ರೈತಾಪಿಯ ’ಮಾಡು ಇಲ್ಲವೇ ಮಡಿ’ ಹೋರಾಟ

ಪ್ರೊ. ಪ್ರಭಾತ್ ಪಟ್ನಾಯಕ್

ಇಂದಿನ ರೈತ ಹೋರಾಟವು ಒಂದು ಸಾಮಾನ್ಯ ಹೋರಾಟವಲ್ಲ. ಇದು, ಸದ್ಯದ ಸಂದಿಗ್ಧ ಪರಿಸ್ಥಿತಿಯ ಮೂಲವನ್ನೇ ಅಲುಗಾಡಿಸುವ ಹೋರಾಟವಾಗಿದೆ. ಇದು, ʻಮಾಡು ಇಲ್ಲವೇ ಮಡಿʼ ಹೋರಾಟ. ರೈತರ ಈ ಹೋರಾಟವು  ಈ ಸರ್ಕಾರವು ತಾನು ಜನರೊಂದಿಗೆ ನಿಲ್ಲುತ್ತೇನೋ ಅಥವಾ ದೊಡ್ಡ ಅಂತಾರಾಷ್ಟ್ರೀಯ ಉದ್ಯಮಗಳೊಂದಿಗೋ ಎಂಬುದನ್ನು ಸರ್ಕಾರವೇ ಬಹಿರಂಗವಾಗಿ ಘೋಷಿಸಬೇಕಾಗಿ ಬಂದಿರುವ ಇಕ್ಕಟ್ಟಿನಲ್ಲಿ ಇರಿಸಿದೆ. ಇಲ್ಲಿಯವರೆಗೆ ಸರ್ಕಾರವು ಮಾಡಿದ ಹಾಗೆ, ಮುಂದೆಯೂ ಅಂತಾರಾಷ್ಟ್ರೀಯ ದೊಡ್ಡ ಉದ್ಯಮಗಳೊಂದಿಗೆ ಬಹಿರಂಗವಾಗಿ ನಿಂತರೆ, ಅದು ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಕೊಡುವ ಬಹು ದೊಡ್ಡ ಹೊಡೆತವಾಗುತ್ತದೆ.

ಬಂಡವಾಳಶಾಹಿಯು ಬೆಳೆದಂತೆಯೇ ಮಾರ್ಕ್ಸ್‌ವಾದಿ ಸಿದ್ಧಾಂತವೂ ಸಹ ಸಮಯದ ಬದಲಾವಣೆಯೊಂದಿಗೆ ವಿಕಾಸಗೊಳ್ಳುತ್ತದೆ. ಆದ್ದರಿಂದಲೇ ಅದೊಂದು ಜೀವಂತ ಸಿದ್ಧಾಂತವಾಗಿ ಉಳಿದಿದೆ. ಬಂಡವಾಳಶಾಹಿಯನ್ನು ಮೀರಿ ಹೋಗಲು ಕಾರಣವಾಗುವ ಕ್ರಾಂತಿಕಾರಿ ಪ್ರಕ್ರಿಯೆಯಲ್ಲಿ ರೈತ ಚಳವಳಿಯ ಪಾತ್ರಕ್ಕೆ ಸಂಬಂಧಿಸಿದಂತೆ, ಮಾರ್ಕ್ಸ್‌ವಾದಿ ಸಿದ್ಧಾಂತದಲ್ಲಿ ಗಮನಾರ್ಹ ಬೆಳವಣಿಗೆಗಳಾಗಿವೆ. ಅವುಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಜರ್ಮನಿಯ ರೈತಾಪಿಯು ಬಂಡವಾಳಶಾಹಿಯನ್ನು ಕಿತ್ತೊಗೆಯಲು ನಡೆಸಿದ ಕ್ರಾಂತಿಕಾರಿ ಹೋರಾಟದಲ್ಲಿ ಶ್ರಮಿಕ ವರ್ಗವು ರೈತಾಪಿ ವರ್ಗ ಮತ್ತು ಕೃಷಿ ಕಾರ್ಮಿಕರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾಗಿ ಬಂತು ಎಂಬ ಅಂಶವನ್ನು ಫೆಢರಿಕ್ ಎಂಗೆಲ್ಸ್, ’ಜರ್ಮನಿಯ ರೈತ ಯುದ್ಧ’(1850) ಎಂಬ ತಮ್ಮ ಕೃತಿಯಲ್ಲಿ ಒತ್ತಿ ಹೇಳಿದ್ದರು. ಆದಾಗ್ಯೂ, ಕ್ರಾಂತಿಯಲ್ಲಿ ರೈತರ ಪಾತ್ರ ಕುರಿತು ಮಾರ್ಕ್ಸ್‌ವಾದಿ ಸಿದ್ಧಾಂತವು ಅನೇಕ ವರ್ಷಗಳ ಕಾಲ ಅಸ್ಪಷ್ಟವಾಗಿತ್ತು. “ಪರಿಷ್ಕರಣವಾದ”ವನ್ನು ಪ್ರಬಲವಾಗಿ ವಿರೋಧಿಸಿದವರೂ ಮತ್ತು ಎರಡನೇ ಅಂತಾರಾಷ್ಟ್ರೀಯದ ಪ್ರಧಾನ ಸಿದ್ಧಾಂತಿಯೂ ಹಾಗೂ ಕ್ರಾಂತಿಕಾರಿ ಮಾರ್ಕ್ಸ್‌ವಾದದ ಒಬ್ಬ ಪ್ರಬಲ ಸಮರ್ಥಕರೂ ಆಗಿದ್ದ ಕಾರ್ಲ್ ಕೌಟ್ಸ್ಕಿ, “ರೈತರು ಮತ್ತು ಭೂಮಾಲೀಕರ ನಡುವಿನ ಸಂಬಂಧಗಳ ಪ್ರಶ್ನೆಯಲ್ಲಿ ನಗರಪ್ರದೇಶದ ಕ್ರಾಂತಿಕಾರಿ ಚಳುವಳಿಯು ತಟಸ್ಥವಾಗಿರಬೇಕು” ಎಂದು ನಂಬಿದ್ದರು. ಕೌಟ್ಸ್ಕಿ ಅವರ ಈ ಸಮರ್ಥನೆಯಿಂದ ದುಃಖಿತರಾದ ಇಲಿಚ್(ಲೆನಿನ್), ಇದು ಬಹುಶಃ ಪಶ್ಚಿಮ ಯುರೋಪಿನ ಸಂದರ್ಭದಲ್ಲಿ ನಿಜವಿರಬಹುದೇನೋ. ಆದರೆ, ರಷ್ಯಾದ ಕ್ರಾಂತಿಯು ರೈತರ ಬೆಂಬಲದಿಂದ ಮಾತ್ರ ಜಯಶಾಲಿಯಾಗಬಲ್ಲದು ಎಂದು ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದರು ಎಂಬುದಾಗಿ, ರಷ್ಯಾದ ಒಬ್ಬ ಕ್ರಾಂತಿಕಾರಿಯೂ ಮತ್ತು ಲೆನಿನ್ ಅವರ ಪತ್ನಿಯೂ ಆಗಿದ್ದ ನಾಡೆಜ್ಡಾ ಕೃಪ್ಸ್‌ಕಾಯ ಅವರು ಹೇಳಿದ್ದಾರೆ. (ಮೆಮೊರೀಸ್ ಆಫ್ ಲೆನಿನ್, ಪ್ಯಾಂಥರ್ ಹಿಸ್ಟರಿ ಪೇಪರ್ ಬ್ಯಾಕ್, 1970, ಪುಟ.110-111).

ಎಂಗೆಲ್ಸ್ ಅವರ ವಾದವನ್ನು ಸ್ವತಃ ಲೆನಿನ್ ಅಭಿವೃದ್ಧಿಪಡಿಸಿದರು ಮತ್ತು ಅದು ಮುಂದಿನ ಶತಮಾನದಲ್ಲಿ ಮಾರ್ಕ್ಸ್‌ವಾದಿ ಮೂಲ ಪ್ರಮೇಯದ ಸ್ಥಾನವನ್ನು ಪಡೆಯಿತು. ಲೆನಿನ್ ಅಭಿವೃದ್ಧಿಪಡಿಸಿದ ವಾದ ಹೀಗಿದೆ: ಬಂಡವಾಳಶಾಹಿ ಪದ್ಧತಿಯು ತಡವಾಗಿ ಬಂದ ದೇಶಗಳಲ್ಲಿ, ಶ್ರಮಿಕರು ಅದಾಗಲೇ ಒಡ್ಡಿದ ಸವಾಲಿಗೆ ಎದುರಾಗಿದ್ದ ಬೂರ್ಜ್ವಾಗಳು, ಭೂಮಾಲೀಕರೊಂದಿಗೆ ಕೈಜೋಡಿಸಿದರು. ಏಕೆಂದರೆ, ಊಳಿಗಮಾನ್ಯ ಆಸ್ತಿ ಸಂಬಂಧಗಳ ಮೇಲೆ ನಡೆಸುವ ಯಾವುದೇ ದಾಳಿಯು ಪುಟಿದೆದ್ದು ನಾಳೆ ತಮಗೂ ಸಂಚಕಾರ ತರುತ್ತದೆ – ಅಂದರೆ, ಬೂರ್ಜ್ವಾ ಆಸ್ತಿ-ಸಂಬಂಧಗಳ ಮೇಲೂ ಇದೇ ರೀತಿಯ ದಾಳಿ ಮರುಕಳಿಸುತ್ತದೆ – ಎಂಬ ಭಯದಿಂದ. ಆದ್ದರಿಂದ, 1789ರಲ್ಲಿ ಫ್ರಾನ್ಸಿನಲ್ಲಿ ಬೂರ್ಜ್ವಾ ಕ್ರಾಂತಿಯನ್ನು ಮುನ್ನಡೆಸಿದ ದಿನಗಳಲ್ಲಿ ಆಗಿದ್ದಂತೆ, ಊಳಿಗಮಾನ್ಯ ಎಸ್ಟೇಟ್‌ಗಳ ಒಡೆತನವನ್ನು ರೈತರ ನಡುವೆ ಮರು-ವಿತರಿಸುವ ಮೂಲಕ ಊಳಿಗಮಾನ್ಯ ಆಸ್ತಿ ಸಂಬಂಧಗಳಿಗೆ ಮಾರಣಾಂತಿಕ ಪೆಟ್ಟು ಕೊಡದೆ, ಮತ್ತು  ಸಾಮಾಜಿಕ ಶಕ್ತಿಯ ಮೇಲೆ ಆಕ್ರಮಣ ನಡೆಸದೆ  ಮುದುರಿಕೊಂಡಿತು. ಹಾಗಾಗಿ, ರೈತರ ಪ್ರಜಾಸತ್ತಾತ್ಮಕ ಆಕಾಂಕ್ಷೆಗಳು ಈಡೇರಲಿಲ್ಲ. ಪ್ರಜಾಸತ್ತಾತ್ಮಕ ಕ್ರಾಂತಿಯನ್ನು ಮುನ್ನಡೆಸುವ ಶ್ರಮಿಕರಿಂದ ಮಾತ್ರ ರೈತರ ಈ ಆಕಾಂಕ್ಷೆಗಳನ್ನು ಈಡೇರಿಸಲು ಸಾಧ್ಯ, ಈ ಉದ್ದೇಶಕ್ಕಾಗಿ ಅದು ರೈತರೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು.

ಕಾರ್ಮಿಕ ವರ್ಗದ ನಾಯಕತ್ವದಲ್ಲಿ ಪ್ರಜಾಸತ್ತಾತ್ಮಕ ಕ್ರಾಂತಿಯನ್ನು ಪೂರ್ಣಗೊಳಿಸುವ ಕಾರ್ಮಿಕ-ರೈತ ಮೈತ್ರಿಯ ಪರಿಕಲ್ಪನೆಯನ್ನು ಲೆನಿನ್ ಮುಂದಿಟ್ಟರು. ಆನಂತರ, ಕಾರ್ಮಿಕ ವರ್ಗವು ಒಂದು ಸಮಾಜವಾದಿ ಕ್ರಾಂತಿಯತ್ತ ಸಾಗುತ್ತದೆ, ಹೀಗೆ ಸಾಗುತ್ತಿರುವಾಗ, ಕ್ರಾಂತಿಯ ಹಂತಕ್ಕೆ ಅನುಗುಣವಾಗಿ ಕಾರ್ಮಿಕ ವರ್ಗವು ರೈತಾಪಿಯೊಳಗಿನ ತನ್ನ ಮಿತ್ರರನ್ನು ಬದಲಾಯಿಸಿಕೊಳ್ಳುತ್ತದೆ. ಪ್ರಜಾಸತ್ತಾತ್ಮಕ ಕ್ರಾಂತಿಗಾಗಿ ಕಾರ್ಮಿಕ ವರ್ಗವು ಉದಾರವಾದಿ ಬೂರ್ಜ್ವಾಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎನ್ನುವ ಮೆನ್ಶೆವಿಕ್‌ಗಳ ವಾದವನ್ನು ಲೆನಿನ್ ವಿರೋಧಿಸಿದರು. ಉದಾರವಾದಿ ಬೂರ್ಜ್ವಾ ವರ್ಗವು ಊಳಿಗಮಾನ್ಯ ಪ್ರಭುಗಳೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬಯಸದ ಕಾರಣ, ಅದು ರೈತರಿಗೆ ದ್ರೋಹ ಬಗೆಯುವುದು ಶತಸಿದ್ಧ ಎಂದು ಲೆನಿನ್ ವಾದಿಸಿದರು. ಆದ್ದರಿಂದ, ಕಾರ್ಮಿಕ ವರ್ಗವು ಉದಾರವಾದಿ ಬೂರ್ಜ್ವಾ ವರ್ಗದೊಂದಿಗಿನ ಮೈತ್ರಿಯಿಂದ ದುರ್ಬಲಗೊಳ್ಳುವುದರ ಬದಲು ಮತ್ತು ಆ ಮೂಲಕ ಪ್ರಜಾಪ್ರಭುತ್ವ ಕ್ರಾಂತಿಗೆ ಅಡಚಣೆಯಾಗುವುದರ ಬದಲು, ಪ್ರಜಾಪ್ರಭುತ್ವ ಕ್ರಾಂತಿಯನ್ನು ಮುಂದುವರೆಸುವ ಸಲುವಾಗಿ  ರೈತಾಪಿಯೊಂದಿಗೆ ಮೈತ್ರಿಯನ್ನು ರೂಪಿಸಿಕೊಳ್ಳಬೇಕು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಶ್ರಮಿಕ ವರ್ಗವು ರೈತಾಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪ್ರಜಾಸತ್ತಾತ್ಮಕ ಕ್ರಾಂತಿಯನ್ನು ಪೂರ್ಣಗೊಳಿಸಬಹುದು. ಆದರೆ, ಶ್ರಮಿಕ ವರ್ಗ ಮತ್ತು ಉದಾರವಾದಿ ಬೂರ್ಜ್ವಾಗಳ ನಡುವಿನ ಮೈತ್ರಿಯು ಪ್ರಜಾಪ್ರಭುತ್ವ ಕ್ರಾಂತಿಗೆ ದ್ರೋಹವೆಸಗುವುದು ಖಚಿತ. ಹಾಗಾಗಿ, ರಷ್ಯಾದ ಬೋಲ್ಶೆವಿಕ್ ಕ್ರಾಂತಿಗೆ ಮೊದಲು “ಕಾರ್ಮಿಕರು ಮತ್ತು ರೈತರ ಪ್ರಜಾಸತ್ತಾತ್ಮಕ ಸರ್ವಾಧಿಕಾರ” ಎಂಬ ಬೋಲ್ಶೆವಿಕ್ ಕಾರ್ಯಕ್ರಮವು “ಶ್ರಮಜೀವಿಗಳ ಸರ್ವಾಧಿಕಾರ” ಕ್ಕೆ ಮಾರ್ಪಾಟಾಯಿತು.

ಲೆನಿನ್‌ರವರ ಈ ವ್ಯಾಖ್ಯಾನವು ಮಾರ್ಕ್ಸ್‌ವಾದದ ವಿಕಾಸದಲ್ಲಿ ಒಂದು ಗಮನಾರ್ಹ ಬೆಳವಣಿಗೆಯಾಗಿದ್ದು ಈ ತಿಳುವಳಿಕೆಯು ಮುಂದಿನ ಶತಮಾನದಲ್ಲಿ ಮೂರನೇ ಜಗತ್ತಿನಲ್ಲಿ ಬೆಳೆದು ಬಂದ ಕ್ರಾಂತಿಕಾರಿ ಚಳುವಳಿಗಳಿಗೆ ಅಗತ್ಯ ಬೋಧನೆಯನ್ನು ಒದಗಿಸಿತು. ಲೆನಿನ್ ಅವರ ಜೀವಿತ ಕಾಲದ ನಂತರ ಬಂಡವಾಳಶಾಹಿಯಲ್ಲಿ ಕಂಡು ಬಂದ ಬೆಳವಣಿಗೆಗಳು ಲೆನಿನ್ ಅವರ ವಿಶ್ಲೇಷಣೆಯ ಪ್ರಾಮುಖ್ಯತೆಯನ್ನು ಬಲಪಡಿಸಿವೆ ಮತ್ತು ಕಾರ್ಮಿಕ-ರೈತಾಪಿ ಮೈತ್ರಿಯ ಅಗತ್ಯವು ಲೆನಿನ್ ಹೇಳಿದ್ದಕ್ಕಿಂತಲೂ ಅಧಿಕ ಕಾರಣಗಳಿಂದಾಗಿ ಮಹತ್ವ ಪಡೆಯುತ್ತದೆ.

ಬಂಡವಾಳಶಾಹಿಯ ವಿಕಾಸದ ಸಂಬಂಧವಾಗಿ ಎರಡು ನಿರ್ದಿಷ್ಟ ಬೆಳವಣಿಗೆಗಳು ಇಲ್ಲಿ ಪ್ರಸ್ತುತವಾಗುತ್ತವೆ. ಮೊದಲನೆಯದು, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಪ್ರವರ್ಧಮಾನಕ್ಕೆ ಬಂದದ್ದು ಮತ್ತು ಅದರ ಆಧಿಪತ್ಯದಲ್ಲಿ ನವ-ಉದಾರವಾದಿ ನೀತಿಗಳ ಆಗಮನದೊಂದಿಗೆ, ದೇಶೀಯ ಏಕಸ್ವಾಮ್ಯ ಬಂಡವಾಳಗಾರರಿಗೆ ಮತ್ತು ಬಹು ರಾಷ್ಟ್ರೀಯ ಉದ್ದಿಮೆಗಳಿಗೆ ರೈತ ಕೃಷಿಯನ್ನು ಅತಿಕ್ರಮಿಸುವ ಮಾರ್ಗದಲ್ಲಿದ್ದ ಅಡಚಣೆಗಳನ್ನು ತೆರವುಗೊಳಿಸಿದ ಕ್ರಮ. ಸಂಕ್ಷಿಪ್ತವಾಗಿ ಹೇಳುವುದಾದರೆ, ರೈತಾಪಿಯು ಇಂದು ಭೂಮಾಲಿಕ ವರ್ಗದ ದಬ್ಬಾಳಿಕೆಯನ್ನು ಮಾತ್ರವಲ್ಲದೆ ಏಕಸ್ವಾಮ್ಯ ಬಂಡವಾಳದ ದಬ್ಬಾಳಿಕೆಯನ್ನೂ ಎದುರಿಸುತ್ತಿದೆ.

ಏಕಸ್ವಾಮ್ಯ ಬಂಡವಾಳವು ಭರ್ಜರಿ ಲಾಭ ಗಳಿಸುತ್ತದೆ. ಮುಕ್ತ ಸ್ಪರ್ಧೆಯ ಬಂಡವಾಳಶಾಹಿಯ ಅಡಿಯಲ್ಲಿ ಪ್ರಚಲಿತ ಲಾಭದ ದರಕ್ಕಿಂತ ಅತಿ ಹೆಚ್ಚು ಲಾಭಗಳಿಸುತ್ತದೆ. ಈ ಪಾಟಿಯ ಲಾಭವನ್ನು ಅದು ಕೇವಲ ಕಾರ್ಮಿಕರ ಶೋಷಣೆಯ ಮೂಲಕ (ಮಿಗುತಾಯ ಮೌಲ್ಯದ ದರವನ್ನು ಹೆಚ್ಚಿಸುವ ಮೂಲಕ) ಮಾತ್ರವಲ್ಲ, ಸಣ್ಣ ಪುಟ್ಟ ಬಂಡವಾಳಶಾಹಿಗಳು ಮತ್ತು ರೈತಾಪಿಯೂ ಸೇರಿದಂತೆ ಕಿರು ಉತ್ಪಾದಕರಿಗೆ ನಷ್ಟ ಉಂಟುಮಾಡುವ ಮೂಲಕ ಗಳಿಸುತ್ತದೆ. ಸರ್ಕಾರವು “ವ್ಯಾಪಾರದ ವರ್ಗ ನಿಯಮಗಳನ್ನು” ರೈತ ಕೃಷಿಗೆ ವಿರುದ್ಧವಾಗಿ ಮತ್ತು ಏಕಸ್ವಾಮ್ಯ ಬಂಡವಾಳದ ಪರವಾಗಿ ತಿರುಗಿಸಿದಾಗ ಅದರ ಲಾಭ ಹೆಚ್ಚುತ್ತದೆ. ಅಲ್ಲದೆ, ಪ್ರಭುತ್ವದ ಮಧ್ಯಸ್ಥಿಕೆಯ ಮೂಲಕವೂ ಅದು ಲಾಭ ಪಡೆಯುತ್ತದೆ. ಉದಾಹರಣೆಯಾಗಿ ಹೇಳುವುದಾದರೆ, ಬಜೆಟ್‌ನಲ್ಲಿ ರೈತ ಕೃಷಿಗೆ ಒದಗಿಸುತ್ತಿದ್ದ ವಿತ್ತೀಯ ಬೆಂಬಲದ ದಿಕ್ಕನ್ನು ಏಕಸ್ವಾಮ್ಯ ಬಂಡವಾಳಶಾಹಿಗಳತ್ತ ತಿರುಗಿಸುವುದು. ಏಕಸ್ವಾಮ್ಯವಾದಿಗಳಿಗೆ ಉತ್ತೇಜನಗಳು(ಸಬ್ಸಿಡಿಗಳು) ಮತ್ತು ತೆರಿಗೆ-ರಿಯಾಯಿತಿಗಳನ್ನು ಅತಿ ಹೆಚ್ಚಿನ ಮಟ್ಟದಲ್ಲಿ ಒದಗಿಸುತ್ತಿರುವ ಸಮಯದಲ್ಲೇ, ರೈತರ ಬೆಳೆಗಳಿಗೆ ಘೋಷಿಸುವ ಬೆಂಬಲ ಬೆಲೆ ಮತ್ತು ಖರೀದಿ ಬೆಲೆಗಳ ವಿಷಯದಲ್ಲಿ ಬಿಗಿ ನಿಲುವು ತೆಗೆದುಕೊಳ್ಳುವ ಕ್ರಮವೂ ಸಹ ಏಕಸ್ವಾಮ್ಯವಾದಿಗಳಿಗೆ ಲಾಭ ಮಾಡಿಕೊಡುವ ಕ್ರಮವೇ.

ಆದರೆ, ರೈತ ಕೃಷಿಯ ಮೇಲಿನ ಅತಿಕ್ರಮಣವು ಹರಿವಿನ ರೂಪವನ್ನು (flow form) ಮಾತ್ರ ತೆಗೆದುಕೊಳ್ಳುವುದಿಲ್ಲ, ಶೇಖರಣೆಯ ರೂಪವನ್ನೂ(stock form) ಪಡೆಯುತ್ತದೆ. ಅಂದರೆ, ರೈತರಿಂದ ಆದಾಯಗಳು ಏಕಸ್ವಾಮ್ಯ ಬಂಡವಾಳದತ್ತ ಮರುಹಂಚಿಕೆಯಾಗುತ್ತವೆ (ಹರಿವಿನ ರೂಪ) ಮತ್ತು ರೈತರ ಆಸ್ತಿ-ಪಾಸ್ತಿಗಳು (ಶೇಖರಣೆಯ ರೂಪ) ಏಕಸ್ವಾಮ್ಯ ಬಂಡವಾಳದ ವಶವಾಗುತ್ತವೆ. ವಾಸ್ತವವಾಗಿ ಈ ಎರಡು ರೀತಿಯ ಅತಿಕ್ರಮಣಗಳು ಪರಸ್ಪರ ಹೆಣೆದುಕೊಂಡಿರುತ್ತವೆ. ಅವುಗಳ ಒಟ್ಟು ಪರಿಣಾಮವೆಂದರೆ, ರೈತ ಕೃಷಿಯ ನಾಶ ಮತ್ತು ವಿನಾಶಕ್ಕೊಳಗಾದ ರೈತರು ಉದ್ಯೋಗಗಳನ್ನು ಅರಸಿ ನಗರಗಳಿಗೆ ಹೋಗುವ ವಲಸೆ.

ಬಂಡವಾಳಶಾಹಿಯ ವಿಕಾಸದೊಂದಿಗೆ ಮುನ್ನೆಲೆಗೆ ಬಂದಿರುವ ಎರಡನೆಯ ಬೆಳವಣಿಗೆ ಎಂದರೆ, ನವ-ಉದಾರವಾದದ ಒಂದು ಗುಣಲಕ್ಷಣವಾದ ಅನಿಬಂಧಿತ ವ್ಯಾಪಾರದ ಜೊತೆಯಲ್ಲೇ ಬರುವ ತಾಂತ್ರಿಕ ಆವಿಷ್ಕಾರಗಳನ್ನು ಪೈಪೋಟಿಯ ಮೇಲೆ ಬಳಸುತ್ತಿರುವುದರಿಂದಾಗಿ ಉದ್ಯೋಗ ಬೆಳವಣಿಗೆಯ ದರವು ನಿಧಾನಗೊಂಡಿದೆ. ನವ-ಉದಾರವಾದಿ ಆಳ್ವಿಕೆಯಲ್ಲಿ ಜಿಡಿಪಿಯು ವೇಗವಾಗಿ ಬೆಳೆಯುತ್ತಿದ್ದಾಗಲೂ ಸಹ, ಶ್ರಮ ಉತ್ಪಾದಕತೆಯ ದರವು ಎಷ್ಟು ಮಟ್ಟಿಗೆ ಹೆಚ್ಚಾಗುತ್ತದೆ ಎಂದರೆ, ಉದ್ಯೋಗ ಬೆಳವಣಿಗೆಯು ತೀರಾ ಅಂದರೆ ತೀರಾ ಮಂದಗತಿಗೆ ಇಳಿಯುತ್ತದೆ. ಜಿಡಿಪಿ ಬೆಳವಣಿಗೆಯು ವೇಗಗೊಳ್ಳದಿದ್ದ ಪಕ್ಷದಲ್ಲಿ, ಉದ್ಯೋಗ ಬೆಳವಣಿಗೆಯು ನೆಲ ಕಚ್ಚುತ್ತದೆ.
ಈ ವಿದ್ಯಮಾನವು ಏನನ್ನು ಸೂಚಿಸುತ್ತದೆ ಎಂದರೆ, ನಗರಗಳಿಗೆ ರೈತರ ಯಾತನಾಮಯ ವಲಸೆಯು ಹೆಚ್ಚಾದಂತೆ, ಕಾರ್ಮಿಕರ ಮೀಸಲು ಪಡೆಯ ಗಾತ್ರ ಮಾತ್ರ ಹೆಚ್ಚುತ್ತದೆ. ಈ ವಿದ್ಯಮಾನವು ಯೂನಿಯನ್‌ಗಳ ಮೂಲಕ ತಮ್ಮ ಸ್ಥಿತಿ-ಗತಿಗಳಲ್ಲಿ ಉನ್ನತಿ ಪಡೆಯಲೆತ್ನಿಸುವ ಕಾರ್ಮಿಕರ ಸಣ್ಣ ವಿಭಾಗದ ಚೌಕಾಶಿಯ ಸಾಮರ್ಥ್ಯವನ್ನೂ ಸಹ ದುರ್ಬಲಗೊಳಿಸುತ್ತದೆ. ಕಾರ್ಮಿಕರ ಈ ಮೀಸಲು ಪಡೆಯು ನಿರ್ದಿಷ್ಟ ವ್ಯಕ್ತಿಗಳ ನಿರುದ್ಯೋಗದ ರೂಪವನ್ನು ಪಡೆಯುವುದಿಲ್ಲ, ಬದಲಿಗೆ ನಿರುದ್ಯೋಗದ ಹಂಚಿಕೆಯ ರೂಪವನ್ನು ಪಡೆಯುತ್ತದೆ. ಹೇಗೆಂದರೆ, ಒಂದು ನಿರ್ದಿಷ್ಟ ಪ್ರಮಾಣದ ಕೆಲಸವನ್ನು ಹೆಚ್ಚು ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳ ನಡುವೆ ಹಂಚಲಾಗುತ್ತದೆ. ಹಾಗಾಗಿ, ರೈತ ಕೃಷಿಯನ್ನು  ಹಿಂಡುವುದರ ಫಲಿತಾಂಶವು ಸಮಸ್ತ ದುಡಿಯುವ  ಜನತೆಯ ಸ್ಥಿತಿ-ಗತಿಗಳನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ.

ದುಡಿಯುವ ಜನರಿಗೆ ಎದುರಾಗುವ ಈ ಪರಿಸ್ಥಿತಿಯು ಏಕಸ್ವಾಮ್ಯ ಬಂಡವಾಳಶಾಹಿಯ ಸಮಕಾಲೀನ ಹಂತವನ್ನು ಮೀರುವ ಹೋರಾಟದಲ್ಲಿ ರೈತ-ಕಾರ್ಮಿಕ ಮೈತ್ರಿಯ ಅಗತ್ಯವನ್ನು ಇನ್ನಷ್ಟು ಪುಷ್ಟೀಕರಿಸುತ್ತದೆ. ಬಹಳ ಮುಖ್ಯವಾಗಿ, ಏಕಸ್ವಾಮ್ಯ ಬಂಡವಾಳಶಾಹಿಯ ಈ ಹಂತವನ್ನು ಮೀರುವುದೆಂದರೆ, ಹಿಂದಿನ ಯಾವುದೊ ಕಾಲದ ಪೈಪೋಟಿ ಬಂಡವಾಳಶಾಹಿಯ ಯುಗಕ್ಕೆ ಮರಳುವುದು ಎಂದರ್ಥವಲ್ಲ. ಆದ್ದರಿಂದ, ಈ ರೈತ-ಕಾರ್ಮಿಕ ಮೈತ್ರಿಯು ಬಂಡವಾಳಶಾಹಿಯನ್ನು ಮೀರಿ ಹೋಗುವ  ಪ್ರಕ್ರಿಯೆಗೆ ಸಮಾನವೆಂದೇ ಹೇಳಬಹುದು.

ಈ ಅರ್ಥದಲ್ಲಿ, ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ರೈತರ ಹೋರಾಟವು ನಿರ್ಣಾಯಕ ಮಹತ್ವ ಉಳ್ಳದ್ದಾಗಿದೆ. ರೈತಾಪಿಯು ವಿರೋಧಿಸುತ್ತಿರುವ ಮೂರೂ ಕಾನೂನುಗಳೂ, ರೈತ ಕೃಷಿಯನ್ನು ಏಕಸ್ವಾಮ್ಯ ಬಂಡವಾಳದ ಅತಿಕ್ರಮಣಕ್ಕಾಗಿ ತೆರೆದಿಡಲು ಉದ್ದೇಶಿಸಿವೆ. ಈ ಮೂರೂ ಕೃಷಿ ಕಾನೂನುಗಳನ್ನು ಶಾಸನಬದ್ಧಗೊಳಿಸುವ ಮೊದಲು ಮೋದಿ ಸರ್ಕಾರವು ಕಾರ್ಮಿಕರ ಸಂಘಟನೆಗಳನ್ನು ದುರ್ಬಲಗೊಳಿಸುವ ಮತ್ತು ಕಾರ್ಮಿಕರ ಶೋಷಣೆಯ ಮಟ್ಟವನ್ನು ಹೆಚ್ಚಿಸಲು ಕಾರಣವಾಗುವ ಕಾರ್ಮಿಕ ವಿರೋಧಿ ಶಾಸನವನ್ನು ಜಾರಿಗೆ ತಂದಿತ್ತು. ಆದ್ದರಿಂದ, ಇಂದಿನ ಜಗತ್ತಿನ ರೈತ-ಕಾರ್ಮಿಕ ಮೈತ್ರಿಯು, ರೈತರ ಪ್ರಜಾಸತ್ತಾತ್ಮಕ ಆಕಾಂಕ್ಷೆಗಳ ಈಡೇರಿಕೆಗಾಗಿ ಕಾರ್ಮಿಕ ವರ್ಗದ ನಾಯಕತ್ವದಲ್ಲಿ ಭೂಮಾಲಕ ಪದ್ಧತಿಯ ವಿರುದ್ಧ ಹೋರಾಡಲು ಮಾತ್ರವಲ್ಲ, ಬಂಡವಾಳಶಾಹಿಯು ತಲುಪಿರುವ ಪ್ರಸಕ್ತ ಹಂತದಲ್ಲಿ ದುಡಿಯುವ ವರ್ಗ ಮತ್ತು ರೈತರ ಭವಿಷ್ಯಗಳು ಬಿಡಿಸಲಾಗದ ರೀತಿಯಲ್ಲಿ ಪರಸ್ಪರ ಹೊಸೆದು ಕೊಂಡಿರುವುದರಿಂದ ಮತ್ತು ರೈತರು ಮತ್ತು ಕಾರ್ಮಿಕರು ಇಬ್ಬರೂ ಅಂತರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಅದರ ಘಟಕವಾದ ದೇಶೀಯ ಏಕಸ್ವಾಮ್ಯ ಬಂಡವಾಳಶಾಹಿಗಳ ಆಕ್ರಮಣಕ್ಕೆ ಬಲಿಯಾಗಿರುವುದರಿಂದ ಅವುಗಳ ವಿರುದ್ಧ ಹೋರಾಡಲು ರೈತ-ಕಾರ್ಮಿಕ ಮೈತ್ರಿಯು ಅನಿವಾರ್ಯವಾಗಿದೆ.

ಇಂದಿನ ರೈತ ಹೋರಾಟವು ಒಂದು ಸಾಮಾನ್ಯ ಹೋರಾಟವಲ್ಲ. ಇದು “ಕೊಡುಕೊಳುವ”(ಪರಸ್ಪರ ರಿಯಾಯಿತಿಯ) ಮೂಲಕ ಪರಿಹರಿಸಿಕೊಳ್ಳಬಹುದಾದ ಇದೋ ಅಥವಾ ಅದೋ ಆರ್ಥಿಕ ಬೇಡಿಕೆಯ ಹೋರಾಟವಲ್ಲ. ಇದು, ಸದ್ಯದ ಸಂದಿಗ್ಧ ಪರಿಸ್ಥಿತಿಯ ಮೂಲವನ್ನೇ ಅಲುಗಾಡಿಸುವ ಹೋರಾಟವಾಗಿದೆ. ಇದು, ಮಾಡು ಇಲ್ಲವೇ ಮಡಿ ಹೋರಾಟ. ರೈತರ ಈ ಹೋರಾಟವು ಸರ್ಕಾರವನ್ನು ಇಕ್ಕಟ್ಟಿನಲ್ಲಿ ಇರಿಸುತ್ತದೆ, ಈ ಸರ್ಕಾರವು ಜನರೊಂದಿಗೆ ನಿಲ್ಲುತ್ತದೆಯೋ ಅಥವಾ ದೊಡ್ಡ ಅಂತಾರಾಷ್ಟ್ರೀಯ ಉದ್ಯಮಗಳೊಂದಿಗೆ ನಿಲ್ಲುತ್ತದೆಯೋ ಎಂಬುದನ್ನು  ಬಹಿರಂಗವಾಗಿ ಘೋಷಿಸಬೇಕಾಗಿ ಬಂದಿರುವ ಇಕ್ಕಟ್ಟಿನಲ್ಲಿ ಇರಿಸಿದೆ. ಇಲ್ಲಿಯ ವರೆಗೆ ಸರ್ಕಾರವು ಮಾಡಿದ ಹಾಗೆ, ಮುಂದೆಯೂ ಅಂತರಾಷ್ಟ್ರೀಯ ದೊಡ್ಡ ಉದ್ಯಮಗಳೊಂದಿಗೆ ಬಹಿರಂಗವಾಗಿ ನಿಂತರೆ, ಅದು ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಕೊಡುವ  ಬಹು ದೊಡ್ಡ ಹೊಡೆತವಾಗುತ್ತದೆ.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *