ಶ್ರೀನಗರ: ‘ನ್ಯಾಯದ ನಿರಾಕರಣೆಯು ಅಂತಿಮವಾಗಿ ಅರಾಜಕತೆಗೆ ನಾಂದಿಯಾಗಲಿದೆ. ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಹಾಗೂ ಸಂವಿಧಾನದ ಆಶೋತ್ತರಗಳನ್ನು ಎತ್ತಿಹಿಡಿಯುವ ಹೊಣೆಗಾರಿಕೆಯು ನ್ಯಾಯಾಂಗದ ಮೇಲಿದೆ. ಜನರ ಹಕ್ಕುಗಳನ್ನು ರಕ್ಷಿಸುವುದೇ ಸಾಂಪ್ರದಾಯಿಕ ನ್ಯಾಯಾಂಗ ವ್ಯವಸ್ಥೆಯ ಮುಂದಿರುವ ದೊಡ್ಡ ಸವಾಲಾಗಿದೆ. ಜೊತೆಗೆ ತ್ವರಿತವಾಗಿ ನ್ಯಾಯದಾನ ಮತ್ತು ಎಲ್ಲರಿಗೂ ಕೈಗೆಟುಕುವಂತೆ ನ್ಯಾಯಾಂಗ ವ್ಯವಸ್ಥೆ ರೂಪಿಸುವುದು ಅಗತ್ಯ’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಆರೋಗ್ಯಯುತ ಪ್ರಜಾಪ್ರಭುತ್ವ ಉಳಿಸಲು ಜನರಿಗೆ ಅವರ ಹಕ್ಕುಗಳನ್ನು ಗುರುತಿಸಿ, ರಕ್ಷಿಸಲಾಗುತ್ತಿದೆ ಎಂದು ವಿಶ್ವಾಸ ಮೂಡಿಸುವುದು ಅಗತ್ಯ’ ಎಂದ್ದಾರೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಹೈಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ಸಾಮಾನ್ಯವಾಗಿ ಮಾನಸಿಕ ಒತ್ತಡದಲ್ಲಿರುವ ಕಕ್ಷಿದಾರರಿಗೆ ಪೂರಕ ವಾತಾವರಣ ನಿರ್ಮಿಸಲು ನ್ಯಾಯಾಧೀಶರು ಮತ್ತು ವಕೀಲರಿಗೆ ಸಲಹೆ ಮಾಡಿದರು.
‘ಬಹಳ ವರ್ಷಗಳ ಬಳಿಕ ಇಲ್ಲಿಗೆ ಬಂದಿದ್ದೇನೆ; ಹೊಸ ಸೌಂದರ್ಯ, ಹೊಸ ಬಣ್ಣ ಗೋಚರಿಸುತ್ತಿದೆ’ ಎಂಬ ಕವಿ ಜವಾದ್ ಜೈದಿ ಅವರ ಕವನದ ಜನಪ್ರಿಯ ಸಾಲು ಉಲ್ಲೇಖಿಸಿದ ಎನ್ ವಿ ರಮಣ ತಮ್ಮ ಭಾಷಣವನ್ನು ಆರಂಭಿಸಿದರು.
‘ಭಾರತದಲ್ಲಿ ನ್ಯಾಯದಾನ ವ್ಯವಸ್ಥೆಯು ಸಂಕೀರ್ಣ ಮತ್ತು ದುಬಾರಿಯಾಗಿದೆ. ನ್ಯಾಯಾಲಯಗಳನ್ನು ಒಳಗೊಳ್ಳುವಿಕೆ ಮತ್ತು ಜನರಿಗೆ ಹತ್ತಿರವಾಗಿಸುವಲ್ಲಿ ದೇಶವು ಸಾಕಷ್ಟು ಹಿಂದೆ ಉಳಿದಿದೆ’ ಎಂದು ಅಭಿಪ್ರಾಯಪಟ್ಟರು.
ನ್ಯಾಯದಾನ ವಿಳಂಬ ಅರಾಜಕತೆಗೆ ನಾಂದಿಯಾಗಲಿದೆ. ಒಂದು ಹಂತದಲ್ಲಿ ನ್ಯಾಯಾಂಗ ವ್ಯವಸ್ಥೆಯೇ ಅಪ್ರಸ್ತುತವಾಗಿ, ಜನರು ನ್ಯಾಯಕ್ಕಾಗಿ ಪರ್ಯಾಯ ವ್ಯವಸ್ಥೆಯತ್ತ ಹೊರಳಬಹುದು. ಜನರ ಆತ್ಮಗೌರವ ಮತ್ತು ಹಕ್ಕುಗಳ ರಕ್ಷಣೆಯಾದಾಗ ಮಾತ್ರವೇ ಶಾಂತಿ ಸ್ಥಾಪನೆಯಾಗುವುದು ಸಾಧ್ಯ ಎಂದು ಪ್ರತಿಪಾದಿಸಿದರು.
ತಂತ್ರಜ್ಞಾನ ಎಂಬುದು ನ್ಯಾಯಾಂಗಕ್ಕೆ ಬಲಯುತವಾದ ಸಾಧನ. ಈಗ ವರ್ಚುಯಲ್ ರೂಪದಲ್ಲಿ ನಡೆಯುವ ವಿಚಾರಣೆಗಳು ಸಮಯ, ವೆಚ್ಚ ಮತ್ತು ಅಂತರವನ್ನು ಕುಗ್ಗಿಸುತ್ತಿವೆ. ಆದರೆ, ಡಿಜಿಟಲ್ ಸೌಲಭ್ಯ ದೇಶದಲ್ಲಿ ಇನ್ನು ಸರ್ವವ್ಯಾಪಿಯಾಗಿಲ್ಲ. ಡಿಜಿಟಲ್ ಸೌಲಭ್ಯಗಳು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಬೇಕಾಗಿರುವುದು ಅಗತ್ಯ ಎಂದೂ ಹೇಳಿದರು.