ನಿವೇಶನ ಮಂಜೂರಾದರೂ ಕೊರಗರಿಗೆ ಸಿಗದ ಮನೆ ; ಯಾರು ಹೊಣೆ?

ಕೊರಗರ ಕುರಿತು ಕಾಳಜಿ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆಗಳಲ್ಲಿ ಮಾತ್ರ, ಮೀಡಿಯಾಗಳಲ್ಲಿ ಸುದ್ದಿಯಾಗುವ ಕಾಳಜಿಯ ಪಂಚಿಂಗ್ ಡೈಲಾಗ್ ಗಳು ಅಳಿವಿನಂಚಿನ ಈ ನತದೃಷ್ಟ ಸಮುದಾಯಗಳು ಜಿಲ್ಲಾಡಳಿತದ ಬಳಿ ಸಮಸ್ಯೆ ಪರಿಹಾರ ಕೋರಿ ಹೋದಾಗ ಲಭ್ಯ ಆಗುವುದೇ ಇಲ್ಲ. ನಿವೇಶನ

-ಮುನೀರ್ ಕಾಟಿಪಳ್ಳ

ಮಂಗಳೂರಿನ ವಾಮಂಜೂರು ಬಳಿ ವಾಸ ಇರುವ 33 ಕೊರಗ ಸಮುದಾಯಗಳಿಗೆ ಮನೆ ಕಟ್ಟಲು ಮಂಗಳೂರು ನಗರ ಪಾಲಿಕೆ ಪಚ್ಚನಾಡಿಯಲ್ಲಿ‌ ಜಮೀನು ಮಂಜೂರು ಮಾಡಿ 7 ವರ್ಷ ಕಳೆಯಿತು. ವರ್ಷಗಳಿಂದ ಸ್ಥಳೀಯ ಕೊರಗರು ತಮ್ಮ ಸಂಘಟನೆಯಾದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮೂಲಕ ನಗರ ಪಾಲಿಕೆಗೆ ಮನವಿ ಹಿಡಿದು ಅಲೆದಾಡಿದರೂ ಅಧಿಕಾರಿಗಳು “ನಯ” ವಾಗಿ ಸಾಗಹಾಕುತ್ತಲೆ ಬಂದಿದ್ದಾರೆ. ನಿವೇಶನ

ಈ ನಡುವೆ ಉಭಯ ಜಿಲ್ಲೆಗಳಲ್ಲಿ ನಡೆದ ಎಲ್ಲಾ ತಾಲೂಕು, ಜಿಲ್ಲಾ ಮಟ್ಟದ ಸಭೆಗಳಲ್ಲಿ ಶಾಸಕರು, ಸಂಸದರು, ಉಸ್ತುವಾರಿ ಸಚಿವರುಗಳು “ಅಳಿವಿನಂಚಿನಲ್ಲಿರುವ ಬುಡಕಟ್ಟು” ಎಂದು ಘೋಷಿಸಲ್ಪಟ್ಟಿರುವ ಕೊರಗ ಸಮುದಾಯದ ಕುರಿತು ಬಕೆಟ್ ಗಟ್ಟಲೆ ಕಣ್ಣೀರು ಸುರಿಸಿದ್ದಾರೆ. ಇಳಿಕೆ ಆಗುತ್ತಿರುವ ಅವರ ಜನಸಂಖ್ಯೆಯ ಕುರಿತು “ಕಳವಳ” ವ್ಯಕ್ತಪಡಿಸಿದ್ದಾರೆ. “ಸರಕಾರವೆ ಅವರ ಮನೆ ಬಾಗಿಲಿಗೆ ತೆರಳಿ ಅವರ ದಾಖಲೆಗಳನ್ನು ಸರಿಪಡಿಸಿ ಕೊಡುತ್ತದೆ, ಗುರುತು ಚೀಟಿಗಳನ್ನು ಮಾಡಿಕೊಡುತ್ತದೆ” ಎಂದು ಜಗವೆ ತಲೆದೂಗುವಂತೆ ಕಾಳಜಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 7.11 ಕೋಟಿ ದರೋಡೆ ಪ್ರಕರಣ: ಮತ್ತಿಬ್ಬರ ಬಂಧನ; ಬಂಧಿತರ ಸಂಖ್ಯೆ 9ಕ್ಕೆ ಏರಿಕೆ

ಆದರೆ, ಕೊರಗರು ಸರಕಾರದ ಇಲಾಖೆಗಳನ್ನು ಸಂಪರ್ಕಿಸಿದಾಗ ಅವರನ್ನು ತಲೆ ಎತ್ತಿಯೂ ನೋಡದೆ ಹೀನಾಯವಾಗಿ ನಡೆಸಲಾಗುತ್ತಿದೆ. ಇವರ ಹೇಳಿಕೆಗೂ ನಡವಳಿಕೆಗೂ ಆಕಾಶ ಭೂಮಿ ವ್ಯತ್ಯಾಸ.

ವಾಮಂಜೂರು ಮಂಗಳಜ್ಯೋತಿಯ 33 ಕುಟುಂಬಗಳ ಆದಿವಾಸಿ ಕೊರಗರು ನಮಗೆ ಮಂಜೂರಾದ ಮನೆ ನಿವೇಶನ ಹಸ್ತಾಂತರ ಮಾಡಿ ಅಂತ ಬೇಡಿಕೆ ಇಟ್ಟು ನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಿದರೆ, ನಗರ ಪಾಲಿಕೆ ಕಮೀಷನರ್ ಮನವಿ ಸ್ವೀಕರಿಸಲು ಅಧಿಕಾರಿಗಳನ್ನು ಕಳುಹಿಸಲು ನಿರಾಕರಿಸಿದರು. ನಗರ ಪಾಲಿಕೆ ಕಮೀಷನರ್ ಅವರ ಈ ಧೋರಣೆಯನ್ನು ಖಂಡಿಸಿ ಕೊರಗರೊಂದಿಗೆ ನೆಲದಲ್ಲೆ ಕೂತು ಪ್ರತಿಭಟನೆ ಮುಂದುವರಿಸಲಾಯಿತು. ಮನವಿ ಸ್ವೀಕರಿಸಲು ಅಧಿಕಾರಿಗಳು ಬರುವವರಗೆ ಕದಲುವುದಿಲ್ಲ ಎಂದು ಘೋಷಿಸಲಾಯಿತು.

ಆ ತರುವಾಯ ಪೊಲೀಸರ ಶ್ರಮದ ಕಾರಣ ಇಬ್ಬರು ಅಧಿಕಾರಿಗಳನ್ನು ಕಮೀಷನರ್ ಮನವಿ ಪಡೆಯಲು ಕಳುಹಿಸಿದರು. ಬಂದ ಅಧಿಕಾರಿಗಳು ಅದೇ ಹಳೆಯ ಡೈಲಾಗ್ ಪುನರಾವರ್ತಿಸಿದರು. 33 ಕುಟುಂಬಗಳಲ್ಲಿ 12 ಕುಟುಂಬಗಳಲ್ಲಿ ರೇಷನ್ ಕಾರ್ಡ್ ಇಲ್ಲ, ಅವರು ರೇಷನ್ ಕಾರ್ಡ್ ಸಲ್ಲಿಸದೆ ನಿವೇಶನ ಹಸ್ತಾಂತರ ಪ್ರಕ್ರಿಯೆ ಮುಂದುವರಿಯುತ್ತಿಲ್ಲ ಎಂದು ಜಿಲ್ಲಾಡಳಿತದ ತೀರಾ ಅಮಾನವೀಯವಾದ ವಾದವನ್ನು ಮುಂದಿಟ್ಟರು.

ಅಮಾನವೀಯ ದಮನಕ್ಕೆ ಒಳಗಾಗಿರುವ ಆದಿವಾಸಿ ಕೊರಗ ಸಮುದಾಯದ ಹಲವು ಕುಟುಂಬಗಳಲ್ಲಿ ಈಗಲೂ ರೇಷನ್ ಕಾರ್ಡ್, ಓಟರ್ ಐಡಿ, ಆಧಾರ್, ವಾಸದ ಸ್ಥಳದ ದಾಖಲೆಗಳು ಲಭ್ಯ ಇಲ್ಲ. ರಾಜ್ಯ ಸರಕಾರ ಕಳೆದ ಮೂರು ವರ್ಷಗಳಿಂದ ಹೊಸ ರೇಷನ್ ಕಾರ್ಡ್ ನೀಡುತ್ತಿಲ್ಲ. ಕೊರಗ ಸಮುದಾಯದಂತಹ ಅಳಿವಿನಂಚಿನ ಬುಡಕಟ್ಟುಗಳಿಗೆ ಅಧಿಕಾರಿಗಳೆ ಮನೆ ಬಾಗಿಲಿಗೆ ತೆರಳಿ ರೇಷನ್ ಕಾರ್ಡ್ ಸಹಿತ ಅಗತ್ಯ ಗುರುತಿನ ಚೀಟಿಯ ದಾಖಲೆಗಳನ್ನು ಸಿದ್ದಪಡಿಸಿ ಕೊಡುತ್ತಾರೆ ಎಂದು ಸರಕಾರ ಹೇಳಿಕೊಳ್ಳುತ್ತಿದೆ. ಮಂಗಳೂರು ನಗರ ಪಾಲಿಕೆಯ ಅಧಿಕಾರಿಗಳು ಮಾತ್ರ 12 ಕುಟುಂಬಳಲ್ಲಿ ರೇಷನ್ ಕಾರ್ಡ್ ಲಭ್ಯ ಲಭ್ಯ‌ ಇಲ್ಲದಿರುವುದನ್ನೆ ಆಯುಧವಾಗಿಸಿ 33 ಕೊರಗ ಕುಟುಂಬಳಿಗೆ ಮನೆ ವಸತಿ ಯೋಜನೆಯನ್ನು ವಿಳಂಬಗೊಳಿಸುತ್ತಿದೆ. ಇದು ಎಷ್ಟು ದಾರುಣ ಅಂದರೆ, ಬಹುಷ ಸಿದ್ದರಾಮಯ್ಯ ಸರಕಾರದ ಉಚಿತ ಅಕ್ಕಿ ಯೋಜನೆಯಿಂದಲೂ ರೇಷನ್ ಕಾರ್ಡ್ ಲಭ್ಯ ಇಲ್ಲದ ಕಾರಣಕ್ಕೆ ಈ ಕೊರಗ ಕುಟುಂಬಗಳು ಹೊರ ಗುಳಿದಿರಬಹುದು.

ಅಂತಿಮವಾಗಿ ನಗರ ಪಾಲಿಕೆ ಅಧಿಕಾರಿಗಳನ್ನು ಒಂದಿಷ್ಟು ತರಾಟೆಗೆ ತೆಗೆದುಕೊಂಡು ಮನವಿ ನೀಡಿ ಧರಣಿ ಮುಕ್ತಾಯ ಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ತೀವ್ರ ತರದ ಹೋರಾಟಗಳ ಮೂಲಕ ಕೊರಗ ಸಮುದಾಯಕ್ಕೆ ಸಿಗಬೇಕಾದ ವಸತಿ ಸಹಿತ ಸವಲತ್ತುಗಳಿಗಾಗಿ ತೀವ್ರತರದ ಹೋರಾಟಗಳು ನಡೆಯಬೇಕಿದೆ.

ಜಿಲ್ಲಾಡಳಿತ, ಸರಕಾರ, ಜನಪ್ರತಿನಿಧಿಗಳು ಅಧಿಕೃತ ಸಭೆಗಳಲ್ಲಿ ಆದಿವಾಸಿ ಕೊರಗರ ಕುರಿತು ಆಡುವ ಕಪಟ ಕಾಳಜಿಯ ಮಾತು, ಆದೇಶಗಳ ಬಣ್ಣವನ್ನು ಬಯಲು ಮಾಡಬೇಕಿದೆ.

ಇದನ್ನೂ ನೋಡಿ: ನಾಟಕ| ಸಂಪತ್ತಿಗೆ ಸವಾಲ್‌ | ಮೀಡಿಯಾ ಕ್ಲಬ್‌ ಕೊಪ್ಪಳ |ಪಿ.ಬಿ. ಧುತ್ತರಗಿ Janashakthi Media

Donate Janashakthi Media

Leave a Reply

Your email address will not be published. Required fields are marked *