ನಿಲ್ಲದ ಮಣಿಪುರ ಹಿಂಸಾಚಾರ : ಬಹುಸಂಖ್ಯಾಕವಾದ – ಧ್ರುವೀಕರಣದ ರಾಜಕೀಯದ ದುಷ್ಫಲ?

ಜೂನ್ 16ರಂದು ಮಣಿಪುರದ ರಾಜಧಾನಿ ಇಂಫಾಲಿನಲ್ಲಿ ಕೇಂದ್ರ ಮಂತ್ರಿಗಳ ಮನೆಗೆ ಬೆಂಕಿ ಹಚ್ಚಿರುವ ಸುದ್ದಿ ಬಂದಿದೆ. ಅದರ ಹಿಂದಿನ ದಿನವೇ ರಾಜ್ಯದ ಮಂತ್ರಿಗಳ ನಿವಾಸಕ್ಕೆ ಬೆಂಕಿ ಹಚ್ಚಿದ ಸುದ್ದಿ ಬಂದಿತ್ತು.

ಕಳೆದ ಒಂದೂವರೆ ತಿಂಗಳಲ್ಲಿ ಇದುವರೆಗೆ ಗಲಭೆಗಳಲ್ಲಿ 130ಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ, 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 5000 ಮನೆಗಳನ್ನು ಸುಟ್ಟು ಹಾಕಲಾಗಿದೆ. ಇದರಲ್ಲಿ ಶಾಸಕರ ಮನೆಗಳೂ ಇದ್ದವು. ಈಗ ರಾಜ್ಯ ಮತ್ತು ಕೇಂದ್ರ ಮಂತ್ರಿಗಳ ಮನೆಗಳೂ ಆ ಪಟ್ಟಿಗೆ ಸೇರಿವೆ. 200 ಹಳ್ಳಿಗಳು ಧ್ವಂಸಗೊಂಡಿವೆ. 60000ಕ್ಕೂ ಹೆಚ್ಚು ಮಂದಿ ಮನೆಮಾರು ಕಳಕೊಂಡಿದ್ದಾರೆ. 10000 ಮಂದಿ ಬೇರೆ ರಾಜ್ಯಗಳಿಗೆ ಓಡಿ ಹೋಗಿದ್ದಾರೆ.

35000 ಸೇನಾ ಮತ್ತು ಅರೆ ಸೇನಾ ಸಿಬ್ಬಂದಿಯನ್ನು ನಿಯೋಜಿಸಿದರೂ ‘ಡಬಲ್ ಇಂಜಿನ್’ ಸರಕಾರ ಅಸಹಾಯಕವಾಗಿ ಕೈಚೆಲ್ಲಿರುವಂತೆ ಕಾಣುತ್ತದೆ. ರಾಜ್ಯದಲ್ಲಿ ಕಾನೂನು-ವ್ಯವಸ್ಥೆ ವಿಫಲವಾಗಿದೆ ಎಂದು ಸ್ವತಃ ಕೇಂದ್ರ ಮಂತ್ರಿಗಳೇ ಹೇಳುವಂತಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ, ಈ ಹಿಂಸಾಚಾರ ಆರಂಭವಾಗಿ, ಹೊತ್ತಿ ಉರಿಯಲಾರಂಭಿಸಿದಾಗ ಕೇಂದ್ರ ಗೃಹಮಂತ್ರಿಗಳು ಮತ್ತು ಪ್ರಧಾನಿಗಳು ಕರ್ನಾಟಕದಲ್ಲಿ ‘ಡಬಲ್ ಇಂಜಿನ್ ಸರಕಾರದ ಅಗತ್ಯದ ಬಗ್ಗೆ ಪ್ರಚಾರ ನಡೆಸುತ್ತಿದ್ದರು. ಹಿಂಸಾಚಾರ ಆರಂಭವಾಗಿ 20 ದಿನಗಳ ನಂತರ ಅಲ್ಲಿಗೆ ಗೃಹಮಂತ್ರಿಗಳ ಭೇಟಿ ಮತ್ತು ಅವರು ರೂಪಿಸಿದರೆನ್ನಲಾದ ಶಾಂತಿ ಪ್ರಸ್ತಾಪಗಳು ಕ್ಷೋಭೆಯನ್ನು ತಗ್ಗಿಸಬಹುದೆಂಬ ನಿರೀಕ್ಷೆ ಈಗ ಸಂಪೂರ್ಣ ಹುಸಿಯಾಗಿದೆ.

ವ್ಯಂಗ್ಯಚಿತ್ರ ಕೃಪೆ: ಪಂಜು ಗಂಗೊಳ್ಳಿ, ಮೇ 5, 2023

550ಕ್ಕೂ ಹೆಚ್ಚು ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು, ಪ್ರಾಧ್ಯಾಪಕರುಗಳು, ಲೇಖಕರು, ಸಾಮಾಜಿಕ ಕಾರ್ಯಕರ್ತರು, ಕಲಾವಿದರು ಮುಂತಾದವರು ಹಿಂಸಾಚಾರ ಆರಂಭವಾದಂದಿನಿಂದಲೂ ಈ ಬಗ್ಗೆ ಇದುವರೆಗೂ ಚಕಾರವೆತ್ತದ ಪ್ರಧಾನಿಗಳು ಈಗಲಾದರೂ ತಮ್ಮ ಮೌನ ಮುರಿಯಬೇಕು ಎಂದು ಆಗ್ರಹಿಸಿದ್ದಾರೆ.

ಈ ನಡುವೆ ಈ ‘ಡಬಲ್ ಇಂಜಿನ್’ ವಿಫಲತೆಗೆ ಹೇಗಾದರೂ ಚುನಾವಣೆ ಗೆಲ್ಲುವ ಮತ್ತು ಜನಗಳನ್ನು ವಿಭಜಿಸುವ ತಂತ್ರವೇ ಕಾರಣವಾಗುತ್ತಿದೆಯೇ ಎಂಬ ಸಂದೇಹವನ್ನು ಬಲಪಡಿಸುವ ಒಂದು ಸಂಗತಿ ಬಯಲಿಗೆ ಬಂದಿದೆ.

ಚುನಾವಣೆ ಗೆಲ್ಲಲು ಉಗ್ರಗಾಮಿಗಳಿಂದ ನೆರವು?

ಮಣಿಪುರದಲ್ಲಿ ಚುನಾವಣೆ ಗೆಲ್ಲಲು ಅಸ್ಸಾಂ ಮುಖ್ಯಮಂತ್ರಿ ಹೀಮಂತ್ ಬಿಸ್ವಾ ಶರ್ಮಾ ಮತ್ತು ಹಿರಿಯ ಬಿಜೆಪಿ/ಆರೆಸ್ಸೆಸ್ ಮುಖಂಡ ರಾಂ ಮಾಧವ್ ಕುಕಿ ಉಗ್ರಗಾಮಿ ಗುಂಪುಗಳಿಂದ ಸಹಾಯ ಪಡೆದಿದ್ದಾರೆಯೇ ಎಂಬ ಪ್ರಶ್ನೆಯನ್ನು ಎತ್ತುವ ಪತ್ರವೊಂದು ಎನ್‌ಐಎ ನ್ಯಾಯಾಲಯದಲ್ಲಿ ಬಯಲಿಗೆ ಬಂದಿದೆ. ‘ಯುನೈಟೆಡ್ ಕುಕಿ ಲಿಬರೇಶನ್ ಫ್ರಂಟ್’(ಯುಕೆಎಲ್‌ಎಫ್) ಅಧ್ಯಕ್ಷ ಎಸ್ ಎಸ್ ಹಾವೊಕಿಪ್ ಸಲ್ಲಿಸಿದ ಅಫಿಡವಿಟ್ ಜೊತೆಗೆ ಲಗತ್ತಿಸಲಾದ ಈ ಪತ್ರದಲ್ಲಿ ರಾಂ ಮಾಧವ್ ಮತ್ತು ಹಿಮಂತ ಬಿಸ್ವಾ ಶರ್ಮಾ ಅವರೊಂದಿಗಿನ ಒಪ್ಪಂದದ ಪ್ರಕಾರ, 2017 ರಲ್ಲಿ, ಅವರ ಸಂಘಟನೆ ಮತ್ತು ಮತ್ತೊಂದು ಕುಕಿ ಸಂಘಟನೆ ಯುನೈಟೆಡ್ ಪೀಪಲ್ ಫ್ರಂಟ್ (ಯುಪಿಎಫ್) ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಎಂದು ಯುಕೆಎಲ್‌ಎಫ್ ನಾಯಕ ಆರೋಪಿಸಿದ್ದಾರೆ.

2019 ರಲ್ಲಿ ಕುಕಿ ಸಂಘಟನೆಯ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಬರೆದರೆನ್ನಲಾದ ಈ ಪತ್ರದಲ್ಲಿ ಈ ಇಬ್ಬರು ಬಿಜೆಪಿ ನಾಯಕರು ಈ ಸಹಾಯವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

2017ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಉಗ್ರಗಾಮಿ ಸಂಘಟನೆಗಳ ಸಹಾಯ ಪಡೆಯಿತು ಎಂಬ ಸಂಗತಿ ಇದರಿಂದ ಹೊಮ್ಮುತ್ತದೆ. ಬಿಜೆಪಿ 2017 ರಲ್ಲಿ ಮೊದಲ ಬಾರಿಗೆ ಈ ಈಶಾನ್ಯ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತು ಮತ್ತು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಿತು.

“ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಇವುಗಳನ್ನು ನಾವು ಬೆಂಬಲಿಸದಿದ್ದರೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಸ್ಥಾಪಿಸುವುದು ಅಸಾಧ್ಯವಾಗುತ್ತಿತ್ತು. ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಚುನಾವಣೆಯಲ್ಲಿ, ಬಿಜೆಪಿ ಅಭ್ಯರ್ಥಿಯು ನಮ್ಮ ಕಾರ್ಯಾಚರಣೆಯ ಪ್ರದೇಶದಲ್ಲಿ ಸುಮಾರು 80-90 ಪ್ರತಿಶತದಷ್ಟು ಮತಗಳನ್ನು ಗಳಿಸಿದ್ದಾರೆ” ಎಂದೂ 2019ರಲ್ಲಿ ಬರೆದ ಈ ಪತ್ರದಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ. http://(https://www.indiatodayne.in

ರಾಂ ಮಾಧವ್ ಇದನ್ನು ನಿರಾಕರಿಸಿದ್ದಾರೆ. “ಚುನಾವಣಾ ಪ್ರಚಾರದ ಸಮಯದಲ್ಲಿ, ಸಮಾಜದ ವಿವಿಧ ಕ್ಷೇತ್ರಗಳ ಅನೇಕ ಜನರು ನಮ್ಮನ್ನು ಭೇಟಿಯಾಗುತ್ತಾರೆ. ಈ ವ್ಯಕ್ತಿಯನ್ನು ಅಥವಾ ಯಾವುದೇ ಉಗ್ರಗಾಮಿ ಸಂಘಟನೆಯ ಮುಖಂಡರನ್ನು ಭೇಟಿ ಮಾಡಿದ ನೆನಪಿಲ್ಲ. ಹಾಗಾಗಿ ಆತನಿಂದ ಸಹಾಯ ಪಡೆಯುವ ಪ್ರಶ್ನೆಯೇ ಇಲ್ಲ. ನಮ್ಮ ಕಾರ್ಯಕರ್ತರು ಮತ್ತು ಸಾರ್ವಜನಿಕ ಬೆಂಬಲದ ಬಲದಿಂದ ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ” ಎಂದು ಅವರು ಹೇಳಿದ್ದಾರಂತೆ. ಅಸ್ಸಾಂ ಮುಖ್ಯಮಂತ್ರಿಗಳು ‘ಇಂಡಿಯಾ ಟುಡೇ ಎನ್‌ಇ’ಯಲ್ಲಿ ಇದು ಪ್ರಕಟವಾಗುವ ವರೆಗೆ ಕರೆಗಳು ಮತ್ತು ಲಿಖಿತ ಸಂದೇಶಗಳಿಗೆ ಪ್ರತಿಕ್ರಿಯಿಸಲಿಲ ಎನ್ನುತ್ತ, ಈ ಪತ್ರ ಹಲವು ಪ್ರಶ್ನೆಗಳನ್ನು ಎತ್ತಿದೆ ಎಂದು ಈವರದಿಯನ್ನು ಸಲ್ಲಿಸಿದ ಪತ್ರಕರ್ತರು ಹೇಳುತ್ತಾರೆ. ಅವೆಂದರೆ:

* ಮಣಿಪುರ ಚುನಾವಣೆಗಳಲ್ಲಿ ಬಿಜೆಪಿ ಕುಕಿ ಉಗ್ರರ ನೆರವು ಪಡೆದಿದೆಯೇ?

*2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಅದೇ ಕುಕಿ ಉಗ್ರಗಾಮಿಗಳ ಸಹಾಯವನ್ನು ತೆಗೆದುಕೊಂಡಿದೆಯೇ?

*ಕುಕಿ ಉಗ್ರಗಾಮಿಗಳಿಂದ ಸಹಾಯ ಕೇಳಿದ ಬಗ್ಗೆ ಪ್ರಧಾನಿ ಮತ್ತು ಗೃಹಮಂತ್ರಿಗಳಿಗೆ ತಿಳಿದಿತ್ತೇ? ಹೌದು ಎಂದಾದರೆ, ಅವರು ಅದನ್ನು ಹೇಗೆ ಮಂಜೂರು ಮಾಡಿದರು? ಇಲ್ಲದಿದ್ದರೆ, ಏಕೆ ತಿಳಿಯಲಿಲ್ಲ?

*ಇದು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ನಿರ್ಲಜ್ಜವಾಗಿ ರಾಜಿ ಮಾಡಿಕೊಳ್ಳುವುದಿಲ್ಲವೇ? ಮೋದಿ ಸರಕಾರಕ್ಕೆ ಚುನಾವಣಾ ಲಾಭವು ದೇಶದ ಹಿತಾಸಕ್ತಿಗಳಿಗಿಂತ ದೊಡ್ಡದೇ?

* ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ರಾಂ ಮಾಧವ್ ವಿರುದ್ಧ ಪ್ರಧಾನಿ, ಗೃಹಮಂತ್ರಿ, ಮೋದಿ ಸರ್ಕಾರ ಮತ್ತು ಬಿಜೆಪಿ ಯಾವ ಕ್ರಮ ತೆಗೆದುಕೊಳ್ಳುತ್ತಾರೆ?

* ಎನ್‌ಐಎ ಅವರ ವಿರುದ್ಧ ಪ್ರಕರಣ ದಾಖಲಿಸುತ್ತದೆಯೇ ಮತ್ತು ಅವರೊಂದಿಗೆ ಉಗ್ರರ ಸಂಪರ್ಕಗಳಿದ್ದವೇ ಎಂದು ತನಿಖೆ ನಡೆಸುತ್ತದೆಯೇ?

* ಬಿಜೆಪಿ ಅಧ್ಯಕ್ಷರು ಕ್ರಮ ಕೈಗೊಳ್ಳುವರೇ?

* ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಅಸ್ಸಾಂ ಸಿಎಂ ಪ್ರಮಾಣ ವಚನವನ್ನು ಉಲ್ಲಂಘಿಸಿದಂತಾಗಿಲ್ಲವೇ? ತನಿಖೆಗಳು ಮುಗಿಯುವವರೆಗೆ ಅಧಿಕಾರದಲ್ಲಿ ಮುಂದುವರಿಯಲು ಅವರಿಗೆ ಹಕ್ಕಿದೆಯೇ?

* ಪ್ರಧಾನಿ ಮತ್ತು ಗೃಹಮಂತ್ರಿಗಳ  ಸಂಪೂರ್ಣ ಮೌನವೇ ರಾಷ್ಟ್ರಕ್ಕೆ ಸಿಗುವ ಉತ್ತರಗಳೇ?

ಈ ಕೊನೆಯ ಪ್ರಶ್ನೆಯನ್ನು ಮೇಲೆ ಹೇಳಿದಂತೆ 550ಕ್ಕೂ ಹೆಚ್ಚು ಪ್ರತಿಷ್ಥಿತ ಹಿರಿಯರಲ್ಲದೆ, ಮಣಿಪುರದ ಚಿಂತಕರೂ ನೋವಿನಿಂದ ಕೇಳುತ್ತಿದ್ದಾರೆ.

“ಪ್ರಧಾನಿಗಳೇ, ಮೌನವಾಗಿರಲು ನಿಮಗೆಷ್ಟು ಧೈರ್ಯ ?”

“ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಮತ್ತು ಅದರ ಸರ್ಕಾರಗಳು ನಡೆಸಿದ ವಿಭಜನಕಾರೀ ರಾಜಕೀಯದಿಂದಾಗಿ ಮಣಿಪುರ ಇಂದು ಬಹುಪಾಲು ಹೊತ್ತಿ ಉರಿಯುತ್ತಿದೆ. ಮತ್ತು ಹೆಚ್ಚಿನ ಜೀವಗಳನ್ನು ಕಳೆದುಕೊಳ್ಳುವ ಮೊದಲು ಸಾಗಿರುವ ಈ ಅಂತರ್ಯುದ್ಧವನ್ನು ನಿಲ್ಲಿಸುವ ಜವಾಬ್ದಾರಿ ಅವರ ಮೇಲಿದೆ. ಹಿಂಸಾಚಾರವು ಪುರುಷರು, ಮಹಿಳೆಯರು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ .. .. ..ದೇಶದಾದ್ಯಂತ ತನ್ನ ಕಾರ್ಯ ವಿಧಾನದಂತೆ ಬಿಜೆಪಿಯು ತನ್ನ ಸ್ವಂತ ರಾಜಕೀಯ ಲಾಭಕ್ಕಾಗಿ ಸಮುದಾಯಗಳ ನಡುವಿನ ಹಳೆಯ ಜನಾಂಗೀಯ ಉದ್ವಿಗ್ನತೆಯನ್ನು ಮತ್ತೊಮ್ಮೆ ಉಲ್ಬಣಗೊಳಿಸುತ್ತಿದೆ. ಸ್ಪಷ್ಟವಾಗಿ, ರಾಜ್ಯದಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ಬಲಪ್ರಯೋಗ ಮತ್ತು ಒತ್ತಡ ಹಾಕುವಲ್ಲಿ ಬಿಜೆಪಿಯ ಪಾತ್ರ ಅಡಗಿದೆ. ಎರಡೂ ಸಮುದಾಯಗಳಿಗೆ ಮಿತ್ರರಂತೆ ನಟಿಸುತ್ತಾ, ಇದು ಸಮಸ್ಯೆ ಪರಿಹಾರದ ಕಡೆಗೆ ಸಂವಾದವನ್ನು ಸುಗಮಗೊಳಿಸುವ ಯಾವುದೇ ಪ್ರಯತ್ನದ ಬದಲು, ಅವರ ನಡುವಿನ ಐತಿಹಾಸಿಕ ಉದ್ವಿಗ್ನತೆಗಳ ಕಂದಕವನ್ನು ಮತ್ತಷ್ಟು ವಿಸ್ತರಿಸುತ್ತಿದೆಯಷ್ಟೇ ”ಎಂದು ನಾಗರಿಕ ಸಮಾಜದ ಈ 550ಕ್ಕೂ ಹೆಚ್ಚು ಹಿರಿಯ ವ್ಯಕ್ತಿಗಳ ಹೇಳಿಕೆ ನೇರವಾಗಿಯೇ ದೂಷಿಸಿದೆ. ಪ್ರಧಾನ ಮಂತ್ರಿಗಳು ಕಿವಿಗಳಿಗೆ ಅಪ್ಪಳಿಸುವಂತಿರುವ ತಮ್ಮ ಮೌನವನ್ನು ಮುರಿಯಬೇಕು ಎಂದು ಆವರು ಆಗ್ರಹಿಸಿದ್ದಾರೆ.

ಮೈತ್ಯಿ ಸಮುದಾಯಕ್ಕೆ ಸೇರಿದ  ರಾಜ್ಯದ ಒಬ್ಬ ಪ್ರಮುಖ ಚಿಂತಕಿ ಮತ್ತು ‘ಈಶಾನ್ಯ ಭಾರತ ಮಹಿಳಾ ಶಾಂತಿ ಮುತುವರ್ಜಿ’ ಸಂಘಟನೆಯ ಸಂಯೋಜಕಿಯೂ ಆಗಿರುವ ಬೀನಾಲಕ್ಷ್ಮಿ ನೇಪ್ರಾಂ ಹಿರಿಯ ಪತ್ರಕರ್ತ ಕರಣ್ ಥಾಪರ್‍ ಜತೆ ಸಂವಾದದಲ್ಲಿ “ನಾವು, ಮಣಿಪುರದ ಮಹಿಳೆಯರು ಬಿಕ್ಕಿ ಬಿಕ್ಕಿ ಅಳುತ್ತಿದ್ದೇವೆ” ಎನ್ನುತ್ತ “ಶ್ರೀಯುತ ಪ್ರಧಾನ ಮಂತ್ರಿಗಳೇ, ಮೌನವಾಗಿರಲು ನಿಮಗೆಷ್ಟು ಧೈರ್ಯ? ನೀವು ಮೌನವಾಗಿರಲು ಹೇಗೆ ಸಾಧ್ಯ? ಪ್ರಧಾನಿಗಳ ಮೌನ ಅವರೂ ಇದರಲ್ಲಿ ಶಾಮೀಲು ಎಂದು ತೋರಿಸುತ್ತದೆ. ಜಗತ್ತಿನಅತಿ ದೊಡ್ಡ ಪ್ರಜಾಪ್ರಭುತ್ವದ ನೇತಾರನಾಗಿ ಅವರೇಕೆ ಮೌನವಾಗಿದ್ದಾರೆ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ, ಇದು ಅವರ ಸ್ಥಾನಮಾನಕ್ಕೆ ತಕ್ಕುದಾದುದಲ್ಲ.. ನೈತಿಕ ಹೊಣೆಗಾರಿಕೆ ತಗೊಳ್ಳಿ, ರಾಜೀನಾಮೆ ನೀಡಿ ಎಂದು ಅವರು ನೋವಿನಿಂದ ಹೇಳಿದ್ದಾರೆ( ದಿ ವೈರ್, ಜೂನ್‍15)

 

ಬಹುಸಂಖ್ಯಾಕವಾದ ಮತ್ತು ಧ್ರುವೀಕರಣದ ರಾಜಕೀಯದ ದುಷ್ಪರಿಣಾಮಗಳ ಬಗ್ಗೆ ಅಮಿತ್ ಷಾ ಎಂದಾದರೂ ವಿವರಿಸುತ್ತಾರೆಯೇ! ಹಲವು ಜನಾಂಗೀಯ, ಧಾರ್ಮಿಕ, ಮತ್ತು ಸಾಂಸ್ಕೃತಿಕ ಅಸ್ಮಿತೆಗಳಿರುವ ಭಾರತದಲ್ಲಿ ಚುನಾವಣಾ ಪ್ರಾಬಲ್ಯದ ಬಲಿಪೀಠದಲ್ಲಿ ಬೇರೆಲ್ಲ ಪರಿಗಣನೆಗಳನ್ನು ಬಲಿಗೊಡುವಲ್ಲಿ ಹೀಗಾಗುವುದು ಖಂಡಿತ ಎಂದು ಮಣಿಪುರದ ನಿಲ್ಲದ ಹಿಂಸಾಚಾರದ ಬಗ್ಗೆ ಟಿಪ್ಪಣಿ ಮಾಡುತ್ತ ಸಿಪಿಐ(ಎಂ) ಪೊಲಿಟ್‌ಬ್ಯುರೊ ಸದಸ್ಯ ನೀಲೋತ್ಪಲ ಬಸು ಹೇಳುತ್ತಾರೆ.

ಈ ನಡುವೆ ಅಸ್ಸಾಂನ ರಾಜಧಾನಿ ಗುವಾಹಾಟಿಯಲ್ಲಿ ಸಿಪಿಐ(ಎಂ) , ಸಿಪಿಐ, ಕಾಂಗ್ರೆಸ್ ಸೇರಿದಂತೆ 12 ಪ್ರತಿಪಕ್ಷಗಳ ಮುಖಂಡರು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ರಾಜೀನಾಮೆ ನೀಡಬೇಕು ಇಲ್ಲವಾದರೆ, ಅವರನ್ನು ವಜಾಗೊಳಿಸಿ ಬಂಧಿಸಬೇಕು ಎಂದು ಆಗ್ರಹಿಸಿ ಜೂನ್ 16ರಂದು ಧರಣಿ ನಡೆಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಮತ್ತು ರಾಂಮಾಧವ್ ಮಣಿಪುರದ ಕುಕಿ ಉಗ್ರಗಾಮಿ ಗುಂಪುಗಳೊಂದಿಗೆ ಹೊಂದಿರಬಹುದಾದ ಸಂಬಂಧಗಳ ಬಗ್ಗೆ ಆಮೂಲಾಗ್ರ ತನಿಖೆ ನಡೆಸಬೇಕೆಂದು ಧರಣಿ ಆಗ್ರಹಿಸಿದೆ.

ಹತ್ತು ರಾಷ್ಟ್ರಮಟ್ಟದ ರಾಜಕೀಯ ಪಕ್ಷಗಳು ಮಣಿಪುರದ ಗಂಭೀರ  ಪರಿಸ್ಥಿತಿಯನ್ನು ತಿಳಿಗೊಳಿಸುವ  ಬಗ್ಗೆ, ತಮ್ಮ ಅಮೆರಿಕಾ ಭೇಟಿಗೆ ಹೊರಡುವ ಮೊದಲು ಪ್ರತಿಪಕ್ಷಗಳೊಂದಿಗೆ ಚರ್ಚೆ ನಡೆಸಬೇಕೆಂದು ಕೋರಿ ಪ್ರಧಾನಿಗಳ ಸ್ವೀಕೃತಿಗಾಗಿ ಕಾಯುತ್ತಿದ್ದಾರೆ.

 

“ಸ್ಸಾರಿ. ಪ್ರವಾಸ-ಪೂರ್ವ ಜೆಟ್‍ ಲ್ಯಾಗಿನಿಂದಾಗಿ ಇದು ಸಾಧ್ಯವಾಗುತ್ತಿಲ್ಲ”!                ವ್ಯಂಗ್ಯಚಿತ್ರ: ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್
Donate Janashakthi Media

Leave a Reply

Your email address will not be published. Required fields are marked *