ಪಿತೃಪ್ರಧಾನತೆ-ಆಸ್ತಿ ಹಕ್ಕುಗಳು ಮತ್ತು ಗೋವಾದ ಏಕರೂಪ ನಾಗರಿಕ ಸಂಹಿತೆ

ಮೂಲ : ರಿತು ದಿವಾನ್‌

ಅನುವಾದ : ನಾ ದಿವಾಕರ

ತಾತ್ವಿಕವಾಗಿ ಏಕರೂಪದ ನಾಗರಿಕ ಸಂಹಿತೆ (ಏನಾಸಂ) ಎಂದರೆ ಆಸ್ತಿ ಹಕ್ಕುಗಳು ಸೇರಿದಂತೆ ಎಲ್ಲಾ ಹಕ್ಕುಗಳಿಗೆ ಸಂಬಂಧಿಸಿದಂತೆ ಸಮಾನತೆಯನ್ನು ಕಲ್ಪಿಸುವ ಒಂದು ಶಾಸನ. ಭಾರತದ ಇತರ ವೈಯಕ್ತಿಕ ಕಾನೂನುಗಳಿಗೆ ಹೋಲಿಸಿದರೆ ಗೋವಾದ ಏಕರೂಪ ನಾಗರಿಕ ಸಂಹಿತೆ ಲಿಂಗತ್ವವನ್ನು ಲೆಕ್ಕಿಸದೆ ಹೆಚ್ಚು ಸಮಾನ ಆಸ್ತಿ ಹಕ್ಕುಗಳನ್ನು ಒದಗಿಸುತ್ತದೆಯಾದರೂ, ಇದು ಸಾಮಾನ್ಯವಾಗಿ ಆಚರಣೆಗಿಂತ ಹೆಚ್ಚಾಗಿ ತಾತ್ವಿಕವಾಗಿ ಮಾತ್ರ ಜಾರಿಯಲ್ಲಿದೆ.  ಆದರೆ ಈ ಸೀಮಿತ ಹಕ್ಕುಗಳು ಸಹ ಕಾಲಾನಂತರದಲ್ಲಿ ರಾಜ್ಯದ ಶತಮಾನಗಳಷ್ಟು ಹಳೆಯ ಕಾನೂನು ಸಂಪ್ರದಾಯವನ್ನು ಲೆಕ್ಕಿಸದೆ ಗೋವಾಕ್ಕೆ ಆಮದು ಮಾಡಿಕೊಳ್ಳುವ ಕಾನೂನುಗಳ ನಿರಂತರ ಹರಿವಿನಿಂದ ನಾಶವಾಗಿವೆ.

ಸಂಪನ್ಮೂಲಗಳ ಮೇಲಿನ ನಿಯಂತ್ರಣವು ಲಿಂಗ ಸಮಾನತೆಗಾಗಿ ಜಾಗತಿಕ ಹೋರಾಟದ ಕೇಂದ್ರಬಿಂದುವಾಗಿದೆ. ಉತ್ಪಾದನಾ ಸಾಧನಗಳ ಮೇಲಿನ ಹೋರಾಟವು ಮೂಲಭೂತವಾಗಿ ಜೀವನೋಪಾಯದ ಮುಖ್ಯ ಸಾಧನವಾದ ಭೂಮಿಯ ಲಭ್ಯತೆ, ಒಡೆತನ ಮತ್ತು ಭೂಮಿಯ ಮೇಲಿನ ನಿಯಂತ್ರಣದ ಮೇಲೆ ಕೇಂದ್ರೀಕರಿಸುತ್ತದೆ. ಪರಿಣಾಮವಾಗಿ ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ಲಿಂಗ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಮುಖ್ಯವಾಗಿ ಭೂಮಿ ಮತ್ತು ಆಸ್ತಿ ಹಕ್ಕುಗಳ ವಿಷಯಗಳ ಮೇಲೆ ವಿಷಯ ಕೇಂದ್ರೀಕೃತವಾಗಿರುತ್ತದೆ. ಈ ಮೂಲ ಸಮಸ್ಯೆಯನ್ನು ಗುರುತಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1979 ರಲ್ಲಿ ಅಂಗೀಕರಿಸಿದ “ ಮಹಿಳೆಯರ ವಿರುದ್ಧದ ಎಲ್ಲಾ ರೀತಿಯ ತಾರತಮ್ಯವನ್ನು ನಿರ್ಮೂಲನೆ ಮಾಡುವ ಒಡಂಬಡಿಕೆ ” (ಸಿಇಡಿಎಡಬ್ಲ್ಯೂ), ತಾರತಮ್ಯವಿಲ್ಲದೆ ಆಸ್ತಿಯನ್ನು ಹೊಂದುವ ಮತ್ತು ನಿರ್ವಹಿಸುವ ಹಕ್ಕನ್ನು ಅನುಚ್ಛೇದ 15 ರ ಮೂಲಕ ಮಹಿಳೆಯರಿಗೆ ನೀಡಿದೆ,  ಜೊತೆಗೆ ಅನುಚ್ಛೇದ 14 (2) (ಜಿ)ರ ಮೂಲಕ ಭೂಮಿ ಮತ್ತು ಕೃಷಿ ಸುಧಾರಣೆಯಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಅನುಚ್ಛೇದ 16 ಇಬ್ಬರೂ ಸಂಗಾತಿಗಳಿಗೆ ಆಸ್ತಿಯ ಮಾಲೀಕತ್ವ, ಸ್ವಾಧೀನ, ನಿರ್ವಹಣೆ, ಆಡಳಿತ, ಬಳಕೆ  ಮತ್ತು ವರ್ಗಾವಣೆಯಲ್ಲಿ ಸಮಾನ ಹಕ್ಕುಗಳನ್ನು ನೀಡುತ್ತದೆ. ಭೂ ಹಕ್ಕುಗಳು ಸೇರಿದಂತೆ ಲಿಂಗ ಸಮಾನತೆಗೆ ಬದ್ಧತೆಯನ್ನು ನೀಡುವ ಇದನ್ನೂ ಸೇರಿದಂತೆ ಇತರ ಇತರ ಒಡಂಬಡಿಕೆಗಳಿಗೆ ಭಾರತ ಸಹಿ ಹಾಕಿದೆ.

ಎಂಟನೆಯ ಪಂಚವಾರ್ಷಿಕ ಯೋಜನೆಯು ಲಿಂಗ ಸಮಾನತೆಗಾಗಿ ನೀತಿಯನ್ನು ಪ್ರೋತ್ಸಾಹಿಸಿತ್ತು. ವಿಶೇಷವಾಗಿ ಗಂಡ ಮತ್ತು ಹೆಂಡತಿ ಹಾಗೂ ವಿವಾಹಿತ ಮತ್ತು ಅವಿವಾಹಿತ ಒಂಟಿ ಮಹಿಳೆಯರ ಜಂಟಿ ಹೆಸರುಗಳಲ್ಲಿ ಭೂ ಪಟ್ಟಾಗಳನ್ನು ವಿತರಿಸಲು ರಾಜ್ಯಗಳಿಗೆ ಹೊರಡಿಸಿದ ಮಾರ್ಗಸೂಚಿಯ ರೂಪದಲ್ಲಿ ಲಿಂಗ ಸಮಾನತೆಯನ್ನು ಪ್ರತಿಪಾದಿಸಿತ್ತು. ಒಂಬತ್ತನೇ ಪಂಚವಾರ್ಷಿಕ ಯೋಜನೆಯು ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ವೈಯುಕ್ತಿಕ ಮತ್ತು ಸಮೂಹ ಭೂ ಹಕ್ಕುಗಳನ್ನು ವಿತರಿಸುವುದನ್ನು ಪರಿಚಯಿಸಿತು. ಹತ್ತನೇ ಪಂಚವಾರ್ಷಿಕ ಯೋಜನೆಯು ಭೂ ಮಿತಿ ಕಾಯ್ದೆಯಡಿ ಹೆಚ್ಚುವರಿ ಎಂದು ಘೋಷಿಸಲಾದ ಭೂಮಿಯನ್ನು ಮಹಿಳೆಯರಿಗೆ ವಿತರಿಸಲು ಶಿಫಾರಸು ಮಾಡಿತು. ಹನ್ನೆರಡನೇ ಪಂಚವಾರ್ಷಿಕ ಯೋಜನೆಯು ಸರ್ಕಾರದ ನೇರ ವರ್ಗಾವಣೆ, ಮಾರುಕಟ್ಟೆಯಿಂದ ಖರೀದಿ ಅಥವಾ ಗುತ್ತಿಗೆ ಮತ್ತು ಪಿತ್ರಾರ್ಜಿತ ಆಸ್ತಿ ಎಂಬ ಮೂರು ಮೂಲಗಳಿಂದ ಮಹಿಳೆಯರ ಭೂ ಲಭ್ಯತೆಯ ಅವಕಾಶವನ್ನು ಹೆಚ್ಚಿಸಲು ಒತ್ತು ನೀಡಿತು.  ಈ ನೀತಿ ಉಪಕ್ರಮಗಳ ಪರಿಣಾಮವಾಗಿ ಮತ್ತು ಬೆಳೆಯುತ್ತಿರುವ ಮಹಿಳಾ ಚಳುವಳಿಗಳ ಪ್ರಭಾವದೊಂದಿಗೆ, ದೇಶದಲ್ಲಿ ಮಹಿಳಾ ಭೂಮಾಲೀಕರ ಪಾಲು 2000-01 ರಲ್ಲಿ ಶೇ 10.9 ಇದ್ದುದು  2005-06 ರಲ್ಲಿ ಶೇ 11.7ಕ್ಕೆ ಮತ್ತು 2015-16 ರ ಕೃಷಿ ಜನಗಣತಿಯ ಪ್ರಕಾರ 2010-11 ರಲ್ಲಿ ಶೇ 12.78ಕ್ಕೆ ಏರಿತು. ಒಂದು ದಶಕದ ಅಲ್ಪಾವಧಿಯಲ್ಲಿ ಸುಮಾರು ಶೇ 2ರಷ್ಟು ಅಂಕಗಳ ಈ ಹೆಚ್ಚಳವು ನಗಣ್ಯ ಎನ್ನಲಾಗುವುದಿಲ್ಲ. ಇದು ಜಾರಿಯಾದ ನೀತಿಗಳು ಮತ್ತು  ಹೋರಾಟಗಳ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. ಆದಾಗ್ಯೂ, ಭಾರತದಲ್ಲಿ ಭೂ ಮಾಲೀಕತ್ವದ ನವೀಕರಿಸಿದ ಇತ್ತೀಚಿನವರೆಗಿನ ದತ್ತಾಂಶ ಲಭ್ಯವಿಲ್ಲ ಎನ್ನುವುದನ್ನು ಗಮನಿಸಲೇಬೇಕಿದೆ. ದುರದೃಷ್ಟವಶಾತ್ ಯೋಜನಾ ಆಯೋಗವನ್ನು ವಿಸರ್ಜಿಸಿದ ನಂತರ ಭೂಮಿಯ ಹಕ್ಕಿನ ಮೇಲೆ ಲಿಂಗ ಸಮಾನತೆಯ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಯಾವುದೇ ನೀತಿ ಉಪಕ್ರಮಗಳನ್ನು ಕೈಗೊಂಡಿಲ್ಲ.

ಮಹಿಳಾ ಭೂ ಹಕ್ಕುಗಳು ಮತ್ತು ಪೋರ್ಚುಗೀಸ್ ನಾಗರಿಕ ಸಂಹಿತೆ

ಭೂ ಸಂಪನ್ಮೂಲಗಳ ಮೇಲಿನ ಮಾಲೀಕತ್ವ ಮತ್ತು ನಿಯಂತ್ರಣದಲ್ಲಿ ವ್ಯಕ್ತವಾದ ಲಿಂಗ ಸಮಾನತೆಯು ಒಂದು ಸಂಕೀರ್ಣ ವಿಷಯವಾಗಿದೆ. ಭಾರತದಲ್ಲಿ ಆರ್ಥಿಕ ಮತ್ತು ಆರ್ಥಿಕೇತರ ಅಂಶಗಳು ಮತ್ತು ಲಿಂಗಾಧಾರಿತ ಸಂಪನ್ಮೂಲ ನಿಯಂತ್ರಣ ಮತ್ತು ಮಾಲೀಕತ್ವದ ಮೇಲಿನ ಶಕ್ತಿಗಳಿಗೆ ಸಂಬಂಧಿಸಿದ ಐತಿಹಾಸಿಕ ಮತ್ತು ಪ್ರಾದೇಶಿಕ ನಿರ್ದಿಷ್ಟತೆಗಳ ಅತ್ಯಂತ ಸಂಕೀರ್ಣ ಅಂಶಗಳನ್ನು ಗೋವಾ ರಾಜ್ಯದ ಸ್ಥಿತಿಗತಿಗಳು ಪ್ರಸ್ತುತಪಡಿಸುತ್ತವೆ. ಭಾರತೀಯ ಸಂವಿಧಾನದ 44 ನೇ ವಿಧಿಯ ಅನುಸಾರ ನಿರ್ದೇಶಕ ತತ್ವದಲ್ಲಿ ಪ್ರತಿಪಾದಿಸಿರುವಂತೆ ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಪಡೆಯಲು ಪ್ರಯತ್ನಿಸಲು ರಾಜ್ಯ ಸರ್ಕಾರಗಳು  ಕ್ರಮ ಕೈಗೊಳ್ಳಬಹುದು ಎಂಬ ನಿಯಮವನ್ನು ಅನುಸರಿಸಿರುವ ಎಕೈಕ ರಾಜ್ಯ ಗೋವಾ ಆಗಿದೆ.

ಪೋರ್ಚುಗೀಸ್ ಸಿವಿಲ್ ಕೋಡ್ ಎಂದು ಅಧಿಕೃತವಾಗಿ ಕರೆಯಲ್ಪಡುವ ಒಂದು ಸಾಮಾನ್ಯ ನಾಗರಿಕ ಸಂಹಿತೆಯನ್ನು 1867 ರಲ್ಲಿ ಗೋವಾದಲ್ಲಿ ಸ್ಥಾಪಿಸಲಾಯಿತು ಮತ್ತು ಇಂದಿಗೂ ಅಸ್ತಿತ್ವದಲ್ಲಿದೆ ಮತ್ತು ಭೂಮಿ ಮತ್ತು ಆಸ್ತಿ ಹಕ್ಕುಗಳಲ್ಲಿ ನ್ಯಾಯಿಕ ಸಮಾನತೆ ಸೇರಿದಂತೆ ರಾಜ್ಯದ ಜೀವನದ ಎಲ್ಲಾ ಅಂಶಗಳಿಗೆ ಅನ್ವಯಿಸುತ್ತದೆ.  ಸಂಹಿತೆಯ ಹೊರತಾಗಿ, ಗೋವಾದಲ್ಲಿ ಮಹಿಳೆಯರಿಗೆ ಭೂ ಹಕ್ಕುಗಳನ್ನು ವ್ಯಾಪಕ ಶ್ರೇಣಿಯ ಕಾನೂನುಗಳು ಮತ್ತು ನಿಬಂಧನೆಗಳ ಮೂಲಕ ನಿಯಂತ್ರಿಸಲಾಗುತ್ತದೆ. ಈ ಚರ್ಚೆಗೆ ಸಂಬಂಧಿಸಿದವುಗಳೆಂದರೆ:

  • ವೈವಾಹಿಕ ಆಸ್ತಿ ಹಕ್ಕುಗಳ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಮತ್ತು ಪೋರ್ಚುಗೀಸ್ ನಾಗರಿಕ ಸಂಹಿತೆಯನ್ನು ಆಧರಿಸಿದ ಮತ್ತು ನಿರ್ಧರಿಸುವ ಕುಟುಂಬ ಕಾನೂನುಗಳು. ಇದು ಸಾಮಾನ್ಯ ಹಿಂದೂಗಳ ಬಳಕೆಗಳು ಮತ್ತು ಪದ್ಧತಿಗಳ ಸಂಹಿತೆಯನ್ನು ಸಹ ಒಳಗೊಂಡಿದೆ.
  • ಕೋಡ್ ಆಫ್ ಕಮ್ಯುನಿಡೇಸ್ ಎಂಬುದು ಗ್ರಾಮ ಸಮುದಾಯ ಕಾನೂನಾಗಿದ್ದು, ಇದು ಭೂಮಿ ಮತ್ತು ಸಂಪನ್ಮೂಲಗಳ ಸಾಮಾನ್ಯ ನಿರ್ವಹಣೆಯನ್ನು ಖಚಿತಪಡಿಸುತ್ತದೆ.
  • 1975 ರ ಗೋವಾ ಮುಂಡ್ಕರ್ (ಹೊರಹಾಕುವಿಕೆಯಿಂದ ರಕ್ಷಣೆ) ಕಾಯ್ದೆಯು ಭಟ್ಕರ್ (ಭೂಮಾಲೀಕರ) ಒಪ್ಪಿಗೆಯೊಂದಿಗೆ ಮುಂಡ್ಕರ್‌ರ್ಗಳ (ಕುಟುಂಬಕ್ಕೆ ಯಾವುದೇ ಸೇವೆಗಳನ್ನು ಸಲ್ಲಿಸುವ ಬಾಧ್ಯತೆಯೊಂದಿಗೆ ಅಥವಾ ಇಲ್ಲದೆ ವಾಸಿಸುವ ಮನೆಯಲ್ಲಿ ಕಾನೂನುಬದ್ಧವಾಗಿ ವಾಸಿಸುವವರು) ಹಕ್ಕುಗಳನ್ನು ನಿಯಂತ್ರಿಸುತ್ತದೆ.

 ಗೋವಾ ಏಕರೂಪ ನಾಗರಿಕ ಸಂಹಿತೆ

ಪೋರ್ಚುಗೀಸ್ ಆಳ್ವಿಕೆಯಲ್ಲಿ ಗೋವಾ ಏಕರೂಪ ನಾಗರಿಕ ಸಂಹಿತೆ ಎಂಬ ಉಪನಾಮವನ್ನು ಬಳಸಲಾಗಿಲ್ಲ, ಬದಲಿಗೆ ಪೋರ್ಚುಗೀಸ್ ಸಿವಿಲ್ ಕೋಡ್, ಪೋರ್ಚುಗೀಸ್ ಸಿವಿಲ್ ಪ್ರೊಸೀಜರ್ ಕೋಡ್, ಪೋರ್ಚುಗೀಸ್ ಸಿವಿಲ್ ರಿಜಿಸ್ಟ್ರೇಷನ್ ಕೋಡ್, ಪೋರ್ಚುಗೀಸ್ ಕಮರ್ಷಿಯಲ್ ಕೋಡ್, ಪೋರ್ಚುಗೀಸ್ ಕ್ರಿಮಿನಲ್ ಕೋಡ್ ಮತ್ತು ಕೋಡಿಗೊ ಸಿವಿಲ್ ಪೋರ್ಚುಗೀಸ್‌ ಮುಂತಾದ ಪರಸ್ಪರ ಬದಲಾಯಿಸಬಹುದಾದ ಸಂಹಿತೆಗಳನ್ನು ಅಳವಡಿಸಲಾಗಿದೆ.

1867ರ ಸಂಹಿತೆಯನ್ನು ಹಲವಾರು ಬಾರಿ ತಿದ್ದುಪಡಿ ಮಾಡಲಾಗಿದ್ದರೂ, 1940ರ ಕಾಂಕಾರ್ಡಾಟ್ (ಪೋರ್ಚುಗಲ್ ಮತ್ತು ಹೋಲಿ ಸೀ ನಡುವಿನ ಒಪ್ಪಂದ) ನೊಂದಿಗೆ ತಿದ್ದುಪಡಿಗೊಳಗಾದ  1936ರ ಆವೃತ್ತಿಯು ಗೋವಾದ ಕುಟುಂಬ ಕಾನೂನುಗಳ  ಅಡಿಪಾಯವಾಗಿದೆ. 2016ರಲ್ಲಿ ಗೋವಾ ಉತ್ತರಾಧಿಕಾರ, ವಿಶೇಷ ನೋಟರಿಗಳು ಮತ್ತು ದಾಸ್ತಾನು ಪ್ರಕ್ರಿಯೆ ಕಾಯ್ದೆ 2012 ಜಾರಿಗೆ ತರಲಾಯಿತು. ಇದನ್ನು 1867೭ರ ಸಂಹಿತೆಯಿಂದ ಬೇರ್ಪಡಿಸಲಾದ ಕಾರಣ ಹಾಗೂ ಕಾನೂನಾತ್ಮಕವಾಗಿ ಸ್ವೀಕಾರಾರ್ಹವಲ್ಲದ ಕಾರಣ ಟೀಕಿಸಲಾಗುತ್ತದೆ.

ಗೋವಾದ ಕುಟುಂಬ ಕಾನೂನುಗಳಲ್ಲಿ ಸಾಮಾನ್ಯ ಹಿಂದೂಗಳ ಬಳಕೆ ಮತ್ತು ಪದ್ಧತಿಗಳ ಸಂಹಿತೆಯನ್ನು ಸೇರಿಸಲಾಗಿದೆ. ಪ್ರಾಥಮಿಕವಾಗಿ ಹಿಂದೂಗಳಿಗೆ ಅನ್ವಯವಾಗಿದ್ದರೂ, ಗೋವಾದ ಇತರ ಕ್ಯಾಥೊಲಿಕ್ ಅಲ್ಲದ ನಿವಾಸಿಗಳಿಗೆ ಸೀಮಿತ ಬಹುಪತ್ನಿತ್ವ ನಿಬಂಧನೆಗಳನ್ನು ಅನ್ವಯಿಸುವ ಅವಕಾಶಗಳಿವೆ. ‘ಏಕರೂಪ ನಾಗರಿಕ ಸಂಹಿತೆಯೊಳಗೆ ದ್ವಿಪತ್ನಿತ್ವ ಮತ್ತು ಬಹುಪತ್ನಿತ್ವದ ಆಚರಣೆಗಳಿಗೆ ಕಾನೂನು ನಿಬಂಧನೆಗಳಿವೆ ಎಂಬುದು ಆಘಾತಕಾರಿಯಾಗಿದೆ. ಮೊದಲ ಹೆಂಡತಿಗೆ 25 ವರ್ಷ ತುಂಬುವ ಹೊತ್ತಿಗೆ ಯಾವುದೇ ಮಗು ಜನಿಸದಿದ್ದರೆ, ಮೊದಲ ಹೆಂಡತಿಗೆ 30 ವರ್ಷ ತುಂಬಿದಾಗ ಯಾವುದೇ ಗಂಡು ಮಗು ಜನಿಸದಿದ್ದರೆ ಮತ್ತು ಗರ್ಭಧಾರಣೆಯ ನಡುವೆ ಹತ್ತು ವರ್ಷಗಳ ಅಂತರವಿದ್ದರೆ ಹಿಂದೂ ಪುರುಷನಿಗೆ ವಿಚ್ಛೇದನ ನೀಡದೆ ಎರಡನೇ ಬಾರಿಗೆ ಮದುವೆಯಾಗಲು ಅವಕಾಶವಿದೆ. ಇದಲ್ಲದೆ, ಸಾಮಾನ್ಯ ಹಿಂದೂಗಳ ಸಂಹಿತೆಯಡಿಯಲ್ಲಿ, ಪುರುಷ ಸಂತತಿ ಇಲ್ಲದಿದ್ದಾಗ ಯಾವುದೇ ಜಾತಿಯ ಹಿಂದೂಗಳಿಗೆ ಏಕರೂಪವಾಗಿ ದತ್ತು ತೆಗೆದುಕೊಳ್ಳಲು ಅನುಮತಿಸಲಾಗಿದೆ. ಕಾನೂನುಬದ್ಧ ಪುರುಷ ಸಂತಾನ ಹೊಂದದೆ ಇರುವ ಅನ್ಯಧರ್ಮೀಯ ಹಿಂದೂಗಳು ಪುರುಷರನ್ನು ಮಾತ್ರ ದತ್ತು ತೆಗೆದುಕೊಳ್ಳಲು ಅನುಮತಿಸುವ ನಿಬಂಧನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯು ಈಗ ಗೋವಾದ ಮುಂಬೈ ಹೈಕೋರ್ಟ್‌ ಬಾಕಿ ಉಳಿದಿದೆ.

 ವಿವಾಹ-ವೈವಾಹಿಕ ಆಸ್ತಿ ಹಕ್ಕುಗಳ ವರ್ಗೀಕರಣ

ಪೋರ್ಚುಗೀಸ್ ಯೂನಿಫಾರ್ಮ್ ಕೋಡ್ ಮದುವೆಯನ್ನು ಎರಡು ವಿಧಗಳಾಗಿ ವರ್ಗೀಕರಿಸುತ್ತದೆ: ಕ್ಯಾನೊನಿಕಲ್ ಪದ್ಧತಿಯು ಈ ಪ್ರಕಾರವನ್ನು ಆಯ್ಕೆ ಮಾಡಲು ಬಯಸುವ ಕ್ಯಾಥೊಲಿಕರಿಗೆ ಅನ್ವಯಿಸುತ್ತದೆ. ಕ್ಯಾನೊನಿಕಲ್ ಪ್ರಕಾರವನ್ನು ಆಯ್ಕೆ ಮಾಡಲು ಬಯಸದ ಕ್ಯಾಥೊಲಿಕರಿಗೆ ಮತ್ತು ಕ್ಯಾಥೊಲಿಕೇತರರಿಗೆ ಕ್ಯಾನೊನಿಕಲ್ ಅಲ್ಲದ ಪದ್ಧತಿ ಅನ್ವಯಿಸುತ್ತದೆ.  ಕ್ಯಾಥೋಲಿಕ್ ಚರ್ಚ್ನ  ಪಿತೃಪ್ರಭುತ್ವ ನ್ಯಾಯಮಂಡಳಿಯ ಮುಂದೆ ಕ್ಯಾನೊನಿಕಲ್ ಮದುವೆಗಳನ್ನು ರದ್ದುಗೊಳಿಸಬಹುದು. 1996ರವರೆಗೆ ಕ್ಯಾಥೊಲಿಕರ ನಡುವಿನ ವಿವಾಹವನ್ನು ಕೊನೆಗೊಳಿಸಲು ಇದು ಏಕೈಕ ಮಾರ್ಗವಾಗಿತ್ತು. ತದನಂತರದಲ್ಲಿ ಮತ್ತೊಬ್ಬ ಮಹಿಳೆಯನ್ನು ಕಾನೂನುಬದ್ಧವಾಗಿ ಮದುವೆಯಾಗುವ ಸಲುವಾಗಿ ವಿವಾಹವನ್ನು ವಿಸರ್ಜಿಸಲು ಇಚ್ಚಿಸಿದರೆ ಚರ್ಚ್‌ನಿಂದ  ಸಮ್ಮತಿ ಪಡೆದ ನಂತರವೂ ನ್ಯಾಯಾಲಯದಿಂದ ರದ್ದುಗೊಳಿಸಬೇಕು ಎಂದು ಕ್ಯಾಥೊಲಿಕ್‌ ಚರ್ಚ್‌ ಅಭಿಪ್ರಾಯಪಟ್ಟಿತು.

ಉಚ್ಚ ನ್ಯಾಯಾಲಯದ ದೃಢೀಕರಣದ ಮೇರೆಗೆ ತಾವು ಹೊರಡಿಸಿದ ವಿವಾಹವನ್ನು ರದ್ದುಗೊಳಿಸುವ ಆದೇಶವು ಸಂಗಾತಿಗಳು ಒಗ್ಗೂಡುವಿಕೆಯ ನಿರ್ಧಾರಕ್ಕೆ ಬಂದಾಗ ಮಾತ್ರ ನಾಗರಿಕ ಪರಿಣಾಮಗಳನ್ನು ಬೀರುತ್ತದೆ ಮತ್ತು ಆಸ್ತಿಗಳ ಪ್ರತ್ಯೇಕತೆಯ ಬಗ್ಗೆ ನ್ಯಾಯಾಲಯಗಳು ನಿರ್ಧರಿಸಬೇಕು ಎಂದು ಧರ್ಮಪ್ರಚಾರಕ ಅಧಿಕಾರಿಗಳು ಹೇಳುತ್ತಾರೆ. ಆದಾಗ್ಯೂ, ಆಸ್ತಿಗಳ ಪ್ರತ್ಯೇಕತೆಯ ಕಾನೂನಿನ ದೃಷ್ಟಿಯಿಂದ ಅಥವಾ ದಾಸ್ತಾನು ಪ್ರಕ್ರಿಯೆಗಳ ದೃಷ್ಟಿಯಿಂದ ಆಸ್ತಿಗಳ ಪ್ರತ್ಯೇಕತೆಯ ಬಗ್ಗೆ ನ್ಯಾಯಾಲಯಗಳು ಚರ್ಚಿಸಿದಾಗ, ಪಿತೃಪ್ರಧಾನ ನ್ಯಾಯಮಂಡಳಿಯ ಹೈಕೋರ್ಟ್ ಅನುಮೋದಿಸಿದ ಆದೇಶವನ್ನು ಪರಿಗಣಿಸಲಾಗುತ್ತದೆ. 1867 ರ ಸಂಹಿತೆಯಲ್ಲಿ ಆಸ್ತಿಗಳ ಉತ್ತರಾಧಿಕಾರ ಮತ್ತು ಪ್ರತ್ಯೇಕತೆಗೆ ಸಂಬಂಧಿಸಿದ ಹಕ್ಕುಗಳು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತವೆ ಎಂದು ಹೇಳಲಾಗುತ್ತದೆ.

ಹೆಣ್ಣುಮಕ್ಕಳು ಮತ್ತು ಪುತ್ರರು ಔಪಚಾರಿಕವಾಗಿ ಪೋಷಕರ ಆಸ್ತಿಗಳಿಗೆ ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ. ಉಯಿಲಿನ ಅನುಪಸ್ಥಿತಿಯಲ್ಲಿ ಮದುವೆಯ ನಂತರ ಆಸ್ತಿಯನ್ನು ಹಿಡಿದಿಡುವ ಪೂರ್ವನಿಯೋಜಿತ ಪದ್ಧತಿಯು ಆಸ್ತಿಗಳ ಸಾಮರಸ್ಯದ ನಿಯಮವಾಗಿರುತ್ತದೆ. ಅಂದರೆ ಮದುವೆಯ ನಂತರ ಇದಕ್ಕೆ ವಿರುದ್ಧವಾಗಿ ಒಂದು ಆಯ್ಕೆಯನ್ನು ಮಾಡದ ಹೊರತು ಭೂಮಿ ಸೇರಿದಂತೆ ಎಲ್ಲಾ ಸ್ವತ್ತುಗಳನ್ನು ಆನುವಂಶಿಕವಾಗಿ (ಮದುವೆಗೆ ಮೊದಲು ಅಥವಾ ನಂತರ ಸ್ವಾಧೀನಪಡಿಸಿಕೊಂಡಿದ್ದರೂ ಸಹ) ದಂಪತಿಗಳು ಸಮಾನವಾಗಿ ಹೊಂದಿರುತ್ತಾರೆ. ಪೋಷಕರು ತಮ್ಮ ಆಸ್ತಿಯ ಅರ್ಧದಷ್ಟು ಭಾಗವನ್ನು ಮಾತ್ರ ವಿಲ್ ಮೂಲಕ ಪರಭಾರೆ ಮಾಡಲು ಸಾಧ್ಯವಾಗುತ್ತದೆ, ಅಂದರೆ ಪೋಷಕರು ತಮ್ಮ ಸಂಪೂರ್ಣ ಆಸ್ತಿಯನ್ನು ವಿಲ್ ಮೂಲಕ ಮಗನಿಗೆ ವರ್ಗಾಯಿಸಲು ಸಾಧ್ಯವಿಲ್ಲ.

ಆದಾಗ್ಯೂ ವಿವಾಹವನ್ನು ರದ್ದುಗೊಳಿಸಿದ ವ್ಯಕ್ತಿಗಳ ಹಕ್ಕುಗಳು ವಿಚ್ಛೇದನ ಅಥವಾ  ಸಾವಿನಿಂದ ವಿವಾಹವನ್ನು ವಿಸರ್ಜಿಸಿದ ಅಥವಾ ವ್ಯಕ್ತಿಗಳು ಮತ್ತು ಆಸ್ತಿಗಳನ್ನು ಬೇರ್ಪಡಿಸುವ ಆದೇಶದಿಂದ ಬೇರ್ಪಡಿಸಲಾದ ವ್ಯಕ್ತಿಗಳ ಹಕ್ಕುಗಳಿಗಿಂತ ಭಿನ್ನವಾಗಿವೆ. ವಿಚ್ಛೇದನದ ಸಂದರ್ಭದಲ್ಲಿ ಆಸ್ತಿಗಳನ್ನು ಸಮಾನ ಪಾಲುಗಳಾಗಿ ವಿಂಗಡಿಸಲಾಗುತ್ತದೆ. ಪ್ರತ್ಯೇಕತೆಯ ಸಂದರ್ಭದಲ್ಲಿ ವ್ಯಕ್ತಿಗಳು ಮತ್ತು ಆಸ್ತಿಗಳ ಪ್ರತ್ಯೇಕತೆಯನ್ನು ಬಯಸಿದರೆ ಮಾತ್ರ ಸ್ವತ್ತುಗಳನ್ನು ಸಮಾನವಾಗಿ ವಿಂಗಡಿಸಲಾಗುತ್ತದೆ. ಆದರೆ ಈ ವಿಚಾರದಲ್ಲೂ ಯಾವುದೇ ಸ್ಪಷ್ಟತೆ ಕಂಡುಬರುವುದಿಲ್ಲ. ಉದಾಹರಣೆಗೆ ರದ್ದತಿ ಎಂದರೆ ವಿವಾಹ ಎಂದಿಗೂ ಸಂಭವಿಸಿರಲಿಲ್ಲ ಎಂದರ್ಥ. ಅಂದರೆ ವೈವಾಹಿಕ ಆಸ್ತಿ ಹಕ್ಕುಗಳ ಪರಿಕಲ್ಪನೆ ಇಲ್ಲ ಎಂದೇ ಭಾವಿಸಬೇಕಾಗುತ್ತದೆ. ತಪ್ಪು ಮಾಡದ ವ್ಯಕ್ತಿಯು ರದ್ದಾದ ಮದುವೆಯಿಂದ ಪ್ರಯೋಜನಗಳನ್ನು ಪಡೆಯಲು ಕಾನೂನು ಅವಕಾಶ ನೀಡುತ್ತದೆ.

ಗೋವಾದ ಕುಟುಂಬ ಕಾನೂನುಗಳ ಅಡಿಯಲ್ಲಿ ಮದುವೆಯೇ ನಡೆಯದಿರುವುದನ್ನು ವಿವಾಹ ರದ್ದತಿಯ ಆಧಾರವಾಗಿ ಪರಿಗಣಿಸಲಾಗದಿದ್ದರೂ   ಪಿತೃಪ್ರಧಾನ ನ್ಯಾಯಮಂಡಳಿಯು ನಾಗರಿಕ ಕಾನೂನನ್ನು ತಪ್ಪಿಸುವ ಮೂಲಕ ವಿವಾಹವನ್ನು ರದ್ದುಗೊಳಿಸಲು ಅನುಮತಿ ನೀಡುತ್ತದೆ. ಈ ತಪ್ಪುಗಳನ್ನು ಆಧರಿಸಿಯೇ  ನ್ಯಾಯಮಂಡಳಿಯಲ್ಲಿ ಆಸ್ತಿಗಳ ಹಂಚಿಕೆಯನ್ನು ಎತ್ತಿಹಿಡಿಯಲ್ಪಡುತ್ತದೆ. ತಾರ್ಕಿಕವಾಗಿ ನೋಡಿದಾಗ ಆಸ್ತಿಯ ಮೇಲಿನ ನಿಯಂತ್ರಣವು ಗಂಡನಿಗೆ ಅಥವಾ ಹೆಂಡತಿಗೆ ಸೇರಿದ್ದಾಗಿರದೆ ವೈವಾಹಿಕ ಸಂಬಂಧಕ್ಕೆ ಸೇರಿರುತ್ತದೆ. 1867ರ ಸಂಹಿತೆಯ ಅನ್ವಯ ಲಿಂಗ-ಸಮಾನ ಆನುವಂಶಿಕತೆ ಮತ್ತು ವೈವಾಹಿಕ ಆಸ್ತಿಯ ಮಾಲೀಕತ್ವದ ಹೊರತಾಗಿಯೂ ನಿರ್ವಹಣೆ ಮತ್ತು ಆಡಳಿತದ ಹಕ್ಕುಗಳನ್ನು ಪುರುಷ ಸಂಗಾತಿಗೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಕಿವುಡರು ಮತ್ತು ಮೂಕರಾಗಿರುವಂತಹ ಅಂಗವೈಕಲ್ಯ ಹಾಗೂ ಪುರುಷ ಸಂಗಾತಿಯು ಅಂತರರಾಷ್ಟ್ರೀಯ ತಾಣಗಳಿಗೆ ವಲಸೆ ಹೋಗುವುದು ಮುಂತಾದ ಕಾರಣಗಳು ಅಡ್ಡಿಯಾಗಬಹುದು.

ಸಂಹಿತೆಯ ಪ್ರಕಾರ, ಪತಿಯು ಆಸ್ತಿಯನ್ನು ಪರಭಾರೆ ಮಾಡಬಹುದು ಮತ್ತು ಹೆಂಡತಿಯ ನಂತರದ ಒಪ್ಪಿಗೆಯನ್ನು ಪಡೆಯಬಹುದು, ಆದರೆ ಹೆಂಡತಿ ತನ್ನ ಗಂಡನ ಅಧಿಕಾರವನ್ನು ಹೊಂದಿದ್ದರೆ ಮಾತ್ರ ಆಸ್ತಿಯನ್ನು ಪರಭಾರೆ ಮಾಡಬಹುದು. ವರದಕ್ಷಿಣೆಯ ಬದಲಾಗಿ ಪೋಷಕರ ಆಸ್ತಿಯ ಮೇಲಿನ ತಮ್ಮ ಹಕ್ಕುಗಳನ್ನು ಬಿಟ್ಟುಕೊಡುವಂತೆ ತಮ್ಮ ಸಹೋದರಿಯರನ್ನು ಒತ್ತಾಯಿಸಲು ಸಹೋದರರು ಮಗುವಿನ ಪಿತ್ರಾರ್ಜಿತ ಹಕ್ಕುಗಳನ್ನು ತ್ಯಜಿಸುವ ನಿಬಂಧನೆಯನ್ನು ಹೆಚ್ಚಾಗಿ ಬಳಸುತ್ತಾರೆ. ಗೋವಾದ ಬಹುಪಾಲು ಮಹಿಳೆಯರು ಔಪಚಾರಿಕವಾಗಿ ತಮ್ಮ ಪಾಲನ್ನು ಬಿಟ್ಟುಕೊಡಲು ಒಪ್ಪುತ್ತಾರೆ.

ಪೋರ್ಚುಗೀಸ್ ಏಕರೂಪ ಸಂಹಿತೆಯಡಿ ಖಾತರಿಪಡಿಸಿದ ಮಹಿಳೆಯರ ಭೂಮಿ ಮತ್ತು ಆಸ್ತಿ ಹಕ್ಕುಗಳನ್ನು ಗಣನೆಗೆ ತೆಗೆದುಕೊಳ್ಳದ ಅನೇಕ ಕಾನೂನುಗಳಿವೆ. 1969 ರ ಗೋವಾ ಭೂ ಕಂದಾಯ ಸಂಹಿತೆಯನ್ನು ಕುಟುಂಬ ಕಾನೂನುಗಳಿಂದ ಸಂಪೂರ್ಣವಾಗಿ ಬೇರ್ಪಡಿಸಲಾಗಿದೆ. 1970ರ ದಶಕದ ಉತ್ತರಾರ್ಧದಲ್ಲಿ ಮತ್ತು 1980ರ ದಶಕದ ಆರಂಭದಲ್ಲಿ ನಡೆಸಲಾದ ಹಕ್ಕುಗಳ ಸಮೀಕ್ಷೆ ಮತ್ತು ದಾಖಲೆಗಳು ಮತ್ತು ‘ಭೂ ರೂಪಾಂತರ ವ್ಯವಸ್ಥೆ’ಯಲ್ಲಿ ಮಾಲೀಕರ ಹೆಸರುಗಳನ್ನು ಕೈಬಿಡಲಾಗಿದೆ ಅಥವಾ ತಪ್ಪಾಗಿ ನೋಂದಾಯಿಸಲಾಗಿದೆ.

ಇದನ್ನೂ ಓದಿ:ಬೆಲೆ ಏರಿಕೆಗೆ ಕಾರಣಗಳೇನು? ಪರಿಹಾರ ಇಲ್ಲವೆ?

ಕ್ಯಾಥೊಲಿಕ್ ಮಹಿಳೆಯರು ಮದುವೆಯ ನಂತರ ಸ್ವಯಂಚಾಲಿತವಾಗಿ ಹೆಸರುಗಳನ್ನು ಬದಲಾಯಿಸುವುದಿಲ್ಲ. ಹಾಗಾಗಿಯೇ ಅವರ ಸಂಗಾತಿಗಳು ಅಥವಾ ಮಗನಿಲ್ಲದ ಪೋಷಕರು ಸಾವನ್ನಪ್ಪಿದರೆ ಅವರನ್ನು ಭೂ ದಾಖಲೆಗಳಲ್ಲಿ ನೋಂದಾಯಿಸಲಾಗುತ್ತದೆ. ಸಮೀಕ್ಷೆ ಮತ್ತು ಭೂ ರೂಪಾಂತರ ವ್ಯವಸ್ಥೆಯು ಅವರನ್ನು ಅವರ ಮೊದಲ ಹೆಸರು ಮತ್ತು ಅವರ ಪತಿಯ ಉಪನಾಮದ ಅಡಿಯಲ್ಲಿ ನೋಂದಾಯಿಸಲು ಅವಕಾಶ ನೀಡಿದ್ದರಿಂದ ಹಲವು ಕಾನೂನು ತೊಡಕುಗಳನ್ನು ಸೃಷ್ಟಿಸಿತು. ಭೂಮಾಲೀಕರ ಆಸ್ತಿಯಲ್ಲಿ ನಿರ್ಮಿಸಲಾದ ಮುಂಡ್ಕರ್‌ಗಳ ವಸತಿ ಮನೆಗಳನ್ನು ಸಮೀಕ್ಷೆಯು ಹೊರಗಿಟ್ಟಿದ್ದು ಇದರಿಂದಾಗಿ ಆಸ್ತಿಯಲ್ಲಿ ಸಮಾನತೆಯ ಸಮಸ್ಯೆಯನ್ನು ಜಟಿಲವಾಗಿಸುತ್ತದೆ. ವಿಶೇಷವಾಗಿ ಅಂಚಿನಲ್ಲಿರುವ ವರ್ಗಗಳ ಮಹಿಳೆಯರಿಗೆ ಸಮಸ್ಯೆ ಉಂಟುಮಾಡುತ್ತದೆ.

ಗೋವಾ ಮುಂಡ್ಕರ್ (ಹೊರಹಾಕುವಿಕೆಯಿಂದ ರಕ್ಷಣೆ ಕಾಯ್ದೆ) 1975 ರ ಪ್ರಕಾರ, ಮುಂಡ್ಕರ್ ಕುಟುಂಬದ ಆನುವಂಶಿಕ ಸದಸ್ಯರನ್ನು ಗುರುತಿಸುವಾಗ ಅವರ ಸಂಗಾತಿ, ಮಗ, ಅವಿವಾಹಿತ ಮಗಳನ್ನು ಒಳಗೊಳ್ಳುವುದಲ್ಲದೆ ತಂದೆ, ತಾಯಿ, ಮೊಮ್ಮಗ, ವಿಧವೆ ಮಗಳು, ವಿಧವೆ ಮೊಮ್ಮಗಳು, ಜೀವನಾಂಶಕ್ಕಾಗಿ ಮುಂಡ್ಕರ್ ಮೇಲೆ ಮಾತ್ರ ಅವಲಂಬಿತರಾಗಿದ್ದವರನ್ನು ಪರಿಗಣಿಸುತ್ತದೆ. ಮದುವೆಯ ನಂತರ ಪಿತೃಪ್ರಧಾನತೆಯ ಯಾಂತ್ರಿಕ ಅನ್ವಯಿಸುವಿಕೆಯ ಪರಿಣಾಮ  ಈ ನಿಬಂಧನೆಯು ಕುಟುಂಬ ಕಾನೂನುಗಳ ಅಡಿಯಲ್ಲಿ ವಾರಸುದಾರರಾಗಿ ಅರ್ಹತೆ ಪಡೆದ ಸದಸ್ಯರನ್ನು ಹೊರಗಿಡುತ್ತದೆ. ಕುಟುಂಬ ಕಾನೂನುಗಳ ಜೊತೆಗೆ ಅಸ್ತಿತ್ವದಲ್ಲಿರುವ ಶತಮಾನಗಳಷ್ಟು ಹಳೆಯದಾದ ಕಮ್ಯುನಿಡೇಸ್ ಸಂಹಿತೆಯು ಕುಟುಂಬದ ಪಿತೃಪ್ರಧಾನ ವ್ಯಾಖ್ಯಾನವನ್ನು ಹೊರತುಪಡಿಸಿ ಮಹಿಳೆಯರಿಗೆ ಹಕ್ಕುಗಳನ್ನು ನೀಡುವುದಿಲ್ಲ ಅಂದರೆ ಅವರು ಗಂಡು ಮಕ್ಕಳಿಲ್ಲದೆ ವಿಧವೆಯಾಗಿದ್ದರೆ ಅಥವಾ ಮಗನಿಲ್ಲದ ಪೋಷಕರ ಅವಿವಾಹಿತ ಹೆಣ್ಣುಮಕ್ಕಳಾಗಿದ್ದರೆ ಹಕ್ಕುಗಳಿಂದ ವಂಚಿತರಾಗುತ್ತಾರೆ.

2016ರ ಗೋವಾ ಕಾಯ್ದೆಯ ಪರಿಣಾಮ

2016 ರಲ್ಲಿ ಗೋವಾ ಸರ್ಕಾರವು ಗೋವಾ ಉತ್ತರಾಧಿಕಾರ, ವಿಶೇಷ ನೋಟರಿಗಳು ಮತ್ತು ದಾಸ್ತಾನು ಪ್ರಕ್ರಿಯೆ ಕಾಯ್ದೆಯನ್ನು ಜಾರಿಗೆ ತಂದಿತು, ಇದು ಪೋರ್ಚುಗೀಸ್ ನಾಗರಿಕ ಸಂಹಿತೆಗೆ ಹಲವಾರು ತಿದ್ದುಪಡಿಗಳನ್ನು ತಂದಿದೆ. ಸಾಂವಿಧಾನಿಕತೆ, ಕಾನೂನಾತ್ಮಕ ನಿಖರತೆ ಮತ್ತು ಚಾಲ್ತಿಯಲ್ಲಿರುವ ಪೋರ್ಚುಗೀಸ್ ನಾಗರಿಕ ಸಂಹಿತೆಯಿಂದ ಉತ್ತರಾಧಿಕಾರವನ್ನು ಚರ್ಚೆಯಿಲ್ಲದೆ ಬೇರ್ಪಡಿಸುವುದು ಸೇರಿದಂತೆ ಹಲವಾರು ಆಧಾರದ ಮೇಲೆ ಈ ಕಾಯ್ದೆಯು ಟೀಕೆಗೆ ಗುರಿಯಾಗಿದೆ. ಮೊದಲನೆಯದಾಗಿ, ಸಂಹಿತೆಯ ಒಂದು ಭಾಗವನ್ನು ಹಿಂತೆಗೆದುಕೊಳ್ಳಲಾಗಿದೆ ಮತ್ತು ನಂತರ ಕಾಯಿದೆಯಾಗಿ ಜಾರಿಗೆ ತರಲಾಗಿದೆ. ಆ ಮೂಲಕ ಸಂಹಿತೆ ಮತ್ತು ಕಾಯ್ದೆಯು ಎರಡು ವಿಭಿನ್ನ ಕಾನೂನು ಘಟಕಗಳಾಗಿವೆ ಎಂಬ ಮೂಲಭೂತ ಅಂಶವನ್ನು ನಿರ್ಲಕ್ಷಿಸಲಾಗಿದೆ.

ಗೋವಾ ಉತ್ತರಾಧಿಕಾರ ಕಾಯ್ದೆಯ ಮಸೂದೆಯನ್ನು ಬಹಿರಂಗಗೊಳಿಸಿದಾಗ, ಸಲಹೆಗಳು ಮತ್ತು ಆಕ್ಷೇಪಣೆಗಳಿಗೆ ಕೇವಲ ಎರಡು ವಾರಗಳ ನೋಟಿಸ್ ನೀಡಲಾಯಿತು. ಆದರೂ ಅನೇಕ ಪ್ರಮುಖ ವಕೀಲರು ಮತ್ತು ಮಹಿಳಾ ಕಾರ್ಯಕರ್ತರು ಅದನ್ನು ಅಧ್ಯಯನ ಮಾಡಲು ಮತ್ತು ವಿಶ್ಲೇಷಿಸಲು ತ್ವರಿತವಾಗಿ ಒಟ್ಟುಗೂಡಿದರು. ಸಲಹೆಗಳ ಸಮಿತಿಯು “ಈ ಕಲ್ಪನೆಯು ಹಿಮ್ಮುಖವಾಗಿದೆ ಮತ್ತು ಕಾನೂನನ್ನು ಹಿಂದಕ್ಕೆ ಕೊಂಡೊಯ್ಯುತ್ತದೆ.  ಇದು ನ್ಯಾಯಶಾಸ್ತ್ರ, ಕಾನೂನು ಸಿದ್ಧಾಂತ, ಭಾರತೀಯ ಮತ್ತು ಪಾಶ್ಚಿಮಾತ್ಯ ಕಾನೂನು ಇತಿಹಾಸ ಮತ್ತು ಕಾನೂನು ಸಂಸ್ಕೃತಿಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತದೆ. ನಾವು ಕಾರಿನಿಂದ ಎತ್ತಿನ ಗಾಡಿಗೆ ಹಿಮ್ಮುಖವಾಗಿ ಹೋಗುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟಿತ್ತು.” ಆದರೆ ಎಲ್ಲಾ ಆಕ್ಷೇಪಣೆಗಳನ್ನು ವಜಾಗೊಳಿಸಲಾಯಿತು ಮತ್ತು ಯಾವುದೇ ಶಿಫಾರಸುಗಳನ್ನು ಪರಿಗಣಿಸಲಾಗಲಿಲ್ಲ.

ಈ ಕಾಯ್ದೆಯು ಉತ್ತರಾಧಿಕಾರದ ಸಮಸ್ಯೆಯನ್ನು ಮೀರಿ ಹೋಗುತ್ತದೆ ಹಾಗಾಗಿ ಇತರ ಅಂಶಗಳ ಮೇಲೆಯೂ ಪರಿಣಾಮ ಬೀರುತ್ತದೆ.  2016 ರ ಕಾಯ್ದೆಯ ಅನೇಕ ಭಾಗಗಳು ಉತ್ತರಾಧಿಕಾರವನ್ನು ಮೀರಿ ಪೋರ್ಚುಗೀಸ್ ನಾಗರಿಕ ಸಂಹಿತೆಯಲ್ಲಿ ಅಂತರ್ಗತವಾಗಿರುವ ವಿವಾಹ, ವಿಚ್ಛೇದನ ಮತ್ತು ಪ್ರತ್ಯೇಕತೆಯ ಕಾನೂನುಗಳಿಗೆ ಒಳಪಡುತ್ತವೆ. ಸೆಕ್ಷನ್ 249 ರ ಪ್ರಕಾರ, ಹಿರಿಯ ಸಂಗಾತಿಯು ಕುಟುಂಬದ ಮುಖ್ಯಸ್ಥ ಆಗಿರುತ್ತಾರೆ. ಪಿತೃಪ್ರಧಾನ ಸಮಾಜದಲ್ಲಿ, ಪುರುಷ ಸಂಗಾತಿಯು ಸ್ತ್ರೀ ಸಂಗಾತಿಗಿಂತ ಯಾವಾಗಲೂ ಹಿರಿಯನಾಗಿದ್ದಾನೆ ಎಂಬ ಅಂಶದಿಂದ ಹಿರಿಯ ಸಂಗಾತಿ ಎಂಬ ಕಲ್ಪನೆಯನ್ನು ಸಂದರ್ಭೋಚಿತಗೊಳಿಸಲಾಗುತ್ತದೆ. ಪ್ರತಿಯೊಂದು ನಿಬಂಧನೆಯಲ್ಲೂ ಕುಟುಂಬದ ಮುಖ್ಯಸ್ಥನನ್ನು ಅವನು ಎಂದು ಉಲ್ಲೇಖಿಸುವ ಮೂಲಕ ಈ ಕಾಯ್ದೆಯು ಅದನ್ನೇ ಸಮ್ಮತಿಸುತ್ತದೆ. ತಾರತಮ್ಯದ ನಿಯಮಗಳು ಮತ್ತು ನಿಬಂಧನೆಗಳನ್ನು ಪರಿಶೀಲಿಸಲು ಮತ್ತು ಟೀಕಿಸಲು ಹಲವಾರು ಪ್ರಯತ್ನಗಳನ್ನು ಈ ಕಾಯ್ದೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಉದಾಹರಣೆಗೆ, ರಾಜ್ಯದ ಕುಟುಂಬ ಕಾನೂನುಗಳನ್ನು ಪರಿಶೀಲಿಸಲು ಗೋವಾ ಸರ್ಕಾರವು 2000 ರ ದಶಕದ ಆರಂಭದಲ್ಲಿ ರಚಿಸಿದ ಪುನಾರಚನೆ ಸಮಿತಿಯ ಸಲಹೆಗಳು ಮತ್ತು ಆಕ್ಷೇಪಣೆಗಳು 2016 ರ ಕಾಯ್ದೆಯ ರಚನೆಯನ್ನು ತಿಳಿಸುವಲ್ಲಿ ಯಾವುದೇ ಪಾತ್ರವನ್ನು ವಹಿಸಲಿಲ್ಲ.

1867 ರ ಸಂಹಿತೆಯ ಅನುಚ್ಛೇದ 1057 ಮದುವೆಗಳ ನೋಂದಣಿಯನ್ನು ಅನುಮತಿಸುತ್ತದೆ. ಮದುವೆಯ ಉದ್ದೇಶವನ್ನು ನಾಗರಿಕ ನೋಂದಣಿ ಅಧಿಕಾರಿಗಳ ಮುಂದೆ ಸಂಗಾತಿಗಳು ದಾಖಲಿಸಬೇಕು ಮತ್ತು ಹದಿನೈದು ದಿನಗಳಲ್ಲಿ ವಿವಾಹ ಪತ್ರಕ್ಕೆ ಸಹಿ ಹಾಕಬೇಕು ಎಂಬ ನಿಯಮ ವಿಧಿಸುತ್ತದೆ. ಸಹಿಗಳ ಮೂಲಕ ಎರಡನೇ ದೃಢೀಕರಣದ ಅವಶ್ಯಕತೆಯ ಬಗ್ಗೆ ಅನೇಕ ಮಹಿಳೆಯರಿಗೆ ತಿಳಿಸಲಾಗುವುದಿಲ್ಲ. ಇದರ ಪರಿಣಾಮವೆಂದರೆ, ವಿವಾದವು ಉದ್ಭವಿಸಿದಾಗ ಮದುವೆಯನ್ನು ಅಮಾನ್ಯವೆಂದು ಘೋಷಿಸಲಾಗುತ್ತದೆ, ಇದರಿಂದಾಗಿ ಈ ಮಹಿಳೆಯರು ವಂಚನೆ, ದ್ವಿಪತ್ನಿತ್ವದ ಸಮಸ್ಯೆಗಳೊಂದಿಗೆ ಕೆಲವೊಮ್ಮೆ ಸುಲಿಗೆಗೆ ಒಳಗಾಗುತ್ತಾರೆ. ಅಂತೆಯೇ ಚರ್ಚ್ ನ್ಯಾಯಮಂಡಳಿಯು ಅನುಭೋಗವಿಲ್ಲದ ಪ್ರಕರಣಗಳಲ್ಲಿ ಚರ್ಚ್ ಮದುವೆಗಳನ್ನು ರದ್ದುಗೊಳಿಸಬಹುದು. ಕ್ರೈಸ್ತರಲ್ಲದವರಿಗೆ ಅನುಭೋಗ ಮಾಡದಿರುವುದು ರದ್ದತಿ ಅಥವಾ ವಿಚ್ಛೇದನದ ಆಧಾರವಾಗಿ ಪರಿಗಣಿಸಲಾಗುವುದಿಲ್ಲ.

ಇದಲ್ಲದೆ, ವ್ಯಕ್ತಿಗಳು ಮತ್ತು ಸ್ವತ್ತುಗಳ ಪ್ರತ್ಯೇಕತೆಯ ಬಗ್ಗೆ ವ್ಯವಹರಿಸುವ ಅನುಚ್ಛೇದ 1204 ರ ಅಡಿಯಲ್ಲಿ, ಹೆಂಡತಿ ವ್ಯಭಿಚಾರ ಮಾಡಿದರೆ ಪತಿಗೆ ವಿಚ್ಛೇದನ ಪಡೆಯಲು ಅವಕಾಶವಿದೆ. ಆದಾಗ್ಯೂ ಪತಿಯು ಸಾರ್ವಜನಿಕ ಹಗರಣದೊಂದಿಗೆ ವ್ಯಭಿಚಾರ ಮಾಡಿದರೆ ಮಾತ್ರ ಹೆಂಡತಿಗೆ ಪ್ರತ್ಯೇಕಿಸಲು ಅನುಮತಿಸಲಾಗುತ್ತದೆ ಮತ್ತು ಪತಿ ಅವಳನ್ನು ತ್ಯಜಿಸಿದರೆ ಮತ್ತು ಅವನು ಪ್ರೇಯಸಿಯನ್ನು ವೈವಾಹಿಕ ವಾಸಸ್ಥಳದಲ್ಲಿ ಇಟ್ಟುಕೊಂಡರೆ ಮಾತ್ರ ವಿಚ್ಛೇದನಕ್ಕೆ ಅನುಮತಿಸಲಾಗುತ್ತದೆ. ವಿವಾಹಪೂರ್ವ ಒಪ್ಪಂದಗಳ ನಾಲ್ಕು ರೂಪಗಳನ್ನು ಅನುಮತಿಸಲಾಗಿದೆ, ಅವುಗಳಲ್ಲಿ ಯಾವುದನ್ನೂ ಮದುವೆಯ ಅವಧಿಯಲ್ಲಿ ಮಾರ್ಪಡಿಸಲಾಗುವುದಿಲ್ಲ.

ಮೊದಲನೆಯ ಪದ್ಧತಿಯಲ್ಲಿ ಆಸ್ತಿಗಳ ಸಂಪೂರ್ಣ ಬೇರ್ಪಡಿಸುವಿಕೆ ಅಥವಾ ಯಾವುದೇ ಸಂಪರ್ಕವಿಲ್ಲದೆ ಇದ್ದಲ್ಲಿ ಅನ್ವಯವಾಗುತ್ತದೆ. ಇದು ಮದುವೆಯ ಸುತ್ತಲಿನ ಭಾವನೆಗಳನ್ನು ಪರಿಗಣಿಸದ ಕಾರಣ ಮದುವೆಗೆ ಮೊದಲು ಸಹಿ ಹಾಕಿದ ಅತ್ಯಂತ ಅಪರೂಪದ ಒಪ್ಪಂದವಾಗಿದೆ. ಇಲ್ಲಿ ಪಾಲುದಾರರು ತಮ್ಮ ಎಲ್ಲಾ ಆಸ್ತಿಗಳನ್ನು ಸ್ವತಂತ್ರವಾಗಿ ಹಿಡಿದಿಡುತ್ತಾರೆ. ಎರಡನೆಯ ಪದ್ದತಿಯೆಂದರೆ ಮದುವೆ ಮತ್ತು ತದನಂತರ ಗಳಿಸಿದ ಸ್ವತ್ತುಗಳು ಮತ್ತು ಆಸ್ತಿಗಳ ಸಂಯೋಜನೆಯ ಸಲುವಾಗಿ ಮುಂಚಿತವಾಗಿ ಹೊಂದಿದ್ದ ಆಸ್ತಿಗಳು ಮತ್ತು ಸ್ವತ್ತುಗಳನ್ನು ಸಂಪೂರ್ಣವಾಗಿ ಬೇರ್ಪಡಿಸುವುದು. ಈ ಪದ್ಧತಿಯು  ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ದೋತಾಲ್ ಪದ್ಧತಿಯು ಮೂರನೇ ವರ್ಗವನ್ನು ಒಳಗೊಂಡಿದೆ. ಇದರ ಅಡಿಯಲ್ಲಿ ವಧುವಿನ ತಂದೆಯ ಆಸ್ತಿ ಮತ್ತು ಸ್ವತ್ತುಗಳಲ್ಲಿ ಪತಿಯ ಪಾಲನ್ನು ಗಂಡನಿಗೆ ನೀಡಲಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ವರದಕ್ಷಿಣೆ ಎಂದು ತಪ್ಪಾಗಿ ಭಾವಿಸಲಾಗುತ್ತದೆ. ಮದುವೆಯನ್ನು ವಿಸರ್ಜಿಸಿದರೆ ಪತಿ ತನ್ನ ಸಂಗಾತಿಗೆ ಎಲ್ಲಾ ಆಸ್ತಿ ಮತ್ತು ಸ್ವತ್ತುಗಳನ್ನು ಪುನಃಸ್ಥಾಪಿಸಲು ಬದ್ಧನಾಗಿರುತ್ತಾನೆ. ನಾಲ್ಕನೆಯ ಪದ್ಧತಿಯು ವಿಚ್ಛೇದನ ಅಥವಾ ಮರಣದ ನಂತರ ಸಮಾನವಾಗಿ ವಿಂಗಡಿಸಲಾದ ಗಂಡ ಮತ್ತು ಹೆಂಡತಿಯ ಎಲ್ಲಾ ಸ್ವತ್ತುಗಳ ಸಂಯೋಜನೆಗೆ ಸಂಬಂಧಿಸಿರುತ್ತದೆ. ಇದು ನ್ಯಾಯಸಮ್ಮತವೆಂದು ತೋರಿದರೂ, ಹೆಂಡತಿಯ ವಿಶೇಷ ಆಸ್ತಿಗಳನ್ನೂ ಸೇರಿದಂತೆ ದಂಪತಿಗಳ ಆಸ್ತಿಗಳು ಮತ್ತು ಸಾಮಾನ್ಯ ಸ್ವತ್ತುಗಳ ನಿರ್ವಹಣೆ ಮತ್ತು ಆಡಳಿತ  ಗಂಡನಿಗೆ ಮಾತ್ರ ಸೇರಿದ್ದು ಎಂದು ಕಾನೂನು ಸೂಚಿಸುತ್ತದೆ.

ಉದಾಹರಣೆಗೆ, ಮ್ಯಾನೇಜರ್ ಆಗಿ ಪತಿಯು ಕಟ್ಟಡವನ್ನು ಬಾಡಿಗೆಗೆ ನೀಡಬಹುದು ಮತ್ತು ಪತ್ನಿಯ ಒಪ್ಪಿಗೆಯಿಲ್ಲದೆ ಸಹಕಾರಿ ಸೊಸೈಟಿಯಲ್ಲಿ ಷೇರುಗಳನ್ನು ವರ್ಗಾಯಿಸಬಹುದು. ಈ ಮೊತ್ತವು ನಿವ್ವಳ ಆದಾಯದ ಮೂರನೇ ಒಂದು ಭಾಗವನ್ನು ಮೀರಬಾರದು ಎಂಬ ಷರತ್ತಿನ ಮೇಲೆ ಹೆಂಡತಿಗೆ ತನ್ನ ಸ್ವತ್ತುಗಳಿಂದ ಆದಾಯದ ಒಂದು ಭಾಗವಾಗಿ ಪಾಕೆಟ್ ವೆಚ್ಚಗಳಿಗಾಗಿ ಸ್ವೀಕರಿಸಲು ಕಾನೂನುಬದ್ಧವಾಗಿ ಅನುಮತಿಸಲಾಗಿದೆ. ಅಂತಿಮವಾಗಿ, ಆಸ್ತಿಗಳ ಜಂಟಿ ಮಾಲೀಕತ್ವದಿಂದ ಹೊರಗುಳಿಯಲು ಆಯ್ಕೆ ಮಾಡುವವರಿಗೆ, ಈ ಕಾಯ್ದೆಯು ಕಾನೂನುಬದ್ಧ ಉತ್ತರಾಧಿಕಾರದ ಆದ್ಯತೆಯ ಕ್ರಮದಲ್ಲಿ ಸಂಗಾತಿಯನ್ನು ನಾಲ್ಕನೇ ಸ್ಥಾನದಲ್ಲಿ ಇರಿಸುವ ಮೂಲಕ ಬದುಕುಳಿದ ಸಂಗಾತಿಯ ಮಾಲೀಕತ್ವ ಮತ್ತು ಉತ್ತರಾಧಿಕಾರದ ಅಧಿಕಾರಗಳನ್ನು ಸ್ಪಷ್ಟವಾಗಿ ಕಡಿಮೆ ಮಾಡುತ್ತದೆ.

ಅಂತಿಮವಾಗಿ

1961 ರಲ್ಲಿ ಗೋವಾದ ವಿಮೋಚನೆ ಮತ್ತು ಅದು ಭಾರತಕ್ಕೆ ಸೇರಿದ ನಂತರ, ಗೋವಾದಲ್ಲಿ ಚಾಲ್ತಿಯಲ್ಲಿರುವ ಕುಟುಂಬ ಕಾನೂನುಗಳನ್ನು ಅಥವಾ ಗಣನೀಯ ಸಮಾನತೆಯ ಪರಿಕಲ್ಪನೆಯನ್ನು ಗಣನೆಗೆ ತೆಗೆದುಕೊಳ್ಳದೆ ಕಾನೂನುಗಳನ್ನು ಕೇಂದ್ರಾಡಳಿತ ಪ್ರದೇಶ ಗೋವಾಕ್ಕೆ (ಮತ್ತು ನಂತರ ಗೋವಾ ರಾಜ್ಯಕ್ಕೆ) ಆಮದು ಮಾಡಿಕೊಳ್ಳಲಾಯಿತು ಎಂಬುದು ಕುತೂಹಲಕಾರಿಯಾಗಿದೆ. ಇವುಗಳಲ್ಲಿ ಭೂ ಕಂದಾಯ ಸಂಹಿತೆ ಮತ್ತು ಕೃಷಿ ಹಿಡುವಳಿ ಕಾಯ್ದೆ ಸಹ ಸೇರಿವೆ. ಗೋವಾದಲ್ಲಿ ಭೂ ಹಕ್ಕುಗಳ ಮೇಲೆ ಪರಿಣಾಮ ಬೀರುವ ಕಾನೂನುಗಳು ಮತ್ತು ನಿಬಂಧನೆಗಳನ್ನು ಆಸ್ತಿ ಹಕ್ಕುಗಳ ವಿಷಯದಲ್ಲಿ ಕುಟುಂಬ ಕಾನೂನುಗಳೊಂದಿಗೆ ಸಮನ್ವಯಗೊಳಿಸಬೇಕಾಗಿದೆ ಮತ್ತು ಅದೇ ತತ್ವಗಳು ಎಲ್ಲಿ ಮತ್ತು ಅಗತ್ಯವಿದ್ದಾಗ ಸಕಾರಾತ್ಮಕ ತಾರತಮ್ಯವನ್ನು ಹೊರತುಪಡಿಸಿ ಯಾವುದೇ ತಾರತಮ್ಯವಿಲ್ಲದೆ ಭೂ ಹಕ್ಕುಗಳ ಕಾರ್ಯಾಚರಣೆಯಲ್ಲಿ ಪ್ರತಿಬಿಂಬಿಸಬೇಕಿದೆ. ಏಕರೂಪ ಮತ್ತು ಏಕರೂಪತೆ ಎಂಬ ಪದಗಳನ್ನು ಮರು ವ್ಯಾಖ್ಯಾನಿಸಬೇಕಾಗಿದೆ. ಏಕರೂಪತೆಯ ವ್ಯಾಖ್ಯಾನವು ವಿಭಿನ್ನ ಗುಂಪುಗಳಿಗೆ ವಿಭಿನ್ನವಾಗಿ ಅನ್ವಯಿಸುತ್ತದೆ, ಈ ಸಂದರ್ಭದಲ್ಲಿ ಅನ್ಯಧರ್ಮೀಯ ಹಿಂದೂಗಳು?

ಉತ್ಪಾದನಾ ವ್ಯವಸ್ಥೆಯಲ್ಲಿ ಅಸಮಾನರಾಗಿರುವವರನ್ನು, ವಿಶೇಷವಾಗಿ ಹೆಚ್ಚಿನ ಮಹಿಳೆಯರು ಮತ್ತು ಅನೇಕ ಪುರುಷರಂತೆ ಆಸ್ತಿರಹಿತ ಮತ್ತು ಆಸ್ತಿರಹಿತರಿಗೆ ಸಂಬಂಧಿಸಿದಂತೆ ಏಕರೂಪತೆಯು ಹೇಗೆ ಗಣನೆಗೆ ತೆಗೆದುಕೊಳ್ಳುತ್ತದೆ? ಈಗಾಗಲೇ ಅಂಚಿನಲ್ಲಿರುವ ಮತ್ತು ಅಸಮಾನರಾಗಿರುವವರ ಮೇಲೆ ಏಕರೂಪತೆಯನ್ನು ಹೇರಬಹುದೇ? ವಂಚನೆ ಮತ್ತು ಮೋಸದಿಂದ ಪರಿತ್ಯಕ್ತ ಅಥವಾ ವಿವಾಹವಾದ ಮಹಿಳೆಗೆ ಸಮಾನತೆ ಮತ್ತು ಏಕರೂಪತೆಯನ್ನು ಕಾನೂನುಬದ್ಧವಾಗಿ ಹೇಗೆ ಅನ್ವಯಿಸಬೇಕು? ಕುಟುಂಬದ ಪಿತೃಪ್ರಧಾನ ವ್ಯಾಖ್ಯಾನದಿಂದ ಹೊರಗುಳಿದವರು, ಆಯ್ಕೆಯಿಂದ ಅಥವಾ ಅನೈಚ್ಛಿಕವಾಗಿ, ಕಾನೂನಿನ ಮೂಲಕ ಕುಟುಂಬದ ಪ್ರಸ್ತುತ ವ್ಯಾಖ್ಯಾನಕ್ಕೆ ಸರಿಹೊಂದುವವರಿಗೆ ಸಮಾನರಾಗಿದ್ದಾರೆಯೇ? ಅಸಮಾನತೆಯ ಮಟ್ಟಗಳು ಮತ್ತು ವ್ಯಾಪ್ತಿ ಕಡಿಮೆಯಾಗುತ್ತದೆಯೇ ಅಥವಾ ಆಳವಾಗುತ್ತದೆಯೇ?

2016 ರ ಕಾಯ್ದೆಯು ಹೆಚ್ಚಿನ ಗೊಂದಲ ಮತ್ತು ಅಡೆತಡೆಗಳಿಗೆ ಕಾರಣವಾಗಿದೆ. ಈ ಕಾಯ್ದೆಯು ಶತಮಾನಗಳಷ್ಟು ಹಳೆಯದಾದ ಸಂಹಿತೆಯ ಒಂದು ಭಾಗವನ್ನು ಅದರ ಆಂತರಿಕ ಸ್ವರೂಪವನ್ನು ಗಣನೆಗೆ ತೆಗೆದುಕೊಳ್ಳದೆ ಹಿಂತೆಗೆದುಕೊಳ್ಳುತ್ತದೆ., ವಿಶೇಷವಾಗಿ ಆಸ್ತಿ ಮತ್ತು ಸ್ವತ್ತುಗಳ ಮಾಲೀಕತ್ವ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಅಂತಹ ಹಕ್ಕುಗಳು ಸೀಮಿತವಾಗಿವೆ.

 (ಈ ಲೇಖನವು ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ನ ಗ್ರಾಮೀಣ ಅಧ್ಯಯನ ಕೇಂದ್ರಕ್ಕಾಗಿ ನಡೆಸಿದ ‘ಗೋವಾದಲ್ಲಿ ಕಾನೂನು ಸಮಾನತೆಯ ಸಂದರ್ಭದಲ್ಲಿ ಮಹಿಳೆಯರು ಮತ್ತು ಭೂ ಹಕ್ಕುಗಳು’ ಎಂಬ ಲೇಖಕರ ಅಧ್ಯಯನದ ವಿಸ್ತರಣೆಯಾಗಿದೆ. ಡಾ. ಅಲ್ಬರ್ಟಿನಾ ಅಲ್ಮೇಡಾ, ಅಡ್ವೊಕೇಟ್-ಗೋವಾ ಅವರ ಸಲಹೆ ಸೂಚನೆಗಳನ್ನು ಪ್ರಾಮಾಣಿಕವಾಗಿ ಸ್ವೀಕರಿಸಲಾಗಿದೆ)

Donate Janashakthi Media

Leave a Reply

Your email address will not be published. Required fields are marked *