ಮಹಿಳೆಯ ದುಡಿಮೆ ಮತ್ತು ಸ್ವಾತಂತ್ರ್ಯಹೀನತೆ ನಮ್ಮ ಸಮಾಜದ ಇತಿಹಾಸದುದ್ದಕ್ಕೂ, ವರ್ತಮಾನದಲ್ಲಿನ ಕ್ರೂರ ವಾಸ್ತವ. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ, ಜಗತ್ತಿನ ಎಲ್ಲೆಡೆಗಳಲ್ಲಿಯೂ ಕಾಣುವ ಸಂಗತಿಯೂ ಕೂಡ. ಯೂರೋಪ್ ಮತ್ತು ಕನ್ನಡದ ಜಾನಪದಗಳಲ್ಲಿ, ಮನುಸ್ಮೃತಿಯಂತಹ ಧಾರ್ಮಿಕ ಕಟ್ಟಳೆಯ ಗ್ರಂಥಗಳಲ್ಲಿ ಪ್ರತಿಪಾದಿತವಾಗಿರುವುದನ್ನು ಎಳೆ ಎಳೆಯಾಗಿ ವಿಶ್ಲೇಷಿಸಿದ್ದಾರೆ ಚಿಂತಕ ಜಿ.ಎನ್. ನಾಗರಾಜ್ ರವರು. ಅವರ ಬರಹದ ಎರಡನೇ ಕಂತು ಇಲ್ಲಿ.
ಮನುಸ್ಮೃತಿ ಮೊದಲಾದ ಧರ್ಮಶಾಸ್ತ್ರ ಗ್ರಂಥಗಳು ಸಂಸ್ಕೃತದಲ್ಲಿವೆ. ಅದರಲ್ಲಿರುವ ವಿಚಾರ ಮಹಿಳೆಯರಿಗೆ ಹೇಗೆ ಗೊತ್ತಾಗುತ್ತದೆ? ಎಲ್ಲದಕ್ಕೂ ಮನುಸ್ಮೃತಿ, ವೈದಿಕ ಗ್ರಂಥಗಳನ್ನು ಸುಖಾಸುಮ್ಮನೆ ದೂರುತ್ತೀರಿ ಎಂದು ವೈದಿಕ ಮನಸ್ಥಿತಿಯ ಹಲವರು ಕೇಳುತ್ತಾರೆ. ಆದರೆ ಈ ಗ್ರಂಥಗಳಲ್ಲಿಯ ವಿಚಾರಗಳನ್ನು ಹಳ್ಳಿಗಳಲ್ಲಿಯೂ, ನಗರ, ಪಟ್ಟಣಗಳ ವಿವಿಧ ಭಾಗಗಳಲ್ಲಿಯೂ ಮಾಡುತ್ತಿದ್ದ ಹರಿಕತೆ, ಪುರಾಣಗಳು, ಮಹಾಪತಿವ್ರತೆಯರ ಕತೆಗಳು, ರಾಮಾಯಣ, ಮಹಾಭಾರತದ ಮೇಲೆ ಆಧಾರಿತವಾದ ಯಕ್ಷಗಾನ, ಬಯಲಾಟಗಳು, ನಾಟಕಗಳು, ಸಿನೆಮಾ, ಟಿವಿ ಸೀರಿಯಲ್, ಕೆಲವು ಜಾನಪದ ಹಾಡುಗಳು, ಕತೆಗಳ ಮೂಲಕ ಜನ ಸಾಮಾನ್ಯರ ನಡುವೆ ಹಬ್ಬಿಸುವ ಕೆಲಸ ಸಾವಿರಾರು ವರ್ಷಗಳಿಂದ ನಡೆಯುತ್ತಿದೆ.
ಇಂತಹ ಒಂದು ರೂಪ ಸಂಚಿಯ ಹೊನ್ನಮ್ಮನ ಹದಿಬದೆಯ ಧರ್ಮ ಅರ್ಥಾತ್ ಪತಿವ್ರತೆಯ ಧರ್ಮ ಎಂಬ ಕಾವ್ಯ. ಹದಿನೇಳನೇ ಶತಮಾನದಲ್ಲಿ ಮೈಸೂರರಸ ಚಿಕ್ಕದೇವರಾಜ ಒಡೆಯರ ಆ ಸ್ಥಾನದಲ್ಲಿ ಎಲೆ ಅಡಿಕೆಯ ಸಂಚಿಯನ್ನು ಹಿಡಿದು ಸೇವೆ ಸಲ್ಲಿಸುತ್ತಿದ್ದ ಹೊನ್ನಮ್ಮ ಬರೆದ ಕಾವ್ಯವಿದು.
ಅದರಲ್ಲಿ ಅತ್ತೆ ಮಾವಂದಿರನ್ನು ಹೇಗೆ ಸೇವೆ ಮಾಡಬೇಕೆಂಬುದನ್ನು ಹೊನ್ನಮ್ಮ ಹೀಗೆ ವಿವರಿಸುತ್ತಾಳೆ:
ಮಾನಗೊಳದೆ, ಮೈಲಿಗೆಯೆಂಜಲೆಂದನುಮಾನಗೆಯ್ಯದೆ ಮನವೊಲಿದು
ಬೇನೆ ಬಿದ್ದಿರೆ ಪೇಸದೆ ಬೇಸರದೆ ಸನ್ಮಾನದೊಳುಪಚರಿಸುವುದು 4-14
ಆವ ವೇಳೆಯೊಳು ಆವುದನು ಬಯಸಸಿದರೆ ಆ ವೇಳೆಯೊಳು ಅವನೆಲ್ಲ
ಸಾವಧಾನದೊಳು ಸಂಗತಿಗೊಳಿಸುವುದು ಇಷ್ಟ ದೇವತೆಯೆಂದೆಣಿಸುವುದು 4-16
ಒತ್ತಿನೊಳಿದ್ದು ಒಲವರಿತು ಅಡಿಗಳನು ಒತ್ತುವುದು ಒಂದುವೆರೆದು
ಸುತ್ತುಗೆಲಸವ ಸೊಲ್ಲಿಸದೆ ಎಸಗುವುದು ಇದರಿಂದತ್ತೆಯು ಅನುವರ್ತಿಸುವುದು 4-17
ಬೀಸುವುದೊಮ್ಮೆ ಪಿಡಿದು ಬಿಜ್ಜಣಿಗೆ( ಬೀಸಣಿಗೆ)ಯ ಪಾಸುವುದೊಮ್ಮೆ ಪಾಸಿಗೆಯ
ಸೂಸುವುದೊಮ್ಮೆ ಪನ್ನೀರ ಸುಗಂಧವ ಪೂಸುವುದೊಮ್ಮೆ ಪೂಜುವುದು 4.18
ತಾನೇ ನೀರೆರೆದು ಮೀಯಿಸುವುದು ಮತ್ತೊಮ್ಮೆ
ತಾನೇ ತೊಡಿಗೆ ತೊಡಿಸುವುದು ಎಲ್ಲವನು ಸಾನಂದದೊಳು ಸಮನಿಪುದು 4.19
ವೃದ್ಧರಾದ ಅವರ ಅನಾರೋಗ್ಯದ ಸಮಯದಲ್ಲಿ ಅವರ ಎಂಜಲು, ಉಚ್ಛೆ ಬಳಿಯುವುದು ಮೊದಲಾದವನ್ನು ಬೇಸರಿಸದೆ ಮಾಡಬೇಕೆಂಬ ಮಾನವೀಯತೆ ಇರಲಿ. ಆದರೆ ಅವರು ಏನು ಬಯಸಿದರೂ ಆಗಲೆ ಮಾಡಬೇಕು, ಅತ್ತೆಯ ಕಾಲೊತ್ತಿ ಸೇವೆ ಮಾಡುತ್ತಾ ಮನೆಯ ಕೆಲಸಗಳನ್ನು ಅವರ ಆದೇಶದಂತೆ ಮಾಡಬೇಕು. ಬೀಸಣಿಗೆಯಿಂದ ಬೀಸುವುದು, ಹಾಸಿಗೆ ಹಾಸಿಕೊಡುವುದು, ಗಂಧವನ್ನು ಮೈಗೆ ಹಚ್ಚುವುದು, ಪಾದ ಸೇವೆ ಮಾಡಿ ಪೂಜಿಸುವುದು, ಸ್ನಾನ ಮಾಡಿಸುವುದು, ಉಡುಗೆಗಳನ್ನು ತೊಡಿಸುವುದು ಇವುಗಳನ್ನೆಲ್ಲ ಅನಾರೋಗ್ಯದ ಸಮಯದಲ್ಲಿ ಮಾತ್ರವಲ್ಲದೆ ನಿತ್ಯ ಮಾಡಬೇಕು ಎಂಬುದು ಸಮಾಜದಲ್ಲಿ ರೂಪಿತವಾಗಿದ್ದ ಲೋಕಾರೂಢಿ.
ಅತ್ತೆ, ಮಾವಂದಿರ ಸೇವೆ ಹೇಗೆ ಮಾಡಬೇಕೆಂಬ ಬಗ್ಗೆ ಹೊನ್ನಮ್ಮನ ಸೂಚನೆಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ.
ಅಡಿಗೆ ಮಾಡುವುದು, ನೀರು ತರುವುದು, ಪಾತ್ರೆ ತೊಳೆಯುವುದು, ಮನೆಯ ಸ್ವಚ್ಚತೆ, ಮಕ್ಕಳನ್ನು ಹೆರುವುದು, ತನ್ನ ಮತ್ತುನೆಯಲ್ಲಿರುವ ಎಲ್ಲರ ಮಕ್ಕಳ ಆರೈಕೆ, ಶಿಕ್ಷಣ ಇತ್ಯಾದಿ ಇತ್ಯಾದಿಗಳ ಬಗ್ಗೆ ಬಹಳ ವಿವರವಾದ ಸೂಚನೆಗಳಿವೆ.
ಇವೆಲ್ಲವೂ ಸಾವಿರಾರು ವರ್ಷಗಳ ಕಾಲದ ರಾಜಪ್ರಭುತ್ವವೆಂಬ ಪಾಳೆಯಗಾರಿ ವ್ಯವಸ್ಥೆಯಲ್ಲಿ ಮಹಿಳೆ ಪಾಲಿಸಬೇಕಾಗಿದ್ಧ ಹೊಣೆಯ ಹೊರೆಯನ್ನು ನಮಗೆ ವೇದಿಸುತ್ತವೆ.
ಸ್ವಾತಂತ್ರ್ಯಾನಂತರ ಪ್ರಜಾಪ್ರಭುತ್ವ, ಸಂವಿಧಾನದ ಮೂಲ ತತ್ವಗಳಾದ ಸಮಾನತೆ ಮತ್ತು ಇತರೆಲ್ಲ ಸಮುದಾಯಗಳ ಸಮಾನತೆಯ ಜೊತೆಗೆ ಲಿಂಗ ಸಮಾನತೆಗೆ ಸಂಬಂಧಿಸಿದ ಪರಿಚ್ಛೇಧಗಳು, ವಿಶೇಷ ಕಾನೂನುಗಳ ನಂತರವೂ ಪಾಳೆಯಗಾರಿ ಪುರುಷಾಧಿಪತ್ಯದ ಮೌಲ್ಯಗಳು ಮೆರೆಯುತ್ತಿವೆ. ಸ್ವಲ್ಪ ಮಟ್ಟಿಗೆ ಮಾತ್ರ ಮಹಿಳೆಯರ ಸಮಾನತೆ ಅದರಿಂದ ಅವರ ದುಡಿಮೆಯಿಂದ ಸ್ವಲ್ಪ ವಿನಾಯತಿ, ಬಿಡುವು ಮತ್ತು ಅದರ ಉಪಯೋಗದ ಸ್ವಾತಂತ್ರ್ಯ ಲಭ್ಯವಾಗಿದೆ. ಅದರಿಂದಾಗಿ ಈ ಪರಂಪರಾಗತ, ಧಾರ್ಮಿಕ ಕಟ್ಟಳೆಗಳಾಗಿಬಿಟ್ಟಿರುವ ಪಾಳೆಯಗಾರಿ ಮೌಲ್ಯಗಳನ್ನು ತೊಡೆಯಬೇಕೆಂದರೆ ಅವುಗಳ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯ ಮತ್ತು ಮುಖ್ಯ ಕೆಲಸವಾಗಿದೆ.
ಭಾರತದಲ್ಲಿ ಪ್ರಚಲಿತವಾಗಿರುವ ಇತರ ಧರ್ಮಗಳೂ ಇಂತಹ ಕಟ್ಟಲೆಗಳನ್ನು ವಿವಿಧ ಪ್ರಮಾಣದಲ್ಲಿ ಮಹಿಳೆಯರ ಮೇಲೆ ಹೇರಿ ಅವರ ದುಡಿಮೆ, ಅಸ್ವಾತಂತ್ರ್ಯ, ವಿರಾಮದ ಅಲಭ್ಯತೆಯನ್ನು ನಿರ್ದೇಶಿಸಿವೆ. ಅವುಗಳ ಬಗೆಗೆ ಆಯಾ ಧರ್ಮಗ್ರಂಥಗಳ ಬಗ್ಗೆ ಅಧ್ಯಯನ ಮಾಡಿರುವುದನ್ನೂ ಪರಿಶೀಲಿಸುವ ಅಗತ್ಯ ಇದೆ.
ಬಾಲ್ಯ ವಿವಾಹ ಎಂಬ ಬಾಲ ಕಾರ್ಮಿಕ ಪದ್ಧತಿ:
ಬಾಲ್ಯ ವಿವಾಹ ಎಂಬುದು ಭಾರತದಲ್ಲಿ ಸಾವಿರಾರು ವರ್ಷಗಳಿಂದ ರೂಢಿಯಲ್ಲಿರುವ ಬಹು ವ್ಯಾಪಕವಾಗಿದ್ದ ಪದ್ಧತಿ. ಇಂದೂ ಹಳ್ಳಿಗಾಡಿನಲ್ಲಿ, ನಗರಗಳ ಸ್ಲಂಗಳಲ್ಲಿ ಗಣನೀಯವಾಗಿ ಅನುಸರಿಸುವ ಪದ್ಧತಿ. ಹುಟ್ಟುತ್ತಲೇ ತೊಟ್ಟಿಲು ಮದುವೆ ಮಾಡುವ ಪದ್ಧತಿಯೂ ಇತ್ತು. ನಾಲ್ಕು ವರ್ಷದಿಂದಲೇ ಆರಂಭಿಸಿ ಹತ್ತು ಹನ್ನೆರಡು ವರ್ಷಗಳಷ್ಟು ಸಣ್ಣ ವಯಸ್ಸಿನ ಲೈಂಗಿಕ ಬೆಳವಣಿಗೆ ಆರಂಭವಾಗದ ಬಾಲಕಿಯರಿಗೆ ಮದುವೆ ಮಾಡುವ, ನಂತರ ಮೈ ನೆರೆದ ಕೂಡಲೇ ಗಂಡನ, ಅಲ್ಲಲ್ಲ ಅತ್ತೆಯ ಮನೆಗೆ (ಅದು ಇನ್ನೂ ಬಾಲಕನಾಗಿರುವ ಗಂಡನ ಮನೆಯಾಗುವ ಸಾಧ್ಯತೆ ಇಲ್ಲ. ಅದು ಮಾವನ ಒಡೆತನದ ಮನೆಯಾಗಿರುತ್ತದೆ. ಒಬ್ಬ ಹೆಣ್ಣಿಗೆ ಅತ್ತೆಯ ಮನೆಯಾಗಿರುತ್ತದೆ.) ಸೇರಿಸುವ ಪದ್ಧತಿ ಇದು. ಪುರಾಣಗಳು, ಮನುಸ್ಮೃತಿಯ ಕಾಲದಿಂದ ಎಂದರೆ ಕ್ರಿಸ್ತ ಪೂರ್ವ ಎರಡನೆಯ ಶತಮಾನದಿಂದ ಈ ಪದ್ಧತಿಯ ಉಲ್ಲೇಖಗಳು ಕಾಣ ಸಿಗುತ್ತವೆ. ಕೌಟಲ್ಯನ ಅರ್ಥ ಶಾಸ್ತ್ರದಲ್ಲಿ ಕೂಡಾ ಇದರ ಉಲ್ಲೇಖ ಇದೆ.
ಮೈನೆರೆಯುವ ಮೊದಲು ಮದುವೆಯಾಗದಿದ್ದರೆ ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟು ಬಿಡುವ ಪದ್ಧತಿ ಕೂಡಾ ಇತ್ತೆಂಬುದರ ಬಗ್ಗೆ ಹಲವು ಐತಿಹ್ಯ, ಜಾನಪದ ಕತೆಗಳಿವೆ.
ಬಾಲ್ಯ ವಿವಾಹ ಪದ್ಧತಿ ಬಾಲಕಿ, ಬಾಲಕಿಯರ ಮತ್ತು ಮುಂದೆ ಅವರ ಇಡೀ ಜೀವನದ ಮೇಲೆ ಹಲವು ರೀತಿಯ ಪರಿಣಾಮ ಬೀರುತ್ತದೆ. ಅದರಲ್ಲಿ ಮುಖ್ಯವಾದ ಒಂದು ಅಂಶವನ್ನು ಕಡೆಗಣಿಸಲಾಗಿದೆ. ಬಾಲ್ಯದಲ್ಲಿಯೇ ವಿವಾಹವಾಗಿ ಅತ್ತೆ ಮನೆ ಸೇರುವ ಬಾಲಕಿಯ ಮೇಲೆ ಮನೆಯ ಚಾಕರಿಯ ಹೊರೆ ಬೀಳುತ್ತದೆ. ಆ ವಯಸ್ಸಿನಲ್ಲಿ ತಾಯ ಮನೆಯಲ್ಲಿ ಆಟವಾಡಿಕೊಂಡು, ಉಂಡುಟ್ಟು ಬೆಳೆಯುತ್ತಿದ್ದ ಬಾಲಕಿಯ ಮೇಲೆ ಇದ್ದಕ್ಕಿದ್ದಂತೆ ಕೆಲಸದ ಹೊರೆ ಬೀಳುತ್ತದೆ. ಅತ್ತೆಯ ಮನೆಯಲ್ಲಿ ತೊತ್ತಾಗಿ ದುಡಿಯಬೇಕಾಗುತ್ತದೆ. ಇದು ಆ ವಯಸ್ಸಿನಲ್ಲಿ ಅವರ ಬೌದ್ಧಿಕ, ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಅವರಿಗೆ ವಿರಾಮವೆಂಬುದು ಕನಸಿನಂತೆ ಕಾಣುತ್ತದೆ. ಮೇಲೆ ನೀಡಿದ ಜಾನಪದ ಕಾವ್ಯದ ಉಲ್ಲೇಖಗಳಲ್ಲಿ ಕಾಣುವುದು ಇಂತಹ ಬಾಲಕಿಯೊಬ್ಬಳ ಕಷ್ಟದ ಅಭಿವ್ಯಕ್ತಿ ಎನ್ನಬಹುದು.
ಇಂತಹ ಕಷ್ಟಕರ ಜೀವನದ ಇನ್ನೊಂದು ಮಗ್ಗಲು ತವರಿನ ಹಂಬಲ. “ತವರೂರ ಹಾದೀಲಿ ಮುಳ್ಳಿಲ್ಲ ಕಲ್ಲಿಲ್ಲ” ಎಂಬ ಜಾನಪದ ತ್ರಿಪದಿ “ತವರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ” ಎನ್ನುವ ಜನಪ್ರಿಯ ಕವಿತೆಯ ಸಾಲು ನೆನಪಿಗೆ ಬರುತ್ತದೆ.
ಹೆಣ್ಣಿಗೆ ತವರಿಗೆ ಹೋದಾಗಲೇ ಸ್ವಲ್ಪ ವಿಶ್ರಾಂತಿ, ವಿರಾಮ ಮತ್ತು ಆರೈಕೆ. ಬಾಲ್ಯ ವಿವಾಹವೆಂಬುದು ತಮ್ಮ ಮನೆಯ ಬಾಲಕಿಯನ್ನು ಮತ್ತೊಂದು ಮನೆಗೆ ದುಡಿಯಲು ಕಳಿಸುವ ಒಮ್ಮುಖದ ಸಂಬಂಧವಲ್ಲ. ಮತ್ತೊಬ್ಬರ ಮನೆಯಿಂದ ಅಂತಹುದೇ ಬಾಲೆಯೊಬ್ಬಳನ್ನು ದುಡಿಯಲು ತರುವ ಅವಕಾಶವೂ ಹೌದು. ನಮ್ಮ ಮನೆಯ ಬಾಲಕಿಯನ್ನು ನೀವು ದುಡಿಸಿಕೊಳ್ಳಿ. ನಿಮ್ಮ ಮನೆಯಲ್ಲಿ ದುಡಿಯಲು ನಿಮ್ಮ ಮನೆಯ ಬಾಲಕಿಯನ್ನು ಕಳಿಸಿ ಎಂಬಂತಹ ಮುಯ್ಯಾಳಿನ ಪದ್ಧತಿ ಇದು. ಹೀಗೆ ಈ ವಿವಾಹ ಬಾಲ ಕಾರ್ಮಿಕ ಪದ್ಧತಿಯ ತಿರುಳನ್ನು ಒಳಗೊಂಡಿದೆ.
ಬಾಲ್ಯ ವಿವಾಹ ಮಾಡಿ 11-13 ವರ್ಷಕ್ಕೆ ಮೈನೆರೆದ ಕೂಡಲೇ ಅತ್ತೆಯ ಮನೆಗೆ ಕಳಿಸುವುದಕ್ಕೆ ಬದಲಾಗಿ 20-21 ರ ವಯಸ್ಸಿನ ಯುವತಿಯಾದ ಮೇಲೆ ಮದುವೆ ಮಾಡಿಕೊಡುವುದೆಂದರೆ ಎಂಟರಿಂದ ಹತ್ತು ವರ್ಷದ ದುಡಿಮೆಯನ್ನು ಕಳೆದುಕೊಂಡಂತೆ. ಜೊತೆಗೆ ಬಾಲಕಿಯ ಮೇಲೆ ಕಠಿಣ ದುಡಿಮೆ ಹೇರುವುದಕ್ಕಿಂತ ಯುವತಿಯಿಂದ ಆ ದುಡಿಮೆಯನ್ನು ಪಡೆಯುವುದು ಕಠಿಣ. ಅದೇ ಬಾಲಕಿಯಾಗಿ ಬಂದವಳನ್ನು ಯುವತಿಯಾಗುವ ವೇಳೆಗೆ ಅಂತಹ ದುಡಿಮೆಗೆ ಒಗ್ಗಿಸಿಕೊಂಡಿರಬಹುದು ಅಲ್ಲವೇ.
ಬಾಲಕಿಯಾಗಿರುವಾಗ ವ್ಯಕ್ತಿತ್ವದ ಬೌದ್ಧಿಕ, ಮಾನಸಿಕ, ದೈಹಿಕ ಬೆಳವಣಿಗೆಗೆ ಅತ್ಯಗತ್ಯವಾದ ವಿರಾಮವನ್ನು ಅವರಿಂದ ಕಿತ್ತುಕೊಳ್ಳುತ್ತದೆ, ಅವರ ವ್ಯಕ್ತಿತ್ವವನ್ನು ಕುಬ್ಜವಾಗಿಸುತ್ತದೆ ಬಾಲ್ಯ ವಿವಾಹ ಪದ್ಧತಿ.
ಸಾಮಾಜಿಕ ಸ್ತರ ಮತ್ತು ವೃತ್ತಿ ಬೇಧಗಳ ಪರಿಣಾಮ:
ದುಡಿಮೆವಿರಾಮವೆಂಬುದು ಎಲ್ಲ ಮಹಿಳೆಯರಿಗೂ ಒಂದೇ ರೀತಿಯ ಪ್ರಶ್ನೆ ಅಲ್ಲ. ಅದು ಅವರ ವೃತ್ತಿ ಮತ್ತು ಸಾಮಾಜಿಕ ಸ್ತರಗಳನ್ನು ಅವಲಂಬಿಸಿದೆ. ದಾಸಿ ಅಥವಾ ಜೀತಗಾರ ಮಹಿಳೆ, ಕೂಲಿಕಾರ ಮಹಿಳೆ, ರೈತ ಮಹಿಳೆ, ಕುಶಲಕರ್ಮಿ ಮಹಿಳೆಯರು ಮನೆಯ ಒಳಗೂ ಹೊರಗೂ ದುಡಿಯುವ ದುಪ್ಪಟ್ಟು ದುಡಿಮೆಯ ಮಹಿಳೆಯರಾಗಿದ್ದಾರೆ. ದುಡಿಮೆಯ ಪ್ರಮಾಣ ಮತ್ತು ತೀವ್ರತೆಯ ಮೇಲೆ ಅವರ ವಿರಾಮದ ಲಭ್ಯತೆ ಅವಲಂಬಿಸಿದೆ. ಇವರುಗಳಲ್ಲಿ ಯಾವುದೇ ಸ್ವಾತಂತ್ರ್ಯವಿಲ್ಲದ ಜೀತಗಾರ ಮಹಿಳೆಯರ ದುಡಿಮೆಯ ಪ್ರಮಾಣ ಮತ್ತು ತೀವ್ರತೆ ಬಹು ಹೆಚ್ಚಿರುವುದು ಸ್ಪಷ್ಟ. ಅವರಿಗೆ ವಿರಾಮವಿರಲಿ, ವಿಶ್ರಾಂತಿಯೂ ದೊರಕಲಾರದ ಬದುಕು. ಈ ವರ್ಗಗಳ ವಿರುದ್ಧ ದಿಕ್ಕಿನಲ್ಲಿ ಕೈಗೊಬ್ಬರು, ಕಾಲಿಗೊಬ್ಬರಂತೆ ಆಳುಕಾಳುಗಳು ಚೆಲ್ಲಾಡುವ ಜಮೀನುದಾರ, ಜಹಗೀರುದಾರ ಕುಟುಂಬಗಳ, ರಾಜಪರಿವಾರಗಳ ಮಹಿಳೆಯರ ವಿರಾಮದ ಪುಷ್ಕಳತೆ ಬೇರೆಯೇ. ಈ ಎರಡು ವರ್ಗಗಳ ನಡುವಣ ಗೃಹಿಣೀ ಮಹಿಳೆಯರ ವಿರಾಮದ ಪ್ರಶ್ನೆ ಬೇರೊಂದು ರೀತಿಯದು.
ಮೊದಲ ವರ್ಗದ ಮಹಿಳೆಯರೇ ಬಹು ಸಂಖ್ಯಾತರಾಗಿದ್ದರೂ ಕೂಡಾ ಮೇಲಿನೆಲ್ಲ ಕಾವ್ಯ, ಧಾರ್ಮಿಕ ಗ್ರಂಥಗಳ ಉದಾಹರಣೆಗಳೂ ಅಂದಿಗೆ ಬಹಳ ಸಣ್ಣ ಸಂಖ್ಯೆಯ ಗೃಹಿಣಿ ಮಹಿಳೆಯರ ಕುರಿತೇ ಇದೆ ಎನ್ನುವುದು ವಿಪರ್ಯಾಸ.
ಈ ವಿಭಜನೆ ಭಾರತದಲ್ಲಿ ವರ್ಣ- ಜಾತಿ ವ್ಯವಸ್ಥೆಯ ಭಾಗವಾಗಿ ಅಸ್ತಿತ್ವಕ್ಕೆ ಬಂದಿದೆ.
ಜೀತಗಾರರು ಮತ್ತು ಕೂಲಿಕಾರರಲ್ಲಿ ಹೆಚ್ಚಿನವರು ದಲಿತರಾದರೆ, ರೈತ, ಕುಶಲ ಕರ್ಮಿಗಳು ಶೂದ್ರರಾಗಿದ್ದು ಹೆಚ್ಚಿನ ಗೃಹಿಣಿಯರು ಅಗ್ರಹಾರ, ಪಟ್ಟಣ, ನಗರಗಳಲ್ಲಿ ವಾಸಿಸುತ್ತಿದ್ದ ಮೇಲ್ವರ್ಣಗಳ ಮಹಿಳೆಯರಾಗಿದ್ದಾರೆ.
ಗೃಹಿಣಿ ಮಹಿಳೆಯರ ದುಡಿಮೆಯೂ ಬಹಳ ಹೆಚ್ಚಿನದಾಗಿದ್ದರೂ ಜೀತದಾಳುಗಳ ಬಳಕೆಯ ಸಾಧ್ಯತೆಗೆ ತಕ್ಕಂತೆ ಅವರಿಗೆ ವಿರಾಮ ಸಿಗುತ್ತಿತ್ತು. ಅದನ್ನು ಇವರು ಪಾಕಕಲೆ, ಹಾಡು ಹಸೆ, ಕಸೂತಿ, ಚಿತ್ತಾರ ಮೊದಲಾದವುಗಳಿಗೆ ಬಳಸಿಕೊಂಡು ಅದನ್ನು ಬೆಳೆಸಿದ್ದಾರೆ. ಹಲ ಹಲವು ರೀತಿಯ ತಿಂಡಿ ತೀರ್ಥಗಳು, ಮದುವೆ ನಾಮಕರಣಗಳಲ್ಲಿ ಹಾಡುವ ಹಾಡುಗಳು ಇತರ ಕಲೆಗಳು ಇಂತಹ ವಿರಾಮದ ಫಲ.
ಅರಮನೆ, ಸಿರಿಮನೆಗಳ ಮಹಿಳೆಯರು, ರಾಜರ ಅಂತಃಪುರಗಳ ಮಹಿಳೆಯರಿಗೆ ಸಿಗುತ್ತಿದ್ದ ಪುಷ್ಕಳ ವಿರಾಮ ವ್ಯಕ್ತಿತ್ವದ ಬೆಳವಣಿಗೆ ಮತ್ತು ಅಭಿವ್ಯಕ್ತಿಗೆ ಸದುಪಯೋಗವಾದ ಉದಾಹರಣೆಗಳು ಬಹಳ ಅಪರೂಪ. ಒಬ್ಬ ನಾಟ್ಯರಾಣಿ ಶಾಂತಲೆ, ಮಧುರಾ ವಿಜಯದ ಕತೃ ಗಂಗಾಂಬಿಕೆ, ಉತ್ತಮ ಆಡಳಿತ ನೀಡಿದ ಕೆಲವರನ್ನು ಮಾತ್ರ ಕಾಣುತ್ತೇವೆ. ಉಳಿದಂತೆ ಸವತಿಯರ ಮೇಲಾಟ, ಒಳಸಂಚುಗಳಿಗೇ ಈ ವಿರಾಮ ಬಳಕೆಯಾದಂತೆ ಇತಿಹಾಸದ ಹಲವು ಉದಾಹರಣೆಗಳಿಂದ ತಿಳಿಯಬರುತ್ತದೆ.
ಏಕೆ ಹೀಗಾಯಿತು? ಬದಲಾವಣೆ ಹೇಗೆ?:
ಮಹಿಳೆಯರ ಅತಿ ದುಡಿಮೆ, ವಿರಾಮ ದುರ್ಲಭವಾಗುವ ಪರಿಸ್ಥಿತಿ, ಲಭ್ಯವಾದ ವಿರಾಮವನ್ನೂ ತನ್ನಿಚ್ಛೆಯಂತೆ ಬಳಸಿಕೊಳ್ಳಲಾಗದ, ತನ್ನ ವ್ಯಕ್ತಿತ್ವದ ಹಾಗೂ ಸಾಮರ್ಥ್ಯದ ಬೆಳವಣಿಗೆಗೆ ಉಪಯೋಗಿಸಿಕೊಳ್ಳಲಾಗದ ಪರಿಸ್ಥಿತಿ ಉದ್ಭವವಾಗಿದ್ದು ಹೇಗೆ? ಏಕೆ? ಇಂತಹ ಪರಿಸ್ಥಿತಿಯನ್ನು ಬದಲಾಯಿಸುವ, ಹೆಚ್ಚು ವಿರಾಮ ದೊರಕಿಸುವ ಯಾವುದೇ ಪ್ರಯತ್ನ ಈ ಪರಿಸ್ಥಿತಿಗೆ ಮೂಲ ಕಾರಣವೇನು ಎಂಬುದನ್ನು ಅನ್ವೇಷಿಸಬೇಕಾಗುತ್ತದೆ.
ಈ ಮೇಲಿನ ಎಲ್ಲ ಉದಾಹರಣೆ, ವಿವರಣಿಗಳಲ್ಲಿಯೂ ಮುಖ್ಯವಾಗಿ ಕಾಣಬರುವುದು ಮಹಿಳೆ ತಾನು ಹುಟ್ಟಿ ಬೆಳೆದ ಮನೆಯಿಂದ, ತಂದೆತಾಯಿಗಳ ಆರೈಕೆಯಿಂದ ಹೊರ ಹೋಗಿ ಅತ್ತೆಯ ಮನೆ ಸೇರಬೇಕಾದ ಅನಿವಾರ್ಯತೆ. ಇಂತಹ ಸಾಮಾಜಿಕ ಪದ್ಧತಿ ಮೊದಲಿನಿಂದಲೂ ಇತ್ತೆ? ಮಾತೃ ಪ್ರಧಾನ ಸಮಾಜಗಳಲ್ಲಿ ಇಂತಹ ಪದ್ಧತಿ ಇರಲಿಲ್ಲ. ಒಬ್ಬ ತಾಯಿಯ ಎಲ್ಲ ಮಕ್ಕಳೂ – ಗಂಡಾಗಲಿ, ಹೆಣ್ಣಾಗಲಿ ಒಟ್ಟಿಗೆ ಜೀವಿಸುತ್ತಿದ್ದುದು, ಮುಂದೆ ಇದು ಒಬ್ಬ ಅಜ್ಜಿ, ಮುತ್ತಜ್ಜಿಯ ಮಕ್ಕಳೂ ಒಂದೆಡೆಯಲ್ಲಿ ಜೀವಿಸುತ್ತಿದ್ದುದು ಕಾಣಬರುತ್ತದೆ. ಆ ಕುಟುಂಬದ ಹೆಂಗಸರೊಂದಿಗೆ ಲೈಂಗಿಕ ಸಂಬಂಧ ಹೊದಿರುವ ಗಂಡಸರು ತಮ್ಮ ಕುಟುಂಬಗಳಿಂದ ರಾತ್ರಿ ವೇಳೆ ಬಂದು ಮತ್ತೆ ತಮ್ಮ ಕುಟುಂಬಕ್ಕೆ ಮರಳುವುದು ಆಗಿನ ಪದ್ಧತಿ. ಈಗ ಪ್ರಚಲಿತವಿರುವ ವಿವಾಹ ಪದ್ಧತಿ ಅಸ್ತಿತ್ವಕ್ಕೆ ಬರುವ ಮೊದಲಿನ ಪರಿಸ್ಥಿತಿ ಇದು.
ಹೀಗಾಗಿ ತಾಯ ಮನೆಯಲ್ಲಿಯೇ ಉಳಿದು ತಮ್ಮ ಬದುಕಿನ ಅವಶ್ಯಕತೆಗಳಿಗೆ ಅನುಸಾರವಾಗಿ ಕೆಲಸ ಬೊಗಸೆಗಳನ್ನು ಹಂಚಿಕೊಂಡು ಮಾಡುತ್ತಿದ್ದುದು ಒಂದು ರೀತಿ ಪರಸ್ಪರ ಸಹಕಾರದಿಂದ, ಸ್ವ ಇಚ್ಛೆಯಿಂದ ದುಡಿಯುವ ಪದ್ಧತಿ. ವಿರಾಮದ ಉಪಯೋಗವೂ ಸ್ವ ಇಚ್ಛೆಯಿಂದಲೇ.
ಆದರೆ ವಿವಾಹ ಪದ್ಧತಿ ಆರಂಭವಾಗಿ ಅತ್ತೆಯ ಮನೆಗೆ ಹೆಣ್ಣು ಸ್ಥಳಾಂತರವಾಗುವ ಪದ್ಧತಿ ಆಕೆಯನ್ನು ಅಧೀನತೆಗೆ, ಪರಾವಲಂಬನೆಗೆ, ಹೇರಿದ ದುಡಿಮೆಗೆ ದೂಡಿತು.
ಹೀಗೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಆದದ್ದು ಹೇಗೆ, ಯಾವಾಗ?
ಮನುಷ್ಯ ಸಮಾಜದ ವಿಕಾಸವನ್ನು ಅಧ್ಯಯನ ಮಾಡಿದ ವಿದ್ವಾಂಸರುಗಳು ಮನುಷ್ಯರು ಅದರಲ್ಲಿಯೂ ಮಹಿಳೆ ಮುಖ್ಯವಾದ ಪಾತ್ರ ವಹಿಸಿ ಕೃಷಿಯನ್ನು ಕಂಡುಕೊಂಡ ಮೇಲೆ ಈ ಪರಿಸ್ಥಿತಿ ಉದ್ಭವಿಸಿತು ಎಂಬುದನ್ನು ಸಂಶೋಧನೆಗಳ ಮೂಲಕ ಕಂಡುಕೊಂಡಿದ್ದಾರೆ. ಕೃಷಿ ಭೂಮಿಯನ್ನು ವಿಸ್ತರಿಸಲು ಆಕ್ರಮಣ, ಯುದ್ಧಗಳನ್ನು ಅವಲಂಬಿಸಿದ ನಂತರದ ಕಾಲದಲ್ಲಿ ಭೂಮಿ, ಮುಖ್ಯವಾಗಿ ಕೃಷಿ ಭೂಮಿ ಪುರುಷರ ಸ್ವತ್ತಾಯಿತು. ಭೂಮಿಯ ಜೊತೆಗೇ ಇತರ ಸಂಪತ್ತು ಕೂಡಾ ಪುರುಷರ ಆಸ್ತಿಯಾಯಿತು. ಆಗ ಉದ್ಭವವಾದ ಪ್ರಶ್ನೆ ಈ ಸ್ವತ್ತು, ಸಂಪತ್ತು ಅದರ ಒಡೆಯನಾದ ಪುರುಷ ಇಲ್ಲವಾದ ಮೇಲೆ ಯಾರಿಗೆ ಸಲ್ಲಬೇಕು ಎಂಬುದು. ಇದಕ್ಕೆ ಕಂಡುಕೊಂಡ ಪರಿಹಾರ ಮದುವೆ. ಮದುವೆಯಾದ ನಂತರ ಹೆಣ್ಣು ಗಂಡನ ಮನೆಯಲ್ಲಿ ಬಾಳುವೆ. ಅವನ ಆಸ್ತಿಗೆ ಉತ್ತರಾಧಿಕಾರಿಯಾಗುವವರ ಹುಟ್ಟಿಗೆ ಕಾರಣವಾಗುವುದು, ಅವರನ್ನು ಬೆಳೆಸುವುದು ಹೆಣ್ಣಿನ ಜೀವನದ ಪ್ರಧಾನ ಹೇತುವಾಯಿತು. ಆಸ್ತಿಯ ಹಕ್ಕಿಲ್ಲದ ಹೆಣ್ಣು ಪುರುಷರ ಅಧೀನಳಾದಳು, ಅವರ ಮೇಲೆ ಅವಲಂಬಿತಳಾದಳು.
ಇದು ಪುರುಷಾಧಿಪತ್ಯದ ಸಾಮಾಜಿಕ ವ್ಯವಸ್ಥೆಯ ಉದ್ಭವಕ್ಕೆ ಕಾರಣವಾಯಿತು. ಮಹಿಳೆಯರ ಮೇಲೆ ವಿರಾಮ ದುರ್ಭರ ದುಡಿಮೆಯನ್ನು ಹೇರಲು ಕಾರಣವಾಯಿತು.
ಆಸ್ತಿಯ ಒಡೆತನದ ಮೇಲೆ ಆಧಾರಿತವಾದ ಪರುಷಾಧಿಪತ್ಯದ ವ್ಯವಸ್ಥೆಯನ್ನು ಬದಲಿಸದ ಹೊರತು ಮಹಿಳೆಯ ಅತಿ ದುಡಿಮೆ, ಅಧೀನತೆ, ದಮನ, ಸ್ವಾತಂತ್ರ್ಯ ರಾಹಿತ್ಯ ಮೊದಲಾದ ಸಮಸ್ಯೆಗಳಿಗೆ ಮೂಲಭೂತ ಪರಿಹಾರ ಸಾಧ್ಯವಿಲ್ಲ.