ಹಾಸನ: ಪ್ಲಾಸ್ಟಿಕ್ ಕಸ ಬೀದಿಗೆ ಬೀಳದಂತೆ ಅದನ್ನು ಮರುಬಳಕೆ ಸಾಧ್ಯವಾಗುವಂತಹ ಚಟುವಟಿಕೆಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳುವ ಅಭ್ಯಾಸ ಪ್ರತಿಯೊಬ್ಬರೂ ರೂಢೀಸಿಕೊಂಡರೆ ಪರಿಸರಕ್ಕೆ ಅದುವೆ ದೊಡ್ಡಕೊಡುಗೆ ಎಂದು ಕಸದಿಂದ ರಸ ಸಹಾಯಕ ಯೋಜನಾಧಿಕಾರಿ ರವಿ ಹೇಳಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲೆ, ಕಟ್ಟಾಯ ಗ್ರಾಮ ಪಂಚಾಯತಿ, ಸುಭಾಶ್‌ಚಂದ್ರ ಬೋಸ್ ಇಕೋ ಕ್ಲಬ್ ಸರ್ಕಾರಿ ಪ್ರೌಢಶಾಲೆ ಹಾಗೂ ಹಾಸನ ತಾಲ್ಲೂಕು ಪಂಚಾಯಿತಿ ಎನ್.ಆರ್.ಎಲ್.ಎಂ, ಇವರುಗಳ ಸಹಯೋಗದಲ್ಲಿ ಕಟ್ಟಾಯ ಗ್ರಾಮದಲ್ಲಿ ಪ್ಲಾಸ್ಟಿಕ್ ಬಂಧನ ಪರಿಸರ ಸ್ಪಂದನ ಜಾಗೃತಿ ಜಾಥಾ, ಪ್ಲಾಸ್ಟಿಕ್ ಸಂಗ್ರಹ ಹಾಗೂ ಪ್ಲಾಸ್ಟಿಕ್ ಬಂಧನ ಚಟುವಟಿಕೆ ನಡೆಯಿತು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜು ಮಾನಾಡಿ, ಮಕ್ಕಳ ಮೂಲಕ ಮನೆ ಮನೆಯಲ್ಲಿ ಪರಿಸರದ ಪಾಠ ಹೇಳುವ ಸಮರ್ಥ ಚಟುವಟಿಕೆ ಪ್ಲಾಸ್ಟಿಕ್ ಬಂಧನ ಪರಿಸರ ಸ್ಪಂದನ. ಇದೊಂದು ನಿತ್ಯದ ಅಭ್ಯಾಸವಾಗಬೇಕು ಎಂದರು.
ಪ್ರಾಸ್ತವಿಕ ಮಾತನಾಗಳನ್ನಾಡಿದ ಬಿಜಿವಿಎಸ್ ತಾಲ್ಲೂಕು ಅಧ್ಯಕ್ಷೆ ರಾಧಾ, ಹಾಸನ ಜಿಲ್ಲೆಯಲ್ಲಿ ಬಿಜಿವಿಎಸ್ ಶಾಲೆಗಳ ಇಕೋ ಕ್ಲಬ್ ಮೂಲಕ ಗ್ರಾಮ ಪಂಚಾಯತಿಗಳ ಸಂಚಾಲನೆಯಲ್ಲಿ ಪ್ಲಾಸ್ಟಿಕ್ ಬಂಧನ ಪರಿಸರ ಸ್ಪಂದನ ಆಂದೋಲನ ರೂಪಿಸಿದೆ. ಹಾಸನ ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತಮ ಸ್ಪಂದನೆ ಮಾತ್ರವಲ್ಲ ತಾನೇ ಲೀಡರ್ ಜಾಗದಲ್ಲಿ ನಿಂತು ಜಿಲ್ಲೆಯನ್ನು ಮಾಲಿನ್ಯ ಮುಕ್ತ ಹಸಿರು ಜಿಲ್ಲೆಯಾಗಿಸಲು ವೇಗವರ್ಧಕವಾಗಿ ಕೆಲಸ ಮಾಡುತ್ತಿರುವುದು ಅತ್ಯಂತ ಮಾದರಿಯ ಕೆಲಸ ಎಂದರು.
ಜಾಥಾವನ್ನು ಕಟ್ಟಾಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಲಾಕ್ಷಿ, ಪಿಡಿಒ ಪುಷ್ಪಲತ, ಬಿಜಿವಿಎಸ್ ಜಿಲ್ಲಾಧ್ಯಕ್ಷ ಗುರುರಾಜು ಹಾಗೂ ಯೋಜನಾಧಿಕಾರಿ ರವಿ ಬಾಟಲುಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ತುಂಬುವುದರ ಮೂಲಕ ಉದ್ಘಾಟಿಸಿದರು. ಪಿಡಿಒ ಪುಷ್ಪಲತ ಎಲ್ಲರನ್ನೂ ಸ್ವಾಗತಿಸಿ, ಕಟ್ಟಾಯ ಗ್ರಾಮವನ್ನು ಮಾಲಿನ್ಯ ಮುಕ್ತ ಮಾಡಲು ಗ್ರಾಮಪಂಚಾಯತಿ ಕಟಿಬದ್ಧವಾಗಿದೆ ಪಂಚಾಐತಿ ಜೊತೆ ಇಲ್ಲಿನ ಪ್ರೌಢಶಾಲೆ ಶಾಲೆ ಹಾಗೂ ಬಿಜಿವಿಎಸ್ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಬಿಜಿವಿಎಸ್ ಜಿಲ್ಲಾ ಸಹಕಾರ್ಯದರ್ಶಿ ನಾಗೇಶ್, ಜಯನಗರ ಘಟಕ ಕಾರ್ಯದರ್ಶಿ ಮೋನಿಕಾ, ಎನ್.ಆರ್.ಎಲ್.ಎಂ ಟಿಪಿಎಂ ವೇಣುಗೋಪಾಲ್ ಹಾಗೂ ಸರ್ಕಾರಿ ಪ್ರೌಢಶಾಲೆ ಇಕೋ ಕ್ಲಬ್ ಸಂಚಾಲಕಿ ಪೃಥ್ವಿ ಪ್ಲಾಸ್ಟಿಕ್ ಮಾಲಿನ್ಯದ ಕುರಿತು ಹಾಗೂ ಪರಿಹಾರಗಳ ಮಾದರಿ ಕುರಿತು ತರಬೇತಿ ನೀಡಿ ಜಾಥಾ ಸ್ವರೂಪ ಅರ್ಥ ಮಾಡಿಸುವುದು, ಮಾನಸಿಕವಾಗಿ ಸಿದ್ಧಪಡಿಸುವುದು ಮತ್ತು ಹತ್ತು ಹತ್ತು ಜನರ ಗುಂಪು ಮಾಡಿ ಗುಂಪಿಗೊಬ್ಬ ನಾಯಕನನ್ನು ನೇಮಿಸಿ ಜಾಥಾದ ಮಹತ್ವವನ್ನು ವಿವರಿಸಿದರು.
ಜಾಥಾದೊಂದಿಗೆ ಗ್ರಾಮಸ್ಥರು ಒಳಗೊಂಡು ಭಿತ್ತಿಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಮನೆಯಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿ ಕಟ್ಟಾಯ ರಸ್ತೆ ನಡುವೆ ಸಾರ್ವಜನಿಕವಾಗಿ ಸಂಗ್ರಹಿಸಿದ ಪ್ಲಾಸ್ಟಿಕ್ ಅನ್ನು ವಿಂಗಡಿಸಿ ಬಾಟಲ್‌ಗೆ ತುಂಬಿಸಿ ಇಕೋ ಬ್ರಿಕ್ ತಯಾರಿಸಿದರು. ಈ ಪ್ರಕ್ರಿಯೆಯಲ್ಲಿ ಸುಮಾರು ೧೦೦ಕ್ಕೂ ಅಧಿಕ ಇಕೋ ಬ್ರಿಕ್ ತಯಾರಿಸಲಾಯಿತು ಹಾಗೂ 8 ಚೀಲದಷ್ಟು ನವೀಕರಸಲು ಯೋಗ್ಯವಾದ ಪ್ಲಾಸ್ಟಿಕ್ ವರ್ಗಿಕರಿಸಲಾಯಿತು.