ತಮಿಳುನಾಡು| ರೈಲು ನಿಲ್ದಾಣದ ಹಿಂದಿ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದ ಜನರು

ತಮಿಳುನಾಡು: ಯಾವುದೇ ಕಾರಣಕ್ಕೂ 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ತಮಿಳುನಾಡಿನಲ್ಲಿ ಜಾರಿಗೊಳಿಸುವುದಿಲ್ಲ ಎಂದು ನಿನ್ನೆ ತಾನೇ ಖಡಕ್ ಆಗಿ ಹೇಳಿಕೆ ನೀಡಿದ ಸಿಎಂ ಎಂ.ಕೆ. ಸ್ಟಾಲಿನ್, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಮ್ಮ ರಾಜ್ಯಕ್ಕೆ 10,000 ಕೋಟಿ ರೂ. ಕೊಟ್ಟರೂ ಎನ್​ಇಪಿ ಅಳವಡಿಸುವುದಿಲ್ಲ. ಈ ವಿಷಯದಲ್ಲಿ ಕೇಂದ್ರದ ‘ಹಿಂದಿ ಹೇರಿಕೆ’ಯನ್ನು ತಮಿಳುನಾಡು ವಿರೋಧಿಸುತ್ತದೆ ಎಂದು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಭಾಷಾ ಹೇರಿಕೆ ವಿರೋಧಗಳು ಭುಗಿಲೆದ್ದಿವೆ.

ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸ್ಟಾಲಿನ್​ ಗುಡುಗಿದ ಬೆನ್ನಲ್ಲೇ ಪೊಲ್ಲಾಚಿ ಜಂಕ್ಷನ್ ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಫಲಕಗಳಲ್ಲಿನ ಹಿಂದಿ ಅಕ್ಷರಗಳಿಗೆ ಕಪ್ಪು ಬಣ್ಣ ಬಳಿಯಲಾಗಿದೆ. ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳು ತಕ್ಷಣವೇ ಮಾಹಿತಿ ಕಲೆಹಾಕಿದ್ದು, ತನಿಖೆಗೆ ಮುಂದಾಗಿದ್ದಾರೆ. ಸಿಎಂ ಸ್ಟಾಲಿನ್ ಮತ್ತು ಡಿಎಂಕೆ ಬೆಂಬಲಿಗರು ತ್ರಿಭಾಷಾ ನೀತಿಯನ್ನು ವಿರೋಧಿಸಿ, ಹಿಂದಿ ಹೇರಿಕೆಯನ್ನು ಪ್ರತಿಭಟಿಸುತ್ತಿರುವುದು ಈ ಘಟನೆಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ಶಕ್ತಿಕಾಂತ್‌ ದಾಸ್‌ ನೇಮಕ

ಏನಿದು ವಿವಾದ?

ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಇತರ ಅಂಶಗಳ ಕಾರಣದಿಂದಾಗಿ ನಾವು ಎನ್​ಇಪಿ ಸ್ವೀಕರಿಸಲು ಸಿದ್ಧವಿಲ್ಲ ಎಂದಿರುವ ಸ್ಟಾಲಿನ್​, ಕೇಂದ್ರ ಸರ್ಕಾರ ಎನ್​ಇಪಿ ಅಳವಡಿಸುವಂತೆ ನಮ್ಮ ಮೇಲೆ ಒತ್ತಾಯ ಹೇರುತ್ತಿದೆ. ಆದರೆ, ಇದನ್ನೂ ಯಾವುದೇ ಕಾರಣಕ್ಕೂ ತಮಿಳುನಾಡಿನಲ್ಲಿ ಜಾರಿಗೊಳಿಸುವುದಿಲ್ಲ ಎಂದು ನಾನು ಈ ಮೂಲಕ ಹೇಳುತ್ತಿದ್ದೇನೆ ಎಂದಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕಡಲೂರಿನಲ್ಲಿ ನಡೆದ ಪೋಷಕರ-ಶಿಕ್ಷಕರ ಸಂಘದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ‘ನಾವು ಯಾವುದೇ ಭಾಷೆಯನ್ನು ವಿರೋಧಿಸುವುದಿಲ್ಲ. ಆದ್ರೆ, ಅದರ ಹೇರಿಕೆಯನ್ನು ವಿರೋಧಿಸುವಲ್ಲಿ ಬದ್ಧರಾಗಿರುತ್ತೇವೆ. ಹಿಂದಿ ಭಾಷೆಯನ್ನು ಹೇರುವ ಪ್ರಯತ್ನಕ್ಕಾಗಿ ಮಾತ್ರ ನಾವು ಎನ್​ಇಪಿಯನ್ನು ವಿರೋಧಿಸುತ್ತಿಲ್ಲ. ಇತರ ಕಾರಣಗಳಿಂದಾಗಿಯೂ ವಿರೋಧ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಕೇಂದ್ರೀಕರಣದ ರಾಜಕಾರಣ ಮತ್ತು ವಿಕೇಂದ್ರೀಕರಣದ ಪಂಚಾಯತ್ ರಾಜ್ ವ್ಯವಸ್ಥೆಯ ವೈಫಲ್ಯ‌… Janashakthi Media

Donate Janashakthi Media

Leave a Reply

Your email address will not be published. Required fields are marked *