ಪೊಲೀಸರಿಗೆ ಒಂದು ದೇಶ-ಒಂದು ಸಮವಸ್ತ್ರದ ಹೊಸ ವಿಚಾರ ಪ್ರಸ್ತಾಪಿಸಿದ ಪ್ರಧಾನಿ ಮೋದಿ

ಸೂರಜ್‌ ಕುಂಡ್‌ (ಹರಿಯಾಣ): ಪೊಲೀಸರಿಗೆ “ಒಂದು ರಾಷ್ಟ್ರ, ಒಂದು ಸಮವಸ್ತ್ರ” ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದು, ಇದು ಕೇವಲ ಸಲಹೆ. ಅದನ್ನು ರಾಜ್ಯಗಳ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ ಎಂಬುದನ್ನು ಹೇಳಿದ್ದಾರೆ. ಹರಿಯಾಣದಲ್ಲಿ ನಡೆಯುತ್ತಿರುವ ರಾಜ್ಯಗಳ ಗೃಹ ಮಂತ್ರಿಗಳ ‘ಚಿಂತನ ಶಿಬಿರ’ ಉದ್ದೇಶಿಸಿ ಮಾತನಾಡಿದ ಮೋದಿ, ಅಪರಾಧ ಮತ್ತು ಅಪರಾಧಿಗಳನ್ನು ನಿಭಾಯಿಸಲು ರಾಜ್ಯಗಳ ನಡುವೆ ನಿಕಟ ಸಹಕಾರದ ಅಗತ್ಯವಿದೆ ಎಂದರು.

ದೇಶದಾದ್ಯಂತ ಪೊಲೀಸರ ಗುರುತು ಒಂದೇ ಆಗಿರಬಹುದು ಎಂದು ನಾನು ಭಾವಿಸುತ್ತೇನೆ ಅಲ್ಲದೆ, ಅಪರಾಧಗಳು ಮತ್ತು ಅಪರಾಧಿಗಳನ್ನು ನಿಭಾಯಿಸಲು ರಾಜ್ಯಗಳ ನಡುವೆ ನಿಕಟ ಸಹಕಾರ ಅಗತ್ಯವಿದೆ. ಸಹಕಾರಿ ಒಕ್ಕೂಟ ಎಂಬುದು ಸಂವಿಧಾನದ ಭಾವನೆ ಮಾತ್ರವಲ್ಲದೆ ರಾಜ್ಯಗಳು ಮತ್ತು ಕೇಂದ್ರದ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಮತ್ತು ಭದ್ರತೆಯ ಉದಯೋನ್ಮುಖ ಸವಾಲುಗಳನ್ನು ಎದುರಿಸಲು ಎಲ್ಲಾ ಏಜೆನ್ಸಿಗಳ ಸಂಘಟಿತ ಕ್ರಮದೊಂದಿಗೆ ಕಾನೂನುಗಳನ್ನು ಪರಿಶೀಲಿಸಲು ಮತ್ತು ಪ್ರಸ್ತುತ ಸಂದರ್ಭಕ್ಕೆ ಅವುಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಗಳನ್ನು ಪ್ರಧಾನಿ ಒತ್ತಾಯಿಸಿದರು.

ಪೊಲೀಸರಿಗೆ ‘ಒಂದು ರಾಷ್ಟ್ರ, ಒಂದು ಸಮವಸ್ತ್ರ’ದ ವಿಚಾರ ಕೇವಲ ಆಲೋಚನೆಯಾಗಿದ್ದು, ಅದನ್ನು ರಾಜ್ಯಗಳು ಆಲೋಚನೆ ಮಾಡಿ ಮನಸ್ಸು ಮಾಡಿದರೆ ಜಾರಿಗೆ ತರಬಹುದು. ಇದು 5, 50, ಅಥವಾ 100 ವರ್ಷಗಳಲ್ಲಿ ಆಗಬಹುದು. ಸ್ವಲ್ಪ ಯೋಚಿಸಿ ಸಂದು ಹೇಳಿದರು.

ಪೊಲೀಸರ ಬಗ್ಗೆ ಉತ್ತಮ ಗ್ರಹಿಕೆಯನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ ಇಲ್ಲಿನ ತಪ್ಪು, ಲೋಪದೋಷಗಳನ್ನು ಗಮನಿಸಿ ಪರಿಹರಿಸಬೇಕು. ದಕ್ಷತೆ, ಉತ್ತಮ ಫಲಿತಾಂಶ ಮತ್ತು ಸಾಮಾನ್ಯ ಜನರಿಗೆ ರಕ್ಷಣೆಯನ್ನು ನೀಡಲು ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ಪರಸ್ಪರ ಸಹಕರಿಸಬೇಕು ಎಂದು ಸಹ ಪ್ರತಿಪಾದಿಸಿದರು.

ಪೊಲೀಸ್ ಇಲಾಖೆಯನ್ನು ಬಲಪಡಿಸಲು, ಉತ್ತಮ ಫಲಿತಾಂಶವನ್ನು ತರಲು ಪೊಲೀಸ್ ಮತ್ತು ಭದ್ರತಾ ಏಜೆನ್ಸಿಗಳಿಂದ ಮಾನವ ಬುದ್ಧಿಮತ್ತೆಯನ್ನು ಉತ್ಪಾದಿಸುವ ಹಳೆಯ ಉತ್ತಮ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಕೂಡ ಪ್ರಧಾನಿ ಹೇಳಿದರು.

ಪ್ರಧಾನ ಮಂತ್ರಿಗಳ ಕಚೇರಿ ಹೇಳಿಕೆಯ ಪ್ರಕಾರ, ಎರಡು ದಿನಗಳ ಶಿಬಿರವು ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನೀತಿ ನಿರೂಪಣೆಗೆ ರಾಷ್ಟ್ರೀಯ ದೃಷ್ಟಿಕೋನವನ್ನು ಒದಗಿಸುವ ಪ್ರಯತ್ನವಾಗಿದೆ. ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು 16 ರಾಜ್ಯಗಳ ಗೃಹ ಸಚಿವರು ಮತ್ತು ಉಪಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆ ವಹಿಸಿದ್ದಾರೆ.

ಸದನದಲ್ಲಿ ಐಪಿಸಿ, ಸಿಆರ್‌ಪಿಸಿ ನೂತನ ಕರಡು ಮಂಡನೆ

ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸುಧಾರಿಸುವ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ಸ್ವೀಕರಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ. ಪ್ರತಿ ರಾಜ್ಯದಲ್ಲೂ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಆರಂಭಿಸುವ ಯೋಜನೆಯನ್ನು ಕೇಂದ್ರವು ಹೊಂದಿದೆ ಎಂದು ತಿಳಿಸಿರುವ ಅವರು, ಎರಡೂ ಶಾಸನಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಸದನದಲ್ಲಿ ಹೊಸದಾಗಿ ಕರಡು ಮಂಡಿಸಲಾಗುವುದು ಎಂದು ಹೇಳಿದ್ದಾರೆ.

“ಸಿಆರ್‌ಪಿಸಿ ಮತ್ತು ಐಪಿಸಿ ಸುಧಾರಣೆ ಕುರಿತು ಸಾಕಷ್ಟು ಸಲಹೆಗಳನ್ನು ಸ್ವೀಕರಿಸಲಾಗಿದೆ. ಇದಕ್ಕಾಗಿ ಸಾಕಷ್ಟು ಸಮಯ ವಿನಿಯೋಗಿಸಿದ್ದು, ಆಳವಾಗಿ ಅಧ್ಯಯನ ಮಾಡಲಾಗುತ್ತಿದೆ. ಸದನದಲ್ಲಿ ಶೀಘ್ರದಲ್ಲೇ ನೂತನ ಕರಡು ಮಂಡಿಸಲಾಗುವುದು” ಎಂದರು.

ಭಾರತದಲ್ಲಿ ಕ್ರಿಮಿನಲ್‌ ಕಾನೂನು ಸುಧಾರಣೆ ಶಿಫಾರಸ್ಸು ಮಾಡುವುದಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು 2020ರ ಮೇನಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ದೆಹಲಿಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಣಬೀರ್‌ ಸಿಂಗ್‌ ಅವರು ಸಮಿತಿಯ ನೇತೃತ್ವ ವಹಿಸಿದ್ದಾರೆ.

ಸಮಿತಿ ರಚಿಸಿದಾಗ ವೈವಿಧ್ಯತೆ ಮತ್ತು ಪಾರದರ್ಶಕತೆ ಕೊರತೆಯ ಹಿನ್ನೆಲೆಯಲ್ಲಿ ವಕೀಲರು, ನಿವೃತ್ತ ನ್ಯಾಯಮೂರ್ತಿಗಳು, ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಸಮಿತಿಯು ಎಲ್ಲಾ ರೀತಿಯ ಅಭಿಪ್ರಾಯ ಮತ್ತು ಸಲಹೆಗಳನ್ನು ಗೌರವಿಸುವುದಾಗಿ ಹೇಳಿತ್ತು. ಪಾರದರ್ಶಕತೆಯ ದೃಷ್ಟಿಯಿಂದ ಎಲ್ಲಾ ರೀತಿಯ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಾಗಿ ಹೇಳಿತ್ತು.

Donate Janashakthi Media

Leave a Reply

Your email address will not be published. Required fields are marked *