ದಕ್ಷಿಣ ಅಮೆರಿಕಾದ ಪೆರು ವಿನಲ್ಲಿ ಶಾಲಾ ಶಿಕ್ಷಕ ನೊಬ್ಬ ಮತ್ತು ಆಳುವ ವರ್ಗಗಳಿಗೆ ಸೇರದ ಒಬ್ಬ ಎಡಪಂಥೀಯ ಅಧ‍್ಯಕ್ಷನಾಗಿ ಆಯ್ಕೆಯಾದ್ದು ಈಗ ಇತಿಹಾಸ. ಅದು ಇತ್ತೀಚಿನ ಇತಿಹಾಸವಾಗಿದ್ದರೂ, ಅದನ್ನು ನಿಜವಾಗಿಯೂ ಇತಿಹಾಸವಾಗಿಸಿದ್ದು ಆಳುವ ವರ್ಗಗಳ ಕಾನೂನುಬಾಹಿರ ಕ್ಷಿಪ್ರಕ್ರಾಂತಿ. ಪಾರ್ಲಿಮೆಂಟಿನಿಂದ ಅಧ್ಯಕ್ಷರ ವಜಾ ಮಾಡಿ, ಅಧ್ಯಕ್ಷರನ್ನು ಬಂಧಿಸಿ 18 ತಿಂಗಳುಗಳ ಶಿಕ್ಷೆ ವಿಧಿಸಿ ಉಪಾಧ್ಯಕ್ಷರು ಅಧಿಕಾರ ವಹಿಸಿಕೊಂಡ ದಿನದಿಂದ ಒಂದು ದಿನವೂ ಪೆರು ಶಾಂತವಾಗಿರಲಿಲ್ಲ. ದೇಶದಾದ್ಯಂತ ಪ್ರತಿಭಟನೆ, ಮೆರವಣಿಗೆಗಳು, ರಾಸ್ತಾ ರೋಕೊ, ವಿಮಾನ ನಿಲ್ದಾಣಗಳಿಗೆ ದಿಗ್ಬಂಧನ – ಹೀಗೆ ಹತ್ತು ಹಲವು ವಿಧಾನಗಳಲ್ಲಿ ಪ್ರತಿಭಟನೆ ನಡೆದಿದೆ.
ಈ ಪ್ರತಿರೋಧವನ್ನು ಪೋಲಿಸ್, ಮಿಲಿಟರಿ ಬಳಸಿ ಹಿಂಸಾತ್ಮಕವಾಗಿ ದಮನ ಮಾಡಲಾಗುತ್ತಿದೆ. ಕಳೆದ 5-6 ವಾರಗಳಿಂದ ನಡೆಯುತ್ತಿರುವ ಈ ದಮನಚಕ್ರದಲ್ಲಿ ಈ ವರೆಗೆ 60 ಜನ ಸತ್ತಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ. ನೂರಾರು ಜನರನ್ನು ಬಂಧಿಸಲಾಗಿದೆ. ಕೆಲವು ದಿನಗಳ ನಂತರ ಈ ಪ್ರತಿಭಟನೆಗಳು ನಿಂತು ಹೋಗುತ್ತವೆ ಎಂಬ ಪೆರು ಸರಕಾರದ ಮತ್ತು ಅದರ ಬೆಂಬಲಿಗ ಯು.ಎಸ್ ನಿರೀಕ್ಷೆ ಸುಳ‍್ಳಾಗಿದೆ. ಬದಲಿಗೆ ಪ್ರತಿಭಟನೆಗಳು ಇನ್ನಷ್ಟು ವ್ಯಾಪಕವಾಗಿವೆ, ಧೃಢಚಿತ್ತ ಪ್ರದರ್ಶಿಸಿವೆ.
ಇದನ್ನು ಓದಿ: ಪೆರು : ‘ಪಾರ್ಲಿಮೆಂಟರಿ ಕ್ಷಿಪ್ರಕ್ರಾಂತಿ’ ಮತ್ತು ರಾಜಕೀಯ ಬಿಕ್ಕಟ್ಟು
ಈ ವರೆಗಿನ ಪ್ರತಿಭಟನೆಗಳಿಗೆ ಶಿಖರಪ್ರಾಯವೆಂಬಂತೆ ಜನವರಿ 19ರಂದು ಪೆರುವಿನ “ನಾಲ್ಕು ಮೂಲೆಗಳಿಂದ ಜಾಥಾ” ಮತ್ತು ರಾಜಧಾನಿ “ಲಿಮಾವನ್ನು ವಶಪಡಿಸಿಕೊಳ್ಳುವ” ಕಾರ್ಯಕ್ರಮವನ್ನು ಹಾಕಿಕೊಳ್ಳಲಾಯಿತು. ಪೆರು ವಿನ ಮೂಲೆ ಮೂಲೆಗಳಿಂದ ಬಂದ ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳೆಯರು ರಾಜಧಾನಿ ಲಿಮಾ ತುಂಬಾ ಬೀಡು ಬಿಟ್ಟಿದ್ದಾರೆ. ಲಿಮಾ ದ ಬೀದಿಗಳು, ಚೌಕಗಳು, ವೃತ್ತಗಳು ಅವರಿಂದ ತುಂಬಿವೆ. ಅವರು ಸರಕಾರಿ ಆಫೀಸುಗಳಿಗೆ ಪ್ರವೇಶಕ್ಕ ಅಡ್ಡಿಯಾಗಿ ಕೂತಿದ್ದಾರೆ. ಅವರಿಗೆ ರಾಜಧಾನಿಯ ಜನತೆ ಮತ್ತು ಸಾಮಾಜಿಕ ಚಳುವಳಿಗಳು ಊಟ ಒದಗಿಸುತ್ತಿವೆ. ಶಾಲಾ ಕಾಲೇಜುಗಳಲ್ಲಿ ಅವರಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ. ಅವರು ರಾಜಧಾನಿ ಯನ್ನು ಇನ್ನೂ ‘ವಶಪಡಿಸಿ” ಕೊಳ್ಳದಿದ್ದರೂ, ಹೆಚ್ಚು ಕಡಿಮೆ ಸ್ತಬ್ಧಗೊಳಿಸಿದ್ದಾರೆ.
ಈವರೆಗಿನ ಪ್ರತಿಭಟನೆಗಳು ಮತ್ತು “ಲಿಮಾ ವಶಪಡಿಸಿಕೊಳ್ಳುವ” ಈಗಿನ ಕಾರ್ಯಕ್ರಮ ಈ ನಾಲ್ಕು ಹಕ್ಕೊತ್ತಾಯಗಳನ್ನು ಮಂಡಿಸಿವೆ :
- ಕಾನೂನು-ಬಾಹಿರರಾಗಿ ಅಧ್ಯಕ್ಷರಾದ ದಿನಾ ಬೊಲುಆರ್ತೆಯ ರಾಜೀನಾಮೆ
- ಜೈಲಿನಲ್ಲಿರುವ ಅಧ್ಯಕ್ಷ ಪೆದ್ರೊ ಕ್ಯಾಸ್ಟಿಲೊ ಬಿಡುಗಡೆ
- ಪಾರ್ಲಿಮೆಂಟಿನ ವಿಸರ್ಜನೆ ಮತ್ತು 2023ರಲ್ಲೇ ಚುನಾವಣೆ
- ಚುನಾವಣೆ ಜತೆಗೆ ಹೊಸ ಸಂವಿಧಾನ ಬರೆಯಲು ಸಂವಿಧಾನ ಸಭೆ ರಚಿಸಲು ಜನಮತಸಂಗ್ರಹ
ಇದನ್ನು ಓದಿ: ಪೆರು ಅಧ್ಯಕ್ಷೀಯ ಚುನಾವಣೆ: ಶಾಲಾ ಶಿಕ್ಷಕ ಪೆದ್ರೋ ಕ್ಯಾಸ್ಟಿಲೊ ಭರ್ಜರಿ ಗೆಲುವು
“ಲಿಮಾವನ್ನು ವಶಪಡಿಸಿಕೊಳ್ಳುವ” ಜನತೆಯ ಕಾರ್ಯಕ್ರಮವನ್ನು ನಿಗ್ರಹಿಸುವುದು, ನಿಭಾಯಿಸುವುದು ಪೆರು ಸರಕಾರಕ್ಕೆ ಸವಾಲಾಗಿದೆ. ಸರಕಾರ 12 ಸಾವಿರ ಪೋಲಿಸರನ್ನು ಈಗಾಗಲೇ ಲಿಮಾದಲ್ಲಿ ಹಾಕಿದ್ದು, ಇನ್ನೂ 14 ಸಾವಿರ ಪಡೆಗಳನ್ನು ಹಾಕಲು ಸಿದ್ಧಪಡಿಸುತ್ತಿದೆ ಎಂದು ವರದಿಯಾಗಿದೆ.
ಸರಕಾರಕ್ಕೆ ಇಷ್ಟು ಪಡೆಗಳಿಂದಲೂ ರಾಜಧಾನಿಯ ಬಹುಸಂಖ್ಯಾತ ಜನತೆಯ ಬೆಂಬಲವಿರುವ ಈ ದೃಢಚಿತ್ತದ ಚಳುವಳಿಗಾರರನ್ನು ನಿಭಾಯಿಸುವುದು ಕಷ್ಟವೆಂಬ ಅರಿವಿದೆ. ಹಾಗಾಗಿಯೇ, “ವಿದೇಶೀ ನೌಕಾಪಡೆ ಮತ್ತು ಮಿಲಿಟರಿ ಪಡೆಗಳನ್ನು ಅವರ ಶಸ್ತ್ರಾಸ್ತ್ರಗಳೊಂದಿಗೆ ದೇಶಕ್ಕೆ ಪ್ರವೇಶ ಮಾಡಲು ಅವಕಾಶ ಮಾಡಿಕೊಡುವ’ ಒಂದು ಕರಡು ಮಸೂದೆಯನ್ನು, ಜನವರಿ 18ರಂದು ಹಂಗಾಮಿ ಅಧ‍್ಯಕ್ಷರು ಪೆರು ಪಾರ್ಲಿಮೆಂಟಿನ ಮುಂದೆ ಮಂಡಿಸಿದ್ದಾರೆ. ಇಲ್ಲಿ ‘ಯಾವ ವಿದೇಶೀ ಪಡೆಗಳು” ಎಂದು ಊಹಿಸುವ ಅಗತ್ಯವಿಲ್ಲ. ಏಕೆಂದರೆ ಯು.ಎಸ್ ದಕ್ಷಿಣ ಕಮಾಂಡ್ ನ (ಇಡೀ ದಕ್ಷಿಣ ಅಮೆರಿಕ ಇದರ ವ್ಯಾಪ್ತಿಗೆ ಬರುತ್ತದೆ) ಮುಖ್ಯಸ್ಥ ಜನರಲ್ ಲಾರಾ ರಿಚರ್ಡ್ ಸನ್ ಜನವರಿ 19ರಂದು ಪತ್ರಿಕೆಗೆ ಕೊಟ್ಟ ಸಂದರ್ಶನವೊಂದರಲ್ಲಿ “ಈ ಪ್ರದೇಶ ನಮಗೆ ಮತ್ತು ನಮ್ಮ ರಾಷ್ಟ್ರೀಯ ಭದ್ರತೆಗೆ ಬಹಳ ಮುಖ್ಯವಾದದ್ದು. ನಾವು ಯಾವುದೇ ಪರಿಸ್ಥಿತಿಗೆ ಸಿದ್ಧವಾಗಿರಬೇಕಾಗಿದೆ” ಎಂದಿದ್ದಾರೆ. ಯಾಕೆ ಮುಖ್ಯವೆಂಬುದಕ್ಕೆ ಕಾರಣವನ್ನು ಸಹ ತಿಳಿಸಿದ್ದಾರೆ. ಯಾಕೆಂದರೆ ಇಲೆಕ್ಟ್ರಿಕ್ ವಾಹನಗಳಿಗೆ ಬೇಕಾಗಿರುವ ರೀಚಾರ್ಜೆಬಲ್ ಬ್ಯಾಟರಿಗಳಿಗೆ ಬೇಕಾಗುವ ಲಿಥಿಯಂ ಇರುವ ದೇಶಗಳ ತ್ರಿಕೋಣ ಇಲ್ಲಿದೆ.
ಸದ್ಯದಲ್ಲೇ ಪೆರುವಿನಲ್ಲಿ ಯು.ಎಸ್ ಮಿಲಿಟರಿ ಮಧ್ಯಪ್ರವೇಶ ಮಾಡುವ ಸ್ಪಷ್ಟ ಸೂಚನೆಗಳಿವೆ. ಅದಕ್ಕೆ ಪ್ರತಿರೋಧವೂ ಇರುತ್ತದೆ ಎಂಬುದು ಖಚಿತ. 1973ರ ಚಿಲಿಯ ನರಮೇಧದ 50ನೆಯ ವಾರ್ಷಿಕದಲ್ಲಿ ಅದು ಪೆರುವಿನಲ್ಲಿ ಪುನರಾವರ್ತನೆಯಾಗುವುದೇ?
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ