ಪ್ರತಿ ದಿನವೂ ನಡೆಯುತ್ತಿರುವ ಏರಿಕೆಗಳಿಂದಾಗಿ ಅನೇಕ ನಗರಗಳಲ್ಲಿ ಪೆಟ್ರೋಲಿನ ಲೀಟರ್ ಒಂದರ ಬೆಲೆ 90 ರೂಪಾಯಿ ದಾಟಿದ್ದು ಇದೇ ವೇಗದಲ್ಲಿ ಮುಂದುವರಿದರೆ ಕೆಲವೇ ದಿನಗಳಲ್ಲಿ ನೂರು ರೂಪಾಯಿ ದಾಟಲಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ರಚನೆಯು ಇದಕ್ಕೆ ಪ್ರಮುಖ ಕಾರಣವೆಂಬುದು ಸ್ಪಷ್ಟ. ಸರ್ಕಾರದ ಒಟ್ಟಾರೆ ಆದಾಯ ಕುಸಿಯುತ್ತಿರುವ ಸಂದರ್ಭದಲ್ಲಿ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಕೇಂದ್ರ ಸರ್ಕಾರದ ಆದಾಯದ ಒಂದು ಪ್ರಮುಖ ಮೂಲವಾಗಿದೆ. ಇದು ಮೋದಿ ಸರ್ಕಾರದ ಹೇಯ ಜನ–ವಿರೋಧಿ ಧೋರಣೆಯ ಭಾಗವೇ ಆಗಿದೆ. ಸರ್ಕಾರ, ಸೂಪರ್–ಸಿರಿವಂತರು, ಈ ಅವಧಿಯಲ್ಲಿ ಭಾರಿ ಲಾಭ ಮಾಡಿಕೊಂಡಿರುವ ಕಾರ್ಪೊರೇಟ್ಗಳು ಹೆಚ್ಚು ತೆರಿಗೆ ತೆರುವಂತೆ ಕೇಳಬೇಕಿತ್ತು. ಅದರ ಬದಲಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಇನ್ನಷ್ಟು ತೆರಿಗೆ ಹೇರಿ ಜನತೆಯ ಅಲ್ಪ–ಸ್ವಲ್ಪ್ಟ ಸಂಪನ್ಮೂಲಗಳನ್ನೂ ಕೊಳ್ಳೆ ಹೊಡೆಯುವ ಧೋರಣೆಯನ್ನು ನಿಲ್ಲಿಸುವಂತೆ ಒತ್ತಡ ಹಾಕಬೇಕಾಗಿದೆ.
ಪ್ರಕಾಶ ಕಾರಟ್
ಕರೊನಾ ಸಾಂಕ್ರಾಮಿಕದಿಂದ ಹೆಚ್ಚಿದ ನಿರುದ್ಯೋಗ ಮತ್ತು ಆದಾಯ ಖೋತಾದಿಂದಾಗಿ ಈಗಾಗಲೇ ಸಮಸ್ಯೆಗಳ ಸುಳಿಯಲ್ಲಿ ನಲುಗುತ್ತಿರುವ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಅವಿರತ ಏರಿಕೆಯಿಂದಾಗಿ ಇನ್ನಷ್ಟು ಸಂಕಷ್ಟ ಎದುರಾಗಿದೆ.
ಪ್ರತಿ ದಿನವೂ ತೈಲ ಬೆಲೆ ಏರುತ್ತಿರುವುದರಿಂದ ಅನೇಕ ನಗರಗಳಲ್ಲಿ ಪೆಟ್ರೋಲಿನ ಲೀಟರ್ ಒಂದರ ಬೆಲೆ 90 ರೂಪಾಯಿ ದಾಟಿದ್ದು ಇದೇ ವೇಗದಲ್ಲಿ ಮುಂದುವರಿದರೆ ಕೆಲವೇ ದಿನಗಳಲ್ಲಿ ನೂರು ರೂಪಾಯಿ ದಾಟಲಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳ ಏರಿಕೆಯನ್ನು ನೆಪವಾಗಿಟ್ಟುಕೊಂಡು ಕೇಂದ್ರ ಸರ್ಕಾರ ಮತ್ತು ತೈಲ ಕಂಪೆನಿಗಳು ಈ ದರ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿವೆ. ಇದೊಂದು ಕಪಟತನದ ಸಮರ್ಥನೆಯಾಗಿದೆ. ವಾಸ್ತವ ಸಂಗತಿಯೇನೆಂದರೆ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅತಿ ದುಬಾರಿ ಕೇಂದ್ರೀಯ ತೆರಿಗೆಗಳೇ ಈ ಹೊರೆಗೆ ಪ್ರಮುಖ ಕಾರಣವಾಗಿವೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
2014-15 ಮತ್ತು 2020-21ರ ನಡುವೆ, ಭಾರತ ಖರೀದಿಸುವ ಕಚ್ಚಾ ತೈಲಗಳ ಸರಾಸರಿ ಬೆಲೆ ಶೇಕಡ 17.6ರಷ್ಟು ಹೆಚ್ಚಾಗಿದೆ. ಅದೇ ಅವಧಿಯಲ್ಲಿ, ಪೆಟ್ರೋಲ್‌ನ ಸರಾಸರಿ ಚಿಲ್ಲರೆ ಮಾರಾಟ ಬೆಲೆ ಶೇಕಡ 55.3 ಹಾಗೂ ಡೀಸೆಲ್ ಬೆಲೆ ಶೇಕಡ 72.5ರಷ್ಟು ಏರಿಕೆಯಾಗಿದೆ. ಜಾಗತಿಕ ಬೆಲೆಗಳ ಮಟ್ಟಕ್ಕಿಂತ ಚಿಲ್ಲರೆ ಮಾರಾಟ ದರ ಬಹಳ ಪಟ್ಟು ಅಧಿಕವಾಗಿದೆ ಎನ್ನುವುದು ಕಣ್ಣಿಗೆ ರಾಚುವಂತಿದೆ.
ಕೇಂದ್ರ ಸರ್ಕಾರದ ಅಬ್ಕಾರಿ ಸುಂಕಗಳು ಮತ್ತು ಉಪಕರ(ಸೆಸ್)ಗಳು ಜನತೆಯ ಬೆನ್ನುಮೂಳೆ ಮುರಿಯುವಂತೆ ಮಾಡುತ್ತಿವೆ. ಕರೊನಾ ಮಹಾಮಾರಿ ಹಾವಳಿ ನಡೆಸಿದ 2020ರಲ್ಲಿ ಕೂಡ ಮೋದಿ ಸರ್ಕಾರ ಮಾರ್ಚ್ 14ರಂದು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ಅಬ್ಕಾರಿ ಸುಂಕವನ್ನು ತಲಾ ಮೂರು ರೂಪಾಯಿ ಏರಿಕೆ ಮಾಡಿತ್ತು. ಇದಾದ ನಂತರ ಮೇ 6ರಂದು ಅಬ್ಕಾರಿ ಸುಂಕವನ್ನು ಪೆಟ್ರೋಲ್ ಮೇಲೆ 10 ಹಾಗೂ ಡೀಸೆಲ್ ಮೇಲೆ 13 ರೂಪಾಯಿ ಏರಿಸಿತ್ತು.
ಇದನ್ನು ಓದಿ : ಪೆಟ್ರೋಲ್, ಡಿಸೈಲ್ ಶತಕದತ್ತ..!?
ತೆರಿಗೆ ಪ್ರಮಾಣವೇ ಜಾಸ್ತಿ
2014-15 ಮತ್ತು 2019-20ರ ನಡುವೆ ಕೇಂದ್ರ ಸರ್ಕಾರದ ಅಬ್ಕಾರಿ ಸುಂಕದ ಸಂಗ್ರಹ ಶೇಕಡ 125ರಷ್ಟು ಹೆಚ್ಚಿತು. ಅದೇ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ರಾಜ್ಯಗಳ ಆದಾಯ ಶೇಕಡ 37.5ರಷ್ಟು ಏರಿಕೆಯಾಗಿದೆ ಎಂಬ ಮಾಹಿತಿಯನ್ನು ಗಮನಿಸುವುದು ಅಗತ್ಯ. ಹೀಗಾಗಿ ಪೆಟ್ರೋಲ್, ಡೀಸೆಲ್‌ಗಳ ಚಿಲ್ಲರೆ ಮಾರಾಟ ಬೆಲೆಯೇರಿಕೆಗೆ ಕೇಂದ್ರ ಸರ್ಕಾರದ ಸುಂಕಗಳ ಏರಿಕೆ ಕಾರಣವೇ ಹೊರತು ರಾಜ್ಯ ಸರ್ಕಾರಗಳ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕಾರಣವಲ್ಲ ಎನ್ನುವುದು ಸ್ಪಷ್ಟ.
ಪ್ರಸ್ತುತ ರಾಷ್ಟ ರಾಜಧಾನಿ ದೆಹಲಿಯಲ್ಲಿ ತಲಾ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ಶೇಕಡ 63ರಷ್ಟು ತೆರಿಗೆಯೇ ಇರುತ್ತದೆ. ಅದರಲ್ಲಿ ಕೇಂದ್ರದ ಪಾಲು ಶೇ. 40 ಹಾಗೂ ರಾಜ್ಯದ ವ್ಯಾಟ್ ಪಾಲು ಶೇ. 23.
ಕೇಂದ್ರೀಯ ಬಕಾರಿ ಸುಂಕ ಮತ್ತು ಸೆಸ್‌ಗಳನ್ನು ಇಳಿಸಲು ಸರ್ಕಾರ ಸತತವಾಗಿ ನಿರಾಕರಿಸುತ್ತಿದೆ. ಅದಕ್ಕೆ ತದ್ವಿರುದ್ಧವಾಗಿ, ಲೀಟರ್ ಪೆಟ್ರೋಲ್ ಮೇಲೆ 2.50 ರೂಪಾಯಿ ಹಾಗೂ ಡೀಸೆಲ್ ಮೇಲೆ 4 ರೂಪಾಯಿ ಕೃಷಿ ಮತ್ತು ಮೂಲಸೌಕರ್ಯ ಸೆಸ್ ಎಂಬ ಹೊಸ ಸೆಸ್ ವಿಧಿಸುವುದಾಗಿ 2021-22ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಇದನ್ನು ಓದಿ : ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಇಳಿಸಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆರ್‌ಬಿಐ ಸೂಚನೆ
ಮೂಲ ಅಬ್ಕಾರಿ ಸುಂಕದಲ್ಲಿ, ವಿಶೇಷ ಹೆಚ್ಚುವರಿ ಅಬ್ಕಾರಿ ಸುಂಕದಲ್ಲಿ ಈ ಸೆಸ್‌ನ ಅನುಪಾತಕ್ಕೆ ಅನುಗುಣವಾಗಿ ಕಡಿತ ಮಾಡಲಾಗುತ್ತದೆ ಎಂದು ಹಣಕಾಸು ಮಂತ್ರಿಗಳು ಪ್ರಕಟಿಸಿದ್ದಾರೆ. ಇದರಿಂದ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುವುದಿಲ್ಲ ಎನ್ನುವುದು ಸರ್ಕಾರದ ವಾದವಾಗಿದೆ. ಅಂದರೆ ಕೇಂದ್ರೀಯ ಅಬಕಾರಿ ಸುಂಕದಲ್ಲಿ ಕಡಿತವಾಗುವುದಿಲ್ಲ, ಅದರ ಒಂದು ಭಾಗವನ್ನು ಮಾತ್ರ ಸೆಸ್ ಆಗಿ ಪರಿವರ್ತಿಸಲಾಗುತ್ತದೆಯಷ್ಟೇ. ರಾಜ್ಯಗಳನ್ನು ಅವುಗಳ ಪಾಲಿನಿಂದ ವಂಚಿಸುವುದು ಈ ತಂತ್ರದ ಉದ್ದೇಶವಾಗಿದೆ. ಯಾಕೆಂದರೆ ಸೆಸ್ ಕೇಂದ್ರ-ರಾಜ್ಯಗಳು ಹಂಚಿಕೊಳ್ಳುವ ಬಾಬ್ತಿಗೆ ಬರುವುದಿಲ್ಲ.
ಈಗಾಗಲೇ ಕೇಂದ್ರೀಯ ಅಬಕಾರಿ ಸುಂಕಗಳಿಂದ ರಾಜ್ಯಗಳಿಗೆ ಬರುವ ಪಾಲಿನಲ್ಲಿ ಕಡಿತ ಆಗುತ್ತಲೇ ಇದೆ. ಅದು ಇನ್ನಷ್ಟು ತೀವ್ರಗೊಂಡು ಮುಂದುವರಿಯಲಿದೆ. ವರ್ಷದ ಪ್ರಥಮ ತ್ರೈಮಾಸಿಕದಲ್ಲೇ ಅಂದರೆ ಜನವರಿ-ಮಾರ್ಚ್ನಲ್ಲಿ ಕೇಂದ್ರ-ರಾಜ್ಯಗಳ ಈ ಅನುಪಾತ 65:35ಕ್ಕೆ ಕುಸಿದಿದೆ. ಹಿಂದೆ ಈ ಅನುಪಾತ 60:40 ಇತ್ತು.
ಇದನ್ನು ಓದಿ : ಪೆಟ್ರೋಲ್ ಗೆ ಯಾಕೆ ಹೆಚ್ಚುವರಿ ಹಣ ಕೊಡುತ್ತಿದ್ದೇವೆ? ಇಲ್ಲಿದೆ ನೋಡಿ ಮಾಹಿತಿ
ಸರ್ಕಾರದ ಒಟ್ಟಾರೆ ಆದಾಯ ಕುಸಿಯುತ್ತಿರುವ ಸಂದರ್ಭದಲ್ಲಿ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಈ ಅಸಮತ್ವದಿಂದ ಕೂಡಿದ ತೆರಿಗೆ ರಚನೆಯು ಕೇಂದ್ರ ಸರ್ಕಾರದ ಆದಾಯದ ಒಂದು ಪ್ರಮುಖ ಮೂಲವಾಗಿದೆ. ಸಂಸತ್ತಿನಲ್ಲಿ ಮಂಡಿಸಲಾಗಿರುವ ಬಜೆಟ್‌ನಲ್ಲಿ ಕೊಟ್ಟಿರುವ ತೆರಿಗೆ ಸಂಗ್ರಹ ಮಾಹಿತಿಗಳ ಪ್ರಕಾರ 2020-21ನೇ ಸಾಲಿನ ತೆರಿಗೆ ಆದಾಯ ಗುರಿಗಿಂತ ಕಡಿಮೆಯಾಗಿದೆ. ಅಬಕಾರಿ ಸುಂಕ ಸಂಗ್ರಹದಲ್ಲಿ ಮಾತ್ರ ಹಾಗಾಗಿಲ್ಲ. ಒಟ್ಟಾರೆ ತೆರಿಗೆ ಆದಾಯ ನಿಗದಿತ ಗುರಿಗಿಂತ ಶೇ. 17.8 ಕಡಿಮೆಯಾಗಿದ್ದರೆ ಅಬಕಾರಿ ಸುಂಕ ಸಂಗ್ರಹದಲ್ಲಿ ಗುರಿಗಿಂತ ಶೇ. 35 ಅಧಿಕ ಏರಿಕೆ ದಾಖಲಾಗಿದೆ.
ಜನಗಳ ಮೇಲೆ ಹೊರೆ ವರ್ಗಾವಣೆ
ಅಂದರೆ, ಲಾಕ್‌ಡೌನ್ ಮತ್ತು ಮುಳುಗುತ್ತಿರುವ ಆರ್ಥಿಕತೆಯ ಹೊರೆಯನ್ನು ಸರ್ಕಾರ ಜನರ ಮೇಲೆ ಹೊರಿಸಿದೆ. ಜಾಗತಿಕ ಬೆಲೆಗಳಲ್ಲಿ ಕುಸಿತವಾಗಿದ್ದರೂ ಅಥವಾ ಏರಿಕೆ ನಿಧಾನಗೊಂಡಿದ್ದರೂ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬ್ಕಾರಿ ಸುಂಕವನ್ನು ಹೆಚ್ಚಿನ ಪ್ರಮಾಣದಲ್ಲಿ ಇರಿಸುವ ಮೂಲಕ ಕೇಂದ್ರ ಸರ್ಕಾರ ಇದನ್ನು ಸಾಧಿಸುತ್ತಿದೆ.
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆಗಳು ಗಗನಮುಖಿಯಾಗಿರುವುದರಿಂದ ಎಲ್ಲ ವಿಭಾಗಗಳ ಜನರಿಗೆ ಸಮಸ್ಯೆ ಉಂಟಾಗಿದೆ. ಉದ್ಯೋಗ ಮತ್ತು ಜೀವನೋಪಾಯ ಕಳಕೊಂಡವರು, ಸಣ್ಣ ಉದ್ಯಮಗಳು, ಅಂಗಡಿಕಾರರು, ಮತ್ತು ಸರಕುಗಳ ಸಾಗಾಟದ ಮೇಲೆ ಅವಲಂಬಿಸಿರುವ ವರ್ತಕರು ಮುಂತಾದವರಿಗೆ ಹೆಚ್ಚಿನ ಬಿಸಿ ತಟ್ಟಿದೆ. ರೈತರು ಟ್ರಾಕ್ಟರ್ ಮತ್ತು ಪಂಪ್‌ಗಳಿಗೆ ಬಳಸುವ ಡೀಸೆಲ್‌ಗೆ ಹೆಚ್ಚಿನ ಹಣ ತೆರಬೇಕಾಗಿದೆ. ಅಸಂಘಟಿತ ವಲಯದಲ್ಲಿ ದಿನಗೂಲಿ ಅವಲಂಬಿಸಿರುವವರ ಸಾರಿಗೆ ವೆಚ್ಚ ಹೆಚ್ಚಾಗಿದೆ. ಹಿಂಜರಿತದಿಂದ ಸುಧಾರಿಸಿಕೊಂಡು ಬದುಕುಳಿಯುವ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳ ಪ್ರಯತ್ನಗಳ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗಿದೆ. ಖಾಸಗಿ ಮತ್ತು ಸಾರ್ವಜನಿಕ ಸಾರಿಗೆಗಳ ವೆಚ್ಚ ಮತ್ತು ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯೇರಿಕೆಯಿಂದಾಗಿ ಮಧ್ಯಮ ವರ್ಗದವರ ಕೌಟುಂಬಿಕ ಬಜೆಟ್‌ಗಳ ಮೇಲೆ ಭಾರಿ ಪರಿಣಾಮ ಉಂಟಾಗಿದೆ.
ಜನ–ವಿರೋಧಿ ನೀತಿಯ ಭಾಗ : ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ನೀತಿಯು ಮೋದಿ ಸರ್ಕಾರದ ಹೇಯ ಜನ-ವಿರೋಧಿ ಧೋರಣೆಯ ಭಾಗವೇ ಆಗಿದೆ. ಲಾಕ್‌ಡೌನ್ ಮತ್ತು ಕರೊನಾ ಸಾಂಕ್ರಾಮಿಕವು ನಮ್ಮ ಸಮಾಜದಲ್ಲಿನ ಸಂಪತ್ತಿನ ಅಸಮಾನತೆಯನ್ನು ಇನ್ನಷ್ಟು ಅಧಿಕಗೊಳಿಸಿದೆ. ಇಂಥ ಸನ್ನಿವೇಶದಲ್ಲಿ ಸರ್ಕಾರ, ಸೂಪರ್-ಸಿರಿವಂತರ ಮೇಲೆ ತೆರಿಗೆ ಏರಿಸಬೇಕಿತ್ತು, ಸಂಪತ್ತು ತೆರಿಗೆ ವಿಧಿಸಬೇಕಿತ್ತು ಹಾಗೂ ಈ ಅವಧಿಯಲ್ಲಿ ಭಾರಿ ಲಾಭ ಮಾಡಿದ ಕಾರ್ಪೊರೇಟ್ ಕಂಪೆನಿಗಳು ಹೆಚ್ಚು ತೆರಿಗೆ ತೆರುವಂತೆ ಸರ್ಕಾರ ಕೇಳಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದೆ, ಅದರ ಬದಲಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಸಮ ತೆರಿಗೆ ಹೇರಿ ಜನತೆಯ ಅಲ್ಪ-ಸ್ವಲ್ಪ್ಟ ಸಂಪನ್ಮೂಲಗಳನ್ನೂ ಕೊಳ್ಳೆ ಹೊಡೆಯಲು ಮುಂದಾಗಿದೆ.
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬ್ಕಾರಿ ಸುಂಕ ಮತ್ತು ಸೆಸ್‌ಗಳ ಹೇರಿಕೆಯನ್ನು ಗಣನೀಯವಾಗಿ ಇಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಇದಕ್ಕಾಗಿ ಹೋರಾಟವನ್ನು ತೀವ್ರಗೊಳಿಸಬೇಕು. ಈ ಚಳವಳಿಯು ಜನತೆಯ ಜೀವನೋಪಾಯ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಯ ಆಂದೋಲನದ ಭಾಗವಾಗಬೇಕು.