ಎಂ.ಚಂದನ್
ಗುಜರಾತ್ ನ ಸುರೇಂದ್ರನಗರದ 35 ವರ್ಷದ ರಮೇಶ್ ಕೋಳಿ ಎಂಬ ಕೃಷಿ ಕೂಲಿಗಾರ 30 ಸಾವಿರ ರೂಪಾಯಿ ಸಾಲವನ್ನು ಒಬ್ಬ ಬಡ್ಡಿ ವ್ಯಾಪಾರೀ ಹತ್ತಿರ ೨೦೨೨ ರ ಜುಲೈ ತಿಂಗಳಲ್ಲಿ ಪಡೆದಿದ್ದ. ಇದಾದ ನಂತರ ಎರಡು ತಿಂಗಳ ಅವಧಿಯಲ್ಲಿ ಅವನು ಆ ಹಣವನ್ನು ಹಿಂತಿರುಗಿಸಿದ್ದ. ಜೊತೆಗೆ ೫೦೦೦೦ ಸಾವಿರ ರೂಪಾಯಿ ಬಡ್ಡಿ ಕೂಡ ಕಟ್ಟಿದ್ದ. ಆದರೆ, ಬಡ್ಡಿ ವ್ಯಾಪಾರೀ ಪುನಃ 3೦೦೦೦ ಸಾವಿರ ರೂಪಾಯಿ ಕೊಡಬೇಕೆಂದು ಒತ್ತಾಯಿಸಿ, ಕೊಡದಿದ್ದರೆ ಇದರ ನೇರ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಹೆದರಿಸಿದ. ಗ್ರಾಮ ಪಂಚಾಯತ್ ಸರಪಂಚ್ ನ ಸಹಾಯ ಕೇಳಿ ಆ ಮೊತ್ತವನ್ನು ಅದನ್ನು 15೦೦೦ ರೂಪಾಯಿಗೆ ಇಳಿಸಲು ಸಾಧ್ಯವಾಯಿತಷ್ಟೇ. ಇದು ಬಹಳ ಭಯಂಕರ” , ಯಾರೂ ಲೇವಾದೇವಿಗಾರರಿಂದ ಸಾಲ ತಗೊಳ್ಳಬಾರದು” ಎಂಬುದಾಗಿ ರಮೇಶ್ ಕೋಳಿ ತಮ್ಮ ಗೋಳು ಹೇಳಿಕೊಂಡಿದ್ದಾರೆ. ಈ ಕುರಿತ ವರದಿ ಜನವರಿ 10 ರಂದು ದಿ ಹಿಂದುನಲ್ಲಿ ಬಂದಿದೆ.
ಈ ಖಾಸಗಿ ಲೇವಾದೇವಿಗಾರರ ಕಿರುಕುಳಗಳಿಂದಾಗಿ ಆತ್ಮಹತ್ಯೆಗಳು ಮಾತ್ರವಲ್ಲ, ಮಹಿಳೆಯರ ಮೇಲೆ ಅತ್ಯಾಚಾರಗಳೂ ನಡೆಯುತ್ತಿವೆ ಎಂದು ಹೇಳಲಾಗಿದೆ. ಅಹಮದಾಬಾದ್ ನಲ್ಲಿ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಲೇವಾದೇವಿಗಾನೊಬ್ಬನಿಂದ 50,000 ರೂ. ಸಾಲ ಮಾಡಿದ 45 ವರ್ಷದ ವ್ಯಕ್ತಿಯೊಬ್ಬ ಜೀವ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಆತನಿಂದ 5ಲಕ್ಷ ರೂ. ಸುಲಿದ ನಂತರವೂ , ಮೂವರು ಲೇವಾದೇವಿಗಾರರ ಕಿರುಕಳ ತಾಳಲಾರದೆ ಆತ್ಮಹತ್ಯೆಗೆ ಮೊರೆ ಹೋದ ಸಂಗತಿ ಬೆಳಕಿಗೆ ಬಂದಿದೆ. ರಾಜಕೋಟ್‍ನಲ್ಲಿ ಗಂಡ ಸಾಲ ಪಡೆದ 50,000 ರೂ. ವಸೂಲಿಗಾಗಿ 37 ವರ್ಷದ ಆತನ ಹೆಂಡತಿಯ ಮೇಲೆ ಅತ್ಯಾಚಾರ ನಡೆದಿರುವ ಸುದ್ದಿಯೂ ಬಂದಿದೆ.
“ಇವರುಗಳೆಲ್ಲಾ ರಕ್ತಪಿಪಾಸುಗಳು” ಎಂದು ಸೂರತ್ ಪೊಲೀಸ್ ಕಮಿಷನರ್ ಅಜಯ್ ತೋಮರ್ ಹೇಳಿರುವುದಾಗಿ ಮೇಲೆ ಹೇಳಿದ ಜನವರಿ 10ರ ವರದಿ ತಿಳಿಸುತ್ತದೆ. ಸೂರತ್ ನಲ್ಲಿ ಜನವರಿ ತಿಂಗಳಲ್ಲಿ 34 ದೂರುಗಳನ್ನು ದಾಖಲಿಸಿಕೊಂಡಿದ್ದು, 31 ಆರೋಪಿಗಳನ್ನು ಬಂಧಿಸಿದ್ದೇವೆ, ಎಂಬುದಾಗಿ ಅವರು ತಿಳಿಸಿದ್ದಾರೆ.
ಈ ಲೇವಾದೇವಿಗಾರರಲ್ಲಿ ಕೆಲವರು ನೋಂದಣಿ ಮಾಡಿಸಿದ್ದಾರೆ, ಇನ್ನು ಕೆಲವರು ಲೈಸನ್ಸ್ ಇಲ್ಲದೆ ವ್ಯವಹರಿಸುತ್ತಿದ್ದಾರೆ ಮತ್ತು ಅನೈತಿಕವಾಗಿ ಹಣ ಸಂಗ್ರಹಿಸುತ್ತಿದ್ದಾರೆ. ಬಡ್ಡಿ ದರ ವಾರ್ಷಿಕ ಶೇಕಡಾ 12 ಕ್ಕಿಂತ ಹೆಚ್ಚಿರಬಾರದು ಎಂದು ರಾಜ್ಯ ಸರ್ಕಾರ ನಿಗದಿ ಮಾಡಿದ್ದರೂ, ಅದಕ್ಕಿಂತ ಎಷ್ಟೋ ಹೆಚ್ಚು ವಸೂಲಿ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಈಗ ಗುಜರಾತ್ ಪೊಲೀಸ್ ಒಂದು ವಿಶೇಷ ಕಾರ್ಯಾಚರಣೆ ಆರಂಭಿಸಿರುವುದಾಗಿ ಖಾಸಗಿ ಲೇವಾದೇವಿಗಾರರ ಹೆಚ್ಚುತ್ತಿರುವ ಹಾವಳಿಯನ್ನು ತಡೆಯಲು ಪ್ರಾರಂಭಿಸಿರುವುದಾಗಿ ಗುಜರಾತಿನ ಡಿಜಿಪಿ ಭಾಟಿಯಾ ಹೇಳಿದ್ದಾರೆ. ಈ ರೀತಿಯ ಕಿರುಕಳವನ್ನು ತಡೆಯಲು, ಬಡ್ಡಿಕೋರತನವನ್ನು ಪ್ರತಿಬಂಧಿಸಲು ರಾಜ್ಯದಲ್ಲೆಡೆ ಕ್ಯಾಂಪ್ ಹಾಕಲಾಗುತ್ತಿದೆ. “ನಾವು ಪ್ರತಿಯೊಂದು ಪಟ್ಟಣ ಮತ್ತು ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆಗೆ ಇದರ ಸಲುವಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗಿ ನಿರ್ದೇಶನ ನೀಡಿದ್ದೇವೆ” ಎಂಬುದಾಗಿ ಡಿಜಿಪಿ ಹೇಳಿರುವುದಾಗಿ ವರದಿಯಾಗಿದೆ.
ಇತ್ತೀಚಿನ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಈಗ ಕೇಂದ್ರ ಸರಕಾರದಲ್ಲಿ ಗೃಹಮಂತ್ರಿಗಳಾಗಿರುವವರು ಮತ್ತು ಈ ಮೊದಲು ಇದೇ ರಾಜ್ಯದ ಗೃಹಮಂತ್ರಿಗಳಾಗಿದ್ದವರು ನಾವು 2002ರಲ್ಲಿ ದಂಗೆಕೋರರಿಗೆ ಪಾಟ ಕಲಿಸಿದ್ದೇವೆ, ಅದರಿಂದ ರಾಜ್ಯದಲ್ಲೀಗ ಶಾಂತಿ ನೆಲೆಸಿದೆ ಎಂದಿದ್ದರು. ಆದರೆ ಅವರ ಮತ್ತು ಅವರ ಶಿಷ್ಯರುಗಳ ಎರಡು ದಶಕಗಳ ಆಳ್ವಿಕೆಯ ನಂತರವೂ ಈ ಬಡ್ಡಿಕೋರ ಖಾಸಗಿ ಲೇವಾದೇವಿಗಾರರು ಯಾವುದೇ ಭಯವಿಲ್ಲದೆ ಬಡಜನರನ್ನು ಸುಲಿಯುತ್ತಲೇ ಇದ್ದಾರೆ, ಆದರೆ ಈಗಷ್ಟೇ ಇದು ಅಲ್ಲಿಯ ಆಡಳಿತದ ಗಮನಕ್ಕೆ ಬಂದಿದೆಯೇ, ಅಥವ ಇದು ಒಂದು ಹೊಸ ಸಮಸ್ಯೆಯೇ? ನಾವು ಪ್ರತಿನಿತ್ಯ ಗುಜರಾತ್ ಮಾದರಿ ಎಂಬ ಮಾತು ಕೇಳುತ್ತಿರುತ್ತೇವೆ. ಮೇಲಿನ ಸಂಗತಿ ಬಹುಶಃ ಬೇರೆಯೇ ಹೇಳುತ್ತಿದೆ.