ರಾಷ್ಟ್ರದ ಸೊತ್ತುಗಳನ್ನು ಮತ್ತು ಮೂಲರಚನೆಗಳನ್ನು ದೇಶಿ-ವಿದೇಶಿ ಖಾಸಗಿ ಕಾರ್ಪೊರೇಟ್‌ಗಳಿಗೆ ಪುಕ್ಕಟೆಯಾಗಿ ವರ್ಗಾಯಿಸುವ ವಿನಾಶಕಾರೀ ಕಸರತ್ತನ್ನು ಮೋದಿ ಸರಕಾರ ನಡೆಸುತ್ತಿದೆ. ಏರ್ ಇಂಡಿಯಾ ಮಾರಾಟದ ನಂತರ ಈಗ ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣಕ್ಕೆ ಅನುಕೂಲ ಮಾಡಿಕೊಳ್ಳಲು ಬ್ಯಾಂಕ್ ರಾಷ್ಟ್ರೀಕರಣದ ಕಾಯ್ದೆಗಳ, ಜತೆಗೆ ಪೆನ್ಶನ್ ನಿಧಿ ನಿಯಂತ್ರಣ ಕಾಯ್ದೆಗೂ ತಿದ್ದುಪಡಿಗಳನ್ನು ಮಾಡುವ ಧಾವಂತದಲ್ಲಿ ಇದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಹೇಳಿದೆ. ಇದನ್ನು ಅದು ಬಲವಾಗಿ ಖಂಡಿಸಿದೆ.
ಈಗಾಗಲೇ ಸಾರ್ವಜನಿಕ ವಲಯದ ಬ್ಯಾಂಕುಗಳು ಖಾಸಗಿ ಕಾರ್ಪೊರೇಟ್‌ಗಳಿಗೆ ಕೊಟ್ಟಿರುವ ಹಲವು ಲಕ್ಷ ಕೋಟಿ ರೂ.ಗಳ ಸಾಲಗಳನ್ನು ‘ಸಾಲಗೇಡಿತನ ಮತ್ತು ದಿವಾಳಿತನ’ ವಿಧಾನಗಳ ಹೆಸರಿನಲ್ಲಿ ಬಿಟ್ಟುಬಿಡುವಂತೆ ಮಾಡಲಾಗಿದೆ. ಇವೆಲ್ಲವೂ ಸಾರ್ವಜನಿಕರ ಹಣ ಎಂಬುದನ್ನು ಗಮನಿಸಬೇಕು. ಈಗ ಸಾಲಗಳನ್ನು ಸುಸ್ತಿ ಮಾಡಿಕೊಂಡ ಅದೇ ಖಾಸಗಿ ಕಾರ್ಪೊರೇಟ್‌ಗಳ ಸಮುದಾಯಕ್ಕೇ ಈ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಹಿಸಿಕೊಡಲು ಸರಕಾರ ಮುಂದಾಗಿದೆ ಎಂದು ಸಿಐಟಿಯು ಟೀಕಿಸಿದೆ.
ಇದಲ್ಲದೆ, ಪೆನ್ಶನ್ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿ.ಎಫ್.ಆರ್.ಡಿ.ಎ.)ಕಾಯ್ದೆ, 2013 ಕ್ಕೆ ತಿದ್ದುಪಡಿಗಳನ್ನು ತರುವ ಕೆಲಸ ಬಹಳಷ್ಟು ಮುಂದುವರೆದ ಹಂತದಲ್ಲಿ ಇದೆ ಎನ್ನಲಾಗಿದೆ. ಈ ಮೂಲಕ ರಾಷ್ಟ್ರೀಯ ಪೆನ್ಶನ್ ವ್ಯವಸ್ಥೆ(ಎನ್.ಪಿ.ಎಸ್.) ಟ್ರಸ್ಟನ್ನು ಈ ಕಾಯ್ದೆಯ ಎಲ್ಲ ನಿಯಂತ್ರಣ ಮತ್ತು ವ್ಯಾಪ್ತಿಯಿಂದ ಮುಕ್ತಗೊಳಿಸಿ ಅವನ್ನು ಕಂಪನಿ ಕಾಯ್ದೆಯ ಅಡಿಯಲ್ಲಿ ಕಾರ್ಪೊರೇಟ್‌ಗಳಾಗಿ ಅಥವ ದಾನದತ್ತಿಗಳಾಗಿ ಪರಿವರ್ತಿಸಲಾಗುವುದು ಎಂದು ವರದಿಯಾಗಿದೆ. ಅಂದರೆ ಜನಗಳ ಉಳಿತಾಯಗಳನ್ನು ಕೂಡ ಅನಿಯಂತ್ರಿತ ಸಟ್ಟಾಕೋರತನದ ಮೂಲಕ ಖಾಸಗಿ ಫಂಡ್ ಮ್ಯಾನೇಜರುಗಳ ಲಾಭದಾಹವನ್ನು ತೀರಿಸಿಕೊಳ್ಳುವ ದುಷ್ಟ ಪ್ರಾಜೆಕ್ಟ್ ಗಳಿಗೆ ಗುರಿಪಡಿಸಲಾಗುತ್ತಿದೆ ಎಂದು ಸಿಐಟಿಯು ಅಭಿಪ್ರಾಯ ಪಟ್ಟಿದೆ.
ಸ್ವಲ್ಪಮಟ್ಟಿನ ನಿಯಂತ್ರಣಕ್ಕೆ ಒಳಗಾಗಿರುವ ನೌಕರರ ಭವಿಷ್ಯ ನಿಧಿ (ಇಪಿಎಫ್) ಟ್ರಸ್ಟ್ ನಲ್ಲಿ ಸಟ್ಟಾಕೋರತನಕ್ಕೆ ಇರುವ ಸೀಮಿತ ಅವಕಾಶದಲ್ಲೂ ಕಾರ್ಮಿಕರು ಅಪಾರ ಹಣವನ್ನು ಕಳಕೊಂಡಿರುವಾಗ, ನಿಯಂತ್ರಣ-ಮುಕ್ತ ಎನ್.ಪಿ.ಎಸ್.ನ ಸರಕಾರದ ಈ ಹೊಸ ಪ್ರಾಜೆಕ್ಟಿನ ಗತಿಯೇನಾಗಬಹುದು ಎಂಬುದನ್ನು ಈಗಲೇ ಊಹಿಸಬಹುದು ಎಂದು ಸಿಐಟಿಯು ಹೇಳಿದೆ.
ಹೀಗೆ ರಾಷ್ಟ್ರದ ಸೋತ್ತುಗಳು ಮತ್ತು ಮೂಲರಚನೆಗಳು ಮಾತ್ರವಲ್ಲ, ಜನಗಳ ಜೀವಮಾನದ ಉಳಿತಾಯಗಳನ್ನು ಕೂಡ ಕಾರ್ಪೊರೇಟ್ ವರ್ಗದ ಅದೇ ಲೂಟಿಕೋರ ಸಮುದಾಯದ ಲೂಟಿಗೆ ತೆರೆದು ಕೊಡುವ ಇಂತಹ ದುಷ್ಟ ಮತ್ತು ವಿನಾಶಕಾರೀ ಪ್ರಾಜೆಕ್ಟ್ ಗಳನ್ನು ಖಂಡಿಸಬೇಕು, ಕೇಂದ್ರದಲ್ಲಿರುವ ಸರಕಾರ ದಿಂದ ರಾಷ್ಟ್ರೀಯ ಅರ್ಥವ್ಯವಸ್ಥೆ ಮತ್ತು ಜನಗಳ ವಿರುದ್ಧ ಇಂತಹ ಹೇಯ ಕುತಂತ್ರಗಳನ್ನು ವಿರೋಧಿಸಬೇಕು ಮತ್ತು ಪ್ರತಿರೋಧಿಸಬೇಕು ಎಂದು ದುಡಿಯುವ ಜನಗಳಿಗೆ ಸಿಐಟಿಯು ಕರೆ ನೀಡಿದೆ.