ಪೆಗಾಸಸ್: ಪ್ರಜಾಪ್ರಭುತ್ವವು ತಲುಪಿರುವ ಪಾತಾಳದ ದ್ಯೋತಕ

ಪ್ರೊ. ರಾಜೇಂದ್ರ ಚೆನ್ನಿ

ಭಾರತದ ಇಂದಿನ ರಾಜಕೀಯ ವ್ಯವಸ್ಥೆಯು ಚುನಾವಣಾ ರಾಜಕೀಯದ ಮೂಲಕ ಅಧಿಕಾರಕ್ಕೆ ಬಂದಿರುವ ಬಂಡವಾಳಶಾಹಿ ಫ್ಯಾಸಿಸ್ಟ್ ವ್ಯವಸ್ಥೆ ಎಂದು ಹೇಳಲು ಯಾಕೆ ಹಿಂದೇಟು ಹಾಕುತ್ತಿದ್ದೇವೆ? ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಶ್ನಿಸುವುದೆಂದರೆ ಸರ್ವಾಧಿಕಾರವನ್ನು ಬೆಂಬಲಿಸಿದಂತೆ ಎನ್ನುವ ಭೋಳೆ ನಂಬಿಕೆಯಿಂದ ಹೀಗೆ ಮಾಡುತ್ತಿದ್ದೇವೆಯೆ? ಪ್ರಜಾಪ್ರಭುತ್ವವು ಇಂದಿನ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಬಲಪಂಥೀಯ ಸರ್ವಾಧಿಕಾರಕ್ಕೆ ವೇದಿಕೆಯಾಗಿದೆ ಎನ್ನುವುದನ್ನು ಗಮನಿಸಬೇಡವೆ? ನಮ್ಮ ಚಿಂತನೆ ಹಾಗೂ ಕ್ರಿಯೆಗಳು ಪ್ರಜಾಪ್ರಭುತ್ವವು ದಮನಿತ ವರ್ಗಗಳ ಸಮಾನತೆ, ಸ್ವಾತಂತ್ರ್ಯಗಳ ಆಶಯಗಳನ್ನು ಅನುಷ್ಠಾನಕ್ಕೆ ತರುವ ವ್ಯವಸ್ಥೆಯಾಗಲಿ ಎನ್ನುವುದಾಗಿರಬೇಕಲ್ಲವೆ?  ಈ ಮಾತನ್ನು ಹೇಳಲು ಕಾರಣವೆಂದರೆ ಪೆಗಾಸಸ್ ವಿರೋಧವು ಎಷ್ಟು ಮುಖ್ಯವೋ ಅಷ್ಟೇ ಜನವಿರೋಧಿ ಮಸೂದೆಗಳು ಕೂಡ. ಹೊನ್ನಾವರದ ಮೀನುಗಾರರು (ವಿಶೇಷವಾಗಿ ಮಹಿಳೆಯರು) ಬಂದರಿನ ಖಾಸಗೀಕರಣದ ವಿರುದ್ಧ ಹೋರಾಡಿ ಪೊಲೀಸರಿಂದ ಏಟು ತಿಂದರು. ಆದರೆ ಇದೇ ಖಾಸಗೀಕರಣವನ್ನು ಬೆಂಬಲಿಸುವ ಮಸೂದೆಯೊಂದನ್ನು ಪೆಗಾಸಸ್ ಗಲಾಟೆಯ ಸಂದರ್ಭವನ್ನು ಬಳಸಿಕೊಂಡು ಸರಕಾರವು ಸಂಸತ್ತಿನಲ್ಲಿ ಅಂಗೀಕರಿಸಿತು. ಪೆಗಾಸಸ್‌ನ ವಿರುದ್ಧವೂ ಮೀನುಗಾರ್ತಿಯರ ಪರವಾಗಿಯೂ ಏಕಕಾಲಕ್ಕೆ ಹೋರಾಡದಿದ್ದರೆ ಅಂಥ ಹೋರಾಟವನ್ನು ಜನಪರ ಹೋರಾಟವೆಂದು ಕರೆಯಲಾಗದು.

ಪೆಗಾಸಸ್ ಎನ್ನುವ ಪ್ರಭುತ್ವ ಪ್ರೇರಿತ ಗೂಢಚರ್ಯೆಯು ಭಾರತದಲ್ಲಿ ಪ್ರಜಾಪ್ರಭುತ್ವವು ತಲುಪಿರುವ ಪಾತಾಳದ ದ್ಯೋತಕವಾಗಿದೆ. ಇದನ್ನು ಸಂಸತ್ತಿನಲ್ಲಿ ಪ್ರಬಲವಾಗಿ ವಿರೋಧಿಸುತ್ತಿರುವ ವಿರೋಧ ಪಕ್ಷಗಳ ನಡೆಯನ್ನು ಸಮರ್ಥಿಸಬಹುದಾದರೂ ಈ ಪಕ್ಷಗಳೂ ಕೂಡ ತಾವು ಅಧಿಕಾರದಲ್ಲಿದ್ದಾಗ ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳನ್ನು ವಿರೋಧಿಸಿರಲಿಲ್ಲ ಹಾಗೂ ಪ್ರಜೆಗಳ ಹಕ್ಕುಗಳ ವಿರುದ್ಧ ಅಧಿಕಾರ ಚಲಾಯಿಸಿದವು ಎನ್ನುವುದನ್ನು ಮರೆಯುವಂತಿಲ್ಲ. ಈ ಪಕ್ಷಗಳು ತಮ್ಮ ಆಳ್ವಿಕೆಯಲ್ಲಿ ಕರಾಳವಾದ ಜನವಿರೋಧಿ ಕಾನೂನುಗಳನ್ನೂ, ತಿದ್ದುಪಡಿಗಳನ್ನೂ ಜಾರಿಗೆ ತಂದವು. ಈಗಿರುವ ಫ್ಯಾಸಿಸ್ಟ್ ಸರಕಾರವು ಅವುಗಳ ದುರ್ಬಳಕೆ ಮಾಡುತ್ತಿದೆಯಷ್ಟೆ. ಹೀಗಾಗಿ ವಾಸ್ತವವೇನೆಂದರೆ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಚಿಂತಿಸಿದಂತೆ ನಾವು ಪ್ರಜಾಪ್ರಭುತ್ವದ ಹೊರ ಆವರಣವನ್ನು ಅನುಷ್ಠಾನಕ್ಕೆ ತಂದೆವೆ ಹೊರತು, ಪ್ರಜಾಪ್ರಭುತ್ವ ಸಂಸ್ಕೃತಿಯನ್ನು ಗಟ್ಟಿಗೊಳಿಸಲೇ ಇಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ, ಅನೇಕ ಕಾರಣಗಳಿಂದಾಗಿ ಅದ್ವಿತೀಯವಾದ ವಸಾಹತುಶಾಹಿ ವಿರೋಧಿ ಸ್ವಾತಂತ್ರ್ಯ ಹೋರಾಟವು, ಕೊನೆಗೂ ಅಧಿಕಾರಕ್ಕೆ ತಂದಿದ್ದು ಜಮೀನ್ದಾರಿ ಮತ್ತು ಬಂಡವಾಳಶಾಹಿ ವರ್ಗಗಳನ್ನೇ ಹೊರತು ರೈತರನ್ನು ಅಥವಾ ದುಡಿಯುವ ವರ್ಗಗಳನ್ನಲ್ಲ. ಕವಿ ಸಿದ್ದಲಿಂಗಯ್ಯನವರ “ಯಾರಿಗೆ ಬಂತು 47ರ ಸ್ವಾತಂತ್ರ್ಯ” ಎನ್ನುವ ಪದ್ಯದಲ್ಲಿ ಈ ಪ್ರಶ್ನೆಗೆ ಸರಿಯಾಗಿಯೇ ಉತ್ತರವನ್ನೂ ಕೊಟ್ಟಿದ್ದಾರೆ.

ಇದನ್ನು ಓದಿ: ಪೆಗಾಸಸ್: ಸರ್ವಾಧಿಕಾರಶಾಹಿಯ ಸೈಬರ್ ಆಯುಧ

ಹೀಗಾಗಿ ಆಳುವ ವರ್ಗದ ಈ ಶಕ್ತಿಗಳೇ ಪ್ರಜಾಪ್ರಭುತ್ವವಾದಿ ಚೌಕಟ್ಟಿನಲ್ಲಿ ಇಂದು ಕ್ರೂರವಾದ ಪ್ರಜಾಪ್ರಭುತ್ವ ವಿರೋಧಿ ಅಧಿಕಾರ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿವೆ. ಇಂಥ ವ್ಯವಸ್ಥೆಯ ಶತ್ರುಗಳೆಂದರೆ ಹೋರಾಟಗಾರರು, ಪತ್ರಕರ್ತರು, ವಿರೋಧ ಪಕ್ಷಗಳು ಮತ್ತು ಪ್ರಭುತ್ವದ ಟೀಕಾಕಾರರು. ಪೆಗಾಸಸ್ ಮೂಲಕ ಇವರೆಲ್ಲರ ಮೇಲೆ ಈ ಸರಕಾರವು ನಿಗಾ ಇಡುತ್ತ ಬಂದಿದೆ. ಅಲ್ಲದೆ ಸ್ಟ್ಯಾನ್‌ಸಾಮಿ ಅಂಥವರನ್ನು ಸಾವಿಗೀಡಾಗುವಂತೆ ಮಾಡಿದೆ.  ಜೈಲುಗಳಲ್ಲಿ ಕೊಳೆಯುತ್ತಿರುವ ಇನ್ನೂ ಅನೇಕರ ಸ್ಥಿತಿಯು ಹೆದರಿಕೆ ಹುಟ್ಟಿಸುವಂತಿದೆ. ಸಂಸತ್ತಿನಲ್ಲಿ ಪೆಗಾಸಸ್ ವಿರುದ್ಧ ಗಲಭೆ ನಡೆಯುತ್ತಿರುವಾಗಲೆ ಕೊರೊನಾ ಪಿಡುಗಿನ ವಾಸ್ತವಗಳ ಬಗ್ಗೆ ಧೈರ್ಯವಾಗಿ ಬರೆದ ‘ದೈನಿಕ ಭಾಸ್ಕರ’ ಪತ್ರಿಕಾ ಸಮೂಹದ ವಿರದ್ಧ ಸರಕಾರವು ತನ್ನ ಖಾಸಗಿ ಕ್ರಿಮಿನಲ್ ಸಂಸ್ಥೆಯಾದ ಐಟಿ ಇಲಾಖೆಯ ಮೂಲಕ ದಾಳಿಯನ್ನು ಮಾಡಿಸಿದೆ. ಇದರ ಹಿಂದಿನ ಸಂದೇಶವು ಸ್ಪಷ್ಟವಾಗಿದೆ. ನಿರ್ಬಿಢೆಯಾಗಿ ಪ್ರಭುತ್ವವು ಈಗ ತನ್ನ ಫ್ಯಾಸಿಸ್ಟ್ ಸ್ವರೂಪವನ್ನು ತೋರಿಸುತ್ತಿದೆ. ಈಗ ಶುರುವಾಗಿರುವ ದಮನದ ಪರ್ವವು ಇನ್ನು ಪ್ರತಿನಿತ್ಯ ಅಪಾರ ಹಿಂಸೆಯನ್ನೇ ತರುತ್ತದೆಯೆನ್ನುವುದರ ಬಗ್ಗೆ ಸಂಶಯ ಬೇಡ. ಅಲ್ಲದೆ ಸಂಸತ್ತಿನಲ್ಲಿ ನಡೆಯುತ್ತಿರುವ ಗಲಭೆಯನ್ನು ಬಳಸಿಕೊಂಡು ಅನೇಕ ಜನವಿರೋಧಿ ಮಸೂದೆಗಳನ್ನು ಸರಕಾರವು ಪಾಸು ಮಾಡುತ್ತಿದೆ.

ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ

ವಾಸ್ತವವಾಗಿ ಈ ದುಸ್ಥಿತಿಯ ನಿಜವಾದ ಲಕ್ಷಣವೆಂದರೆ ಈ ವಿದ್ಯಮಾನಗಳಿಗೆ ಪ್ರಜೆಗಳ ಪ್ರತಿಕ್ರಿಯೆ. ಅನೇಕ ಹೋರಾಟಗಾರರು ಅಂದಾಜು ಮೂರು ವರ್ಷಗಳಿಂದ ವಿಚಾರಣೆಯೂ ಇಲ್ಲದೆ ಜೈಲಿನಲ್ಲಿದ್ದಾರೆ. ಇವರಲ್ಲಿ ವಯಸ್ಸಾದವರೂ ಆರೋಗ್ಯ ಸಮಸ್ಯೆಯುಳ್ಳವರೂ ಇದ್ದಾರೆ. ಆದರೆ ಪ್ರಜೆಗಳಿಂದ ಪ್ರತಿಭಟನೆ ಇಲ್ಲ. ವಿಶ್ವದ ಅತ್ಯುತ್ತಮ ಅಂಬೇಡ್ಕರ್ ವಿದ್ವಾಂಸರಾದ ಆನಂದ್ ತೇಲ್‌ತುಂಬ್ಡೆಯವರ ಬಂಧನದ ನಂತರ ಭಾರತದ ದಲಿತ ಸಮುದಾಯಗಳು ಉಗ್ರವಾಗಿ ಪ್ರತಿಭಟಿಸುತ್ತಿವೆಯೆಂದು ನಿರೀಕ್ಷಿಸಿದವರಿಗೆ ನಿರಾಸೆ ಮತ್ತು ಆಶ್ಚರ್ಯಗಳೇ ಕಾದಿದ್ದವು. ಸ್ಟ್ಯಾನ್‌ಸಾಮಿಯವರ ನಿಧನದ ಬಗ್ಗೆ ಶೋಕಾಚರಣೆ ಮಾಡಲು ಕ್ರಿಶ್ಚಿಯನ್ ಸಮುದಾಯಗಳು ಅನೇಕ ಕಡೆಗೆ ಹಿಂದೇಟು ಹಾಕಿದವು. ತಮ್ಮ ಇತ್ತೀಚಿನ ನಡೆಗಳಿಂದಾಗಿ ಕರ್ನಾಟಕದ ಲಿಂಗಾಯಿತ-ವೀರಶೈವ ಮಠಗಳು ವಚನಕಾರರ ಸಮಾನತೆಯ ಹೋರಾಟಕ್ಕೆ ಸಾಮೂಹಿಕ ಸಮಾಧಿಯನ್ನು ಕಟ್ಟಿದವು. ಅನೇಕ ‘ಆಧುನಿಕ ಬಸವಣ್ಣ’ ವೇಷದ ಸ್ವಾಮಿಗಳು ತಾವು ಹಿಂದುತ್ವವಾದಿ ಸರಕಾರದ ಮೂಕ ಬಸವರೆಂದು ಸಾರ್ವಜನಿಕವಾಗಿ ತೋರಿಸಿಕೊಂಡರು. ಸರಳವಾಗಿ ಹೇಳುವುದಾದರೆ ಇಂದಿನ ಸ್ಥಿತಿಯಲ್ಲಿ ಪ್ರಜೆಗಳು ಈಗಾಗಲೇ ಕೋಮಾದಲ್ಲಿದ್ದಾರೆ. ಫ್ಯಾಸಿಸ್ಟ್ ಶಕ್ತಿಗಳು ಎಂದಿಲ್ಲದ ಆತ್ಮವಿಶ್ವಾಸದಲ್ಲಿವೆ. ಮುಂದೇನು?

ಇಂದಿನ ಫ್ಯಾಸಿಸ್ಟ್ ಪ್ರಭುತ್ವವು ಸೈನಿಕರ ಬಂಡಾಯದಿಂದ ಅಥವಾ ನೇರವಾದ ಹಿಂಸೆಯಿಂದ ಅಧಿಕಾರಕ್ಕೆ ಬಂದಿಲ್ಲ. ಪ್ರಜಾಪ್ರಭುತ್ವವಾದಿ ಎಂದು ನಾವು ಭ್ರಮಿಸುವ ಚುನಾವಣಾ ರಾಜಕೀಯ ವ್ಯವಸ್ಥೆಯ ಮೂಲಕವೇ ಅಧಿಕಾರಕ್ಕೆ ಬಂದಿದೆ. ಈ ಚುನಾವಣೆಗಳು ಬಹುಪಾಲು ಜಾತಿ, ಪ್ರಭಾವ, ದುಡ್ಡು ಮುಂತಾದ ಶಕ್ತಿಗಳಿಂದ ನಡೆದಿವೆಯೆನ್ನುವುದು ಗೊತ್ತಿದ್ದರೂ ನಾವು ಅವುಗಳನ್ನು ಪವಿತ್ರವೆಂದು ಹಾಡಿಹೊಗಳುತ್ತ ಬಂದಿದ್ದೇವೆ. ಬೂರ್ಜ್ವಾ ಪ್ರಜಾಪ್ರಭುತ್ವದ ವಿಕೃತಿಗಳನ್ನು ಸಮರ್ಥವಾಗಿ ನಾವು ಪ್ರಶ್ನಿಸಲೂ ಇಲ್ಲ. ಇದರ ಪರಿಣಾಮವೆಂದರೆ ಚುನಾವಣೆ ಮೂಲಕ ಗೆದ್ದವರು ಪ್ರಜೆಗಳ ನಿಜವಾದ ಪ್ರತಿನಿಧಿಗಳು ಎಂದೂ ಚುನಾವಣಾ ವ್ಯವಸ್ಥೆಯನ್ನು ಪವಿತ್ರೀಕರಣಗೊಳಿಸಿಬಿಟ್ಟಿದ್ದೇವೆ.  ಆಶ್ಚರ್ಯವೆಂದರೆ 19ನೇ ಶತಮಾನದ ಇಂಗ್ಲೆಂಡ್‌ನ ಮಧ್ಯಮವರ್ಗದ ಲಿಬರಲ್ ಚಿಂತನೆಯ ಬರಹಗಾರರು ಕೂಡ ಸಂಸದೀಯ ಪ್ರಜಾಪ್ರಭುತ್ವವು ವರ್ಗ ಹಿತಾಸಕ್ತಿಗಳ ಅಧಿಕಾರವಾಗಿರುತ್ತದೆಯೆಂದು ಉಗ್ರವಾಗಿ ಟೀಕಿಸಿದ್ದರು. ಸ್ವತಃ ಗಾಂಧಿ ‘ಹಿಂದ್ ಸ್ವರಾಜ್’ ಕೃತಿಯಲ್ಲಿ ಇಂಗ್ಲೆಂಡ್‌ನ ಸಂಸತ್ತನ್ನು “ಬಂಜೆ ಮತ್ತು ವೇಶ್ಯೆ” ಎಂದು ಕರೆದಿದ್ದರು. ಬಂಜೆ ಏಕೆಂದರೆ ಅದರಿಂದ ಏನೂ ಹುಟ್ಟದು, ವೇಶ್ಯೆ ಏಕೆಂದರೆ ಅದನ್ನು ಆಳುವ ವರ್ಗವು ಇಟ್ಟುಕೊಳ್ಳುತ್ತದೆಯೆಂದು. ಗಾಂಧಿಯವರ ವಿಮರ್ಶೆ ಸರಿಯಾದ್ದರೂ ಅವರು ಸ್ತ್ರೀವಿರೋಧಿ ರೂಪಕಗಳನ್ನು ಬಳಸಿದ್ದನ್ನು ನಾವು ತೀವ್ರವಾಗಿ ಖಂಡಿಸಲೇಬೇಕು.

ಇದನ್ನು ಓದಿ: ‘ಪೆಗಾಸಸ್’ ಬಳಸಿ 300ಕ್ಕೂ ಹೆಚ್ಚು ಭಾರತೀಯ ಗಣ್ಯರ ಫೋನ್‌ಗಳು ಹ್ಯಾಕ್‌

ಪ್ರಶ್ನೆಯೆಂದರೆ ಭಾರತದ ಇಂದಿನ ರಾಜಕೀಯ ವ್ಯವಸ್ಥೆಯು ಚುನಾವಣಾ ರಾಜಕೀಯದ ಮೂಲಕ ಅಧಿಕಾರಕ್ಕೆ ಬಂದಿರುವ ಬಂಡವಾಳಶಾಹಿ ಫ್ಯಾಸಿಸ್ಟ್ ವ್ಯವಸ್ಥೆ ಎಂದು ಹೇಳಲು ಯಾಕೆ ಹಿಂದೇಟು ಹಾಕುತ್ತಿದ್ದೇವೆ? ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಶ್ನಿಸುವುದೆಂದರೆ ಸರ್ವಾಧಿಕಾರವನ್ನು ಬೆಂಬಲಿಸಿದಂತೆ ಎನ್ನುವ ಭೋಳೆ ನಂಬಿಕೆಯಿಂದ ಹೀಗೆ ಮಾಡುತ್ತಿದ್ದೇವೆಯೆ? ಪ್ರಜಾಪ್ರಭುತ್ವವು ಇಂದಿನ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಬಲಪಂಥೀಯ ಸರ್ವಾಧಿಕಾರಕ್ಕೆ ವೇದಿಕೆಯಾಗಿದೆ ಎನ್ನುವುದನ್ನು ಗಮನಿಸಬೇಡವೆ? ನಮ್ಮ ಚಿಂತನೆ ಹಾಗೂ ಕ್ರಿಯೆಗಳು ಪ್ರಜಾಪ್ರಭುತ್ವವು ದಮನಿತ ವರ್ಗಗಳ ಸಮಾನತೆ, ಸ್ವಾತಂತ್ರ್ಯಗಳ ಆಶಯಗಳನ್ನು ಅನುಷ್ಠಾನಕ್ಕೆ ತರುವ ವ್ಯವಸ್ಥೆಯಾಗಲಿ ಎನ್ನುವುದಾಗಿರಬೇಕಲ್ಲವೆ?  ಈ ಮಾತನ್ನು ಹೇಳಲು ಕಾರಣವೆಂದರೆ ಪೆಗಾಸಸ್ ವಿರೋಧವು ಎಷ್ಟು ಮುಖ್ಯವೋ ಅಷ್ಟೇ ಜನವಿರೋಧಿ ಮಸೂದೆಗಳು ಕೂಡ. ಹೊನ್ನಾವರದ ಮೀನುಗಾರರು (ವಿಶೇಷವಾಗಿ ಮಹಿಳೆಯರು) ಬಂದರಿನ ಖಾಸಗೀಕರಣದ ವಿರುದ್ಧ ಹೋರಾಡಿ ಪೊಲೀಸರಿಂದ ಏಟು ತಿಂದರು. ಆದರೆ ಇದೇ ಖಾಸಗೀಕರಣವನ್ನು ಬೆಂಬಲಿಸುವ ಮಸೂದೆಯೊಂದನ್ನು ಪೆಗಾಸಸ್ ಗಲಾಟೆಯ ಸಂದರ್ಭವನ್ನು ಬಳಸಿಕೊಂಡು ಸರಕಾರವು ಸಂಸತ್ತಿನಲ್ಲಿ ಅಂಗೀಕರಿಸಿತು. ಪೆಗಾಸಸ್‌ನ ವಿರುದ್ಧವೂ ಮೀನುಗಾರ್ತಿಯರ ಪರವಾಗಿಯೂ ಏಕಕಾಲಕ್ಕೆ ಹೋರಾಡದಿದ್ದರೆ ಅಂಥ ಹೋರಾಟವನ್ನು ಜನಪರ ಹೋರಾಟವೆಂದು ಕರೆಯಲಾಗದು.

ಈ ಸ್ಥಿತಿಯಲ್ಲಿ ಪರಿಹಾರವಾಗಿ ಕಾಣುತ್ತಿರುವುದೆಂದರೆ ವರ್ಗ ಹೋರಾಟವನ್ನು ಜಾಗತಿಕ ಬಂಡವಾಳಶಾಹಿಯ ಇಂದಿನ ಸಂದರ್ಭಕ್ಕೆ ತಕ್ಕಹಾಗೆ ಮರುವ್ಯಾಖ್ಯಾನ ಮಾಡಿಕೊಂಡು ಮರುರೂಪಿಸುವುದು. ಏಕೆಂದರೆ ಬೂರ್ಜ್ವಾ ಪ್ರಜಾಪ್ರಭುತ್ವವು ಬಂಡವಾಳಶಾಹಿಯ ಒಂದು ಸ್ಥಿತಿಯಾಗಿರುವ ಫ್ಯಾಸಿಸ್ಟ್ ವ್ಯವಸ್ಥೆಯ ಹಂತವನ್ನು ಈಗ ತಲುಪಿದೆ. ಈ ಎಚ್ಚರವು ಇಲ್ಲದಿದ್ದರೆ ಪ್ರಜಾಪ್ರಭುತ್ವವಾದಿ ಹೋರಾಟಗಳು ನೆರಳಿನ ಜೊತೆಗಿನ ಹೋರಾಟಗಳಾಗಿ ಬಿಡುತ್ತವೆ.

ಕರ್ನಾಟಕದಲ್ಲಿ ನಡೆದ ಮುಖ್ಯಮಂತ್ರಿ ಬದಲಾವಣೆಯ ಹಾಸ್ಯ ಪ್ರಕರಣವನ್ನು ಆನಂದಿಸುತ್ತಿರುವ ಪ್ರಜೆಗಳಿಗೆ ಇದನ್ನು ವಿವರಿಸುವುದು ಕಷ್ಟಸಾಧ್ಯವಾಗಿದೆ. ಒಂದು ಇಂಗ್ಲಿಷ್ ವಾಹಿನಿಯಲ್ಲಿ “ಕರ್ನಾಟಕದಲ್ಲಿ ನಾಟಕದ” ಮುಂದಿನ ದೃಶ್ಯವೇನು ಎಂದು ಪದೇ ಪದೇ ಕೇಳಲಾಯಿತು. ಪ್ರಗತಿಪರ, ಸುಸಂಸ್ಕೃತ ರಾಜ್ಯವೆಂದು ಕರೆಯಲಾಗುತ್ತಿದ್ದ ಆಧುನಿಕ ರಾಜ್ಯವೊಂದು ಹಗರಣಗಳಿಂದ ಹಗರಣಗಳತ್ತ ಸಾಗುತ್ತ ಇಡೀ ದೇಶದಲ್ಲಿ ಹಾಸ್ಯಾಸ್ಪದವಾಗುತ್ತಿದೆ. ಎಂಥಹ ಭಾಗ್ಯವಿದು, ಕನ್ನಡ ಮಕ್ಕಳದು!

Donate Janashakthi Media

Leave a Reply

Your email address will not be published. Required fields are marked *