ಪಿತೃಸಂಸ್ಕೃತಿಯ ಸರಳುಗಳ ಹಿಂದೆ – “ದಿ ಗ್ರೇಟ್ ಇಂಡಿಯನ್ ಕಿಚನ್”

ರೇಣುಕಾ ನಿಡಗುಂದಿ

ಈ ದೇಶದ ಹೆಣ್ಣುಮಗಳೊಬ್ಬಳು ನಡುರಾತ್ರಿಯಲ್ಲಿ ನಿರ್ಭಯವಾಗಿ ನಡೆಯಬಹುದಾದರೆ ಅಂದು ಈ ದೇಶ ನಿಜವಾಗಿ ಸ್ವಾತಂತ್ರ್ಯ ಪಡೆದಂತೆ“ ಎಂದಿದ್ದರು ಮಹಾತ್ಮಾ ಗಾಂಧಿ. “ದಿ ಗ್ರೇಟ್ ಇಂಡಿಯನ್ ಕಿಚನ್ನಿ”ನಲ್ಲಿನ ಗಂಡಸರು  ಸ್ವಯಂದತ್ತವಾದ ಪುರುಷಾಧಿಕಾರವನ್ನು ಯಾವ ಹಿಂಜರಿಕೆಯಿಲ್ಲದೇ ಬಳಸುವುದು ಅಸಹನೆಯನ್ನು ಹುಟ್ಟಿಸುತ್ತದೆ. ಇಲ್ಲಿ ಕುಟುಂಬ ನಡೆಯುವುದು ಆತನ ಆರಾಮಕ್ಕಾಗಿ ಆತನೇ ವಿಧಿಸಿದ ನಿಯಮಗಳಿಗನುಸಾರವಾಗಿ, ಇದನ್ನೇ ಪಿತೃಸಂಸ್ಕೃತಿ ಎನ್ನುವುದು. ಇಂಥವರ ಉಕ್ಕಿನ ಹಿಡಿತದಲ್ಲಿರುವ ಕುಟುಂಬವೊಂದರ ಹೆಣ್ಣುಮಕ್ಕಳ ಪಾಡು ಏನಾಗಬಹುದು? ಅವಳು ಅಲ್ಲಿ ಸೇವಕಿ. ಕುಟುಂಬವೆಂಬ ರಥವನ್ನು ನಡೆಸುವ ಸಾರಥಿ.  ಆದರೆ ಗಂಡು ಹೆಣ್ಣಿನ ಸಮಪಾಲು ಇಲ್ಲದೇ ಹೋದರೆ ರಥ ಒಗ್ಗಾಲಿಯಾಗುವುದು ಎಂಬ ಸತ್ಯವನ್ನು ಒಪ್ಪದ ಪುರುಷಾಹಂಕಾರದ ಠೇಂಕಾರ ಅಲ್ಲಿದೆ.

ಇಲ್ಲಿ ಅವಳಿಗೆ ಪ್ರತ್ಯೇಕವಾದ ಅಸ್ತಿತ್ವವೆಂಬುದಿಲ್ಲ. ಅತೀ ಸೌಮ್ಯ, ಅತೀ ವಿನಯದಿಂದಲೇ ಇರಿಯುವ ಗಂಡಸರ ಕ್ರೌಯ್ರವನ್ನು ಮುಷ್ಟಿ ಬಿಗಿಹಿಡಿದುಕೊಂಡೇ ಸಹಿಸಬೇಕು ನೀವು ವೀಕ್ಷಕರಾಗಿ. ಇಡೀ ಚಿತ್ರ ಚಲಿಸುತ್ತಿರುವಷ್ಟೂ ಹೊತ್ತು ಉಸಿರು ಬಿಗಿಹಿಡಿದುಕೊಂಡೇ ಇರುವ ಒಂದೊಂದು ಕ್ಷಣವೂ ಅಸಹನೀಯವಾಗತೊಡಗುತ್ತದೆ. ನಾಯಕಿಯ ಸಹನೆಯ ಕಟ್ಟೆಯೊಡೆಯುವುದು ಯಾವಾಗ? ಯಾಕೆ ಇನ್ನೂ ಸಹಿಸುತ್ತಿದ್ದಾಳೆ ಎನ್ನುವ ತಳಮಳ! ಆ ಒಂದು ಕೊನೆಯ ಕ್ಲೈಮ್ಯಾಕ್ಸ್ ಗಾಗಿ ಕಾಯುತ್ತಿರುವ ವೀಕ್ಷಕರನ್ನು ಹಿಡಿದು ಕೂರಿಸುವಲ್ಲಿ ನಿರ್ದೇಶಕ ಜೋಯ್ ಬೇಬಿ ಯಶಸ್ವಿಯಾಗಿದ್ದಾರೆನ್ನಬಹುದು.

ಕಥೆ ಶುರುವಾಗುವುದೇ ಹೆಣ್ಣು ನೋಡುವ ಶಾಸ್ತ್ರದಿಂದ.  ದೊಡ್ಡ ಪ್ರತಿಷ್ಠಿತ ಎನ್ನುವುದಕ್ಕಿಂತ ದೊಡ್ದ ಸಂಪ್ರದಾಯಸ್ಥ ಕುಟುಂಬಕ್ಕೆ ಸೊಸೆಯಾಗಿ ಮಗಳು ಹೋಗುವುದನ್ನು ಹೆತ್ತವರು ಹೆಮ್ಮೆಪಡುತ್ತಾರೆ.   ಮಗಳು ವಿದ್ಯಾವಂತೆ, ಅವಳ ಇಚ್ಛೆಯ ಬದುಕನ್ನು ಕಟ್ಟಿಕೊಳ್ಳಬಲ್ಲಳು ಎನ್ನುವ ಭರವಸೆಗಿಂತ ಹೆಚ್ಚಾಗಿ ಪ್ರತಿಷ್ಠಿತ ಮನೆ ಸಿಕ್ಕಿದ್ದೇ ದೊಡ್ಡದು, ಅವರಿಗೆ ಅನುಸರಿಸಿಕೊಂಡು ಬಾಳುವುದರಲ್ಲಿಯೇ ಹೆಣ್ಣಿನ ಒಳಿತಿದೆ ಎನ್ನುವ ಮನೋಭಾವ ಈಗಿನ ಕಾಲದಲ್ಲೂ ಇದೆಯೇ ? ಎನ್ನುವ ಪ್ರಶ್ನೆ ಬಲವಾಗಿ ಕಾಡುತ್ತದೆ.

ಮದುವೆಯಾಗಿ ಗಂಡನ ಮನೆ ಸೇರಿದ ಅವಳಿಗೆ ಬೆಳಗಾಗುವುದು ಕೈಗೆ ಪುರುಸೊತ್ತಿಲ್ಲದೇ ಅತ್ತೆ ಅಡುಗೆ ಮನೆಯಲ್ಲಿರುವ ದೃಶ್ಯದಿಂದ. ತೆಂಗಿನ ತುರಿ ತುರಿದು  ಅರೆಯುವ ಕಲ್ಲಿನಲ್ಲಿ ಚಟ್ನಿ ಅರೆಯತೊಡಗುತ್ತಾಳೆ. ತಮ್ಮ ಮನೆಯಲ್ಲಿ ಎರಡೂ ಮಾಡುವುದಿಲ್ಲ, ಚಟ್ನಿ ಇಲ್ಲ ಸಾಂಬಾರು ಯಾವುದಾದರೂ ಒಂದನ್ನು ಮಾಡ್ತೀವಿ” ಅನ್ನುತ್ತಾಳೆ ಸೊಸೆ. ಇಲ್ಲ ಇವರಿಗೆ “ಎಲ್ಲವೂ ಕಟ್ಟುನಿಟ್ಟಾಗಿ ಆಗಬೇಕು’” ಉತ್ತರಿಸುತ್ತಾಳೆ ಅತ್ತೆ.  ತರಕಾರಿ ಹೀಗೆ ಹೆಚ್ಚಲಾ ಎನ್ನುವ ಸೊಸೆಗೆ ಹೇಗಾದರೂ ಹೆಚ್ಚು ಎನ್ನುವ ಉತ್ತರ ಕೊಡುತ್ತಾ ಅತ್ತೆ ಸೊಸೆಯರಿಬ್ಬರೂ ಮನೆಯಲ್ಲಿರುವ ಇಬ್ಬರು ಗಂಡಸರ ಬೆಳಗಿನ ತಿಂಡಿ ತಯಾರಿಸುತ್ತಿರುತ್ತಾರೆ.

ಅಂಥ ಗಡಿಬಿಡಿಯಲ್ಲಿಯೂ ವಿಶಾಲವಾದ ಹಳೇ ಕಾಲದ ಆ ಮನೆಯ ವರಾಂಡದಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತಿರುವ ಗಂಡನಿಗೆ ಅತ್ತೆ ಓಡೋಡಿ ಹೋಗಿ ಬ್ರಶಿಗೆ ಪೇಶ್ಟ್ ಹಚ್ಚಿಕೊಡಬೇಕು, ಆಗಷ್ಟೇ ಅವನೆದ್ದು ಹಲ್ಲುಜ್ಜುವುದು.  ಹಾಗೇ ಅವನು ರೆಡಿಯಾಗಿ –“ನಾ ಹೊರಟೆ “ಎಂದು ಘೋಷಿಸಿದಾಗ ಮತ್ತೆ ಆಕೆ ಕೈಯಲ್ಲಿನ ಕೆಲಸ ಬಿಟ್ಟು ಓಡೋಡಿ ಬಂದು ಕಾಲಿನ ಮೆಟ್ಟುಗಳನ್ನು ತಂದು ಅವನ ಮುಂದೆ ಇಡಬೇಕು.  ಇದಿಷ್ಟೇ ಅಲ್ಲ ಆ ಗಂಡನಿಗೆ ಕಲ್ಲಿನಲ್ಲಿ ಅರೆದ ಚಟ್ನಿಯೇ ಆಗಬೇಕು, ಸೌದೆ ಒಲೆಯಲ್ಲಿ ಕುದಿಸಿದ ಅನ್ನವೇ ಬೇಕು,  ವಾಶಿಂಗ್ ಮಶಿನಿನಲ್ಲಿ ಒಗೆದರೆ ಬಟ್ಟೆ ಬೇಗ ಹಾಳಾಗುತ್ತವೆ ಕೈಯಿಂದಲೇ ಬಟ್ಟೆ ಒಗೆಯಬೇಕು..ಮನೆಗೆಲಸಕ್ಕೆ ಯಾವ ಸಹಾಯಕರೂ ಇಲ್ಲದ ಈ ದೊಡ್ದ ಮನೆಯಲ್ಲಿ ಮನೆಯ ಹೆಂಗಸರ ಇಡೀ ದಿನವೆಲ್ಲ ಅವರಿಗೆ ಬಗೆಬಗೆಯ ಅಡುಗೆ ಮಾಡುವ, ಹೆಚ್ಚು,ಕೊಚ್ಚು, ತುರಿ, ಬಳಿಯುವ ತೊಳಿಯುವ, ಗುಡಿಸುವ ಒರೆಸುವುದರಲ್ಲಿಯೇ ಕಳೆಯುತ್ತದೆ. ಆ ಹೆಂಗಸರಿಬ್ಬರೂ ಆರಾಮವಾಗಿ ಕುಳಿತು ಸಂತೋಷದಲ್ಲಿ ಉಣ್ಣುವ ದೃಶ್ಯವೇ ಇಲ್ಲ. ಪುನಃ ಸಂಜೆ ದೀಪವಿಟ್ಟು, ಪುನಃ ಅಡುಗೆಮನೆ ಕೆಲಸದ ಪುನರಾವರ್ತನೆಯಲ್ಲಿಯೇ ದಿನವೊಂದು ಕಳೆಯುತ್ತದೆ.

ಮದುವೆ ಗೌಜಿ ಮುಗಿದ ತಕ್ಷಣ ಅತ್ತೆ ತಮ್ಮೆಲ್ಲಾ ಆಭರಣಗಳನ್ನು ಪೆಟ್ಟಿಗೆಯಲ್ಲಿಟ್ಟು ಅದೆಲ್ಲ ಸಂಭಾಳಿಸುವ ಜವಾಬ್ದಾರಿ ಗಂಡನದು ಎನ್ನುವಂತೆ ಒಪ್ಪಿಸುತ್ತಾಳೆ. ಆತ ಎದ್ದು ಬೀರುವಿನ ಲಾಕರಿನಲ್ಲಿಟ್ಟು ಭದ್ರವಾಗಿಡುತ್ತಾನೆ. ಮೊಬೈಲಿನಲ್ಲಿ ವೀಡಿಯೋ ಫಾರ್ವರ್ಡ ಮೆಸೇಜುಗಳನ್ನು ನೋಡುವುದು,  ಟಿವಿ ನೋಡುವುದು ಇಷ್ಟೇ ಅವನ ಲೋಕ.  ಮದುವೆ ಆಯ್ತಲ್ಲ, ಮನೆಯಲ್ಲಿ ಕೆಲಸ ಮಾಡಲು ಇನ್ನೊಬ್ಬ ಹೆಣ್ಣು ಬಂದಾಯ್ತಲ್ಲ ಎನ್ನುವಂತೆ ಅವಳ ಬಸುರಿ ಮಗಳು ಹೆರಿಗೆಗೆ ಇನ್ನೂ ಸಮಯವಿದ್ದರೂ ಅಮ್ಮನನ್ನು ಕರೆಸಿಕೊಳ್ಳುತ್ತಾಳೆ. ಈಗ ಇಡೀ ಮನೆಯ ಜವಾಬ್ದಾರಿಯಲ್ಲ ಸೊಸೆಯ ಮೇಲೆ. ಅಡುಗೆಮನೆ ಕಸ ಮುಸುರೆ ಪಿತೃಸಂಸ್ಖೃತಿಯ ದಟ್ಟ ರೂಪಕವಾಗಿ ಚಿತ್ರದುದ್ದಕ್ಕೂ ಪುನರಾವರ್ತನೆಯಾಗುತ್ತಲೇ ಇರುತ್ತದೆ.  ವಿದ್ಯಾವಂತ ಸೊಸೆಗೂ ಇದರ ಬಗ್ಗೆ ಆಕ್ಷೇಪವಿಲ್ಲ.  ಆರಂಭದಲ್ಲಿ ಆಕೆ ಸಂತೋಷವಾಗಿಯೇ ತನ್ನ ಕರ್ತವ್ಯವೆಂಬಂತೆ ಮಾಡುತ್ತಿರುತ್ತಾಳೆ.  ನಂತರ ಅವಳ ಹೃದಯ  ಒಂದೊಂದೇ ಮೆಟ್ಟಿಲು  ಕುಸಿಯತೊಡಗುತ್ತದೆ.

ಮಾವನಿಗೆ ಚಹ ತಂದು ಕೊಟ್ಟಾಗ “ಬ್ರಶ್ ಆಗಿಲ್ಲ ಮಗಳೇ ”ಎಂದು ಬ್ರಶ್ ಇಲ್ಲಿಯೇ ತಂದುಕೊಡುವುದನ್ನು ಸೂಚ್ಯವಾಗಿ ಹೇಳುತ್ತಾನೆ.  ಆಕೆ ಪತಿ –“ ಅಪ್ಪನಲ್ಲವಾ.. ಪೇಸ್ಟ್ ಹಚ್ಚಿ ಕೊಡು” ಎನ್ನುತ್ತಾನೆ ಹೊರತು ಸೌಜನ್ಯಕ್ಕೂ “ನಾನೇ ತಂದೆಗೆ ಬ್ರಶ್ ಹಚ್ಚಿಕೊಡ್ತೀನಿ”ಎಂದು ಮುಂದಾಗುವುದಿಲ್ಲ. ಆಕೆ ಅಡುಗೆಕೋಣೆಯಲ್ಲಿ ತರಕಾರಿ ಹೆಚ್ಚುತ್ತ, ಕಾಯಿ ತುರಿಯುತ್ತ ಪರದಾಡುತ್ತಿದ್ದರೆ ಅವನಿಗೆ ಸಂಬಂಧವೇ ಇಲ್ಲವೆನ್ನುವಂತೆ ಆತ ನಿಶ್ಚಿಂತನಾಗಿ  ಯೋಗ ಮಾಡುತ್ತಿರುತ್ತಾನೆ.

ಕಾವಲಿಯಿಂದ ಬಿಸಿ ಬಿಸಿ ದೋಸೆಯನ್ನು ನೇರ ತಟ್ಟೆಗೆ ತಂದು ಹಾಕಿ ಅವರಿಗೆ ಉಣಿಸಬೇಕು.  ಅಪ್ಪ ಮಗ ಇಬ್ಬರೂ ತಿಂದು ಅನಾಗರಿಕರಂತೆ ಡೈನಿಂಗ ಟೇಬಲಿನ ಮೇಲೆಲ್ಲ ಜಗಿದು ತಿಂದುಳಿದ ನುಗ್ಗೆಸಿಪ್ಪೆ, ಮುಸುರೆ ಹರವಿ ಎದ್ದು ಹೋದಬಳಿಕ ಅವನ್ನೆಲ್ಲ ಬಳಿದು ಎತ್ತಿಕೊಂಡು ಹೋಗುವುದು ನೋಡುವವರಿಗೂ ಹೇಸಿಗೆ ಬರಿಸುತ್ತದೆ.

ಆಕೆ ಮುಟ್ಟಾದಾಗ ಅಡುಗೆ ಮಾಡುವಂತಿಲ್ಲ. ಆ ಸಮಯದಲ್ಲಿಯೂ ನೆರೆಹೊರೆಯ ಹೆಂಗಸು ಬಂದು ಅವರಿಗೆ ಅಡುಗೆಮಾಡಿ ಹಾಕಿ, ಆ ಮನೆಯ ಗುಡಿಸುವ, ಒರೆಸುವ ಕೆಲಸಮಾಡಿ ಹೋಗಬೇಕೆ ಹೊರತು ಒಬ್ಬನೂ ಎದ್ದು ಒಂದು ಕಪ್ ಚಹ ಮಾಡಿಕೊಳ್ಳಲೂ ಅಡುಗೆಮನೆಗೆ ಕಾಲಿಡುವುದಿಲ್ಲ.  ಮನೆಗೆ ನೆಂಟನೂ ಆಕೆ ಮಾಡಿದ ಬ್ಲ್ಯಾಕ್ ಟೀ , ಹೇಗಿರಬೇಕೆಂದು ಪಾಠ ಮಾಡುತ್ತಾನೆ.  ನಾವೇ ಅಡುಗೆ ಮಾಡ್ತೀವಿ, ಹೆಂಗಸರಿಗಿವತ್ತು ರೆಸ್ಟು“ ಎಂದು ಇಡೀ ಅಡುಗೆಮನೆಯನ್ನು ಗಲೀಜು ಮಾಡಿ ರಾಶಿ ರಾಶಿ ಪಾತ್ರೆಗಳನ್ನು ತೊಳೆಯುವ ಸ್ವಚ್ಛಗೊಳಿಸುವ ಕೆಲಸ ಹೆಂಗಸರದು ಎನ್ನುವಂತೆ ಹರವಿರುತ್ತಾರೆ. ಅಷ್ಟರಲ್ಲಿ ಅವಳೊಳಗಿನ ಅಸಹನೆಯ ತಂತುಗಳು ಇನ್ನೇನು ಸ್ಪೋಟಕ್ಕೆ ತಯಾರಾಗುತ್ತಿವೆ ಎನ್ನುವಂತೆ  ಸಿಂಕಿನ ಡ್ರೇನೇಜ್  ಪೈಪೂ ಸೋರತೊಡಗುತ್ತದೆ.

ಇಲ್ಲಿ ಪಾತ್ರಗಳಿಗೆ ಹೆಸರಿಲ್ಲದ್ದು ಗಮನಿಸಬೇಕಾದ ಅಂಶ.  ಹೆಸರಿನ ಅಗತ್ಯವೇ ಇಲ್ಲ ಇಲ್ಲಿ.  ಗಂಡ ಹೆಂಡತಿಯನ್ನು ’ಏನೇ, ಅಡೀ, ಎಂದು ಕರೆಯುವುದು,  ಅತ್ತೆ, ಮಾವ, ತಂದೆ ತಾಯಿ – ’ಮೋಳೆ , ಮಗಳೇ’ ಅಂದರೆ ಆಯ್ತುಲ್ಲ. ಪತಿಮಹಾಶಯ ಆಕೆಗೆ “ರೀ’ ಎಟ್ಟಾ” – ಅಷ್ಟೇ.  ಈಗಿನ ಕಾಲದಲ್ಲಿ ಪತಿ ಪತ್ನಿಯರು, ಗೆಳೆಯ ಗೆಳತಿಯರು  ಹೆಸರಿನಿಂದಲೇ ಕರೆದುಕೊಳ್ಳಲು ಇಷ್ಟಪಡುತ್ತಾರೆ. ಅದೊಂದು ರೀತಿಯ ಸಮಾನತೆಯ ಅನ್ಯೋನ್ಯತೆಯ ಸಂಕೇತ, ಮೌನದ ಒಡಂಬಡಿಕೆಯಂತೆ. ಆದರೆ ಸಂಪ್ರದಾಯಸ್ಥರಲ್ಲಿ ಕೌಟುಂಬಿಕ ವ್ಯವಸ್ಥೆ, ವಿವಾಹ ಸಂಸ್ಥೆಯನ್ನು ಹಾಡಿಹೊಗಳುವ ಸಮಾಜದಲ್ಲಿ ಒಲವು, ಪ್ರೀತಿಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ಹುನ್ನಾರವೇ ಇದು ಎನ್ನುವ ಅನುಮಾನ ಕಾಡತೊಡಗುತ್ತದೆ.

ಇಲ್ಲಿರುವ ಗಂಡಸರು ಬಹಳ ಸೌಮ್ಯರು.  ಅವರೇನೂ ಹೊಡೆದುಬಡಿದು “ಕೌಟುಂಬಿಕ ದೌರ್ಜನ್ಯ” ಮಾಡುವ ದುಷ್ಟರಂತೂ ಅಲ್ಲ. ಆತ ಒಳ್ಳೆಯ ಪತಿಯೇ ಒಮ್ಮೆಯೂ ಬೈಯುವುದಿಲ್ಲ. ಮಾವನೂ ಬಹಳ ಮೃದುಮಾತಿನಲ್ಲೇ ಮಗಳೇ – ಕುಕ್ಕರಿನ ಅನ್ನ ಸೇರುವುದಿಲ್ಲ, ವಾಶಿಂಗ್ ಮಶಿನ್ ನಲ್ಲಿ ಬಟ್ಟೆ ಒಗೀಬೇಡ,  ಮುಟ್ಟಾಗಿ ಮಿಂದ ಬಳಿಕ ತುಳಸಿಯನ್ನು ಮುಟ್ಟಕೂಡದು “ಎಂದು ನಯದಲ್ಲೇ ಹೇಳುತ್ತಾನೆ. ಅಯ್ಯಪ್ಪನ ಮಾಲೆ ಹಾಕಿದ ಮೇಲೆ ಫ್ರಿಡ್ಜನಲ್ಲಿಟ್ಟ ತಂಗಳನ್ನು ಉಣ್ಣಲು ಇಟ್ಟೆ ಎಂದು ಊಟ ಬಿಟ್ಟು ಎದ್ದುನಡೆದ ಸೌಮ್ಯರು. ಹಾಗೆ ಹೇಳುತ್ತಲೇ ಅವಳಿಗೆ – ’ಹೆಂಗಸನ್ನು ಎಲ್ಲಿಡಬೇಕೋ ಅಲ್ಲಿಡಬೇಕು, ಅದಕ್ಕೇ ನಾವು ಅಲ್ಲಿಟ್ಟಿದ್ದೇವೆ’ ಎನ್ನುವ ಧಿಮಾಕನ್ನು ತೋರುತ್ತಾರೆ.

 

ಹೊರಗೆ ಹೋಟೆಲಿನಲ್ಲಿ ’ಟೇಬಲ್ ಮ್ಯಾನರ್ಸ್’ ತೋರುವ ಗಂಡನಿಗೆ ಆಕೆ ಸಲುಗೆಯಲ್ಲಿ ಈ ಟೇಬಲ್ ಮ್ಯಾನರ್ಸ ಮನೇಲಿ ಇರುವುದಿಲ್ಲ ಯಾಕೆ ಎಂದಾಗ ಆತ ಕೋಪಗೊಳ್ಳುತ್ತಾನೆ. ತನ್ನ ದೇಹ ಮನಸ್ಸನ್ನು  ಹಂಚಿಕೊಂಡ ಜೀವ ತನಗೆ ಲೈಂಗಿಕ ಕ್ರಿಯೆ ನೋವುಕೊಡುತ್ತದೆ,  ಅದಕ್ಕೆ ತಯಾರಾಗುವ ಸರಸ ಸಲ್ಲಾಪವನ್ನು ಅಪೇಕ್ಷಿಸಿದಾಗ ಆಕೆ ಏನೋ ತಪ್ಪುಮಾಡಿದಂತೆ, ಚರಿತ್ರಹೀನಳೋ ಎಂಬಂತೆ ಅವನ ಪ್ರತಿಕ್ರಿಯೆ ಅವಳನ್ನು ಹಿಡಿಯಾಗಿಸುತ್ತದೆ. “ಅಂಥ ಸರಸ ಸಲ್ಲಾಪಕ್ಕೆ ನೀನು ಲಾಯಕ್ಕಿದ್ದರೆ ತಾನೇ ಮಾಡೋದು” ಎಂದು “ತನ್ನ ಮೀಸೆಯೇ ಮಣ್ಣಾಗಿಲ್ಲ, ತನ್ನ ಮೂಗೇ ಮೇಲೆ “ಎಂದು ಕಟುವಾಗಿ ವರ್ತಿಸುವ ಅವನ ಧಿಮಾಕು ಎಂಥವರಿಗೂ ಕೋಪ ತರಿಸುತ್ತದೆ. ಆದರೆ ಆಕೆ ಹಲ್ಲುಮುಡಿ ಕಚ್ಚಿ ಒಳಗೊಳಗೇ ದುಃಖಿಸುವುದು ಮತ್ತು ಈ ಇಡೀ ವಿವಾಹ ವ್ಯವಸ್ಥೆಯೇ ಪೊಳ್ಳು ಢೋಂಗಿ ಎನ್ನುವುದನ್ನು ತೋರಿಸುವಂತೆ ಕ್ಯಾಮರಾ  ಗೋಡೆಗಳ ಮೇಲೆ ತೂಗು ಹಾಕಿರುವ ತಲೆಮಾರುಗಳ ದಂಪತಿಗಳ ಕಪ್ಪು ಬಿಳಿ ಮತ್ತು ಬಣ್ಣದ ಫೋಟೋಗಳ ಮೇಲೆ ಸುತ್ತುವುದನ್ನು ನಿರ್ದೇಶಕರು ಸೂಕ್ಷ್ಮವಾಗಿ ಸೆರೆಹಿಡಿದಿದ್ದಾರೆ.

ಪುರುಷಕೇಂದ್ರಿತ ಅಥವಾ ಗಂಡಾಳಿಕೆಯ ದೋಷ ಬರೀ ಗಂಡಸರಲ್ಲಷ್ಟೇ ಇದೆಯೆನ್ನುವುದು ತಪ್ಪಾಗುತ್ತದೆ. ಇದೇ ಪುರುಷಕೇಂದ್ರಿತ ವ್ಯವಸ್ಥೆಯಲ್ಲಿ ಬೆಳೆದ ಹೆಂಗಸರ ಮನಃಸ್ಥಿತಿಯೂ ಅಷ್ಟೇ ಅಪಾಯಕಾರಿಯಾಗಿರುವುದನ್ನು ಕಾಣುತ್ತೇವೆ.  ಇಲ್ಲಿ ಆಕೆ ಮುಟ್ಟಾದಾಗ ಮನೆಗೆ ಬಂದ ನಾದಿನಿ ಮಾತಾಡುವ ರೀತಿ, ಮೂದಲಿಸುವ ರೀತಿ, ಕೆಳಗೆ ಮಲಗಿಕೋ ಎಂದು ಚಾಪೆ ಎಳೆದು ಹಾಕುವ ರೀತಿ, ಆಕೆ ಒಣ ಹಾಕಿದ ಒಳ ಉಡುಪುಗಳನ್ನು – ಅಲ್ಯಾಕೆ ಕಾಣುವಂತೆ ಹಾಕಿದ್ದು ಎಂದು ಆಕ್ಷೇಪಿಸುವ ಆಕೆಯ ದನಿಯಲ್ಲೂ ರೂಕ್ಷತೆಯಿರುತ್ತದೆ. ಅದೇ ರೀತಿ ಮಗಳು ಮಾಡಿದ ಅಡುಗೆಯನ್ನು ಹೊಗಳುವ ಅಪ್ಪ, ಸೋದರರ ಮುಖದ ಭಾವಗಳೇ ಬೇರೆಯಾಗಿರುತ್ತದೆ. ಹೀಗೆ ಗಂಡಾಳಿಕೆಯನ್ನಷ್ಟೇ ಅಲ್ಲ ಅದರ ನೆರಳಿನಲ್ಲಿ ಬೇರುಬಿಟ್ಟ ಅಲ್ಲಿನ ಹೆಣ್ಣುಗಳನ್ನೂ ಅಷ್ಟೇ ಹೊಣೆಗಾರರನ್ನಾಗಿಸಬೇಕಾಗುತ್ತದೆ.

ಮುಟ್ಟಾದ ಸ್ತ್ರೀ ಅಸ್ಫೃಶ್ಯಳು , ಅಯ್ಯಪ್ಪನ ಮಾಲೆ ಧರಿಸಿದ ಭಕ್ತರಿಗೆ ಮನೆಯ ಸ್ತ್ರೀಯರೂ  ಅಸ್ಪೃಶ್ಯರಂತೆ ಮುಟ್ಟಿನ ಏಳುದಿನಗಳನ್ನು ಪಾಲಿಸಬೇಕು” ಎಂಬ ಅಂಶ, ಶಬರೀಮಲೈಗೆ  15-50 ರ ವಯಸ್ಸಿನ ಹೆಣ್ಣುಮಕ್ಕಳ ಪ್ರವೇಶ ನಿಷೇಧವನ್ನು ಅಸಂವಿಧಾನಿಕವೆಂದ ಸುಪ್ರೀಂ ಕೋರ್ಟು ಮಹಿಳೆಯರಿಗೆ ದೇಗುಲದ ಪ್ರವೇಶ ನೀಡಿರುವ ತೀರ್ಪನ್ನು ಸಂಪ್ರದಾಯವಾದಿಗಳು ಯಾವ ರೀತಿ ಪ್ರತಿಕ್ರಿಯಿಸಿದರೆಂಬುದನ್ನು ನಿರ್ದೇಶಕ ಜೋಯ್ ಬೇಬಿ ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಸನಾತನಿಗಳು ಆಕ್ಟಿವಿಸ್ಟ್ ಒಬ್ಬಳ ಕಂಪೌಂಡ್ ನುಗ್ಗಿ ಆಕೆಗೆ ಬೆದರಿಕೆ ಹಾಕಿ ಅವಳ ಸ್ಕೂಟಿಯನ್ನು ಸುಡುತ್ತಾರೆ.   ನಾಯಕಿಯೂ ಅಂಥ ಒಂದು ವಿಡಿಯೋವನ್ನು ತನ್ನ ಫೇಸ್ಬುಕ್ಕಿನಲ್ಲಿ ಹಂಚಿಕೊಂಡಿದ್ದು ಅಯ್ಯಪ್ಪನ ಅನುಯಾಯಿಗಳನ್ನು ಕೆಂಪಾಗಿಸುತ್ತದೆ. ಈ ಮನೆಯಲ್ಲಿರಬೇಕೆಂದರೆ ಆ ಪೋಸ್ಟನ್ನು ತೆಗೆ ಅನ್ನುತ್ತಾನೆ ಪತಿ, ಆಕೆ ಖಡಾಮುಡಿಯಾಗಿ ತೆಗೆಯುವುದಿಲ್ಲ, ನೀನೇನು ಮಾಡ್ತಿ? ನೀನೇನೂ ಮಾಡಲಾರೆ ನನ್ನನ್ನು ಎನ್ನುತ್ತಾಳೆ ಹತಾಶೆಯಲ್ಲಿ.  ತನ್ನನ್ನು ಸಮಾನತೆಯಿಂದ ಗೌರವದಿಂದ ಬಾಳಿಸಿಕೊಳ್ಳಲಿಲ್ಲ ಎನ್ನುವ ಹತಾಶೆ ಆಕ್ರೋಶ ಅವಳಲ್ಲಿದೆ. ಗಂಡಹೆಂಡಿರ ನಡುವಿನ ಸ್ಪೋಟಕ ನಿರ್ಣಾಯಕ ಸಂಭಾಷಣೆ ಇದೊಂದೇ. ಚಿತ್ರದ ನಡುವೆ ಆಕೆಯ ಪ್ರತಿಭಟನೆ ಅಸಹನೆಯನ್ನು ಪ್ರಕಟಿಸುವ ಒಂದೇ ಒಂದು ಸಾಲೂ ಚಿತ್ರದಲ್ಲಿ ಬರದಂತೆ ಜೋಯ್ ಬಹಳ ಎಚ್ಚರವಹಿಸಿದ್ದಾರೆ.  ಆಕೆಯ ಮುಖಭಾವವೇ ಸಾವಿರ ಮಾತಾಡುತ್ತದೆ. ಮಾತೇ ಬೇಡ !

ಚಿತ್ರದ ಆರಂಭದಲ್ಲಿ ಲವಲವಿಕೆಯ ನಗುಮೊಗದ ನಾಯಕಿಯ ನಗೆ ಮದುವೆಯಾದ ಬಳಿಕ ಮಾಯವಾಗಿದೆ.  ವಿದ್ಯಾವಂತೆಯಾದ ಆಕೆಗೆ ಈ ತೊಳಿ ಬಳಿ, ಕೊಚ್ಚು ಹೆಚ್ಚು, ಕುದಿಸು, ಗುಡಿಸುವ ಗಾಣದೆತ್ತಿನಂತೆ ದುಡಿದು ರಾತ್ರಿ ಗಂಡನಿಗೆ ಯಾಂತ್ರಿಕವಾಗಿ ಒದಗುವ ಕ್ರಿಯೆಯಲ್ಲಿ ಬದುಕು ಅರ್ಥಹೀನವೆನ್ಸತೊಡಗುತ್ತದೆ.  ತಾನು ಉದ್ಯೋಗ ಮಾಡಬೇಕೆಂಬುದು ಅವಳ ಇಚ್ಛೆ. ಉದ್ಯೋಗ ಮಾಡುವುದು ಬೇಡವೆಂದು ಪತಿ ಮತ್ತು ಯಜಮಾನ ಮಾವ ತಣ್ಣನೆಯ ವಿನಮೃತೆಯಿಂದಲೇ ವಿರೋಧಿಸುತ್ತಾರೆ. ಅದನ್ನು ಮೀರಿ ಆಕೆ ಉದ್ಯೋಗಕ್ಕೆ ಅರ್ಜಿಹಾಕುತ್ತಾಳೆ.  ಇಂಟರ್ವ್ಯೂಗೆ ಪತ್ರ ಬಂದದ್ದೂ ಗಂಡಸರಿಗೆ ಇಷ್ಟವಾಗುವುದಿಲ್ಲ. ಅತ್ತೆ ಮಾತ್ರ ಗುಟ್ಟಾಗಿ ಅದನ್ನು ಪ್ರೊತ್ಸಾಹಿಸಿದ್ದು ಸಾವಿರ ಹೇಳುತ್ತದೆ.

ಪುರುಷರು ಅಯ್ಯಪ್ಪನ ಮಾಲೆ ಧರಿಸಿದ ನಂತರದ ಅವರ ನಡವಳಿಕೆಗಳೆಲ್ಲವೂ ಆಕೆಯ ಅಸ್ತಿತ್ವವನ್ನು ಆತ್ಮಗೌರವವನ್ನೂ ಕೆಣಕುತ್ತಲೇ ಇರುತ್ತವೆ.  ಕೊನೆಗೂ ಅವಳೊಳಗೆ ಕುದಿಯುತ್ತಿರುವ ಲಾವಾರಸ ಅಯ್ಯಪ್ಪನ ಭಕ್ತಮಂಡಳಿ ಮನೆಗೆ ಆಗಮಿಸಿದ ದಿನ ವಿಸ್ಪೋಟಗೊಳ್ಳುತ್ತದೆ.   ಚಹ ಕೇಳಿದಾಗ ಆಕೆ ಕೇಳಿಸಿಕೊಂಡರೂ ಅವಳ ದೇಹ ಕಲ್ಲಿನಂತೆ ಸ್ಪಂದಿಸದೇ ಬುದ್ಧಿ ಮನಸ್ಸು ಸಹಕರಿಸದೇ ಹೋಗುತ್ತವೆ. ತಾಳ್ಮೆ ಕಳೆದುಕೊಂಡ ಅವಳು ಸೋರುವ ಸಿಂಕಿನ ನೀರನ್ನೇ ಕಪ್ಪುಗಳಿಗೆ ಹಾಕಿಟ್ಟಿರುತ್ತಾಳೆ.  ಇದುವರೆಗೂ ಚಹ ಬಾರದ್ದಕ್ಕೆ ಅಡುಗೆಮನೆಗೆ ಬಂದ ಮಾವ ಮತ್ತು ಗಂಡನಿಗೆ   ಸಿಂಕಿನ ಸೋರಿದ ನೀರನ್ನು ಎರಚಿ ಬಾಗಿಲುಮುಚ್ಚಿ ಅಗಳಿಹಾಕಿ ತನ್ನ ಬ್ಯಾಗನೆತ್ತಿಕೊಂಡು ಮನೆಯಿಂದ ಹೊರಬೀಳುತ್ತಾಳೆ.  ಅಯ್ಯಪ್ಪ ಸ್ವಾಮಿ ಭಕ್ತರ ಪೂಜೆ ನಡೆಯುತ್ತಲೇ ಇರುತ್ತದೆ.  ಬೀದಿಯಲ್ಲೂ ಅಯ್ಯಪ್ಪಸ್ವಾಮಿ ಭಕ್ತರ ಜಯಘೋಷ ಕೇಳುತ್ತಲೇ ಇರುತ್ತದೆ. ಆಕೆಯ ಹೆಜ್ಜೆಗಳು ನಿಲ್ಲುವುದಿಲ್ಲ.

ತವರಿಗೆ ಬಂದ ಮಗಳನ್ನು ತಾಯಿ – ಅಂಥ ಪ್ರತಿಷ್ಠಿತ ಕುಟುಂಬವನ್ನು ಬಿಟ್ಟು ಬಂದದ್ದೇ ಅವಿವೇಕತನವೆನ್ನುವಂತೆ ಹೋಗು ಅನ್ನುತ್ತಾಳೆ.  ನಾಯಕಿ ನಿಮಿಶಾ ನಿರಾಕರಿಸುತ್ತಾಳೆ.  ಅದೇ ಹೊತ್ತಿಗೆ ಬಂದ ತಮ್ಮ – “ಅಮ್ಮ ಗ್ಲಾಸು ನೀರು ಕೊಡು” ಎಂದಾಗ ತಾಯಿ ಕಿರಿಮಗಳನ್ನು ಕೊಡು ಎನ್ನುತ್ತಾಳೆ. ನೀರು ಕೊಡಲು ಏಳುತ್ತಿದ್ದ ತಂಗಿಯನ್ನು ತಡೆದು- “ನೀರು ತಗೊಂಡು ಕುಡಿಯೋಕೇನು ಧಾಡಿ, ಎಂದು ಸಿಡಿದು ಬೀಳುತ್ತಾಳೆ.

ಹೇಗೆ ಹೆಣ್ಣನ್ನು ಗೌರವಿಸಬೇಕು ಮತ್ತು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವಷ್ಟನ್ನಾದರೂ ಈ ಗಂಡಸರಿಗೆ ಎಳೆವೆಯಲ್ಲಿಯೇ ತಾಯಂದಿರು ಹೇಳಿಕೊಡಬೇಕು” ಎನ್ನುವ ಆಶಯ ನಿಮಿಶಾಳ ಆಕ್ರೋಶದಲ್ಲಿದೆ. ಗಂಡಸನ್ನು ನೀನು ಶ್ರೇಷ್ಠ, ನೀನು ಗಂಡಸು ಎಂದು ಅವನೊಳಗೆ ಪುರುಷಹಂಕಾರವನ್ನು ಬಿತ್ತಿ- ಬೆಳೆಸಿದ್ದರಲ್ಲಿ ತಾಯಿ ಸ್ಥಾನದಲ್ಲಿರುವ ಒಬ್ಬ ಹೆಣ್ಣಿನ ಪಾತ್ರವೂ ಇದೆ. ಪರಸ್ಪರ ಸಮಾನತೆ, ಪರಸ್ಪರ ಗೌರವವನ್ನು ಬಯಸುವ  ಹೆಣ್ಣನ್ನು ಸ್ತ್ರೀವಾದಿ ಪಟ್ಟಕಟ್ಟಿ ಮೂಲೆಗೊತ್ತುವುದರಲ್ಲೂ ಇದೇ ಮನುವಾದಿ ಮನಃಸ್ಥಿತಿಯಿದ್ದದ್ದು ಸುಳ್ಳಲ್ಲ. ಜೋಯ್ ಬೇಬಿ ಇದನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.

ಸಹನೆಯ ಕಟ್ಟೆಯೊಡೆದ ನಿಮಿಶಾ ಉರುಳಿ ಮರಳಿ ಭೋರ್ಗರೆಯುವ ಸಮುದ್ರವೇ ಆಗಿರುತ್ತಾಳೆ. ಅಂತ್ಯದಲ್ಲಿ ಆಕೆ ತನ್ನಿಚ್ಚೆಯ ನೃತ್ಯವನ್ನೇ ಶಿಕ್ಷಕಿಯಾಗುವುದನ್ನು ಆಯ್ದುಕೊಳ್ಳುತ್ತಾಳೆ. ಅವಳು ತೊರೆದು ಖಾಲಿ ಮಾಡಿ ಹೋದ ಜಾಗಕ್ಕೆ ಮತ್ತೊಬ್ಬಳು ಅಡುಗೆಮನೆ ಸೇರುತ್ತಾಳೆ. ಮತ್ತದೇ ಗಂಡಸಿನ ಶೋಷಣೆ ಆಳ್ವಿಕೆ ಮುಂದುವರಿಯುತ್ತದೆನ್ನುವ ಸೂಚನೆಯೊಂದಿಗೆ ಕಥೆ ಮುಕ್ತಾಯವಾಗುತ್ತದೆ.

ಇಲ್ಲಿ ಪುರುಷಪ್ರಧಾನ ವ್ಯವಸ್ಥೆಯ ಬೀಸುಕಲ್ಲಿನಲ್ಲಿ ನುರಿಯುತ್ತಿರುವ ಹೆಣ್ಣನ್ನು ಕಂಡಾಗ ಮಾತೃಪ್ರಧಾನ ವ್ಯವಸ್ಥೆ ಮತ್ತು ನೂರಕ್ಕೆ ನೂರು ಶೇಕಡಾ  ಶಿಕ್ಷಣಕ್ಕೆ ಮಾದರಿಯಾಗಿರುವ ಕೇರಳದಲ್ಲಿ ಇಂಥ ಮನಸ್ಥಿತಿ ಈಗಲೂ ಇದೆಯಾ ಎಂದು ಅಚ್ಚರಿಯಾಗುತ್ತದೆ. ಯಾಕಂದರೆ ನಾಯಕಿ ಲ್ಯಾಪ್ಟಾಪ್, ಮೊಬೈಲ್ ಇಟ್ಟುಕೊಂಡ ಕಲಿತ ಯುವತಿ. ವಿದ್ಯಾವಂತ ಯುವತಿಯರನ್ನು ಇಂಥ ಸನಾತನ ಮನಸ್ಸುಗಳು ಯಾವ ದೃಷ್ಟಿಯಿಂದ ಕಾಣುತ್ತಾರೆ? ಮತ್ತು ಆಧುನಿಕತೆಯನ್ನು ಒಲ್ಲದ ಒಪ್ಪದ ಮನಸ್ಸುಗಳು ಯಾವ ರೀತಿ ಹೆಣ್ಣನ್ನು ಶೋಷಿಸಬಲ್ಲರು, ಅಡುಗೆಮನೆಯೆಂಬ ಪಿತೃಸಂಸ್ಕೃತಿಯ ಸರಳುಗಳ ಹಿಂದೆ ಅದೆಷ್ಟು ಬಿಕ್ಕಳಿಕೆಗಳು, ಅದೆಷ್ಟು ನಿಟ್ಟುಸಿರುಗಳು ಅಡಗಿರಬಹುದು. ಉರಿವ ಒಲೆಯಂತೆ ಅದೆಷ್ಟು ಒಡಲುಗಳು ಉರಿದಿರಬಹುದು ಎಂಬುದನ್ನು ಈ ಚಿತ್ರ ಚೆನ್ನಾಗಿ ಕಟ್ಟಿಕೊಡುತ್ತದೆ.

ಒಟ್ಟಾರೆ “ದಿ ಗ್ರೇಟ್ ಇಂಡಿಯನ್ ಕಿಚನ್“ ಬದುಕಿನ ಅವಿಭಾಜ್ಯ ಅಂಗವಾದ ಅಡುಗೆ ಕೋಣೆಯ ಕ್ಯಾನವಾಸಿನಲ್ಲಿ ಕಲಸಿಹೋದ ಅನೇಕ ಪ್ರಶ್ನೆಗಳನ್ನು ಮುಖಾಮುಖಿಯಾಗಿಸುತ್ತದೆ. ಉತ್ತರವೇ ಇಲ್ಲದ ಅನೇಕ ಪ್ರಶ್ನೆಗಳನ್ನು ನಾವು ನೀವು ಚರ್ಚಿಸುತ್ತಲೇ ಇರುತ್ತೇವೆ. ಪತಿ-ಪತ್ನಿಯಾಗಿ ಸೂರಜ್ ವೆಂಜರಾಮೂಡು ಮತ್ತು ನಿಮಿಶಾ ಸಜಯನ್ ಅವರ ಮನೋಜ್ಞ ಅಭಿನಯ ಬಹುಕಾಲ ನೆನಪಲ್ಲಿರುತ್ತದೆ.

Donate Janashakthi Media

Leave a Reply

Your email address will not be published. Required fields are marked *