2020ರ ನವೆಂಬರ್‌ನಿಂದ 28 ಸಾವಿರಕ್ಕೂ ಹೆಚ್ಚು ‘ನಕಲಿ ಸುದ್ದಿ’ ವಿರುದ್ಧ ಪಿಐಬಿ ಕ್ರಮ: ಕೇಂದ್ರ ಸರ್ಕಾರ

ನವದೆಹಲಿ: 2020ರ ನವೆಂಬರ್ ನಿಂದ 2023ರ ಜೂನ್ ನಡುವೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ “ನಕಲಿ ಸುದ್ದಿ” ಒಳಗೊಂಡ 28,380 ಪ್ರಕರಣಗಳಲ್ಲಿ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಅಡಿಯಲ್ಲಿರುವ ಸರ್ಕಾರದ ಫ್ಯಾಕ್ಟ್‌ ಚೆಕಿಂಗ್‌ ಸಂಸ್ಥೆಯು ಕ್ರಮ ಕೈಗೊಂಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಇಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

“ಕೋವಿಡ್-19 ರ ಎರಡನೇ ಅಲೆಯ 2021ರ  ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಕಲಿ ಸುದ್ದಿಗಳ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಅಂದು ಕ್ರಮವಾಗಿ 5,387 ಮತ್ತು 1,754 ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು” ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಹೇಳಿದೆ.

2021 ರ ಐಟಿ ನಿಯಮಗಳ ಅಡಿಯಲ್ಲಿ 2021 ರ ಡಿಸೆಂಬರ್‌ನಿಂದ 10 ವೆಬ್‌ಸೈಟ್‌ಗಳು ಮತ್ತು ಐದು ಅಪ್ಲಿಕೇಶನ್‌ಗಳು ಸೇರಿದಂತೆ 635 ಯುಆರ್‌ಎಲ್‌ಗಳಿಗೆ ಸಾರ್ವಜನಿಕ ಪ್ರವೇಶವನ್ನು ಬಿಜೆಪಿ ಸರ್ಕಾರ ನಿರ್ಬಂಧಿಸಿದೆ ಎಂದು ಕೇಂದ್ರ ಸಚಿವ ಠಾಕೂರ್ ಹೇಳಿದ್ದಾರೆ. ಆದರೆ ಸರ್ಕಾರ ನಿರ್ಬಂಧಿಸಿದ ಯುಆರ್‌ಎಲ್‌ಗಳ ವಿವರಗಳನ್ನು ಅದು ನೀಡಿಲ್ಲ.

ಕ್ರಾಸ್-ಚೆಕಿಂಗ್‌ನ ಹಲವು ಹಂತಗಳಿರುವ ಕಠಿಣ ಪ್ರಕ್ರಿಯೆಯ ಮೂಲಕ ಸರ್ಕಾರಿ ಸಂಸ್ಥೆ ಪಿಐಬಿ ಫ್ಯಾಕ್ಟ್‌ಚೆಕ್‌ ಮಾಡುತ್ತದೆ ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: 2020ರ ದೆಹಲಿ ಗಲಭೆ: ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್‌

ತಿದ್ದುಪಡಿ ಮಾಡಲಾದ ಐಟಿ ನಿಯಮಗಳ ಅಡಿಯಲ್ಲಿ ಸರ್ಕಾರದಿಂದ ಯಾವುದೇ ಫ್ಯಾಕ್ಟ್‌ ಚೆಕ್ಕಿಂಗ್‌ ಘಟಕವನ್ನು ಸೂಚಿಸಲಾಗಿಲ್ಲ ಎಂದು ಸರ್ಕಾರ ಹೇಳಿದೆ. ಸರ್ಕಾರ ತಂದಿರುವ ಐಟಿ ತಿದ್ದುಪಡಿಗಳನ್ನು ಪತ್ರಕರ್ತರು ಟೀಕಿಸಿದ್ದು, ಇವು ಪತ್ರಿಕೆಗಳ ಮೇಲಿನ “ಸೆನ್ಸಾರ್‌ಶಿಪ್” ಎಂದು ಬಣ್ಣಿಸಿದ್ದಾರೆ.

ಈ ನಡುವೆ ತಿದ್ದುಪಡಿ ಮಾಡಲಾದ ಐಟಿ ನಿಯಮಗಳನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ, ಹೈಕೋರ್ಟ್‌ನ ವಿಭಾಗೀಯ ಪೀಠವು ತಿದ್ದುಪಡಿಯು “ಅತಿಯಾದ ಕ್ರಮಗಳನ್ನು” ಒಳಗೊಂಡಿದೆ ಎಂದು ಹೇಳಿತ್ತು.

ತಿದ್ದುಪಡಿ ಮಾಡಲಾದ ನಿಯಮಗಳ ಅಡಿಯಲ್ಲಿ ಸ್ಥಾಪಿಸಲಾಗುವ ಫ್ಯಾಕ್ಟ್‌ಚೆಕಿಂಗ್‌ ಘಟಕವನ್ನು ಯಾರು ಪರಿಶೀಲಿಸುತ್ತಾರೆ ಎಂದು ನ್ಯಾಯಾಲಯ ಕೇಳಿದೆ. ತಿದ್ದುಪಡಿ ಮಾಡಲಾಗಿರುವ ನಿಯಮವು, ಫ್ಯಾಕ್ಟ್‌ ಚೆಕಿಂಗ್‌ ಘಟಕದ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಹಂಚಲಾಗಿರುವ “ನಕಲಿ ಸುದ್ದಿ” ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕೆ ನೀಡುತ್ತದೆ.

ವಿಡಿಯೊ ನೋಡಿ: ಬೇಟಿ ಬಚಾವೋ ಅಂದ್ರೆ ಬೆತ್ತಲೆ ಮಾಡೋದಾ ಪ್ರಧಾನಿಗಳೆ? ಕೇಂದ್ರದ ವಿರುದ್ದ ಕೆರಳಿದ ಪ್ರತಿಭಟನೆಕಾರರು Janashakthi Media

Donate Janashakthi Media

Leave a Reply

Your email address will not be published. Required fields are marked *