ಸುಪ್ರಿಂ ಕೋರ್ಟಿನಲ್ಲಿ ಸಿಪಿಐ(ಎಂ)ನ ಮಧ್ಯಪ್ರವೇಶ ಅರ್ಜಿ
ನವದೆಹಲಿ: ಸುಪ್ರಿಂ ಕೋರ್ಟಿನಲ್ಲಿ ಪೂಜಾಸ್ಥಳಗಳ ಕಾಯ್ದೆ, 1991ರ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಅರ್ಜಿಗಳನ್ನು ವಿರೋಧಿಸಿ ಸಿಪಿಐ(ಎಂ) ಸುಪ್ರಿಂ ಕೋರ್ಟಿನಲ್ಲಿ ಡಿಸೆಂಬರ್ 9ರಂದು ಮಧ್ಯಪ್ರವೇಶ ಅರ್ಜಿಯನ್ನು ಸಲ್ಲಿಸಿದೆ. ಪೂಜಾಸ್ಥಳ
ಪಕ್ಷದ ಪರವಾಗಿ ಹಿರಿಯ ಪೊಲಿಟ್‍ಬ್ಯುರೊ ಸದಸ್ಯ ಪ್ರಕಾಶ ಕಾರಟ್ ಸಲ್ಲಿಸಿರುವ ಅರ್ಜಿಯಲ್ಲಿ ಈ ಕಾಯ್ದೆಗೆ ಆಗಸ್ಟ್ 15, 1947ರಂದು ಇದ್ದಂತಹ ಪೂಜಾಸ್ಥಳಗಳ ಧಾರ್ಮಿಕ ಸ್ವರೂಪವನ್ನು ಬದಲಯಿಸುವುದನ್ನು ನಿಷೇಧಿಸಿ ಭಾರತದ ಜಾತ್ಯತೀತ ಹಂದರವನ್ನು ಕಾಯ್ದುಕೊಳ್ಳುವಲ್ಲಿ ಒಂದು ಮಹತ್ವದ ಪಾತ್ರವಿದೆ ಎಂದು ಹೇಳಿದೆ. ಇದು ಕೋಮು ಸೌಹಾರ್ದವನ್ನು ಕಾಯ್ದುಕೊಳ್ಳುವಲ್ಲಿ ಮತ್ತು ಐತಿಹಾಸಿಕ ವಿವಾದಗಳಿಂದ ಎದ್ದು ಬರಬಹುದಾದ ತಿಕ್ಕಾಟಗಳನ್ನು ತಡೆಯುವಲ್ಲಿ ನಿರ್ಣಾಯಕವಾಗಿದೆ ಎಂದು ಸಿಪಿಐ(ಎಂ) ಒತ್ತಿ ಹೇಳಿದೆ. ಪೂಜಾಸ್ಥಳ
ಈ ಕಾಯ್ದೆ ಸಂವಿಧಾನದ ಕಲಮು 14,15,21 ಮತ್ತು 25ರಲ್ಲಿ ಎಲ್ಲ ನಾಗರಿಕರಿಗೆ ಖಾತ್ರಿಪಡಿಸಿರುವ , ಸಮಾನತೆ, ನಿಷ್ಪಕ್ಷಪಾತತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿಯುತ್ತದೆ ಎಂದಿರುವ ಸಿಪಿಐ(ಎಂ) ಅರ್ಜಿ ಈ ಕಾಯ್ದೆಯನ್ನು ರದ್ದುಪಡಿಸುವ ಯಾವುದೇ ಪ್ರಯತ್ನ ಈ ತತ್ವಗಳಿಗೆ ಒಂದು ಮಹತ್ವದ ಬೆದರಿಕೆಯನ್ನು ಒಡ್ಡುತ್ತದೆ ಎಂದು ಹೇಳಿದೆ. ಅಡ್ವೊಕೇಟ್ ಆನ್ ರೆಕಾರ್ಡ್ ಅನಸ್ ತನ್ವೀರ್ ಮೂಲಕ ಈ ಅರ್ಜಿಯನ್ನು ಸಲ್ಲಿಸಲಾಗಿದೆ.
ಸಂಭಲ್ ಮಸೀದಿ ಮತ್ತು ಅಜ್ಮೇರ್ ದರ್ಗಾದ ವಿರುದ್ಧ ಸಲ್ಲಿಸಿರುವ ಇತ್ತೀಚಿನ ಕೇಸುಗಳ ಬಗ್ಗೆ ಪ್ರಸ್ತಾಪಿಸುತ್ತ ಸಿಪಿಐ(ಎಂ) “ದೇಶಾದ್ಯಂತ ಮಸೀದಿಗಳು, ದರ್ಗಾಗಳು ಸೇರಿದಂತೆ ವಿವಿಧ ಪೂಜಾಸ್ಥಳಗಳ ಧಾರ್ಮಿಕ ಸ್ವರೂಪವನ್ನು ಪ್ರಶ್ನಿಸುವ ವ್ಯಾಜ್ಯಗಳು ಆತಂಕಕಾರಿಯಾಗಿ ಹೆಚ್ಚುತ್ತಿರುವುದರ ಉದ್ದೇಶ ಈ ಕಾಯ್ದೆಯಲ್ಲಿ ಪ್ರತಿಷ್ಠಾಪಿಸಿರುವ ಶಾಸನಾತ್ಮಕ ಆಶಯ ಮತ್ತು ಸಾಂವಿಧಾನಿಕ ಆದೇಶವನ್ನು ಅಸ್ಥಿರಗೊಳಿಸುವುದಾಗಿದೆ. ಈ ವ್ಯಾಜ್ಯಗಳ ಅವಿರತ ಅಲೆ ಸಂವಿಧಾನದ ಮೂಲ ಸಂರಚನೆಯ ಅಡಿಗಲ್ಲಾದ ಜಾತ್ಯತೀತತೆ ಮತ್ತು ಕಾನೂನಿನ ಆಳ್ವಿಕೆಯ ತತ್ವಗಳನ್ನು ದುರ್ಬಲಗೊಳಿಸುವ ಬೆದರಿಕೆಯೊಡ್ಡುತ್ತದೆ” ಎಂದು ಹೇಳಿದೆ.
ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ನಿಧನ
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನ, ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಇರುವ ನ್ಯಾಯಪೀಠ ಡಿಸೆಂಬರ್ 12ರಂದು ಈ ವಿಷಯದ ವಿಚಾರಣೆ ನಡೆಸಲಿದೆ. ಪೂಜಾಸ್ಥಳ
ಪೂಜಾಸ್ಥಳಗಳ ಕಾಯ್ದೆ ,1991 ಕ್ಕೆ ಸವಾಲು ಹಾಕುವ ಅರ್ಜಿಯನ್ನು 2020ರಲ್ಲಿ ಸಲ್ಲಿಸಲಾಗಿತ್ತು. ಮಾರ್ಚ್ 2021ರಲ್ಲಿ ಸುಪ್ರಿಂ ಕೋರ್ಟ್ ಒಕ್ಕೂಟ ಸರಕಾರಕ್ಕೆ ಈ ಕುರಿತು ನೋಟೀಸು ಕೊಟ್ಟಿತ್ತು. ನಂತರ ಇನ್ನೂ ಕೆಲವು ಅರ್ಜಿಗಳು ದಾಖಲಾದವು. ಸುಪ್ರಿಂ ಕೋರ್ಟ್ ನಂತರವೂ ಹಲವು ಸಮಯ ವಿಸ್ತರಣೆಗಳನ್ನು ನೀಡಿದರೂ ಒಕ್ಕೂಟ ಸರಕಾರ ಇನ್ನೂ ಪ್ರತಿ-ಅಫಿಡವಿಟ್ ಸಲ್ಲಿಸಿಲ್ಲ.
ಮಧ್ಯಪ್ರವೇಶಿಸದಿರುವುದು ದುರದೃಷ್ಟಕರ – ಸಿಪಿಐ(ಎಂ) ಪೊಲಿಟ್‍ಬ್ಯುರೊ
ಡಿಸೆಂಬರ್ 7-8ರಂದು ಸಭೆ ಸೇರಿದ ಸಿಪಿಐ(ಎಂ) ಪೊಲಿಟ್‍ಬ್ಯುರೊ ಧಾರ್ಮಿಕ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ, 1991 ಅನ್ನು ಎತ್ತಿಹಿಡಿಯುವ ಮೂಲಕ ಅಂತಹ ದಾವೆಗಳಿಗೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸದಿರುವುದು ದುರದೃಷ್ಟಕರ ಎಂದು ಹೇಳಿದೆ. ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್‌ನ 2019 ರ ಐವರು ಸದಸ್ಯರ ಪೀಠದ ತೀರ್ಪು ಈ ಕಾನೂನಿನ ಸಿಂಧುತ್ವವನ್ನು ಮತ್ತು ಅದರ ಜಾರಿಯನ್ನು ಸ್ಪಷ್ಟವಾಗಿ ಎತ್ತಿಹಿಡಿದಿದೆ. ಈ ನಿಟ್ಟಿನಲ್ಲಿ, ಈ ಕಾಯಿದೆಯನ್ನು ಉಲ್ಲಂಘಿಸುವ ಕಾನೂನು ಪ್ರಕ್ರಿಯೆಗಳಿಗೆ ತಡೆ ಹಾಕಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಗಿದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.
ಶತಮಾನಗಳಷ್ಟು ಹಳೆಯದಾದ ಮಸೀದಿಗಳು ಇಂದು ಅಸ್ತಿತ್ವದಲ್ಲಿರುವಲ್ಲಿ ದೇವಸ್ಥಾನಗಳಿದ್ದವು ಎಂದು ಹೇಳಿಕೊಳ್ಳುವ ಕಾನೂನು ವ್ಯಾಜ್ಯಗಳನ್ನು ಹೂಡಲಾಗುತ್ತಿದೆ, ಇವನ್ನು ಕೆಳ ನ್ಯಾಯಾಲಯಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಪೊಲಿಟ್ ಬ್ಯೂರೋ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ. ವಾರಣಾಸಿ ಮತ್ತು ಮಥುರಾ ನಂತರ, ಸಂಭಲ್‌ನಲ್ಲಿ, ಕೆಳ ನ್ಯಾಯಾಲಯವು 16 ನೇ ಶತಮಾನದ ಮಸೀದಿಯ ಸಮೀಕ್ಷೆಯನ್ನು ಆದೇಶಿಸಿತು. ಇದು ಹಿಂಸಾಚಾರಕ್ಕೆ ಕಾರಣವಾಗಿದ್ದು, ನಾಲ್ವರು ಮುಸ್ಲಿಂ ಯುವಕರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ, ಅಜ್ಮೀರ್ ಷರೀಫ್ ದರ್ಗಾಕ್ಕೆ ಸಂಬಂಧಿಸಿದಂತೆ ಅಜ್ಮೀರ್‌ನ ಸಿವಿಲ್ ನ್ಯಾಯಾಲಯದಲ್ಲಿ ಇದೇ ರೀತಿಯ ಅರ್ಜಿಯನ್ನು ಪರಿಗಣಿಸಲಾಗಿದೆ.
ಡಿಸೆಂಬರ್ 7-8 ರ ಸಭೆಯ ನಂತರ ನೀಡಿದ ಹೇಳಿಕೆಯ ಇತರ ಅಂಶಗಳು ಹೀಗಿವೆ:
ಭಾವೋದ್ರೇಕಗಳನ್ನು ಬಡಿದೆಬ್ಬಿಸುವುದು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗೆ ಸಹಾಯ ಮಾಡುವುದಿಲ್ಲ
ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಮತ್ತು ಅಧಿಕಾರಿಗಳು ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಸಂಪೂರ್ಣ ರಕ್ಷಣೆಯನ್ನು ಖಚಿತಗೊಳಿಸಬೇಕು ಎಂದು ಪೊಲಿಟ್ ಬ್ಯೂರೋ ತನ್ನ ನಿಲುವನ್ನು ಪುನರುಚ್ಚರಿಸಿದೆ. ಈ ನಿಟ್ಟಿನಲ್ಲಿ ಇಸ್ಲಾಮಿ ಮೂಲಭೂತವಾದಿ ಶಕ್ತಿಗಳ ಚಟುವಟಿಕೆಗಳನ್ನು ಆಡಳಿತ ನಿರ್ಲಕ್ಷಿಸುತ್ತಿರುವಂತಿದೆ. ಅದೇ ಸಮಯದಲ್ಲಿ, ಭಾರತದಲ್ಲಿ ಬಿಜೆಪಿ-ಆರ್‌ಎಸ್‌ಎಸ್ ಮತ್ತು ಹಿಂದುತ್ವ ಸಂಘಟನೆಗಳ ಪ್ರಯತ್ನಗಳನ್ನು ಪೊಲಿಟ್ ಬ್ಯೂರೋ ಖಂಡಿಸಿತು, ಇದು ಬೆಂಕಿಯುಗುಳುವ ಪ್ರಚಾರದ ಮೂಲಕ ಭಾವೋದ್ರೇಕಗಳನ್ನು ಬಡಿದೆಬ್ಬಿಸಲು ಪ್ರಯತ್ನಿಸುತ್ತಿದೆ. ಇಂತಹ ವಿಧಾನವು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗೆ ಸಹಾಯ ಮಾಡುವುದಿಲ್ಲ.
ಎರಡೂ ದೇಶಗಳಲ್ಲಿನ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳು ಗಡಿಯ ಎರಡೂ ಬದಿಯ ಜನರ ಹಿತಾಸಕ್ತಿಗಳಿಗೆ ಹಾನಿ ಮಾಡುವ ಎಲ್ಲಾ ರೀತಿಯ ಕೋಮುವಾದದ ವಿರುದ್ಧ ಬಲವಾಗಿಎದ್ದು ನಿಲ್ಲಬೇಕು ಎಂದು ಪೊಲಿಟ್‍ಬ್ಯುರೊ ಕರೆ ನೀಡಿದೆ.
ನೋಯ್ಡಾ ರೈತರ ಹೋರಾಟಕ್ಕೆ ಬೆಂಬಲ
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ರೈತರ ಮೇಲಿನ ಪೊಲೀಸ್ ದಬ್ಬಾಳಿಕೆಯನ್ನು ಪೊಲಿಟ್‍ಬ್ಯುರೊ ಖಂಡಿಸಿದೆ. ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಮತ್ತು ಇತರ ಸಂಘಟನೆಗಳ ಸುಮಾರು 150 ಮುಖಂಡರು ಮತ್ತು ಕಾರ್ಯಕರ್ತರನ್ನು ಜೈಲಿಗೆ ಹಾಕಲಾಗಿದೆ. ಬಂಧಿತ ರೈತರು ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಹಲವು ಕಾರ್ಯಕರ್ತರ ಗೃಹಬಂಧನ ನಡೆಯುತ್ತಿದೆ. ಹೋರಾಟದ ಮುಂಚೂಣಿಯಲ್ಲಿದ್ದ ಮಹಿಳೆಯರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಆಘಾತಕಾರಿಯಾಗಿದೆ.
45 ಗ್ರಾಮಗಳಿಗೆ ಸೇರಿದ ರೈತರ ಗ್ರೇಟರ್ ನೋಯ್ಡಾ ಹೋರಾಟವು ರಿಯಲ್ ಎಸ್ಟೇಟ್ ಯೋಜನೆಗಳಿಗಾಗಿ ಕಾಲಕಾಲಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸಿದೆ, 1997ರ ಒಪ್ಪಂದದಂತೆ . ಪರಿಹಾರದ ದರ ಪರಿಷ್ಕರಣೆ, ರೈತರಿಗೆ ನಿವೇಶನ ಹಂಚಿಕೆ ಹಾಗೂ ಕಡ್ಡಾಯ ಉದ್ಯೋಗ ನೀತಿ ಜಾರಿಗೊಳಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ರೈತರು ಒತ್ತಾಯಿಸುತ್ತಿದ್ದಾರೆ.
ಸಿಪಿಐ(ಎಂ) ಈ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ, ದಬ್ಬಾಳಿಕೆಯನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಹೋರಾಟದ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡು ಜಾರಿಗೊಳಿಸಬೇಕು ಎಂದು ಪೊಲಿಟ್‍ಬ್ಯುರೊ ಆಗ್ರಹಿಸಿದೆ.
ವಯನಾಡ್ ಪರಿಹಾರಕ್ಕಾಗಿ ತಕ್ಷಣ ಹಣ ಒದಗಿಸಿ
ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ದುರಂತದ ಸಂತ್ರಸ್ತರಿಗೆ ಸಲ್ಲಬೇಕಾದ ನೆರವನ್ನು ಕೇರಳಕ್ಕೆ ನಿರಾಕರಿಸುವಲ್ಲಿ ಒಕ್ಕೂಟ ಸರ್ಕಾರ ನಿರ್ದಯ ಉದಾಸೀನತೆಯನ್ನು ತೋರುತ್ತಿದೆ ಎಂದು ಪೊಲಿಟ್ ಬ್ಯೂರೋ ಕಟುವಾಗಿ ಟೀಕಿಸಿದೆ. ತಕ್ಷಣದ ಪರಿಹಾರಕ್ಕೆ 214.68 ಕೋಟಿ ರೂ. ಮತ್ತು ಸಮಗ್ರ ಚೇತರಿಕೆ ಮತ್ತು ಪುನರ್ ನಿರ್ಮಾಣಕ್ಕೆ 2,319.1 ಕೋಟಿ ರೂ.,ಬೇಕಾಗಿದೆ ಎಂಬ ರಾಜ್ಯದ ತುರ್ತು ಮನವಿಯ ಹೊರತಾಗಿಯೂ ನಾಲ್ಕು ತಿಂಗಳು ಕಳೆದರೂ ಅನುದಾನ ಮಂಜೂರು ಮಾಡುವಲ್ಲಿ ಅದು ವಿಫಲವಾಗಿದೆ.
ಈ ಭೂಕುಸಿತವನ್ನು “ತೀವ್ರ ಸ್ವರೂಪದ ವಿಪತ್ತು” ಎಂದು ವರ್ಗೀಕರಿಸಲು ನಿರಾಕರಣೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ಸಾಲವನ್ನು ಮನ್ನಾ ಮಾಡಲು ಇಷ್ಟವಿಲ್ಲದಿರುವುದು ಸಹ ಅತ್ಯಂತ ಅನ್ಯಾಯದ ಮತ್ತು ಅಮಾನವೀಯ ನಿಲುವನ್ನು ಬಿಂಬಿಸುತ್ತದೆ, ಇದು ಬಿಕ್ಕಟ್ಟಿನ ಸಮಯದಲ್ಲಿ ಒಕ್ಕೂಟ ಬೆಂಬಲದ ತತ್ವಗಳನ್ನು ದುರ್ಬಲಗೊಳಿಸುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಒಕ್ಕೂಟ ಸರಕಾರ ಕೂಡಲೇ ರಾಜ್ಯ ಸರಕಾರ ಕೇಳಿರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ಕರೆ ನೀಡಿದೆ.
ಇದನ್ನೂ ನೋಡಿ: ಕಿರು ಸಾಲಗಳಿಂದ ಮುಕ್ತಿ ಹೇಗೆ? ಹೋರಾಟಗಾರ ಬಿಎಂ ಭಟ್ ಹೇಳುವುದೇನು? Janashakthi Media