ಬೆಂಗಳೂರು: ಸಂವಿಧಾನ, ಪ್ರಜಾಸತ್ತಾತ್ಮಕ ಆಶಯಗಳಿಗೆ ಪೂರಕವಾಗಿ ಪಠ್ಯಪುಸ್ತಕ ರಚಿಸಲು ಸ್ವತಂತ್ರ ಆಯೋಗದ ರೀತಿ ರಾಷ್ಟ್ರೀಯ, ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಒತ್ತಾಯಿಸಿದರು.
ವಿಶ್ವಮಾನವ ಕ್ರಾಂತಿಕಾರಿ ಕುವೆಂಪು ಹೋರಾಟ ಸಮಿತಿ ಪಠ್ಯ ಪರಿಷ್ಕರಣೆ ಕುರಿತು ಬುಧವಾರ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಠ್ಯಪುಸ್ತಕ ರಚನಾ ಸಮಿತಿ ಯಾವ ಅಂಶಗಳ ಆಧಾರದ ಮೇಲೆ ಪಠ್ಯಗಳನ್ನು ಆಯ್ಕೆ ಮಾಡಬೇಕು ಎನ್ನುವ ಕುರಿತು ಸ್ಪಷ್ಟ ನಿಯಮಗಳನ್ನು ರೂಪಿಸಬೇಕು. ಸಂವಿಧಾನದ ಮೂಲತತ್ವ, ಸಾಮಾಜಿಕ ನ್ಯಾಯ, ಒಕ್ಕೂಟ ವ್ಯವಸ್ಥೆ, ಜನ ಕಲ್ಯಾಣ, ಬಹುತ್ವ, ಸಮಾನತೆಗೆ ಒತ್ತು ನೀಡುವ ವಿಷಯ ವಸ್ತುಗಳನ್ನು ಕಡ್ಡಾಯಗೊಳಿಸಬೇಕು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೇಶದ ಸಮಸ್ಯೆ, ಸವಾಲುಗಳನ್ನು ಎದುರಿಸುವ, ಸೂಕ್ತ ಪರಿಹಾರ ಕಂಡುಕೊಳ್ಳುವ, ಸಾಮಾಜಿಕ ಸಾಮರಸ್ಯ ಕಾಪಾಡುವ, ನೈತಿಕ ಪ್ರಜ್ಞೆ ಒಳ್ಳಗೊಂಡ ಮನೋಸ್ಥಿತಿ ಬೆಳೆಸಿಕೊಳ್ಳಲು ಪಠ್ಯಗಳು ಸಹಕಾರಿಯಾಗಬೇಕು. ಅದಕ್ಕಾಗಿ ಸಮಿತಿಯಲ್ಲಿ ಯಾರು ಇರಬೇಕು ಎನ್ನುವ ಮಾನದಂಡಗಳನ್ನೂ ಅಳವಡಿಸಬೇಕು ಎಂದು ಸಲಹೆ ನೀಡಿದರು.
ಅವಿವೇಕಿ ಶಿಕ್ಷಣ ಸಚಿವ : ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ಬಿ.ಸಿ.ನಾಗೇಶ್ ಒಬ್ಬ ಅವಿವೇಕಿ ಸಚಿವನಾಗಿದ್ದರಿಂದಲೇ ಇಷ್ಟು ಅವಾಂತರಗಳು ನಡೆದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರ ಯಾವುದೇ ರಾಜ್ಯದಲ್ಲಿ ಇರಲಿ, ಅಲ್ಲಿ ಗೃಹ ಮತ್ತು ಶಿಕ್ಷಣ ಇಲಾಖೆಗೆ ಕಟ್ಟರ್ ಆರೆಸ್ಸೆಸ್ ಕಾರ್ಯಕರ್ತರನ್ನು ಸಚಿವರನ್ನಾಗಿ ನೇಮಿಸಿ, ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಹುನ್ನಾರ ಜಾರಿಯಲ್ಲಿದೆ. ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ಬಿ.ಸಿ.ನಾಗೇಶ್ ಒಬ್ಬ ಅವಿವೇಕಿ ಸಚಿವನಾಗಿದ್ದರಿಂದಲೇ ಇಷ್ಟು ಅವಾಂತರಗಳು ನಡೆದಿವೆ. ಅವರು ಇಲಾಖೆಯ ಬೆಳವಣಿಗೆಗಳನ್ನು ಸೂಕ್ತ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಬರುವ ದಿನಗಳು ಇನ್ನೂ ಅಪಾಯದಿಂದ ಕೂಡಿರಲಿವೆ. ಹಿಂದೂ ಧಾರ್ಮಿಕ ಮೂಲಭೂತವಾದವನ್ನು ಮಕ್ಕಳಲ್ಲಿ ತುಂಬಲು ವ್ಯವಸ್ಥಿತವಾಗಿ ಸಿದ್ಧತೆ ನಡೆದಿದೆ. ಇದು ಕೇವಲ ಆರಂಭ ಅಷ್ಟೇ. ಶಿಕ್ಷಣ ಕೇಸರಿಕರಣಕ್ಕೆ ಆರೆಸ್ಸೆಸ್ ಕೈ ಹಾಕಿ 20 ವರ್ಷ ಆಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಖರ್ಚುವೆಚ್ಚ ಹೋಲಿಕೆಗೆ ಆಕ್ಷೇಪ : 2014-15ರಲ್ಲಿ ರಚಿತವಾದ ತಮ್ಮ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ 172 ಸದಸ್ಯರು ಒಳಗೊಂಡಿತ್ತು. 123 ಪಠ್ಯಗಳನ್ನು ಪರಿಷ್ಕರಿಸಿತ್ತು. ನೂರಾರು ಸಭೆಗಳ ಮೂಲಕ ಸಮಗ್ರ ಪರಿಷ್ಕರಣೆಗೆ ಎರಡೂವರೆ ವರ್ಷಗಳ ಅವಧಿ ತೆಗೆದುಕೊಂಡಿತ್ತು. ಹಾಗಾಗಿ, ಖರ್ಚು ವೆಚ್ಚಗಳನ್ನು ಮಾಡಲಾಗಿತ್ತು. ಈಗಿನ ಸಮಿತಿಯಂತೆ ನಿರ್ದಿಷ್ಟ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸದೇ, ಮೂರೂವರೆ ತಿಂಗಳಲ್ಲಿ ಬೇಕಾಬಿಟ್ಟಿ ಪಠ್ಯಗಳನ್ನು ಬದಲಿಸಿರಲಿಲ್ಲ. ಇದನ್ನೆಲ್ಲ ಗಮನಿಸದೇ ಕಟ್ಟುಕಥೆಯ ರೀತಿ ಸಮಿತಿಗಳ ಖರ್ಚು ವೆಚ್ಚದ ಹೋಲಿಕೆಯ ಮಿಥ್ಯದ ವರದಿಗಳನ್ನು ಹರಿಬಿಡಲಾಗುತ್ತಿದೆ ಎಂದು ಸಾಹಿತಿ, ಹಿಂದಿನ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ದೂರಿದರು.
‘ನಮ್ಮದು ಗಾಂಧಿ, ವಿವೇಕಾನಂದರ ಹಿಂದುತ್ವ, ಅವರದು ಗೋಡ್ಸೆ ಹಿಂದುತ್ವ. ಸೈದ್ಧಾಂತಿಕವಾಗಿ ತಮ್ಮನ್ನು ಎದುರಿಸಲು ಸಾಧ್ಯವಾಗದವರು ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ಅಸಭ್ಯ ಭಾಷೆ ಬಳಸುತ್ತಿದ್ದಾರೆ. ಬಹಿರಂಗ ಚರ್ಚೆಗೆ ಆಹ್ವಾನಿಸುತ್ತಿದ್ದಾರೆ. ಪಠ್ಯಪುಸ್ತಕ ರಚನೆ ಎನ್ನುವುದು ಶಿಕ್ಷಣ ತಜ್ಞರ ಜತೆಗೆ ನಡೆಯುವ ಚರ್ಚೆ. ಬೀದಿ ಚರ್ಚೆಯಲ್ಲ ಎನ್ನುವ ಸಾಮಾನ್ಯ ಜ್ಞಾನವೂ ಅವರಿಗಿಲ್ಲ. ನಮ್ಮದು ಬೇಂದ್ರೆ, ಕುವೆಂಪು, ಕನಕ, ಬಸವಣ್ಣ, ಕುಮಾರವ್ಯಾಸರ ಭಾಷೆ. ಕುವೆಂಪು ಅವರು ಹೇಳಿದಂತೆ ಭಾಷೆಗೇಡಿ, ದ್ವೇಷಗೇಡಿಯೂ ಆಗುತ್ತಾನೆ’ ಎಂದು ಕುಟುಕಿದರು.
ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಮಾತನಾಡಿ, ಪತ್ರಿಕೋದ್ಯಮದಲ್ಲಿ ಶೇ.80ರಷ್ಟು ಚಡ್ಡಿ ತೊಟ್ಟಿರುವವರು ಪತ್ರಕರ್ತರ ಸೋಗಿನಲ್ಲಿದ್ದಾರೆ. ಸತ್ಯ ಬರೆಯುವ ತಾಕತ್ತು ಇಲ್ಲದೇ ಅಪಪ್ರಚಾರ ಮಾಡಲಾಗುತ್ತಿದ್ದಾರೆ. ಮುಕುಂದಜೀ, ಸಂತೋಷ್ ಜೀ, ಪ್ರಲ್ಹಾದ್ ಜೋಶಿಜೀ ಹಾಗೂ ದತ್ತಾತ್ರೇಯ ಹೊಸಬಾಳೆಜೀಗಳು ನಿರ್ದೇಶಿಸಿದಂತೆ ಬಿಜೆಪಿ ಸರಕಾರ ನಡೆಯುತ್ತಿದೆಯೇ? ಖಾರವಾಗಿಪ್ರಶ್ನಿಸಿದರು.
ಕವಯತ್ರಿ, ಕೆ. ಆರ್. ಸೌಮ್ಯ ಮಾತನಾಡಿ, ಪಠ್ಯಪುಸ್ತಕಗಳಲ್ಲಿ ಸಾಮಾಜಿಕ ಆಶಯ, ಸಾಮರಸ್ಯಕ್ಕೆ ಧಕ್ಕೆಯಾಗಿದ್ದರೂ ಹಲವು ಮಠಾಧೀಶರು, ಶರಣರು, ದೊಡ್ಡ ಸಾಹಿತಿಗಳು, ಹೋರಾಟಗಾರರು ತಣ್ಣಗೆ ಕುಳಿತಿದ್ದಾರೆ. ಸರ್ಕಾರದ ಋಣದ ಭಾರ ಅವರನ್ನು ತಡೆದಿರಬಹುದು. ಚಕ್ರತೀರ್ಥನ ಪಠ್ಯ ಪುಸ್ತಕದಲ್ಲಿ ಮಹಿಳೆಯರನ್ನು ಅವಮಾನಿಸಲಾಗಿದೆ. ಇಂತಹ ಪಠ್ಯಗಳು ಅಗತ್ಯ ಇಲ್ಲ. ಸಾಮರಸ್ಯ, ಸಹಬಾಳ್ವೆ ಸಾರುವ ಬರಗೂರುರವರ ಪಠ್ಯಪುಸ್ತಕಗಳನ್ನು ಮುಂದುವರಿಸಬೇಕು ಎಂದರು.
ಸಾಹಿತಿ ರಾಜಪ್ಪ ದಳವಾಯಿ, ಎಲ್.ಎನ್. ಮುಕುಂದ್ ರಾಜ್ ವಿಷಯ ಮಂಡಿಸಿದರು. ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸಮಿತಿಯ ಅಧ್ಯಕ್ಷ ಜಿ.ಬಿ.ಪಾಟೀಲ, ಮಂಜುನಾಥ ಅದ್ದೆ, ಗಂಗಾಧರ ಮೂರ್ತಿ ಉಪಸ್ಥಿತರಿದ್ದರು.