ರಾಮ ಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿಗೆ ಆಹ್ವಾನ | ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿರೋಧ

ನವದೆಹಲಿ: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಜಾಗದಲ್ಲಿ ಕಟ್ಟಿರುವ ಕಟ್ಟಡದ ಉದ್ಘಾಟನೆ ಜನವರಿ 22ರಂದು ನಡೆಯಲಿದೆ. ಅದರ ಉದ್ಘಾಟನಾ ಪೂಜೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಗೆ ಅವಕಾಶ ನೀಡಿದ್ದನ್ನು ಬುಧವಾರದಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಆಗಾಗ್ಗೆ ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಾ, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ.

ದೇವಸ್ಥಾನದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗವಹಿಸುವದರ ನ್ಯಾಯಸಮ್ಮತತೆಯನ್ನು ಸುಬ್ರಮಣ್ಯಂ ಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದಿರುವ ಅವರು, “ರಾಮನು ತನ್ನ ಹೆಂಡತಿ ಸೀತೆಗಾಗಿ ಸುಮಾರು ಒಂದೂವರೆ ದಶಕಗಳ ಕಾಲ ವನವಾಸ ಮಾಡಿದ್ದನು, ಯುದ್ಧ ಮಾಡಿದ್ದನು. ಹೀಗಿರುವಾ ರಾಮ ಲಾಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾ ಪೂಜೆ ಕಾರ್ಯಕ್ರಮಕ್ಕೆ ಮೋದಿ ಬರುವುದನ್ನು ರಾಮಭಕ್ತರು ಹೇಗೆ ಅವಕಾಶ ನೀಡಿದರು? ಆದರೆ ಪ್ರಧಾನಿ ಅವರು ತಮ್ಮ ಪತ್ನಿಯನ್ನು ತ್ಯಜಿಸಿರುವ ವಿಚಾರದಲ್ಲಿ ಹೆಸರುವಾಸಿಯಾಗಿದ್ದಾರೆ, ಆದರೂ ಅವರು ಪೂಜೆಯನ್ನು ಮಾಡುತ್ತಾರೆಯೇ?” ಎಂದು ಕೇಳಿದ್ದಾರೆ.

ಇದನ್ನೂ ಓದಿ: ಬಾಬರಿ ಮಸೀದಿ ಒಡೆದು ಕಟ್ಟಿದ ಕಟ್ಟಡದ ಉದ್ಘಾಟನೆಗೆ ಆಹ್ವಾನ | ತಿರಸ್ಕರಿಸಿದ ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ

ಹಲವು ವರ್ಷಗಳಿಂದ ಪ್ರಧಾನಿ ತಮ್ಮ ಮದುವೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿರಲಿಲ್ಲ. ನಿವೃತ್ತ ಶಿಕ್ಷಕಿ ಜಶೋದಾಬೆನ್ ಅವರೊಂದಿಗಿನ ಅವರ ವಿವಾಹವು 2014 ರಲ್ಲಿ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ವೈವಾಹಿಕ ಜೀವನವನ್ನು ಘೋಷಿಸಿದಾಗ ವ್ಯಾಪಕವಾಗಿ ಚರ್ಚೆಯಾಗಿತ್ತು. ಅವರಿಬ್ಬರು ತಮ್ಮ ಸಮುದಾಯದ ಸಂಪ್ರದಾಯಗಳಿಗೆ ಅನುಗುಣವಾಗಿ ಯುವಕರಾಗಿದ್ದಾಗಲೆ ವಿವಾಹವಾದ್ದರು. ಆದರೆ, ನಂತರ ಪ್ರಧಾನಿ ಆಕೆಯನ್ನು ಕೈಬಿಟ್ಟುಬಿಟ್ಟಿದ್ದರು.

ಪ್ರಧಾನಿಯ ಹಿರಿಯ ಸಹೋದರ ಸೋಮ್ ಭಾಯ್ ಅವರು, ನರೇಂದ್ರ ಮೋದಿಯ ವಿವಾಹವನ್ನು ಬಲವಂತವಾಗಿ ಮಾಡಲಾಗಿತ್ತು ಎಂದು ಹೇಳಿಕೊಂಡಿದ್ದರು. “ಸ್ವಾಮಿ ವಿವೇಕಾನಂದರ ಬೋಧನೆಗಳಿಂದ ಪ್ರೇರಿತರಾಗಿ ರಾಷ್ಟ್ರ ಮತ್ತು ಸಮಾಜಕ್ಕಾಗಿ ಕೆಲಸ ಮಾಡುವುದಕ್ಕಾಗಿ ಪ್ರಧಾನಿ ಕುಟುಂಬ ಜೀವನ ತ್ಯಜಿಸಿದ್ದರು” ಎಂದು ಸೋಮ್ ಬಾಯಿ ಹೇಳಿದ್ದರು.

ಬಾಬರಿ ಮಸೀದಿ ಒಡೆದು ಕಟ್ಟಿದ ದೇವಾಲಯದ ಉದ್ಘಾಟನೆಗೆ ಹಲವಾರು ರಾಜಕಾರಣಿಗಳು, ಧಾರ್ಮಿಕ ಮುಖಂಡರು ಮತ್ತು ಜನಪ್ರಿಯ ನಟರಾದ ಯಶ್, ಪ್ರಭಾಸ್, ರಣಬೀರ್ ಕಪೂರ್, ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಸನ್ನಿ ಡಿಯೋಲ್ ಅವರನ್ನು ಆಹ್ವಾನಿಸಲಾಗಿದೆ. ಅಲ್ಲದೆ ಸುಮಾರು 4,000 ಸಂತರು ಮತ್ತು ನೂರಾರು ಅಧಿಕಾರಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: ರಾಜ್ಯದಲ್ಲಿ 34 ಕೊರೊನಾ JN.1 ಪ್ರಕರಣ ವರದಿ – ಮತ್ತಷ್ಟು ಹೆಚ್ಚಳ ನಿರೀಕ್ಷೆ

ಈ ಬಗ್ಗೆ ಪ್ರತಿಕ್ರಿಯಿಸಿದ ಸುಬ್ರಮಣಿಯನ್ ಸ್ವಾಮಿ, ನಟರು ಮೊದಲು ತಮ್ಮ ಪಾಪಗಳನ್ನು ಶುದ್ಧೀಕರಿಸಲು ಆಚರಣೆಗೆ ಒಳಗಾಗಬೇಕು ಎಂದು ಹೇಳಿದ್ದರು. “12+ ಸಿನಿಮಾ ತಾರೆಯರು ಅಯೋಧ್ಯೆಯಲ್ಲಿ ರಾಮ್ ಲಾಲಾ ಪ್ರತಿಷ್ಠಾಪನೆಗಾಗಿ ಪ್ರಾಣ ಪ್ರತಿಷ್ಠಾ ಪೂಜೆಗೆ ಬರುತ್ತಿದ್ದಾರೆ. ಇದೆಲ್ಲಾ ಯಾಕೆ ? ಅವರು ಪ್ರಾಯಶ್ಚಿತ ಮಾಡಲು ಬಂದರೆ ನಾವು ಅವರನ್ನು ಸ್ವಾಗತಿಸಬಹುದು. ಇಲ್ಲದಿದ್ದರೆ ಈ ನಿತ್ಯ ಪಾಪಿಗಳು ಕಾಳಿ ದೇವಸ್ಥಾನಕ್ಕೆ ಹೋಗಿ ಕ್ಷಮೆ ಯಾಚಿಸಬೇಕು” ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಸಿಪಿಐ (ಎಂ) ನಾಯಕ ಸೀತಾರಾಮ್ ಯೆಚೂರಿ, ಧಾರ್ಮಿಕ ಸಮಾರಂಭವನ್ನು “ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ” ವಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿ ಆಹ್ವಾನವನ್ನು ತಿರಸ್ಕರಿಸಿದ್ದಾರೆ.

“ಬಿಜೆಪಿ ಮತ್ತು ಆರೆಸ್ಸೆಸ್ ಧಾರ್ಮಿಕ ಸಮಾರಂಭವನ್ನು ಪ್ರಧಾನಮಂತ್ರಿ, ಯುಪಿ [ಉತ್ತರ ಪ್ರದೇಶ] ಮುಖ್ಯಮಂತ್ರಿ ಮತ್ತು ಇತರ ಸರ್ಕಾರಿ ಅಧಿಕಾರಿಗಳನ್ನು ನೇರವಾಗಿ ಒಳಗೊಂಡ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿ ಪರಿವರ್ತಿಸಿರುವುದು ಅತ್ಯಂತ ದುರದೃಷ್ಟಕರ. ಸಂವಿಧಾನದ ಅಡಿಯಲ್ಲಿ ಭಾರತದಲ್ಲಿನ ರಾಜ್ಯವು ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಿರಬಾರದು ಎಂಬುದು ಸುಪ್ರೀಂ ಕೋರ್ಟ್‌ನಿಂದ ಪುನರುಚ್ಚರಿಸಿದ ಭಾರತದಲ್ಲಿನ ಆಡಳಿತದ ಮೂಲಭೂತ ತತ್ವವಾಗಿದೆ. ಕಾರ್ಯಕ್ರಮದ ಆಯೋಜನೆಯಲ್ಲಿ ಆಡಳಿತಾರೂಢ ಸರ್ಕಾರವು ಇದನ್ನು ಉಲ್ಲಂಘಿಸುತ್ತಿದೆ” ಎಂದು ಸಿಪಿಐ(ಎಂ) ಹೇಳಿಕೆಯಲ್ಲಿ ತಿಳಿಸಿದೆ.

ವಿಡಿಯೊ ನೋಡಿ: ಗಾಜಾ ಹತ್ಯಾಕಾಂಡ | ಯೇಸುಕ್ರಿಸ್ತ ಹುಟ್ಟಿದ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಇಲ್ಲ! Janashakthi Media

Donate Janashakthi Media

Leave a Reply

Your email address will not be published. Required fields are marked *