ಹುಬ್ಬಳ್ಳಿ: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್(ಐಪಿಪಿಬಿ) ಖಾತೆ ಹೊಂದಿದ ಮಹಿಳೆಯರಿಗೆ ಕೇಂದ್ರ ಸರಕಾರ 3 ಸಾವಿರ ರೂ. ಹಣ ಜಮೆ ಮಾಡುತ್ತದೆ ಎಂಬ ವದಂತಿಗೆ ಸಾವಿರಾರು ಮಹಿಳೆಯರು ಖಾತೆ ಮಾಡಿಸಲು ಪೋಸ್ಟ್ ಆಫೀಸಿಗೆ ಧಾವಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಕಳೆದ ಒಂದು ವಾರದಿಂದ ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿ ಸೇರಿದಂತೆ ಎಲ್ಲ ಶಾಖೆಯಲ್ಲಿ ನಿತ್ಯ ಸಾವಿರಾರು ಮಹಿಳೆಯರು ಆಗಮಿಸಿ, ಸರದಿಯಲ್ಲಿ ನಿಂತು ಖಾತೆ ಮಾಡಿಸುತ್ತಿದ್ದಾರೆ. ಕೇಂದ್ರ ಸರಕಾರ ಯಾವುದೇ ಹಣ ಹಾಕುವುದಾಗಿ ಆದೇಶ ಹೊರಡಿಸಿಲ್ಲಎಂದು ಅಂಚೆ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಮಹಿಳೆಯರಿಗೆ ಮನವರಿಕೆ ಮಾಡಿದರೂ ಅದನ್ನು ನಂಬುತ್ತಿಲ್ಲ. ದಾರಿ ಇಲ್ಲದೆ ಅಂಚೆ ಇಲಾಖೆ ಸಿಬ್ಬಂದಿ ಐಪಿಪಿಬಿ ಖಾತೆ ಮಾಡಿಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿಗೆ ನಿತ್ಯ 1500 ಕ್ಕೂ ಹೆಚ್ಚು ಮಹಿಳೆಯರು ಬರುತ್ತಿದ್ದು, ದಿನಕ್ಕೆ 500 ಐಪಿಪಿಬಿ ಖಾತೆ ಮಾತ್ರ ಮಾಡಿಕೊಡಲಾಗುತ್ತಿದೆ. ಮಹಿಳೆಯರ ಸಂಖ್ಯೆ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿಅಂಚೆ ಕಚೇರಿಯ ನಿತ್ಯದ ಕೆಲಸ ಬಿಟ್ಟು ಐಪಿಪಿಬಿ ಖಾತೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಸಿಬ್ಬಂದಿ ಮಾಧ್ಯಮದ ಮುಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ಜೆಡಿಎಸ್ – ಬಿಜೆಪಿ ಸೀಟು ಮಾತುಕತೆ | ಯಾವುದೆ ಕಾರಣಕ್ಕೂ ಮಂಡ್ಯ ಬಿಟ್ಟುಕೊಡಲ್ಲ ಎಂದ ಸುಮಲತಾ
ಏನಿದು ಐಪಿಪಿಬಿ ಖಾತೆ?
ಖಾಸಗಿ ಹಾಗೂ ಸರಕಾರಿ ಬ್ಯಾಂಕ್‌ಗಳಲ್ಲಿ ಖಾತೆ ಇಲ್ಲದೇ ನೇರ ಖಾತೆಗೆ ಜಮೆಯಾಗುವ ಸರಕಾರಿ ಯೋಜನೆಗಳ ಹಣ ಪಡೆಯಲು ಸಾಧ್ಯವಿಲ್ಲದ ಫಲಾನುಭವಿಗಳು ಪೋಸ್ಟ್ ಆಫೀಸ್‌ನಲ್ಲಿಐಪಿಪಿಬಿ ಖಾತೆ ತೆರೆಯಬೇಕು. ಅಂತವರಿಗೆ ಸರಕಾರಿ ಯೋಜನೆ ಹಣ ನೇರವಾಗಿ ಖಾತೆಗೆ ಬರಲು ಅನುಕೂಲವಾಗುತ್ತದೆ. ಹೀಗಾಗಿ ಅಂಚೆ ಕಚೇರಿಯಲ್ಲಿಈ ಖಾತೆ ಮಾಡಿಸಬೇಕು ಎಂದು ಸರಕಾರ ಹೇಳಿದೆ.
ಚುನಾವಣಾ ಸಮಯ ಆಗಿರುವುದರಿಂದ ಯಾರೋ ರಾಜಕಾರಣಿಗಳು ತಪ್ಪು ಮಾಹಿತಿ ನೀಡಿದ್ದಾರೆ, ಹಾಗಾಗಿ ಖಾತೆ ಮಾಡಿಸಲು ಬರುತ್ತಿರಬೇಕು ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅಂಚೆ ಅಧಿಕಾರಿಗಳು ತಿಳಿಸಿದ್ದಾರೆ.