ಕನಿಷ್ಟ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸುವಲ್ಲಿ ‘ಮುತ್ಸದ್ದಿತನ‘ ಪ್ರದರ್ಶಿಸಲಿ!
ಸಂಸತ್ ಭವನದ ಎದುರು ರಾತ್ರಿಯಿಡೀ ಧರಣಿ ಕುಳಿತಿದ್ದ ಎಂಟು ಅಮಾನತುಗೊಂಡ ರಾಜ್ಯಸಭಾ ಸದಸ್ಯರನ್ನು ಭೇಟಿ ಮಾಡಲು ಮುಂಜಾನೆಯೇ ರಾಜ್ಯಸಭಾ ಉಪಸಭಾಪತಿಗಳು ಚಹಾದೊಂದಿಗೆ ಬಂದು ‘ಮುತ್ಸದ್ದಿ’ತನವನ್ನು ಮೆರೆದಿದ್ದಾರೆ ಎಂದು ಪ್ರಧಾನ ಮಂತ್ರಿಗಳು ಶ್ಲಾಘಿಸಿದ್ದಾರೆ.
ಆದರೆ ಧರಣಿ ನಿರತ ಸಂಸದರು ಅವರ ‘ಆತಿಥ್ಯ’ವನ್ನು ಸ್ವೀಕರಿಸಲಿಲ್ಲ. ಏಕೆ? ಪತ್ರಕರ್ತರು ಈ ಪ್ರಶ್ನೆಯನ್ನು ಅಮಾನತುಗೊಂಡವರಲ್ಲಿ ಒಬ್ಬರಾದ ಸಿಪಿಐ(ಎಂ)ನ ಎಳಮಾರಂ ಕರೀಂ ಅವರನ್ನು ಕೇಳಿದರು.
ತಾನು ಸರಕಾರೀ ಕಾರನ್ನು ಬಳಸಿಲ್ಲ, ಇದು ಅನೌಪಚಾರಿಕ ಭೇಟಿ ಎಂದು ಉಪಸಭಾಪತಿಗಳು ಹೇಳಿದರು. ಹಾಗಿದ್ದರೆ ಫೋಟೋಗ್ರಾಫರುಗಳ ಜತೆಗೆ ಏಕೆ ಬಂದರು ಎಂದು ಕರೀಂ ಅವರು ಪ್ರಶ್ನಿಸಿದ್ದಾರೆ.
ಇದು ಒಂದು ಪ್ರಚಾರ ಗಿಟ್ಟಿಸುವ ಕಸರತ್ತು. ನಾವೇಕೆ ಇದನ್ನು ಸ್ವೀಕರಿಸಬೇಕು ಎಂದು ಕೇಳಿದ ಕರೀಂ ‘ಅದೊಂದು ಯೋಜಿತ ಭೇಟಿ, ಮೂವರು ಫೋಟೋಗ್ರಾಫರ್ ಗಳೊಂದಿಗೆ! ಅದೊಂದು ಶೋ. ಆದ್ದರಿಂದಲೇ ನಾವು ಅದನ್ನು ನಿರಾಕರಿಸಿದೆವು. ಇದೇ ‘ಮುತ್ಸದ್ದಿ’ತನವನ್ನು ಅವರು ಭಾನುವಾರ ಸದನದಲ್ಲಿ ಏಕೆ ಪ್ರದರ್ಶಿಸಿಲ್ಲ? ಇಂತಹ ಮುತ್ಸದ್ದಿತನವನ್ನು ತೋರಿಸಿದ್ದರೆ ಇಂತಹ ಪರಿಸ್ಥಿತಿಯೇ ಬರುತ್ತಿಲ್ಲ’ ಎಂದು ಎಳಮಾರಂ ಕರೀಂ ಹೇಳಿದರು.
ಮಸೂದೆಗಳನ್ನು ಮತಕ್ಕೆ ಹಾಕಬೇಕು ಎಂದು ಠರಾವು ಮಂಡಿಸಿದ್ದ ಸದಸ್ಯರು ಹಾಜರಿರಲಿಲ್ಲ ಎಂದು ಈ ‘ಮುತ್ಸದ್ದಿ’ ಹೇಳಿರುವುದಾಗಿ ವರದಿಯಾಗಿದೆ. ಇದು ಬುಡವಿಲ್ಲದ ಆರೋಪ. ಆ ವೇಳೆಯಲ್ಲಿ ಕೆ ಕೆ ರಾಗೇಶ್ ಇದ್ದಿರಲಿಕ್ಕಿಲ್ಲ. ಆದರೆ ಠರಾವು ಮಂಡಿಸಿದ್ದ ಕರೀಂ, ಒಬ್ರಿನ್ ಮತ್ತು ತಿರುಚಿ ಶಿವ ಇದ್ದರು. ಅವರು ಎದ್ದು ಮಸೂದೆಗಳನ್ನು ಮತಕ್ಕೆ ಹಾಕಬೇಕು ಎಂದು ಆಗ್ರಹಿಸಿದರು. ಆದರೆ ಅದನ್ನು ಉಪಸಭಾಪತಿಗಳು ಕಿವಿಗೆ ಹಾಕಿಕೊಳ್ಳಲೇ ಇಲ್ಲ, ಠರಾವು ವಜಾ ಆಗಿದೆ ಎಂದು ಪ್ರಕಟಿಸಿ ಬಿಟ್ಟರು. ಸರಕಾರ ಸಂಸತ್ತಿನ ಅಪಹಾಸ್ಯ ಮಾಡಿದೆ, ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕರೀಂ ಹೇಳಿದ್ದಾರೆ.
ಇದನ್ನು ಓದಿ :ಬೇಡಿಕೆ ಈಡೇರಿಸುವವರೆಗೂ ರಾಜ್ಯಸಭಾ ಅಧಿವೇಶನ ಬಹಿಷ್ಕಾರ: ವಿಪಕ್ಷಗಳ ನಿರ್ಧಾರ
ಎಂಎಸ್‍ಪಿ ಖಾತ್ರಿಗೆ ಶಾಸನ ತರಲು ಏಕೆ ಹಿಂದೇಟು?
ಪ್ರತಿಪಕ್ಷಗಳು ಮೂರು ಬೇಡಿಕೆಗಳು ಈಡೇರುವ ವರೆಗೆ ಕಲಾಪಗಳನ್ನು ಬಹಿಷ್ಕರಿಸಲು ನಿರ್ಧರಿಸಿದ ಮೇಲೆ ಅಮಾನತುಗೊಂಡಿದ್ದ ಎಂಟು ರಾಜ್ಯಸಭಾ ಸದಸ್ಯರು ತಮ್ಮ ಧರಣಿಯನ್ನು ಹಿಂತೆಗೆದುಕೊಂಡರು.
ಈ ಮೂರು ಬೇಡಿಕೆಗಳು:
- ಎಂಟು ಸಂಸದರ ಮೇಲಿನ ಅಮಾನತ್ತು ಶಿಕ್ಷೆಯನ್ನು ರದ್ದುಗೊಳಿಸಬೇಕು;
- ರೈತರ ಬೆಳೆಗಳಿಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಗೊಳಿಸಬೇಕು, ವರ್ತಕರಾಗಲೀ, ಸಂಸ್ಥೆಗಳಾಗಲೀ ಇದಕ್ಕಿಂತ ಕಡಿಮೆ ದರದಲ್ಲಿ ರೈತರಿಂದ ಖರೀದಿಸುವಂತಿಲ್ಲ ಎಂಬ ಮಸೂದೆಯನ್ನು ತರಬೇಕು.
- ಎಂ.ಎಸ್. ಸ್ವಾಮಿನಾಥನ್ ರವರ ಸಮಿತಿ ಶಿಫಾರಸು ಮಾಡಿದ ಬೆಂಬಲ ಬೆಲೆಯ ಖಾತ್ರಿಯನ್ನು ಸರಕಾರ ನೀಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮತ್ತು ಆಹಾರ ನಿಗಮ (ಎಫ್‍ಸಿಐ) ರೈತರಿಂದ ಖರೀದಿಸಬಾರದು.
ಎಲ್ಲ ರೈತರಿಗೆ ಕನಿಷ್ಟ ಬೆಂಬಲ ಬೆಲೆ ನೀಡಲಾಗುವುದು ಎಂದು ಪ್ರಧಾನ ಮಂತ್ರಿಗಳು ಈಗ ಹೇಳಿದ್ದಾರೆ. ಆದರೆ ಅದನ್ನು ಶಾಸನಬದ್ಧಗೊಳಿಸುವ ಬಗ್ಗೆ ಏನೂ ಹೇಳಿಲ್ಲ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ರಾಜ್ಯಸಭಾ ಸದಸ್ಯರಾಗಿದ್ದಾಗ 15 ಜೂನ್ 2017ರಂದು ಪ್ರಧಾನ ಮಂತ್ರಿಗಳಿಗೆ ಒಂದು ಪತ್ರ ಬರೆದು ರೈತರಿಗೆ ಕನಿಷ್ಟ ಬೆಂಬಲ ಬೆಲೆಯಲ್ಲಿ ಮಾರುವ ಹಕ್ಕನ್ನು ಕೊಡುವುದರೊಂದಿಗೆ, ಕೃಷಿ ಖರ್ಚುಗಳು ಮತ್ತು ಬೆಲೆಗಳು ಆಯೋಗ (ಸಿ.ಎ.ಸಿ.ಪಿ.) ನಿರ್ಧರಿಸಿರುವ ಸಮಗ್ರ ಉತ್ಪಾದನಾ ವೆಚ್ಚಗಳ ಮೇಲೆ ಕನಿಷ್ಟ 50 ಶೇ. ಸೇರಿಸಿರುವ ಕನಿಷ್ಟ ಬೆಂಬಲ ಬೆಲೆಗಳನ್ನು ಪ್ರತಿವರ್ಷ ಪರಾಮರ್ಶಿಸುವ ಖಾತ್ರಿಯನ್ನು ಕೊಡುವ ಒಂದು ಶಾಸನವನ್ನು ತರಬೇಕು ಎಂದು ಆಗ್ರಹಿಸಿದ್ದರು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು.
ಎಂಟು ಸಂಸತ್ ಸದಸ್ಯರು ಕ್ಷಮೆ ಕೋರಿದರೆ ಅವರ ಅಮಾನತನ್ನು ವಾಪಾಸು ತೆಗೆದುಕೊಳ್ಳುವ ಬಗ್ಗೆ ಕೇಂದ್ರ ಸರಕಾರ ಯೋಚಿಸುವುದಾಗಿ ಮಂತ್ರಿ ರವಿಶಂಕರ ಪ್ರಸಾದ್ ಹೇಳಿದ್ದಾರೆಂದು ವರದಿಯಾಗಿದೆ. ಅಂದರೆ ಅಮಾನತನ್ನು ನಿರ್ಧರಿಸಿದ್ದು ರಾಜ್ಯಸಭೆಯ ಸಭಾಪತಿಗಳು ಮತ್ತು ಉಪಸಭಾಪತಿಗಳಲ್ಲವೇ, ಸರಕಾರ ಮೊದಲೇ ನಿರ್ಧರಿಸಿತ್ತೇ ಎಂದು ಒಬ್ಬ ಪತ್ರಕರ್ತರು ಪ್ರಶ್ನಿಸಿದ್ದಾರೆ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಎಳಮಾರಂ ಕರೀಮ್ ಹೇಳಿದ್ದಾರೆ.