ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಅನುಷ್ಠಾನವನ್ನು ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳಗಳಲ್ಲಿ ಕೋರಿದ್ದ ಅರ್ಜಿಯನ್ನು ಮೇ 9 ಶುಕ್ರವಾರದಂದು ವಜಾಗೊಳಿಸಿರುವ ಸರ್ವೋಚ್ಚ ನ್ಯಾಯಾಲಯವು, ಅದನ್ನು ಅಳವಡಿಸಿಕೊಳ್ಳುವಂತೆ ಯಾವುದೇ ರಾಜ್ಯವನ್ನು ತಾನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿತು.
ನ್ಯಾಯಾಲಯವು ನೀತಿಯ ಅನುಷ್ಠಾನದಿಂದ ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಮಾತ್ರ ಪರಿಗಣಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಆರ್.ಮಹಾದೇವನ್ ಪೀಠವು ತಿಳಿಸಿತು.
ತಮಿಳುನಾಡು,ಪ.ಬಂಗಾಳ ಮತ್ತು ಕೇರಳ ಎನ್‌ಇಪಿಯನ್ನು ಜಾರಿಗೊಳಿಸಲು ಸಾಂವಿಧಾನಿಕವಾಗಿ ಬದ್ಧವಾಗಿವೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಿದ್ದ ವಕೀಲ ಜಿ.ಎಸ್.ಮಣಿ ಅವರು, ತ್ರಿಭಾಷಾ ಸೂತ್ರ ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಹಿಂದಿಯನ್ನು ಕಲಿಯಬೇಕಾಗುತ್ತದೆ ಎಂಬ ಕಾರಣಗಳಿಂದಾಗಿ ಎನ್‌ಇಪಿಯನ್ನು ವಿರೋಧಿಸಲಾಗುತ್ತಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಸಿವಿಲ್ ತಗಾದೆಗಳಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾದವರ ವಿರುದ್ದ ಕ್ರಮ: ಬಿ. ದಯಾನಂದ
ನೀವು ಯಾರು ಮತ್ತು ನಿಮಗೂ ಎನ್‌ಇಪಿಗೂ ಏನು ಸಂಬಂಧ ಎಂಬ ನ್ಯಾಯಾಲಯದ ಪ್ರಶ್ನೆಗೆ ಮಣಿ,ತಾನು ಮೂಲತಃ ಚೆನ್ನೈ ನಿವಾಸಿಯಾಗಿದ್ದೇನೆ,ಆದರೆ ದಿಲ್ಲಿಯಲ್ಲಿ ನೆಲೆಸಿದ್ದೇನೆ ಎಂದು ಉತ್ತರಿಸಿದರು.
ನೀವು ದಿಲ್ಲಿಯಲ್ಲಿ ವಾಸವಿರುವುದರಿಂದ ಅರ್ಜಿಯನ್ನು ಸಲ್ಲಿಸಲು ನಿಮಗೆ ಯಾವುದೇ ಕಾರಣವಿಲ್ಲ ಎಂದು ನ್ಯಾಯಾಲಯವು ಮಣಿಯವರಿಗೆ ತಿಳಿಸಿತು.
ಮಣಿ ಪ್ರತಿಪಾದಿಸಲು ಬಯಸಿರುವ ಕಾರಣಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಅವರು ತಮಿಳುನಾಡಿಗೆ ಸೇರಿದ್ದರೂ ತಾನು ದಿಲ್ಲಿ ನಿವಾಸಿಯಾಗಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು.
ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನಗಳನ್ನು ಹೊರಡಿಸಲು ಅವಕಾಶ ನೀಡಿರುವ ಸಂವಿಧಾನದ ವಿಧಿ ೩೨ನ್ನು ಉಲ್ಲೇಖಿಸಿದ ನ್ಯಾಯಾಲಯವು,ಎನ್‌ಇಪಿಯನ್ನು ಅಳವಡಿಸಿಕೊಳ್ಳುವಂತೆ ಯಾವುದೇ ರಾಜ್ಯವನ್ನು ತಾನು ಒತ್ತಾಯಿಸಲು ಸಾಧ್ಯವಿಲ್ಲ. ಆದರೆ ರಾಜ್ಯದ ಕ್ರಮವು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದರೆ ನ್ಯಾಯಾಲಯವು ಮಧ್ಯಪ್ರವೇಶಿಸಬಹುದು ಎಂದು ಹೇಳಿತು.
ನಿಮ್ಮ ಮಕ್ಕಳು ದಿಲ್ಲಿಯಲ್ಲಿ ಹಿಂದಿ ಕಲಿಯುವುದನ್ನು ಮುಂದುವರಿಸಬಹುದು ಎಂದೂ ಪೀಠವು ಮಣಿಯವರಿಗೆ ತಿಳಿಸಿತು. ಸೂಕ್ತ ಪ್ರಕ್ರಿಯೆಯಲ್ಲಿ ಎನ್‌ಇಪಿಯನ್ನು ಪರಿಶೀಲಿಸಬಹುದು ಎಂದು ಅದು ಸೂಚಿಸಿತು.
ಎನ್‌ಇಪಿ ಅನುಷ್ಠಾನಕ್ಕೆ ಆಕ್ಷೇಪಗಳನ್ನು ಪ್ರಶ್ನಿಸಿದ್ದ ಮಣಿಯವರ ಅರ್ಜಿಯು,ರಾಜ್ಯಗಳು ಅನಗತ್ಯವಾಗಿ ಎನ್‌ಇಪಿಯನ್ನು ರಾಜಕೀಯ ವಿಷಯವನ್ನಾಗಿ ಮಾಡುತ್ತಿವೆ ಎಂದು ಪ್ರತಿಪಾದಿಸಿತ್ತು. ಶಿಕ್ಷಣದಲ್ಲಿ ಏಕರೂಪತೆಯನ್ನು ತರಲು ಮಾತ್ರ ಎನ್‌ಇಪಿ ಬಯಸಿದೆ ಎಂದು ಹೇಳಿದ್ದ ಅರ್ಜಿಯು,ಸಮಾಜದ ಎಲ್ಲ ಸ್ತರಗಳ ಶಾಲಾ ಮಕ್ಕಳಿಗೆ ಎಲ್ಲ ಭಾರತೀಯ ಭಾಷೆಗಳನ್ನು ಉಚಿತವಾಗಿ ಕಲಿಸಬೇಕು ಎಂದು ಹೇಳಿತ್ತು.
ಸಂವಿಧಾನದ,ವಿಶೇಷವಾಗಿ ಉಚಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಮಕ್ಕಳ ಹಕ್ಕಿನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಿರ್ದೇಶನಗಳನ್ನು ಹೊರಡಿಸುವಂತೆ ಅರ್ಜಿಯಲ್ಲಿ ಕೋರಿದ್ದ ಮಣಿ, ಎನ್‌ಇಪಿಯು ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಪ್ರಮುಖ ಶಿಕ್ಷಣ ನೀತಿಯಾಗಿದೆ. ಉಚಿತ ಶಿಕ್ಷಣವು ಮೂಲಭೂತ ಹಕ್ಕು ಆಗಿದೆ. ಈ ನೀತಿಯನ್ನು ಸ್ವೀಕರಿಸಲು ನಿರಾಕರಿಸುವ ಮೂಲಕ ರಾಜ್ಯ ಸರಕಾರವು ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣದ ಮೂಲಭೂತ ಹಕ್ಕನ್ನು ನಿರಾಕರಿಸುತ್ತಿದೆ ಎಂದು ವಾದಿಸಿದ್ದರು.
ಇದನ್ನೂ ನೋಡಿ: ಹಾವುಗಳ ವಿಸ್ಮಯಕಾರಿ ವಿಷಯಗಳು | ಡಾ : ಶ್ರೀಧರ Janashakthi Media