೆ. ಇಂಟರ್ನೆಟ್‍ ಫ್ರೀಡಂ ಫೌಂಡೇಷನ್‍ ಕೂಡ ಇದು ಪತ್ರಿಕಾಸ್ವಾತಂತ್ರ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಆತಂಕವ್ಯಕ್ತಪಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಚಿಂತಕರು, ಪತ್ರಕರ್ತರು , ರಾಜಕಾರಣಿಗಳು ಮುಂತಾದವರಿಂದ ಈ ಬಗ್ಗೆ ವ್ಯಾಪಕ ಆತಂಕ ಖಂಡನೆಗಳು ವ್ಯಕ್ರಗೊಳ್ಳುತ್ತಿವೆ.

ಇದು ಬಿಹಾರದಲ್ಲಿ ಜಾತ ಜನಗಣತಿಯ ಮಾಹಿತಿಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನಎಂದು ಕಾಂಗ್ರೆಸ್‍ ಪಕ್ಷದ ವಕ್ತಾರರು ಟಿಪ್ಪಣಿ ಮಾಡಿದ್ದಾರೆ.

ಮಾಧ್ಯಮದ ಮೇಲಿನ ಮತ್ತೊಂದು ದಾಳಿ- ಸಿಪಿಐ(ಎಂ)

ಕರಾಳ ಯುಎಪಿಎ ಅಡಿಯಲ್ಲಿ ಎಫ್‌ಐಆರ್ ಆಧಾರದ ಮೇಲೆ ದಿಲ್ಲಿ  ಪೊಲೀಸರು ಹಲವಾರು ಪತ್ರಕರ್ತರು, ಸ್ಟ್ಯಾಂಡ್ಅಪ್ ಹಾಸ್ಯಗಾರರು, ವಿಡಂಬನಕಾರರು, ವಿಜ್ಞಾನಿಗಳು, ಸಾಂಸ್ಕೃತಿಕ ಇತಿಹಾಸಕಾರರು ಮತ್ತು ವ್ಯಾಖ್ಯಾನಕಾರರ ಮನೆಗಳ ಮೇಲೆ ಮುಂಜಾನೆ ದಾಳಿ ನಡೆಸಿರುವುದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ  ಬಲವಾಗಿ ಖಂಡಿಸಿದೆ.

ಇದು ಮಾಧ್ಯಮದ ಮೇಲೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮೇಲಿನ ಒಂದು ನಗ್ನ  ದಾಳಿಯಾಗಿದೆ.ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಸರ್ಕಾರವು ಬಿಬಿಸಿ, ನ್ಯೂಸ್‌ಲಾಂಡ್ರಿ, ದೈನಿಕ್ ಭಾಸ್ಕರ್, ಭಾರತ್ ಸಮಾಚಾರ್, ಕಾಶ್ಮೀರ್‍ ವಾಲಾ, ದಿ ವೈರ್ ಮುಂತಾದ ವಿವಿಧ ಮಾಧ್ಯಮ ಸಂಸ್ಥೆಗಳನ್ನು ನಿಗ್ರಹಿಸಲು, ಅವುಗಳಿಗೆ ಕಿರುಕುಳ ನೀಡಲು ಮತ್ತು ಅವುಗಳನ್ನು ಬೆದರಿಸಲು ತನಿಖಾ ಸಂಸ್ಥೆಗಳನ್ನು ನಿಯೋಜಿಸಿದೆ ಮತ್ತು ಈಗ ನ್ಯೂಸ್‍ ಕ್ಲಿಕ್‍ ನೊಂದಿಗೆ ಸಂಪರ್ಕ ಹೊಂದಿದವರೆಲ್ಲರ ಮೇಲೆ ದಾಳಿ ನಡೆಸುತ್ತಿದೆ ಎಂದಿರುವ ಸಿಪಿಐ(ಎಂ)  ಅಧಿಕಾರಸ್ಥರ ಮುಖದೆದುರು ಸತ್ಯವನ್ನು ನುಡಿವ ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರ ವಿರುದ್ಧ ಇಂತಹ ದೊಡ್ಡ ಪ್ರಮಾಣದ ಸರ್ವಾಧಿಕಾರಶಾಹೀ  ದಾಳಿ ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.

ಆತ್ಮಸಾಕ್ಷಿಯ ಪಾಲಕರೆನಿಸಿಕೊಂಡಿರುವ ಮಾಧ್ಯಮಗಳನ್ನು ಗುರಿಯಾಗಿಸುವ, ಕಿರುಕುಳ ನೀಡುವ ಮತ್ತು ದಮನ ಮಾಡುವ ಇಂತಹ ವ್ಯವಸ್ಥಿತ ಪಿತೂರಿಯ ವಿರುದ್ಧ ಎಂದು ಎಲ್ಲಾ ಪ್ರಜಾಸತ್ತಾತ್ಮಕ ಮನಸ್ಸಿನ ಭಾರತೀಯ ದೇಶಪ್ರೇಮಿಗಳು ಪ್ರತಿಭಟಿಸಬೇಕು ಎಂದು ಅದು  ಕರೆ ನೀಡಿದೆ.

ವಿಡಿಯೋ ನೋಡಿ:ಹೋರಾಟದ ಹಕ್ಕಿಗಾಗಿ ಆಂದೋಲನ – ಪ್ರತಿಭಟನೆಕಾರರ ಬಂಧನ Janashakthi Media

Donate Janashakthi Media

Leave a Reply

Your email address will not be published. Required fields are marked *