ಸುಸ್ಥಿತಿ’ಯಲ್ಲಿ ಕರ್ನಾಟಕದ ಆರ್ಥಿಕತೆ: ದುಸ್ಥಿತಿಯಲ್ಲಿ ಜನರ ಬದುಕು

-ಪ್ರೊ. ಟಿ.ಆರ್.ಚಂದ್ರಶೇಖರ

ಕರ್ನಾಟಕದ ಆರ್ಥಿಕತೆಯು ಸಮೃದ್ಧವಾಗಿದೆ. ಅದರ ಬೆಳವಣಿಗೆ ದರವು 2023-24ರಲ್ಲಿ ಶೇ. 10.2ರಷ್ಟಿದೆ (ಮೂಲ: ಭಾರತ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ). ಇದು ದೇಶದ ಆರ್ಥಿಕ ಬೆಳವಣಿಗೆ ದರವಾದ ಶೇ. 8.2ಕ್ಕಿಂತ ಅಧಿಕವಾಗಿದೆ. ಕೆಳಗಿನ ಕೋಷ್ಟಕದಲ್ಲಿ ನಮ್ಮ ನೆರೆಯ ರಾಜ್ಯಗಳ ಆರ್ಥಿಕ ಬೆಳವಣಿಗೆ ದರ ಮತ್ತು ನಿವ್ವಳ ರಾಜ್ಯ ಆಂತರಿಕ ಉತ್ಪನ್ನದ(ಎನ್‌ಎಸ್‌ಡಿಪಿ) ವಿವರಗಳನ್ನು ನೀಡಲಾಗಿದೆ.

ಕೊಷ್ಟಕ 1. ಕರ್ನಾಟಕದ ನಿವ್ವಳ ರಾಜ್ಯ ಆಂತರಿಕ ಉತ್ಪನ್ನ

2019-20 ಮತ್ತು 2022-23

(ಚಾಲ್ತಿ ಬೆಲೆಗಳಲ್ಲಿ: ಲಕ್ಷ ಕೋಟಿ ರೂಪಾಯಿಗಳು)

ಮೂಲ: ಭಾರತ ಸರ್ಕಾರ 2024-ಆರ್ಥಿಕ ಸಮೀಕ್ಷೆ 2023-24

ಕೋಷ್ಟಕದಲ್ಲಿ ತಮಿಳುನಾಡು ಬಿಟ್ಟರೆ ವರಮಾನವು ಅಧಿಕವಾಗಿರುವ ರಾಜ್ಯವೆಂದರೆ ಕರ್ನಾಟಕ. ತಲಾ ನಿವ್ವಳ ರಾಜ್ಯ ಆಂತರಿಕ ಉತ್ಪನ್ನದಲ್ಲಿ ಕರ್ನಾಟಕವು ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳಿಗಿಂತ ಉತ್ತಮ ಸ್ಥಾನದಲ್ಲಿದೆ. ಇದೇ ರೀತಿಯಲ್ಲಿ ಅಭಿವೃದ್ಧಿಯ ಮತ್ತೊಂದು ಮಾಪನವಾದ ಮಾನವ ಅಭಿವೃದ್ಧಿಯಲ್ಲಿಯೂ ರಾಜ್ಯವು ಉತ್ತಮ ಸ್ಥಾನದಲ್ಲಿದೆ. ಕರ್ನಾಟಕ ಮಾನವ ಅಭಿವೃದ್ಧಿ ವರದಿ 2022ರ ಪ್ರಕಾರ ದೇಶದ ಪ್ರಮುಖ ರಾಜ್ಯಗಳಲ್ಲಿ 2019ರಲ್ಲಿ ರಾಜ್ಯ 11 ನೆಯ ಸ್ಥಾನದಲ್ಲಿದೆ. ಕರ್ನಾಟಕ ಮಾನವ ಅಭಿವೃದ್ಧಿ ಸೂಚ್ಯಂಕ 0.644. ಆದರೆ ದೇಶದ ಮಾನವ ಅಭಿವೃದ್ಧಿ ಸೂಚ್ಯಂಕ 0.629.

ಇದನ್ನೂ ಓದಿ: ಸೌಲಭ್ಯ ಕೊಡಿ ಎಂದು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ವಾರ್ಡನ್‌ ದಬ್ಬಾಳಿಕೆ

ಜನಸಂಖ್ಯೆಯ ಬೆಳವಣಿಗೆಯನ್ನು ಸಮರ್ಥವಾಗಿ ನಿಯಂತ್ರಿಸಿರುವ ರಾಜ್ಯ ಕರ್ನಾಟಕ. ಕರ್ನಾಟಕದ ಒಟ್ಟು ಫಲವತ್ತತೆ ಪ್ರಮಾಣ (ಟಿಎಫ್‌ಆರ್) 1.8ಕ್ಕಿಳಿದಿದೆ. ಇದು ಯಾವುದನ್ನು ಪುನರ್‌ ಭರ್ತಿ ದರ ಎನ್ನುತ್ತೇವೆಯೋ ಅದಕ್ಕಿಂತ ಕೆಳಮಟ್ಟದಲ್ಲಿದೆ. ಇಂದು ಕರ್ನಾಟಕದಲ್ಲಿ ಜನಸಂಖ್ಯೆಯು ಸಮಸ್ಯೆಯಾಗಿ ಉಳಿದಿಲ್ಲ. ಇದು ಕರ್ನಾಟಕ ಆರ್ಥಿಕತೆಯ ಸಮೃದ್ಧಿಯ-ಸುಸ್ಥಿತಿಯ ಚಿತ್ರ. ಇದಕ್ಕೆ ಎದುರಾಗಿ ಜನರ ಬದುಕಿನ ದುಸ್ಥಿತಿಯ ಚಿತ್ರವಿದೆ.

ಜನರ ಬದುಕು ಸಮೃದ್ಧವಾಗಿಲ್ಲ

ಆರ್ಥಿಕತೆಯು ಸಮೃದ್ಧವಾಗಿದೆ. ಆದರೆ ಈ ಸಮೃದ್ಧತೆಯನ್ನು ಸಮಾಜದಲ್ಲಿನ ಎಲ್ಲರಿಗೂ ಮತ್ತು ಎಲ್ಲ ಲಿಂಗಗಳಿಗೂ ಹಾಗೂ ಎಲ್ಲ ಪ್ರದೇಶಗಳಿಗೂ ಸಮಾನವಾಗಿ ಹಂಚುವುದು ಸಾಧ್ಯವಾಗಿಲ್ಲ. ಆರ್ಥಿಕ ಅಭಿವೃದ್ಧಿಯಲ್ಲಿ ವರಮಾನದ ಏರಿಕೆಯು ಎಷ್ಟು ಮುಖ್ಯವೋ ಅದರ ಹಂಚಿಕೆಯೂ ಅಷ್ಟೇ ಮುಖ್ಯ.  ಆದರೆ ಆರ್ಥಿಕ ಸಮೃದ್ಧತೆಯ ಹಂಚಿಕೆಯು ನಡೆಯುತ್ತಿಲ್ಲ. ಇದಕ್ಕೆ ಪ್ರಮುಖ ಸೂಚಿಯೆಂದರೆ ಆರ್ಥಿಕತೆಯ ಮೂರು ವಲಯಗಳ ನಡುವಣ ವರಮಾನದ ಹಂಚಿಕೆ.

ಕೋಷ್ಟಕ 2. ಕೃಷಿ-ಕೃಷಿಯೇತರ ವಲಯಗಳ ವರಮಾನದಲ್ಲಿನ ಅಸಮಾನತೆ (ಚಾಲ್ತಿ ಬೆಲೆಗಳು: ಕೋಟಿ ರೂಪಾಯಿಗಳು)

ಮೂಲ ಕನಾಟಕ ಆರ್ಥಿಕ ಸಮೀಕ್ಷೆ 2013-14 (ಪುಟ 16) ಮತ್ತು 2022-23 (ಪುಟ 21)

ಕರ್ನಾಟಕದಲ್ಲಿ ಒಟ್ಟು ದುಡಿಮೆಗಾರರಲ್ಲಿ ಕೃಷಿ ಮತ್ತು ತತ್ಸಬಂಧಿ ವಲಯ ಮತ್ತು ಇತರೆ ವಲಯಗಳ ನಡುವೆ ಅಂದಾಜು ಅನುಕ್ರಮವಾಗಿ ಶೇ. 45 ಮತ್ತು ಶೇ. 55ರಂತೆ ಹಂಚಿಕೆಯಾಗಿದೆ. ಅಂದರೆ ಒಟ್ಟು ದುಡಿಮೆಗಾರರಲ್ಲಿ ಶೇ. 45ರಷ್ಟು ಜನರು ರಾಜ್ಯದ ನಿವ್ವಳ ವರಮಾನದಲ್ಲಿ ಪಡೆಯುತ್ತಿರುವ ಪ್ರಮಾಣ ಎರಡೂ ಕಾಲಘಟ್ಟಗಳಲ್ಲಿ ಶೇ. 15 ರಷ್ಟಿದೆ. ಆದರೆ ಕೈಗಾರಿಕೆ ಮತ್ತು ಸೇವಾ ವಲಯದ ಶೇ. 55ರಷ್ಟು ದುಡಿಮೆಗಾರರು ವರಮಾನದಲ್ಲಿನ ಶೇ. 85ರಷ್ಟನ್ನು ಅನುಭವಿಸುತ್ತಿದ್ದಾರೆ. ಇದು ಅಸಮಾನ್ಯ ಅಸಮಾನತೆಯಾಗಿದೆ.

ಈ ಬಗೆಯ ಅಸಮಾನತೆಯಿಂದಾಗಿ ಇಂದು ಗ್ರಾಮೀಣ ಪ್ರದೇಶದ ಭೂರಹಿತ ದಿನಗೂಲಿ ದುಡಿಮೆಗಾರರು ಉದ್ಯೋಗವನ್ನು-ಬದುಕನ್ನು ಅರಸಿಕೊಂಡು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಬೆಂಗಳೂರು ರಾಜ್ಯದೊಳಗಿನ ಮತ್ತು ಹೊರರಾಜ್ಯಗಳಲ್ಲಿನ ವಲಸೆ ಕಾರ್ಮಿಕರಿಂದ ತುಂಬಿ ತುಳುಕುತ್ತಿದೆ. ಯಾವುದನ್ನು ‘ಕ್ಯಾರಿಯಿಂಗ್ ಕೆಪಾಸಿಟಿ’ ಎನ್ನುತ್ತೇವೆಯೋ ಅದನ್ನು ಮೀರಿ ಬೆಂಗಳೂರು ಬೆಳೆಯುತ್ತಿದೆ.

ಇದನ್ನೂ ಓದಿ: ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

ಸುಸ್ಥಿತಿ'ಯಲ್ಲಿ ಕರ್ನಾಟಕದ ಆರ್ಥಿಕತೆ: ದುಸ್ಥಿತಿಯಲ್ಲಿ ಜನರ ಬದುಕು

ರಾಜ್ಯದ 2021-22ರ ಒಟ್ಟು ರಾಜ್ಯ ಆಂತರಿಕ ಉತ್ಪನ್ನದಲ್ಲಿ ಬೆಂಗಳೂರು ನಗರ ಜಿಲ್ಲೆಯ ಪಾಲು ಶೇ. 35.58 (ರೂ.69.84 ಲಕ್ಷ ಕೋಟಿ). ಉಳಿದ 30 ಜಿಲ್ಲೆಗಳ ಪಾಲು ಶೇ. 64.42 (ರೂ.189.29 ಲಕ್ಷ ಕೋಟಿ). ಈ ಕಾರಣದಿಂದಲೇ ಬೆಂಗಳೂರು ನಗರ ಜಿಲ್ಲೆಯ ತಲಾ ವರಮಾನ 2021-22ರಲ್ಲಿ ರೂ. 6,21,131. ಉಳಿದ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯದ್ದು ರೂ. 4,43,057 ರಷ್ಟಿದ್ದರೆ, ಯಾದಗಿರಿ ಜಿಲ್ಲೆಯದ್ದು ರೂ. 1,24,998 ರಷ್ಟಿದೆ. ಅಂದರೆ ಯಾದಗಿರಿ ಜಿಲ್ಲೆಯ ತಲಾ ವರಮಾನವು ಬೆಂಗಳೂರು ನಗರ ಜಿಲ್ಲೆಯ ತಲಾ ವರಮಾನಕ್ಕಿಂತ ಶೇ. 20ರಷ್ಟಿದೆ. ಅಂದರೆ ಯಾದಗಿರಿ ಜಿಲ್ಲೆಯ ತಲಾ ವರಮಾನವು ಬೆಂಗಳೂರು ನಗರ ಜಿಲ್ಲೆಯ ತಲಾ ವರಮಾನದ ಒಂದನೆಯ ಐದರಷ್ಟು (1/5) ಇದೆ. ಇಲ್ಲಿನ ಅಸಮಾನತೆಯು ಅಸಾಧಾರಣವಾದುದಾಗಿದೆ.

ಮಹಿಳೆಯರ ಸ್ಥಿತಿಗತಿ

ಜನರ ಬದುಕಿನ ಸುಸ್ಥಿತಿಯ ಮುಖ್ಯ ಸೂಚಿಯೆಂದರೆ ಮಹಿಳೆಯರ ಸಾಮಾಜಿಕ-ಆರೋಗ್ಯ ಸ್ಥಿತಿಗತಿ. ಈ ವಿಷಯದಲ್ಲಿ ಕರ್ನಾಟಕವು ಸಾಧಾರಣ ಸ್ಥಿತಿಯಲ್ಲಿದೆಯಾದರೂ ಅದು ಸಮಾಧಾನಕರವಾಗಿಲ್ಲ. ಎನ್‌ಎಪ್‌ಎಚ್‌ಎಸ್ 2019-2021 ವರದಿಯ ಪ್ರಕಾರ ರಾಜ್ಯದಲ್ಲಿನ 15 ರಿಂದ 49 ವರ್ಷ ವಯೋಮಾನದ ಒಟ್ಟು ಮಹಿಳೆಯರಲ್ಲಿ ಅನಿಮಿಯ(ರಕ್ತಹೀನತೆ) ಎದುಸಿರುತ್ತಿರುವ ಮಹಿಳೆಯರ ಪ್ರಮಾಣ 2015-16ರಲ್ಲಿ ಶೇ. 44.8ರಷ್ಟಿದ್ದುದು 2019-2021ರಲ್ಲಿ ಇದು ಶೇ. 47.8ಕ್ಕೇರಿದೆ.

ಇದೇ ರೀತಿಯಲ್ಲಿ 6 ತಿಂಗಳಿಂದ 59 ತಿಂಗಳು ವಯೋಮಾನದ ಒಟ್ಟು ಮಕ್ಕಳಲ್ಲಿ ಅನಿಮಿಯ ಎದುರಿಸುತ್ತಿರುವ ಮಕ್ಕಳ ಪ್ರಮಾಣ 2015-16ರಲ್ಲಿ ಶೇ. 60.9 ರಷ್ಟಿದ್ದುದು, 2019-2021ರಲ್ಲಿ ಇದು ಶೇ. 65.5ಕ್ಕೇರಿದೆ. ರಾಜ್ಯದಲ್ಲಿ 10 ವರ್ಷಗಳಿಗಿಂತ ಹೆಚ್ಚು ಶಾಲೆ ಕಲಿತ ವಯಸ್ಕ ಮಹಿಳೆಯರ ಪ್ರಮಾಣ ಶೇ. 50. ಬಾಲ್ಯ ವಿವಾಹದ ಸಮಸ್ಯೆಯನ್ನು ನಮಗೆ ನಿವಾರಣೆ ಮಾಡುವುದು ಸಾಧ್ಯವಾಗಿಲ್ಲ. ರಾಜ್ಯದಲ್ಲಿನ 20-24 ವರ್ಷ ವಯೋಮಾನದ ಮಹಿಳೆಯರಲ್ಲಿ 18 ವರ್ಷ ಶಾಸನಾತ್ಮಕ ವಯಸ್ಸಿಗಿಂತ ಮೊದಲೇ ವಿವಾಹವಾದ ಮಹಿಳೆಯರ ಪ್ರಮಾಣ ಶೇ. 21. ಕರ್ನಾಟಕ ಆರ್ಥಿಕತೆಯು ಸಮೃದ್ಧವಾಗಿದೆ. ಆದರೆ ಅಲ್ಲಿನ ಸರಿಸುಮಾರು 300 ಲಕ್ಷ ಮಹಿಳೆಯರ ಬದುಕು ಸುಸ್ಥಿತಿಯಲ್ಲಿಲ್ಲ.

ಕರ್ನಾಟಕದ ಶಿಕ್ಷಣ ಕ್ಷೇತ್ರ 

ಉದ್ಯೋಗಕ್ಕೆ ಅರ್ಹರಾದ ಪದವೀಧರರನ್ನು ಉತ್ಪಾದಿಸುವ ಸಾಮರ್ಥ್ಯ ನಮ್ಮ ಉನ್ನತ ಶಿಕ್ಞಣ ವ್ಯವಸ್ಥೆಗಿಲ್ಲ. ರಾಜ್ಯದಲ್ಲಿ 2023ನೆಯ ಸಾಲಿನಲ್ಲಿ ಪದವಿಪೂರ್ವ ಶಿಕ್ಷಣದಲ್ಲಿ ರಾಜ್ಯ ಸರಾಸರಿ ಫಲಿತಾಂಶ ಶೆ. 78.97. ಆದರೆ ದಕ್ಷಿಣ ಕನ್ನಡ ಜಿಲ್ಲೆಯದ್ದು ಶೇ. 95.33. ಆದರೆ ಯಾದಗಿರಿ ಜಿಲ್ಲೆಯಲ್ಲಿ ಇದು ಶೇ. 62.98 ಮತ್ತು ರಾಯಚೂರು ಜಿಲ್ಲೆಯಲ್ಲಿ ಇದು ಶೇ. 66.21. ಯಾವುದನ್ನು ಡೆವಲಪ್‌ಮೆಂಟ್ ಗ್ಯಾಪ್ ಎನ್ನುತ್ತೇವೆಯೋ ಅದು ಇಲ್ಲಿ ರಾಕ್ಷಸ ಸ್ವರೂಪದಲ್ಲಿದೆ.

ನಮ್ಮ ಶಿಕ್ಷಣ ವ್ಯವಸ್ಥೆಯ ನಿರ್ವಹಣೆಯು ಎಷ್ಟು ಹದಗೆಟ್ಟಿದೆಯೆಂದರೆ, ರಾಜ್ಯದ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಎಂಟು ವಿಶ್ವವಿದ್ಯಾಲಯಗಳಿವೆ.  ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಎರಡೆರಡು ವಿಶ್ವವಿದ್ಯಾಲಯಗಳಿವೆ. ಈ ವಿಭಾಗದಲ್ಲಿನ ಯಾದಗಿರಿ ಜಿಲ್ಲೆಯಲ್ಲಿನ ವಯಸ್ಕ ಮಹಿಳೆಯರ ಸಾಕ್ಷರತಾ ಪ್ರಮಾಣ 2019-2021ರಲ್ಲಿ ಶೇ. 48. ರಾಯಚೂರು ಜಿಲ್ಲೆಯಲ್ಲಿ ಇದು ಶೇ. 54. ಆದರೆ ಕಲ್ಯಾಣ ಕರ್ನಾಟಕದ ವಿಭಾಗದ ಉನ್ನತ ಶಿಕ್ಷಣದ ಮೂಲಸೌಲಭ್ಯವು ಅತ್ಯಂತ ಸಮೃದ್ಧವಾಗಿದೆ. ಪ್ರಾಥಮಿಕವೆನ್ನುವ ಪ್ರಾಥಮಿಕ ಶಿಕ್ಷಣ ಸ್ಥಿತಿಗತಿಯು ಹೀನಾಯವಾಗಿದೆ. ಮರದ ಬೇರನ್ನು ಬಲಪಡಿಸದೆ ಅದರಿಂದ ಫಲವನ್ನು ಅಪೇಕ್ಷಿಸುವುದು ದಡ್ಡತನ.

ಆರ್ಥಿಕ ಸಮೃದ್ಧತೆ ಮತ್ತು ಪರಿಸರ ದುಸ್ಥಿತಿ

ನಮ್ಮ ಸರ್ಕಾರದ ಆರ್ಥಿಕ ನೀತಿಯು ಪರಿಸರ-ಸ್ನೇಹಿಯಾಗಿಲ್ಲ. ಕುಡಿಯುವ ನೀರು ಶುದ್ಧವಾಗಿ ಉಳಿದಿಲ್ಲ, ಸೇವಿಸುವ ಗಾಳಿ ಶುದ್ಧವಾಗಿಲ್ಲ. ಕೃಷಿಯ ಆಧಾರವಾದ ಭೂಮಿಯು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ನೀರಾವರಿಯು ವರವಾಗುವುದಕ್ಕೆ ಬದಲಾಗಿ ಶಾಪವಾಗಿ ಪರಿಣಮಿಸಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಭೂಮಿಯ ಸಾರ ನಷ್ಟವಾಗುತ್ತಿದೆ. ಸುಸ್ಥಿರ ಅಭಿವೃದ್ಧಿಯೆನ್ನುವುದು ಮಾತಿಗೆ ಮಾತ್ರ ಸೀಮಿತವಾಗಿದೆ. ಅಕ್ರಮ ಗಣಿಗಾರಿಕೆಯಿಂದ ರಾಜ್ಯದಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಏನೆಲ್ಲ ಅನಾಹುತವಾಗಿದೆ ಎಂಬುದು ಜಗಜ್ಜಾಹೀರಾಗಿದೆ. ಇಷ್ಟಾದರೂ ನಮ್ಮ ಸರ್ಕಾರ ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವ ಬಗ್ಗೆ ಯೋಚಿಸುತ್ತಿದೆ.

ಇದನ್ನೂ ನೋಡಿ: ನೈಸ್ ಕಂಪನಿ ಪರ ನಿಂತ ಡಿಕೆ ಶಿವಕುಮಾರ್ ವಿರುದ್ಧ ರೈತರ ಪ್ರತಿಭಟನೆ Janashakthi Media

ಖನಿಜ-ಕಲ್ಲು ಗಣಿಗಾರಿಕೆಯು ರಾಜ್ಯದ ವರಮಾನದ ಮುಖ್ಯ ಮೂಲವೇನಲ್ಲ. ಉದಾ: ರಾಜ್ಯದ 2023-24ರ ಜಿಎಸ್‌ಡಿಪಿ ಯಲ್ಲಿ ಜಾನುವಾರು ವಲಯದ ಕಾಣಿಕೆ ಶೇ. 3.65, ಅರಣ್ಯಗಾರಿಕೆ ಕಾಣಿಕೆ ಶೇ. 0.72 ಮತ್ತು ಮೀನುಗಾರಿಕೆ ಕಾಣಿಕೆ ಶೇ. 0.48. ಒಟ್ಟು ಇವುಗಳ ಕಾಣಿಕೆ ಶೇ. 4.85. ಆದರೆ ಖನಿಜ ಮತ್ತು ಕಲ್ಲು ಗಣಿಗಾರಿಕೆ ಕಾಣಿಕೆ ಶೇ. 0.66. ಜಾನುವಾರು ಆರ್ಥಿಕತೆ, ಅರಣ್ಯಗಾರಿಕೆ ಮತ್ತು ಮೀನುಗಾರಿಕೆಗಳು ಪರಿಸರ-ಸ್ನೇಹಿ ಚಟುವಟಿಕೆಗಳು, ಇವು ಉದ್ಯೋಗ-ಸಾಂದ್ರ ಚಟುವಟಿಕೆಗಳು ಮತ್ತು ಅಂತರ-ತಲೆಮಾರು ಸಮಾನತೆಯನ್ನು ಕಾಯ್ದಿಡುವ ಚಟುವಟಿಕೆಗಳು. ಪರಿಸರ-ನಾಶದ, ಉದ್ಯೋಗ ಕೊಲ್ಲುವ, ಕೃಷಿಗೆ ಶಾಪವಾಗಿರುವ ಗಣಿಗಾರಿಕೆಗೆ ಸರ್ಕಾರ ಯಾಕೆ ಇಷ್ಟೊಂದು ಮಹತ್ವ ನೀಡುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಗಣಿಗಾರಿಕೆಯು ಖಾಸಗಿ ಉದ್ದಿಮೆದಾರರಿಗೆ ಸಮೃದ್ಧವಾಗಿ ವರಮಾನ ನೀಡಬಹುದು. ರಾಜ್ಯಕ್ಕೆ, ರಾಜ್ಯದ ಜನರಿಗೆ, ಜನರ ಜೀವನೋಪಾಯಕ್ಕೆ ಇದು ಶಾಪವಾಗಿದೆ.

ಒಟ್ಟಾರೆ ಇಂದು ಆರ್ಥಿಕ ಬೆಳವಣಿಗೆ ಎನ್ನುವುದು ಉಳ್ಳವರ ಶೇ. 10 ರಿಂದ ಶೇ. 15ರಷ್ಟು ಜನರ ಹಿತಾಸಕ್ತಿಗಳನ್ನು ಕಾಯ್ದಿಡುವ ಕೆಲಸ ಮಾಡುತ್ತಿದೆ ವಿನಾ ಉಳಿದ ಶೇ. 90ರಷ್ಟು ಜನರ ಬದುಕನ್ನು ಭದ್ರಪಡಿಸುತ್ತಿಲ್ಲ. ನಮ್ಮ ಆರ್ಥಿಕ ನೀತಿಯನ್ನು ಮರುಪರಿಶೀಲಿಸುವ ಅಗತ್ಯವಿದೆ. ಸರ್ಕಾರವು ಅಭಿವೃದ್ಧಿಯನ್ನು “ಕಟ್ಟಡ-ಕಾಮಗಾರಿ- ಕಾಂಟ್ರಾಕ್ಟ್-ಕಮೀಷನ್” ನೆಲೆಯಲ್ಲಿ ಪರಿಭಾವಿಸಿಕೊಳ್ಳುವುದನ್ನು ಬಿಟ್ಟು ಜನರನ್ನು, ಅಂದರೆ ದುಸ್ಥಿತಿಯ ಅಂಚಿನಲ್ಲಿ ಬದುಕನ್ನು ದೂಡುತ್ತಿರುವ ದಲಿತರ-ಆದಿವಾಸಿಗಳ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ನೆಲೆಯಿಂದ ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳುವ-ನಿರ್ವಹಿಸುವ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಬೇಕು. ಅಭಿವೃದ್ಧಿಯ ಮೂಲ ದ್ರವ್ಯ ಜನರೇ ವಿನಾ ಬಂಡವಾಳಿಗರಲ್ಲ.

Donate Janashakthi Media

Leave a Reply

Your email address will not be published. Required fields are marked *