ಗುರುರಾಜ ದೇಸಾಯಿ
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರ್ತಾ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾಗದಿದ್ದರೂ ಭಾರತದಲ್ಲಿ ಯಾಕೆ ತೈಲ ಬೆಲೆ ಹೆಚ್ಚಾಗುತ್ತಿದೆ? ಸರಕಾರಗಳ ಬೊಕ್ಕಸವನ್ನು ತುಂಬುವುದಕ್ಕಾಗಿ ತೈಲ ಬೆಲೆ ಹೆಚ್ಚಳವಾಗ್ತಿದೆಯಾ? ತೈಲ ಬವಣೆಯ ಹೊಣೆ ಯಾರದ್ದು? ಎಂಬ ಪ್ರಶ್ನೆ ಈಗ ಎದ್ದಿದೆ.
ಕಳೆದ 2 ವರ್ಷಗಳಲ್ಲಿ ಪೆಟ್ರೋಲ್ ದರ ಇದುವರೆಗಿನ ಎಲ್ಲ ದಾಖಲೆಗಳನ್ನೂ ಮುರಿದಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಕರ್ನಾಟಕದಲ್ಲಿ 1 ಲೀಟರ್ ಪೆಟ್ರೋಲ್ ದರ 100 ರೂ. ಗಡಿ ದಾಟಿ 101 ರೂ.ನತ್ತ ಸಾಗಿದೆ. ಇದು ಇದುವರೆಗೂ ದಾಖಲಾದ ಅತಿ ಹೆಚ್ಚಿನ ಪೆಟ್ರೋಲ್ ಬೆಲೆ ಅಂತಾ ಹೇಳಲಾಗ್ತಾಇದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ, ಚಿಕ್ಕಮಗಳೂರು, ಹೊಸಪೇಟೆಯಲ್ಲಿ ಪೆಟ್ರೋಲ್ ದರ ಶತಕವನ್ನು ಬಾರಿಸಿದ್ರೆ, ಉಳಿದ ಜಿಲ್ಲೆಗಳಲ್ಲಿ ಶತಕದ ಸನಿಹ ಬಂದಿದೆ. ಪಂಚ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ 18 ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗಿರಲಿಲ್ಲ. ಆ ಬಳಿಕ ಕಳೆದ ಮೇ ತಿಂಗಳಿನ 4ನೇ ತಾರೀಕಿನಿಂದ ಇಂದಿನ ದಿನದ ವರೆಗೆ ಇಂಧನ ದರ ಏರುತ್ತಲೇ ಇದೆ.
ಇಂಧನ ದರ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಮತ್ತು ಸಿಪಿಐಎಂ ಪಕ್ಷಗಳು ಹೋರಾಟಕ್ಕೆ ಕರೆಯನ್ನು ನೀಡಿವೆ. ಸಿಪಿಐಎಂ ರಾಜ್ಯವ್ಯಾಪಿ ಹೋರಾಟವನ್ನು ನಡೆಸಿದ್ದು, ಕೇಂದ್ರ ಸರಕಾರದ ಈ ಜನವಿರೋಧಿ ಹಾಗೂ ಲೂಟಿಕೋರ ನೀತಿಯನ್ನು ಬಲವಾಗಿ ಖಂಡಿಸಿದೆ. ಇಂಧನ ದರ ಏರಿಕೆ ಸಹಜವಾಗಿಯೇ ಎಲ್ಲ ಅಗತ್ಯ ವಸ್ತುಗಳ ಬೆಲೆಗಳ ಏರಿಕೆಗೆ ಕಾರಣವಾಗಿದೆ. ಜಾಗತಿಕವಾಗಿ ಕಚ್ಛಾ ತೈಲದಲ್ಲಿ ಯಾವುದೇ ಬೆಲೆ ಏರಿಕೆ ಆಗದಿದ್ದರೂ ದೇಶದಲ್ಲಿ ಈ ಪ್ರಮಾಣದಲ್ಲಿ ಇವುಗಳ ಬೆಲೆಗಳು ಏರಿಕೆಯಾಗಲೂ ಕೇಂದ್ರ ಸರಕಾರವೇ ನೇರ ಹೊಣೆಗಾರನಾಗಿದೆ. ಇದು ಜನತೆಯನ್ನು ದೊಡ್ಡ ಪ್ರಮಾಣದಲ್ಲಿ ಲೂಟಿಗೊಳಪಡಿಸುವ ವಿಚಾರವಾಗಿದೆ ಅಂತಾ ಆರೋಪಿಸಿ ಸಿಪಿಐಎಂ ರಾಜ್ಯದಾದ್ಯಂತ ಪ್ರತಿರೋಧವನ್ನು ವ್ಯಕ್ತಪಡಿಸಿದೆ.
ತೈಲ ಬೆಲೆ ಹೆಚ್ಚಳ ಕಾರು,ಲಾರಿ, ಅಟೋ, ದ್ವೀಚಕ್ರ ವಾಹನ ಮಾಲೀಕರಿಗಷ್ಟೆ ಪರಿಣಾಮ ಬೀರ್ತಾ ಇಲ್ಲಾ, ದೇಶದ ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಅನ್ವಯ ಆಗ್ತಾ ಇದ್ದು, ರೈತನಿಂದ ಗ್ರಾಹಕನವರೆಗೂ ಇದರ ಬಿಸಿ ತಟ್ಟತಾ ಇದೆ. ತೈಲ ಬೆಲೆ ಹೆಚ್ಚಳ ಅಗತ್ಯ ವಸ್ತುಗಳ ಮೇಲೆ ಪರಿಣಾವನ್ನು ಬೀರಿದ್ದು, ಅಡುಗೆ ಎಣ್ಣೆ ದರ ಲೀಟರ್‌ಗೆ 180 ರೂ. ತಲುಪಿದ್ದರೆ, ತೊಗರಿಬೇಳೆ ಕೆಜಿಗೆ 160 ರೂ. ಆಸುಪಾಸಿಗೆ ತಲುಪಿದೆ. ಸಿಮೆಂಟ್, ಸ್ಟೀಲ್ ಬೆಲೆ ಕೂಡ ಗಗನಕ್ಕೇ ಏರ್ತಾ ಇದೆ. ಉತ್ಪಾದನೆ ವೆಚ್ಚ ಕಡಿಮೆ ಇದ್ದರೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದಾಗಿ ಸಾಗಣಿಕೆ ಇನ್ನಿತರ ವೆಚ್ಚ ಹೆಚ್ಚುತ್ತಿದೆ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಜನಸಾಮಾನ್ಯರಿಗೆ ನೇರವಾಗಿ ಹೊಡೆತ ನೀಡುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಳ ಮಾಡಲಾಗುತ್ತೆ. ಆದರೆ ಈಗ ಕ್ರೂಡ್ ಆಯಿಲ್ ದರ ನಾಲ್ಕು ತಿಂಗಳಿಂದ ಯಥಾಸ್ಥಿತಿ ಇದೆ. ಆದರೆ ಭಾರತದಲ್ಲಿ ಮಾತ್ರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗುತ್ತಿದೆ. ಏನು ಇದಕ್ಕೆ ಕಾರಣ. ಅಲ್ಲಿ ದರ ಹೆಚ್ಚಳವಾಗಿ, ಇಲ್ಲಿಯೂ ಏರಿಸಿದ್ರೆ ಸಾಮಾನ್ಯವಾಗಿ ಒಪ್ಪಿಕೊಳ್ಳಬಹುದಾದ ವಿಚಾರವಾಗಿತ್ತು. ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಏರಿಕೆಯಾಗದೆ ದೇಶದಲ್ಲಿ ಮಾತ್ರ ಇಂಧನ ದರ ಹೆಚ್ಚಳವಾಗ್ತಿರಿದೋ ಯಾಕೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಆದರೆ ಕೇಂದ್ರ ಸರಕಾರ ಇದಕ್ಕೆ ಕೊಡುತ್ತಿರುವ ಉತ್ತರ ಏನು ಅಂದ್ರೆ 80% ರಷ್ಟು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಇಲ್ಲಿನ ಗ್ರಾಹಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಅಂತಾ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿಕೆಯನ್ನು ನೀಡಿದ್ದಾರೆ. ನಿಜಕ್ಕೂ ಇದು ಒಪ್ಪಿಕೊಳ್ಳಬಹುದಾದ ಅಬಿಪ್ರಾಯವಂತೂ ಖಂಡಿತಾ ಅಲ್ಲ ಯಾಕೆ ಅಂದ್ರೆ ಅವರು ಸುಳ್ಳು ಹೇಳ್ತಾ ಇದ್ದಾರೆ. ಇಂದನ ದರ ಹೆಚ್ಚಳಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರ ಹಾಕುತ್ತಿರುವ ತೆರಿಗೆಯಿಂದಾಗಿ ಏರಿಕೆಯಾಗ್ತಿವೆ. ಈ ತೈಲ ತೆರಿಗೆ ಸರಕಾರದ ಬೊಕ್ಕಸವನ್ನು ತುಂಬಸ್ತಾ ಇದೆ. ಈ ಕುರಿತಾಗಿ ಅಂಕಿ ಅಂಶಗಳಿಂದ ಕೂಡಿರುವ ರಿಪೋರ್ಟ್‌ನ್ನು ಕೆಳಗೆ ನೀಡಲಾಗಿದೆ.
ತೈಲೋತ್ಪನ್ನ ದರ ನಿಯಂತ್ರಣ ಸಿಗದ ಹಾಗೆ ಏರಿಕೆಯಾಗುತ್ತಿದ್ದರೆ, ಅತ್ತ ಸರ್ಕಾರದ ಬೊಕ್ಕಸವೂ ಭರ್ತಿಯಾಗುತ್ತಿದೆ. ಕಳೆದ 6 ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಸಂಗ್ರಹ ಶೇ 300ರಷ್ಟು ಏರಿಕೆಯಾಗಿದೆ. ಇದು ಯಾರೋದು ತಜ್ಷರು ನೀಡಿದ ವರದಿ ಅಲ್ಲ ಕೇಂದ್ರ ಸರಕಾರ ಲೋಕಸಭೆಗೆ ನೀಡಿದ ಮಾಹಿತಿ ಇದಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ವರ್ಷದಲ್ಲಿ ಅಂದರೆ 2014–15 ರಲ್ಲಿ ಕೇಂದ್ರವು ಪೆಟ್ರೋಲ್‌ನಿಂದ ₹29,279 ಕೋಟಿ, ಮತ್ತು ಡೀಸೆಲ್‌ನಿಂದ ₹42,881 ಕೋಟಿ ತೆರಿಗೆಯನ್ನು ಸಂಗ್ರಹಿಸಿತ್ತು.
2020–21ರ ಹಣಕಾಸು ವರ್ಷದ ಮೊದಲ ಹತ್ತು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್, ಮತ್ತು ಡೀಸೆಲ್‌ನಿಂದ ₹2.94 ಲಕ್ಷ ಕೋಟಿ ಸಂಗ್ರಹಿಸಿದೆ. ಅದೇ ರೀತಿ ನೈಸರ್ಗಿಕ ಅನಿಲದ ಮೇಲಿನ ತೆರಿಗೆಯಿಂದಲೂ ದೊಡ್ಡ ಮೊತ್ತದ ಸಂಪನ್ಮೂಲ ಸಂಗ್ರಹವಾಗಿದೆ. 2014–15ನೇ ಸಾಲಿನಲ್ಲಿ ₹74,158 ಕೋಟಿ ಇತ್ತು. ಇದು 2020 ಏಪ್ರಿಲ್‌ನಿಂದ 2021 ಜನವರಿ ಅವಧಿಯಲ್ಲಿ ₹2.95 ಲಕ್ಷ ಕೋಟಿಗೆ ಏರಿಕೆಯಾಗಿದೆ. ಏಳು ವರ್ಷಗಳ ಹಿಂದೆ ಶೇ 5.4ರಷ್ಟಿದ್ದ ವರಮಾನವು ಪ್ರಸ್ತುತ ಶೇ 12.2ಕ್ಕೆ ಏರಿಕೆಯಾಗಿದೆ.
2014ರಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಮೇಲೆ ₹9.48 ಸುಂಕ ವಿಧಿಸಲಾಗುತ್ತಿತ್ತು. ಪ್ರಸ್ತುತ ಅದು ₹32.90ಕ್ಕೆ ಏರಿಕೆಯಾಗಿದೆ. ಡೀಸೆಲ್ ಸಹ ₹3.56ರಿಂದ ₹31.80ಗೆ ಏರಿಕೆ ಕಂಡಿದೆ. ಬಹುತೇಕ ಎಲ್ಲ ರಾಜ್ಯ ಸರ್ಕಾರಗಳೂ ಕೇಂದ್ರದ ಮಾದರಿಯನ್ನು ಅನುಸರಿಸುತ್ತಿವೆ. ಕೇಂದ್ರ ವಿಧಿಸುವಷ್ಟೇ ತೆರಿಗೆಯನ್ನು ರಾಜ್ಯ ಸರ್ಕಾರಗಳೂ ವಿಧಿಸುವ ಮೂಲಕ ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಿವೆ. ಕರ್ನಾಟಕದಲ್ಲಿ ಮೇ ತಿಂಗಳೊಂದರಲ್ಲೆ 1620 ಕೋಟಿ ರೂ ಸಂಗ್ರಹವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಧಿಸುವ ತೆರಿಗೆಯನ್ನು ವಾಹನ ಸವಾರರು ಪಾವತಿಸಬೇಕಿದೆ. ಹೀಗಾಗಿ ಪ್ರತೀ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಸರಿಸುಮಾರು ಶೇ 60ರಷ್ಟು ತೆರಿಗೆಯನ್ನು ಹೇರಲಾಗುತ್ತಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸತತವಾಗಿ ಕ್ರೂಡ್ ಆಯಿಲ್ ದರ ಕುಸಿತವಾಗುತ್ತಿದೆ. 2014 ರಲ್ಲಿ 96 ಡಾಲರ್ ಇದ್ದದು, 2015-16 ರಲ್ಲಿ 46 ಡಾಲರ್‌ಗೆ ಕುಸಿತ ಕಂಡಿತ್ತು, 2018 ರಲ್ಲಿ 71 ಡಾಲರ್ ಗೆ ಏರಿಕೆಯನ್ನು ಕಂಡರೆ, 2020 ರಲ್ಲಿ 40 ಡಾಲರ್ ಗೆ ಕುಸಿದಿತ್ತು ಈಗ 2021 ರಲ್ಲಿ ಜನವರೆಯಿಂದ ಇಲ್ಲಿಯವರೆಗೆ 70 ಡಾಲರ್ ನಷ್ಟಿದೆ. ಆದರೆ 2014 ರಿಂದ ಇಂಧನ ಬೆಲೆಗಳಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವುದನ್ನು ನಾವಿಲ್ಲಿ ಗಮನಿಸಬೇಕಾಗಿದೆ.
2014 ರಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ಕ ಸೆಂಟ್ರಲ್ ಟ್ಯಾಕ್ಸ್ 10. ರೂ 39 ಪೈಸೆ ಇದ್ರೆ, ಸ್ಟೇಟ್ ಟ್ಯಾಕ್ಸ್ 11. ರೂ, 90 ಪೈಸೆ ಇತ್ತು. 2021 ರಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 32 ರೂ 98 ಪೈಸೆ ಸೆಂಟ್ರಲ್ ಟ್ಯಾಕ್ಸ್ ಕಟ್ಟಲಾಗುತ್ತಿದೆ. ಸ್ಟೇಟ್ ಟ್ಯಾಕ್ಸ್ ಗೆ 19 ರೂ 92 ಪೈಸೆ ಕಟ್ಟಲಾಗುತ್ತಿದೆ. ಅಂದ್ರೆ 217.42 ರಷ್ಟು ಸೆಂಟ್ರಲ್ ಟ್ಯಾಕ್ಸ್ ಹೆಚ್ಚಳವಾಗಿದೆ. 67.39 % ಸ್ಟೇಟ್ ಟ್ಯಾಕ್ಸ್ ಹೆಚ್ಚಳವಾಗಿದೆ.
ಡಿಸೈಲ್ ಮೇಲಿನ ಸೆಂಟ್ರಲ್ ಟ್ಯಾಕ್ಸ್ 2014 ರಲ್ಲಿ 4 ರೂ 50 ಪೈಸೆ ಇದ್ದರೆ 2021 ರಲ್ಲಿ 31 ರೂ 83 ಪೈಸೆ ಹೆಚ್ಚಳವಾಗಿದೆ. ಅಂದರೆ ಶೆ, 607,33% ಏರಿಕೆ ಕಂಡಿದೆ. ಸ್ಟೇಟ್ ಟ್ಯಾಕ್ಸ್ 2014 ರಲ್ಲಿ6 ರೂ 61 ಪೈಸೆ ಇದ್ರೆ 2021 ರಲ್ಲಿ 11. 22 ರಷ್ಟು ಹೆಚ್ಚಾಗಿದೆ. ಅಂದರೆ ಶೆ, 69.74 ರಷ್ಟು ಹೆಚ್ಚಾಗಿದೆ. ಮೋದಿ ಸರಕಾರದ ಕಾಲಾವಧಿಯಲ್ಲಿ ಸಾರ್ವಕಾಲಿಕ ಏರಿಕೆಯನ್ನು ಪೆಟ್ರೋಲ್ ಮತ್ತು ಡಿಸೇಲ್ ಕಂಡಿವೆ ಎಂಬುದಕ್ಕೆ ಇದಕ್ಕಿಂತ ಬೆರೆ ಸಾಕ್ಷಿ ಬೇಕೆ?
ಹಾಗಾದ್ರೆ ಪೆಟ್ರೋಲ್ ನ ಮೂಲ ದರ ಎಷ್ಟು ಎನ್ನುವ ಪ್ರಶ್ನೆ ಮೂಡೋದು ಸಹಜ. ಇವತ್ತಿನ ದಿನಕ್ಕೆ ಲೆಕ್ಕವನ್ನು ಹಾಕಿ ಹೇಳುವುದಾದರೆ. ಬೆಂಗಳೂರಿನಲ್ಲಿ ಇವತ್ತಿನ ಪೆಟ್ರೋಲ್ ದರ 98.55 ರೂ ಇದೆ. ಇದರಲ್ಲಿ ಪೆಟ್ರೋಲ್ ನ ಮೂಲ ದರ ಎಷ್ಟು ಅಂದ್ರೆ 35 ರಾಜ್ಯದ ತೆರಿಗೆ 26 ರೂ, ಕೇಂದ್ರದ ತೆರಿಗೆ 34 ರೂ, ಇನ್ನೂ ಡೀಲರ್ ಕಮೀಷನ್ ಸೇರಿ 98.55 ರೂ ಆಗುತ್ತದೆ. ಕಚ್ಚಾ ತೈಲ ದರ ಬ್ಯಾರಲ್‌ಗೆ 120 ಡಾಲರ್ ಇದ್ದಾಗ ಪೆಟ್ರೋಲ್ ಒಂದು ಲೀಟರ್‌ಗೆ 48 ರೂ ಗೆ ಸಿಗುತ್ತಿತ್ತು. ಈಗ ಕಚ್ಚಾ ತೈಲ ದರ ಬ್ಯಾರಲ್‌ಗೆ 70 ಡಾಲರ್ ಇದೆ, ಪೆಟ್ರೋಲ್ ದರ 99 ರೂ ಯನ್ನು ದಾಟಿದೆ’ ಆ ಲೆಕ್ಕಕ್ಕೆ ಹೋಲಿಕೆ ಮಾಡಿದ್ರೆ ಪೆಟ್ರೋಲ್ ದರ ಕಡಿಮೆ ಯಾಗಬೇಕಿತ್ತು. ಅಬ್ಬಬ್ಬ ಅಂದ್ರೆ 48 ರಿಂದ 52 ರೂ ಸಿಗಲು ಸಾಧ್ಯ ಇತ್ತು. ಆದರೆ ಕೇಂದ್ರ ಮತ್ತು ರಾಜ್ಯಗಳು ತೆರಿಗೆಯನ್ನು ಹೆಚ್ಚಳ ಮಾಡುತ್ತರುವ ಕಾರಣ ಇಂದನ ದರ ಹೆಚ್ಚಾಗುತ್ತಿದೆ. ಇತ್ತ ತೈಲ ಆದಾಯದಿಂದ ಸರಕಾರದ ಬೊಕ್ಕಸ ತುಂಬುತ್ತಿದ್ದರೆ. ಜನಸಾಮಾನ್ಯರು ಬವಣೆ ಪಡುವಂತಾಗಿದೆ. ಇದರ ಹೊಣೆಯನ್ನು ಕೇಂದ್ರ ಸರಕಾರವೇ ಹೊರಬೇಕಿದೆ.
ಬೆಂಗಳೂರಿನಲ್ಲಿ ಜೂನ್ 2020 ರಿಂದ ಅಂದ್ರೆ ಒಂದು ವರ್ಷದಿಂದ ಸತತವಾಗಿ ಏರಿಕೆಯನ್ನು ಕಾಣುತ್ತಿದೆ. ಜೂನ್ 2020 ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ನದರ 73.55 ಇದ್ರೆ, ಡಿಸೆಂಬರ್ 2020 ರಂದು 83.69 ರಷ್ಟು ಇತ್ತು. ಜೂನ್ 9 2021 ಕ್ಕೆ 98.55 ಇದೆ. ಹೀಗಿದ್ದಗಲೂ ಕೂಡ ಕೇಂದ್ರ ಸರಕಾರ ಯಾಕೆ ದಾರಿ ತಪ್ಪಸ್ತಾ ಇದೆ. ತೈಲ ನಿಯಂತ್ರಣವನ್ನು ಮಾಡೋದಕ್ಕೆ ಕೇಂದ್ರ ಸರಕಾರಕ್ಕೆ ಸಾಧ್ಯವಿಲ್ಲವೆ ಎನ್ನುವಂತಹ ಪ್ರಶ್ನೆಗಳು ಮೂಡುತ್ತವೆ. ಭಾರತದಲ್ಲಿ ತೈಲ ದರವು ಸರ್ಕಾರದ ನಿಯಂತ್ರಣದಲ್ಲಿ ಇಲ್ಲ ಎನ್ನುವುದು ನಿಜವೇ ಆದರೂ ವಾಸ್ತವದಲ್ಲಿ ಹಾಗೆ ನಡೆಯುತ್ತಿಲ್ಲ. ಕೇಂದ್ರ ಸರಕಾರ ತೆರೆಗೆ ಹೆಚ್ಚಳ ಮಾಡಿದ ತಕ್ಷಣವೇ ಭಾರತದಲ್ಲಿ ಇಂಧನ ಬೆಲೆ ಹೆಚ್ಚಳವಾಗುತ್ತದೆ.
ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭೆಗಳಿಗೆ ಏಪ್ರಿಲ್–ಮೇ ತಿಂಗಳಲ್ಲಿ ಚುನಾವಣೆ ನಡೆದಿತ್ತು. ಚುನಾವಣಾ ಸಂದರ್ಬದಲ್ಲಿ ತೈಲ ಬೆಲೆ ಹೆಚ್ಚಿಸಿದ್ರೆ ಗೆಲ್ಲೋದಕ್ಕೆ ಕಷ್ಟ ಆಗುತ್ತೆ ಎಂಬುದನ್ನು ಅರಿತ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಫೆಬ್ರುವರಿ 23 ರಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಗೆ ತಡೆಯನ್ನು ಹಾಕಿತ್ತು. ಮೇ 2ರಂದು ಚುನಾವಣೆಯ ಫಲಿತಾಂಶ ಹೊರಬಿತ್ತು. ಮೇ 4ರಂದು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆರಂಭವಾಯಿತು. ಚುನಾವಣೆಯ ಸಂದರ್ಭದಲ್ಲಿ ಈ ಹಿಂದೆಯೂ ತೈಲ ದರ ಏರಿಕೆ ಸ್ಥಗಿತಗೊಂಡ ಉದಾಹರಣೆ ಇದೆ. ತೈಲ ದರವು ಸರ್ಕಾರದ ನಿಯಂತ್ರಣದಲ್ಲಿ ಇಲ್ಲದೇ ಇದ್ದರೂ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಕೇಂದ್ರ ಸರಕಾರದ ಬಳಿ ಉತ್ತರ ಇಲ್ಲ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಸಂಗ್ರಹದಲ್ಲಿ 300% ರಷ್ಟು ಹೆಚ್ಚಳವಾಗಿದೆ ಅಂದ್ರೆ ಯೋಚನೆ ಯೋಚನೆ ಮಾಡಬೇಕಾದ ವಿಚಾರವೇ ಹೌದು. ನಿಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳೋದಕ್ಕೆ ಜನ ಸಾಮಾನ್ಯರ ಮೇಲೆ ಯಾಕೆ ಹೊರೆ ಹಾಕ್ತೀರಿ,? ಜನರಿಂದ ಸಂಗ್ರಹಿಸಿದಂತಹ ಆ ತೆರಿಗೆಯ ಹಣದಲ್ಲಿ ಜನರಿಗೆ ಯಾವುದಾದರೂ ಅನುಕೂಲವಾಗುವ ಕೆಲಸ ಮಾಡಿದ್ದೀರಾ? ಮೋದಿ ಮತ್ತು ಯಡಿಯೂರಪ್ಪನವರೇ ಸಾಕು ಮಾಡಿ ಈ ದೌರ್ಜನ್ಯವನ್ನ. ಕರೊನಾ ಲಾಕ್ಡೌನ್ನಿಂದಾಗಿ ಉದ್ಯೋಗ ನಷ್ಟ ಜನ ಸಂಕಷ್ಟ ಅನುಭವಿಸ್ತಾ ಇದ್ದರೆ, ಇಂತಹ ಸಂಕಷ್ಟದ ಸಮಯದಲ್ಲಿ ಹೆಚ್ಚಿನ ಟ್ಯಾಕ್ಸ್ ಹಾಕಿ ಯಾಕೆ ಜನರ ಹೊಟ್ಟೆ ಹೊಡೀತಿರಿ, ನಿಮ್ಮ ಟ್ಯಾಕ್ಸ್ ನ ಧಾಹಕ್ಕೆ ಜನ ಇನ್ನಷ್ಟು ಸಂಕಷ್ಟ ಅನುಭವಿಸಬೇಕಾಗುತ್ತೆ? ಅಗತ್ಯ ವಸ್ತುಗಳ ಬೆಲ್ ಹೆಚ್ಚಳ ಆದ್ರೆ ಜನ ಹಸಿವಿನಿಂದ ಸಾಯ್ತಾರೆ, ಜನ ಅಧಿಕಾರ ಕೊಟ್ಟಿರೋದು ಅವರನ್ನು ಅಭಿವೃದ್ಧಿ ಮಾಡೋದಕ್ಕೆ ಅನ್ನೋದನ್ನ ಮಾತ್ರ ಆಳುವ ಸರಕಾರಗಳು ಮರೆಯಬಾರದು.