ಸಮುದಾಯ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಕಾಟಿಪಳ್ಳದಲ್ಲಿ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ಸಮಾಲೋಚನಾ ಸಭೆ
ಸುರತ್ಕಲ್: ಸೇವಾಕ್ಷೇತ್ರವಾಗಿದ್ದ ಆರೋಗ್ಯ ರಂಗ ಇಂದು ವ್ಯಾಪಾರೀಕರಣಗೊಳ್ಳುತ್ತಿದೆ. ಇದರಿಂದಾಗಿ ಸರಕಾರಿ ಆಸ್ಪತ್ರೆಗಳು ದುರ್ಬಲಗೊಳ್ಳುತ್ತಿವೆ. ಪಿಪಿಪಿ ಹೆಸರಿನಲ್ಲಿ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳು ತಮ್ಮ ಅಧೀನಕ್ಕೆ ಪಡೆದುಕೊಳ್ಳುತ್ತಿವೆ. ಇದು ಆರೋಗ್ಯ ಕ್ಷೇತ್ರದಲ್ಲಿ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಸಂಚಾಲಕ ಶ್ರೀನಾಥ್ ಕುಲಾಲ್ ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಭರಿಸುವುದು ಸಾಮಾನ್ಯ ಜನತೆಗೆ ಅಸಾಧ್ಯವಾಗುತ್ತಿದೆ. ಆರೋಗ್ಯ ಕ್ಷೇತ್ರದ ವ್ಯಾಪಾರೀಕರಣದ ವಿರುದ್ದ ಜನತೆ ಸಂಘಟಿತರಾಗದಿದ್ದಲ್ಲಿ ಮುಂದಕ್ಕೆ ಮತ್ತಷ್ಟು ಅಪಾಯ ಕಾದಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಇದನ್ನೂ ಓದಿ: ಬೆಂಗಳೂರು | ಗಣರಾಜ್ಯೋತ್ಸವದ ಅಂಗವಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ
ಕಾಟಿಪಳ್ಳ ಜಾಸ್ಮಿನ್ ಸಭಾಂಗಣದಲ್ಲಿ, ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು, ಮಂಗಳೂರಿನಲ್ಲಿ ಕ್ಯಾನ್ಸರ್, ಹೃದಯದ ಆಸ್ಪತ್ರೆಗಳನ್ನು ಸ್ಥಾಪಿಸಬೇಕು ಎಂಬ ಬೇಡಿಕೆಯಡಿ “ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ” ಹಮ್ಮಿಕೊಂಡಿರುವ ಅಭಿಯಾನವನ್ನು ಬೆಂಬಲಿಸಿ ಕಾಟಿಪಳ್ಳ ಎರಡನೇ ವಿಭಾಗದ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು.
ಸಭೆಯನ್ನುದ್ದೇಶಿಸಿ ಕವಿ ಹುಸೈನ್ ಕಾಟಿಪಳ್ಳ, ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಪ್ರಮುಖರಾದ ಶ್ರೀನಾಥ್ ಕುಲಾಲ್, ಸಲೀಂ ಶ್ಯಾಡೊ, ಕಾಟಿಪಳ್ಳ ಮುಸ್ಲಿಂ ಜಮಾತ್ ಅಧ್ಯಕ್ಷರಾದ ರಹ್ಮತುಲ್ಲಾ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ, ಗಾಯಕ ಅಬ್ದುಲ್ ಸಮದ್ ಕಾಟಿಪಳ್ಳ ಸ್ವಾಗತಿಸಿ ಸಭೆಯನ್ನು ನಿರ್ವಹಿಸಿದರು. ಹತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಇದನ್ನೂ ನೋಡಿ: KBL ಕ್ಯಾಂಟೀನ್ | ಇಲ್ಲಿ 1ರೂ ಗೆ ಹೊಟ್ಟೆ ತುಂಬುವಷ್ಟು ಟಿಫನ್ ಸಿಗುತ್ತೆ! Janashakthi Media
