ಪಠ್ಯಗಳಾಚೆ ಉಳಿದ ಮಹಾನ್ ಚೇತನಗಳ ಕಥನ

ಡಾ. ಎನ್.ಜಗದೀಶ್ ಕೊಪ್ಪ

ಇಂದಿನ ಪಠ್ಯ ಪುಸ್ತಕ ಸಮಿತಿಯ ಸದಸ್ಯರು ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ ಪ್ರಕಟಿಸಿರುವ ಕೃತಿಗಳನ್ನು ಗಮನಿಸಿದ್ದರೂ ಸಹ ಒಂದಿಷ್ಟು ಮಹನೀಯರ ಜೀವನವನ್ನು ಪಠ್ಯಕ್ಕೆ ಅಳವಡಿಸಿ ತಮ್ಮ ಮರ್ಯಾದೆ ಮತ್ತು ಘನತೆಯನ್ನು ಉಳಿಸಿಕೊಳ್ಳಬಹುದಿತ್ತು. 1915ದಶಕದಲ್ಲಿ ಕನ್ನಡ ರಂಗಭೂಮಿಗೆ ಹೊಸತನ್ನು ತರಲು ಹಗಲಿರುಳು ಶ್ರಮಿಸಿದವರಲ್ಲಿ ಮಹಮ್ಮದ್ ಪೀರ್ ಮುಖ್ಯರಾದವರು. ಮಹಮ್ಮದ್ ಪೀರ್ ಅವರ ಹೊಸತನದ ಕನಸಿಗೆ ನೀರೆರದು ಪೋಷಿಸಿದವರಲ್ಲಿ ಮಂಡ್ಯ ಜಿಲ್ಲೆಯ ಇಬ್ಬರು ಮಹನೀಯರು ಮುಖ್ಯರಾದವರು, ಒಬ್ಬರು ಎಂ.ಎಲ್.ಶ್ರೀಕಂಠೇಶಗೌಡ, ಮತ್ತೊಬ್ಬರು ಹೆಚ್.ಎಲ್,ಎನ್. ಸಿಂಹ. ಮೈಸೂರು ಸಂಸ್ಥಾನದ ಆಸ್ಥಾನ ಕಲಾವಿದರಾಗಿದ್ದ ಅಬ್ದುಲ್ ಕರೀಂಖಾನರು ಪ್ರತಿವರ್ಷ ದಸರಾ ಸಮಯದಲ್ಲಿ ಮೈಸೂರಿಗೆ ಬಂದು ಅರಮನೆಯ ಮುಂಭಾಗದ ಮೈದಾನದಲ್ಲಿ ತಮ್ಮ ಅದ್ಭುತ ಕಂಠಸಿರಿಯಿಂದ ಹಿಂದೂಸ್ತಾನಿ ಸಂಗೀತವನ್ನು ಜನಸಾಮಾನ್ಯರಿಗೆ ಉಣಬಡಿಸುತ್ತಿದ್ದರು. ಸಂತ ಶಿಶುನಾಳ ಷರೀಪರ ಬಗ್ಗೆ ಇಲ್ಲಿ ಹೆಚ್ಚು ವಿವರಿಸಬೇಕಾಗಿಲ್ಲ. ನೆಲದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಸಾಮಾಜಿಕ ಇತಿಹಾಸ ಮತ್ತು ಪರಂಪರೆ ಕುರಿತು ಗೊತ್ತಿರದ ಅವಿವೇಕಿಗಳು ಪಠ್ಯಪುಸ್ತಕ ಸಮಿತಿಯಲ್ಲಿ ಇದ್ದರೆ ಏನೆಲ್ಲಾ ದುರಂತ ಸಂಭವಿಸಬಹುದು ಎಂಬುದಕ್ಕೆ ಇಂದು ನಮ್ಮ ಮುಂದಿರುವ ಪಠ್ಯ ಪುಸ್ತಕಗಳು ಸಾಕ್ಷಿಯಾಗಿವೆ.

ಕರ್ನಾಟಕ ಸರ್ಕಾರದ ಪಠ್ಯ ಪುಸ್ತಕ ಸಮಿತಿಗೆ ನೇಮಕವಾದ ಆರ್.ಎಸ್.ಎಸ್. ಹಿನ್ನೆಲೆಯ ಮತೀಯವಾದಿಗಳು ಸೃಷ್ಟಿಸಿರುವ ಆಧುನಿಕ ಪಠ್ಯಗಳು ಇಂದು ನಾಡಿನೆಲ್ಲೆಡೆ ಚರ್ಚೆಯಾಗುತ್ತಾ ಅನೇಕ ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ. ವ್ಯಕ್ತಿಯೊಬ್ಬನ ವೈಯಕ್ತಿಕ ನಂಬಿಕೆ ಅಥವಾ ಸಿದ್ಧಾಂತಗಳು ಏನೇ ಇರಲಿ ಪಠ್ಯ ಪುಸ್ತಕಗಳನ್ನು ರಚಿಸುವಾಗ ಅವನು ತನ್ನ ಮೈ ಮತ್ತು ಮನಸ್ಸುಗಳಿಗೆ ಹಾಕಿಕೊಂಡಿರುವ ಖಾಕಿ ಚಡ್ಡಿಯನ್ನು ಕಳಚಿಟ್ಟು ಧರ್ಮಾತೀತನಾಗಿ ಮತ್ತು ಜಾತ್ಯಾತೀತನಾಗಿದ್ದುಕೊಂಡು ಮಕ್ಕಳು ಓದುವ ಪಠ್ಯಗಳನ್ನು ಸಿದ್ಧಪಡಿಸಬೇಕಿತ್ತು. ಆದರೆ ಈಗಿನ ಪಠ್ಯ ಪುಸ್ತಕ ಮಿತಿಯ ಅಯೋಗ್ಯ ಸದಸ್ಯರು ಪಠ್ಯಗಳಲ್ಲಿ ತುಂಬಿರುವ ವಿಷಯವನ್ನು ಗಮನಿಸಿದರೆ ಇವರು ಮಕ್ಕಳ ಎದೆಯಲ್ಲಿ ವಿಷಬೀಜವನ್ನು ಬಿತ್ತಲು ಹೊರಟಿದ್ದಾರೆ ಎಂದು ನಿಸ್ಸಂಕೋಚವಾಗಿ ಹೇಳಬಹುದು.

ನಾವು ಪಠ್ಯದಲ್ಲಿ ಅಳವಡಿಸಿರುವ ಕೆಲವು ಮಹನೀಯರ ಕಥನಗಳು ಈಗಾಗಲೇ ಐವತ್ತು ವರ್ಷದ ಹಿಂದೆ ರಾಷ್ರೋತ್ಥಾನ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ ಎಂದು ಕೆಲವು ಅಯೋಗ್ಯರು ಸರ್ಕಾರದ ಆಯಕಟ್ಟಿನ ಸ್ಥಳದಲ್ಲಿ ಕುಳಿತು ಹೇಳಿಕೊಳ್ಳುತ್ತಿದ್ದಾರೆ. ಹಿಂದಿನ ರಾಷ್ಟ್ರೋತ್ಥಾನ ಪರಿಷತ್ತಿನ ಮಹನೀಯರಿಗೆ ವಿಷಯುಕ್ತ ಮನಸ್ಸಾಗಲಿ ಅಥವಾ ಧಾರ್ಮಿಕ ದ್ವೇಷ ಬಿತ್ತುವ ಆಲೋಚನೆಯಾಗಲಿ ಇರಲಿಲ್ಲ. ಹಾಗಾಗಿ ಅವರ ಸಾಹಿತ್ಯ ಮಾಲಿಕೆಯಲ್ಲಿ ಕನ್ನಡ ರಂಗಭೂಮಿಯ ದಿಗ್ಗಜ ಮಹಮ್ಮದ್ ಫೀರ್, ತತ್ವಪದಕಾರ ಶಿಶುನಾಳ ಷರೀಪರು ಮತ್ತು ಹಿಂದೂಸ್ತಾನಿ ಸಂಗೀತದ ಮಹಾನ್ ಗುರು ಮತ್ತು ಗಾಯಕ ಅಬ್ದುಲ್ ಕರೀಂ ಖಾನ್ ಅಂತಹವರ ಕೃತಿಗಳು ಪ್ರಕಟವಾಗಲು ಸಾಧ್ಯವಾಯಿತು. ಈಗಿನ ಪಠ್ಯ ಪುಸ್ತಕ ಸಮಿತಿಗೆ ನಾವು ಕೇಳಬೇಕಾದ ಪ್ರಶ್ನೆಯೆಂದರೆ, ಟಿಪ್ಪು ಸುಲ್ತಾನನ ಧಾರ್ಮಿಕ ಕೊಡುಗೆಗಳನ್ನು ಕಿತ್ತು ಹಾಕಿ, ಕೇವಲ ಆತನ ಯುದ್ಧಗಳ ಕಥನವನ್ನು ಸೇರಿಸಿದರೆ ಅದು ಪಠ್ಯವಾಗಲು ಸಾಧ್ಯವೆ?

ಈ ನಾಡಿನ ಜ್ವಲಂತ ಸಮಸ್ಯೆಗಳಿಗೆ ಸದಾ ಎಚ್ಚರದ ಧ್ವನಿಯಾಗಿ ಪತ್ರಿಕೋದ್ಯಮ ಮತ್ತು ಸಾಹಿತ್ಯದಲ್ಲಿ ತನ್ನ ಪ್ರಖರ ವೈಚಾರಿಕ ಚಿಂತನೆಗಳಿಂದ ನನ್ನ ತಲೆಮಾರು ಸೇರಿದಂತೆ ಇಂದಿನ ಯುವ ತಲೆಮಾರಿಗೆ ಪ್ರೇರಣೆಯಾದ ಪಿ.ಲಂಕೇಶ್ ಅವರ ಕಥೆಯನ್ನು ಕಿತ್ತು ಹಾಕುವ ಈ ಮನಸ್ಸುಗಳಿಗೆ ಲಂಕೇಶ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಅವರಿಗಿಂತ ತಮ್ಮ ಪೆದ್ದು ಆಲೋಚನೆಗಳಿಂದ ಮೌಡ್ಯ ತುಂಬುವ ಬನ್ನಂಜೆ ಗೋವಿಂದಾಚಾರ್ಯ, ಶತವಾಧಾನಿ ಗಣೇಶ್ ಅವರ ಬರಹಗಳು ಮುಖ್ಯವಾಯಿತು. (ಇವರಿಬ್ಬರ ಭಾಷಣದ ತುಣುಕಗಳನ್ನು ಮಿತ್ರ ನಾಗೇಗೌಡ ಕೀಲಾರ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಸಕ್ತರು ಗಮನಿಸಬಹುದು) ಇವರು ಎಂತಹ ಅಪಾಯಕಾರಿಗಳು ಮತ್ತು ಲಜ್ಜೆಗೆಟ್ಟ ಜನ ಎಂಬುದಕ್ಕೆ ಹೆಗ್ಡೇವಾರ್ ಎಂಬ ಮಹಾಶಯನ ಭಾಷಣವನ್ನು ಪಠ್ಯ ಪುಸ್ತಕದಲ್ಲಿ ಸೇರಿಸಿದ್ದಾರೆ. ಆ ವ್ಯಕ್ತಿಯ ಮೂಲ ಭಾಷಣದಲ್ಲಿ ಇರುವ ಭಗವಾ ಧ್ವಜ ಎಂಬ ಶಬ್ದವನ್ನು ಧ್ವಜ ಎಂದು ತಿದ್ದಿದ್ದಾರೆ. ಆರ್.ಎಸ್.ಎಸ್. ಸಂಸ್ಥೆಯ ಸ್ಥಾಪಕ ಮತ್ತು ತಮ್ಮ ಮನೆದೇವರ ಭಾಷಣವನ್ನು ಹೀಗೆ ತಿದ್ದುವ ಕ್ರಿಯೆಗೆ ಕೈ ಹಾಕಿರುವ ಈ ಮಹಾಶಯರು ಇನ್ನುಳಿದ ವ್ಯಕ್ತಿಗಳ ಚಾರಿತ್ರ್ಯವನ್ನು ಹೇಗೆ ಕಟ್ಟಿಕೊಡಬಲ್ಲರು? ತಮ್ಮ ಬಲಪಂಥೀಯ ಅಜೆಂಡಾಗಳನ್ನು ತುಂಬಲು ಮುದ್ರಣವಾಗಿದ್ದ ಎರಡೂವರೆ ಕೋಟಿ ರೂಪಾಯಿಗಳ ಮೌಲ್ಯದ ಸುಮಾರು ಆರು ಲಕ್ಷ ಹಳೆಯ ಪಠ್ಯಗಳನ್ನು ಕಸದ ಬುಟ್ಟಿಗೆ ಹಾಕಿ, ಈಗ ನೂತನ ಕಸ ಮತ್ತು ವಿಷವನ್ನು ಸೃಷ್ಟಿ ಮಾಡಲು ಹೊರಟಿರುವ ಈ ಸರ್ಕಾರದ ಬಗ್ಗೆ ನಾಡಿನ ಮಹಾನ್ ಕವಿಗಳು, ಕಾದಂಬರಿಗಾರರು, ಕಥೆಗಾರರು ಎಂದು ಆರೋಪ ಹೊತ್ತಿರುವ ಬಲಪಂಥೀಯ ಚಿಂತಾಜನಕರು (ಇವರು ಚಿಂತಕರಲ್ಲ) ಮೌನಕ್ಕೆ ಶರಣಾಗಿದ್ದಾರೆ. ಅವರ ಮುಂದೆ ಇರುವ ಕನಸುಗಳೆಂದರೆ, ಪದ್ಮಶ್ರೀ, ರಾಜ್ಯೋತ್ಸವ, ಪಂಪ, ನೃಪತುಂಗ ಪ್ರಶಸ್ತಿಗಳು ಮತ್ತು ಅಕಾಡೆಮಿಗಳಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಒಂದು ಅಧಿಕಾರ.

ಇಂದಿನ ಪಠ್ಯ ಪುಸ್ತಕ ಸಮಿತಿಯ ಅಯೋಗ್ಯ ಸದಸ್ಯರು ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ ಪ್ರಕಟಿಸಿರುವ ಕೃತಿಗಳನ್ನು ಗಮನಿಸಿದ್ದರೂ ಸಹ ಒಂದಿಷ್ಟು ಮಹನೀಯರ ಜೀವನವನ್ನು ಪಠ್ಯಕ್ಕೆ ಅಳವಡಿಸಿ ತಮ್ಮ ಮರ್ಯಾದೆ ಮತ್ತು ಘನತೆಯನ್ನು ಉಳಿಸಿಕೊಳ್ಳಬಹುದಿತ್ತು.

1915 ರ ದಶಕದಲ್ಲಿ ಕನ್ನಡ ರಂಗಭೂಮಿಗೆ ಹೊಸತನ್ನು ತರಲು ಹಗಲಿರುಳು ಶ್ರಮಿಸಿದವರಲ್ಲಿ ಮಹಮ್ಮದ್ ಪೀರ್ ಮುಖ್ಯರಾದವರು. ಮೈಸೂರು ನಗರದಲ್ಲಿ ಜನಿಸಿ, ರಂಗಭೂಮಿ ಪ್ರವೇಶಿಸಿದ ಇವರು ಅಂದಿನ ನಾಟಕಗಳಲ್ಲಿ ಪ್ರದರ್ಶನದ ಬಹುಭಾಗ ಕೇವಲ ಹಾಡು ಮತ್ತು ಸಂಗೀತಗಳಿಂದ ತುಂಬಿ ಹೋಗಿರುವುದರಿಂದ ಬೇಸರಗೊಂಡಿದ್ದರು. ಮನರಂಜನೆಯ ಜೊತೆ ಜನತೆಗೆ ನಾವು ವಿಚಾರಗಳನ್ನು ಸಂಭಾಷಣೆಯ ಮೂಲಕ ನೀಡಬೇಕೆಂದು ಮಹಮ್ಮದ್ ಪೀರ್ ಕನಸಿದರು. ಅದರಂತೆ ಗೌತಮ ಬುದ್ಧ, ಸತ್ಯ ಹರಿಶ್ಚಂದ್ರ ಸೇರಿದಂತೆ ಅನೇಕ ನಾಟಕಗಳನ್ನು ಪುನರ್ ರಚಿಸಿ, ಹಾಡು ಸಂಗೀತಗಳಿಗಿಂತ ಸಂಭಾಷಣೆಗೆ ಹೆಚ್ಚು ಮಹತ್ವ ನೀಡಿದರು. ಸ್ವತಃ ಅವರು ಬುದ್ಧನಾಗಿ ಅಭಿನಯಿಸುತ್ತಿದ್ದ ವೈಖರಿ ಹಾಗೂ ಅವರ ಕಂಠದಿಂದ ಹೊರಡುತ್ತಿದ್ದ ಅಚ್ಚ ಕನ್ನಡ ಶಬ್ದಗಳಿಗೆ ರಂಗಭೂಮಿಯ ರಸಿಕರು ಮಾತ್ರವಲ್ಲದೆ, ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಪ್ರಿಯವಾಗಿತ್ತು. ನಾಲ್ವಡಿಯವರು ಮಹಮ್ಮದ್ ಪೀರ್ ಅವರ ರಂಗಭೂಮಿಗೆ ಎಲ್ಲಾ ವಿಧವಾದ ಆರ್ಥಿಕ ಸಹಾಯವನ್ನು ನೀಡಿದ್ದರು. ಮಹಮ್ಮದ್ ಪೀರ್ ಅವರ ಹೊಸತನದ ಕನಸಿಗೆ ನೀರೆರದು ಪೋಷಿಸಿದವರಲ್ಲಿ ಮಂಡ್ಯ ಜಿಲ್ಲೆಯ ಇಬ್ಬರು ಮಹನೀಯರು ಮುಖ್ಯರಾದವರು. ಒಬ್ಬರು ಎಂ.ಎಲ್.ಶ್ರೀಕಂಠೇಶಗೌಡ, ಮತ್ತೊಬ್ಬರು ಹೆಚ್.ಎಲ್,ಎನ್. ಸಿಂಹ.

1895 ರಿಂದ 1900 ರ ಅವಧಿಯಲ್ಲಿ ಷೇಕ್ಸ್ ಪಿಯರ್ ನ ನಾಟಕಗಳನ್ನು ಪ್ರಥಮವಾಗಿ ಕನ್ನಡಕ್ಕೆ ತಂದ ಶ್ರೀಕಂಠೇಶಗೌಡ ಇಂದಿಗೂ ಕನ್ನಡಿಗರ ಪಾಲಿಗೆ ಅನಾಮಿಕರಾಗಿ ಉಳಿದು ಹೋಗಿದ್ದಾರೆ. ಮದ್ದೂರು ತಾಲ್ಲೂಕಿನ ದೇಶಹಳ್ಳಿ ಗ್ರಾಮದ ಶ್ರೀಕಂಠೇಶಗೌಡರು ನಂಜನಗೂಡಿನ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಾ, ಷೇಕ್ಸ್ ಪಿಯರ್ ಐದು ನಾಟಕಗಳ ಅನುವಾದ ಸೇರಿದಂತೆ, ಕಥೆ ಹಾಗೂ ಪ್ರಬಂಧಗಳನ್ನು ರಚಿಸಿದ್ದಾರೆ. ಇವರು ಸಂಜೆಯ ವೇಳೆಗೆ ಮೈಸೂರಿಗೆ ಬಂದು ಮಹಮ್ಮದ್ ಪೀರ್ ಅವರ ಕನಸಿನ ನಾಟಕಗಳಿಗೆ ಸಾಹಿತ್ಯ ಮತ್ತು ಸಂಭಾಷಣೆ ಬರೆದುಕೊಡುತ್ತಿದ್ದರು. ಮಳವಳ್ಳಿ ತಾಲ್ಲೂಕಿನ ಹೆಚ್.ಎಲ್.ಎನ್. ಸಿಂಹ ಗುಬ್ಬಿ ನಾಟಕ ಮಂಡಲಿಯಲ್ಲಿದ್ದ ಪ್ರತಿಭಾವಂತ ಕಲಾವಿದರು. ಇವರನ್ನು ಗುಬ್ಬಿ ವೀರಣ್ಣನವರು ಬಾಂಬೆ ನಗರಕ್ಕೆ ಕಳುಹಿಸಿ ಚಲನ ಚಿತ್ರ ನಿರ್ಮಾಣದ ಬಗ್ಗೆ ತರಬೇತಿ ಕೊಡಿಸಿದ್ದರು. ನಂತರದ ದಿನಗಳಲ್ಲಿ ತಾವು ನಿರ್ದೇಶಿಸಿದ ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ರಾಜ್‌ಕುಮಾರ್ ಮತ್ತು ನರಸಿಂಹರಾಜು ಎಂಬ ಎರಡು ಅಮೂಲ್ಯ ರತ್ನಗಳನ್ನು ಕೊಡುಗೆಯಾಗಿ ನೀಡಿದರು. ಸಿಂಹರವರು ಮಹಮ್ಮದ್ ಪೀರ್ ಅವರ ಸಂಭಾಷಣೆಗಳು ಪ್ರಧಾನವಾಗಿರುವ ನಾಟಕಗಳಿಗೆ ಪ್ರೋತ್ಸಾಹ ನೀಡಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ನಾಟಕ ಪ್ರದರ್ಶನಕ್ಕೆ ಸಹಕರಿಸಿದರು.

 

ಇಂತಹ ಮಹನೀಯರಿಗೆ ಪಠ್ಯ ಪುಸ್ತಕಗಳಲ್ಲಿ ಸ್ಥಳವಿಲ್ಲ ಎನ್ನುವುದಾದರೆ, ಸಮಿತಿಯ ಸದಸ್ಯರ ಯೋಗ್ಯತೆಯನ್ನು ನಾವು ಪ್ರಶ್ನಿಸಬೇಕಾಗುತ್ತದೆ. ಸಂತ ಶಿಶುನಾಳ ಷರೀಪರ ಬಗ್ಗೆ ನಾನು ಇಲ್ಲಿ ಹೆಚ್ಚು ವಿವರಿಸಬೇಕಾಗಿಲ್ಲ. ಅವರ ಗುರು ಗೋವಿಂದಭಟ್ಟ ಮತ್ತು ಶಿಶುನಾಳರ ಬಾಂಧವ್ಯ ಮತ್ತು ಗುರುಶಿಷ್ಯರ ಸಂಬಂಧ ಇಂದಿನ ಅಸಹಿಷ್ಣುತೆಯ ಸಮಾಜಕ್ಕೆ ಮದ್ದಾಗಬಲ್ಲದು. ತಾನು ಬದುಕಿದ್ದ ವರ್ತಮಾನದ ಜಗತ್ತನ್ನು ವಿಮರ್ಶೆ ಮತ್ತು ನ್ಯಾಯದ ತಕ್ಕಡಿಯಲ್ಲಿ ತೂಗುವುದರ ಮೂಲಕ ಹಾಡಿದ ಶಿಶುನಾಳರ ಪದಗಳನ್ನು ಪಠ್ಯದಲ್ಲಿ ಅಳವಡಿಸಬಹುದಿತ್ತು.

ಕರ್ನಾಟಕದ ನೆಲದಲ್ಲಿ ಜನಿಸಿ ಹಿಂದೂಸ್ತಾನಿ ಸಂಗೀತದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಪಂಡಿತ್ ಭೀಮಸೇನ ಜೋಷಿ ಮತ್ತು ವಿದುಷಿ ಗಂಗೂಬಾಯಿ ಹಾನಗಲ್ ಈ ಇಬ್ಬರೂ ಉಸ್ತಾದ್ ಅಬ್ದುಲ್ ಕರೀಂ ಖಾನರ ಗಾಯನ ಪರಂಪರೆಯಲ್ಲಿ ಬೆಳೆದ ಮಹಾನ್ ಕಲಾವಿದರು. ನೆರೆಯ ಮಹಾರಾಷ್ಟ್ರದ ಮೀರಜ್ ಪಟ್ಟಣದಲ್ಲಿ ನೆಲೆ ನಿಂತಿದ್ದ ಅಬ್ದುಲ್ ಕರೀಂ ಖಾನರ ಗರಡಿಯಲ್ಲಿ ಪಳಗಿದ ಕುಂದಗೋಳದ ಸವಾಯ್ ಗಂಧರ್ವರ ಶಿಷ್ಯರಾಗಿ ಭೀಮಸೇನ ಜೋಷಿ ಮತ್ತು ಗಂಗೂಬಾಯಿ ಹಾನಗಲ್ ಬೆಳೆದವರು. ಮೈಸೂರು ಸಂಸ್ಥಾನದ ಆಸ್ಥಾನ ಕಲಾವಿದರಾಗಿದ್ದ ಅಬ್ದುಲ್ ಕರೀಂಖಾನರು ಪ್ರತಿವರ್ಷ ದಸರಾ ಸಮಯದಲ್ಲಿ ಮೈಸೂರಿಗೆ ಬಂದು ಅರಮನೆಯ ಮುಂಭಾಗದ ಮೈದಾನದಲ್ಲಿ ತಮ್ಮ ಅದ್ಭುತ ಕಂಠಸಿರಿಯಿಂದ ಹಿಂದೂಸ್ತಾನಿ ಸಂಗೀತವನ್ನು ಜನಸಾಮಾನ್ಯರಿಗೆ ಉಣಬಡಿಸುತ್ತಿದ್ದರು. ಕರ್ನಾಟಕ ಸಂಗೀತದ ರಾಗಗಳ ಬಗ್ಗೆ ಅಪಾರ ಗೌರವವಿದ್ದ ಕರಿಂ ಖಾನರ ಹಾಡುಗಾರಿಕೆಯಲ್ಲಿ ಬಂದಿಷ್ ಎಂದು ಕರೆಯಲಾಗುವ ಸಂಗೀತ ಕೃತಿಗಳಲ್ಲಿ ಕೃಷ್ಣ ಮತ್ತು ರಾಮನ ಸ್ಮರಣೆಯ ಕೀರ್ತನೆಗಳು ತುಂಬಿರುತ್ತಿದ್ದವು.

ಇಂತಹ ಮಹನೀಯರು ಈ ಕನ್ನಡದ ನೆಲಕ್ಕೆ ಕಟ್ಟಿಕೊಟ್ಟಿರುವ ಬಾತೃತ್ವದ ಸಂಸ್ಕೃತಿಯನ್ನು ನಾವು ಪಠ್ಯಗಳ ಮೂಲಕ ನಮ್ಮ ಮಕ್ಕಳಿಗೆ ತಲುಪಿಸುವುದು ನಮ್ಮ ನೈತಿಕ ಕರ್ತವ್ಯವಲ್ಲವೆ? ಈ ನೆಲದ ಸಾಂಸ್ಕೃತಿಕ. ಐತಿಹಾಸಿಕ ಮತ್ತು ಸಾಮಾಜಿಕ ಇತಿಹಾಸ ಮತ್ತು ಪರಂಪರೆ ಕುರಿತು ಗೊತ್ತಿರದ ಅವಿವೇಕಿಗಳು ಪಠ್ಯಪುಸ್ತಕ ಸಮಿತಿಯಲ್ಲಿ ಇದ್ದರೆ ಏನೆಲ್ಲಾ ದುರಂತ ಸಂಭವಿಸಬಹುದು ಎಂಬುದಕ್ಕೆ ಇಂದು ನಮ್ಮ ಮುಂದಿರುವ ಪಠ್ಯ ಪುಸ್ತಕಗಳು ಸಾಕ್ಷಿಯಾಗಿವೆ.

(ಚಿತ್ರಗಳು ಸೌಜನ್ಯ- ರಾಷ್ಟ್ರೋತ್ಥಾನ ನ ಸಾಹಿತ್ಯ ಪರಿಷತ್)

Donate Janashakthi Media

Leave a Reply

Your email address will not be published. Required fields are marked *