ಎಸ್.ವೈ.ಗುರುಶಾಂತ
ಈ ಹಿಂದೆಯೂ ಆರ್‌ಎಸ್‌ಎಸ್ ಅನ್ನು ಎರಡು ಬಾರಿ, ‘ಸಿಮಿ’ ಸಂಘಟನೆಯನ್ನು, ಮಾವೋವಾದಿಗಳನ್ನು ನಿಷೇಧಿಸಲಾಗಿತ್ತು. ಆದರೆ ಸರಕಾರ ಹೇಳಿಕೊಂಡ ಆಶಯದಲ್ಲಿ ಅದರ ಪರಿಣಾಮಗಳು ಹೆಚ್ಚೇನೂ ಆಗಲಿಲ್ಲ ಎಂಬುದನ್ನು ಗಮನಿಸಬೇಕು. ಆದ್ದರಿಂದಲೇ ಕೇವಲ ನಿಷೇಧಗಳು ನಿರೀಕ್ಷಿತ ಫಲವನ್ನು ಕೊಡುವುದಿಲ್ಲ. ಬದಲಾಗಿ ಶಾಂತಿ, ಸಾಮರಸ್ಯ ಮತ್ತು ದೇಶದ ಐಕ್ಯತೆ ಸುಭದ್ರತೆಗೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ರಾಜಕೀಯವಾದ ಮತ್ತು ಆಡಳಿತಾತ್ಮಕವಾದ ಕ್ರಮಗಳನ್ನು ಕೈಗೊಂಡು ಜನತೆಯನ್ನು ಜಾಗೃತಗೊಳಿಸಬೇಕು ಎನ್ನುವ ಅಂಶ ಸೂಕ್ತವಾಗಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಗಳ ಕಛೇರಿಗಳ ಮೇಲೆ ಎನ್.ಐ.ಎ. ತಂಡಗಳ ಧಾಳಿ ಮತ್ತು ಕಾರ್ಯಕರ್ತರ ಬಂಧನಗಳ ಬಳಿಕ ಭಾರತ ಸರಕಾರ ಪಿ.ಎಫ್.ಐ. ಸಂಘಟನೆಯನ್ನು ನಿಷೇಧಿಸಿದೆ. ‘ದೇಶದ ಸುರಕ್ಷತೆ, ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವ ಶಕ್ತಿಗಳು ಇವಾಗಿದ್ದು ಸರಕಾರದ ನಿರ್ಧಾರ ಸೂಕ್ತವಾಗಿದೆ.ಇದರಿಂದ ಶಾಂತಿ, ಸಾಮರಸ್ಯವನ್ನು ಕಾಪಾಡಿದಂತಾಗಿದೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ರವರನ್ನು ಒಳಗೊಂಡು ಅನೇಕ ಬಿಜೆಪಿ ನಾಯಕರು, ಸಚಿವರು ಸ್ವಾಗತಿಸಿದ್ದಾರೆ. ಈ ದಾಳಿಗಳು ನಡೆಯುವ ಮೊದಲೇ ಬಿಜೆಪಿ ನಾಯಕರು ಪಿಎಫ್‌ಐ ಮತ್ತು ಎಸ್‌ಡಿಪಿಐ ಗಳನ್ನು ನಿಷೇಧಿಸಬೇಕೆಂಬ ಬೇಡಿಕೆಯನ್ನು ಮಂಡಿಸುತ್ತಿದ್ದರು. ಈ ಕ್ರಮದ ಮೂಲಕ ಬಿಜೆಪಿ ತನ್ನ ಮತೀಯ ಧೃವೀಕರಣದ ತಂತ್ರದ ರಾಜಕೀಯ ಲಾಭ ಹೊಡೆಯಲು ಯತ್ನಿಸುತ್ತಿದೆ.
ನಿಷೇಧದ ಈ ಕ್ರಮ ಸಾರ್ವಜನಿಕರಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಮತ್ತು ಈ ಸಂಘಟನೆಗಳ ಕಾರ್ಯವಿಧಾನದ ಬಗ್ಗೆ ಹೆಚ್ಚಿನ ಸ್ಪಷ್ಟನೆಯನ್ನು ಮತ್ತು ಈ ಸಂಘಟನೆಗಳ ಸ್ವರೂಪ ಮತ್ತು ವಹಿಸುತ್ತಿರುವ ಪಾತ್ರವನ್ನು ವಿಮರ್ಶೆ ಮಾಡಿಕೊಳ್ಳಲು ಒತ್ತಾಸೆ ಸೃಷ್ಟಿಸಿದೆ.
ಪಿಎಫ್‌ಐ ಸಂಘಟನೆ ಮುಸ್ಲಿಂ ಮೂಲಭೂತವಾದಿ ಎನ್ನುವುದರಲ್ಲಿ ಅನುಮಾನವಿಲ್ಲ ಮತ್ತು ತನ್ನ ಉದ್ದೇಶದ ಈಡೇರಿಕೆಗೆ ಅದು ವಹಿಸುತ್ತಿದ್ದ ಉಗ್ರಗಾಮಿ ಭಯೋತ್ಪಾದಕ ಮಾರ್ಗಗಳು ಪ್ರಶ್ನಾರ್ಹವಾಗಿವೆ. ಮೇಲಾಗಿ ಇದು ಸಾರ್ವಜನಿಕ ಮತ್ತು ಸಾಮಾಜಿಕ ಸಂಘಟನೆ ಎಂದು ಹೇಳಿಕೊಂಡರೂ ಇದರ ಒಟ್ಟು ಚಟುವಟಿಕೆಗಳು ಭೂಗತ ಸ್ವರೂಪದಲ್ಲಿದ್ದು ಪಾರದರ್ಶಕವಾಗಿ ಇಲ್ಲ ಎನ್ನುವುದು ಸ್ಪಷ್ಟ. ಕರ್ನಾಟಕ ರಾಜ್ಯದಲ್ಲಿಯೂ ಮತ್ತು ಕೇರಳ ಒಳಗೊಂಡು ಇತರೆ ಕಡೆಗಳಲ್ಲಿಯೂ ನಡೆದ ಹಿಂಸಾತ್ಮಕ ದಾಳಿಗಳಲ್ಲಿ ಈ ಸಂಘಟನೆಯ ಕೈವಾಡ ಇರುವುದು ಕೇಳಿ ಬರುತ್ತದೆ. ನಿಜ ಅಂತಹ ಘಟನೆಗಳು ಮತ್ತು ಅದಕ್ಕೆ ವ್ಯಕ್ತಗೊಳ್ಳುವ ಪ್ರತಿಕ್ರಿಯೆಗಳ ಬಳಿಕ ಉಂಟಾಗುವ ಒಟ್ಟಾರೆ ವಾತಾವರಣವನ್ನು ಗಮನಿಸಿದಾಗ ಹತ್ಯೆ ಮತ್ತು ಪ್ರತಿ ಹತ್ಯೆಗಳನ್ನು ನಡೆಸಿದ ಶಕ್ತಿಗಳು ಬೇರೆ ಬೇರೆ ಎಂದು ಕಂಡರೂ ಅಂತಿಮವಾಗಿ ಪರಸ್ಪರ ಲಾಭ ಮಾಡುವುದು ಮತೀಯತೆಯ ಆಧಾರದಲ್ಲಿ. ಹೀಗೆ ಅಂತಹ ಸ್ಥಿತಿಯಲ್ಲಿ ಕೋಮುವಾದೀ ನೆಲೆಯಲ್ಲಿ ಜನತೆಯನ್ನು ವಿಭಜಿಸಿ ದೃವೀಕರಿಸುವ ಪರಿಣಾಮಗಳು ಎದ್ದು ಕಾಣುತ್ತಿದ್ದವು. ಹೀಗಾಗಿಯೇ ಕರಾವಳಿ ಮತ್ತು ಇತರೆ ಭಾಗಗಳಲ್ಲಿ ಸಂಘ ಪರಿವಾರ ಮತ್ತು ಪಿಎಫ್‌ಐ ನಡುವಿನಲ್ಲಿ ಒಂದು ಸಂಯೋಜಿತ ಕಾರ್ಯಾಚರಣೆಗಳು, ತಿಳುವಳಿಕೆ ಇರುವುದರ ಬಗ್ಗೆ ಅನೇಕ ಅನುಮಾನಗಳು ಸಾರ್ವಜನಿಕವಾಗಿ ವ್ಯಕ್ತಗೊಂಡಿದ್ದವು ಮತ್ತು ಕಾಲಾನುಕ್ರಮದಲ್ಲಿ ಹಲ ಸರಣಿ ನಿದರ್ಶನಗಳಿಂದ ನಿಚ್ಛಳಗೊಂಡಿದ್ದವು. ಅಂದರೆ ಈ ಎರಡು ಶಕ್ತಿಗಳು ಸಾಮಾಜಿಕ ಶಾಂತಿ, ಜನತೆಯ ಸಾಮರಸ್ಯ ಮತ್ತು ಸೌಹಾರ್ದತೆಗೆ ತೀವ್ರತರ ಭಂಗ ಉಂಟು ಮಾಡುತ್ತಿದ್ದ ಅಪಾಯವನ್ನು ನಮ್ಮ ಸಮಾಜ ಎದುರಿಸುತ್ತಾ ಬಂದಿದೆ.
ಇದನ್ನೂ ಓದಿ : ಪಿಎಫ್‌ಐ ಮಾಡೆಲ್ ಹೋರಾಟ ಮತ್ತು ಫ್ಯಾಸಿಸ್ಟ್ ಆಡಳಿತದಲ್ಲಿ ಮುಸ್ಲಿಮ್ ಸಮುದಾಯ ಇಡಬೇಕಾದ ಎಚ್ಚರಿಕೆಯ ಹೆಜ್ಜೆಗಳು
ಈಗಲೂ ಪಿಎಫ್‌ಐ ನ ನಿಷೇಧದಿಂದಾಗಿ ಅಂತಹ ವಾತಾವರಣ ಪೂರ್ಣವಾಗಿ ಇಲ್ಲವಾಗಿದೆ ಎಂದು ಯಾವ ಕಾರಣಕ್ಕೂ ಹೇಳಲು ಸಾಧ್ಯವೇ ಇಲ್ಲ. ಅಂದರೆ ಸಂಘ ಪರಿವಾರದ ನಾಯಕರು ಹೇಳುವಂತೆ ಪಿ.ಎಫ್.ಐ.ನಿಷೇಧದಿಂದ ಶಾಂತಿ ಸೌಹಾರ್ದತೆ ನೆಲೆಗೊಂಡು ಬಿಡುತ್ತವೆ ಎನ್ನುವುದು ಸಹ ತೀರಾ ಮೇಲ್ಪದರಿನ ಹೇಳಿಕೆಯಾಗಿ ಉಳಿಯುತ್ತದೆ. ಯಾಕೆಂದರೆ ಇಂತಹ ಶಕ್ತಿಗಳು ಬೆಳೆಯಲು ಮತ್ತು ಪ್ರೋತ್ಸಾಹ ಹೊಂದಲು ಕಾರಣವಾದ ಒಟ್ಟು ವಾತಾವರಣವು ಬದಲಾಗದೆ ಅಂತಹ ಕುಕೃತ್ಯಗಳನ್ನು ತಡೆಯುವುದು ಕಷ್ಟದಾಯಕ. ದೇಶದಲ್ಲಿ ಹಿಂದುತ್ವವಾದಿ ಫ್ಯಾಸಿಸ್ಟ್ ಸಿದ್ಧಾಂತವನ್ನು ಆಧರಿಸಿ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಗಳು, ತಾರತಮ್ಯ ಮತ್ತು ದಬ್ಬಾಳಿಕೆಗಳು ನಡೆಯುತ್ತಾ ಹೋಗುವುದು ಪಿಎಫ್‌ಐ ನಂತಹ ಮೂಲಭೂತವಾಗಿ ಶಕ್ತಿಗಳು ಜನತೆಯ ಅತೃಪ್ತಿಯನ್ನು ದುರುಪಯೋಗ ಮಾಡಿ ಬೆಳೆಯಲು ಫಲವತ್ತಾದ ಭೂಮಿಕೆಯನ್ನು ಒದಗಿಸುತ್ತದೆ ಎನ್ನುವ ವಾಸ್ತವದತ್ತ ಎಲ್ಲರೂ ಗಮನ ಹರಿಸಬೇಕು. ಈ ಪರಿಸ್ಥಿತಿ ಬದಲಾಗದೇ ಶಾಂತಿ, ಸಾಮರಸ್ಯ ನೆಲೆಗೊಳ್ಳಲು ಸಾಧ್ಯವಿಲ್ಲ. ಆದುದರಿಂದಲೇ ಹಿಂದುತ್ವದ ಕೋಮುವಾದಿ ಶಕ್ತಿಗಳು ಮತ್ತು ಮುಸ್ಲಿಂ ಮೂಲಭೂತವಾದಿ ಮತ್ತಿತರೆ ಅಂತಹ ಯಾವುದೇ ಶಕ್ತಿಗಳು ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಳ್ಳುವ ಇಡೀ ಪರಿಸ್ಥಿತಿ ಬದಲಾಗದೆ ಹೋದಲ್ಲಿ ಶಾಂತಿ, ಸಾಮರಸ್ಯ ಕದಡುವ ಬೆದರಿಕೆಗಳು ನಿವಾರಣೆಯಾಗುವುದಿಲ್ಲ. ದೇಶಕ್ಕೆ ಭದ್ರತೆ ಒದಗುವುದಿಲ್ಲ. ಇಂತಹ ಮೂಲಭೂತ ಅಂಶಗಳನ್ನು ಪರಿಗಣಿಸದ ಯಾವುದೇ ಕ್ರಮಗಳು, ಅಬ್ಬರದ ಹೇಳಿಕೆಗಳು ಕೇವಲತೋರಿಕೆಯ ತಂತ್ರ ಎನ್ನುವುದರಲ್ಲಿಯೂ ಅನುಮಾನವಿಲ್ಲ. ಅಂದರೆ ಒಂದು ಕಡೆಯಲ್ಲಿ ಇಂತಹ ಶಕ್ತಿಗಳು ನಡೆಸುವ ಕುಕೃತ್ಯಗಳ ಸ್ವರೂಪ, ಪ್ರಮಾಣವನ್ನು ಲಕ್ಷಿಸಿ ಅವುಗಳ ಮೇಲೆ ಕಠಿಣ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವಾಗಲೇ ಮೂಲಭೂತವಾಗಿ ಆ ಶಕ್ತಿಗಳು ಜನತೆಯ ಆತಂಕದ ಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳಲಾರದೆ ಹೋಗುವಂತಹ ವಾತಾವರಣವನ್ನು ಸೃಷ್ಟಿಸುವ ರಾಜಕೀಯ ಕ್ರಮಗಳು ಅತಿ ಮುಖ್ಯವಾಗಿವೆ. ಇದರತ್ತ ಗಮನವನ್ನು ಕೊಡದೆ ಹೋಗುವ ಕ್ರಮಗಳು ಮತ್ತು ಅಬ್ಬರದ ಮಾತುಗಳು ಕೇವಲ ರಾಜಕೀಯ ಸ್ಟಂಟ್‌ಳಾಗಿ ಇರುತ್ತವೆ.
ಇನ್ನೊಂದೆಡೆಯಲ್ಲಿ ಪಿ.ಎಫ್.ಐ ನಂತಹ ಗುರಿಗಳನ್ನು ಹೊಂದಿ ಅಂತಹುದೇ ಮತ್ತು ಅತಿ ದೊಡ್ಡ ರೀತಿಯಲ್ಲಿಯೂ ಬೆದರಿಕೆ ಒಡ್ಡುವಂತಹ ಕೃತ್ಯಗಳನ್ನು ನಡೆಸುತ್ತಿರುವ ಕಾನೂನು, ಸಂವಿಧಾನಕ್ಕೆ ಸವಾಲು ಹಾಕಿರುವ ಹಿಂದುತ್ವವಾದಿ ಶಕ್ತಿಗಳ ಮೇಲೆ ಯಾವುದೇ ಕ್ರಮಗಳನ್ನು ವಹಿಸದೆ ಒಂದರ್ಥದಲ್ಲಿ ಮುಕ್ತಾವಕಾಶಗಳನ್ನು ಕಲ್ಪಿಸಿರುವ ಸರಕಾರದ ಕ್ರಮಗಳನ್ನೂ ಪ್ರಶ್ನಿಸಲಾಗುತ್ತಿದೆ. ಕರ್ನಾಟಕದಲ್ಲಿಯೇ ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹಾಗೇ ಗೋವಿಂದ ಪನ್ಸಾರೆ, ಯಂತಹ ಪ್ರಮುಖ ಪ್ರಗತಿಪರ ಚಿಂತಕರ, ಸಾಮಾಜಿಕ ಕಾರ್ಯಕರ್ತರ ಹತ್ಯೆಯ ಪ್ರಕರಣಗಳಲ್ಲಿ ಇಲ್ಲಿಯವರೆಗೂ ನಿರ್ಣಾಯಕ ನ್ಯಾಯ ದೊರೆತಿಲ್ಲ. ಮತ್ತು ಹತ್ಯೆಯಲ್ಲಿ ಭಾಗಿಯಾದ ಸನಾತನ ಸಂಸ್ಥೆ, ಹಿಂದೂ ಜಾಗೃತಿ ಸಮಿತಿ, ಹಾಗೂ ಇಂತಹುದೇ ಶಾಂತಿ ಕದಡುವ ಕೃತ್ಯಗಳಲ್ಲಿ ಅಭಿನವ ತರುಣ ಭಾರತ ದಂತಹ ಸಂಘಟನೆಗಳ ಮೇಲೆ ನಿರ್ಬಂಧದ ಕಾನೂನು ಕ್ರಮಗಳೇ ಇಲ್ಲ. ವಿಚಾರವಾದಿಗಳ ಹತ್ಯೆಯನ್ನೇ ಗುರಿಯಾಗಿಸಿ ತರಬೇತಿ ಹೊಂದಿರುವ ಕಾರ್ಯಕರ್ತರ ಆ ಸಂಸ್ಥೆಗಳು ಈಗಲೂ ಮುಕ್ತವಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿಜ ಉದ್ದೇಶ ಏನು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ‘ಹಿಂದು ನಾಯಕರ ಕೊಲೆಗೆ ಯೋಜನೆ ರೂಪಿಸಲಾಗಿದೆ, ಅದಕ್ಕೆ ಪ್ರತಿಯಾಗಿ ಮುಸ್ಲಿಂರನ್ನು ಕೊಲೆ ಮಾಡಬೇಕೆಂದು’ ಕರೆ ನೀಡಿದ ಹಿಂದುತ್ವವಾದೀ ನಾಯಕರ ಮೇಲೆ ಇಲ್ಲಿಯವರೆಗೂ ಕ್ರಮಗಳಿಲ್ಲ. ಹೀಗಾಗಿ ಆತಂಕಿತ ಮತ್ತು ದಾಳಿಗೊಳಗಾಗುತ್ತಿರುವ ಸಮುದಾಯಗಳಲ್ಲಿ ವಿಶ್ವಾಸವನ್ನು ಹುಟ್ಟು ಹಾಕಬಲ್ಲದೇ? ಶಾಂತಿ ಕದಡುವ ದ್ವೇಷ ಭಾಷಣ ಮಾಡಿದ, ಗಲಭೆ, ಆಶಾಂತಿ ಸೃಷ್ಟಿಸಿದ ೩೪ ಮೊಕದ್ದಮೆಗಳನ್ನು ಸಂಬಂಧಿಸಿದ ಇಲಾಖೆಗಳ ವಿರೋಧದ ನಂತರವೂ ಕರ್ನಾಟಕ ಸರಕಾರ ಹಿಂಪಡೆದದ್ದು ಯಾವ ಸಂದೇಶ ನೀಡುತ್ತದೆ?
ಈ ಹಿಂದೆಯೂ ಆರ್‌ಎಸ್‌ಎಸ್ ಅನ್ನು ಎರಡು ಬಾರಿ, ‘ಸಿಮಿ’ ಸಂಘಟನೆಯನ್ನು, ಮಾವೋವಾದಿಗಳನ್ನು ನಿಷೇಧಿಸಲಾಗಿತ್ತು. ಆದರೆ ಸರಕಾರ ಹೇಳಿಕೊಂಡ ಆಶಯದಲ್ಲಿ ಅದರ ಪರಿಣಾಮಗಳು ಹೆಚ್ಚೇನೂ ಆಗಲಿಲ್ಲ ಎಂಬುದನ್ನು ಗಮನಿಸಬೇಕು. ಆದ್ದರಿಂದಲೇ ಕೇವಲ ನಿಷೇಧಗಳು ನಿರೀಕ್ಷಿತ ಫಲವನ್ನು ಕೊಡುವುದಿಲ್ಲ. ಬದಲಾಗಿ ಶಾಂತಿ, ಸಾಮರಸ್ಯ ಮತ್ತು ದೇಶದ ಐಕ್ಯತೆ ಸುಭದ್ರತೆಗೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ರಾಜಕೀಯವಾದ ಮತ್ತು ಆಡಳಿತಾತ್ಮಕವಾದ ಕ್ರಮಗಳನ್ನು ಕೈಗೊಂಡು ಜನತೆಯನ್ನು ಜಾಗೃತಗೊಳಿಸಬೇಕು ಎನ್ನುವ ಅಂಶ ಸೂಕ್ತವಾಗಿದೆ.
ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ. ನಂತಹ ಮೂಲಭೂತವಾದಿ ಸಂಘಟನೆಗಳ ಕುರಿತಾದಂತೆ ಹಲವಾರು ಪ್ರಗತಿಪರರಲ್ಲಿ ತಾತ್ವಿಕವಾದ ಮತ್ತು ಪ್ರಾಯೋಗಿಕವಾದ ಸಂಗತಿಗಳ ಕುರಿತು ಗೊಂದಲಗಳು ಇವೆ. ಮುಸ್ಲಿಂ ಅಥವಾ ಅಲ್ಪಸಂಖ್ಯಾತ ಮೂಲಭೂತವಾದಿ ಶಕ್ತಿಗಳು ಬಹು ಸಂಖ್ಯಾತ ಹಿಂದುತ್ವವಾದಿ ಶಕ್ತಿಗಳ ದಾಳಿಗಳ ಕೃತ್ಯಗಳು ಪ್ರತಿಕ್ರಿಯೆಯಾಗಿ ರೂಪುಗೊಂಡಿವೆ. ಅಂತಹ ಶಕ್ತಿಗಳು ಬಹು ಸಂಖ್ಯಾತರ ಕೋಮುವಾದಿಗಳನ್ನು ಎದುರಿಸಲು ಹೋರಾಡುತ್ತಿರುವುದರಿಂದ ಎರಡು ಶಕ್ತಿಗಳನ್ನು ಸಮಾನವಾಗಿ ಕಾಣುವುದು ಸರಿಯಲ್ಲ ಎನ್ನುವ ಒಂದು ಚಿಂತನೆ ಹಲವಾರು ಪ್ರಗತಿಪರರಲ್ಲಿ ಇದೆ.‘ಮಾವೋವಾದಿ’ಗಳುತಾತ್ವಿಕವಾಗಿ, ಸಂಘಟನಾತ್ಮಕವಾಗಿಯೂ ಪಿ.ಎಫ್.ಐ. ನಂತಹ ಶಕ್ತಿಗಳನ್ನು ಸಮರ್ಥಿಸುತ್ತಾರೆ. ಹಿಂದುತ್ವದ ಕೋಮುವಾದಿಗಳು, ಮುಸ್ಲಿಂ ಮೂಲಭೂತವಾದಿಗಳು ಇಬ್ಬರ ಮೂಲಭೂತ ದೃಷ್ಟಿ, ಬಹುತೇಕ ಕಾರ್ಯಾಚರಣೆಗಳು ಒಂದೇ ಆಗಿದೆ ಮತ್ತು ಪರಸ್ಪರ ಪೂರಕವಾದ ಶಕ್ತಿಗಳೇ ಆಗಿರುವುದನ್ನು ಅಂತಹವರು ನಿರ್ಲಕ್ಷಿಸುತ್ತಾರೆ. ಯಾವುದೇ ಮತೀಯ ಅಥವಾ ಮೂಲಭೂತವಾದಿ ಶಕ್ತಿಗಳು ನಿಜಕ್ಕೂ ಆಯಾ ಧರ್ಮಗಳ ಜನತೆಯ ಪ್ರತಿನಿಧಿಗಳು ಆಗಿರುವುದಿಲ್ಲ ಹಾಗೂ ಸಂರಕ್ಷಕರೂ ಆಗಿರುವುದಿಲ್ಲ ಎನ್ನುವುದನ್ನು ನಾವು ಅರಿಯಬೇಕು. ಅಂತಿಮದಲ್ಲಿ ಇವು ಆಳುವ ವರ್ಗಗಳ ಹಿತಾಸಕ್ತಿಗಳಿಗೆ ಅನುಗುಣವಾಗಿಯೇ ಕಾರ್ಯಾಚರಣೆ ನಡೆಸುತ್ತವೆ ಮತ್ತು ಅಂತಹ ಉದ್ದೇಶಗಳನ್ನು ಈಡೇರಿಸುತ್ತವೆ ಎನ್ನುವ ಎಚ್ಚರಿಕೆಯೂ ನಮಗಿರಬೇಕು. ಇಲ್ಲದೇ ಹೋದಲ್ಲಿ ಮತನಿರಪೇಕ್ಷಿತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿರುವ ಭಾರತವನ್ನು, ಅದರ ಸಾರ್ವಭೌಮತೆ, ಸುಭದ್ರತೆಯನ್ನು ಉಳಿಸಿಕೊಳ್ಳಲಾಗುವುದಿಲ್ಲ. ಧರ್ಮದಾಧಾರಿತ ದೇಶಗಳೆಂದು ಘೋಷಿಸಿಕೊಂಡ ಯಾವ ರಾಷ್ಟ್ರಗಳೂ ಶಾಂತಿ, ನೆಮ್ಮದಿ, ಸಮಾನತೆಯನ್ನು ಜನತೆಗೆ ನೀಡಿಲ್ಲ ಎಂಬುದರಿಂದ ವಾದರೂ ಪಾಠ ಕಲಿಯಬೇಕು.