ಪೇಶ್ವೆ ವಂಶವಾಹಿನಿಯವರನ್ನು ಮುಖ್ಯಮಂತ್ರಿಯಾಗಿಸುವ ಮಾತುಗಳು

ಎಸ್.ವೈ. ಗುರುಶಾಂತ್

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಬಹಿರಂಗ ಪಡಿಸಿದ ಸಂಗತಿಯೊಂದು ಈ ವಾರ ರಾಜಕೀಯ ವಲಯದಲ್ಲಿ ಬಹುವಾಗಿ ಸದ್ದು ಮಾಡಿತು. ಅದು ಬಿಜೆಪಿ ಪಕ್ಷದೊಳಿಗಿನ ಕಿಚ್ಚನ್ನು ಹೊರ ಹಾಕಿತು. ಬಿಜೆಪಿಯನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂದು ಸತತವಾಗಿ ಒಂದಿಲ್ಲೊಂದು ಹೊಸ ವರಸೆಗಳನ್ನು ಮಾಡುತ್ತಾ, ಹಂತ ಹಂತವಾಗಿ ನಿಯಂತ್ರಣ ಸಾಧಿಸುತ್ತಿರುವ ಸಂವಿಧಾನೇತರ ಸಂಸ್ಥೆ ಆರ್.ಎಸ್.ಎಸ್. ಗೆ ಯಡ್ಯೂರಪ್ಪನವರನ್ನು ಪದಚ್ಯುತಿಗೊಳಿಸಿ ಬಸವರಾಜ ಬೊಮ್ಮಾಯಿಯವರನ್ನು ತಂದದ್ದಾಯ್ತು. ಬಹುತೇಕ ಸಂಘದ ಅಣತಿಯಂತೆಯೇ ಬೊಮ್ಮಾಯಿ ನಡೆಯುತ್ತಿದ್ದರೂ ಅದಕ್ಕೆ ಸಮಾಧಾನ ಇಲ್ಲ. ತನ್ನದೇ ಪಕ್ಕಾ ಸ್ವಯಂಸೇವಕನನ್ನು (ಬ್ರಾಹ್ಮಣರಾದರೆ) ಮುಖ್ಯಮಂತ್ರಿ ಮಾಡುವ ಅದರ ಹಪಾಹಪಿ ನಿಂತಿಲ್ಲ. ಬಾಯಿ ಮಾತಿನಲ್ಲಿ ಬೊಮ್ಮಾಯಿ, ಯಡ್ಯೂರಪ್ಪನವರ ನೇತೃತ್ವದಲ್ಲಿಯೇ ಚುನಾವಣೆ ಎನ್ನುತ್ತಿದೆ ಬಿಜೆಪಿ ನಾಯಕತ್ವ. ಇದನ್ನು ಕೇಳುವ ಸಾಮಾನ್ಯರಿಗೆ ಬೊಮ್ಮಾಯಿ ಯವರನ್ನು ಬದಲಾಯಿಸುವುದಿಲ್ಲ ಎನ್ನುವಂತೆ ಕಾಣಿಸುತ್ತದೆ. ಆದರೆ ಅದು ಸಂಘದ ಇಂಗಿತವಲ್ಲ. ಮೊದಲು ಚುನಾವಣೆ ನಡೆಯಲಿ, ಗೆಲ್ಲಲಿ, ನಂತರ ನೋಡುವ ಎನ್ನುವಂತೆ ಅದರ ಯೋಚನೆ ಇದ್ದಂತಿದೆ. ಯಡ್ಯೂರಪ್ಪನವರನ್ನು ಪದಚ್ಯುತಿಗೊಳಿಸಿದ್ದು, ಬೊಮ್ಮಾಯಿ ಯಾವಾಗ ಬೇಕಾದರೂ ಪೂರ್ಣ ಡೆಮ್ಮಿ ಆಗಬಹುದು ಎನ್ನುವ ಅನುಮಾನ ಲಿಂಗಾಯತರಲ್ಲಿ ಸದಾ ಇರುವುದೂ ಸುಳ್ಳಲ್ಲ. ಬಿಜೆಪಿಯ ರಾಷ್ಟ್ರೀಯ ನಾಯಕರೂ ಒಪ್ಪಿರುವಂತೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬಿಜೆಪಿ ತನ್ನ ಈಗಿನ ಸ್ಥಿತಿಯಿಂದ ಕುಸಿಯುವ, ಸ್ಥಾನ ಕಡಿಮೆಯಾಗುವ ವಾಸ್ತವದ ಅಂದಾಜಿನಲ್ಲಿದೆ. ಅಂದರೆ ಈ ಭಾಗದಲ್ಲಿರುವ ಸಾಂಪ್ರದಾಯಿಕ ಬೆಂಬಲದ ಲಿಂಗಾಯತರು ದೂರ ಸರಿಯಬಹುದು ಎನ್ನುವ ಲೆಕ್ಕಾಚಾರ.

ಸಹಜವಾಗಿ ರೈತಾಪಿ ಸಮುದಾಯವಾಗಿರುವ ಲಿಂಗಾಯತರು ಆಳಗೊಳ್ಳುತ್ತಿರುವ ಕೃಷಿ ಬಿಕ್ಕಟ್ಟಿಗೆ ಬಿಜೆಪಿ ಆಡಳಿತದಿಂದ ಪರಿಹಾರ ಕಾಣದೇ, ಮತ್ತಷ್ಟೂ ಹೊರೆಯ ಬರೆ ಅನುಭವಿಸಬೇಕಾಗಿ ಬಂದಿದೆ. ಸಣ್ಣ ರೈತರತ್ತ ತನ್ನ ಕಾಳಜಿ ಎಂದು ಪ್ರಧಾನಿ, ಸಿ.ಎಂ.ಗಳು ಪದೇ ಪದೇ ಹೇಳುತ್ತಿರುವುದು. ಹೀಗಾಗಿ ಇಂತಹ ಒಂದು ವಿಶಿಷ್ಟ ಸಂದಿಗ್ಧ ಸನ್ನಿವೇಶದ ನಡುವೆ ಸಂಘ ಪರಿವಾರ ತನ್ನ ಕಾರ್ಯಸೂಚಿಯನ್ನು ಜಾರಿ ಮಾಡಬೇಕಾಗಿದೆ. ಸಂಪದ್ಭರಿತ ರಾಜ್ಯವಾಗಿರುವ ಕರ್ನಾಟಕವನ್ನು ಬಿಜೆಪಿ ಅಷ್ಟು ಸುಲಭದಲ್ಲಿ ಬಿಟ್ಟು ಕೊಡಲು ಮುಂದಾಗುವುದಿಲ್ಲ ಎನ್ನುವುದು ಗೊತ್ತಿರುವ ಸಂಗತಿ. ಹಾಗಾಗಿ ಅದು ಮತ್ತೆ ಅಧಿಕಾರ ಪಡೆಯಲು ಹೊಸ ಹೊಸ ಆಟಗಳನ್ನು ಆಡುತ್ತಿದೆ. ಇದು ನಿಜವಾದರೂ ನಿಜಕ್ಕೂ ಆರ್.ಎಸ್.ಎಸ್. ನಲ್ಲಿ, ಅದು ರಾಷ್ಟ್ರಮಟ್ಟದ ಮತ್ತು ರಾಜ್ಯದ ಎರಡು ಕಡೆಗಳಲ್ಲಿನ ನಾಯಕತ್ವದಲ್ಲಿ ಚುನಾವಣೆಯ ನಂತರ ಯಾರನ್ನು ಹೊಸ ಮುಖ್ಯಮಂತ್ರಿಯನ್ನು ತರಬೇಕೆನ್ನುವ ಲೆಕ್ಕಾಚಾರ ಇರುವುದನ್ನು, ಎಂಟು ಜನ ಉಪ ಮುಖ್ಯಮಂತ್ರಿಗಳನ್ನಾಗಿಸುವ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಅವರು ಬಹಿರಂಗಗೊಳಿಸಿದರು. ಅವರದೇ ಮಾತಿನಲ್ಲಿ ಹೇಳಬಹುದಾದರೆ’ ಶೃಂಗೇರಿ ದೇವಸ್ಥಾನದ ಮೇಲೆ ಧಾಳಿ ಮಾಡಿ ಲೂಟಿ ಮಾಡಿದ ಪೇಶ್ವೆಗಳ ಡಿ.ಎನ್.ಎ. ಇರುವ, ಮಹಾತ್ಮಗಾಂಧಿಯನ್ನು ಕೊಂದ ವಂಶಕ್ಕೆ ಸೇರಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ನೇಮಿಸಲು ಆರ್.ಎಸ್.ಎಸ್. ನಿರ್ಧರಿಸಿದೆ. ಈ ಬಗ್ಗೆ ತಮಗೆ ಖಚಿತ ಮಾಹಿತಿ ಇದೆ’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಸಿದ ಬಿಜೆಪಿ ನಾಯಕರು ‘ಕುಮಾರಸ್ವಾಮಿಯವರಿಗೆ ಹತಾಶೆಯಾಗಿದೆ. ಶಾಸಕರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಆದ್ದರಿಂದ ಹೀಗೆಲ್ಲಾ ಮಾತನಾಡುತ್ತಿದ್ದಾರೆ’ ಎಂದು ಪ್ರತಿಕ್ರಿಯೆಸಿದರು. ಜೊತೆಗೆ ಇವರು ಬ್ರಾಹ್ಮಣರ ವಿರುದ್ಧವೇ ಮಾತನಾಡಿದ್ದಾರೆ ಆದ್ದರಿಂದ ಎಲ್ಲಾ ಬ್ರಾಹ್ಮಣರು ಇವರನ್ನು ವಿರೋಧಿಸಬೇಕು ಎನ್ನುವಂತೆ ಎತ್ತಿ ಕಟ್ಟಲು ಪ್ರಯತ್ನವನ್ನೂ ಮಾಡಿದರು. ಆದರೆ ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿ ಆಗಿರುವಾಗ ಬ್ರಾಹ್ಮಣ ಸಮುದಾಯಕ್ಕೆ ಎಷ್ಟೆಲ್ಲಾ ಗೌರವ, ಸಹಾಯ ಸಹಕಾರಗಳನ್ನು ಮಾಡಿದ್ದೇನೆ ಎನ್ನುವುದನ್ನು ವಿವರಿಸಿದ ಬಳಿಕ ಬಿಜೆಪಿಗಳ ಟೀಕೆಗೆ ಅಷ್ಟೊಂದು ಅರ್ಥ ಉಳಿಯಲಿಲ್ಲ. ಆದರೆ ಕುಮಾರಸ್ವಾಮಿಯವರ ಮಾತು ಖಂಡಿತಕ್ಕೂ ಬಿಜೆಪಿ ಒಳಗಡೆಯಲ್ಲಿ ಕಂಪನವನ್ನು ಉಂಟು ಮಾಡಿರುವುದು ನಿಜ. ಏಕೆಂದರೆ ಮುಂದೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಮುಖ್ಯಮಂತ್ರಿಯಾಗುತ್ತಾರೆ ಎಂದರೆ ಲಿಂಗಾಯಿತ ಸಮುದಾಯದವರ ಪ್ರತಿಕ್ರಿಯೆ ಏನಾಗಬಹುದು ಎನ್ನುವುದು ಪ್ರಮುಖ ಅಂಶ. ಈಗಾಗಲೇ ಮುನಿಸಿಕೊಂಡಿರುವ ಯಡಿಯೂರಪ್ಪನವರ ಒಳ ಭಿನ್ನಮತದ ಕುದಿ ಜೊತೆಗೆ ಇದು ಸೇರಿಕೊಂಡರೆ ಬಿಜೆಪಿಗೆ ಬಹುದೊಡ್ಡ ಡ್ಯಾಮೇಜ್ ಆಗಬಹುದು ಎನ್ನುವ ಆತಂಕ. ಕುಮಾರಸ್ವಾಮಿ ಅವರು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ನಾಯಕರು, ಬ್ರಾಹ್ಮಣ ಮಹಾಸಭಾದವರು ಹೇಳಿದರು. ಆದರೆ ಕುಮಾರಸ್ವಾಮಿ ತಮ್ಮ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಖಚಿತವಾಗಿ ಹೇಳಿದ್ದು ಅವರ ಹೇಳಿಕೆಯಲ್ಲಿ ಇರುವ ವಾಸ್ತವಂಶದ ಗಟ್ಟಿತನಕ್ಕೆ ನಿದರ್ಶವಾಗಬಹುದು.

ಮೀಸಲಾತಿ ಹೆಚ್ಚಳ: ಕೇಂದ್ರಕ್ಕೆ ಪತ್ರವೊಂದೇ ಸಾಲದು

ಅಂತೂ ಇಂತೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ-ಎಸ್.ಸಿ ಮತ್ತು ಎಸ್.ಟಿ. ಸಮುದಾಯಗಳ ಮೀಸಲಾತಿ ಹೆಚ್ಚಳದ ಪ್ರಕ್ರಿಯೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಕರ್ನಾಟಕ ಸರ್ಕಾರದ ಸಚಿವ ಸಂಪುಟ ತೀರ್ಮಾನಿಸಿದೆ. ಈಗಾಗಲೇ ಈ ಕುರಿತು ವಿಧಾನಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿ ಅಂಗೀಕರಿಸಲಾಗಿತ್ತು. ಈಗ ಸಂವಿಧಾನದ ಒಂಬತ್ತನೇ ಷೆಡ್ಯೂಲಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಮನವಿ ಮಾಡಲಿರುವುದು ಅದಕ್ಕೆ ಮತ್ತಷ್ಟು ಸಂವಿಧಾನಾತ್ಮಕ ಮತ್ತು ಕಾನೂನಾತ್ಮಕ ಬಲವನ್ನ ತಂದುಕೊಡಲಿದೆ. ಇಂತಹ ಕ್ರಮವನ್ನು ಕೈಗೊಳ್ಳದಿದ್ದರೆ ಉಳಿದ ಯಾವ ಆಶ್ವಾಸನೆಗಳು ಅರ್ಥವನ್ನು ಪಡೆಯುವುದಿಲ್ಲ, ಕೇವಲ ಭರವಸೆಗಳಾಗಿ ಉಳಿಯುತ್ತವೆ. ಆದ್ದರಿಂದ ಷೆಡ್ಯೂಲ್ ಒಂಬತ್ತಕ್ಕೆ ಸೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಹುತೇಕ ಎಲ್ಲಾ ಪ್ರತಿಪಕ್ಷಗಳು ಆಗ್ರಹಿಸಿದ್ದವು.

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಆಯೋಗದ ಶಿಫಾರಸಿನಂತೆ ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಕ್ರಮವಾಗಿ ಶೇ.2 ಮತ್ತು ಶೇ. 4 ಶೇಕಡಾ ಹೆಚ್ಚಿಸಲಾಗಿದೆ. ಈ ನಿರ್ಧಾರ ಶೆಡ್ಯೂಲ್ ಒಂಬತ್ತರಲ್ಲಿ ಸೇರ್ಪಡೆಯಾದಲ್ಲಿ ಅದನ್ನು ಬಹುತೇಕ ಯಾರೂ ಪ್ರಶ್ನಿಸುವಂತಿಲ್ಲ ಎಂದು ಹೇಳಲಾಗುತ್ತಿತ್ತು. ಹೀಗಿದ್ದಾಗಿಯೂ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ  ತೀರ್ಪಿನಲ್ಲಿ ಇದನ್ನು ಪ್ರಶ್ನಿಸಬಹುದು ಎಂದಿದೆ. ಅಂದರೆ ಸರಕಾರ ಅದಕ್ಕೆ ಸೂಕ್ತವಾದ ಎಲ್ಲಾ ಸಮರ್ಥ ದಾಖಲೆಗಳನ್ನು ನೀಡಿ ವಾದಿಸಿಮನವರಿಕೆ ಮಾಡಿ ಕೊಡಬೇಕಾಗುತ್ತದೆ ಎನ್ನುವ ಅಂಶವನ್ನು ನಿರ್ಲಕ್ಷಿಸಲಾಗದು.

ಇಷ್ಟಾದರೂ ಇನ್ನೂ ಎರಡೂ ಸರ್ಕಾರಗಳ ಮೇಲೆ ಗುರುತರವಾದ ಹೊಣೆಗಾರಿಕೆ ಇದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ಮನವಿ ಮಾಡಬೇಕಿದೆ. ಅಲ್ಲದೆ ಕೇಂದ್ರ ಸರ್ಕಾರವು ಈ ವಿಷಯದಲ್ಲಿ ಕ್ಷೀಪ್ರಗತಿಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಂದರೆ ಸಂಸತ್ತಿನಲ್ಲಿ ಈ ಶಿಫಾರಸ್ಸನ್ನು ಅಂಗೀಕರಿಸಿ ಸಂವಿಧಾನಾತ್ಮಕ ಬಲವನ್ನ ತುಂಬಬೇಕಿದೆ. ಹೀಗಾದಲ್ಲಿ ಸರ್ಕಾರದ ಈ ಕ್ರಮಗಳಿಗೆ ಒಂದು ಅರ್ಥ ಬಂದೀತು. ಇಲ್ಲವಾದಲ್ಲಿ ಹಲವು ಕಾರಣಗಳನ್ನು ನೀಡಿ ವಿಳಂಬಿಸುತ್ತಾ ಹೋದಲ್ಲಿ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ತೊರಕಿಸಿ ಕೊಡುವ ಮಾತುಗಳು ಕೇವಲ ಹುಸಿಯ ಮಾತುಗಳಾಗಿರುತ್ತವೆ ಅಷ್ಟೇ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *