ಪೆರು : ಪಾರ್ಲಿಮೆಂಟರಿ ಕ್ಷಿಪ್ರದಂಗೆ ನಡೆಸಿದ ಅಧ್ಯಕ್ಷನ ಪದಚ್ಯುತಿ

 

ಮಧ್ಯಂತರ ಅಧ್ಯಕ್ಷರ ಬದಲಾವಣೆಯೊಂದಿಗೆ ಈ ಚಳವಳಿ ನಿಲ್ಲುವ ಲಕ್ಷಣಗಳಿಲ್ಲ. ಸಾಮಾಜಿಕ ಚಳವಳಿಗಳು, ಎಡ ಪಕ್ಷಗಳು, ನಾಗರಿಕ ಸಂಘಟನೆಗಳು ಸಮಗ್ರವಾಗಿ ಪ್ರಜಾಸತ್ತಾತ್ಮಕವಾಗಿರುವ ಸಂವಿಧಾನವನ್ನು ರಚಿಸಬೇಕೆಂಬ ಹಕ್ಕೊತ್ತಾಯವನ್ನು ಮಂಡಿಸಿದ್ದಾರೆ. ಏಪ್ರಿಲ್ 2021 ರ ಅಧ್ಯಕ್ಷೀಯ ಚುನಾವಣೆಯೊಂದಿಗೆ 1993ರಲ್ಲಿ ಫುಜಿಮೊರಿ ಎಂಬ ಸರ್ವಾಧಿಕಾರಿ ರಚಿಸಿದ ಸಂವಿಧಾನವನ್ನು ಬದಲಿಸಬೇಕೆ ಎಂಬುದರ ಕುರಿತು ಜನಮತಸಂಗ್ರಹ ನಡೆಯಬೇಕೆಂದು ಒತ್ತಾಯಿಸಿದ್ದಾರೆ.

ಪೆರು: ನವೆಂಬರ್ 16ರಂದು ಪೆರು ಪಾರ್ಲಿಮೆಂಟ್ ಫ್ರಾನ್ಸಿಸ್ಕೊ ಸಗಾಸ್ತಿ ಎಂಬ ಮಧ್ಯಂತರ ಅಧ್ಯಕ್ಷನನ್ನು ನೇಮಿಸಿತು. ಇದಕ್ಕಿಂತ ಮೊದಲು ಕೇವಲ 5 ದಿನಗಳ ಕಾಲ ಮಧ್ಯಂತರ ಅಧ್ಯಕ್ಷನಾಗಿದ್ದ ಮೆನುವಲ್ ಮೆರಿನೊ ಭಾರೀ ಪ್ರತಿಭಟನೆಗಳನ್ನು ಎದುರಿಸಲಾಗದೆ ರಾಜೀನಾಮೆ ಕೊಡಬೇಕಾಯಿತು.

ರಾಜೀನಾಮೆ ಕೊಟ್ಟ ಮಧ್ಯಂತರ ಅಧ್ಯಕ್ಷ ಮೆರಿನೊ

ಆದರೆ ಸಾಮಾಜಿಕ ಚಳವಳಿಗಳು ಮತ್ತು ಎಡ ರಾಜಕೀಯ ಪಕ್ಷಗಳು ಇದು ಒಂದು ಹೆಜ್ಜೆ ಮಾತ್ರ. ತಾವು ವ್ಯವಸ್ಥೆಯ ಸಮಗ್ರ ಬದಲಾವಣೆಯಾಗದೆ ವಿರಮಿಸುವುದಿಲ್ಲವೆಂದು ದೃಢವಾಗಿ ಸೂಚಿಸಿವೆ.
ನವೆಂಬರ್ 9ರಂದು ಹಿಂದಿನ ಅಧ್ಯಕ್ಷರಾಗಿದ್ದ ಮಾರ್ಟಿನ್ ವಿಝ್ ಕಾರ ಅವರನ್ನು ಪೆರು ನ ಪಾರ್ಲಿಮೆಂಟು ದೋಷಾರೋಪಣೆ ಮಾಡಿ ಅಧ್ಯಕ್ಷತೆಯಿಂದ ಕಿತ್ತು ಹಾಕಿತ್ತು. ಪೆರು ವಿನಾದ್ಯಂತ ಇದರ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದಿತ್ತು. ರಾಜಧಾನಿ ಲಿಮಾ ದಲ್ಲಿ ನಡೆದ ಪ್ರತಿಭಟನೆ ವಿರುದ್ಧ ಪೋಲಿಸರ ಕ್ರೂರ ದಮನದಲ್ಲಿ ಇಬ್ಬರು ಯುವಕರ ಸಾವು, ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿತ್ತು.

ಪೋಲಿಸರ ಕ್ರೂರ ದಮನದಲ್ಲಿ ನೂರಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದರು. 40 ಜನ ಕಾಣೆಯಾಗಿದ್ದರು. ಹಲವು ದಿನಗಳ ನಂತರವೂ 6 ಜನ ಇನ್ನೂ ಪತ್ತೆಯಾಗಿರಲಿಲ್ಲ. ಆಕ್ರೋಶ ಹೆಚ್ಚುತ್ತಾ ಹೋಗಿ ಪೋಲಿಸರ ಕ್ರೂರ ದಮನಕ್ಕೆ ಕಾರಣವಾದ ಮಧ್ಯಂತರ ಅಧ್ಯಕ್ಷನಾಗಿದ್ದ ಮೆನುವಲ್ ಮೆರಿನೊ ರಾಜೀನಾಮೆ ಕೊಡಬೇಕೆಂಬ ಒತ್ತಾಯ ಬಲವಾಗುತ್ತಾ ಹೋಗಿತ್ತು. ಪ್ರತಿಭಟನೆ ಬೆಳೆಯುತ್ತಾ ಹೋದ 5 ದಿನಗಳಲ್ಲಿ ಅವರ ಸಂಪುಟದ 18 ಸದಸ್ಯರಲ್ಲಿ ಸಚಿವರು ಆಕ್ರೋಶಕ್ಕೆ ಬೆದರಿ ರಾಜೀನಾಮೆ ಕೊಟ್ಟಿದ್ದರು. ಕೊನೆಗೆ ಮೆರಿನೊ ಸಹ ರಾಜೀನಾಮೆ ಕೊಡಲೇಬೇಕಾಯಿತು.

ದೋಷಾರೋಪಣೆಗೆ ಒಳಗಾದ ಮಾಜಿ ಅಧ್ಯಕ್ಷ ಮಾರ್ಟಿನ್ ವಿಝ್ ಕಾರ

ಪೆರು ವಿನ ಪ್ರಾಂತ್ಯವೊಂದರಲ್ಲಿ ಹಿಂದಿನ ಅಧ್ಯಕ್ಷರಾಗಿದ್ದ ಮಾರ್ಟಿನ್ ವಿಝ್ ಕಾರ ಗವರ್ನರ್ ಆಗಿದ್ದಾಗಿನ ಪ್ರಕರಣವೊಂದರಲ್ಲಿ ಭ್ರಷ್ಟಾಚಾರದ ಆಪಾದನೆ ಮಾಡಲಾಗಿತ್ತು. ಪೆರು ನಲ್ಲಿ ಉನ್ನತ ವಲಯಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು ಪಾರ್ಲಿಮೆಂಟ್ ಸದಸ್ಯರಲ್ಲೂ ಭ್ರಷ್ಟ ಸದಸ್ಯರೇ ಹೆಚ್ಚು. ಹಿಂದಿನ ಹಲವು ಅಧ್ಯಕ್ಷರು ಸಹ ಭ್ರಷ್ಟಾಚಾರದ ಆಪಾದನೆ ಎದುರಿಸಿದ್ದಾರೆ. ಮಾರ್ಟಿನ್ ವಿಝ್ ಕಾರ ಗವರ್ನರ್ ಆಗಿದ್ದಾಗಲೂ ಅಧ್ಯಕ್ಷರಾದ ಮೇಲೂ ಭ್ರಷ್ಟಾಚಾರದ ವಿರುದ್ಧ ಕ್ರಮಗಳಿಗೆ ಹೆಸರಾಗಿದ್ದವರು. ಅವರ ವಿರುದ್ಧ ಆಪಾದನೆ ಮಾಡಿದವರು ಸ್ವತಃ ಭ್ರಷ್ಟಾಚಾರದ ಕುರಿತು ಆಪಾದನೆ ಎದುರಿಸುತ್ತಿರುವವರು! ಈ ದೋಷಾರೋಪಣೆ ಮತ್ತು ಪದಚ್ಯುತಿ ಭ್ರಷ್ಟಾಚಾರದ ವಿರುದ್ಧ ಕ್ರಮಗಳಿಗೆ ಹೆಸರಾದ ಅಧ್ಯಕ್ಷರನ್ನು ಪದಚ್ಯುತಗೊಳಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಭ್ರಷ್ಟ ರಾಜಕಾರಣಿಗಳ ಪಿತೂರಿಯೆಂದು ಪರಿಗಣಿಸಲಾಗಿದೆ. ಇದು ಮಾತ್ರವಲ್ಲದೆ ಲ್ಯಾಟಿನ್ ಅಮೆರಿಕದ ಖಂಡದಲ್ಲೇ ಅತ್ಯಂತ ತೀವ್ರ ಕೊವಿದ್ ಆರೋಗ್ಯ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಅನಗತ್ಯ ಗೊಂದಲ ಸೃಷ್ಟಿಸಿದ ಪಾರ್ಲಿಮೇಮಟ್ ಸದಸ್ಯರ ವಿರುದ್ಧ ತೀವ್ರ ಆಕ್ರೋಶವಿತ್ತು.

ಸೆಪ್ಟೆಂಬರ್ ನಲ್ಲಿ ಈ ಕುರಿತು ನಡೆಸಲಾದವೊಂದು ಸಮೀಕ್ಷೆಯಲ್ಲಿ ಶೇ. 85 ಜನ ಈ ಆಪಾದನೆ ಹುಸಿ, ಅವರು ರಾಜೀನಾಮೆ ಕೊಡಬಾರದು. ಅವರನ್ನು ಪದಚ್ಯುತ ಗೊಳಿಸಬಾರದು ಎಂದು ಅಭಿಪ್ರಾಯ ಪಟ್ಟಿದ್ದರು. ಆಪಾದನೆಯ ತನಿಖೆಯೂ ಸಹ ಇನ್ನೂ ಆಗಿಲ್ಲ. ಮೇಲಾಗಿ ಪೆರು ನ ಕಾನೂನು ಪ್ರಕಾರ ಎಲ್ಲಾ ಸಾರ್ವಜನಿಕ ಅಧಿಕಾರಿಗಳು ಕಾನೂನು ಕ್ರಮದಿಂದ ವಿನಾಯಿತಿ ಪಡೆದಿದ್ದಾರೆ. ಹೀಗಿದ್ದರೂ ಪಾರ್ಲಿಮೆಂಟ್ ಅಧ್ಯಕ್ಷ ಮೆರಿನೊ, ಅಧ‍್ಯಕ್ಷ ಮಾರ್ಟಿನ್ ವಿಝ್ ಕಾರ ಅವರ ಪದಚ್ಯುತಿಗೆ “ಶಾಶ್ವತ ನೈತಿಕ ಅಸಾಮರ್ಥ್ಯ’ ಎಂಬ ಕಲಮು ಬಳಸಿ ಪಾರ್ಲಿಮೆಂಟಿನ ಮುಂದೆ ದೋಷಾರೋಪಣೆಯನ್ನು ಮಂಡಿಸಿದ್ದರು. ಇದು ಪಾರ್ಲಿಮೆಂಟರಿ ಕ್ಷಿಪ್ರದಂಗೆಯಲ್ಲದೆ ಮತ್ತೇನಲ್ಲವೆಂದು ಸಾರ್ವಜನಿಕರಿಗೆ ಸ್ಪಷ್ಟವಿತ್ತು. ಆ ಮೇಲೆ ಮೆರಿನೊ ತಾನೇ ಮಧ್ಯಂತರ ಅಧ್ಯಕ್ಷರಾದರು. ಆದ್ದರಿಂದ ಸಾರ್ವಜನಿಕ ಆಕ್ರೋಶ ಮೆರಿನೊ ವಿರುದ್ಧ ಅಷ್ಟು ತೀವ್ರವಾಗಿತ್ತು.
ಮಧ್ಯಂತರ ಅಧ್ಯಕ್ಷರ ಬದಲಾವಣೆಯೊಂದಿಗೆ ಈ ಚಳುವಳಿ ನಿಲ್ಲುವ ಲಕ್ಷಣಗಳಿಲ್ಲ. ಸಾಮಾಜಿಕ ಚಳವಳಿಗಳು, ಎಡ ಪಕ್ಷಗಳು, ನಾಗರಿಕ ಸಂಘಟನೆಗಳು ಸಮಗ್ರವಾಗಿ ಪ್ರಜಾಸತ್ತಾತ್ಮಕವಾಗಿರುವ ಸಂವಿಧಾನವನ್ನು ರಚಿಸಬೇಕೆಂಬ ಹಕ್ಕೊತ್ತಾಯವನ್ನು ಮಂಡಿಸಿದ್ದಾರೆ. ಏಪ್ರಿಲ್ 2021 ರ ಅಧ್ಯಕ್ಷೀಯ ಚುನಾವಣೆಯೊಂದಿಗೆ 1993ರಲ್ಲಿ ಫುಜಿಮೊರಿ ಎಂಬ ಸರ್ವಾಧಿಕಾರಿ ರಚಿಸಿದ ಸಂವಿಧಾನವನ್ನು ಬದಲಿಸಬೇಕೆ ಎಂಬುದರ ಕುರಿತು ಜನಮತಸಂಗ್ರಹ ನಡೆಯಬೇಕೆಂದು ಒತ್ತಾಯಿಸಿದ್ದಾರೆ. ಶಿಕ್ಷಣ, ಆರೋಗ್ಯ, ಮನೆ ಮತ್ತು ಉದ್ಯೋಗದ ಹಕ್ಕುಗಳು ಮೂಲಭೂತ ಹಕ್ಕಾಗಿರುವ ಸಂವಿಧಾನವೊಂದು ಬೇಕು. ಸಂವಿಧಾನ ನವ-ಉದಾರವಾದ ಸೃಷ್ಟಿಸಿರುವ ಅಸಮಾನತೆಯನ್ನು ಮೂಲೋತ್ಪಾಟನೆ ಮಾಡುವ ಸಂವಿಧಾನ ಬೇಕು ಎಂದು ಒತ್ತಾಯಿಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *