ಪ್ರಕಾಶ್ ಕಾರಟ್
ಶ್ರೀಲಂಕಾ ಗಂಭೀರ ರಾಜಕೀಯ, ಆರ್ಥಿಕ ಅರಾಜಕತೆಯಲ್ಲಿ ಸಿಲುಕಿದೆ. ದೇಶವನ್ನು ಈ ಸ್ಥಿತಿಗೆ ದೂಡಿದ ರಾಜಕಾರಣಿಗಳು ರಾತ್ರೋರಾತ್ರಿ ದೇಶದಿಂದ ಕಾಲ್ಕೀಳುತ್ತಿದ್ದಾರೆ. ಮೇಲಿಂದ ಮೇಲೆ ತುರ್ತು ಪರಿಸ್ಥಿತಿಗಳನ್ನು ಷೋಷಿಸಲಾಗುತ್ತಿದೆ. ಇದು ಅಲ್ಲಿನ ಜನತೆ ತತ್ತರಿಸುವಂತೆ ಮಾಡಿದೆ.
ಜುಲೈ 9 ರಂದು ಹತ್ತಾರು ಸಾವಿರ ಜನ ಶ್ರೀಲಂಕಾದ ಅಧ್ಯಕ್ಷರ ಅರಮನೆ, ಅವರ ಕಾರ್ಯಾಲಯ ಮತ್ತು ಪ್ರಧಾನಿಯ ಅಧಿಕೃತ ನಿವಾಸಗಳಿಗೆ ಮುತ್ತಿಗೆ ಹಾಕಿ ವಶಪಡಿಸಿಕೊಳ್ಳುವ ಮೂಲಕ ಜನಶಕ್ತಿಯ ವಿರಾಟ್ ದರ್ಶನವಾಗಿದೆ. ಪೊಲೀಸ್ ಮತ್ತು ಸೇನೆಯ ಬಿಗಿ ಬಂದೋಬಸ್ತನ್ನು ಎಳ್ಳಷ್ಟೂ ಲೆಕ್ಕಿಸದೆ ಮುನ್ನುಗ್ಗಿದ ಲಕ್ಷಾಂತರ ಜನ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರೂ ಸೇರಿದಂತೆ 20 ಲಕ್ಷ ಜನ ಅಧ್ಯಕ್ಷ ಗೋಟಬಯ ರಾಜಪಕ್ಸ ಹಾಗೂ ರಾಜಪಕ್ಸ ಕುಟುಂಬದ ಸರ್ವಾಧಿಕಾರಿ-ಭ್ರಷ್ಟ ಆಡಳಿತವನ್ನು ಕೊನೆಗೊಳಿಸುವ ಸಂಕಲ್ಪದೊಂದಿಗೆ ದೇಶದ ನಾನಾ ಭಾಗಗಳಿಂದ ರಾಜಧಾನಿಗೆ ಬಂದಿದ್ದರು.
ಅಧ್ಯಕ್ಷರ ಅರಮನೆಯಿಂದ ಸೇನಾ ನೆಲೆಯೊಂದಕ್ಕೆ ಕರೆದೊಯ್ಯಲಾಗಿದ್ದ ಗೋಟಬಯ, ಜುಲೈ 13ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದರು. ಅದೇ ದಿನ, ಅಂದರೆ ಜುಲೈ 13ರ ಮುಂಜಾನೆ ಗೋಟಬಯ ಮಿಲಿಟರಿ ವಿಮಾನವೊಂದರಲ್ಲಿ ಮಾಲ್ದೀವ್ಸ್‌ಗೆ ಪಲಾಯನ ಮಾಡಿದರು. ಇದರೊಂದಿಗೆ ಜನರ ಆಕ್ರೋಶಕ್ಕೆ ಗುರಿಯಾಗಿರುವ ರಾಜಪಕ್ಸ ಕುಟುಂಬದ ಒಂದು ಭಾಗ ಮುಗಿಯಿತು. ಆದರೆ ಪರಾರಿಯಾಗುವುದಕ್ಕೂ ಮೊದಲು ಗೋಟಬಯ, ಪ್ರಧಾನಿ ರನಿಲ್ ವಿಕ್ರಮಸಿಂಘೆಯನ್ನು ಕಾರ್ಯಕಾರಿ ಅಧ್ಯಕ್ಷರಾಗಿ ನೇಮಿಸಿದರು. ಇದು ಪ್ರಭುತ್ವದ ಮೇಲೆ ಹೇಗಾದರೂ ಮಾಡಿ ಒಂದಿಷ್ಟು ನಿಯಂತ್ರಣ ಸಾಧಿಸುವ ಹತಾಶ ಪ್ರಯತ್ನವಾಗಿತ್ತು. ಸರ್ವ ಪಕ್ಷಗಳ ಸರ್ಕಾರವೊಂದು ರಚನೆಯಾದ ತಕ್ಷಣವೇ ತಾನು ಪದತ್ಯಾಗ ಮಾಡುವುದಾಗಿ ವಿಕ್ರಮಸಿಂಘೆ ಪ್ರಮಾಣ ಮಾಡಿದ್ದರು. ಗೋಟಬಯ ರಾಜಿನಾಮೆ ನೀಡುವವರೆಗೆ ಅಧಿಕಾರದಲ್ಲಿ ಮುಂದುವರಿಯಲು ಕಾಲ ವಿಳಂಬ ಮಾಡುವ ತಂತ್ರ ಅದಾಗಿತ್ತು. ಶ್ರೀಲಂಕಾ ಸಂವಿಧಾನದ ಅನುಸಾರ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಪ್ರಧಾನಿಯಾದವು ಹಂಗಾಮಿ ಅಧ್ಯಕ್ಷರಾಗಲು ಅವಕಾಶವಿರುವುದೇ ಇದಕ್ಕೆ ಕಾರಣ.
ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿರುವುದಕ್ಕೂ ಜನ ಆಕ್ರೋಶಗೊಂಡಿದ್ದಾರೆ. ಏಕೆಂದರೆ ದೇಶದ ಪ್ರಸಕ್ತ ಬಿಕ್ಕಟ್ಟಿಗೆ ರಾಜಪಕ್ಸರಂತೆ ವಿಕ್ರಮಸಿಂಘೆ ಕೂಡ ಅಷ್ಟೇ ಹೊಣೆಗಾರರು ಎನ್ನುವುದೇ ಜನರ ಸಿಟ್ಟಿಗೆ ಕಾರಣ. ಗೋಟಬಯರ ಸೋದರ ಮಹಿಂದ ರಾಜಪಕ್ಸ ಮೇ ೯ರಂದು ರಾಜೀನಾಮೆ ನೀಡುವ ಅನಿವಾರ್ಯಕ್ಕೆ ಸಿಲುಕಿದ ನಂತರ ಸಂಸತ್ತಿನಲ್ಲಿ ಯುಎನ್‌ಪಿ ಪಕ್ಷದ ಏಕೈಕ ಪ್ರತಿನಿಧಿಯಾಗಿದ್ದ ವಿಕ್ರಮಸಿಂಘೆಯನ್ನು ಸಚಿವ ಸಂಪುಟದ ಮುಖ್ಯಸ್ಥರಾಗಿ, ಅಂದರೆ ಪ್ರಧಾನಿಯಾಗಿ ಗೋಟಬಯ ಆಯ್ಕೆ ಮಾಡಿದ್ದರು.
ರಾಜಪಕ್ಸರಂತೆ ಅಪಖ್ಯಾತಿಗೆ ಗುರಿಯಾಗಿದ್ದ ವಿಕ್ರಮಸಿಂಘೆ ತುರ್ತು ಪರಿಸ್ಥಿತಿ ಘೋಷಿಸಿದ್ದರು, ಸೇನೆಯನ್ನು ಕರೆಸಿ ಕಾನೂನು ಸುವ್ಯವಸ್ಥೆ ಸ್ಥಾಪನೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಿ ಎಂದು ಆದೇಶ ನೀಡಿದರು. ಇದೇ ಸಂದರ್ಭದಲ್ಲಿ ‘ಫ್ಯಾಸಿಸ್ಟ್ ಶಕ್ತಿಗಳು’ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ಆದರೆ ಜನರ ದೃಢ ಸಂಕಲ್ಪ ಮತ್ತೊಮ್ಮೆ ಪ್ರದರ್ಶನಗೊಂಡಿದ್ದು ಆಳುವ ವರ್ಗದ ತಂತ್ರಗಳನ್ನು ವಿಫಲಗೊಳಿಸಲಿದ್ದಾರೆ. ಜುಲೈ 9ರಂತೆ ಪ್ರತಿಭಟನಾ ನಿರತ ಜನ ಪ್ರಧಾನಿ ಕಚೇರಿಗೆ ಬೃಹತ್ ಸಂಖ್ಯೆಯಲ್ಲಿ ತೆರಳಿ ಸ್ವಾಧೀನ ಪಡಿಸಿಕೊಂಡರು. ಪೊಲೀಸರು ಹಾಗೂ ಸೈನಿಕರು ಸಿಡಿಸಿದ ನೂರಾರು ಟಿಯರ್ ಗ್ಯಾಸ್ ಶೆಲ್‌ಗಳನ್ನು ಲೆಕ್ಕಿಸದೆ ಮುನ್ನುಗ್ಗಿ ಪ್ರಧಾನಿ ಕಚೇರಿಯನ್ನು ವಶಪಡಿಸಿಕೊಂಡರು.
ಮಾರ್ಚ್ 31ರಂದು ಅರಗಲಯ (ಹೋರಾಟ) ಆರಂಭವಾಗಿ ನಾನಾ ವಿಭಾಗಗಳ ಜನ ರಾಷ್ಟ್ರಪತಿ ಕಾರ್ಯಾಲಯದ ಹೊರಗಿನ ‘ಗಾಲೆ ಫೇಸ್ ಗ್ರೀನ್ ಬಳಿ ನೆರೆದು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಪ್ರತಿರೋಧ ದಾಖಲಿಸಿದ್ದರು. ಆರ್ಥಿಕ ಬಿಕ್ಕಟ್ಟಿನಿಂದಾಗಿ ಆಹಾರ ಕೊರತೆ, ಇಂಧನ ಕೊರತೆ, ಗಗನಕ್ಕೇರಿರುವ ಹಣದುಬ್ಬರವನ್ನು ಖಂಡಿಸಿದರು.
ಆರ್ಥಿಕತೆ ಕುಸಿದು ವಿದೇಶಿ ಸಾಲ ಮರುಪಾವತಿಸಲಾಗದೆ ಸುಸ್ತಿಯಾಗಿದ್ದನ್ನು ವಿರೋಧಿಸಿ ಈ ಶಾಂತಿಯುತ ಚಳವಳಿ ‘ಗೋಟಾ ಹೋ ಗಾಮ’(ಗೋತಾ ಮನೆಗೆ ಹೋಗು) ಘೋಷಣೆ ಮೂಲಕ ಗಾಲೆ ಫೇಸ್ ಮತ್ತು ಪ್ರಧಾನಿ ಮಹಿಂದ ರಾಜಪಕ್ಸರ ಅಧಿಕೃತ ನಿವಾಸದ ಮುಂದೆ ಜಮಾಯಿಸಿದ್ದರು.
ಪ್ರಧಾನಿ ಮಹಿಂದ ರಾಜಪಕ್ಸ ತನ್ನ ಪಕ್ಷದ ಗೂಂಡಾಗಳನ್ನು ಕರೆಸಿಕೊಂಡು ಪ್ರತಿಭಟನಕಾರರ ಮೇಲೆ ದಾಳಿ ನಡೆಸಿದ ಮೇ 9 ಪ್ರಮುಖ ತಿರುವು ಪಡೆದ ದಿನವಾಗಿದ್ದು ಪ್ರತಿಭಟನಕಾರರ ಮೇಲೆ ದಾಳಿ ನಡೆಸಿದರು. ಆದರೆ ಇದನ್ನು ಲೆಕ್ಕಿಸದ ಜನ ಪ್ರತೀಕಾರಕ್ಕೆ ಮುಂದಾಗಿದ್ದು ಮಹಿಂದ ರಾಜಪಕ್ಸರನ್ನು ಪ್ರಧಾನಿ ಹುದ್ದೆ ತ್ಯಜಿಸಲು ಕಾರಣವಾಯಿತು.
ಸಾಮೂಹಿಕ ಪ್ರತಿಭಟನಾ ಚಳವಳಿ ಎರಡು ಸಾರ್ವತ್ರಿಕ ಮುಷ್ಕರಗಳನ್ನು ಕಂಡಿತು. ಮೊದಲೆನೆಯದು ಕಾರ್ಮಿಕರದು ಮತ್ತು ಎರಡನೆಯದು ಎಲ್ಲ ಧರ್ಮಗಳ ಮುಖಂಡರು ಸೇರಿದಂತೆ ಸಮಾಜದ ಎಲ್ಲ ವಿಭಾಗಗಳ ಜನ ಪಾಲ್ಗೊಂಡಿದ್ದು. ಅಧಿಕಾರಕ್ಕೆ ಅಂಟಿಕೊಂಡಿರುವ ಗೋಟಬಯರ ಮೋಸದ ಪ್ರಯತ್ನಗಳು ಮೇ 9ರ ನಂತರ ರನಿಲ್ ವಿಕ್ರಮಸಿಂಘೆಯನ್ನು ಪ್ರಧಾನಿಯಾಗಿ ನೇಮಿಸುವ ಮೂಲಕ ಬಹಿರಂಗವಾಗಿತ್ತು. ಸಮಯಸಾಧಕತನದ ಪರಮಾವಧಿ ತೋರಿದ ವಿಕ್ರಮಸಿಂಘೆ ಆಳುವ ಶ್ರೀಲಂಕಾ ಪೊದುಜನ ಪೆರುಮನ (ಎಸ್‌ಎಲ್‌ಪಿಪಿ) ನೇತೃತ್ವದ ಸರ್ಕಾರದ ನಾಯಕತ್ವ ವಹಿಸಲು ತಕ್ಷಣವೇ ಒಪ್ಪಿಕೊಂಡರು. ಆದರೆ ಈ ತಂತ್ರ ಗೋಟಬಯರಿಗೆ ಅಲ್ಪಕಾಲವಷ್ಟೆ ಅವಕಾಶ ನೀಡಿತ್ತು.
ಸರಕಾರ ಎಷ್ಟೇ ಕಾನೂನುಬದ್ಧವಾಗಿದ್ದರೂ ಜನಸಮೂಹದ ಅತೃಪ್ತಿ ಹೆಚ್ಚಿದ್ದರಿಂದ ಜನತಾ ಚಳವಳಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಲು ಸೇನೆ, ಪೊಲೀಸರು ಮತ್ತು ನ್ಯಾಯಾಂಗ ಕೂಡ ಯಾವುದೇ ಕ್ರಮ ಕೈಗೊಳ್ಳಲು ನಿರಾಕರಿಸಿತ್ತು.
ರಾಜಪಕ್ಸ ಕುಟುಂಬದ ಎರಡು ದಶಕಗಳ ರಾಜಕೀಯ ಹಿಡಿತದಿಂದ ಬಿಡಿಸಿಕೊಳ್ಳುವ ಅಂತಿಕ ಹಂತಕ್ಕೆ ಶ್ರೀಲಂಕಾ ತಲುಪಿದೆ. ಮೊದಲಿಗೆ ಮಹಿಂದ ರಾಜಪಕ್ಸ ಸಿಂಹಳ ಬೌದ್ಧ ಬಹುಸಂಖ್ಯಾತವಾದವನ್ನು ಪ್ರತಿಪಾದಿಸಿ ಸರ್ವಾಧಿಕಾರವನ್ನು ಕ್ರೋಢಕರಿಸಿದರು. ಕಾರ್ಯಕಾರಿ ಅಧ್ಯಕ್ಷ ಸ್ಥಾನವನ್ನು ತನ್ನ ಸರ್ವಾಧಿಕಾರ ಕೇಂದ್ರೀಕರಣಕ್ಕೆ ಬಳಸಿದರು. ಸರ್ಕಾರದ ಎಲ್ಲ ಹಂತಗಳಲ್ಲಿ ಭ್ರಷ್ಟ ಜಾಲವನ್ನು ರೂಪಿಸಿದರು.
ಗೋಟಬಯ ರಾಜಪಕ್ಸ 2019ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಶ್ರೀಲಂಕಾ ಸಂವಿಧಾನಕ್ಕೆ ಮಾಡಲಾದ ೨೦ನೇ ತಿದ್ದುಪಡಿ ಕಾರ್ಯಕಾರಿ ಅಧ್ಯಕ್ಷರಿಗೆ ವ್ಯಾಪಕ ಅಧಿಕಾರಗಳನ್ನು ನೀಡಿತು. ಹಿರಿಯ ನ್ಯಾಯಮೂರ್ತಿಗಳ ನೇಮಕಾತಿ, ಚುನಾವಣೆ ಆಯೋಗ, ಪೊಲೀಸ್ ಆಯೋಗ ಹಾಗೂ ಭ್ರಷ್ಟಾಚಾರ ತನಿಖಾ ಆಯೋಗದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಅದು ಅವಕಾಶ ಕಲ್ಪಿಸಿತು. ಅಣ್ಣ ಮಹಿಂದ ರಾಜಪಕ್ಸರನ್ನು ಪ್ರಧಾನಿಯಾಗಿ ನೇಮಕದ ಜೊತೆಗೆ ಅವರ ಸಹೋದರರು, ಕುಟುಂಬದ ಇತರ ಹಲವು ಸದಸ್ಯರನ್ನು ಪ್ರಮುಖ ಸಚಿವ ಖಾತೆಗಳು ಹಾಗೂ ಇತರ ಹುದ್ದೆಗಳಿಗೆ ನೇಮಿಸಿದರು. ದೇಶದ ಒಟ್ಟು ಬಜೆಟ್‌ನ ಶೇಕಡ 75ರಷ್ಟು ನೇರವಾಗಿ ರಾಜಪಕ್ಸ ಕುಟುಂಬದ ಸಚಿವರ ವ್ಯಾಪ್ತಿಯಲ್ಲಿತ್ತು. ಪ್ರಸಕ್ತ ಆರ್ಥಿಕ ಬಿಕ್ಕಟ್ಟಿಗೆ ಕೇವಲ ಹಣಕಾಸಿನ ತಪ್ಪು ನಿರ್ವಹಣೆ ಮತ್ತು ಕೆಟ್ಟ ನೀತಿಗಳು ಮಾತ್ರವಲ್ಲ ಹಣಕಾಸು ವ್ಯವಸ್ಥೆಯ ಎಲ್ಲ ಕ್ಷೇತ್ರಗಳಲ್ಲಿನ ತುಂಬಿರುವ ವ್ಯಾಪಕ ಭ್ರಷ್ಟಾಚಾರವೂ.
ಜುಲೈ 13ರ ಸಂಜೆ ಸ್ಪೀಕರೆ ಕರೆದಿದ್ದ ಸರ್ವ ಪಕ್ಷಗಳ ಸಭೆಯಲ್ಲಿ, ರನಿಲ್ ವಿಕ್ರಮಸಿಂಘೆ ರಾಜಿನಾಮೆ ನೀಡಬೇಕು ಹಾಗೂ ಸ್ಪೀಕರ್ ಕಾರ್ಯಕಾರಿ ಅಧ್ಯಕ್ಷರಾಗಬೇಕೆಂದು ನಿರ್ಧಾರವಾಯಿತು. ಸೇನಾ ಪಡೆಗಳು ಈ ಸಾಂವಿಧಾನಿಕ ಕ್ರಮವನ್ನು ಒಪ್ಪಿಕೊಳ್ಳಬೇಕು. ಸೇನೆ ರನಿಲ್‌ರ ಆದೇಶಗಳನ್ನು ಪಾಲಿಸಿದರೆ ಮತ್ತು ಪ್ರತಿಭಟನಕಾರರನ್ನು ಹತ್ತಿಕ್ಕಲು ಮುಂದಾದರೆ ಅಪಾಯಕಾರಿ ಪರಿಸ್ಥಿತಿ ಉದ್ಭವಿಸಲಿದೆ.
ಶ್ರೀಲಂಕಾ ಈಗಿನ ಪರಿಸ್ಥಿತಿಯಿಂದ ಹೊರಬರಲು ತುಂಬಾ ದೀರ್ಘ ದಾರಿ ಇದಾಗಿದೆ. ದೇಶದ ಬಹುತೇಕ ಮುಖ್ಯವಾಹಿನಿ ರಾಜಕೀಯ ವರ್ಗ ಜನರ ವಿಶ್ವಾಸವನ್ನು ಕಳೆದುಕೊಂಡಿರುವುದರಿಂದ ಸರ್ವಸಮ್ಮತ ಪ್ರಧಾನಿಯನ್ನು ಆಯ್ಕೆ ಮಾಡಿಕೊಂಡು ಸರ್ವ ಪಕ್ಷ ಸರ್ಕಾರ ರಚಿಸುವುದು ಅನಿವಾರ್ಯವಾಗಿದೆ. ಸರ್ವಾಧಿಕಾರಕ್ಕೆ ಮೂಲಹೇತುವಾದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನವನ್ನು ತೆಗೆದು ಹಾಕಲು ಸಂವಿಧಾನಕ್ಕೆ ತಿದ್ದುಪಡಿ ತರುವುದು ಮುಂದಿನ ಹೆಜ್ಜೆಯಾಗಬೇಕು.
ಆದರೆ ಮುಂದಿನ ಹಾದಿಯಲ್ಲಿ ಸಾಕಷ್ಟು ಅಡೆತಡೆ, ಅಡ್ಡಿ ಆತಂಕಗಳಿವೆ. ಪ್ರಸಕ್ತ ಸಂಸತ್ತಿನಲ್ಲಿ ರಾಜಪಕ್ಸರ ಎಸ್‌ಎಲ್‌ಪಿಪಿಯೇ ಮೇಲುಗೈ ಹೊಂದಿದೆ. ಜನರ ವಿಶ್ವಾಸ ಗಳಿಸುವ ಹೊಸ ಅಧ್ಯಕ್ಷರನ್ನು ಪಡೆಯುವುದು ದೊಡ್ಡ ಸವಾಲು. ಆರು ತಿಂಗಳ ನಂತರ ಹೊಸದಾಗಿ ಚುನಾವಣೆ ನಡೆಯಬೇಕಿದೆ. ಅಂತಿಮವಾಗಿ, ಆರ್ಥಿಕತೆಯನ್ನು ಪುನರ್ ನಿರ್ಮಾಣ ಮಾಡುವ ಕಷ್ಟಕರ ಸವಾಲು ಎದುರಿಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಒದಗಿಸಿದ ನೆರವಿನ ಪ್ಯಾಕೇಜ್ ಹಲವು ಷರತ್ತುಗಳನ್ನು ಹೊಂದಿದೆ. ಕಠಿಣ ಮಿತವ್ಯಯ ಕ್ರಮ ಅನುಸರಿಸಬೇಕೆನ್ನುವುದು ಸಾಮಾನ್ಯವಾಗಿ ಬಹುಮುಖ್ಯ ಷರತ್ತಾಗಿರುತ್ತದೆ.
ಶ್ರೀಲಂಕಾ ಜನರಿಗೆ ಅರಗಾಲಯ ಇನ್ನೂ ಮುಗಿದಿಲ್ಲ. ಆದರೆ ಈವರೆಗೆ ಅವರು ಸಾಧಿಸಿರುವುದು ಜನಾಂಗೀಯ-ರಾಷ್ಟ್ರವಾದ ಹಾಗೂ ಕೋಮುವಾದಿ ಧ್ರುವೀಕರಣದ ಮೇಲೆ ಬೆಳೆಯುವ ಸರ್ವಾಧಿಕಾರಿ ಆಡಳಿತಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಹಾಗಿದ್ದರೂ ಜನ ಸುಮ್ಮನಿದ್ದಾರೆ ಎಂದು ಭಾವಿಸಿದರೂ ಸದಾ ಕಾಲ ನಿಮ್ಮ ಅಡಿಯಾಳಾಗಿ ಇರುವುದಿಲ್ಲ. ಒಂದಲ್ಲ ಒಂದು ದಿನ ಅವರು ನಿಮ್ಮನ್ನು ಎದುರಿಸಿಯೇ ಎದುರಿಸುತ್ತಾರೆ.
ಅನು: ವಿಶ್ವ