ಬೆಂಗಳೂರು: ನಾಗವಾರದಿಂದ ಗೊಟ್ಟಗೆರೆವರೆಗಿನ 21 ಕಿ.ಮೀ ಮೆಟ್ರೋ ಪಿಂಕ್ ಲೈನ್ ಕಾಮಗಾರಿ ಶೇ.95ರಷ್ಟು ಬಹುತೇಕ ಪೂರ್ಣಗೊಂಡಿದ್ದು, 2026ರ ಅಂತ್ಯದ ವೇಳೆಗೆ ಈ ಮಾರ್ಗದ ಸಂಚಾರ ಆರಂಭವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಈ ಸಂಬಂಧ ಬಿಎಂಆರ್‌ಸಿಎಲ್ ಚೀಫ್ ಇಂಜಿನಿಯರ್ (ಅಂಡರ್ ಗ್ರೌಂಡ್ ವಿಭಾಗ) ಸುಬ್ರಮಣ್ಯ ಗುಡಿಗೆ ಅವರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ಆನಂದ ವಿಕಟನ್ ವೆಬ್‌ಸೈಟ್ ಮೇಲಿನ ನಿರ್ಬಂಧ: ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸರ್ವಾಧಿಕಾರಿ ದಾಳಿ
ಒಟ್ಟು 21 ಕಿ.ಮೀ.ನ ಈ ಮಾರ್ಗದಲ್ಲಿ 13 ಕಿ.ಮೀ. ಸುರಂಗ (ಡೇರಿ ವೃತ್ತದಿಂದ ನಾಗವಾರ) ಮಾರ್ಗವಿದೆ. ಈ ಮಾರ್ಗದ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟು 18 ಸ್ಟೇಷನ್ಗಳು ಮಾಡಲಾಗುತ್ತಿದ್ದು, ಅಂಡರ್ಗ್ರೌಂಡ್ನಲ್ಲಿ 12 ಸ್ಟೇಷನ್ಗಳು ಬರಲಿದೆ. ಬೆಂಗಳೂರಲ್ಲಿ ಅರ್ಧ ಪೋಷನ್ ಮಣ್ಣು, ಮತ್ತು ಕಲ್ಲು ಇರುತ್ತದೆ. ಮಣ್ಣು ಮೊದಲು ಬರುತ್ತೆ ಕಲ್ಲು ಕಟ್ ಆಗುವುದು ಲೇಟ್ ಆಗುತ್ತೆ. ಕಾಮಗಾರಿ ವೇಳೆ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಬರಿಗಣ್ಣಿಗೆ ಕಾಣದ್ದು ಸಿಸ್ಟಂ ಅಲ್ಲಿ ತಿಳಿಯುತ್ತದೆ. ಅದರ ಮೂಲಕ ಪರಿಹಾರ ಕಂಡು ಕೊಳ್ಳುತ್ತೇವೆ. ಅತ್ಯಂತ ಕ್ಲಿಷ್ಟಕರವಾದ ಸುರಂಗ ಮಾರ್ಗದ ಬಹುತೇಕ ಎಲ್ಲಾ ಕಾಮಗಾರಿ ಮುಗಿದಿದ್ದು, ಮೆಟ್ಟಿಲು ನಿರ್ಮಾಣ, ಹಳಿ ಜೋಡಣೆ ಕಾರ್ಯ, ವಿದ್ಯುತ್ ಸಂಪರ್ಕ, ಎಲಿವೇಟರ್, ಎಸಿ , ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ಭರದಿಂದ ಸಾಗಿದೆ. ಇದು ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಹೀಗಾಗಿ ನಮ್ಮ ಮೆಟ್ರೋ ಪಿಂಕ್ ಮಾರ್ಗವು 2026 ರಲ್ಲಿ ಸಾರ್ವಜನಿಕ ಸೇವೆ ಲಭ್ಯವಾಗಲಿದೆ ಎಂದು ಹೇಳಿದರು.
2020ರ ಆಗಸ್ಟ್ 22 ರಂದು ಕಂಟೋನ್ಮೆಂಟ್ ಭೂಗತ ನಿಲ್ದಾಣದಲ್ಲಿ ಟಿಬಿಎಂ (ಸುರಂಗ ಬೋರಿಂಗ್ ಯಂತ್ರ) ನಿಯೋಜಿಸಿತ್ತು. ಅಂದಿನಿಂದ ಕೆಲಸ ಆರಂಭವಾಗಿತ್ತು. ಈ ಟಿಬಿಎಂಟಿಗಳು ಒಟ್ಟ 13 ಕಿಲೋ ಮೀಟರ್ ಸುರಂಗ ಕೊರೆಯುವಲ್ಲಿ ಯಶಸ್ವಿಯಾಗಿವೆ. ಒಟ್ಟು ಎರಡು ಹಂತಗಳಲ್ಲಿ ಸುರಂಗ ಕೊರೆಯಲಾಗುತ್ತಿತ್ತು. ಇನ್ನು ಮೆಜೆಸ್ಟಿಕ್‌ನಂತೆ ಈ ಪಿಂಕ್ ಮಾರ್ಗದಲ್ಲಿ ಇಂಟರ್‌ಚೇಂಜ್ ನಿಲ್ದಾಣ ಬರಲಿದೆ. ನೇರಳೆ ಮಾರ್ಗವನ್ನು ಎಂಜಿ ರಸ್ತೆಯಲ್ಲಿ ಈ ಪಿಂಕ್ ಮಾರ್ಗವು ಸಂಧಿಸುತ್ತದೆ. ಹೀಗಾಗಿ ಎಂಜಿ ರಸ್ತೆಯ ನಿಲ್ದಾಣವನ್ನು ಇಂಟರ್‌ಚೇಂಜ್ ನಿಲ್ದಾಣವಾಗಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಶಿವಾಜಿನಗರ ಮತ್ತು ಎಂಜಿ ರಸ್ತೆ ನಿಲ್ದಾಣಗಳ ನಡುವೆ ಸುರಂಗ ಕೊರೆಯುವ ಯಂತ್ರವನ್ನು 193 ಬಾರಿ ನಿಲ್ಲಿಸಲಾಗಿತ್ತು. ಕಟ್ಟರ್ ಹೆಡ್‌ಗಳನ್ನು ಹಲವಾರು ಬಾರಿ ಬದಲಾಯಿಸಬೇಕಾಗಿತ್ತು. ಟನಲ್ ಬೋರಿಂಗ್ ಮಷಿನ್‌ಗಳಲ್ಲಿ ಡಿಸ್ಕ್ ಗಳು ಬಂಡೆಗಳನ್ನು ಕೊರೆಯುವಾಗ ಹಾನಿಗೊಳಗಾಗುತ್ತವೆ. ಹಾನಿಗೊಳಗಾದ ಈ ಡಿಸ್ಕ್ ಗಳನ್ನು ಬದಲಿಸಲು ಒಂದೂವರೆ ಲಕ್ಷದಿಂದ ಮೂರು 3 ಲಕ್ಷದವರೆಗೆ ವೆಚ್ಚೆವಾಗುತ್ತದೆ. ಪ್ರಸ್ತುತ ಎರಡು ಹಂತಗಳಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ನಡೆದಿದ್ದ ತಪ್ಪುಗಳಿಂದ ಪಾಠ ಕಲಿಯಲಾಗಿದೆ. ಸುರಂಗಗಳನ್ನು ವೇಗವಾಗಿ ರೈಲು ಓಡಲು ಆಗುವಂತೆ ಅಗತ್ಯ ಸೌಲಭ್ಯ ಒಳಗೊಂಡಿದೆ. ಇದರ ಮೇಲ್ವಿಚಾರಣೆಯನ್ನು ಜರ್ಮನಿ ಮತ್ತು ಜಪಾನ್ ಸಿಬ್ಬಂದಿ ಕರೆಸಲಾಗಿತ್ತು. ಥೈಲ್ಯಾಂಡ್‌ನಿಂದ 50-ಕ್ಕೂ ಹೆಚ್ಚು ಸುರಂಗ ಸಿಬ್ಬಂದಿ ಬೆಂಗಳೂರಿಗೆ ಬಂದಿದ್ದರು. ಹಂತ 2 ರಲ್ಲಿ, ಮೇಲ್ವಿಚಾರಣಾ ಕಾರ್ಯಗಳನ್ನು ಸಂಪೂರ್ಣವಾಗಿ ಬಿಎಂಆರ್‌ಸಿಎಲ್ ಸಿಬ್ಬಂದಿ ಮಾಡಿದ್ದಾರೆ. ಅದಕ್ಕಾಗಿ ಅಗತ್ಯ ತರಬೇತಿ ಸಹ ಪಡೆಯಲಾಗಿದೆ ಎಂದು ಹೇಳಿದರು.
ಹಾಲಿ ಇರುವ ಭೂಗತ ಮೆಟ್ರೋ ನಿಲ್ದಾಣಗಳಿಗಿಂತ ಪಿಂಕ್ ಲೈನ್ ಮೆಟ್ರೋ ನಿಲ್ದಾಣಗಳು ಭಿನ್ನ ಮತ್ತು ವಿಶೇಷತೆಯಿಂದ ಕೂಡಿರಲಿವೆ. ಇಲ್ಲಿನ ನಿಲ್ದಾಣಗಳು ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (ಪಿಎಸ್‌ಡಿ) ವ್ಯವಸ್ಥೆ ಹೊಂದಿರುತ್ತದೆ. ಭೂಗತ ಮಾರ್ಗವು ಗರಿಷ್ಠ 80 ಕಿ.ಮೀ ವೇಗದಲ್ಲಿ ರೈಲುಗಳನ್ನು ಓಡಿಸಲು ವಿನ್ಯಾಸಗೊಳಿಸಲಾಗಿದೆ. ನಿಲ್ದಾಣಗಳು ತಲಾ 200 ಮೀ ಉದ್ದ, ವಿಶಾಲವಾಗಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.