ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಕನ್ನಡರಿಗರ ಮನಸ್ಸಿಗೆ ಘಾಸಿಗೊಳಿಸದಿರಿ

  • ಪರಿಷ್ಕ್ರತ ಪಠ್ಯದಿಂದಾಗಿ ರಾಜ್ಯದ ಕೋಟ್ಯಾಂತರ ಜನರ ಮನಸ್ಸಿಗೆ ಘಾಸಿ
  • ನಾಡಿನ ಹಿರಿಯ ಕವಿಗಳೂ ಸಾಹಿತಿಗಳೂ ಪ್ರಗತಿಪರ ಚಿಂತಕರಿಗೆ ಅವಮಾನ
  • ಹಿಂದುಳಿದ ಜಾತಿ ಮತ್ತು ಧರ್ಮದ ಮಕ್ಕಳ ಭಾವನೆಗೆ ದಕ್ಕೆ

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು (ಜೂನ್‌ 05) ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಸಿದ್ಧರಾಮಯ್ಯ ಅವರು, ‘ವಿಕೃತ ಮನಸ್ಸಿನ ಕಿಡಿಗೇಡಿ ಅಧ್ಯಕ್ಷ ತಯಾರಿಸಿದ ಪರಿಷ್ಕೃತ ಪಠ್ಯದಿಂದ ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ಮಾತ್ರವಲ್ಲ, ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಮನಸ್ಸಿಗೆ ಘಾಸಿಯಾಗಿದೆ. ಕನ್ನಡಿಗರ ಸಹನೆಯನ್ನು ಪರೀಕ್ಷಿಸಲು ಹೋಗಬೇಡಿ. ಮೊದಲು ಪರಿಷ್ಕೃತ ಪಟ್ಟಿಯನ್ನು ಕಸದ ಬುಟ್ಟಿಗೆ ಎಸೆಯಿರಿ” ಎಂದಿದ್ದಾರೆ.

ಅಲ್ಲೆ, ಈ ದೇಶದ ಬಡವರಲ್ಲಿ ಬಹುಸಂಖ್ಯೆಯಲ್ಲಿರುವುದು ಹಿಂದೂ ಧರ್ಮದ ದಲಿತರು ಮತ್ತು ಹಿಂದುಳಿದ ಜಾತಿಗಳ  ಮಕ್ಕಳು. ಬುದ್ಧ, ಬಸವ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ, ನಾರಾಯಣ ಗುರು, ಕುವೆಂಪು ಅವರಿಗೆ ಆಗಿರುವ ಅವಮಾನದಿಂದ ಈ ಮಕ್ಕಳ ಭಾವನೆಗೂ ಧಕ್ಕೆಯಾಗಿದೆಯಲ್ವಾ?’ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

ʻಹಿಂದೂಗಳ ಭಾವನೆಗೆ ಧಕ್ಕೆಯಾಗಿದ್ದಕ್ಕೆ ಪಠ್ಯ ಪರಿಷ್ಕರಣೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೂಗಳು ಯಾರು? ಎನ್ನುವುದನ್ನು ಸನ್ಮಾನ್ಯ ಸಚಿವರು ಬಹಿರಂಗಪಡಿಸಿ, ಯಾವುದರಿಂದ ಯಾರ ಭಾವನೆಗೆ ಧಕ್ಕೆಯಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಸವಾಲು ಎಸೆದಿದ್ದಾರೆ.

‘ಪರಿಷ್ಕೃತ ಪಠ್ಯದಲ್ಲಿ ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ, ನಾರಾಯಣಗುರು, ಕುವೆಂಪು ಸೇರಿದಂತೆ ಹಲವು ಮಹನೀಯರ ವ್ಯಕ್ತಿತ್ವವನ್ನು ಕಡೆಗಣಿಸಲಾಗಿದೆ, ಇವರನ್ನು ಪರಿಷ್ಕೃತ ಸಮಿತಿಯ ಕಿಡಿಗೇಡಿ ಅಧ್ಯಕ್ಷ ತುಚ್ಛೀಕರಿಸಿದ್ದಾನೆ’ ಎಂದು ಪ್ರತಿಭಟಿಸುತ್ತಿರುವವರು  ಹಿಂದೂಗಳೇ ಅಲ್ವಾ.

‘ಪಠ್ಯ ಪರಿಷ್ಕರಣಾ ಸಮಿತಿಯಲ್ಲಿ ದಲಿತ ಮತ್ತು ಹಿಂದುಳಿದ ಜಾತಿಗಳ ವಿದ್ವಾಂಸರಿಗೆ ಪ್ರಾತಿನಿಧ್ಯವೇ ನೀಡಿಲ್ಲವಲ್ಲಾ? ಶಿಕ್ಷಣ ಸಚಿವರು ಕಾಳಜಿ ತೋರುತ್ತಿರುವ ಹಿಂದೂಗಳ ವ್ಯಾಖ್ಯಾನದಲ್ಲಿ ಈ ಸಮುದಾಯಗಳು ಸೇರಿಕೊಳ್ಳುವುದಿಲ್ಲವೇ? ಈ ಕಾರಣಕ್ಕಾಗಿ ಅವರಿಗೆ ಪ್ರಾತಿನಿಧ್ಯ ನೀಡಿಲ್ಲವೇ?’ ಎಂದು ಪ್ರಶ್ನಿಸಿದರು.

‘ಬಸವಣ್ಣ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯಜಿಸಿದ ಕಾರಣಕ್ಕೆ ಅವರನ್ನು ನಿರ್ಲಕ್ಷಿಸಲಾಯಿತೇ? ಅವಮಾನ ಮಾಡಲಾಯಿತೇ?  ಅಥವಾ ನಾರಾಯಣ ಗುರು, ಪೆರಿಯಾರ್, ಕುವೆಂಪು ಅವರು ಹಿಂದೂ ಧರ್ಮದ ದೋಷಗಳನ್ನು ಎತ್ತಿತೋರಿಸಿದ್ದಕ್ಕಾಗಿ ನಿರ್ಲಕ್ಷ್ಯ ಮಾಡಲಾಯಿತೇ?’ ಎಂದು ಸಿದ್ಧರಾಮಯ್ಯ ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *